ಈ ಮನುಷ್ಯರಲ್ಲಿ ಜಾತಿಯನ್ನು ಯಾರು ಹುಟ್ಟು ಹಾಕಿದರೋ? ಎಲ್ಲರೂ ಉಸಿರಾಡುವುದು ಗಾಳಿಯನ್ನೇ! ತಿನ್ನುವುದು ಅನ್ನ, ಕುಡಿಯುವುದು ನೀರು. ಆದರೂ ಜಾತಿ-ತಾರತಮ್ಯ, ಮೇಲು-ಕೀಳು ಎಲ್ಲಾ ಹೊಲಸುತನದ ಪರಮಾವಧಿ. ಸರ್ಕಾರಗಳೂ ತಮ್ಮ ಲಾಭಕ್ಕೋಸ್ಕರ ಜಾತಿಯನ್ನು ಪೋಷಿಸುವ ವ್ಯವಸ್ಥಿತ ಕಾರ್ಯವನ್ನು ಮಾಡುತ್ತವೆ. ಶಾಲೆಗೆ ಸೇರಿಸುವಾಗಲೇ ಜಾತಿಯನ್ನು ನಮೂದಿಸಬೇಕು ಕಡ್ಡಾಯವಾಗಿ. ಇರಲಿ, ಮನುಷ್ಯ ಸಮಾಜದ ವಿಕೃತಿಗಳು ಕಾಲಕ್ರಮೇಣದಲ್ಲಿ ಸುಧಾರಿಸಬಹುದು ಎಂಬ ಆಶಾವಾದವನ್ನು ಇಟ್ಟುಕೊಳ್ಳೋಣ. ಪ್ರಾಣಿ-ಪಕ್ಷಿ ಪ್ರಪಂಚದಲ್ಲೂ ಕೋಟಿಗಟ್ಟಲೆ ಪ್ರಭೇದಗಳಿವೆ. ಹಲವು ಪ್ರಭೇದಗಳು ಪರಿಸರಕ್ಕೆ, ಸಮಾಜಕ್ಕೆ ಉಪಕಾರವನ್ನು ಮಾಡಿದರೆ, ಕೆಲವು ಪ್ರಭೇದಗಳು ಹಾನಿಯನ್ನುಂಟು ಮಾಡುತ್ತವೆ.
ಸಾಗರ ತಾಲ್ಲೂಕಿನ ಹೆಗ್ಗೋಡು ಸಾಂಸ್ಕೃತಿಕವಾಗಿ ವಿಶ್ವದಲ್ಲೇ ಹೆಸರು ಮಾಡಿದ ಊರು. ಆ ಪುಟ್ಟ ಹಳ್ಳಿ ಇಡೀ ವಿಶ್ವದ ಗಮನವನ್ನು ಸೆಳೆದಿದೆ. ಇದೇ ಹೆಗ್ಗೋಡು ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ಊರಿನ ಹೆಸರು ಬಿಲಗೋಡಿ. ಇಲ್ಲಿ ಸಮಾಜದ ಎಲ್ಲಾ ಸ್ತರಗಳ ಕುಟುಂಬಗಳೂ ವಾಸಿಸುತ್ತವೆ. ಆದರೆ ಅದೇನು ಶಾಪವೋ? ಇಲ್ಲಿಯ ನಾಲ್ಕು ಮನೆಗಳಲ್ಲಿ ಒಂದು ಜಾತಿಯ ವಿಚಿತ್ರ ಹುಳುಗಳಿವೆ. ಕಾಡಿನ ಮಧ್ಯ ವಾಸಿಸುವ ಜನರು ಹಲವು ತರಹದ ಹುಳು-ಹಪ್ಪಟೆಗಳ ಕಾಟವನ್ನು ಸಹಿಸಿಕೊಂಡು ಬದುಕಬೇಕಾಗುತ್ತದೆ. ಮನೆಯಲ್ಲಿ ಜಾನುವಾರುಗಳಿದ್ದರೆ, ಮೇ ತಿಂಗಳಲ್ಲಿ ಊಜಿ ನೊಣದ ಕಾಟ ವಿಪರೀತ. ಈ ಊಜಿ ನೊಣಗಳು ಜಾನುವಾರುಗಳ ರಕ್ತ ಹೀರಿ ಹಿಪ್ಪೆ ಮಾಡಿ ಹಾಕುತ್ತವೆ. ಜಾನುವಾರುಗಳನ್ನು ನಿಲ್ಲಲು ಬಿಡದೇ ರಕ್ತ ಹೀರಿ, ಹೈನುಗಾರಿಕೆಯನ್ನು ಹೈರಾಣು ಮಾಡಿಬಿಡುತ್ತವೆ. ಊಜಿ ನೊಣಗಳು ಮಲೆನಾಡಿನ ಹಳ್ಳಿಗಳಲ್ಲಿ ಮನೆಯ ಒಳಗೂ ದಾಳಿಯಿಡುತ್ತವೆ. ವಿಪರೀತ ವೇಗದಿಂದ ಹಾರುತ್ತಾ, ಕೂತ ಸೆಕೆಂಡಿನಲ್ಲೇ ತನ್ನ ದಬ್ಬಣದಂತಹ ಅಂಗದಿಂದ ಚುಚ್ಚಿ ಮಾನವರ ರಕ್ತವನ್ನು ಹೀರುತ್ತವೆ. ಹಾಗೆಯೇ ನೊಣ-ಸೊಳ್ಳೆಗಳು