ವಿಜ್ಞಾನಿ ಮಿತ್ರರು: ಡಾ. ಗಿರೀಶ್ ಬಿ.ಸಿ.


ಜಗುಲಿ ಮೇಲೆ ಕುಳಿತು ಬಲಗೈಯಲ್ಲಿ ಬೂದುಗಾಜು ಹಿಡಿದು ಎಡಗೈಯ ಬೆರಳುಗಳ ಮದ್ಯೆ ಅದಾವುದೊ ಕೀಟವನ್ನು ವೀಕ್ಷಿಸುತ್ತ್ತಿದ್ದ ಈಸುರಯ್ಯನ ರವಿ. ಅಚಾನಕ್ ಆಗಿ ಆಗಮಿಸಿದವನಿಗೆ ಕುಳಿತುಕೊಳ್ಳಲು ಕಣ್ಣಲ್ಲೇ ಸಂಜ್ಞೆಮಾಡಿ ತನ್ನ ಅಧ್ಯಯನವನ್ನು ಮುಂದುವರೆಸಿದ. ಅದೇನು ಮಾಡ್ತಾನೋ ನೋಡೋಣ ಅಂತ ಅವನ ಎಡಭಾಗದಲ್ಲಿ ಮಂಡಿವೂರಿ ಕುಳಿತೆ. ಕಣ್ಣು ಮಿಟುಕಿಸದೆ ಆ ಕೆಂಪು ಕೀಟವನ್ನು ನೋಡುತ್ತಾ ಕತ್ತನ್ನು ಮೇಲೆ ಕೆಳಗೆ ಆಡಿಸುತ್ತಾ ಏನನ್ನೋ ನೆನದು ‘ಯೆಸ್ ಯೆಸ್’ ಅಂದ. ಕೈಯಲ್ಲಿರುವುದನ್ನು ನೆಲದ ಮೇಲೆ ಹಾಕಿ ‘ಬಂದೇ ಇರು’ ಅನ್ನುತ್ತ ಒಳಗೆ ಹೋಗುವಾಗ ಕೀಟದ ಕಾಲಿಗೆ ಹಾರಿ ಹೋಗದಂತೆ ಕಟ್ಟಿದ್ದ ಬಿಳಿ ದಾರ ಕಾಣಿಸಿತು.

ಈಸುರಯ್ಯನ ರವಿ ನನಗಿಂತ ಎರಡು ವರ್ಷ ದೊಡ್ಡವನು. ನಾನು 2ನೇ ಕ್ಲಾಸ್ ಆದರೆ ಅವನು ನಾಲ್ಕು. ಅವನ ಸಂಶೋದನೆಯಿಂದ ಬಹಳ ಪ್ರಭಾವಿತನಾಗಿದ್ದರಿಂದ ಹತ್ತಿರವಾಗಿದ್ದ. ಎಲ್ಲರು ಪುಸ್ತಕ ಓದಿ ನೋಟ್ಸ್ ಬರೆದರೆ ಹಾಗೆ ಮಾಡದೆ ಮೇಷ್ಟ್ರರಿಂದ ಸದಾ ಏಟು ತಿನ್ನುತ್ತಾ ಸದಾ ತನ್ನದೇ ಲೋಕದಲ್ಲಿ ಅಂತರ್ಧಾನವಾಗಿ ಕಳೆದು ಹೋಗಿರುತ್ತಿದ್ದ. ಪುಸ್ತಕವನ್ನು ದ್ವೇಷಿಸುವ ಸ್ನೇಹಿತರ ಗುಂಪಿಗೆ ಪ್ರಶ್ನಾತೀತ ನಾಯಕನಾಗಿದ್ದರು, ಹೊತ್ತಿಗೆಗಳನ್ನ ಪ್ರೀತಿಸುವ ನನಗೆ ಸಲಹೆಗಾರನಾಗಿದ್ದವನು ಸಹಾ ಇದೇ ತತ್ವಜ್ಞಾನಿ ರವಿ.

ಎರಡು ನಿಮಿಷ ಒಳಗೆ ಹೊಗಿ ರಟ್ಟಿನ ಬೋರ್ಡು, ಜೊತೆಗಿಷ್ಟು ಗುಂಡುಪಿನ್ನು ಹಿಡಿದು ವಾಪಸ್ಸು ಬಂದ. ರಟ್ಟಿನ ಮೇಲೆ ನೊಣ, ಜೀರುಂಡೆ, ಕಣಜೀರಿಗೆ ಹುಳ, ಜೇಡ, ಜೇನುಹುಳುಗಳು, ಹೆದ್ದುಂಬಿ, ಜಿರಲೆ, ಹಸಿರು ದುಂಬಿಗಳು ಹೀಗೆ ಹಲವಾರು ಸತ್ತು ಹೋಗಿದ್ದ ಕೀಟಗಳು ಗುಂಡುಪಿನ್ನಿನಿಂದ ರಟ್ಟಿನ ಮೇಲೆ ಚುಚ್ಚಲ್ಪಟ್ಟಿದ್ದವು. ಅವುಗಳ ಮುಂದೆ ತನಗೆ ತಿಳಿದ ಹೆಸರು ಬರೆದು ಅಂಟಿಸಿ ಅಟ್ಟದ ಮೇಲಿಟ್ಟಿದ್ದ. ಹೊಸದಾಗಿ ತಂದಿದ್ದ ಕೀಟವನ್ನು ನನ್ನ ಎದುರಿಗೆ ಹಿಡಿದು ತೋರಿಸಿ, ‘ತೊಪ್ಪೆ ಹುಳು’ ಎಂದು ಬರೆದು ತನ್ನ ಮ್ಯುಸಿಯಂಗೆ ಹೊಸ ಸದಸ್ಯನನ್ನಾಗಿಸಿದ, ತನ್ನ ಪ್ರೊಜಿÀಕ್ಟನ್ನು ಲಘುವಾಗಿ ಬಗೆಯದೆ, ಸೀರಿಯಸ್ಸಾಗಿ ನೋಡಲು ಕುಳಿತವನಿಗೆ ಹಿತ್ತಲ ಸೀಬೇಹಣ್ಣನ್ನು ಕಾರ್ಪೊರೇಟ್ ಕಂಪನಿಯವರು ತಮ್ಮ ಉದ್ಯೋಗಿಗಳಿಗೆ ನೀಡುವ ಇನ್ಸೆಂಟಿವ್ ತರ ತಿನ್ನಲು ಕೊಟ್ಟು ಕೇಳಿದ. ‘ಏನ್ ಸಮಾಚಾರ ಸತೀಶ ಬರಲಿಲ್ವಾ?’.

ಸತೀಶ ನನ್ನ ಅಣ್ಣ, ರವಿ ಜೊತೆ ಇನ್ಯಾವುದೊ ಪ್ರಾಜೆಕ್ಟ್‍ನಲ್ಲಿ ಅವನು ಸಹಾ ಪಾಲುದಾರ. ರಜೆಯಿದೆ ಎಂದು ಕ್ಲಾಸಮೇಟ್ ಯೋಗಣ್ಣನ ಮನೆಗೆ ಗೊರಳ್ಳಿ ಸೋಮಣ್ಣನ ಮಗ ಮಂಜನ ಜೊತೆ ಆಟವಾಡಲು ಹೋಗಿದ್ದರಿಂದ ನನ್ನ ಜೊತೆ ರವಿಯ ಮನೆಗೆ ಅವನು ಬಂದಿರಲಿಲ್ಲ. ಸ್ನೇಹಿತರಾರು ಆಟಕ್ಕೆ ಸಿಗದೆ ರವಿಮನೆಯತ್ತ ಹೊರಟು ಬಂದಿದ್ದೆ ನಾನು. ಅಲ್ಲಿ ನಡಿಯುತ್ತಿರುವುದು ಆಟವೋ ಪಾಠವೋ ಗೊತ್ತಾಗದೆ ಮೊದಲೇ ಕನ್‍ಫ್ಯೂಸ್ ಆದವನಿಗೆ ‘ಏನಾಯ್ತು ಡಲ್ ಆಗಿರುವೆ?’ ಎಂದು ವಿಚಾರಿಸಿದ. ತನ್ನ ಕೀಟಶಾಸ್ತ್ರ ಅಧ್ಯಯನದಿಂದ ಬೋರ್ ಹೊಡಿಯುತ್ತ್ತಿರಬಹುದೆಂದು ಅವನು ಭಾವಿಸಿದ್ದ. ಅಸಲಿಯಾಗಿ ಅಂದು ಮೂಡಿದ್ದ ಬೇಜಾರಿಗೆ ಬೇರೆಯದೇ ಕಾರಣವಿತ್ತು.

