ವಿದ್ಯುತ್ ಅಪವ್ಯಯ ಬಿಟ್ಟುಬಿಡಿ , ಎಲ್.ಇ.ಡಿ ಬಂತು ದಾರಿ ಬಿಡಿ: ರೋಹಿತ್ ವಿ. ಸಾಗರ್


ವಿದ್ಯುತ್ ಅಥವಾ ಕರೆಂಟ್ ನಮಗೆ ತುಂಬಾ ಪರಿಚಿತವಾಗಿರುವ, ಅದಿಲ್ಲದೆ ಜೀವನವನ್ನು ಊಹಿಸಿಕೊಳ್ಳಲೂ ಆಗದಿರುವಂತಹ ಒಂದು ಮೂಲಭೂತ ಅಗತ್ಯತೆಯಾಗಿಬಿಟ್ಟಿದೆ. ಅದು ಹೇಗೆ ಎಂಬುದನ್ನ ಇಪ್ಪತ್ತೊಂದನೇ ಶತಮಾನದವರಾದ ನಮಗೆ ಬಿಡಿಸಿ ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ನಿತ್ಯ ಜೀವನದ ಹೆಚ್ಚು ಕಡಿಮೆ ಎಲ್ಲಾ ಕ್ರಿಯೆಗಳಿಗೂ ನಾವೀಗ ವಿದ್ಯುತ್ತನ್ನೇ ಅವಲಂಬಿಸಿದ್ದೇವೆ. ಯಾವುದೇ ಶೋಕಿಗಳಿಲ್ಲದಿದ್ದರೂ ಕನಿಷ್ಟ ಬೆಳಕಿಗಾಗಿಯಾದರೂ ನಮಗೆ ವಿದ್ಯುತ್ ಬೇಕೇ ಬೇಕು.

ಸುತ್ತಲಿನ ಪರಿಸರದ ಅಂದ-ಚೆಂದಗಳನ್ನು, ಆಗು ಹೋಗುಗಳನ್ನು ಕಣ್ತುಂಬಿಕೊಳ್ಳಲು ಬೆಳಕು ಬೇಕು. ಹಗಲಿನಲ್ಲಿ ಸೂರ್ಯ ಪುಗಸಟ್ಟೆಯಾಗಿ, ಧಾರಾಕಾರವಾಗಿ ಬೆಳಕನ್ನು ನೀಡಿಬಿಡುತ್ತಾನೆ. ಆದರೆ ರಾತ್ರಿ ಏನು ಮಾಡುವುದು? ಎಂಬ ಪ್ರಶ್ನೆಗೆ ಉತ್ತರ ಹುಡುಕಹತ್ತಿದ ಬಲು ಬುದ್ಧಿವಂತ ಮನುಷ್ಯನಿಗೆ, ಆಗಾಗ ಕಾಡಿನಲ್ಲಿ ಹುಟ್ಟಿಕೊಳ್ಳುತ್ತಿದ್ದ ಕಾಡ್ಗಿಚ್ಚು ಸ್ಪೂರ್ತಿಯ ಸೆಲೆಯಾಗಿ ಕಂಡಿತು. ಬೆಂಕಿಯನ್ನು ಉಂಟುಮಾಡಿ ಬೆಳಕನ್ನು ಪಡೆಯಬಹುದೆಂದು ಆಗ ತಿಳಿದ ಮನುಷ್ಯ ಬಹಳ ಹಿಂದಿನಿಂದಲೇ ಬೆಂಕಿಯಿಂದ ಕಟ್ಟಿಗೆ, ಪಂಜು ಮತ್ತು ಚಿಮಣಿ ದೀಪಗಳನ್ನು ಉರಿಸಿ ಬೆಳಕನ್ನು ಪಡೆಯತೊಡಗಿದ. ನಂತರ ಕ್ರಿ.ಪೂ. ೬೦೦ರಲ್ಲಿ ಶುರುವಾದ ವೈಜ್ಞಾನಿಕ ಕ್ರಾಂತಿಯ ಫಲವಾಗಿ ಈ ’ವಿದ್ಯುತ್’ ಎಂಬ ಶಕ್ತಿ ಬಳಕೆಗೆ ಬಂದಿತು. ಅಂದಿನಿಂದ ಇಂದಿನವರೆಗೂ ಮಾನವ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಈ ವಿದ್ಯುತ್ ಬೆರೆತುಬಿಟ್ಟಿದೆ. ಎಲ್ಲರಿಗೂ, ಎಲ್ಲದಕ್ಕೂ, ಎಲ್ಲಾ ಸಮಯದಲ್ಲೂ ಬೇಕೆ ಬೇಕಾದ ಈ ವಿದ್ಯುತ್ತನ್ನು ಗಾಳಿಯಿಂದ, ಸೌರಶಕ್ತಿಯಿಂದ, ಸಮುದ್ರದ ಅಲೆಗಳಿಂದ, ಪರಮಾಣು ಶಕ್ತಿಯಿಂದ, ಕಲ್ಲಿದ್ದಲಿನಿಂದ ಉತ್ಪಾದಿಸಬಹುದಾದರೂ, ನಮ್ಮ ದೇಶದಲ್ಲಿ ಹೆಚ್ಚಿನ ವಿದ್ಯುತ್ತನ್ನು ಜಲಶಕ್ತಿಯಿಂದಲೇ ಉತ್ಪಾದಿಸುತ್ತಿದ್ದೇವೆ. ಆದರೆ, ನೆನಪಿಡಿ, ಜಲಶಕ್ತಿಯ ವಿದ್ಯುತ್ ಉತ್ಪಾದಿಸಲು ಎಕರೆಗಟ್ಟಲೆ ಭೂಮಿ, ಕಾಡುಗಳನ್ನು ಮುಳುಗಿಸಿ, ಆಣೆಕಟ್ಟುಗಳನ್ನು ಕಟ್ಟಬೇಕಾಗುತ್ತದೆ. ಇದು ಜನಸಂಖ್ಯೆ ಸ್ಪೋಟಿಸುತ್ತಿರುವ ಈ ಹೊತ್ತಿನಲ್ಲಿ ಅಸಾಧ್ಯವೆನಿಸುವಂತಹ ಮಾತು. ಅಲ್ಲದೇ ಬಳಕೆದಾರರು ಹೆಚ್ಚಾಗುತ್ತಾ ಹೋದಂತೆ, ಶಕ್ತಿಯ ಪೂರೈಕೆ ದುಸ್ಸಾಧ್ಯವಾಗತೊಡಗುತ್ತದೆ. ಹಾಗಾಗಿ ಇರುವ ಜಲಶಕ್ತಿ ಕೇಂದ್ರಗಳು ನೀಡುವ ವಿದ್ಯುತ್ತನ್ನೇ ಸಮರ್ಪಕವಾಗಿ, ಹಿತ-ಮಿತವಾಗಿ ಬಳಸಿಕೊಳ್ಳುವುದು ನಮಗೂ-ನಮ್ಮವರಿಗೂ ಕ್ಷೇಮ.
ಹಾಗಂತ ಬೇಕಾಗಿರುವ ಬೆಳಕನ್ನು ಬಳಸದಿರಲು ಸಾಧ್ಯವೇ? ಸಂಜೆಯಿಂದ ರಾತ್ರಿಯವರೆಗೂ ಟಿ.ವಿ.ಸೀರಿಯಲ್ ನೋಡದಿರಲು ಸಾಧ್ಯವೇ? ಎಂದೆಲ್ಲಾ ತಲೆಕೆಡಿಸಿಕೊಂಡು ಯೋಚಿಸುವ ಅಗತ್ಯವಿಲ್ಲ. ಬೆಳಕು, ಟಿವಿ ಎರೆಡನ್ನೂ ಬಳಸಿ, ಆದರೆ ಅವುಗಳಿಗೆ ಮಿತವಾದ ವಿದ್ಯುತ್ ಬಳಸುವ ಉಪಕರಣಗಳನ್ನು ಉಪಯೋಗಿಸಿ. ಅಂದರೆ ಬೆಳಕು ಪಡೆಯಲು ಎಲ್.ಇ.ಡಿ ಬಲ್ಬನ್ನು ಮತ್ತು ಟಿ.ವಿ. ನೋಡಲು ಎಲ್.ಇ.ಡಿ.ಟಿವಿಯನ್ನು ಬಳಸಿ, ಇದರಿಂದ ಬಾರಿ ಪ್ರಮಾಣದಲ್ಲಿ ವಿದ್ಯುತ್ತನ್ನು ಉಳಿಸಬಹುದು ಎಂದು ಹಲವಾರು ತಂತ್ರಜ್ಞರು ಸಾಧಿಸಿ ತೋರಿಸಿದ್ದಾರೆ. ಅಷ್ಟೇ ಏಕೆ ಜಾಹಿರಾತುಗಳನ್ನು ನೋಡಿಲ್ಲವೇ ಬೆಳಕನ್ನು ಬಳಸುತ್ತಿರಿ, ಟಿ.ವಿ. ನೋಡುತ್ತಿರಿ ಆದರೆ ಎಲ್.ಇ.ಡಿಯನ್ನು ಮಾತ್ರ ಮರೆಯದಿರಿ ಎಂದು.

