ಕಳೆದ ವಾರದಲ್ಲಿ ಚಿಕ್ಕ ವಯಸ್ಸಿನ ವ್ಯಕ್ತಿಗಳ ಸಾವು ನಮ್ಮನ್ನು ನೋಯಿಸಿದೆ. ವಯಸ್ಸಾದವರು ಹೋದರೆ ಮನಸ್ಸಿಗೆ ದುಃಖವಾದರೂ ಸಮಾಧಾನ ಮಾಡಿಕೊಳ್ಳಬಹುದು ” ಹೋಗಲಿ ಬಿಡು, ಬದುಕು ಕಂಡಿದ್ದರು, ಅದರ ಸಿಹಿ, ಕಹಿ ಉಂಡಿದ್ದರು. ಅವರ ಆಯುಸ್ಸು ಮುಗಿದಿತ್ತು. ಭಗವಂತ ಕರೆದುಕೊಂಡ” ಎಂದು. ಚಿಕ್ಕವರಾದರೆ ಮುಮ್ಮಲ ಮರುಗುವುದನ್ನು ಬಿಟ್ಟು ಬೇರೆನೂ ಮಾಡಲಾಗುವುದಿಲ್ಲ. ವಿದಾಯ ಹೇಳುವುದು ಕಷ್ಟ ಎಂಬುದರಲ್ಲಿ ದೂಸರಾ ಮಾತಿಲ್ಲ. ಅತ್ಯಂತ ಕಷ್ಟಕರವಾದ ಪದಗಳಲ್ಲಿ ಮೊದಲ ಬಾರಿಗೆ “ಹಲ್ಲೊ” ಎನ್ನುವುದು, ಕೊನೆಯ ಬಾರಿಗೆ ” ಬೈ” ಎನ್ನುವುದು ಎನಲಾಗಿದೆ. ಹಲ್ಲೊ ಅನ್ನುವುದು ಸುಲಭವಾಗಿರಬಹುದೇನೊ ಈಚೀಚಿಗೆ. ಜನರ ಮನೋಭಾವ ಬದಲಾಗುತ್ತಿದೆ. ಮೈ ಛಳಿ ಬಿಡುತ್ತಿದೆ. ಅದ್ದರಿಂದ ಅದು ಅಷ್ಟು ಕಷ್ಟವಲ್ಲ.
ವಿದಾಯ ಹೇಳುವುದು ಅಂದರೇನು? ಇನ್ನು ಮುಂದೆ ನಿಮ್ಮ, ನಮ್ಮ ಭೇಟಿ ಇಲ್ಲ ಎಂದೇ? ವಿದಾಯ ಹೇಳಿದ ಮೇಲೆ ಮನಸ್ಸಿನಂದಲೂ ತೆಗೆದು ಹಾಕಿ ಅಲ್ಲೂ ವಿದಾಯ ಹೇಳಲಾಗುತ್ತದೆಯೇ? ಹೇಳಿದ ನಂತರ ಖಂಡಿತ ಮತ್ತೆ ನೆನೆಯುವುದಿಲ್ಲ, ಯೋಚಿಸುವುದಿಲ್ಲ ಅಂತ ನಿರ್ಧಾರ ತೆಗೆದುಕೊಳ್ಳಲಾಗುವುದೇ? ಯಾರಾದರೂ ತೀರಿಕೊಂಡರೆ ಒಂದು ಕೊನೆಯ, ಅಂತಿಮ ವಿದಾಯ ಹೇಳಬಹುದು. ಆದರೆ ಮನಸ್ಸಲ್ಲಿ ಆ ವ್ಯಕ್ತಿಯ ಚಿತ್ರಣ ಅಳಿಸುವುದು ಕಷ್ಟ. ಕಾಲಕ್ರಮೇಣ ಅದು ಮಾಸಬಹುದು. ಮನಸ್ಸಿನ ಗಾಯ ಮಾಗಬಹುದು ಆದರೆ ಅದರ ಗುರುತು ಅಳಿಸುವುದು ಸಾಧ್ಯವಿಲ್ಲ. ಹತ್ತಿರದವರಿಗಂತೂ ಅದು ಅಸಾಧ್ಯ. ನಾವಿರುವ ತನಕ ಆ ನೋವಿಗೆ ವಿದಾಯ ಹೇಳಲಾಗುವುದಿಲ್ಲ. ಅದು ಹೃದಯದಲ್ಲಿ, ಮನಸ್ಸಿನ ಮೂಲೆಯಲ್ಲಿ ಸದಾ ಚುಚ್ಚುತ್ತಲೇ ಇರುತ್ತದೆ.