‘ಸ್ಕೂಲ್‍ನವರು ಹೀಗೆ ನಮಗೆ ಅನ್ಯಾಯ ಮಾಡಬಹುದಾ?’
‘ಯಾವ ವಿಷಯದ ಬಗ್ಗೆ ಹೇಳ್ತಾ ಇದೀಯಾ ನೀನು?’
‘ಮೈಸೂರು ಶ್ರೀರಂಗ ಪಟ್ಟಣ ಟೂರ್‍ಗೆ ಐದನೇ ಕ್ಲಾಸಗಿಂತ ಮೇಲ್ಪಟ್ಟವರನ್ನು ಮಾತ್ರ ಯಾಕೆ ಕರ್ಕೊಂಡ್ ಹೋದ್ರು? ನಾವೇನ್ ಪಾಪ ಮಾಡಿದ್ದೋ ಅಂತ!
‘ಓ ಅದಾ ನಿನ್ನ ಕೊರಗು? ಒಂದ್ ಬಸ್ಸÀಲ್ಲಿ ಇನ್ನೆಷ್ಟು ಜನ ಹೋಗೊಕಾಗುತ್ತೆ ಹೇಳು?
‘ಒಂದ್ ಬಸ್ಸಲಿ ಆಗ್ದೆ ಇದ್ರೆ ಇನ್ನೊಂದ್ ಬಸ್ ಮಾಡಬಹುದಿತ್ತಲ್ವ?’
‘ಹೋಗ್ಲಿ ಬಿಡೊ, ನೆಕ್ಸ್ಟ್ ಇಯರ್ ಕರ್ಕೊಂಡ್ ಹೋಗ್ತಾರೆ’

ಮುಂದಿನ ವರ್ಷಾನು ನಾನು ಐದನೇ ತರಗತಿಯನ್ನ ಮುಟ್ಟಿರುವುದಿಲ್ಲ ಅಂತ ರವಿಗೆ ಎರಡು ನಿಮಿಷ ಆದಮೇಲೆ ಮನವರಿಕೆಯಾಯ್ತು. ತನ್ನ ಸಂಶೋಧನೆಗೆ ಸಾಕಷ್ಟು ಸಹಾಯ ಮಾಡೊ ಜೂನಿಯರ್ ವಿಜ್ಞಾನಿ ನಿರಾಶೆಗೊಂಡಿದ್ದಾನೆ ಅಂತ ಅರಿತವನು ‘ಏನನ್ನಾದರು ಪ್ಲಾನ್ ಮಾಡೋಣ ಇರು ಅಂದವನೆ ತನ್ನ ಎರಡೂ ತೋರ್ಬೆರಳಿಂದ ಹಣೆಯ ಬಳಿ ಬೆರಳಾಡಿಸಿ ತಲೆಕೂದಲನ್ನು ಹಿಂದುಗಡೆಗೆ ನೀವಿಕೊಂಡ.

ರವಿಯನ್ನು ಬಹಳಷ್ಟು ಜನ ಒಂದು ಭಿನ್ನ ಹೆಸರಿನಿಂದ ಕರೆಯುತ್ತಿದ್ದರು. ಅದು ನಾವು ಒಟ್ಟಿಗೆ ಪಾಠಕ್ಕೆ ಹೋಗುತ್ತಿದ್ದ ಕುಮಾರಣ್ಣ (ಅವರ ಹಿಂದುಗಡೆ ಕರೆಯುತ್ತಿದ್ದುದು ಕುಂಬಾರಣ್ಣ) ಎರಡು ವರ್ಷಗಳ ಹಿಂದೆ ನಾಮಕರಣ ಮಾಡಿದ ಹೆಸರು-ಮಿಡ್ಚಂಭಟ್ಟ. ಆ ಹೆಸರನ್ನು ಬೇರೆಯವರು ಯಥೇಚ್ಚವಾಗಿ ಬಳಸುತ್ತಿದ್ದರು ಸಹಾ ನನಗಂತು ಹಾಗೆ ಕೂಗಿ ಕರೆಯಲು ಬಲು ಕಷ್ಟವಾಗುತ್ತಿತ್ತು. ಹಾಗೆದರೇನೆಂದು ರವಿಯನ್ನು ಕೇಳಲು ಧೈರ್ಯಸಾಲದೆ ಸತೀಶನಿಗೆ ಕೇಳಿದ್ದೆ. ಅವನು ಹೇಳಿದಂತೆ ಅದು ‘ಮಿಡತೆಯ ಭಟ್ಟ’ ಅನ್ನುವದರ ಸಂಕ್ಷಿಪ್ತ ರೂಪ.

ಒಮ್ಮೆ ಕುಂಬಾರಣ್ಣ್ಣ ಪಾಠಕ್ಕೆ ಬ್ರೇಕ್ ಕೊಟ್ಟು ಹೊರ ಹೋಗಿದ್ದಾಗ ಅಲ್ಲೆ ಹೆಜ್ಜೆ ಹಾಕುತ್ತಿದ್ದ ಬಡಪಾಯಿ ಮಿಡತೆಯೊಂದನ್ನು ಹಿಡಿದು ಬ್ಲೇಡ್ ಹಾಕಿ ಕೊಯ್ದು, ‘ಇದು…….. ಜಠರ, ಇದು…….. ಕರುಳು, ಇದು…….. ಮೆದಳು’ ಅಂತ ಚೊರಕ್ ಚೊರಕ್ ಅನಿಸುತ್ತಾ, ಡೈಸೆಕ್ಷನ್ ವಿಧಾನವನ್ನು ಮಿಕ್ಕವರಿಗೆ ಡೆಮಾಂಸ್ಟ್ರೇಷನ್ ಕೊಡೋದನ್ನ ಕುಮಾರಣ್ಣ ಬಂದು ನೋಡಿ, ಹುಡುಗನಿಗೆ ಈ ಚಿಕ್ಕ ವಯಸ್ಸಿಗೆ ಇಷ್ಟು ಆಸಕ್ತಿಯಿದೆಯಲ್ಲ ಎಂದು ಆಶ್ಚರ್ಯವಾಗಿ, ಪ್ರೀತಿಯಿಂದ ಮಿಡ್ಚಂಭಟ್ಟ ಅನ್ನೋ ಹೆಸರಿಟ್ಟು ಬೆನ್ನುತಟ್ಟಿದ್ದರಂತೆ. ಆ ದಿನ ಪ್ರಾರಂಭವಾಗಿದ್ದ ಕೀಟಗಳ ಪ್ರೀತಿ ಅವನನ್ನೊಬ್ಬ ಮಿನಿ ವಿಜ್ಞಾನಿಯನ್ನಾಗಿಸಿತ್ತು.
ರವಿಯನ್ನು ಸಂಶೋಧಕನನ್ನಾಗಿಸಿದ್ದು ಕೇವಲ ಕೀಟಗಳಷ್ಟೆ ಅಲ್ಲ. ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಆತ ಕೈಯಾಡಿಸದ ಕ್ಷೇತ್ರಗಳಿಲ್ಲ. ತಾನು ಉರುಳಿಸಿಕೊಂಡು ಓಡಿಸುತ್ತಿದ್ದ ಮರದ ಗಾಲಿಗೆ ತಗಡಿನಿಂದ ಮಾಡಿದ ಸ್ಪೀಡೋಮೀಟರ್ ಹಾಕಿದ್ದ. ಅದರ ತಂತ್ರಜ್ಞಾನ ಬಹಳ ಸರಳ. ಸಣ್ಣ ಬಟ್ಟಲಿನಂತೆ ಮಾಡಿದ ತಗಡಿನ ಫಲಕದ ಮೇಲೆ ಮೊಳೆಯೊದನ್ನು ಅಡ್ಡಲಾಗಿ ಸಿಕ್ಕಿಸಿ, ನಂಬರ್‍ಗಳನ್ನು ಸುತ್ತಲೂ ಅಂಟಿಸಿ ತಯಾರಾಗಿದ್ದ ಮೀಟರ್, ಗಾಲಿ ಜೋರಾಗಿ ಓಡಿದಂತೆ ‘ಗರಗರ’À ಎಂದು ಅತ್ತಿಂದಿತ್ತ ಅಳ್ಳಾಡುತ್ತಿತ್ತು. ಮನೆಯ ಹೊರಗೆ ಆಧುನಿಕ ಕಾಲಿಂಗ್ ಬೆಲ್ ಇಲ್ಲದಿದ್ದರೂ, ರವಿಯ ಆವಿಷ್ಕಾರದಿಂದ ತಯಾರಾದ ಸಾಧನವೊಂದಿತ್ತು. ಅದು ಹೊರಬಾಗಿಲಿನ ಬಳಿಯಿದ್ದ ದಾರ ಎಳೆದರೆ ಅಡುಗೆ ಮನೆಯಲ್ಲಿ ಗಂಟೆ ಬಡಿಯುವ ವ್ಯವಸ್ಥೆ.