ಈ ಎಲ್.ಇ.ಡಿ. ಎಂಬುದು ’ಲೈಟ್ ಎಮಿಟಿಂಗ್ ಡಯೋಡ್’ ಎಂಬುದರ ಹೃಸ್ವರೂಪ. ಡಯೋಡ್ ಎಂಬ ಅಶುದ್ಧ ಅರೆವಾಹಕಗಳಿಂದ ಮಾಡಿರುವ ಸಾಧನದ ಮೂಲಕ ಸಣ್ಣ ಪ್ರಮಾಣದ ವಿದ್ಯುತ್ತನ್ನು ಹಾಯಿಸಿದಾಗ ಅದರೊಳಗಿರುವ ಎಲೆಕ್ಟ್ರಾನ್‌ಗಳೆಂಬ ಋಣ ಮತ್ತು ಹೋಲುಗಳೆಂಬ ಧನ ವಿದ್ಯುದಾವೇಶಗಳು ಸಮ್ಮಿಳಿತಗೊಂಡು ಬೆಳಕಿನ ಕಣಗಳಾದ ಫೋಟಾನುಗಳನ್ನು ಹೊರಹಾಕುತ್ತವೆ. ಕೆಲವು ಡಯೋಡುಗಳು ನಮಗೆ ಕಾಣದ ಅತಿರಕ್ತ ಕಿರಣಗಳನ್ನೂ ಹೊರಹಾಕುತ್ತವೆ. ಅಂದರೆ ಕೆಲವೊಂದಿಷ್ಟು ನಿರ್ದಿಷ್ಟ ಬಗೆಯ ಅರೆವಾಹಕಗಳಿಂದ ಮಾಡಲ್ಪಟ್ಟ ಡಯೋಡುಗಳು ಮಾತ್ರ ಕಣ್ಣಿಗೆ ಕಾಣುವ ಬೆಳಕನ್ನು ಉತ್ಪಾದಿಸುತ್ತವೆ. ಈಗ ನಮ್ಮಲ್ಲಿ ಕೆಂಪು, ಹಸಿರು, ನೀಲಿ ಮತ್ತು ಬಿಳಿ ಬಣ್ಣದ ಬೆಳಕನ್ನು ಉತ್ಪಾದಿಸಬಲ್ಲ ಡಯೋಡುಗಳು ಲಭ್ಯವಿವೆ. ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಕೆಂಪು ಮತ್ತು ಹಸಿರು ಬಣ್ಣದ ಎಲ್.ಇ.ಡಿಗಳು ಮಾರುಕಟ್ಟೆಯಲ್ಲಿ ಅನಾಯಾಸವಾಗಿ ದೊರೆಯುತ್ತಿದ್ದವು. ಆದರೆ ಅವುಗಳನ್ನು ಬಿಳಿ ಬೆಳಕಿಗಾಗಿ ಉಪಯೋಗಿಸುವುದು ಕಷ್ಟವಾಗಿತ್ತು. ಅಷ್ಟರಲ್ಲಿ ಬೆಳಕಿಗೆ ಬಂದದ್ದೇ ನೀಲಿ ಬಣ್ಣದ ಎಲ್.ಇ.ಡಿಯ ಆವಿಷ್ಕಾರ. ಅದು ಸಿಕ್ಕ ಕೂಡಲೇ, ಆ ಮೂರು ತಂತ್ರಜ್ಞಾನಗಳನ್ನು ಒಟ್ಟಾಗಿಸಿ ತಯಾರಿಸಿದ ಬಿಳಿ ಬೆಳಕನ್ನು ಹೊರಸೂಸುವ ಡಯೋಡುಗಳನ್ನು ತಯಾರಿಸುವ ಪ್ರಯತ್ನಗಳಿಗೆ ಫಲ ದೊರೆಯಿತು. ಇದರ ಫಲವೇ ಇಡೀ ಮನುಕುಲದ ಭವಿಷ್ಯವನ್ನೇ ಬದಲಾಯಿಸಬಲ್ಲ ಎಲ್.ಇ.