ತೀರಿಕೊಂಡ ವ್ಯಕ್ತಿಯ ನೆನಪು ಕಾಡುತ್ತಲೇ ಇರುತ್ತದೆ, ಅವರ ಜತೆ ಒಡನಾಟದ ಕ್ಷಣಗಳು, ನೋವು ನಲಿವಿನ ವೇಳೆಗಳು, ಅವರೊಂದಿಗೆ ಓಡಾಡಿದ ಜಾಗಗಳು, ನೋಡಿದ ಸಿನೇಮಾಗಳು, ಕೊಂಡ ವಸ್ತುಗಳು, ಉಂಡದ್ದು, ಎಲ್ಲವೂ ನೆನಪಿಗೆ ಬಂದು ನಮ್ಮ್ ಮನಸ್ಸನ್ನು ರಾಡಿಗೊಳಿಸುತ್ತಲೇ ಇರುತ್ತವೆ. ತೀರ ಹತ್ತಿರದವರಾದರೆ ಮನ ಹದವಾಗಿ, ಸಮಾಧಾನಗೊಳ್ಳಲು ಸಾಕಷ್ಟು ಸಮಯವೇ ಹಿಡಿಸುತ್ತದೆ. ದುರ್ಬಲ ಅಥವಾ ಭಾವುಕ ಮನಸ್ಸುಳ್ಳವರಿಗೆ ಕೆಲವೊಮ್ಮೆ ಈ ಆಘಾತದಿಂದ ಹೊರಬರಲಾಗುವುದೇ ಇಲ್ಲ.ಕೆಲವರು ಕೊರಗಿ, ಕೊರಗಿ ಮಾನಸಿಕ ಹಾಗು ದೈಹಿಕ ಆರೊಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಜೀವ ತೆಗೆದುಕೊಳ್ಳುವ ಯೋಚನೆಯೂ ಬರುತ್ತದ್ದೆ ಕೆಲವೊಮ್ಮೆ.
ನಮ್ಮ ಪೂರ್ವಜರಲ್ಲಿ ಸಾವು ಹತಾಶೆ ತರುತ್ತಿದ್ದರೂ ಅದನ್ನು ಸ್ವೀಕರಿಸುವ ರೀತಿ ಬೇರೆಯೇ ಆಗಿರುತ್ತಿತ್ತು, ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡು ಮಡದಿ, ಮಕ್ಕಳನ್ನು ಅನಾಥರಾಗಿಸಿ ಹೊರಟವರೆಷ್ಟೊ ಜನ. ಬಾಲ ವಿಧವೆಯರ ಕತೆಗಳು, ವ್ಯಥೆಗಳು ಸರ್ವೇಸಾಮಾನ್ಯವಾಗಿರುತ್ತಿತ್ತು. ಆಕೆ ಬದುಕಿರುವವರೆಗೂ ಅವಳ ಪಾಡು ಶೋಚನೀಯ. ಹಾಗೆಯೇ ಎಳೆ ವಯಸ್ಸಿನ ಮಕ್ಕಳ ಸಾವು ಕೂಡ ಸಾಮಾನ್ಯವಾಗಿರುತ್ತಿತ್ತು.ಅದನ್ನು ಅವರುಗಳೆನು ಹಗುರವಾಗಿ ತೆಗೆದುಕೊಂಡಿರಲಿಲ್ಲ. ಮನದ ನೋವು ಆಗಲೂ ಇರುತ್ತಿತ್ತು. ಆದರೆ ಸಮಾಜದಲ್ಲಿ, ಮನೆಯಲ್ಲಿ ಒಟ್ಟುಗೂಡಿ ಬಾಳುವ ಸಂಸ್ಕ್ರುತಿ ಇತ್ತು, ಸುಖದುಃಖಗಳಲ್ಲಿ ಯಾರೂ ಒಬ್ಬಂಟಿಗರಾಗಿರುತ್ತಿರಲಿಲ್ಲ. ಯಾರದೋ ಒತ್ತಾಸೆ, ಆಸರೆ ಇದ್ದೇ ಇರುತ್ತಿತ್ತು. ಕೂಡುಕುಟುಂಬದಲ್ಲಿ, ಹೆಚ್ಚುಗಾರಿಕೆ ಕೆಲಸಗಳಲ್ಲಿ ನೋವು ಸ್ವಲ್ಪ ಮಟ್ಟಿಗೆ ಶಮನವಾಗುತ್ತಿತ್ತು. ಈಗ ಕಾಲ ಅದಲಾಗಿದೆ. ಜನ ಒಬ್ಬಂಟಿಗರಾಗುತ್ತಿದ್ದರೆ. ನಮ್ಮ “ಸಾಧನೆ” ಯ ಯುಗದಲ್ಲಿ ಸಾವು ಶಾಕ್ ಮಾತ್ರವಲ್ಲ, ಒಂದು ರೀತಿಯ ಅವಮಾನ. ನಮ್ಮ ದೈನಂದಿನ ಬದುಕನ್ನು ಅನಿರೀಕ್ಷಿತ ಬ್ರೇಕ್ ಹಾಕಿ ನಿಲ್ಲಿಸುವ ಒಂದು ಪ್ರಕ್ರಿಯೆ. ಓಡುತ್ತಲೇ ಇರುವ ನಾವುಗಳು ಸಾವೆದುರಾದಾಗ ಗಕ್ಕನೆ ನಿಂತುಬಿಡುತ್ತೇವೆ. ಅದರಿಂದ ಹುಟ್ಟುವ ಮುಂದಿನ ಸಮಸ್ಯೆಗಳಿಗೆ ನಮ್ಮಲ್ಲಿ ಉತ್ತರವಿರುವುದಿಲ್ಲ.