ವಿದ್ಯಾಕಾಶಿಯೊಳಗ ಉಗಾದಿ, ಬಾರೋ ವಸಂತ ಬಾ……..!!!!!: ಡಾ. ಅನಿರುದ್ಧ ಸು ಕುಲಕರ್ಣಿ

ವಿದ್ಯಾಕಾಶಿ ಧಾರವಾಡ, ರಾಜ್ಯದ ಎರಡನೇ ಸಾಂಸ್ಕೃತಿಕ ನಗರಿ, ಮಲೆನಾಡಿಗೆ ದ್ವಾರ ಅಂದ್ರೆ ಧಾರವಾಡ, ಧಾರವಾಡ ಅಂದ ಕೂಡಲೇ ಎಲ್ಲಾರಿಗೂ ಮೊದಲ ನೆನಪು ಆಗುದು ಧಾರವಾಡ ಪೇಢ, ಕರ್ನಾಟಕ ವಿಶ್ವವಿದ್ಯಾಲಯ, ಮಾಳಮಡ್ಡಿಯ ವನವಾಸಿ ರಾಮದೇವರ ಗುಡಿ, ಉತ್ತರಾದಿಮಠ, ಸಾಧನಕೇರಿಯ ಬೇಂದ್ರೆ ಅಜ್ಜ, ಗೋಪಾಲಪುರದ ಬೆಟಗೇರಿ ಕೃಷ್ಣ ಶರ್ಮ, ನುಗ್ಗಿಕೇರಿ ಹನುಮಪ್ಪ, ಸೋಮೇಶ್ವರ ಗುಡಿ, ವಿದ್ಯಾಗಿರಿ, ಧರ್ಮಸ್ಥಳ ಆಸ್ಪತ್ರೆ., ಇನ್ನು ಅನೇಕ ಅವ.

ಹೋಳಿಹುಣ್ಣಿಮೆ ಮುಂದೆ ಹಳೆಯ ಡ್ರೆಸ್ ಯಾವ ಇರತಾವ ಅವನ್ನ ಸ್ವಲ್ಪ ಇಸ್ತ್ರಿ ಮಾಡಿ, ಬಣ್ಣ ಆಡಲಿಕ್ಕೆ ಹಾಕ್ಕೊಂಡ್ ಹೋಗುದು, ಯಾಕ ಅಂದ್ರೆ ನನ್ನ ಅಮ್ಮ ಹೇಳ್ತಿದ್ರು ನಾ ಸಣ್ಣವ ಇದ್ದಾಗ ನೋಡು ಯಾವದು ಹಳೆ ಡ್ರೆಸ್ ಅದ ಅದನ್ನ ಹಾಕೊಂಡ್ ಹೋಗು, ಕರೆಕ್ಟ ಹೋಳಿ ಹುಣ್ಣಿಮೆ ಮುಗಿದ ೧೫ ದಿನಕ್ಕೆ ಯುಗಾದಿ, ಯುಗಾದಿ ಮುಂದೆ ಮತ್ತೆ ಹೊಸ ಡ್ರೆಸ್ ತಗೊಳುದು ಅಂತ,,, ಅದೇನೋ ಒಂಥರಾ ಖುಷಿ,,, ಬಣ್ಣಾ ಆಡಿದ ಮ್ಯಾಲೆ ಹಳೇ ಡ್ರೆಸ್ ಹೊಗಿರತಿತ್ತು,,, ಇನ್ನ ಸ್ವಲ್ಪ ದಿನಕ್ಕೆ ಯುಗಾದಿ ಹೊಸ ಡ್ರೆಸ್… ಯಾಹು,,,,, ಅಂತ ….ಹಿಂದೂಗಳಿಗೆ ಹೊಸವರ್ಷ ಹೊಸ ಸಂವತ್ಸರ,, ಅಂದ್ರೇನೆ ಉಗಾದಿ, ಚೈತ್ರ ಶುದ್ಧ ಪಾಡ್ಯಮಿ ದಿನ ಯುಗಾದಿ, ಅಂದ್ರ ಚೈತ್ರ ಮಾಸ, ವಸಂತ ಋತು ಸ್ಟಾರ್ಟ್… ನಮ್ಮ ಕರ್ನಾಟಕದಲ್ಲಿ ಇದನ್ನ ಉಗಾದಿ ಅಂತ, ನೆರೆಯ ರಾಜ್ಯ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಗುಡಿಪಾಡ್ವ ಅಂತ, ತಮಿಳು ಮತ್ತು ತೆಲುಗಿನಲ್ಲೂ ಕೂಡ ಯುಗಾದಿ ಅಂತ,ಇದು ಸೌರಮಾನ ಯುಗಾದಿ, ಆದ್ರೆ ಅದ ಕೇರಳದಲ್ಲಿ ಯುಗಾದಿಯನ್ನ ಚಾಂದ್ರಮಾನ ಪಂಚಾಂಗದಂತೆ ಅಂದ್ರೆ ಏಪ್ರಿಲ್ ನಲ್ಲಿ ಯುಗಾದಿ ಆಚರಿಸ್ತಾರ,, ಹೌದು ಯುಗಾದಿ ಬಂತು ಅಂದ್ರೆ ನಮಗೆಲ್ಲಾ ನೆನಪು ಆಗುದು ಯೆಸ್, ಅದ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ವರುಷವ ಹೊಸತು ಹೊಸತು ತರುತಿದೆ, ಹೌದು ನಮ್ಮ ಸಾಧನೆಕೇರಿಯ ಬೇಂದ್ರೆ ಅಜ್ಜ ಬರೆದಿದ್ದು ಹಾಡು ರೇಡಿಯೋದಾಗ ಕೇಳ್ತಿವಿ ಮತ್ತ ಟಿವಿಯೊಳಗ ನೋಡ್ತಿವಿ.

ಇನ್ನು ಉಗಾದಿಗೆ ಉಗಾ ಹಾರುವಷ್ಟು ಬಿಸಿಲು ಜಾಸ್ತಿ ಆಗ್ತದ, ನಾವೆಲ್ಲಾ ಸಣ್ಣವರಿದ್ದಾಗ ಶಾಲೆ ಸೂಟಿ ಇರ್ತಿತ್ತು, ಆಟಾ ಆಡ್ತಿದ್ವಿ, ಆಮೇಲೆ ದಣಿವು ಆರಿಸಿಕೊಳ್ಳಲು ಐಸ್ಕ್ರೀಂ, ತಿಂತಿದ್ವಿ,,,ಆದ್ರ ಸ್ವಲ್ಪ ದೊಡ್ಡವರಾದಮ್ಯಾಲೆ ಗೊತ್ತಾತು ಐಸ್ಕ್ರೀಂ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ,, ಅದರ ಬದಲು ನಿಂಬೆ ಹಣ್ಣಿನ ಪಾನಕ, ಮಾವಿನ ಹಣ್ಣಿನ ಪಾನಕ, ಮಜ್ಜಿಗೆ, ತಗೊಳಿಕತಿವಿ, ಮುದ್ದು ಮುದ್ದು ಚಿಣ್ಣರೆ ಪೆಪ್ಸಿ, ಕೋಕ್, ಇಂಥವೆಲ್ಲಾ ತಂಪು ಪಾನೀಯ ಕುಡಿದು ಆರೋಗ್ಯ ಕೆಡಿಸಿಕೊಳ್ಳಬೇಡಿ, ಅದರ ಬದಲು ಹಣ್ಣಿನ ರಸ ತೆಗೆದುಕೊಳ್ಳಿ.