ಮಿಡ್ಚಂಭಟ್ಟನ ರಚನಾತ್ಮಕ ಮೆದುಳಿಗೆ ಒಮ್ಮೆ ದೀಪಾವಳಿ ಹಬ್ಬದಲ್ಲಿ ಮತ್ತೊಂದು ನಿದರ್ಶನ ಸಿಕ್ಕಿತ್ತು. ಈಸುರಯ್ಯ ಹಬ್ಬಕ್ಕೆ ಪಟಾಕಿ ಗಿಟಾಕಿ ಏನು ಇಲ್ಲ ಎಂದಾಗ ಅಪ್ಪನ ಮೇಲೆ ಮುನಿಸು ಕಟ್ಟಿಕೊಳ್ಳದೆ ನನ್ನೊಬ್ಬನನ್ನು ಜೊತೆಗೆ ಸೇರಿಸಿಕೊಂಡು ಪಟಾಕಿ ತಾಯಾರಿಸಲು ಒಂದು ಹೊಸ ಪ್ರಾಜೆಕ್ಟ್ ಆರಂಭಿಸಿದ. ಅಪ್ಪ ಚಿನ್ನ ಬೆಳ್ಳಿ ಕೆಲಸ ಮಾಡುವಾಗ ಹೊರಹೊಮ್ಮತ್ತಿದ್ದ ತರಾವರಿ ಬಣ್ಣಗಳೆ ಆ ಯೋಜನೆಗೆ ಸ್ಪೂರ್ತಿಯಾಗಿದ್ದವು. ಕಲ್ಲುಪ್ಪ್ಪು, ಬೆಂಕಿಕಡ್ಡಿಗಳ ಕೆಂಪುತಲೆ, ನಿರ್ದಿಷ್ಟ ಆಕಾರಕ್ಕಾಗಿ ರಟ್ಟಿನ ಚೂರುಗಳು, ಅರೆಬರೆ ಉರಿದ ಮೇಣದ ಬತ್ತಿಗಳು ಇದಷ್ಟೆ ಹೋಂಮೇಡ್ ಪಟಾಕಿಯ ಇನ್‍ಗ್ರೀಡಿಯೆಂಟ್ಸ್. ಅವನ್ನೆಲ್ಲ ಅದಾವುದೊ ಫಾರ್ಮುಲಾದಲ್ಲಿ ಪೊಟ್ಟಣಕಟ್ಟಿ, ರಟ್ಟು ಅಂಟಿಸಿ, ಹೊರ ಚಾಚಿದ ಕಾಟನ್ ದಾರಕ್ಕೆ ಬೆಂಕಿ ಹತ್ತಿಸಿದರೆ ಡಬ್ ಅಂತ ಶಬ್ದ ಮಾಡದಿದ್ದರು, ಪಣ್‍ಪಣ್ ಎನ್ನುತ್ತ ದಗದಗ ಉರಿಯುತ್ತಿತ್ತು ಮರಿ ವಿಜ್ಞಾನಿಯ ಪಟಾಕಿ.

ಒಮ್ಮೊಮ್ಮೆ ಅಸಹ್ಯ ತರಿಸುವ ರಿಸರ್ಚ್‍ಗಳನ್ನು ಮಿಡ್ಬ್‍ಂಭಟ್ಟ ಮಾಡುತ್ತಿದ್ದ. ಬಯಲು ಮಲವಿಸರ್ಜನೆಗೆ ಹೋಗಿ ಬಂದವನು ಸಣ್ಣ ಪ್ಲಾಸ್ಟಿಕ್ ಡಬ್ಬಿಯಲ್ಲಿ ಏನನ್ನೊ ತಂದು ನನಗೂ ಸತೀಶನಿಗು ತೋರಿಸಿದ್ದ. ಒಳಗಿದ್ದುದು ಸಂಶೋಧನೆ ಮಾಡಲು ತಂದಿದ್ದ ನಾಲ್ಕೈದು ಜಂತುಹುಳುಮರಿಗಳು. ಮೂಗು ಮುಚ್ಚಿಕೊಂಡು ನೋಡಿದರು ವಾಕರಿಕೆ ಬಂದಂತಾಯಿತು. ಆದರೂ ಕಷ್ಟಪಟ್ಟು ತಡೆದುಕೊಂಡು,
‘ಇದನ್ನ ಏನ್ಮಾಡ್ತೀಯಾ’ ಅಂದೆ.
‘ಮೊದ್ಲು ಇವರೆಡು ಹೇಗೆ ಮಾತಾಡ್ಕೊತ್ತವೆ ಅನ್ನೋದನ್ನ ಟೆಸ್ಟ್ಟ್ ಮಾಡ್ತೀನಿ.., ಆಮೇಲೆ ಇದ್ದಿದ್ದೆ… ಹೇಗೂ ಹೊಸ ಬ್ಲೇಡ್ ರೆಡಿಯಾಗಿದೆ’.
‘ಅವೆಲ್ಲಾದ್ರು ಮಾತಾಡ್ತವಾ?’
ಹೆಚ್ಚು ಯೋಚನೆ ಮಾಡದೆ ಸತೀಶ ಕೇಳಿದ ಪ್ರಶ್ನೆಗೆ ‘ಹಾಗಾದ್ರೆ ಇರುವೆಗಳು ಮಾತಾಡ್ದೇನೆ ಒಂದರ ಹಿಂದೆ ಒಂದು ಹೋಗ್ತವಾ? ಹಕ್ಕಿಗಳು ಹಾರುವಾಗ ಮಾತಾಡದೆ ಜೊತೆಯಲ್ಲಿ ಹಾಗೆ ಇರ್ತವಾ? ಕಾಗೆ ಕಾ.. ಕಾ.. ಅನ್ನೋದು, ಕರು ಅಂಬಾ.. ಅನ್ನೋದು, ನಾಯಿ ಬೊಗಳೋದು.. ಪ್ರಾಣಿಗಳು ಅವುಗಳ ಭಾಷೆಯಲ್ಲಿ ಮಾತಾಡೋದು ತಿಳೀತಾ’ ಎಂದು ಹೇಳಿ ಅಣ್ಣ ತಮ್ಮಂದಿರ ಬಾಯಿ ಮುಚ್ಚಿಸಿದ.

