ವಿಜೀ : ವರದೇಂದ್ರ.ಕೆ

ನಿತ್ರಾಣನಾಗಿದ್ದ ಸೂರ್ಯ ವಿರಮಿಸಲು ಪಶ್ಚಿಮಕ್ಕೆ ಮಾಯವಾಗುತ್ತಿದ್ದ, ಇದನ್ನೇ ಕಾಯುತ್ತಿದ್ದವನಂತೆ ಚಂದಿರ ಮುಗುಳ್ನಗುತ್ತ ಹಾಲು ಬೆಳದಿಂಗಳ ಚೆಲ್ಲುತ್ತ ಚೆಲುವೆಯರ ಅಂದ ಪ್ರತಿಬಿಂಬಿಸುತ್ತ ಮೇಲೇರ ತೊಡಗಿದ. ಅವನ ಬೆಳಕೇ ಗತಿ ಎನ್ನುವ ಬಸ್ ನಿಲ್ದಾಣ, ಧೂಳು ತುಂಬಿಕೊಂಡಿತ್ತು. ಇಂದೋ ನಾಳೆಯೋ ನೆಲಕ್ಕೆ ಮುತ್ತಿಡುವಂತಹ ಸ್ಥಿತಿಯಲ್ಲಿದ್ದು, ವಿನಾಶದ ಅಂಚಿನಲ್ಲಿತ್ತು. ಅಂತಹ ನಿಲ್ದಾಣವೇ ನಮ್ಮ ಜನರಿಗೆ ಜೀವ ಎನ್ನುವಂತೆ; ಅದರಡಿಯಲ್ಲಿಯೇ ನಿಂತು ಧೂಳಿನೊಂದಿಗೆ, ಬೀಡಿ ಸಿಗರೇಟಿನ ವಾಸನೆಯೊಂದಿಗೆ ಒಡನಾಡಿಗಳಾಗಿ ನಿಂತಿದ್ದಾರೆ. ಅಲ್ಲಿ ಪೋಲಿ ಹುಡುಗರ ದಂಡು, ಊರಿಗೆ ಲೇಟಾಗಿ ಪರಿತಪಿಸುತ್ತಿರುವ ಹೆಂಗಳೆಯರು. ದೊಡ್ಡ ದೊಡ್ಡ ಲಗೇಜುಗಳೊಂದಿಗೆ, ಕಂಕುಳಲ್ಲಿ ಮಕ್ಕಳನ್ನು ಹೊತ್ತು ಬಸ್ಸಿಗಾಗಿ ಕಾಯುತ್ತ ಗುಳೆ ಹೋಗಲು ನಿಂತ ಬಡವರು. ಮಧ್ಯೆ ಹಿಂದಿನಿಂದ ಒಬ್ಬ ಅಜ್ಜ ಬಸ್ಸು ಬಂದೊಡನೆ ಊರುಗೋಲು ಸಹಾಯದಿಂದ ಗಾಂಧಿ ನಡಿಗೆಯಂತೆ ಹೆಜ್ಜೆ ಹಾಕುತ್ತ, ಬಸ್ಸಿನತ್ತ ಬಂದವನೇ ತಾಯಿ, ಈ ಬಸ್ಸು ಮಾಸಂಗಿಪುರಕ್ಕೆ ಹೋಗುತ್ತೇನಮ್ಮ ಎಂದ. ಅತ್ತ ಏದುಸಿರು ಬಿಡುವ, ಜೀವಕ್ಕೆ ಉಸಿರು ಭಾರ, ಉಸಿರಿಗೆ ಜೀವ ಭಾರ ಎಂಬ ಮನಸ್ಥಿತಿಯಲ್ಲಿದ್ದ ಹೆಣ್ಣು ಧ್ವನಿ; ಹೌದು, ಹತ್ತಿ ಎಂದು ಕೈ ಹಿಡಿದು ತಾತನನ್ನು ಮೀಸಲಾದ ಜಾಗಕ್ಕೆ ಕುಳ್ಳಿರಿಸಿದಳು.

ಲೋಕವೇ ನನ್ನ ಮೇಲೆ ಬಿದ್ದಿದೆ ಎಂಬಂತೆ ಚಿಂತಿಸುತ್ತಿದ್ದ ವಿಜೀ, ಈ ಹೊತ್ತು ಸಾಗಿಸುವುದೇ ಕಷ್ಟದಾಯಕ. ಈ ಮುಸ್ಸಂಜೆ ಹೊತ್ತಿನಲ್ಲಿ, ಹೊಟ್ಟೆಯಲ್ಲಿ ರಾಮರಸ ತುಂಬಿಕೊಂಡು ಬಸ್ ಹತ್ತುವವರೇ ಹೆಚ್ಚು. ಇನ್ನು ಬೀಡಿ, ಸಿಗರೇಟು ಅಂತೂ ಮಾಮೂಲು. ಜೀವಮಾನವೆಲ್ಲ ಈ ಗದ್ದಲ, ವಾಸನೆ, ಕಾಮ ಕಣ್ಣುಗಳ ಸಾಗರದಲ್ಲೇ ಈಸಬೇಕೇನೋ ಎಂಬ ಸ್ಥಿತಿ ವಿಜೀಯದ್ದು. ಮನೆಯ ಪರಿಸ್ಥಿತಿಯೂ ಅಷ್ಟಕ್ಕಷ್ಟೆ. ಕೆಲಸ ಬಿಡುವ ಹಾಗೂ ಇಲ್ಲ, ಕಷ್ಟ ಸಹಿಸಿಕೊಳ್ಳದೆ ಬೇರೆ ದಾರಿಯೂ ಇಲ್ಲ. ಇದೇ ಸ್ಥಿತಿಯಲ್ಲಿ ಒದ್ದಾಡುತ್ತಲೇ ರೈಟ್ ಎಂದವಳೇ ಎಲ್ಲರಿಗೂ ಟಿಕೆಟ್ ನೀಡಿ ತನ್ನ ಸ್ಥಾನಕ್ಕೆ ಒರಗಿದಳು.