ಡಿ ಬಲ್ಬುಗಳು ಸಾಮಾನ್ಯ ಬೆಳಕಿನ ಮೂಲಗಳಾಗಿ ಇಂದು ಮಾರುಕಟ್ಟೆಯಲ್ಲಿ ವಿಭಿನ್ನ ಆಕಾರದ ಬಲ್ಬುಗಳಾಗಿ, ಸೀರಿಯಲ್ ಸೆಟ್‌ಗಳಾಗಿ, ಕಾರು-ಬಸ್ಸುಗಳ ಸುತ್ತ ಅಲಂಕಾರಿಕ ವಸ್ತುಗಳಾಗಿ, ಟಿ.ವಿ, ಮೊಬೈಲ್‌ಗಳ ಪರದೆಗಳಾಗಿ ಲಭ್ಯವಿರುವುದು. ಹಾಂ ಮರೆಯದಿರಿ ಇಂತಹ ಪವಾಡ ಸದೃಶ ಆವಿಷ್ಕಾರಗಳಿಗೆ ಕಿಡಿ ಹೊತ್ತಿಸಿದ ನೀಲಿ ಡಯೋಡುಗಳ ಸಂಶೋಧನೆಗಾಗಿಯೇ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಜಪಾನಿನ ಭೌತಶಾಸ್ತ್ರಜ್ಞರಾದ ಇಸಾಮು ಅಕಸಾಕಿ, ಹಿರೋಶಿ ಅಮಾನೋ ಮತ್ತು ಶುಜಿ ನಕಾಮುರರವರಿಗೆ ೨೦೧೪ರಲ್ಲಿ ನೀಡಿ ಗೌರವಿಸಲಾಗಿದೆ.

ಈ ಎಲ್.ಇ.ಡಿ. ತಂತ್ರಜ್ಞಾನ ಅದರ ಉನ್ನತ ಕಾರ್ಯಕ್ಷಮತೆಯ ಕಾರಣದಿಂದ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನೇ ಬರೆಯಲಿದೆ. ವಿಜ್ಞಾನಿಗಳು ಹೇಳುವಂತೆ ಜಗತ್ತಿನಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಕಾಲುಭಾಗ ಕೇವಲ ಬೆಳಕು ನೀಡುವುದಕ್ಕಾಗಿಯೇ ಬಳಸಲಾಗುತ್ತದಂತೆ, ಕಾರಣಗಳು ನಿಮಗೆ ಗೊತ್ತಲ್ಲವೇ. ಸಾಮಾನ್ಯವಾಗಿ ಸದ್ಯ ಜಗತ್ತಿನ್ನಾದ್ಯಂತ ಬಳಸುವ ಬುರುಡೆ ಬಲ್ಬು ವಿದ್ಯುತ್ತಿನ ಬಹು ದೊಡ್ಡ ನುಂಗಣ್ಣ, ಬಳಸಿದ ವಿದ್ಯುತ್ತಿನಲ್ಲಿ ಮುಕ್ಕಾಲು ಭಾಗ ವ್ಯಯ ಮಾಡಿ ಕಾಲುಭಾಗ ಬೆಳಕು ನೀಡುತ್ತದೆ. ಇನ್ನು ಟ್ಯೂಬ್ ಲೈಟ್‌ಗಳು ಬಳಸಿದ್ದರಲ್ಲಿ ಅರ್ಧಭಾಗ ಬೆಳಕು ನೀಡುತ್ತವೆ. ಹಾಗೆಯೇ ಸಿ.ಎಫ್.ಎಲ್.ಗಳು ಕಾಲು ಭಾಗ ವ್ಯಯ ಮಾಡಿ ಮುಕ್ಕಾಲು ಪಾಲು ಬೆಳಕು ನೀಡುತ್ತವೆ. ಆದರೆ ಈಗಿನ ಎಲ್.ಇ.ಡಿಗಳು ಹೆಚ್ಚೂ-ಕಡಿಮೆ ಶೇ.