ಚೈತ್ರ ಮಾಸ, ವಸಂತ ಋತು, ಮಾವು, ಕೋಗಿಲೆ
ಚೈತ್ರ, ವಸಂತ ಋತುವನ್ನು ವರ್ಣಿಸದೆ ಕವಿಯೇ ಇಲ್ಲ, ಎಲ್ಲಾಋತುಗಳು ಕವಿಗಳಿಗೆ ತುಂಬಾ ಪ್ರಿಯ, ಆದ್ರೆ ವಸಂತ ಋತು ಬಂತು ಅಂದ್ರೆ ಕವಿಜನರಿಗೆ ಹೃದಯ ಆಕರ್ಷಕ. ಇನ್ನೂ ಕಾಳಿದಾಸ ಋತುಸಂಹಾರದಲ್ಲಿ ಹೇಳ್ತಾನ ಮರಗಳೆಲ್ಲ ಹೂಗಳಿಂದ ತುಂಬ್ಯಾವ, ಜಲಾಶಯಗಳೆಲ್ಲ ಕಮಲಗಳಿಂದ ತುಂಬ್ಯಾವ. ಸ್ತ್ರೀಯರು ಸಕಾಮಿಗಳಾಗ್ಯಾರ. ಗಾಳಿಯ ಪರಿಮಳದಿಂದ ಬಿಸಲಿಕತದ. ಮುಂಜಾನೆ ಸುಖಕರ ಅದ.. ದಿವಸಗಳು ರಮ್ಯವಾಗಿವೆ.- ಪ್ರಿಯೇ ವಸಂತ ಋತುವಿನ್ಯಾಗ ಎಲ್ಲಾನೂ ಮನೋಹರ!

ಮಾವಿನ ಮರಕ್ಕೆ ಭಾರತೀಯರು ಬ್ಯಾರೆ ಯಾವ ಕಾರಣಕ್ಕೇ ಪ್ರಾಶಸ್ತ್ಯ ಕೊಟ್ಟಿರಲಿ, ಕವಿಗಳಿಗಂತೂ ವಸಂತ ವರ್ಣನೆಯಲ್ಲಿ ಮಾವಿನ ಮರ ವರ್ಣಿಸದಿದ್ದರೆ ತೃಪ್ತಿಯಿಲ್ಲ .ಅಮರಕೋಶದಾಗ वसन्ते पुष्पसमय: सुरभिः ಪುಷ್ಪ ಸಮಯಃ ಸುರಭಿಃ ಅಂದ್ರೆ ವಸಂತದೊಳಗ ಮರಗಿಡಗಳು ಚಿಗುರಿ, ಹೂ ಬಿಟ್ಟು, ಹಸಿರಾಗವ ಸಮಯ.
ಇನ್ನ ಕೋಗಿಲೆ ಬಗ್ಗೆ ಹೇಳಬೇಕು, ಸಂಸ್ಕೃತದೊಳಗ ಒಂದು ಶ್ಲೋಕ ಅದ,
काकः कृष्णः पिकः कृष्णः को भेद पिककाकयोः
वसन्तसमये प्राप्ते काकः काकः पिकः पिकः

ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಬೇದ್ ಪಿಕಕಾಕಯೋಃ
ವಸಂತಸಮಯೇ ಪ್ರಾಪ್ತೆ ಕಾಕಃ ಕಾಕಃ ಪಿಕಃ ಪಿಕಃ
ಅಂದ್ರೆ ಅಂದ್ರೆ ಕಾಗೆಯು ಕಪ್ಪು , ಕೋಗಿಲೆಯು ಕಪ್ಪು ಕಾಗೆ ಕೋಗಿಲೆ ನಡು ಏನ್ ವ್ಯತ್ಯಾಸ??? ವಸಂತಕಾಲ ಬಂದಾಗ ಕಾಗಿ ಮತ್ತ ಕೋಗಿಲೆ ಭೇಧ ತಿಳಿತದ.