******
‘ನೋಡಿ ಮಕ್ಕಳೆ, ಇದೇ ಆ ಮೈಸೂರು ಹುಲಿ ಟಿಪ್ಪುಸುಲ್ತಾನನ ಸಮಾಧಿ’ ದೊಡ್ಡ ಕೆರೆಗೆ ಹೋಗೊ ದಾರೀಲಿ ಇದ್ದ ಸಿದ್ದೇಗೌಡರ ಸಮಾಧಿಯನ್ನು ರವಿ ತೋರಿಸಿದ ರೀತಿ ನೋಡಿ ಜೊತೆಯಲ್ಲ್ಲಿದ್ದ ಹತ್ತಾರು ಹುಡುಗರು ಹೌದು ಹೌದು ಎಂಬಂತೆ ತಲೆಯಾಡಿಸಹತ್ತಿದರು. ತಿಮ್ಮಯ್ಯ ಮೇಷ್ಟರಮಗ ಪ್ರಕಾಶ, ಸುಂದ್ರಣ್ಣನ ಲೋಕ, ಗೊರಳ್ಳಿ ಮಂಜ, ಗುಡಿಹಟ್ಟಿ ಹರೀಶ, ಉಪ್ಪಾರರ ಮೂರ್ತಿ, ಅಣ್ಣ ಸತೀಶ, ಮನೋಹರ, ನಾಗೇಶಣ್ಣನ ಮಗ ದಿನೇಶ, ಹೀಗೆ ಸುಮಾರು ಇಪ್ಪತ್ತು ಹುಡುಗರು ರವಿಯ ಜೊತೆ ಲೋಕಲ್ ಪ್ರವಾಸದಲ್ಲಿದ್ದರು.

ನಾರಿನ ಹಗ್ಗವನ್ನು ಮುಂದೆ ಒಬ್ರು ಹೊಟ್ಟೆ ಬಳಸಿ, ಹಿಂದೆ ಇನ್ನೊಬ್ಬ ಬೆನ್ನಕಡೆ ಸುತ್ತಿ ಮಾಡಿದ ರಿಂಗ್ ಒಳಗೆ ಮೂವರು ಎಡ ಬಲಗಳಲ್ಲಿ ಹಗ್ಗ ಹಿಡಿದು ನಿಂತುಕೊಂಡಾಗ ನಮ್ಮ ಹೈಟೆಕ್ ಬಸ್ ತಯಾರಾಗಿತ್ತು. ಅದೇ ತರಹದ ಇನ್ನೂ ಮೂರು ಬಸ್ಸುಗಳಲ್ಲಿ ಮಿಕ್ಕವರು ನಿಂತುಕೊಂಡರು. ಮೊದಲು ನಿಂತವನು ಡ್ರೈವರ್ ಕೊನೆಯಲ್ಲಿ ನಿಂತವನು ಕಂಡೆಕ್ಟರ್. ಕಬ್ಬಿಣದ ಹಳೆಯ ತೊಟ್ಟಿಲೊಂದನ್ನು ತಲೆಯ ಮೇಲೆ ಉಲ್ಟಾ ಹಿಡಿದುಕೊಂಡ ಜಗದೀಶ ಮತ್ತು ವಿಠಲ ಅದು ಜೀಪ್ ಎಂದು ಹೇಳಿಕೊಂಡರು. ಈ ಮೂಲಕ ಟಿಪ್ಪುಸುಲ್ತಾನನ ಪರಮ ಅಭಿಮಾನಿಗಳಾಗಿದ್ದ ಪಟಿಂಗರು ಶ್ರೀರಂಗಪಟ್ಟಣದಲ್ಲಿದ್ದ ಆತನ ಸಮಾಧಿಯನ್ನು ನಮ್ಮೂರಲ್ಲೇ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವು.

ಪಕ್ಕದಲ್ಲೇ ಇದ್ದ ಈಶ್ವರ ದೇವಸ್ಥಾನವನ್ನು ತೋರಿಸುತ್ತಾ ‘ಬೇಗ ಬನ್ನಿ ಎಲ್ಲರು ರಂಗನಾಥ ದೇವಾಲಯ ನೋಡಿ ಬರೋಣ’ ಎಂದ ಜಗದೀಶ. ಟಿಪ್ಪುವಿನ ಸಮಾಧಿ ನೋಡಿ ರಂಗನಾಥ ದೇವಾಲಯದತ್ತ ಹೊರಡುವ ಮುನ್ನ ಪಕ್ಕದಲ್ಲಿದ್ದ ಮಾವಿನ ಮರದಿಂದ ಒಂದಷ್ಟು ಕಾಯಿಗಳನ್ನು ಕಿತ್ತು ತಿಂದೆವು. ತಮ್ಮ ತಮ್ಮ ಬಸ್ಸುಗಳಲ್ಲಿ ಓಡುತ್ತಾ ಅಲ್ಲ..ಅಲ್ಲ… ಬಸ್ಸನ್ನು ಓಡಿಸುತ್ತಾ ರಂಗನಾಥ ದೇವಾಲಯವನ್ನೂ ನೋಡಿದ್ದಾಯಿತು. ಅಲ್ಲಿಯವರೆಗೆ ಮೂಕ ಪ್ರೇಕ್ಷಕರಾಗಿದ್ದ ಕೆಲ ಮಿತ್ರರು ಇದ್ದಕ್ಕಿದಂತೆ ಹುಮ್ಮಸ್ಸು ಬಂದವರಾಗಿ ದೊಡ್ಡ ಕೆÀರೆಯಿಂದ ಕೆಳಗಿನ ಗದ್ದೆಗಳಿಗೆ ನೀರು ತಿರುಗಿಸಲು ಕಟ್ಟಿದ ತೂಬಿನ ಕಟ್ಟೆಯನ್ನು ಕನ್ನಂಬಾಡಿ ಕಟ್ಟೆಯೆಂದು ಕೋಡಿಹರಿದು ತುಳುಕಿ ಕೆಳಗೆ ಬೀಳುತ್ತಿದ್ದ ನೀರಿನ ಹರಿವನ್ನು ಶಿವನಸಮುದ್ರವೆಂದು ತಮಗಿಷ್ಟಬಂದಂತೆ ವ್ಯಾಖ್ಯಾನಿಸಿದರು. ಅರಮನೆಯೆಂದು ತೋರಿಸಲು ಯಾವ ದೊಡ್ಡ ಕಟ್ಟಡವು ಕಾಣಲಿಲ್ಲವಾದ್ದರಿಂದ ‘ಅದನ್ನು ನೋಡಲು ನಮಗೆ ಸಮಯವಿಲ’್ಲ ಎಂದು ಅಂದುಕೊಳ್ಳಬೇಕೆಂದು ಈ ಮಧ್ಯೆ ವಿಠಲ ಸಲಹೆ ನೀಡಿದ. ಬಸ್ಸುಗಳನ್ನು ಊರಿನ ಕಡೆ ಓಡಿಸಬೇಕೆಂದು, ಹೊತ್ತು ಮೀರಿದರೆ ಕತ್ತಲಾಗುವುದೆಂದು ಹೇಳಿದ ಕೂಡಲೆ ಮನುಷ್ಯ ಬಸ್‍ಗಳು ಬೆಕ್ಕರೆ ಕಡೆ ನಾಗಾಲೋಟಕಿತ್ತವು. ಸ್ಕೂಲಿನವರು ಟೂರ್‍ಗೆ ಕರೆದು ಕೊಂಡು ಹೋಗದಿದ್ದರಿಂದ ಆಗಿದ್ದ ನಿರಾಸೆ ಈಗ ಎಷ್ಟೋ ಕಡಿಮೆ ಆಗಿತ್ತು.

