ಕಥಾಲೋಕ

ವಿಪರ್ಯಾಸ: ಬದರಿನಾಥ ಪಲವಳ್ಳಿ

 

ಬೆಳಿಗ್ಗೆ ಎದ್ದಾಗಲಿಂದಲೂ ಏಕೋ ಸಣ್ಣಗೆ ತಲೆಯ ನೋವು. ಸ್ವಲ್ಪ ಕಾಫಿ ಕಾಯಿಸಿಕೊಳ್ಳೋಣ ಎಂದು ಮೂರು ಗಂಟೆಯಿಂದ ಯೋಚಿಸಿದ್ದೇ ಬಂತು. ಯಾಕೋ ಅದಕ್ಕೂ ಬೇಸರ.

ಯಜಮಾನರು ತೀರಿಕೊಂಡ ಮೇಲೆ ನಾನು ನಾನು ತೀರಾ ಅಂತರ್ಮುಖಿಯಾಗುತ್ತಿದ್ದೇನೆ ಅನಿಸುತ್ತದೆ. ಮೂರು ಕೋಣೆಗಳ ಈ ವಿಶಾಲವಾದ ಫ್ಲಾಟಿನಲ್ಲಿ ಈಗ ನಾನು ಒಬ್ಬಂಟಿ. ತುಂಬಾ ಮನೆಗಳಿರುವ ವಿಶಾಲವಾದ ಸೊಸೈಟಿ ಇದು. ಪಕ್ಕದ ಮನೆಯವರು ಯಾರೆಂದು ನನಗೂ ಇಲ್ಲಿಯವರೆಗೂ ಗೊತ್ತಿಲ್ಲ.

ಕೆಲಸದವಳು ಬೆಳಿಗ್ಗೆ ಬಂದು ಮನೆ ಕೆಲಸಗಳನ್ನು ಮುಗಿಸಿ ಹೊರಟಳೆಂದರೆ ಇಡೀ ದಿನ ನಾನು ಮತ್ತು ಟೀವಿ ಎರಡೇ.

ಇರುವ ಇಬ್ಬರು ಮಕ್ಕಳು ಅಮೇರಿಕಾದಲ್ಲಿ ನೆಲೆ ನಿಂತ ಮೇಲೆ, ಈ ಬೆಂಗಳೂರಿನ ಮನೆಯಲ್ಲಿ ನಮ್ಮವರು ನಾನು ಮಾತ್ರ ಉಳಿದಿದ್ದೆವು. ನಮ್ಮವರು ಮೂರು ವರ್ಷಗಳ ಹಿಂದೆ ತೀರಿಕೊಂಡ ಮೇಲೆ, ನನ್ನ ಇಬ್ಬರು ಗಂಡು ಮಕ್ಕಳನ್ನು ನಾನು ಅವರ ಜೊತೆಯೇ ಇದ್ದು ಬಿಡುತ್ತೇನೆ, ಒಬ್ಬಳಿಗೆ ಬೇಸರ ಎಂದು ಹಲವು ಬಾರಿ ಅಲವತ್ತುಕೊಂಡಿದ್ದೇನೆ. ನನ್ನ ಅಮೇರಿಕಾ ಜನ್ಯ ಸೊಸೆಯರಿಗೆ ನಾನು ಹಳೆಯ ಕಾಲದವಳಂತೆ! ಅದಕ್ಕಾಗಿ ನಾನು ಇಲ್ಲೇ ಈ ಫ್ಲಾಟಿನಲ್ಲೇ ಕಾಲ ದೂಕುತ್ತಿದ್ದೇನೆ.

ಬೆಳಿಗ್ಗೆ ಬರುವ ಕೆಲಸದವಳೇ ಮೂರು ಹೊತ್ತಿಗೂ ಬೇಯಿಸಿ, ಒಪ್ಪ ಮಾಡಿಟ್ಟು ಹೋಗುತ್ತಾಳೆ. ತುಂಬಾ ಒಳ್ಳೆಯ ಹೆಣ್ಣು ಮಗಳವಳು. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಸಿಡುಕಿದ್ದು, ರಜೆ ಹಾಕಿದ್ದು ನನಗೆ ಗೊತ್ತೇ ಇಲ್ಲ. ಆಕೆ ತಣ್ಣಗಿರಲಿ.