ನವ ವಸಂತದ ಗಾಳಿ ಬೀಸಲು ಮಾವು ಚಿಗುರಿತು ಆಗಲೇ, ಮೌನ ಮರೆಯುತ ಮಧುರ ಗೀತೆಯ ಮತ್ತೆ ಹಾಡಿತು ಕೋಗಿಲೆ, ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು, ಕೋಗಿಲೆ ಕುಹೂ ಕುಹೂ ಅಂತಾ ಕೂಗಿದ್ರ ಅದ ಕೆಳಕೊತ ನಿಂತ್ರ ಮೈ ಮರಿತಿವಿ, ಯಾಕ ಅಂದ್ರೆ ಇದೆಲ್ಲಾ ಸಿಗುದು ಚೈತ್ರ ವಸಂತ ದಲ್ಲಿ ಮಾತ್ರ ಅಂದ್ರೆ ಉಗಾದಿ ಮುಂದೆ.
ಇನ್ನು ಯುಗ ಯುಗಾದಿ ಕಳೆದರು ಹಾಡು ಬಿಟ್ರೆ,
ಕವಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಬರೆದ ಬಾರೋ ವಸಂತ ಬಾ, ಕವನದಲ್ಲಿ
ಬಾರೋ ವಸಂತ ಬಾರೋ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ

ಮಗುಚುತ ನಿನ್ನೆಯ ದುಃಖಗಳ
ತೆರೆಯುತ ಹೊಸ ಅಧ್ಯಾಯಗಳ
ಹರಸುತ ಎಲ್ಲರ ಮೇಲು ಕೀಳೆನದೆ
ಸಲಿಸುತ ಭವಿಷ್ಯದಾಸೆಗಳ

ಹೊಸ ವರ್ಷಕ್ಕ ಹರುಷದೊಂದಿದೆ, ಹೊಸ ಭಾವನೆ, ಹೊಸ ಆಸೆ, ಎದೆಯಲಿ ಬರೆಯುವ ಬಾರೋ ಅಂತ ಮತ್ತು ಹಳೆಯ ದುಃಖ ಮರೆತು, ಹೊಸ ಬಾಳು, ಅಧ್ಯಾಯ ಶುರೂ ಮಾಡಿ ಎಲ್ಲರನ್ನ ಹರಸುತ್ತ ಮೇಲು ಕಿಳನೆದೆ ಎಲ್ಲರನ್ನ ನಗಿಸುತ್ತಾ ಬಾರೋ ವಸಂತ ಬಾರೋ ಅಂತ, ವಸಂತ ಋತುವನ್ನು ಬರಮಾಡಿ ಕೊಂಡಾರ.