ಪ್ರತೀ ಟಿಕೆಟ್ ಹರಿಯುವಾಗಲು ತಾನು ಬಾಳಿನಲ್ಲಿ ಟಿಕೆಟ್ ಪಡೆದು ಮನೆಯೊಡತಿ, ಮನದೊಡತಿ ಆಗುವುದು ಯಾವಾಗ ಎಂಬ ಕಾತುರತೆಯು ಅವಳ ವಯಸ್ಸಿಗೆ ಸಹಜವೆಂಬಂತೆ ಕಾಡುತ್ತಿತ್ತು. ಯೌವನ ತುಂಬಿಕೊಂಡ ಕಾಯ, ಪರಕಾಯಕ್ಕೆ ಹಾತೊರೆಯುವುದು ಒಂದು ಮಧುರವಾದ ಯಾತನೆ. ವಿಜೀಯದ್ದೂ ಅದೇ ಭಾವ. ಅಂದಿನ ಕೆಲಸವೆಲ್ಲ ಮುಗಿಸಿ ಹಣದ ಲೆಕ್ಕ ಒಪ್ಪಿಸಿ, ಅಪ್ಪ ನಾಳೆ ಏಕೆ ರಜೆ ಹಾಕಿಸಿದರೆಂಬುದೇ ತಿಳಿಯದೆ ಕೆಲಸ ಮಾಡಿ ಸುಸ್ತಾಗಿದ್ದರಿಂದ ಸೋತ ಮುಖದೊಂದಿಗೆ ಮನೆ ಸೇರಿದಳು.

ಮನೆಯಲ್ಲಿ ನೋಡಿದರೆ ಅಕ್ಕ ಭಾವ ಮಕ್ಕಳೆಲ್ಲ ಜಮಾಯಿಸಿದ್ದನ್ನು ನೋಡಿ ಖುಷಿಯಿಂದ, ಏನು ಹೇಳದೆ ಕೇಳದೆ ಬಂದಿದ್ದೀರಿ. ಏನು ವಿಶೇಷ ಎಂದು ಕೇಳಿದಳು. ನೀ ಫ್ರೆಶ್ ಅಪ್ ಆಗಿ ಬಾ ವಿಜಿ. ಎಲ್ಲ ನಿನಗಾಗಿಯೇ ಸೇರಿದ್ದು, ಎಂಬ ಮಾತು ಕೇಳಿಸಿಕೊಳ್ಳುತ್ತಲೇ; ತನ್ನ ಧೂಳು ಮೆತ್ತಿದ ಮುಖವನ್ನು ತೊಳೆದು, ಸರಿ ಹೇಳು ಅಕ್ಕಾ ಏನು ವಿಶೇಷ ನಾಳೆ ರಜೆ ಹಾಕ್ಸಿದಾರೆ ಅಪ್ಪ ಎಂದು ಉತ್ಸುಕ ಮನದಿಂದ ಕೇಳಿದಳು. ಯಾಕೇ ವಿಜೀ ಅಪ್ಪ ನಿಂಗೆ ಹೇಳಿಲ್ವಾ, ನಿನಗಾಗಿಯೇ ವಿಜೀ ನಾಳೆ ನಮ್ಮ ಮುದ್ದು ಸುಂದರಿಯನ್ನ, ಈ ಮನೆ ಯುವರಾಣಿಯನ್ನ ನೋಡಲು ವರ ಬರ್ತಾ ಇದಾನೆ. ಹುಡುಗ ಟೀಚರ್ ಅಂತೆ ಕಣೆ. ಇಲ್ಲೇ ಪಕ್ಕದೂರಿನವನಂತೆ. ಏನೇ ಮುಖ ಮರೆಮಾಚುತ್ತಿದ್ದೀಯಾ, ಇತ್ತ ನೋಡೇ ತಂಗಿ, ಮುಖ ನೋಡು ಹೇಗೆ ಗೆಲುವಾಗ್ತಿದೆ ವರ ಅಂದ್ಕೂಡ್ಲೆ. ನೋಡಪ್ಪ ವಿಜೀಗೆ ಆದ ದಣಿವೆಲ್ಲ ಕಳೆದ್ಹೋಗಿದೆ ಎಂದು ರೇಗಿಸುತ್ತಾ, ಸರಿ ಬಾ ವಿಜೀ ಊಟ ಮಾಡಿ ಮಲಗು. ಬೆಳಗ್ಗೆ ಬೇಗ ಏಳ್ಬೇಕು. ತಿಂಡಿ ರೆಡಿ ಮಾಡ್ಬೇಕು ಬಾ ಎಂದು ಅಕ್ಕ ಪ್ರೀತಿಯಿಂದ ಊಟ ಬಡಿಸಿದ್ಲು. ದಿನಾಲು ಡ್ಯೂಟಿ ಮುಗಿಸ್ಕೊಂಡು ಬಂದು, ಅಡುಗೆ ಮಾಡಿ ಊಟ ಮಾಡಿ ಪಾತ್ರೆ ತೊಳೆದು ಮಲಗುವಷ್ಟರಲ್ಲಿ ಸಾಕ್ ಸಾಕಾಗಿ ಹೋಗ್ತಿತ್ತು ವಿಜೀಗೆ. ಈ ದಿನ ಅಕ್ಕನ ಕೈ ರುಚಿ, ತಾಯಿ ವಾತ್ಸಲ್ಯ ಸಿಕ್ಕಂತಾಗಿತ್ತು. ರುಚಿಯಾದ ಊಟ ಹೊಟ್ಟೆ ತುಂಬ ಉಂಡು, ಅಕ್ಕ ತಾನು ಕೆಲಸ ಮುಗಿಸಿ, ಮರುದಿನದ ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆ ಮಾಡಿದರು. ಅಕ್ಕ ಏ ವಿಜೀ ನೀ ಮಲ್ಕೊ ಹೋಗು, ನಿದ್ದೆಗೆಟ್ರೆ ನಾಳೆ ಚಟುವಟಿಕೆಯಿಂದ ಇರೋಕೆ ಆಗೊಲ್ಲ ಹೋಗು ವಿಜೀ ಎಂದಳು. ಸರಿ ಅಕ್ಕ ಮಲಗ್ತೀನಿ ಅಂತ ವಿಜೀ ಮಲಗಿದಳು. ಆದ್ರೆ ನಾಳೆ ವರ ಬರುತ್ತದೆ ಅಂದಮೇಲೆ ಯಾವ ಹೆಣ್ಣಿಗೆ ತಾನೆ ನಿದ್ದೆ ಹತ್ತುತ್ತೆ, ವಿಜೀಗೂ ಕೂಡ ನಿದ್ದೆ ಬರಲಿಲ್ಲ. ವಿಜೀಯ ಮನದಲ್ಲಿ ದುಗುಡ, ತಳಮಳ, ಹುಡುಗ ನೋಡೋಕೆ ಹೇಗಿರುತ್ತಾನೋ? ಓ ಚಂದಿರ ನಾಳೆ ಬರುವ ಗಂಡು, ನಿನಗಿಂತ ಅಂದಗಾರನಾಗಿರಬೇಕು. ನೀ ಚೆಲ್ಲುವ ಬೆಳದಿಂಗಳಿಗಿಂತ ನನಗೆ ಅವನ ತೋಳ ಆಸರೆಯೇ ಎನಗೆ ತಂಪಾದ ಅನುಭವ ನೀಡಬೇಕು. ನನ್ನ ಬಾಳಿಗೆ ಅವನ ಇರುವಿಕೆ ನಿನ್ನ ಇರುವಿಕೆಗಿಂತಲೂ ಸುಖ ಅನಿಸಬೇಕು ಎಂದು ತನ್ನದೇ ಆದ ಕನಸುಗಳ ಹಂದರವನ್ನು ಹೆಣೆದುಕೊಳ್ಳುತ್ತ ನಿದ್ರೆಗೆ ಜಾರಿದಳು…..

ಪೂರ್ವದಲ್ಲಿ ಸೂರ್ಯನ ಆಗಮನವಾಗಿಲ್ಲ, ಚಂದ್ರ ವಿಜೀ ಮಾತಿಗೆ ಚಿಂತಿಸುತ್ತ ಮರೆಯಾಗಲು ಮನಸಿಲ್ಲದೆ ಕುಳಿತ್ತಿದ್ದೇನೆ. ಚುಕ್ಕಿಗಳು ನಗುತ್ತಲೇ ಇವೆ. ಎಲ್ಲೋ ಒಂದೆರಡು ಹಕ್ಕಿ ಧ್ವನಿಗೂಡಿಸುತ್ತಿವೆ. ಆಗಲೇ ನೂರೆಂಟು ನಿರೀಕ್ಷೆಯಿಂದ ಎದ್ದು ಕಾರ್ಯಮತ್ತಳಾದ ವಿಜೀ ಎಂದಿಗಿಂತ ವೇಗವಾಗಿ ಸಿದ್ಧವಾಗಿ ತನ್ನ ಮನದೊಡೆಯನ ಬರುವಿಕೆಗಾಗಿ; ಹೃದಯ ತುಂಬಿಕೊಂಡು, ರಂಗೇರಿದ ಮುಖದೊಂದಿಗೆ ನಾಚುತ್ತ ಹೂವು ದುಂಬಿಯ ಬರುವಿಕೆಗಾಗಿ ಅರಳಿ ನಿಂತಂತೆ ವಿಜಿ ಕಾತುರತೆಯಿಂದ ನಲಿದಾಡುತ್ತಿದ್ದಳು. ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಕುಣಿದು ಕುಪ್ಪಳಿಸಬೇಕೆನಿಸಿದರೂ ಅಕ್ಕ ರೇಗಿಸುತ್ತಾಳೆ ಎಂದು ಸುಮ್ಮನಾದಳು. ಆದರೂ ಮನದ ಮನದಲ್ಲಿನ ತಳಮಳ ಕಡಿಮೆಯಾಗಿಲ್ಲ. ಅವರು ಒಪ್ಪದಿದ್ದರೆ, ಅಥವಾ ನನಗೇ ಅವರು ಇಷ್ಟವಾಗದಿದ್ದರೆ, ನೋಡಲು ಸುಂದರವಾಗಿರದೆ ನನಗೆ ಸರಿಯಾದ ಜೋಡಿ ಅನಿಸದಿದ್ದರೆ ಹೇಗೆ ಎಂಬ ಅಳುಕು ಮನದಲ್ಲಿ ತುಂಬಿಕೊಂಡು, ಹೊರಗೆ ತೋರ್ಪಡಿಸದೆ ಇದ್ದಳು. ಅಷ್ಟರಲ್ಲಿ ಅಕ್ಕ, ಏ ವಿಜಿ ಬಾ ಬೇಗ ನೀ ಸ್ವಲ್ಪ ನಾಷ್ಟ ಮಾಡು ಎಂದು ಅಕ್ಕರೆಯಿಂದ ನಾಷ್ಟ ಕೊಟ್ಟಳು. ವಿಜಿ ಸ್ವೀಟ್ ನೀನೆ ಮಾಡು ಚೆನ್ನಾಗಿ ಮಾಡ್ತೀಯಾ, ಇವತ್ತು ನೀನು ಮಾಡಿದ್ರೆ ಚೆನ್ನ. ನಿನ್ನ ನೋಡಲು ಬರುವವನು, ಅದನ್ನ ತಿಂದು ಸುಮ್ನೆ ನಿನ್ನ ಒಪ್ಕೊಬೇಕು ನೋಡು ಅಂದಿದ್ದಕ್ಕೆ ಹೋಗಕ್ಕ ಮೊದಲೇ ನಾನು ಟೆಂಶನ್ನಲ್ಲಿದೀನಿ ನೀನು ಬೇರೆ. ನಾನೆ ಮಾಡ್ತೀನಿ ಅಂತ ಸಕ್ಕರೆ ಜೊತೆ ಅಕ್ಕರೆಯನ್ನು ಬೆರೆಸಿ ಕೇಸರಿಭಾತ್ ಮಾಡಿದಳು. ಇದನ್ನು ತಿನ್ನುವ ನಲ್ಲ, ನನ್ನ ಬಾಳಲ್ಲಿ ಸಿಹಿ ತರಲಿ. ಬೆಲ್ಲದ ಅಚ್ಚಿನಂತ ಗಂಡಾಗಿರಲಿ ಎಂದು ಕಲ್ಪನಾ ಲೋಕಕ್ಕೆ ಜಾರಿ, ಎಚ್ಚರವಾದಾಗ ಮುಗುಳ್ನಕ್ಕು ನಾಚಿ ನೀರಾದಳು.

ಚಡಪಡಿಕೆ ಅಪ್ಪ ಫೋನ್ ಮಾಡಿ ಎಲ್ಲಿದಾರೆ ಅಂತ ವಿಚಾರಸ್ತಾ ಇದಾರೆ. ಇನ್ನೇನು ಬರುತ್ತಾರೆ ಎಂದು ಬಾಗಿಲ್ಲೇ ನಿಂತು ಕಾಯುತ್ತಿದ್ದಾರೆ. ಅಕ್ಕ ವಿಜಿಯನ್ನು ಸಿಂಗರಿಸುವುದರಲ್ಲೇ ಮಗ್ನವಾಗಿದ್ದಾಳೆ. ಭಾವ ಅವರಿಗೆ ಆಸನದ ವ್ಯವಸ್ಥೆ ಎಲ್ಲ ಮಾಡಿದ್ದಾರೆ. ಅವರಿಗೂ ಕಾತುರ, ನಾದಿನಿಗೆ ಮದುವೆ ಮಾಡಿ ಮಾವನವರ ಜವಾಬ್ದಾರಿ ಕಳಿಬೇಕು. ನೆಮ್ಮದಿಯಾಗಿರಬೇಕು ಅವರು ಎಂದು ಎಲ್ಲವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ.

ಅಷ್ಟರಲ್ಲೇ ವರನ ಆಗಮನ. ಅಪ್ಪ ನಗುಮೊಗದಿಂದ ಎಲ್ಲರನ್ನೂ ಬರಮಾಡಿಕೊಂಡರು. ಅವರ ಕುಶಲೋಪರಿ ವಿಚಾರಿಸಿ ಒಳಗಡೆ ಕೂಡಿಸಿ ಮಾತನಾಡತೊಡಗಿದರು. ಭಾವ ಒಳಗಡೆ ಬಂದು ಆಯ್ತಾ ರೆಡಿನಾ ಬೇಗ ಕಕೊರ್ಂಡ್ ಬಾ ಎಂದು, ವಿಜೀ ಹುಡುಗ ತುಂಬ ಲಕ್ಷಣವಾಗಿದ್ದಾನೆ. ನಿನಗೆ ಸರಿಯಾದ ಜೋಡಿ ಅನ್ಸುತ್ತೆ. ಬೇಗ ಬಾ ಎಂದರು.