ಸಂಜೆಯವರೆಗೂ ಹೇಗೋ ಕಾಲ ದೂಡಿದವಳು, ಪಕ್ಕದ ಗಣಪತಿ ಗುಡಿಗಾದರೂ ಹೋಗಿ ಬರೋಣವೆಂದು ಮನೆ ಇಂದ ಹೊರಗೆ ಬಂದೆ. ಲಿಫ್ಟ್ ಸಮೀಪಿಸುತ್ತಿದ್ದಾಗ ದಡೂತಿ ಉತ್ತರ ಭಾರತದ ಮಹಿಳೆಯೊಬ್ಬಳು ಅಲ್ಲಿ ನಿಂತಿರುವುದು ಕಂಡಿತು.

ಆಕೆಯನ್ನು ಆಗೊಮ್ಮೆ ಈಗೊಮ್ಮೆ ನೋಡುತ್ತೇನಾದರೂ, ಮುಖ ಪರಿಚಯ ಮುಗುಳ್ನಗೆಗಳ ಹೊರತಾಗಿ ಅಂತಹ ಆತ್ಮೀಯತೆ ಯಾಕೋ ಇನ್ನೂ ಮೂಡಿರಲಿಲ್ಲ. ನನ್ನ ಜೊತೆಯೇ ಆಕೆಯೂ ಲಿಫ್ಟ್ ಒಳಗೆ ಬಂದು ನಾನು ನೆಲ ಮಹಡಿ ಬಟನ್ ಒತ್ತುವುದನ್ನು ನೋಡಿ, ತಾನು ಅಲ್ಲಿಗೆ ಹೋಗ ಬೇಕಿತ್ತೇನೋ ಸುಮ್ಮನಾದಳು.

ಲಿಫ್ಟ್ ಹತ್ತನೇ ಮಹಡಿಯಿಂದ ಇಳಿಯಲು ಆರಂಭಿಸಿದ ಕೂಡಲೇ ಆಕೆ ಎದೆ ಹಿಡಿದುಕೊಂಡು, ಗೋಡೆಗೆ ಜಾರಲು ಆರಂಭಿಸಿದಳು. ನಾನು ಗಾಬರಿಯಾದೆ, ಆಕೆ ಸಳ ಸಳನೆ ಬೆವರುತ್ತಿದ್ದಳು. ಈಕೆಗೆ ಖಂಡಿತ ಹೃದಯಾಘಾತವೇ ಆಗಿದೆ ಎಂದು ನನಗನಿಸಿದ್ದೇ ತಡ, ಲಿಫ್ಟಿನ ಅಲಾರಮ್ ಒತ್ತಿದೆ. ಲಿಫ್ಟ್ ಅಲಾರಾಮ್ ಹೊಡೆದುಕೊಳ್ಳುತ್ತಲೇ ನೆಲ ಮಹಡಿ ತಲುಪಿತು.

ಕೆಳಗೆ ಆಗಲೇ ಸುಮಾರು ಜನ ಸೇರಿದ್ದರು. ಕೂಡಲೇ ಅಲ್ಲೇ ಇದ್ದ ಯಾರೋ ಆಂಬುಲೆನ್ಸಿಗೂ ಫೋನ್ ಮಾಡಿದರು. ನಾನು ನನ್ನ ಬಳಿ ಇದ್ದ ಇನ್ನೂರನ್ನು ಅವರಿಗೆ ಕೊಟ್ಟೆ. ಆಕೆಯನ್ನು ಆಸ್ಪತ್ರೆಗೂ ಸಾಗಿಸಲಾಯಿತು. ನಾನು ನಿಧಾನವಾಗಿ ಕಾಲೆಳೆಯುತ್ತಾ ದೇವಸ್ಥಾನಕ್ಕೆ ಹೊರಟೆ.