ಸರ್ವಾಂತರಯಾಮಿಗಳು. ಇನ್ನೂ ಗೊಬ್ಬರ, ಹೊಲಸು ಅಥವಾ ಕೊಳೆತ ತರಕಾರಿಗಳ ಮಧ್ಯದಿಂದ ಉತ್ಪತ್ತಿಯಾಗುವ ಚಿಕ್ಕ ಗುಂಗಾಡುಗಳು ಯಾವಾಗಲೂ ಕೊಂಯ್ ಶಬ್ಧ ಮಾಡುತ್ತಾ ಕಣ್ಣೆದುರಿನಲ್ಲಿ, ಕಿವಿಯ ಹತ್ತಿರ ಹಾರಾಡುತ್ತಾ ಕಿರಿ-ಕಿರಿ ಮಾಡುತ್ತವೆ. ಹೊಡೆದು ಹೊಸಕಿ ಹಾಕಲು ಕೈಗೆ ಸಿಗುವುದಿಲ್ಲ.
ಮೇಲೆ ಹೇಳಿದ ಬಿಲಗೋಡಿನಲ್ಲಿ ಮಾತ್ರ ಇನ್ನೂ ವಿಚಿತ್ರ ಹುಳುಗಳಿವೆ. ನೋಡಲು ಸಗಣಿಯಲ್ಲಿ ಕಂಡು ಬರುವ ಹುಳುಗಳಂತೆ ತೋರುವ ಈ ಜೀವಿಗಳು ಆಕಾರದಲ್ಲಿ ಸಗಣಿ ಹುಳುವಿಗಿಂತ ಚಿಕ್ಕವು. ಹಗಲು ಹೊತ್ತಿನಲ್ಲಿ ಮರೆಯಾಗಿರುವ ಈ ಹುಳುಗಳು ರಾತ್ರಿಯಾಗುತ್ತಿದ್ದಂತೆ ಮರೆಯಿಂದ ಹೊರಬರಲು ಪ್ರಾರಂಭಿಸುತ್ತವೆ. ಇವು ಊಜಿ ನೊಣ ಅಥವಾ ಸೊಳ್ಳೆಗಳಂತೆ ಕಚ್ಚಿ ರಕ್ತ ಹೀರುವುದಿಲ್ಲ. ಯಾವುದೇ ಧುರ್ನಾತವನ್ನು ಹೊಂದಿಲ್ಲ. ಆದರೆ ಇವುಗಳ ಸಂಖ್ಯೆ ಮನೆಯ ಜನರಿಗೆ ವಿಪರೀತ ಕಿರುಕುಳ ನೀಡುತ್ತವೆ. ಸಂಜೆಯಾಗುತ್ತಿದ್ದಂತೆ ಹೊರಬರುವ ಈ ಹುಳುಗಳ ಹಿಂಡು ಇಡೀ ಮನೆಯನ್ನೇ ಆಕ್ರಮಿಸುತ್ತವೆ. ಗೋಡೆಗಳ ಮೇಲೆ ಹರಿದಾಡುತ್ತಾ ಇದ್ದರೆ ಗೋಡೆಯೇ ಕಾಣುವುದಿಲ್ಲ. ನೀರು ಕುಡಿಯಬೇಕೆಂದು ತಂದಿಟ್ಟುಕೊಂಡರೆ ಕ್ಷಣ ಮಾತ್ರದಲ್ಲಿ ನೀರಿನ ಲೋಟ ಕಾಣದಂತೆ ಮುತ್ತಿಕೊಳ್ಳುತ್ತವೆ. ಮನೆಯ ಯಾವ ಭಾಗದಲ್ಲೂ ಇವು ಇಲ್ಲ ಎನ್ನುವ ಹಾಗಿಲ್ಲ. ಟಿ.ವಿ.ಯ ಒಳಗೂ ಹೋಗುತ್ತವೆ. ರಾತ್ರಿ ಮಲಗಿದರೆ ಇಡೀ ಹಾಸಿಗೆಯ ತುಂಬಾ ಇರುತ್ತವೆ. ಇಡೀ ಮೈತುಂಬಾ ಒಡಾಡಿ ಗುಳು-ಗುಳು ಎನ್ನುತ್ತವೆ. ಬಿಲಗೋಡಿಯ ನಾಲ್ಕು ಮನೆಗಳ ಜೀವನ ಅಕ್ಷರಷ: ನರಕಮಯವಾಗಿದೆ. ಇವು ಎಲ್ಲಿಂದ ಉತ್ಪತ್ತಿಯಾಗುತ್ತವೆ, ಗೊತ್ತಿಲ್ಲ. ಇದರ ಹೆಸರ ಏನು? ಗೊತ್ತಿಲ್ಲ. ಸರ್ಕಾರದ ಯಾವ ಇಲಾಖೆಯು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಕ್ಕಳ ಕಿವಿಯೊಳಗಡೆ ಹೋಗಿ ತೊಂದರೆಯಾಗಿದ್ದು ಉಂಟು. ಸ್ಥಳೀಯ ಆಡಳಿತವಾದ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಿಗೆ ವಿಚಾರವೇ ಗೊತ್ತಿಲ್ಲ. ಯಾರೆಂದರೆ ಯಾರೂ ಇದರ ಬಗ್ಗೆ ಕಾಳಜಿವಹಿಸಿಲ್ಲ.