ನಿರಾಭರಣ ಸುಂದರಿ ನಮ್ ವಿಜಿ, ಅವಳ ನೋಡಿದ ಗಂಡು ಮನಸೋಲುವುದರಲ್ಲಿ ಸಂಶಯವೇ ಇಲ್ಲ. ಕಾಲೇಜು ದಿನಗಳಲ್ಲಿ ಇವಳನ್ನು ಒಲವಿನ ಜೇಬಿಗೆ ಬೀಳಿಸಿಕೊಳ್ಳಲು ಅದೆಷ್ಟು ಗಂಡು ಹೃದಯಗಳು ಬೆನ್ನು ಬಿದ್ದಿದ್ದವೋ? ಆದರೆ ವಿಜಿ ಮುಗ್ಧಳು, ಯಾರ ಹೂ ಬಾಣಗಳನ್ನು ನಾಟಿಸಿಕೊಳ್ಳದೆ; ತಾನಾಯ್ತು, ತನ್ನ ಓದು ಆಯ್ತು ಅಂತ ಕಾಲೇಜು ಲೈಫನ್ನ ಮುಗಿಸಿದವಳು. ಯಾವ ಒಡವೆಗಳು ಇವಳ ಸೌಂದರ್ಯವನ್ನು ಹೆಚ್ಚಿಸುವುದಿಲ್ಲ, ಮುಡಿದ ಮಲ್ಲಿಗೆ ಇವಳ ಅಂದ ಹೀರಿ ತನ್ನ ಬಿಳುಪನ್ನು ಹೆಚ್ಚಿಸಿಕೊಂಡಿತ್ತು. ಅಂತಹ ಚೆಲುವೆ, ಅಕ್ಕನ ಒತ್ತಾಯಕ್ಕಾಗಿ ಒಡವೆ ಆಭರಣಗಳನ್ನು ತೊಟ್ಟು ಅಲಂಕೃತಗೊಂಡಿದ್ದಳು. ಮುಖದ ಸೌಂದರ್ಯಗಿಂತಲೂ ಮನದ ಸೌಂದರ್ಯ ಹೆಚ್ಚು ಹೊಂದಿದ್ದ ವಿಜಿ ಮುಖದಲ್ಲಿ ಮಂದಹಾಸ ಉಕ್ಕುತ್ತಿತ್ತು. ನಿರಾಳತೆಯು ಎದ್ದು ಕಾಣುತ್ತಿತ್ತು. ಇಷ್ಟು ದಿನದ ಕನಸು ಇಂದು ನನಸಾದ ಭಾವ. ಹುಡುಗನ ಮುಖ ನೋಡುವ ಕಾತುರದಿಂದ ನವಿಲ ನಡಿಗೆಯಂತೆ ಬಂದು ತಂದೆ ಪಕ್ಕ ಕುಳಿತಳು.

ಸಾಂಪ್ರದಾಯಿಕ ವಧು ಪರೀಕ್ಷೆ, ಉನ್ನತ ಶ್ರೇಣಿಯಲ್ಲಿ ಪಾಸಾದ ವಿಜಿಯನ್ನು ವರ ಮತ್ತು ವರನ ತಂದೆ ತಾಯಿಯಿಂದ ಭೇಷ್ ಎನಿಸಿಕೊಂಡಳು. ವರ ಮತ್ತು ಅವರ ಕಡೆಯವರೂ ಮರು ಮಾತಾಡದೆ ಒಪ್ಪಿಗೆ ನೀಡಿಯೇ ಬಿಟ್ಟರು. ಅಕ್ಕ, ವಿಜೀ ನೋಡು ನಾಚ್ಕೊಬೇಡ ಎಂದಾಗ, ಅತೀ ಉತ್ಸುಕತೆಯಿಂದ ಕಣ್ಣು ಮಿಟುಕಿಸುತ್ತ, ಹೆಚ್ಚಿದ ಹೃದಯ ಬಡಿತದೊಂದಿಗೆ ಹುಡುಗನನ್ನು ನೋಡಿದಳು. ವರ ಹೇಗೆ ಎಂದು ತಳಮಳಗೊಂಡಿದ್ದ ವಿಜಿ, ಓ ಚಂದಿರ ನೀನೆಷ್ಟು ಮಧುರ ನಿನಗಿಂತಲೂ ಅಂದಗಾರ ಈ ಸುಂದರ ಎಂದು ಸಂಭ್ರಮದೊಂದಿಗೆ ನಾಚಿಕೆಯಿಂದ ತುಟಿ ಅಂಚಿನಲ್ಲಿ ಹುಟ್ಟಿದ ನಗುವನ್ನು ಮರೆಮಾಚುತ್ತ ತಲೆ ತಗ್ಗಿಸಿದಳು. ಏನಮ್ಮಾ ನಮ್ಮ ಹುಡುಗ ಹೇಗೆ? ಒಪ್ಪಗೆನಾ ಎಂಬ ವರನ ತಾಯಿ ಮಾತಿಗೆ ತಲೆದೂಗುತ್ತಲೇ ಒಪ್ಪಿಗೆ ಸೂಚಿಸಿದಳು. ಅಕ್ಕ, ಭಾವ, ಅಪ್ಪ ಎಲ್ಲರೂ ಹುಡುಗನನ್ನು ಹೊಗಳಿದ್ದೇ ಹೊಗಳಿದ್ದು. ಅವರ ಮಾತು ಕೇಳಿ ವಿಜೀ ಮನದಲ್ಲಿ ಪ್ರೇಮದ ಹೊಂಬೆಳಕು ಚೆಲ್ಲಿ ಅತೀ ಆನಂದದಿಂದ ತನ್ನ ನಿರೀಕ್ಷೆಗಿಂತಲೂ ಚೆಂದುಳ್ಳ ಚೆಲುವ ತನ್ನ ಹುಡುಗನಾಗಿದ್ದುದನ್ನು ನೆನೆದು ದಿನವೆಲ್ಲ ಅವನ ನೆನಪಲ್ಲೇ ಕಳೆದಳು. ವರನ ಗುಣ, ನಡತೆ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿದ ತಂದೆ ಆ ಹುಡುಗನನ್ನೇ ಒಪ್ಪಿ ಕೆಲವೇ ದಿನಗಳಲ್ಲೇ ನಿಶ್ಚಿತಾರ್ಥ ಮಾಡಿದರು. ಇಬ್ಬರಿಗೂ ಲೈಸನ್ಸ್ ಸಿಕ್ಕಿದಂತಾಯಿತು. ದಿನವೂ ನೆಚ್ಚಿನ ಮನದೊಡೆಯನ ಜೊತೆ ಪ್ರೇಮ ಸಲ್ಲಾಪದ ಮಧುರ ಮಾತುಗಳೊಂದಿಗೆ ಸಂತೋಷದಿಂದ ಇದ್ದಳು. ತನ್ನ ಸುಖ ದುಃಖವನ್ನೆಲ್ಲ ಪ್ರಿಯಕರ ಜೊತೆ ಹಂಚಿಕೊಳ್ಳುತ್ತಿದ್ದಳು. ಹೀಗೆ ದಿನಗಳು ಉರುಳಿದವು. ಒಂದು ಒಳ್ಳೆಯ ಮುಹೂರ್ತದಲ್ಲೆ ತಂದೆ ಅದ್ಧೂರಿಯಾಗಿ ಶಾಸ್ತ್ರೋಕ್ತವಾಗಿ, ಬೀಗರಿಗೆ ತೃಪ್ತಿಯಾಗುವಂತೆ ಮದುವೆ ಮಾಡಿದರು. ಗಂಡನ ಮನೆಗೆ ಹೊರಡಬೇಕು, ಎಲ್ಲರ ಕಣ್ಣುಗಳು ಒದ್ದೆಯಾಗಿದ್ದವು.