೯೦ ಭಾಗವನ್ನು ಬೆಳಕನ್ನಾಗಿ ಪರಿವರ್ತಿಸುತ್ತವೆ. ಅಂದರೆ, ಈ ಎಲ್.ಇ.ಡಿ.ಬಲ್ಬುಗಳನ್ನೇ ಸಮರ್ಪಕವಾಗಿ ಬೆಳಕು ನೀಡಲು ಎಲ್ಲರೂ ಬಳಸತೊಡಗಿದರೆ, ಜಗತ್ತಿನಲ್ಲಿ ಉತ್ಪಾದಿಸುತ್ತಿರುವ ವಿದ್ಯುತ್ತಿನ ಕೇವಲ ಶೇ.೫ ಭಾಗ ಮಾತ್ರ ಈಗ ಅಗತ್ಯವಿರುವ ಬೆಳಕು ನೀಡಲು ಸಾಕಾಗುತ್ತದೆ. ಇಡರಿಂದಾಗುವ ಪ್ರಯೋಜನಗಳನ್ನು ಮತ್ತೆ ಬಿಡಿಸಿ ಹೇಳಬೇಕಾಗಿಲ್ಲ.

ಅತಿಕಡಿಮೆ ವಿದ್ಯುತ್ ಬಳಸಿ ನಮಗೆ ಬೆಳಕು ನೀಡಬಲ್ಲ ಎಲ್.ಇ.ಡಿ. ದೀಪಗಳು ಸ್ವಲ್ಪ ದುಬಾರಿ ಎನಿಸಿದರೂ, ಒಂದು ೧೦೦ ವ್ಯಾಟ್‌ನ ಬುರುಡೆ ಬಲ್ಬ್ ನೀಡುವ ಬೆಳಕನ್ನು ೮ ವ್ಯಾಟ್‌ನ ಎಲ್.ಇ.ಡಿ. ಬಲ್ಬ್ ನೀಡುತ್ತದೆ. ಆ ಒಂದು ಎಲ್.ಇ.ಡಿ. ಬಲ್ಬಿನ ಬೆಲೆ ಕನಿಷ್ಟವೆಂದರೂ (ಈಗಿನ ಮಾರುಕಟ್ಟೆ ದರದಲ್ಲಿ) ೩೦೦ ರೂಪಾಯಿಗಳು. ಇದನ್ನು ೩೦ ರೂಪಾಯಿಗೆ ಸಿಗುವ ಬುರುಡೆ ಬಲ್ಬಿಗೆ ಹೋಲಿಸಿ ನೋಡಿದರೆ ದುಬಾರಿಯಾಗಿಯೇ ಕಾಣುತ್ತದೆ. ಆದರೆ ಅದರ ಫಲ ನಮಗೇ ಬೇಗನೇ ತಿಳಿದುಬಿಡುತ್ತದೆ. ಏಕೆಂದರೆ ವಿದ್ಯುತ್ ಬಿಲ್ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಅಷ್ಟೆ ಅಲ್ಲ, ಈ ಎಲ್.ಇ.ಡಿ. ಬಲ್ಬುಗಳು ದೀರ್ಘ ಕಾಲದವರೆಗೆ ಅಂದರೆ ಹೆಚ್ಚು ಕಡಿಮೆ ೨೫ವರ್ಷಗಳಷ್ಟು ಬಾಳಿಕೆ ಬರುತ್ತವೆ. ಮೂರು ವರ್ಷದಷ್ಟು ವಾರಂಟಿಯನ್ನು ಕಂಪನಿಗಳೇ ನೀಡುತ್ತಿವೆ. ಇದೀಗ ಫಿಲಿಪ್ಸ್, ಸಿಸ್ಕೋ, ಹ್ಯಾವಲ್ಸ್‌ನಂತಹ ನಾಲ್ಕೈದು ಕಂಪನಿಗಳು ಮಾತ್ರ ಇದನ್ನು ಉತ್ಪಾದಿಸುತ್ತಿವೆ. ಇನ್ನು ಎಲ್ಲರೂ ಎಲ್.ಇ.ಡಿಯನ್ನೇ ಬಳಸತೊಡಗಿದರೆ, ಅವುಗಳಿಗೆ ಸ್ವಾಭಾವಿಕವಾಗಿಯೇ ಬೇಡಿಕೆ ಹೆಚ್ಚುತ್ತದೆ, ಇದರಿಂದ ಎಲ್.