*******
ಮಲ್ಲಾರಾಧ್ಯ ಮೇಷ್ಟ್ರು ಮೂಲೆಯಲ್ಲಿ ತುಕ್ಕು ಹಿಡಿಯುತ್ತಿದ್ದ ಮೈಕ್ರೋಸ್ಕೋಪ್ ಮೇಲೆ ಕನಿಕರ ತೋರಿದಂತೆ ಕಾಣುತ್ತದೆ. ಬಿಳಿಯ ಬಟ್ಟೆಯೊಂದರಿಂದ ಲೆನ್ಸ್‍ಗಳನ್ನು ಕ್ಲೀನ್ ಮಾಡಿ, ಧೂಳು ಕೊಡವಿ ಈರುಳ್ಳಿಯ ತೆಳುಪದರವನ್ನು ಒಂದು ಗಾಜಿನ ಮೇಲಿಟ್ಟು ಮಧ್ಯಬಿಂದುವನ್ನಾಗಿಸಿ ಸರತಿಯಂತೆ ಒಬ್ಬರಾದ ಮೇಲೆ ಒಬ್ಬರು ಬಂದು ನೋಡಿ ಎಂದರು. ಮೈಕ್ರೋಸ್ಕೋಪ್‍ನಲ್ಲಿ ನೋಡಿದರೆ ಜೀವಕೋಶಗಳು ಬಣ್ಣದಿಂದ ಕೂಡಿದ್ದು, ಹೊಳೆಯುತ್ತಾ ಕಂಗೊಳಿಸುತ್ತವೆ ಎಂದು ನಂಬಿದ್ದವರು ಒಂದು ಕಣ್ಮುಚ್ಚಿ ಇನ್ನೊಂದರಲ್ಲಿ ಇಣುಕಿ ನೋಡಿದಾಗ ತೀವ್ರ ನಿರಾಸೆಗೊಂಡೆವು.

ಮೀನಿನ ಬಲೆಯಂತೆ ಕಾಣುತ್ತಿದ್ದ ಈರುಳ್ಳಿ ಪದರ ಹೇಳಿಕೊಳ್ಳುವಂತಹ ಕುತೂಹಲವನ್ನೇನು ಹುಟ್ಟುಹಾಕಲಿಲ್ಲ, ಐನೋರ ಗುರು ಒಬ್ಬನ್ನನ್ನು ಬಿಟ್ಟು. ಎಲ್ಲರು ಇಣುಕಿ ಇಣುಕಿ ಮೈಕ್ರೋಸ್ಕೋಪ್‍ನ ಲೆನ್ಸ್‍ನ ಒಳಗಿದ್ದುದನ್ನು ನೋಡುತ್ತಿದ್ದರೆ ವ್ಯತಿರಿಕ್ತವಾಗಿ ಗುರು ಮಾತ್ರ ಮೈಕ್ರೋಸ್ಕೋಪನ ಹತ್ತಿರ ಹೋಗಿ ತಲೆಯನ್ನು ಮುನ್ನೂರರವತ್ತು ಡಿಗ್ರಿಯಷ್ಟು ತಿರುಗಿಸಿ ವಿಧವಿಧ ಕೋನಗಳಿಂದ ನೋಡಿ ಮುಟ್ಟಿನೋಡಿ ಬಂದು ಒಳಗೊಳಗೆ ಸಂಕಲನ ವ್ಯವಕಲನ ಮಾಡುವವನಂತೆ ಲೆಕ್ಕಾಚಾರದಲ್ಲಿ ಮಗ್ನನಾದನು. ಜಾತ್ರೆಯಲ್ಲಿ ಕೊಂಡಿದ್ದ ಐದು ಲೆನ್ಸ್‍ಗಳನ್ನು ಹೇಗೊ ಒಂದರ ಪಕ್ಕ ಒಂದು ಜೋಡಿಸಿ ಸಮತೊಲನ ಮಾಡಿದರೆ ಅದು ಮೈಕ್ರೋಸ್ಕೋಪ್ ಆಗಿ ಬದಲಾಗುವುದೆಂದು ಅಸಂಖ್ಯಾತ ಪ್ರಯೋಗಾಲಯಗಳನ್ನು ಮಾಡಿ ಫ್ಲಾಪ್ ಆಗಿದ್ದವನು, ತನ್ನ ಅಧ್ಯಯನದಲ್ಲಾಗಿದ್ದ ತಪ್ಪು ಯಾವುದೆಂದು ತಿಳಿಯಲು ಇಲ್ಲಿ ಮೆದುಳಿಗೇ ಕೈಹಾಕುವ ಪ್ರಯತ್ನ ಮಾಡುತ್ತಿದ್ದ. ಮುಂದೆ ಒಂದು ದಿನ ತಾನು ತಯಾರಿಸುವ ಮೈಕ್ರೋಸ್ಕೋಪು ಸ್ಕೂಲಿನಲ್ಲಿದ್ದುದಕ್ಕಿಂತ ಸ್ಟ್ರಾಂಗ್ ಆಗುವುದೆಂದು, ಕ್ಲಾಸ್ ಮುಗಿದ ಮೇಲೆ ಪ್ರತ್ಯೇಕವಾಗಿ ನನ್ನನ್ನು ಕರೆದು ಕೊಚ್ಚಿಕೊಂಡ. ಹೋದ ತಿಂಗಳು ಊರಿನ ನೀರು ಕೆಟ್ಟು ವಾಂತಿ ಭೇದಿ ಆದಾಗ ಪಿರಿಯಾಪಟ್ಟಣದಿಂದ ಬಂದಿದ್ದ ಡಾಕ್ಟರ ಟೀಮು ಇದೆಲ್ಲಾ ನೀರಿನಿಂದ ಹರಡಿದ ಯಾವುದೋ ಬ್ಯಾಕ್ಟಿರಿಯಾದಿಂದ ಆದ ಸೋಂಕು ಅಂತ ಮಾತಾಡ್ಕೋತ್ತಿದ್ರು. ನೀನು ಮೆಷೀನ್ ಬೇಗ ಕಂಡು ಹಿಡಿದ್ರೆ ನಲ್ಲಿ ನೀರನ್ನು ಅದಕ್ಕೆ ಹಾಕಿ ಆ ಕ್ರಿಮಿಗಳನ್ನು ನೋಡಬಹುದಿತ್ತು ಎಂದು ಹೇಳಿ ಹುರುದುಂಬಿಸಿ ಗೆಳೆಯನನ್ನು ಆಟದ ಮೈದಾನದತ್ತ ಕರೆದುಕೊಂಡು ಹೋದೆ.