ಅತ್ತೇಯ ಮನೆಯಾಗ, ಮುತ್ತಾಗಿ ಇರಬೇಕ
ಹೊತ್ತಾಗಿ ನೀಡಿದರೆ ಉಣಬೇಕ |
ಹೊತ್ತಾಗಿ ನೀಡಿದರೆ ಉಣಬೇಕ
ನನಮಗಳೆ ತವರೀಗೆ ಹೆಸರ ತರಬೇಕ||

ಎಂದು ಬುದ್ಧಿ ಮಾತು ಹೇಳಿದರು. ವಿಜಿ, ಅಕ್ಕ ಇಬ್ಬರಂತೂ ಅಮ್ಮನನ್ನು ನೆನೆದು ಕಣ್ಣೀರಾದರು. ಜಗತ್ತಿನ ನಿಯಮ. ಬಂದದ್ದನ್ನೆಲ್ಲ ಎದುರಿಸಲೇ ಬೇಕು. ಎಲ್ಲವೂ ಸರಿಯಾಯಿತು. ಹೃದಯ ಭಾರ ಮಾಡಿಕೊಂಡು, ಉಡಿ ತುಂಬಿಕೊಂಡು, ಅಪ್ಪ, ಅಕ್ಕ ತಮ್ಮ ಎಲ್ಲರನ್ನೂ ಅಗಲಿ ಗಂಡನ ಮನೆ ದಾರಿ ಹಿಡಿದಳು.

ಗಂಡನ ಮನೆ, ಎಲ್ಲವೂ ಹೊಸತು. ಬೇಗ ವಿಜಿ ಹೊಂದಿಕೊಡಳು ಸುಖವಾದ ಸಂಸಾರ. ಒಲುಮೆ ತುಂಬಿದ ನಲ್ಲನ ಪ್ರೇಮದ ಧಾರೆಯಲ್ಲಿ ನಿತ್ಯವೂ ವಿಜಿ ಮಿಂದೇಳುತ್ತಿದ್ದಳು. ಅವಳ ಆನಂದಕ್ಕೆ ಮಿತಿಯೇ ಇರಲಿಲ್ಲ. ಅತ್ತೆ ಮಾವ ಕೂಡ ಮಗಳನ್ನು ವಿಜಿಯಲ್ಲಿ ಕಾಣುತ್ತಿದ್ದರು. ಯಾವುದಕ್ಕೂ ಕೊರತೆ ಇರದ ಜೀವನ ಅವಳಿಗೆ ಒಲಿದಿತ್ತು. ತವರು ಮನೆಯಲ್ಲಿನ ಬಡತನವನ್ನು ಮರೆಸಿತ್ತು. ದಿನಗಳುರುಳಿದವು. ಮದುವೆಗೆಂದು ಹಾಕಿ ರಜೆಗಳು ಮುಗಿದವು. ಮತ್ತದೇ ಕೆಲಸಕ್ಕೆ ಹಾಜರಾಗಬೇಕು. ಅದೇ ಬಸ್ಸು, ಅದೇ ಗಬ್ಬು ನಾರುವ ಬಸ್ ನಿಲ್ದಾಣ. ಒಲ್ಲದ ಮನಸ್ಸಿಂದ ಡ್ಯೂಟಿ ಹಾಜರಾದಳು. ಗಂಡನೂ ಹಾಜರಾದ. ಕೆಲವು ದಿನಗಳ ನಂತರ ವಿಜೀ ತನ್ನ ಗಂಡನ ಮುಂದೆ ತನ್ನ ಮನದ ಭಾವವನ್ನು, ಯಾರ ಮುಂದೆಯೂ ಹೇಳಿಕೊಂಡಿರದ ವಿಷಯವನ್ನು ಹೇಳತೊಡಗಿದಳು. ರೀ ಏನ್ರಿ ನಿಮ್ ಹತ್ರ ಒಂದು ವಿಷಯ ಹೇಳ್ಬೇಕು, ಹೇಳ್ಳಾ? ಎಂದಳು ಹೇಳು ವಿಜಿ ನನ್ ಹತ್ರ ಹೇಳೋಕೆ ನಾಚಿಕೆನಾ? ಭಯ ನಾ? ಎಂದ ಗಂಡನ ಮಾತಿಗೆ, ಅದೂ ನೀವೇನಂತೀರೋ ಅಂತ ! ನಾ ಏನಂತಿನೇ ಹೇಳೇ ಬಂಗಾರಿ ಎಂದಾಗ, ರೀ ನಂಗೆ ನಿಜವಾಗ್ಲು ಈ ಕಂಡಕ್ಟರ್ ನೌಕ್ರಿ ಇಷ್ಟನೇ ಇಲ್ರಿ. ಆ ಹೊಲಸು ಜನ, ಆ ಗಬ್ಬು ನಾಥ, ದುರುಗುಟ್ಟಿಕೊಂಡು ನೋಡುವ ಕಣ್ಣುಗಳ ನಡುವೆ ಏಗುವುದು ನನಗೆ ರೋಸಿಹೋಗಿದೆ. ತವರಮನೆ ಬಡತನಕ್ಕೆ ಅನಿವಾರ್ಯವಾಗಿ ಈ ಕೆಲ್ಸ ಮಾಡ್ತಾ ಇದ್ದೆ ರೀ. ಈಗ___