ಇನ್ನು ಮಾವು ಅಂದ ಕೂಡಲೇ ಎಲ್ಲರ ಬಾಯಾಗ ನೀರು ಬರ್ತದ, ಅದು ಕೂಡ ಚಿಗುರೋಡೆಯುವ ಸಮಯ ಅಂದ್ರೆ ಈ ಯುಗಾದಿ ಮುಂದೆ, “ಹಸಿದು ಹಲಸು ತಿನ್ನು -ಉಂಡು ಮಾವು ತಿನ್ನು. ಅನ್ನುವ ಗಾದೇ ಮಾತು ನೆನಪು ಆಗ್ತದ. ವಿದ್ಯಾಕಾಶಿ ಧಾರವಾಡದಾಗ ಉಗಾದಿ ಅಂತ ಹೇಳಿದೆ ಯಾಕ ಅಂದ್ರೆ, , ಧಾರವಾಡದಾಗ ಪ್ರತಿಯೊಬ್ಬರ ಕಾಂಪೌಂಡನ್ಯಾಗ ಕಣ್ಣು ಆಡಿಸಿದರೆ ಮಾವಿನ ಮರ, ಸಂಪಿಗೆ ಹೂವಿನ ಮರ ಸಿಗ್ತವೆ, ಇನ್ನು ಈ ಯುಗಾದಿ ಮುಂದೆ ಧಾರವಾಡದ ಸೊಬಗ ಬೇರೆ ಇರ್ತದ, ಸಂಜೆ ಮುಂದೆ ತಂಪು ಗಾಳಿ ಜೊತೆಗೆ ಸಂಪಿಗಿ ಹೂವಿನ ಸುವಾಸನೆ, ಹಕ್ಕಿಗಳ ಇಂಪಾದ ಚಿಲಿಪಿಲಿಗಳ ಗಾನ , ಗುಲ್ಮೊಹರ ಹೂ ಹಳದಿ ಮತ್ತು ಕೆಂಪು ಬಣ್ಣದಲ್ಲಿ ಇರತದ, ಆಕಾಶಕ್ಕೆ ಏನೋ ಹೊದಿಸ್ಯಾರೋ ಏನೋ ಅನ್ನುಹಂಗೆ ಹೂ ಆಗಿರ್ತವೆ, ಚೈತ್ರ ಮಾಸ ವಸಂತ ಋತುವಿನಲ್ಲಿ ಇಲ್ಲಿಯ ಪ್ರಕೃತಿ ಸೊಬಗು ನೋಡು ಹಂಗೆ ಇರತದ, ಹಸಿರು ರಮಣೀಯ ಆಗಿರತದ. ಇಂಥಾವೆಲ್ಲಾ ನೋಡಿ ನಮ್ಮ ಸಾಧನೆಕೇರಿ ಬೇಂದ್ರೆ ಅಜ್ಜಾ “ಹೊಂಗೆ ಹೂವ ತೊಂಗಳಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳ ಬರುತಿದೆ ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ “ ಅಂತಾ ಬರೆದಿರಬೇಕು ಅದಕ್ಕೆ ಏನೋ ಇಲ್ಲಿಯ ವಾತಾವರಣ ಕವಿಗಳಿಗೆ, ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದಹಂಗೆ ಅದ, ಇಲ್ಲಿ ಅನೇಕ ಕಡೆ ಪಂಚಾಂಗ ಶ್ರವಣ ಮಾಡ್ತಾರ ಆದ್ರೆ ಅದು ಕೂಡ ಇಲ್ಲಿ ವಿಶೇಷ ಆಗಿರುತ್ತೆ ಮತ್ತು ಕವಿ ವಾಚನ, ಸಾಹಿತ್ಯ ವಿಮರ್ಶೆ, ಪ್ರಸಿದ್ಧ ಸಂಗೀತಗಾರ ಸಂಗೀತ, ನೃತ್ಯ ಕಾರ್ಯಕ್ರಮ, ಇನ್ನೂ ಅನೇಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಧಾರವಾಡದಾಗ ಆಗ್ತಾವ. ಇನ್ನು ಯುಗಾದಿ ದಿನ ನಮ್ಮ ಕಡೆ ಉತ್ತರಕರ್ನಾಟಕದಾಗ “ರತ್ನಪಕ್ಷಿ” (ಸಾಂಬರಕಾಗೆ) ಯನ್ನ ಜನ ಹುಡುಕಿಕೊಂಡು ಹೋಗಿ ನೋಡ್ತಾರ, ಯಾಕ ಅಂದ್ರೆ ಅದನ್ನ ಯುಗಾದಿ ದಿನ ನೋಡಿದ್ರ ಬಹಳ ಶುಭ. ಅದು ಅವರವರ ನಂಬಿಕೆಗೆ ಬಿಟ್ಟದ್ದು.