ಕೆಲವು ಸಮಸ್ಯೆಗಳು, ಪ್ರಶ್ನೆಗಳು ಮೂಡುವುದು ಸಹಜ. ಬದಿಗೊತ್ತಿ ಅವುಗಳ ಇರುವಿಕೆಯನ್ನು ಮರೆತಂತೆ ನಾವಿದ್ದುಬಿಡುತ್ತೇವೆ. ಅವೆಲ್ಲಾ ಈಗ ಧುತ್ತೆಂದು ನಮ್ಮೆದುರು ಬಂದು ನಿಲ್ಲಬಹುದು. ಹೇಗೆ ಪರಿಹರಿಸಬೇಕೆಂದು ಗೊತ್ತಾಗದೆ, ವಿದಾಯ ಹೇಳುವ ನೋವಿನಲ್ಲಿ ಹಣ್ಣಾಗಿರುವ ಮನಸ್ಸು ವಿಲವಿಲ ಒದ್ದಾಡುತ್ತೆ.
ನಮ್ಮ ಒಳಮನಸ್ಸಿಗೆ ಗೊತ್ತಿರುತ್ತೆ, ಸಾವು ಸಹಜ, ನಿರೀಕ್ಷಿತ,ಖಚಿತ ಎಂದು. ಸಾವಿಗೆ ಹೆದರಬಾರದು, ಅದನ್ನು ಜೀವನದ ಅವಿಭಾಜ್ಯ ಅಂಗ ಎಂದುಕೊಳ್ಳಬೇಕು. ಸಾವು ಕೊನೆಯಲ್ಲ, ಅವರ ಜತೆ ನಮ್ಮ ಭೌತಿಕ ಸಂಬಂಧ ಕೊನೆಗಂಡಿರಬಹುದು ಆದರೆ ನಮ್ಮೊಳಗೆ ಅವರು ಯಾವಾಗಲೂ ಇರುತ್ತಾರೆ. ಅದು ಅಮರ. ಅವರ ನೆನಪು ನಮ್ಮ ಜತೆ ಸದಾ. ಸತ್ತವರ ಹೆಸರಿನಲ್ಲಿ ದಾನಧರ್ಮ ಮಾಡುವುದು, ದತ್ತಿ ಪ್ರಶಸ್ತಿಗಳನ್ನು ಪ್ರಾಯೋಜಿಸುವುದು, ಅವರು ಮರಣಿಸಿದ ದಿನದಂದು ಪೂಜೆ ಇಟ್ಟುಕೊಳ್ಳುವುದು, ಅವರ ಹೆಸರಿನಲ್ಲಿ ದೇಣಿಗೆ ಕೊಡುವುದು, ಇವೆಲ್ಲ ಅವರ ನೆನಪನ್ನು ಒಳ್ಳೆಯ ರೀತಿಯಲ್ಲಿ ಇರುವಂತೆ ಮಾಡುತ್ತವೆ. ಈ ನಿಟ್ಟಿನಲ್ಲಿ ಯೋಚಿಸಿದರೆ ಸಮಾಜಕ್ಕೂ ಉಪಯೋಗ. ಧಾರ್ಮಿಕ ಪುಸ್ತಕಗಳು, ಸತ್ಸಂಗ, ಒಳ್ಳೆ ಚಿಂತನೆಗಳು ನಮ್ಮ ನೋವನ್ನು ಸಾಕಷ್ಟು ಕಡಿಮೆ ಮಾಡಬಲ್ಲುದು. ಹತ್ತಿರದ ನೆಂಟರು, ಸ್ನೇಹಿತರು, ಬೇಕಾದವರೊಡನೆ ಚರ್ಚಿಸುವುದು, ನಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ನೆಮ್ಮದಿ ಕಂಡುಕೊಳ್ಳಲು ಸಹಕಾರಿ. ಮನುಷ್ಯ ಜನುಮಕ್ಕೆ ಅಂಟಿದ್ದು ಸಾವು, ವಿದಾಯ ಹೇಳಬೇಕಾದ ಅನಿವಾರ್ಯತೆ. ಅದಕ್ಕೆ ಮನಸ್ಸನ್ನು ಸಿದ್ದವಾಗಿಟ್ಟುಕೊಂಡಿರಬೇಕು ಅಷ್ಟೇ.
–ಸಹನಾ ಪ್ರಸಾದ್