ಪಂಜು-ವಿಶೇಷ

ವಿಚಾರವಾದಿ ಡಾ. ನರೇಂದ್ರ ದಾಬೋಲ್ಕರ್ ಕಗ್ಗೊಲೆ ವೈಚಾರಿಕತೆಯ ಮೇಲಿನ ಧಾಳಿ: ಜೈಕುಮಾರ್

 

 

 

 

 

ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ದ ಮಹಾರಾಷ್ಟ್ರದಲ್ಲಿ ಕಳೆದ ೨೫ ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಖ್ಯಾತ ವಿಚಾರವಾದಿ ಡಾ: ನರೇಂದ್ರ ದಾಬೋಲ್ಕರ್ ರವರನ್ನು ಎರಡು ವಾರಗಳ ಹಿಂದೆ ಕೊಲೆ ಮಾಡಿರುವುದು ಎಲ್ಲೆಡೆ ಪ್ರತಿಭಟನೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಅವರು ದಿ: ೨೦.೦೮.೨೦೧೩ ರಂದು ವಾಯುವಿಹಾರಕ್ಕೆ ಹೋಗಿದ್ದಾಗ ಅವರನ್ನು ಸಮಾಜಘಾತುಕ ಶಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮಾಯ, ಮಾಟ, ಮಂತ್ರಗಳಿಂದ ಅವರನ್ನು ಕೊಲ್ಲಲಾಗಿಲ್ಲ!

ಡಾ: ನರೇಂದ್ರ ದಾಬೋಲ್ಕರ್ ರವರು ಮೂಲತ: ಡಾಕ್ಟರ್ ಆಗಿದ್ದು, ಸಮಾಜವನ್ನು ಕಾಡುತ್ತಿರುವ ಪಿಡುಗುಗಳಾದ ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ದ ಹೋರಾಡುವ ಸಲುವಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡಿದ್ದರು. ಹಳ್ಳಿ ನಗರ ಪ್ರದೇಶಗಳ ಮೂಲೆ ಮೂಲೆಗಳಿಗೆ ತಮ್ಮ ಕಾರ್ಯಕರ್ತರೊಡನೆ ಹೋಗಿ ಬಾಬಾಗಳು, ಢೋಂಗಿ ಸ್ವಾಮೀಜಿಗಳು ಮತ್ತು ಇತರೆ ಧಾರ್ಮಿಕ ಕಪಟಿಗಳ ಬೂಟಾಟಿಕೆಗಳನ್ನು ಬಯಲಿಗೆಳೆಯುತ್ತಿದ್ದರು. ಅವರ ಜೀವದ ಮೇಲೆ ಹಲವಾರು ಬಾರಿ ಧಾಳಿಗಳೂ ನಡೆದಿದ್ದವು. ಅಂಧಶ್ರದ್ಧೆಗಳ ವಿರುದ್ದ ಹೋರಾಡುವ ಸಲುವಾಗಿ ’ ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿ’ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. ಈ ಸಂಘಟನೆಯ ಒಂದು ವರ್ಷ ಪೂರಾ ಕಾರ್ಯಕ್ರಮಗಳು ಮುಂಚೆಯೇ ನಿಗಧಿಯಾಗಿರುತ್ತಿದ್ದವು. ಅಂಧಶ್ರದ್ಧೆ ನಿರ್ಮೂಲನೆಗಾಗಿ ಮಸೂದೆಯೊಂದನ್ನು ಜಾರಿಗೆ ತರಬೇಕೆಂದು ಕಳೆದ ೧೮ ವರ್ಷಗಳಿಂದ ಅವರು ಹೋರಾಡುತ್ತಿದ್ದರೂ ಅದನ್ನು ಕಡೆಗಣಿಸಿದ್ದ ಮಹಾರಾಷ್ಟ್ರ ಸರ್ಕಾರ ಅವರು ಸತ್ತ ೩ ದಿನದೊಳಗೆ ಆ ಮಸೂದೆಯನ್ನು ಅಂಗೀಕರಿಸಿದೆ!

