ಕಲೆಗಾರ
ಬದುಕುವುದೇ ಒಂದು ಕಲೆ- ನೀನೇ ಕಲೆಗಾರ
ಭಾವನೆಗಳು ಹೊರಹೊಮ್ಮಿದರೆ ನೀನೇ ಕವಿ
ಸ್ನೇಹ,ಪ್ರೀತಿ ಗಳಿಸಿದರೆ ನೀನೇ ಸಾಹುಕಾರ
ಆಸೆ ಇದ್ದರೇ ಬದುಕು ಸಹಜ-ಸುಂದರ
ಕಿವುಡು
ನನ್ನೆದೆಯ ಬೇಗುದಿಯ
ಹೇಳಿಕೊಳ್ಳಲಿ ಹೇಗೆ?
ದೇವರೂ ಕುಳಿತಿಹನು
ಜಾಣ ಕಿವುಡನ ಹಾಗೆ
ಕತ್ತಲ ಜಗತ್ತು
ನಮ್ಮನಾಳುವ ನಾಯಕರೇ ಎಲ್ಲಿಹುದು ನಿಮ್ಮ ಚಿತ್ತ
ಸ್ವಲ್ಪ ಗಮನಹರಿಸಿ ನೀವಿತ್ತ
ದುಡ್ಡು ಮಾಡಿದ್ದು,ಸುಳ್ಳು ಹೇಳಿದ್ದು ಸಾಕುಮಾಡಿ
ಬಡಜನರ ಬದುಕಿಗೆ ಬುಡ್ಡಿ ದೀಪದಷ್ಟಾದರೂ ಬೆಳಕು ನೀಡಿ
ದಂ"ಪತಿ"
ಮನೆಗೆ ಲೇಟಾಗಿ ಬಂದಾಗ
ಹೆಂಡತಿ ಹಾಕುವಳು ಛೀಮಾರಿ
ಗಂಡ ಮನದಲ್ಲೇ ಅಂದುಕೊಳ್ಳುವನು
ಛೀ "ಮಾರಿ"
ಪ್ರಾಶಸ್ತ್ಯ
ಈಗ ಎಲ್ಲದರಲ್ಲೂ ಲೇಡೀಸೆ ಮುಂದು
ಪಾರ್ಟಿಯಲ್ಲಿ ಕೂಡಾ ಹೇಳುತ್ತಾರೆ
ಲೇಡೀಸ್ ಅಂಡ್ ಜೆಂಟಲ್ ಮ್ಯಾನ್ ಎಂದು
ಪುರುಷ-ಪೌರುಷ
ಎಲ್ಲ ಪರೀಕ್ಷೆಗಳಲ್ಲೂ ಲೇಡೀಸೆ ಫಸ್ಟ್
ಆದರೂ ಕೂಡ ನಮ್ ಹುಡುಗರೇ
ಸಖತ್ ಇಂಟೆಲ್ "ಜೆಂಟ್ಸ್"
ನೋವು ನಿವಾರಕ
ನಲ್ಲೆ ನಾ ಅಂದುಕೊಂಡಿದ್ದೆ
ನನ್ನ ದುಃಖ ಸಾಗರದಷ್ಟು ಆಳ-ಅಗಲ
ನಿನ್ನೊಡನೆ ಹಂಚಿಕೊಂಡ ಒಡನೆ
ಮನಸಾಯ್ತು ಹಗುರ- ನಿರಾಳ
"ಲವ"ಣ
ನನಗೆ ಗೊತ್ತಿಲ್ಲ ಲವ್ವಿನ ಬಗ್ಗೆ ಲವಲೇಶ
ಆದರೂ ಹಾಕುವೆನು ಹಲವು ವೇಷ
ಇಂದಲ್ಲ ನಾಳೆ ನನ್ನವಳಾಗಬಹುದು ಅವಳು
ನಮ್ಮೂರ ಸಾಹುಕಾರನ ಒಬ್ಬಳೇ ಮಗಳು 🙂
ಪ್ರೀತಿ
ಪ್ರೀತಿ ಎಂಬುದೊಂದು ಬೆರಗು
ಅನುಭವಿಸಿದಷ್ಟೂ ಹೆಚ್ಚುವುದಿದರ ಬೆಡಗು
ಹುಡುಗಾಟಕ್ಕೆ ಆರಂಭವಾಗಿ
ಹುಡುಕಾಟಕ್ಕೆ ತೊಡಗಿಸುವ ಈ ಪ್ರೀತಿ
ಬಿಡಿಸಲಾರದ ಒಗಟಿನ ರೀತಿ
ಕವಿತೆ
ನೀ ಹೊಸೆಯಲೆಂದು ಹೊಸ ಕವಿತೆ
ನಲ್ಲೆ ನಾ ನಿನ್ನ ಬಳಿಯಲ್ಲೇ ಕುಳಿತೆ
ನೀ ಬರೆಯಲಿಲ್ಲ ಒಂದೂ ಸಾಲು
ದೂರಾದೆ – ಈಗ ಕವಿತೆಗಳ ಸಾಲು ಸಾಲು
ಪರವಶ