******
ಗುಡಿಹಟ್ಟಿ ಹರೀಶನ ಮನೆಕೊಟ್ಟಿಗೆ ತುಂಬಾ ದನಗಳಿದ್ದವು. ದಪ್ಪ ಕೆಚ್ಚಲಿನ ನಾಲ್ಕು ಹಸುಗಳು ಕಪ್ಪು ಪೈಂಟ್ ಹೊಡೆದಂತೆ ಕಾಣುತ್ತಿದ್ದ ಮೂರು ಎಮ್ಮೆಗಳು, ಹೊಸದಾಗಿ ಹುಟ್ಟಿದ್ದ ಎಮ್ಮೆ ಕರು, ಎರಡು ಜೋಡಿ ಪೆಲ್ವಾನನಂತಿದ್ದ ಎತ್ತುಗಳು. ಮಗ ಓದಲಿ ಅಂತ ಅವರವ್ವ ನಾಗಮ್ಮನಿಗೆ ಶಾನೆ ಆಸೆ. ಶನಿವಾರ ಭಾನುವಾರ ಬಂದಾಗ ಮಾತ್ರ ದನಮೇಯಿಸಲು ಹರೀಶ ಹೊಲಕ್ಕೆ ಹೋಗುತ್ತಿದ್ದರಿಂದ ಬಹಳ ಸಲ ಸ್ನೇಹಿತರ ಆಟಗಳಿಗೆ ಲಭ್ಯವಾಗುತ್ತಿರಲಿಲ್ಲ. ಪೆನ್ನು ಪುಸ್ತಕಗಳಿಗಿಂತ ಮನೆಯಲ್ಲಿದ ಹಸು ಎಮ್ಮೆಗಳ ಮೇಲೆ ಹೆಚ್ಚಿನ ಒಲವು ತೋರುತ್ತಿದವನಿಗೆ ರಜೆ ದಿನಗಳಲ್ಲಿ ದನ ಕಾಯುವ ಕೆಲಸ ಕಷ್ಟಕರವೆನಿಸಲಿಲ್ಲ. ಅದೇ ಹಳೆಯ ಕ್ರಿಕೆಟ್, ಕೋ..ಕೋ, ಲಗೋರಿ, ಕಲ್ಲುತೊಪ್ಪೆ ಆಟವಾಡಿ ಬೇಸತ್ತಿದ್ದ ಮಿಕ್ಕ ಸ್ನೇಹಿತರು ದನಮೇಯಿಸಲು ದೂರ ದೂರ ಹೋಗುತ್ತಿದ್ದ ಹರೀಶನೊಂದಿಗೆ ಜೊತೆಯಾಗುತ್ತಿದ್ದೆವು. ಹೊಲಗಳ ಅಂಚಿನಲ್ಲಿ ಸಾಲುಸಾಲಾಗಿ ಬೆಳೆಸಿದ ಹಲಸಿನ, ಮಾವಿನ, ಹುಣಸೆ ಮರಗಳಿಂದ ಮಂಗನಂತೆ ಜಿಗಿದು ಆತ ಕ್ಷಣಾರ್ಧದಲ್ಲಿ ಕೇಳಿದಷ್ಟು ಹಣ್ಣು ಕಿತ್ತುಕೊಡುತ್ತಿದ್ದುದು ಮತ್ತೊಂದು ಕಾರಣ. ಮನೆಯವರಿಗೆ ಗೊತ್ತಿಲ್ಲದಂತೆ ಸ್ನೇಹಿತರ ಮುಂದೆ ನಡೆಸುತ್ತಿದ್ದ ಸಂಶೋಧನೆಗಳು ಹರೀಶನನ್ನು ಮತ್ತೊಬ್ಬ ವಿಜ್ಞಾನಿಯನ್ನಾಗಿಸಿದ್ದವು. ಗೋಮೂತ್ರದಲ್ಲಿರುವ ಜೌಷದಿಯ ಗುಣಗಳು ಜಗತ್ತಿಗೇ ಗೊತ್ತಿರುವ ವಿಷಯ. ಅದನ್ನು ಚೆನ್ನಾಗಿ ಕೇಳಿ ತಿಳಿದಿದ್ದ ಹರೀಶ, ಜೊತೆಯಲ್ಲಿ ಯಾವಾಗಲು ಒಂದು ಮಗ್ಗು ಹಿಡಿದುಕೊಂಡು ಹಸುಗಳು ಬಯಲಲ್ಲಿ ಸೂಸುಮಾಡುವ ಹೊತ್ತಿಗೆ ಓಡಿ ಅದನ್ನು ಹಿಡಿದು ಹತ್ತಿರದಲ್ಲಿದ್ದ ಯಾವುದಾದರು ಗಿಡದ ಬುಡಕ್ಕೆ ಹಾಕಿ ಧನ್ಯನಾಗುತ್ತಿದ್ದ. ಯಾರಿಗಾದರು ಗಾಯವಾದರೆ ಸಗಣಿ ಮತ್ತು ಗೋಮೂತ್ರವನ್ನು ಒಂದು ವಿಶೇಷ ಅನುಪಾತದಲ್ಲಿ ಬೆರೆಸಿ ಮೆತ್ತುತ್ತಿದ್ದ. ಕೆಲವೊಮ್ಮೆ ಆ ಗಾಯಗಳು ವಾಸಿಯು ಆಗಿದ್ದ ನಿದರ್ಶನಗಳಿದ್ದುದರಿಂದ ಆತ ಒಂದು ರೀತಿ ಆಯುರ್ವೇದ ಪಂಡಿತನಂತೆಯೂ ಆಡಿದ್ದು ಜ್ಞಾಪಕವಿದೆ. ನಾವ್ಯಾರೂ ಒಪ್ಪಿಕೊಳ್ಳದ ಎರಡು ಪ್ರಯೋಗಗಳನ್ನು ಅವನು ಆಗಾಗ ಮಾಡುತ್ತಿದ್ದ. ಒಂದು ತನ್ನ ಮೂತ್ರವನ್ನು ಹಾಲು ಹಿಂಡುವ ಎಮ್ಮೆಗಳಿಗೆ ಕುಡಿಸಿ ಹಾಲು ಹೆಚ್ಚಾಗಬಹುದೆಂದು ಕಾಯ್ದದ್ದು ಮತ್ತೊಂದು ಕಾಲೋನಿಯ ಏಲಕ್ಕಿ ಹೇಳಿಕೊಟ್ಟ ಎಂದು ದನಗಳಿಗೆ ಕಾಡಿನಿಂದ ತಂದ ಘಾಟಿನ ಸೊಪ್ಪೊಂದನ್ನು ತಿನ್ನಿಸಿ ಅವುಗಳಿಗೆ ಜೀವಮಾನದಲ್ಲಿ ರೇಬಿಸ್ ರೋಗ ಬರುವುದಿಲ್ಲವೆಂಬುದು. ತಿಮ್ಮಯ್ಯ ಮೇಸ್ಟ್ರು ಹುಚ್ಚುನಾಯಿ ಕಡಿತಕ್ಕೆ ಲಸಿಕೆ ಕಂಡು ಹಿಡಿದ ವಿಜ್ಞಾನಿ ಲೂಯಿಪಾಶ್ಚರನೆಂದು ಪಾಠ ಮಾಡಿದ ಮೇಲೆ ಗೆಳೆಯರನ್ನು ಹತ್ತಿರ ಕರೆದು ತಾನು ಎಮ್ಮೆಗಳ ಮೇಲೆ ಪ್ರಯೋಗ ಮಾಡುವ ಸೊಪ್ಪಿನ ಜೌಷಧಿ ಲೂಯಿಪಾಶ್ಚರನು ಕಂಡುಹಿಡಿದ ಲಸಿಕೆಯ ಮೂಲವಿರಬಹುದೆಂದು ಗುಮಾನಿ ವ್ಯಕ್ತಪಡಿಸಿದ್ದನು.