ಮರು ದಿನ ತಡೆಯಲಾರದೆ ಕೆಳಗೆ ಇಳಿದು ಬಂದು ಸೆಕ್ಯುರಿಟಿ ಬಳಿ ನಿನ್ನೆಯ ಆ ಹೆಂಗಸಿನ ಸ್ಥಿತಿ ವಿಚಾರಿಸಿದೆ. ಅವನು ಆಕೆ ಈಗ ಸಾಕಷ್ಟು ಸುಧಾರಿಸಿದ್ದಾಳೆಂದು, ಅವರ ಮಗ ನಿಮ್ಮನ್ನು ಭೇಟಿಯಾಗಬೇಕೆಂದು ಕೇಳುತ್ತಿದ್ದರು ಎಂದು ಹೇಳಿದ.

ಆಕೆಯ ಮಗ ಆಗಲೇ ಅಲ್ಲಿ ಬಂದವನು ನನಗೆ ವಂದನೆ ತಿಳಿಸಿದ. ಸಕಾಲಕ್ಕೆ ಅಲಾರಮ್ ಒತ್ತಿ ತಾಯಿಯನ್ನು ಕಾಪಾಡಿದ್ದಕ್ಕೆ ವಂದನೆ ಹೇಳಿದ. ನನಗೂ ನೆಮ್ಮದಿಯಾಯ್ತು. ಆದರೆ, ಅವನು ತಲೆ ಕೆರೆದುಕೊಳ್ಳುತ್ತಾ ನಿಂತ.

"ಅಮ್ಮ ಈಗ ಸುಧಾರಿಸುತ್ತಿದ್ದಾರೆ ಅಜ್ಜೀ, ಆಕೆಯ ಮಾಂಗಲ್ಯದ ಸರ ನೀವು ತೆಗೆದರಾ? ಎತ್ತಿಟ್ಟುಕೊಂಡರೆ ಕೊಡ್ತೀರಾ" ಅಂತ ಕೇಳಿದ.

ನನಗೆ ನಿಂತ ನೆಲವೇ ಕುಸಿಯುವಂತಾಯಿತು. ಎದೆ ಕಿವುಚಿಕೊಂಡು ಹಾಗೆಯೇ ನೆಲಕ್ಕೊರಗಿದೆ. ಯಾರೋ ಆಂಬುಲೆನ್ಸಿಗೆ ಕರೆ ಮಾಡುತ್ತಿದ್ದ ದನಿ ಕೇಳಿಸಿತು…

-ಬದರಿನಾಥ ಪಲವಳ್ಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

11 thoughts on “ವಿಪರ್ಯಾಸ: ಬದರಿನಾಥ ಪಲವಳ್ಳಿ

  1. ಸಹಾಯ  ಮಾಡಿದವರ  motive ಗಳನ್ನೇ ಪ್ರಶ್ನಿಸುವ ಕಾಲವಿದು. ಕೊನೆಯ ತಿರುವು ಅನಿರೀಕ್ಷಿತ!

  2. ಮುದಿ ತಾಯಿಯ ಒಂಟಿತನವನ್ನು ವಿವರಿಸಿದ್ದೀರಿ. ಆಕೆಯ ಆಸ್ತಿಯನ್ನು ಕೆಲಸದವಳಿಗಿ ದಾನ ಮಾಡುತ್ತಾಳೊ ಅಂದುಕೊಂಡೆ. ಅರೆ, ಕಥೆ ಇಷ್ಟು ಬೇಗ ಕೊನೆಗೊಳ್ಳುತ್ತಾ ಅಂದುಕೊಳ್ಳುವಾಗ ಅನಿರೀಕ್ಷಿತ ತಿರುವು. ಓದಿಸಿಕೊಂಡು ಹೋಗುವ ಮಿನಿಗಥೆ.

  3. ನೀತಿ, ನ್ಯಾಯ ಮಾರ್ಗದಲ್ಲಿ ನಡೆಯುವರಿಗೆ ಇಲ್ಲಿ ಬೆಲೆಯಿಲ್ಲ ಅನ್ನುವುದನ್ನ ಚೆನ್ನಾಗಿ ತಿಳಿಸಿದ್ದೀರ. ಪುಟ್ಟ ಕಥೆಯಾದರೂ ತುಂಬಾ ಕುತೂಹಲಕಾರಿಯಾಗಿದೆ.

Leave a Reply

Your email address will not be published. Required fields are marked *