ಅಲ್ಲಿಗೇ ತಡೆದ ಗಂಡ ಮೊದಲೇ ಮಾಸ್ತರ, ಪಾಠ ಮಾಡೋದು ಹೊಸತಾ, ಶುರು ಮಾಡಿಯೇ ಬಿಟ್ಟ. ವಿಜಿ ನೀನು ಕೆಲ್ಸ ಮಾಡ್ಲೇ ಬೇಕು ಅಂತ ನಾ ಹೇಳೊಲ್ಲ. ನಾನು, ನೀನು ನೌಕ್ರಿ ಮಾಡ್ತಿ ಅಂತ ನಿನ್ನ ಮದುವೆ ಆದೋನಲ್ಲ. ನಿನಗೆ ಬರುವ ಸಂಬಳದಿಂದ ನಮ್ಮ ಜೀವನ ನಡಿಯುತ್ತೆ ಅಂತಾನು ಏನು ಇಲ್ಲ. ನೌಕ್ರಿ ಬಿಡೋದ್ರಿಂದ ನಿನಗೆ ನೆಮ್ಮದಿ ಅಂದ್ರೆ ಬಿಡು ಬಂಗಾರಿ. ಬಿಡೋಕು ಮುನ್ನ ಸ್ವಲ್ಪ ಯೋಚನೆ ಮಾಡಿ ನೋಡು. ನಿಮ್ಮ ತವರುಮನೆ ಬಡತನದಲ್ಲಿದ್ದಾಗ ಆಸರೆ ಆದ ಕೆಲಸ. ಮಾವನವರ ಕಷ್ಟಗಳನ್ನೆಲ್ಲ ಈ ಕೆಲಸದಿಂದ ದೊರೆತ ಸಂಪಾದನೆ ಇಂದಾನೇ ಪರಿಹಾರವಾಗಿವೆ ಅನ್ನೋದು ಮರೆತುಬಿಟ್ಯಾ ಚಿನ್ನ. ಎಷ್ಟೋ ಜನ ಸರಕಾರಿ ನೌಕ್ರಿ ಯಾವುದಾದರೂ ಒಂದು ಸಿಕ್ರೆ ಸಾಕಪ ಜೀವನ ಕಟ್ಕೋಬೋದು ಅಂತ ಒದ್ದಾಡ್ತಿರ್ತಾರೆ. ನಾವು ಯಾವುದೇ ಕೆಲಸ ಮಾಡಿದ್ರು ಅದರಲ್ಲಿ ದೇವರನ್ನ ಕಾಣಬೇಕು. ಜನರ ಸೇವೆ ಮುಖ್ಯ ಕಂಡಕ್ಟರ್ ಕೆಲಸ ಅಂದ್ರೆ ತಾತ್ಸಾರನಾ. ಪ್ರಯಾಣಿಕರನ್ನು ಅವರ ಸ್ಥಾನಕ್ಕೆ ಸೇರಿಸುವ ಜವಾಬ್ದಾರಿಯುತ ಕೆಲಸವದು. ಅಷ್ಟೇ ಅಲ್ಲ ಕಣೆ ವಿಜೀ ಹೆಣ್ಣನ್ನು ಪ್ರೋತ್ಸಾಹಿಸಬೇಕೆಂದೇ ಎಲ್ಲ ರಂಗಲ್ಲೂ ಮಹಿಳೆಗೆ ಅವಕಾಶ ನೀಡಿದ್ದಾರೆ. ಪುರುಷನಿಗೇ ಸಮನಾಗಿ ಹೆಮ್ಮೆಯಿಂದ ನೀನು ಈ ಕೆಲಸ ನಿರ್ವಹಿಸಬೇಕು. ಯಾವ ಕೆಲಸವಾದ್ರೂ ಹೆಣ್ಣು ಸಧೃಡವಾಗಿ ಉತ್ತಮವಾಗಿ ಮಾಡಬಲ್ಲಳು ಎಂಬುದನ್ನು ನೀನು ಜಗತ್ತಿಗೇ ತೋರಿಸಬೇಕು. ಸಿಕ್ಕ ಅವಕಾಶ ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ ವಿಜೀ. ಯೋಚನೆಮಾಡು: ನಿನಗೆ ತುಂಬಾ ತೊಂದ್ರೆ ಅನ್ನಿಸಿದ್ರೆ ಬಿಟ್ಟುಬಿಡು. ನಿನ್ ಸಂತೋಷಕ್ಕಿಂತ ಬೇರೆ ಏನು ಬೇಕಿಲ್ಲ ನಂಗೆ. ನಿನ್ನಿಷ್ಟನೇ ನನ್ನಿಷ್ಟ. ಆಲೋಚಿಸಿ ಒಂದ್ ನಿರ್ಧಾರಕ್ಕೆ ಬಾ ನಿನಗೆ ನನ್ನ ಬೆಂಬಲ ಇದ್ದೇ ಇರುತ್ತೆ. ಎಂದು ಹೆಂಡತಿಯ ಮನದಲ್ಲಿ ಕೆಲಸ ಬಗ್ಗೆ ಇದ್ದ ಭಾವನೆಯನ್ನು ಬದಲಾಯಿಸಲು ಯತ್ನಿಸಿದ.