ಇ.ಡಿ. ಬಲ್ಬುಗಳನ್ನು ಉತ್ಪಾದಿಸುವ ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡು ತಮ್ಮ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳಲು ಸ್ಪರ್ಧಾತ್ಮಕ ದರದಲ್ಲಿ ಬಲ್ಬುಗಳನ್ನು ಪೂರೈಸಲು ಮುಂದಾಗುತ್ತಾರೆ. ಇದರಿಂದ ಎಲ್.ಇ.ಡಿ ಬಲ್ಬುಗಳ ಬೆಲೆಯೂ ಕಡಿಮೆಯಾಗುತ್ತದೆ. ಹಾಗಾಗಿ ಎಲ್.ಇ.ಡಿ.ಯನ್ನು ಈಗಿನಿಂದಲೇ ಬಳಸಿ, ನೆರೆಹೊರೆಯವರಿಗೂ ಇದನ್ನು ತಿಳಿಸಿ. ಸ್ವಚ್ಚ ಭಾರತದಲ್ಲಿ ಬುರುಡೆ ಬಲ್ಬುಗಳನ್ನೂ ಅದರೊಂದಿಗೇ ವಿದ್ಯುತ್ತಿನ ಅಪವ್ಯಯವನ್ನೂ ಸ್ವಚ್ಚ ಮಾಡಿಬಿಡೋಣ ಅಲ್ಲವೇ, ಸ್ವಲ್ಪ ಬದಲಾವಣೆಯೆಂದರೆ ಅಲ್ಲಿ ’ಹಿಡಿ’ ಹಿಡಿಯಬೇಕು, ಇಲ್ಲಿ ’ಎಲ್.ಇ.ಡಿ’ ಬಳಸಬೇಕು ಅಷ್ಟೇ. 

ಮೊನ್ನೆ ಮಾತನಾಡುವಾಗ ಗುರುಗಳಾದ ಶ್ರೀ ನಾಗೇಶ ಹೆಗಡೆಯವರು ಹೇಳುತ್ತಿದ್ದರು ಶುಭ ಸಮಾರಂಭಗಳಲ್ಲಿ ಏನೇನೋ ಬೆಲೆಬಾಳುವ ಹಾಳೂ-ಮೂಳುಗಳನ್ನು ಉಡುಗೊರೆಯ ರೂಪದಲ್ಲಿ ನೀಡುವುದಕ್ಕಿಂತ, ಈ ಎಲ್.ಇ.ಡಿ ದೀಪಗಳನ್ನೇ ನೀಡುವುದು ಸೂಕ್ತ,  ಕೊಟ್ಟವರಿಗೂ, ಪಡೆದುಕೊಂಡವರಿಗೂ ಕೊನೆಗೆ ನಮ್ಮೀ ಇಳೆಗೂ ಶುಭಕರವಾಗಿರುತ್ತದೆ ಎಂದು. ಈ ಅತ್ಯುತ್ತಮ ಸಲಹೆ ಅವರ ಜವಬ್ದಾರಿ, ಸಂಬಂಧಿಸಿದ ವಿವರಗಳನ್ನು ನಿಮಗೆ ತಲುಪಿಸಿದ್ದು ನನ್ನ ಜವಾಬ್ದಾರಿ, ಹಾಗಯೇ ಎಲ್.ಇ.ಡಿಯನ್ನು ಬಳಸಿ ವಿದ್ಯುತ್ ಅಪವ್ಯಯವನ್ನು ಅಳಿಸಿ ಹಾಕುವುದು ನಮ್ಮ, ನಿಮ್ಮೆಲ್ಲರ ಜವಾಬ್ದಾರಿ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x