****
ಅಂದು ಒಂದಡಿ ಉದ್ದದ ಅರ್ಧ ಅಡಿ ಅಗಲದ ಎರಡು ಹಲಗೆ, ಸುತ್ತಿಗೆ, ಮೊಳೆ ಜೊತೆಗೊಂದಿಷ್ಟು ತಂತಿ ಜೋಡಿಸಿಕೊಂಡು ಕಟ್ಟ ಕಟ್ಟ ಕುಟ್ಟುತ್ತಿದ್ದ ಸುಂದ್ರಣ್ಣನ ಲೋಕ. ಗೋಲಿಯಾಡಲು ಬರದೊಪ್ಪದೆ ಕೊಟ್ಟಿಗೆ ಮುಂದೆ ಗ್ಯಾರೇಜ್ ಮಾಡಿಕೊಂಡು ಆತ ಆವಿಷ್ಕರಿಸುತ್ತಿದ್ದು ನಾಯಿಗಳಿಂದ ಓಡುವ ಗಾಡಿಯೊಂದನ್ನ. ಎತ್ತಿನ ಗಾಡಿಯಿಂದ ಪ್ರೇರಣೆ ಪಡಿದಿದ್ದ ಆ ಹೊಸ ವಾಹನ ತಯಾರಿಸಲು ಒಂದು ಕಾರಣವನ್ನು ಆತ ಆಗಾಗ ಹೇಳುತ್ತಿದ್ದ. ಕೊಟ್ಟಿಗೆಯಲ್ಲಿ ಪ್ರತಿದಿನ ಹುಟ್ಟುತ್ತಿದ ಮಂಕ್ರಿ ಕಸವನ್ನು ಅವರವ್ವ ಉಸ್ ಉಸ್ ಅನ್ನುತ್ತಾ ಊರಿನ ಹೋರಗೆ ಇದ್ದ ತಿಪ್ಪೆಗುಂಡಿಗೆ ಬೆಳಿಗ್ಗೆ ಹೊತ್ತೊಯ್ಯುವಾಗ ಅವನ ಕರಳು ಚುರುಕ್ಕೆÉಂದಿತ್ತು. ಬೀದಿತುಂಬ ಅಡ್ಡಾಡುವ ನಿಷ್ಪ್ರಯೋಜಕ ನಾಯಿಗಳಿಗೆ ಗಾಡಿಯೊಂದನ್ನು ಮಾಡಿ ಕಟ್ಟಿ ಅದರ ಮೇಲೆ ರಾಶಿ ಕಸವನ್ನಿಟ್ಟು ಅವ್ವನಿಗೆ ಅದೊಂದು ಕೆಲಸದಲ್ಲಾದರೂ ಮುಕ್ತಿ ನೀಡಬೆಕೆಂಬುದು ಅವನ ಪ್ಲಾನ್. ಗೊರ ಗೊರ ಶಬ್ದ ಮಾಡುತ್ತಾ ಉಂಟಾಡುತ್ತಾ ಸಾಗುವ ಕಚ್ಛಾ ಗಾಡಿಯನ್ನೇನು ತಯಾರಿಸಿದ. ಆದರೆ ನಾಯಿ? ದಾರ ಹಿಡಿದು ಬಾವಿ ಕಟ್ಟೆ ಹತ್ತಿರ ಮಲಗಿದ್ದ ಕರಿ ನಾಯಿಗೆ ಗಾಳ ಬೀಸಿದೆವು. ಹುಡುಗರ ಉದ್ದೇಶವನ್ನು ಬೇಗನೇ ಅರಿತೊ ಏನೊ ವ್ಹೋ-ವ್ಹೋ-ವ್ಹೋ ಅಂತ ಕಿವಿಗಡಚುವಂತೆ ಅದು ಬೊಗಳಿ ಕಚ್ಚಲು ಬಂತು. ಬೀದಿನಾಯಿಯ ಬದಲು ಸಾಕಿದ ನಾಯಿ ಕಟ್ಟಿದರೆ ಎಳೆಯಬಹುದೆಂದು ಪ್ರಶಾಂತ ಸಾಕಿದ್ದ ಕೆಂದ್ನಾಯನ್ನು ಗಾಡಿಗೆ ಸೇರಿಸಿ ಪ್ರಯತ್ನಿಸಿದ್ದು ಆಯಿತ್ತು. ಎತ್ತೆತ್ತಲೋ ಎಳೆದು ಕೊನೆಗೆ ನೆಗೆದು ಹಾರಿ ಹೋಗಿದ್ದ ಪ್ರಶಾಂತನ ನಾಯಿ ಹೋಗೋದೇನೊ ಹೋಯ್ತು. ಜೊತೆಗೆ ಗಾಡಿಯ ಎರಡು ಚಕ್ರಗಳನ್ನು ಮುರಿದು ಹಾಕಿತ್ತು. ನಾವು ಹೇಳಿದ ಮಾತನ್ನು ಅರ್ಥ ಮಾಡಿಕೊಂಡು ಆಜ್ಞೆಗಳನ್ನು ಪಾಲಿಸಬೇಕೆಂದರೆ ಸೀಗೂರಿನ ಟಿಬೇಟಿಯನ್ನರ ಹತ್ತಿರವಿರುವ ಜಾತಿ ನಾಯಿಗಳು ಬೇಕೆಂದು ಅವುಗಳಿಗೆ ಸಾವಿರಾರು ರೂಪಾಯಿಗಳಾಗುವುದೆಂದು ತಿಳಿದಾಗ ಯೋಜನೆಯನ್ನು ನಿಲ್ಲಿಸುವುದು ಅನಿವಾರ್ಯವಾಯಿತು. ಭಾರವಾದ ಮನಸ್ಸಿನಿಂದ ಇಬ್ಬರು ನಿರಾಸೆ ಅನುಭವಿಸುವುದರ ಒಳಗೆ ಮುರಿದ ಗಾಡಿ ಸುಂದ್ರಣ್ಣನ ಕೈಗಳ ಮೂಲಕ ನೀರೊಲೆಗೆ ಇಂಧನವಾಗಿ ಹೊಯಿತು.

****
‘ಛೇ, ಎಂಥಾ ತಪ್ಪು ಮಾಡಿದೆವು, ಮಿಡ್ಚಂಭಟ್ಟನನ್ನು ಒಂದು ಮಾತು ಕೇಳಬೇಕಿತ್ತಲ್ವಾ?’. ಪ್ರಶಾಂತ ಐಡಿಯಾ ಕೊಟ್ಟಿದ್ದಕ್ಕೆ ಖುಷಿಪಡಬೇಕೋ ಇಲ್ಲಾ ಉಪಾಯ ಲೇಟಾಗಿ ಕೊಟ್ಟಿದ್ದಕ್ಕೆ ಬಯ್ಯಬೇಕೊ ಗೊತ್ತಾಗದೆ ‘ಆಯ್ತು ನಡೆ ಕೇಳೋಣ’ ಎಂದ, ಮಿಡ್ಚಂಭಟ್ಟನ ಆವಿಷ್ಕಾರಗಳನ್ನು ಅರಿತಿದ್ದ ಲೋಕೇಶ. ಅಂತೂ ಇಂತೂ ಗೆಳೆಯರ ಬಳಗದಲ್ಲಿ ಸಾಕ್ರೇಟ್ಸನ ಫಿಲಾಸಫಿಯನ್ನು, ಅರಿಸ್ಟಾಟಲ್‍ನ ವಿಜ್ಞಾನವನ್ನು ಬಲ್ಲವನಂತೆ ವಿಕಾಸಗೊಂಡಿದ್ದ ಈಸೂರಯ್ಯನ ರವಿ.
ಬಹಳ ಹೊತ್ತು ಕಣ್ಣು ಮುಚ್ಚಿ ಯೋಚಿಸಿದ ರವಿ, ಲೋಕಲ್ ನಾಯಿಗಳು ಗಾಡಿ ಎಳೆಯಲು ನಾಲಾಯಕ್ ಎಂದು ಅದಕ್ಕೆ ಜಾತಿ ನಾಯಿಗಳೆ ಬೇಕಾಗಬಹುದೆಂದು ಅಭಿಮತ ವ್ಯಕ್ತಪಡಿಸಿದ. ಅವನ ಅನಿಸಿಕೆಯಲ್ಲಿ ಹೊಸದೇನೂ ಇರದಿದ್ದರು ಶಂಖುವಿನಿಂದ ಬಂದಿದ್ದೆ ತೀರ್ಥ ಎಂಬಂತೆ ತಲೆಯಾಡಿಸಿದೆವು. ‘ಜಾತಿನಾಯಿ ತರಲು ಹಣವೆಲ್ಲಿದೆ?’ ಲೋಕ ತನ್ನ ಅಸಾಯಕತೆಯನ್ನು ಪ್ರಶ್ನೆಯಾಗಿಸಿದಾಗ, ಖತರ್ನಾಕ್ ಬುದ್ದಿಯ ಮಿಡ್ಚಂಭಟ್ಟ ಹೊಸ ಅನುಸಂಧಾನದ ಸತ್ಯವನ್ನು ಹೊರಗೆಡುವಬೇಕಾಯಿತು.