ಯೋಚನೆ ಮಾಡಿದ ವಿಜೀ ಗಂಡನ ಮಾತು ನೂರಕ್ಕೆ ನೂರು ಸತ್ಯ ನಾನು ಹೆಮ್ಮೆಯಿಂದ ಈ ನೌಕರಿ ಮಾಡ್ಬೇಕು. ಮಹಿಳೆಯರು ಯಾವುದಕ್ಕೂ ಹೆದರುವರಲ್ಲ ಎಂಬುದನ್ನು ತೋರಿಸಬೇಕು. ಈ ದಿನ ನನ್ನ ಮನದ ಭಾರವೆಲ್ಲ ಕಳೆದು ಹೋದಂತಿದೆ. ರೀ ನೀವ್ ಹೇಳಿದ್ದು ಸರಿಯಾಗಿದೆ ನಾನು ಇನ್ಮೇಲೆ ಯಾವ ಬೇಸರವಿಲ್ದೆ ಈ ಕೆಲ್ಸ ಮಾಡ್ತೀನಿ. ಕಂಡಕ್ಟರ್ ನೌಕ್ರಿ ಬಗೆಗಿನ ನನ್ನ ಭಾವನೆಯನ್ನು ನೀವು ಬದಲಾಯಿಸಿಬಿಟ್ರಿ ಎಂದಳು. ವಾವ್ ಸೂಪರ್ ವಿಜೀ ಇದು ನನ್ನ ಧೈರ್ಯವಂತೆ, ವಿಜಿ ಅಂದ್ರೆ ಎಂದ. ವಿಜಿ ಪ್ರೀತಿಯಿಂದ ಗಂಡನನ್ನು ಆಲಿಂಗಿಸಲು ಹೊರಡಬೇಕು, ಇದ್ದಕ್ಕಿದ್ದಂತೆ ಮುಂಜೋಲಾದಳು. ಎಲ್ಲ ಪ್ರಯಾಣೀಕರು, ಸ್ವಲ್ಪ ನಿಧಾನವಾಗಿ ಓಡ್ಸೋಕ್ ಹೇಳಮ್ಮ ನಿಮ್ ಡ್ರೈವರ್ಗೆ ಎಂದು ರೇಗ ತೊಡಗಿದರು. ವಿಜೀಗೆ ದಿಗ್ಭ್ರಮೆಯಾಯಿತು. ಅದೇ ಕಾಮುಕ ಕಣ್ಣುಗಳು, ಸಿಗರೇಟಿನ ಹೊಗೆ, ಗುಟಕಾ ವಾಸನೆ, ಕುಡಿದು ಓಲಾಡುತ್ತ ನಿಂತ ಜನ. ಎಲ್ಲವನ್ನೂ ನೋಡಿ ವಿಜಿ ನಾ ಕಂಡದ್ದೆಲ್ಲ ಕನಸಾ ಎಂದು, ಮದುವೆ ಗಂಡ ಅತ್ತೆ ಮನೆ ಎಲ್ಲವೂ ಸುಳ್ಳಾ ಕಣ್ಣಿಗೆ ಕತ್ತಲಾದಂತಾಗಿ ವಿಜಿ ಸುಮ್ಮನೆ ಕುಳಿತಳು. ಅಷ್ಟರಲ್ಲಿ ಮಾಸಂಗಿಪುರ ಬಂದಿತು. ಪ್ರಯಾಣಿಕರನ್ನೆಲ್ಲ ಇಳಿಸಿ ಬಸ್ಸನ್ನು ಡಿಪೋಗೆ ಸೇರಿಸಿ, ಲೆಕ್ಕ ಒಪ್ಪಿಸಿ, ಹನಿ ಕಣ್ಣೀರು ಒರೆಸಿಕೊಂಡು ಭಾವಉಕಳಾಗಿ, ನನಗೆ ಮದುವೆ ಭಾಗ್ಯ ಯಾವಾಗ ಬರುತ್ತೋ ಎಂದು ಮನೆ ದಾರಿ ಹಿಡಿದ ವಿಜೀಗೆ, ಕಂಡಕ್ಟರ್ ನೌಕರಿಯ ಬಗ್ಗೆ ಇದ್ದ ಬೇಸರ ಮಾತ್ರ ಮಾಯವಾಗಿತ್ತು.

-ವರದೇಂದ್ರ.ಕೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x