ಸಾಗರದ ನೆಹರೂ ಮೈದಾನದಲ್ಲೊಂದು ಕುಡಿಯುವ ನೀರಿನ ದೊಡ್ಡದಾದ ಟ್ಯಾಂಕ್ ಇದೆ. ಟ್ಯಾಂಕಿನ ಹೊರಭಾಗದಲ್ಲಿ ಹೆಜ್ಜೇನುಗಳು ಗೂಡು ಕಟ್ಟಿಕೊಂಡು ವಾಸ ಮಾಡುತ್ತವೆ. ಕೆಲವೊಮ್ಮೆ ಜನರಿಗೆ ತೊಂದರೆ ನೀಡಿದ ಉದಾಹರಣೆಗಳಿವೆ. ಅಂದರೆ ಬಿರುಬಿಸಿಲಿನಲ್ಲಿ ಕಿಡಿಗೇಡಿಗಳ ಉಪಟಳದಿಂದ ಜೇನು ರೊಚ್ಚಿಗೆದ್ದು ಕಚ್ಚಿದ ಉದಾಹರಣೆಗಳಿವೆ. ಮದ್ದಾಲೆ ಮರಗಳಲ್ಲಿ ಈ ಹೆಜ್ಜೇನು ಗೂಡು ಕಟ್ಟುವುದು ಹೆಚ್ಚು. ಕಾಂಕ್ರೀಟ್ ಕಾಡಿನಲ್ಲಿ ದೊಡ್ಡ ದೊಡ್ಡ ಕಟ್ಟಡಗಳ ಹೊರಭಾಗದಲ್ಲಿ ಗೂಡು ನಿರ್ಮಿಸಿಕೊಂಡು ವಾಸಿಸುವುದನ್ನು ಕಾಣಬಹುದು. ಜಗತ್ತಿನ ಎಲ್ಲಾ ಜೀವಿಗಳು ತನ್ನಷ್ಟಕ್ಕೆ ತಾನೆ ಮನುಷ್ಯರಿಗೆ ತೊಂದರೆಯುಂಟು ಮಾಡುವುದಿಲ್ಲ. ಹೆಜ್ಜೇನು ಕೂಡ ತನ್ನ ಪಾಡಿಗೆ ತಾನು ಇರುವ ಒಂದು ಅಧ್ಬುತ ಕೀಟ ಸಾಮ್ರಾಜ್ಯ. ಪರಾಗಸ್ಪರ್ಶ ಕ್ರಿಯೆಗೆ ಜೇನುಗಳು ಅನಿವಾರ್ಯ.