ಗಣೇಶನ ಹಬ್ಬದ ಸಂದರ್ಭದಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿಕೊಂಡು ಮಾಡುವ ವಿಗ್ರಹಗಳು ಪರಿಸರಕ್ಕೆ ಮಾರಕವಾಗಿರುವುದರಿಂದ ನೈಸರ್ಗಿಕ ಬಣ್ಣ ಮತ್ತು ಮಣ್ಣು ಬಳಸಿದ ವಿಗ್ರಹಗಳನ್ನೇ ಬಳಸಬೇಕೆಂದು ಹೈಕೋರ್ಟ್‌ವರೆಗೂ ಹೋರಾಡಿ ಪರಿಸರ-ಸ್ನೇಹಿ ತೀರ್ಪು ಹೊರಬೀಳುವಲ್ಲಿ ಯಶಸ್ವಿಯಾಗಿದ್ದರು. ಹಳ್ಳಿಗಳಲ್ಲಿ ಜಾತಿ ತಾರತಮ್ಯದ ಕುರುಹಾದ ಕೆಳಜಾತಿ ಜನರಿಗೆ ಒಂದೇ ಕಡೆ ನೀರು ನೀಡದಿರುವ ವಿರುದ್ದ ’ಒಂದು ಹಳ್ಳಿ, ಒಂದು ಬಾವಿ’ ಘೋಷಣೆಯಡಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಜ್ಯೋತಿ ಬಾ ಪುಲೆ-ಸಾಹು-ಅಂಬೇಡ್ಕರ್ ರವರ ವಿಚಾರಧಾರೆಗಳಿಂದ ಪ್ರೇರಿತರಾಗಿದ್ದರು. ವೈಚಾರಿಕ ಲೇಖನಗಳನ್ನು ಒಳಗೊಂಡ ವಾರಪತ್ರಿಕೆ ’ಸಾಧನಾ’ ದ ಸಂಪಾದಕರಾಗಿದ್ದರು. ಆದರೆ ಗಾಂಧಿಯನ್ನು ಹತ್ಯೆ ಮಾಡಿದ ಮತಾಂಧ ಮನಸ್ಥಿತಿಯೇ ಇವರನ್ನು ಬಲಿತೆಗೆದುಕೊಂಡಿದೆ. 

ಮೂಢನಂಬಿಕೆ ಮತ್ತು ಅಂಧಶ್ರದ್ಧೆ ವಿರುದ್ದದ ಹೋರಾಟ ಮತ್ತು ವಿಚಾರವಾದಿಗಳು: 

ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳನ್ನು ಬೆಳೆಸಿ ಜನರನ್ನು ವಂಚಿಸುವ ಹಾಗೂ ಶೋಷಣೆ ಮಾಡುವ,  ಆ ಮೂಲಕ ಸಮಾಜದಲ್ಲಿ ಹಣ ಮತ್ತು ಅಧಿಕಾರ ಗಳಿಸುವ ಶಕ್ತಿಗಳಿಗೆ ಯಾವಾಗಲೂ ಸ್ವತಂತ್ರ ಆಲೋಚನೆಯ, ತರ್ಕಿಸುವ ಮತ್ತು ಪ್ರಶ್ನಿಸುವ ಮನೋಭಾವದ ವೈಚಾರಿಕತೆ ಶತ್ರುವೇ ಸರಿ. ಇಂಥಹ ಮೂಢನಂಬಿಕೆಗಳು ಮತ್ತು ಕಂದಾಚಾರಗಳ ಕುರಿತಾಗಿ ವಿಚಾರವಾದಿಗಳ ಚಟುವಟಿಕೆಗಳಿಗೆ ಹೋಲಿಸಿದರೆ ಜನವಿಜ್ಞಾನ ಚಳುವಳಿಗೆ ತನ್ನದೇ ಆದ ಕಣ್ಣೋಟವಿದೆ. ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳ ಮೂಲ ಬೇರುಗಳು ತಿಳುವಳಿಕೆಯ ಕೊರತೆ ಅಥವಾ ಅಜ್ಞಾನ ಹಾಗೂ ಸಮಾಜದ ರಚನೆಯಲ್ಲಿ ಅಡಗಿದೆ. ಒಂದೆಡೆ ಅಜ್ಞಾನದಿಂದ ಮೂಢನಂಬಿಕೆ ಮತ್ತು ಅಂಧಶ್ರದ್ಧೆಗಳು ಬೆಳೆದರೆ, ಮತ್ತೊಂದೆಡೆ ಸಮಾಜದ ರಚನೆ ಅಂದರೆ ಸಮಾಜದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಮೂಢನಂಬಿಕೆಯನ್ನು ಮತ್ತಷ್ಟು ಪೋಷಿಸುತ್ತವೆ ಮಾತ್ರವಲ್ಲ ವಿಜ್ಞಾನದ ಕುರಿತು ಅಪನಂಬಿಕೆ ಹುಟ್ಟಿಸಲು ಸದಾ ಯತ್ನಿಸುತ್ತವೆ.