ಯುಗಾದಿಯ ವಿಶೇಷ ತಿನಿಸು ಬೇವು ಬೆಲ್ಲ. ಬೇವು ಕಹಿ ಮತ್ತು ಬೆಲ್ಲದ ಸಿಹಿ. ಜೀವನದಲ್ಲಿ ಸಿಹಿಯನ್ನು ಮಾತ್ರವೇ ನಿರೀಕ್ಷಿಸದೆ ಕಹಿಯನ್ನು ಸಿಹಿಯಂತೆಯೇ ಸ್ವೀಕರಿಸಿ ಎಂಬುದಾಗಿ ಈ ಹಬ್ಬ ಬೇವು ಬೆಲ್ಲದ ತಿಳಿಸ್ತದ. ಆದ್ದರಿಂದ ಜೀವನದ ಪ್ರತಿ ಕ್ಷಣವನ್ನು ಆಸ್ವಾದಿಸಿ ಎಂಬುದಾಗಿಯೇ ಬೇವು ಬೆಲ್ಲ ನಮಗೆ ತಿಳಿಸುತ್ತದೆ. ಕೊನೆಯದಾಗಿ ಎಲ್ಲರಲ್ಲಿ ಒಂದು ಸಣ್ಣ ಕಳಕಳಿಯ ವಿನಂತಿ, ಏನ್ ಅಂದ್ರೆ ಬಿಸಿಲು ಜಾಸ್ತಿ ಆಗಲಿಕತದ, ಬಾವಿ, ಕೆರೆ , ನದಿಗಳೆಲ್ಲ ಬತ್ತಿ ಹೋಗ್ತವೆ ಆದ್ದರಿಂದ ನೀರನ್ನ ಮಿತವಾಗಿ ಬಳಸಿ, ನಿಮ್ಮ ಮನೆಯ ಕಿಟಕಿಗಳಲ್ಲಿ ಪಕ್ಷಿಗಳಿಗಾಗಿ ಪ್ರತಿದಿನ ನೀರನ್ನು ಇಡಿ. ಸಸಿಗಳನ್ನ ನಡಿ ಮತ್ತು ಅವುಗಳನ್ನ ನಿಮ್ಮ ಮಕ್ಕಳನ್ನ ಹೇಗೆ ಪೋಷಿಸುತ್ತಿರೋ ಹಾಗೇ ಪೋಷಿಸಿ, ಈ ಯುಗಾದಿಗೆ ಎರೆಡು ಸಂಕಲ್ಪ ಮಾಡುನು ಒಂದು ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಹಿರಿಯರನ್ನ ಗೌರವಿಸೋಣ, ಮತ್ತು ಸಸಿಗಳನ್ನ ನೆಡೋಣ,

ನೂರು ನೂರು ತಿರುವುಗಳು ಬದುಕಿನ ದಾರಿಗೆ, ಯಾರೋ ದಾರಿ ದೀಪಗಳು ಅವರವರ ಪಾಲಿಗೆ, ಭರವಸೆಯಲಿ ನಡೆಯುವ ನೀತಿ ತುಂಬಿದೆ ಎದೆಯಲಿ. ಬಯಸುವ ಪ್ರತೀ ನಿಮಿಷವು ಸ್ಪೂರ್ತಿ ದೇವರೇ ನಮಗಿಲ್ಲಿ. ಗೋಳುಬಾಳಿನಲಿ ಹಸಿರ ಚಿಮ್ಮಿಸುವ ಸೃಷ್ಟಿ ಶೀಲ ಹೊಸ ಹೆಜ್ಜೆಯಲಿ ಬಾರೋ ವಸಂತ ಬಾರೋ ಬಾ.!!!!!!!!!!! ಹೊಸ ವರುಷದ ಹೊನ್ನ ಕ್ಷಣ, ಚೈತ್ರ ಆರಂಭದ ಪುಣ್ಯ ಕ್ಷಣ, ಮೂಡಲಿ ಜೀವನದಲಿ ಹೊಸ ಯುಗದ ಆದಿ ಶುಭವಾಗಲಿ ಯುಗಾದಿಹಳೆತನದ ಪೊರೆಯ ಬಿಟ್ಟು, ಹೊಸತನದ ಉಡುಗೆತೊಟ್ಟು , ತಿಂದ ಕಹಿಯನ್ನ ಮರೆತು, ಉಂಡಸಿಹಿಯನ್ನ ನೆನೆದು, ಈ ವಿಳಂಬಿ ನಾಮ ಸಂವತ್ಸರ ಎಲ್ಲಾರಿಗೂ ಸುಖ ಸಂತೋಷ, ಆರೋಗ್ಯ , ಸಮೃದ್ಧಿಯಾಗಲಿ ಎಂದು ವಿಶೇಷವಾಗಿ ಶುಭಾಶಯವನ್ನ ಕೋರುತ್ತೇನೆ.
-ಡಾ. ಅನಿರುದ್ಧ ಸು ಕುಲಕರ್ಣಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x