‘ಜಾತಿ ನಾಯಿತರಲು ದುಡ್ಡಿಲ್ಲ ಓಕೆ, ಸರಿ… ಆದರೆ ಬೀದಿನಾಯಿಯನ್ನು ಜಾತಿನಾಯಿಯನ್ನಾಗಿ ಬದಲಾಯಿಸಿದರೆ ಆಯಿತು.’ ವ್ಯವಹಾರ ಸೂಕ್ಷ್ಮತೆ ಹೊಂದಿದ ಜಾಣ ಎಂದು ಉಪಾಯಕೇಳಲು ಬಂದಿದ್ದವರಿಗೆ ರವಿ ತಮಾಷೆ ಮಾಡುತ್ತಿರುವುದು ಅಸಮಂಜಸವಷ್ಟೆ ಅಲ್ಲ, ಅಸಹನೀಯವು ಆಯಿತು. ಮುಖ ಇಳಿ ಬಿಟ್ಟ ಗೆಳೆಯರತ್ತಾ ತಿರುಗಿ, ‘ಇಲ್ಲ ನಾನು ತಮಾಷೆ ಮಾಡ್ತಾ ಇಲ್ಲ, ಬೀದಿ ನಾಯಿಯ ಸಣ್ಣ ಮರಿ ತಕ್ಕೊಂಡು ಚಿಕ್ಕಂದಿನಿಂದ ಟ್ರೈನಿಂಗ್ ಕೊಡೋಣ, ಮಾತು ಕೇಳಿದಿದ್ದರೆ, ತಪ್ಪು ಮಾಡಿದ್ರೆ ಶಿಕ್ಷೆ ಕೊಡೋಣ ಒಳ್ಳೆ ಫುಡ್ ಕೊಟ್ರೆ ಕಂತ್ರಿ ನಾಯಿ ಕೂಡ ಜಾತಿ ನಾಯಿಯಂತೆ ಬದಲಾಗೇ ಆಗುತ್ತದೆ’.
ಸರಿ ಪ್ರಯತ್ನಿಸೋಣ ಎಂದು ಒಪ್ಪಿದವರು ಊರಿನ ನಾಯಿಗಳು ಮರಿ ಹಾಕುವುದನ್ನೇ ಬಕ ಪಕ್ಷಿಗಳಂತೆ ಕಾಯಲಾರಂಭಿಸಿದೆವು. ಕೊನೆಗೆ ಉಪ್ಪಾರರ ಕೃಷ್ಣಮೂರ್ತಿ ಕೊಟ್ಟ ಬಿಳಿ ನಾಯಿಮರಿ ಮನೆಗೆ ಬಂತು. ಹಿತ್ತಲಲ್ಲಿ ನಾವೇ ನಿರ್ಮಿಸಿದ ನಾಯಿ ಮನೆಯೊಳಗೆ ಅಂಗಡಿಯಿಂದ ತಂದು ಹಾಕಿದ ಕ್ವಾಲಿಟಿ ಬಿಸ್ಕೇಟ್ ತಿನ್ನಿಸಿದೆವು. ನನಗೆ ಅಮ್ಮ ಕೊಡುತ್ತಿದ್ದ ಹಾಲಿನ ಅರ್ಧ ಭಾಗ ನಾಯಿಮರಿ ಪಾಲಾದರು ಕಿಚ್ಚಿಂತು ಬೇಸರವಾಗಲಿಲ್ಲ. ದಿನಾ ಸಂಜೆ ಸ್ಕೂಲು ಮುಗಿದ ಮೇಲೆ ಬರುತ್ತಿದ್ದ ಲೋಕ ಮತ್ತು ರವಿ ಅದಕ್ಕೆ ಟ್ರೈನಿಂಗ್ ನೀಡಲು ಆರಂಭಿಸಿದರು. ನಾಯಿಗಳಿಗೆ ಇಂಗ್ಲೀಷ್ ಅರ್ಥವಾಗುತ್ತದೆಂಬ ವಿತಂಡ ವಾದವೊಂದನ್ನು ಮಂಡಿಸಿದ ಮಿಡ್ಚಂಭಟ್ಟ, ಗೊತ್ತಿದ್ದ ಅಲ್ಪ ಸ್ವಲ್ಪ ಆಂಗ್ರೇಜಿ ಪದಗಳನ್ನು ವಿಪುಲವಾಗಿ ಬಳಸಿದ. ಸಿಟ್.. ಸ್ಟಾಂಡ್.. ಕಮ್.. ಗೋ.. ನೊನೊ.. ರನ್..ಸ್ಟಾಪ್.. ಹೀಗೆ ಆತ ನೀಡಿದ ಕಮಾಂಡ್‍ಗಳೆಲ್ಲಕ್ಕು ಕೇವಲ ಬಾಲ ಅಲ್ಲಾಡಿಸುತ್ತಿದ್ದ ನಾಯಿಮರಿಯನ್ನು ‘ವೈಟಿ ಇಂಪ್ರೂವ್ ಆಗ್ತಾ ಇದೆ’ ಎಂದು ಹೇಳುತ್ತಾ ಇನ್ನಷ್ಟು ಹುಡುಗರಿಗೆ ಕರೆದು ತೋರಿಸಿ ಪುಳಕಿತಗೊಂಡ. ಹೇಳಿದ ಮಾತು ಕೇಳಲಿಲ್ಲವೆಂದೆನಿಸಿದಾಗÀ ನಮಗೆ ಏರುತ್ತಿದ್ದ ಬಿಪಿಗೆ ಬಡಪಾಯಿ ವೈಟಿ ಬಿದಿರುಕಡ್ಡಿಯಿಂದ ಏಟನ್ನು ತಿನ್ನಬೇಕಿತ್ತು.
ಇನ್ನೇನು ವೈಟಿ ಜಾತಿ ನಾಯಿಯಂತೆ ಮಾರ್ಪಾಡಾಗುತ್ತದೆ ಎಂದು ಎರಡು ತಿಂಗಳು ತರಬೇತಿ ನೀಡುತ್ತಾ ಕಾದೆವು. ಆದರೆ ವಾಸ್ತವವಾಗಿ ಆದದ್ದೆ ಬೇರೆ. ಊಟಕ್ಕೆ ಹಾಕುತ್ತಿದ್ದ ರಾಗಿಯ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಸ್ಕೂಲಿನಲ್ಲಿ ಕೊಡುತ್ತಿದ್ದ ಗೋಧಿ ಉಪ್ಪಿಟ್ಟು, ಬಿಸ್ಕೇಟು ತಿಂದು, ಹಾಲು ಕುಡಿದು ವೈಟಿ ದಿನೇ ದಿನೇ ಮೈಕೈ ತುಂಬಿಕೊಂಡಿತು. ಬೆಳಗಾನ ಹೆತ್ತ ಮಗುವನ್ನು ನಾಯಿ ಹೊತ್ತುಕೊಂಡು ಹೋಯಿತೆಂಬಂತೆ ಒಂದು ದಿನ ಮುಂಜಾನೆ ಮರೆತು ಎಡ ಮಗ್ಗುಲಿಗೆ ಎದ್ದು ನೋಡಿದಾಗ ನಿರಾಸೆ ಕಾದಿತ್ತು. ತನಗೆ ಕಟ್ಟಿದ್ದ ದಾರವನ್ನು ಕಚ್ಚಿ ತುಂಡರಿಸಿ ಎಲ್ಲಿಯೋ ಪರಾರಿಯಾಗಿದ್ದ ಸ್ವೀಟಿ ಸ್ನೇಹಿತರಿಗೆ ಸರಿಯಾಗಿ ಚಳ್ಳಹಣ್ಣು ತಿನ್ನಿಸಿತ್ತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x