ನಲ್ಲೆ ನನ್ನ ತೋಳ್ತೆಕ್ಕೆಯಲ್ಲಿ
ನೀ ಬಂಧಿಯಾದ ಕ್ಷಣ
ಜಗದ ಪಾಲಿಗೆ ನಾ
ಕಿವುಡ – ಮೂಗ – ಕುರುಡ
ಹುಣ್ಣಿಮೆ
ನಲ್ಲೆ ನೀ ಬಳಿಯಿರಲು
ಅಮಾವಾಸ್ಯೆಯ ಇರುಳೂ
ಹಾಲು ಹುಣ್ಣಿಮೆಯಂತೆ
ಹೊಳೆವ ಬೆಳದಿಂಗಳು
ಉಸಿರು
ಗೆದ್ದವನು ಏದುಸಿರು ಬಿಟ್ಟ
ಸೋತವನು ನಿಟ್ಟುಸಿರ ಬಿಟ್ಟ
ಬಿಟ್ಟದ್ದು ಉಸಿರೇ ಆದರೂ
ಎಷ್ಟೊಂದು ಭಿನ್ನ – ಬದುಕಿನ ದಾರಿ ವಿಭಿನ್ನ
ನಮ್ಮ ನಾಡು
"ಕರುಣಾಳುಗಳ ಬೀಡು ನಮ್ಮ ಕನ್ನಡ ನಾಡು
ಶಾಂತಿ-ಸೌಹಾರ್ದತೆಯು ತುಂಬಿ ತುಳುಕಿದೆ ನೋಡು
ಚೆಲುವು-ಒಲವುಗಳ ದಿವ್ಯ ಸಮ್ಮಿಲನ
ಜನುಮ ಜನುಮವೂ ಸಿಗಲಿ ನನಗಿಲ್ಲಿ ಜನನ
ಜಳಕ
ನಲ್ಲೆ ನಿನ್ನ ಪ್ರೀತಿಯ ನದಿಯಲ್ಲಿ
ಎಷ್ಟು ಮಿಂದರೂ ಸಾಲದು
ಶೀತ, ನೆಗಡಿ ಯಾವುದೇ ವ್ಯಾಧಿ
ಸನಿಹಕ್ಕೂ ಬಾರದು
ಮಧುಮೇ(ಮೋ)ಹ
ನಿಮ್ಮ ಮನೆಯ ಎಲ್ಲರೂ
ಬಹಳ ಒಳ್ಳೆಯವರು….ನಿಮ್ಮದು Sweet HomeU
ಹೌದು ಸ್ವಾಮೀ ನಮ್ಮದು Sweet HomeU
ನಮ್ಮ ಮನೆಯಲ್ಲಿ ಎಲ್ಲರಿಗೂ ಡಯಾಬಿಟೀಸ್ ProblemmU !! 🙂
ನೀ ಕೊಡೆ – ನಾ ಬಿಡೆ
ಆಫೀಸಿಗೆ ಹೊರಟಿದ್ದ ಗಂಡ
ಹೆಂಡತಿಗೆ ಕೇಳಿದ "ಕೊಡೆ" ಕೊಡೆ
ಅಯ್ಯೋ ಬೆಳ್ಳಂ ಬೆಳಿಗ್ಗೆ ಹಾಗೆಲ್ಲ
ಕೇಳದಿರಿ ನಾನು ಕೊಡೆ
ನಾನು ಕೇಳಿದ್ದು ನಿನ್ನ
ಸಿಹಿಮುತ್ತನ್ನಲ್ಲ ಕಣೆ
ಮಳೆ ಬರೋಹಾಗಿದೆ
umbrella ಕೊಡೆ
"ಗುಂಡಾ"ಯಣ
ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ
ಕುಡಿಯುವುದಂತೂ ಖಾತ್ರಿ
ಅವನು ದಿನವೆಲ್ಲಾ ಕುಡಿದು ಆಗುತ್ತಾನೆ ಟೈಟ್
"ಗುಂಡ್"ಮಾರ್ನಿಂಗ್, "ಗುಂಡ್"ಆಫ್ಟರ್ ನೂನ್, "ಗುಂಡ್"ನೈಟ್
ನಶೆ
ಖರೀದಿಸುವ ಗೋಜಿಲ್ಲ
ಯಾವುದೇ ಅಬಕಾರಿ ಮಾಲು
ನಲ್ಲೆ ಆ ನಿನ್ನ ಹೊಳೆವ ಕಣ್ಣುಗಳು
ಏರಿಸಿವೆ ನನ್ನಲ್ಲಿ ಅಮಲು
ನಾಪತ್ತೆ
ಯಶೋಧರೆ ಹೇಳುವಳು
ಬುದ್ಧನೂ ಕಳ್ಳ
ಹೇಗೆನ್ನುವಿರಾ ?