ಇಂತಿಪ್ಪ ಹೆಜ್ಜೇನು ಕಳೆದ ದಿನಗಳಲ್ಲಿ ಪೇಟೆಯ ಜನರ ಮೇಲೆ ದಾಳಿ ಮಾಡಿವೆ. ನಗರಸಭೆಯ ಆಯುಕ್ತರಿಗೆ ಸಾರ್ವಜನಿಕರು ದೂರು ನೀಡಿ ಹೆಜ್ಜೇನು ಕಾಟ ತಪ್ಪಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಧಮಕಿ ಹಾಕಿದ್ದಾರೆ. ನೆಹರೂ ಮೈದಾನದಲ್ಲಿ ವಾಕಿಂಗ್ ಮಾಡಲು ವಾಕಿಂಗ್ ಟ್ರ್ಯಾಕ್ ನಿರ್ಮಿಸಿದ್ದಾರೆ. ದಿನಾ ಬೆಳಗ್ಗೆ ಮತ್ತು ಸಂಜೆ ಹಲವು ಜನರು ಈ ಟ್ರ್ಯಾಕಿನಲ್ಲಿ ವಾಯುವಿಹಾರ ಮಾಡುತ್ತಾರೆ. ಇವರಿಗೂ ಕೂಡ ಹೆಜ್ಜೇನಿನ ಭಯ ಕಾಡುತ್ತದೆ. ಸರಿ ನಗರ ಸಭೆಯ ಆಯುಕ್ತರು ಜೇನು ಕೀಳುವವರನ್ನು ಕರೆಸಿ, ರಾತ್ರಿ ಹೊತ್ತಿನಲ್ಲಿ ಹೊಗೆ ಹಾಕಿ ಹೆಜ್ಜೇನು ಓಡಿ ಹೋಗುವ ಹಾಗೆ ಮಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸಾವಿರಾರು ಹೆಜ್ಜೇನು ಹುಳುಗಳು ಪುತು-ಪುತುನೆ ಉದುರಿ ಸತ್ತು ಹೋಗಿವೆ. ಪೇಟಿಗರು ಹೆಜ್ಜೇನು ಕಾಟದಿಂದ ಮುಕ್ತಿ ಸಿಕ್ಕಿತು ಎಂಬ ಖುಷಿಯಲ್ಲಿದ್ದಾರೆ!!
ಇಷ್ಟರಲ್ಲಿ ಅದ್ಯಾರೋ ಒಬ್ಬರು ಹೆಜ್ಜೇನು ಮತ್ತೆ ವಾಪಾಸು ಬಂದು ಗೂಡು ಕಟ್ಟಿಕೊಳ್ಳುತ್ತವೆ ಆದ್ದರಿಂದ ಇಡೀ ಟ್ಯಾಂಕಿಗೆ ರಾಸಾಯನಿಕಗಳನ್ನು ಲೇಪನ ಮಾಡುವ ಸಲಹೆಯನ್ನು ನೀಡಿದ್ದಾರೆ. ಆಯುಕ್ತರು ಅದೇನೋ ರಾಸಾಯನಿಕಗಳನ್ನು ತರಿಸಿ ಇಡೀ ಟ್ಯಾಂಕಿಗೆ ಬಳಿಸಿದ್ದಾರೆ.
ನಮ್ಮಂತೆ ಯೋಚನಾಶಕ್ತಿಯಿಲ್ಲದ ಹೆಜ್ಜೇನುಗಳಿಗೆ ತಾವು ಮನುಷ್ಯ ಪ್ರಪಂಚದಲ್ಲಿ ವಾಸ ಮಾಡಬಾರದು ಎಂದು ಗೊತ್ತಿಲ್ಲ. ಹತ್ತಿಪ್ಪತ್ತು ಹುಳುಗಳು ಕಚ್ಚಿಸಿಕೊಂಡ ಮನುಷ್ಯರು ಜೇನು ಹುಟ್ಟುಗಳನ್ನೇ ಸುಟ್ಟು ಹಾಕುತ್ತಾರೆ ಎಂಬ ಕಲ್ಪನೆಯಿಲ್ಲದೆ ಬಂದು ಜನವಸತಿಯಲ್ಲಿ ಗೂಡು ಕಟ್ಟುತ್ತವೆ, ದಡ್ಡ ಜೇನುಗಳು.
ತಮ್ಮ ಉಳಿವಿಗಾಗಿ ಎಲ್ಲಾ ಪ್ರಾಣಿ-ಪಕ್ಷಿಗಳು ಹೋರಾಟ ನಡೆಸುತ್ತವೆ. ಕೀಟ ಪ್ರಪಂಚದಲ್ಲೂ ಈ ತರಹದ ಹೋರಾಟದ ಮನೋಭಾವವಿದೆ. ಮೊನ್ನೆ ನೋಡಿದರೆ ಮರಳಿ ಬಂದ ಹೆಜ್ಜೇನು ಚಿಕ್ಕದಾಗಿ ಗೂಡು ಕಟ್ಟುತ್ತಿದೆ. ಮತ್ತೆ ಸ್ಥಳೀಯ ಆಡಳಿತಕ್ಕೆ ತಲೆನೋವು ಶುರುವಾಗುತ್ತದೆ. ಅತ್ತ ಬಿಲಗೋಡಿಯಲ್ಲಿನ ತೊಂದರೆ ಹಾಗೆಯೇ ಮುಂದುವರೆಯುತ್ತಿದೆ. ಇತ್ತ ಪರಾಗಸ್ಪರ್ಶ ಯಂತ್ರಗಳ ಹುಟ್ಟುಗಳನ್ನು ಸುಟ್ಟು ಹಾಕಲಾಗಿದೆ.
*****