ರಾತ್ರೋರಾತ್ರಿ ಕದ್ದುಹೋದ"ನಲ್ಲ"
ಅಂಕೆ
ಮನಸು ಹುಚ್ಚುಕುದುರೆಯಲ್ಲ
ತನ್ನಿಷ್ಟದಂತೆ ತಾನು ಓಡುವುದಿಲ್ಲ
ಲಗಾಮು ಹಿಡಿದು ಓಡಿಸಿದರೆ ಜಯ ನಿಶ್ಚಯ
ಅಂಕೆಯಿರದಂತೆ ಆಡಬಿಟ್ಟರೆ ತಪ್ಪಿದ್ದಲ್ಲ ಅಪಜಯ
ಜೀವನ
ಬದುಕೆಂಬುದೇ ಮಾಯೆ
ಹಿಂಬಾಲಿಸದಿರಲಿ ಭಯದ ಛಾಯೆ
ಜೀವನವೇ ನಶ್ವರ
ಇದನರಿತು ಬಾಳಿದರೆ ಬದುಕು ಸುಂದರ
ನಿದ್ರಾಭಂಗ
ಇಷ್ಟು ಬೇಗನೆ ನಿದಿರೆಗೆ
ಜಾರದಿರು ನೀರೆ
ಹಾಗೇನಾದರೂ ಆದರೆ
ಕನಸಲ್ಲಾದರೂ ನೀ ಬಾರೇ ♥ ♥
ಮುತ್ತು
ನಲ್ಲೆ ನಿನ್ನ ಮಧುರ
ಅಧರದ ಸವಿಗೆ
ಹೆದರಿ ಓಡಿತ್ತು
ಮಧುಮೇಹ 🙂 ♥
ಮಧು"ಚಂದ್ರ"
ನಲ್ಲ, ಹೋಗೋಣವೆ ಮಧುಚಂದ್ರಕೆ?
ನಲ್ಲೆ, ನೀನಿರಲು ಮಧುವಷ್ಟೇ ಸಾಕು ಚಂದಿರನೇಕೆ?
ಚಂದಿರ ಬೇಕು ಬೆಳಕು ಬೀರೋಕೆ
ನೀನಿರಲು ಬೇರೆ ಬೆಳಕು ಬೇಕೇ? ♥ ♥ ♥ ♥
ಎಲ್ಲಾ ಹನಿಗವನಗಳೂ ಮಧುರವಾಗಿವೆ…
ದಂ"ಪತಿ" , ಛೀ "ಮಾರಿ" , ಹುಣ್ಣಿಮೆ , ನೀ ಕೊಡೆ – ನಾ ಬಿಡೆ , ಅಂಕೆ
ಗಳು ಮನ ಮುಟ್ಟಿದವು..
ಚುಟುಕುಗಳು ಚೆನ್ನಾಗಿವೆ….
ವಿಜಯ್ ಹರಗು ರವರೆ ನಿಮ್ಮ ಎಲ್ಲಾ ಕವನಗಳು ಮುದ್ದಾಗಿವೆ.
ಉಸಿರು
ಗೆದ್ದವನು ಏದುಸಿರು ಬಿಟ್ಟ
ಸೋತವನು ನಿಟ್ಟುಸಿರ ಬಿಟ್ಟ
ಬಿಟ್ಟದ್ದು ಉಸಿರೇ ಆದರೂ
ಎಷ್ಟೊಂದು ಭಿನ್ನ – ಬದುಕಿನ ದಾರಿ ವಿಭಿನ್ನ
;()))
ಚುಟುಕುಗಳು ಚೆನ್ನಾಗಿವೆ….
ಶುಭವಾಗಲಿ
\।/
ಪ್ರೀತಿ,ಕತ್ತಲ ಜಗತ್ತು,ನಶೆ,ನಾಪತ್ತೆ ಈ ಕವನಗಳು ತುಂಬಾ ಚೆನ್ನಾಗಿದೆ…
ಬುಡ್ಡೀ ದೀಪದಷ್ಟಾದರೂ…ಚೆಲುವು ಒಲವುಗಳ ದಿವ್ಯ ಸಮ್ಮಿಲನ..ಆಸೆ ಇದ್ದರೇ ಬದುಕು ಸಹಜ ಸುಂದರ…ಇಷ್ಟವಾದ ಅರ್ಥಗರ್ಭಿತ ಸಾಲುಗಳು
ವಿಜಯ್ ಹೆರಗುರವರೇ ಹೀಗೇ ಬರುತಿರಲಿ…..