ಸಮಾಜದ ರಚನೆ ಬದಲಾದಂತೆ ನಂಬಿಕೆಗಳೂ ಬದಲಾಗುತ್ತವೆ. ಸಮಾಜ ರಚನೆಯನ್ನು ಆಮೂಲಾಗ್ರ ಬದಲಿಸುವ, ಉಳ್ಳವರು ಮತ್ತು ಇಲ್ಲದವರ ಸಂಘರ್ಷ, ಹೋರಾಟಗಳ ಜೊತೆಗೆ ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ದದ ಹೋರಾಟವನ್ನೂ ಬೆಸೆಯಬೇಕು. ವೈಜ್ಞಾನಿಕ ಮನೋಭಾವ ಬೆಳೆಸಲು ಶ್ರಮಿಸುತ್ತಾ ಮೂಢನಂಬಿಕೆ ಮತ್ತು ಕಂದಾಚಾರಗಳ ಕುರಿತು ಜನತೆಯ ನಡುವೆ ಜಾಗೃತಿ ಮೂಡಿಸಿ ಅವುಗಳನ್ನು ತೊಡೆಯಬೇಕು ಎನ್ನುವುದು ಜನವಿಜ್ಞಾನ ಚಳುವಳಿಯ ಕಣ್ಣೋಟ. ಸಮಾಜರಚನೆಯ ಬದಲಾವಣೆಗೆ ಕೈಹಾಕದೆ ಆ ಸಮಾಜದ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಮಾತ್ರವೇ ಪ್ರಶ್ನಿಸುವುದರಿಂದ ಅವುಗಳನ್ನು ತೊಡೆದು ಹಾಕುವುದು ಸಾಧ್ಯವಿಲ್ಲ ಎಂಬುದನ್ನು ವಿಚಾರವಾದಿಗಳು ಮನಗಂಡಿಲ್ಲ.

ಆದರೆ ಡಾ: ನರೇಂದ್ರ ದಾಭೋಲ್ಕರ್‌ರವರ ವೈಶಿಷ್ಟ್ಯ ಮಾದರಿ ಇರುವುದು ಇಲ್ಲಿಯೇ. ಅವರು ವಿಚಾರವಾದಿಯಾಗಿ ಜಾತಿ ಪದ್ದತಿಯ ವಿರುದ್ದ ಹೋರಾಟವನ್ನೂ ಕೂಡ ಮೂಢನಂಬಿಕೆ ಮತ್ತು ಕಂದಾಚಾರ ವಿರುದ್ದ ಹೋರಾಟಗಳ ಜೊತೆಗೆ ಬೆಸೆದಿದ್ದರು. 

ಡಾ: ನರೇಂದ್ರ ದಾಭೋಲ್ಕರ್ ರವರ ಮೇಲಿನ ಧಾಳಿ ಪ್ರತ್ಯೇಕ ಘಟನೆಯೇನಲ್ಲ. ಇತ್ತೀಚಿನ ವರ್ಷಗಳಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಪ್ರಗತಿಪರ ವಿಚಾರಗಳು, ಇತ್ಯಾದಿ ಮೇಲೆ ತೀವ್ರಗೊಳ್ಳುತ್ತಿರುವ ಸರಣಿ ಧಾಳಿಗಳ ಪೈಕಿ ಅದೂ ಒಂದಷ್ಟೆ. ಪ್ರಗತಿಪರ ರಂಗಕರ್ಮಿ ಸಪ್ಧಾರ್ ಹಶ್ಮಿಯನ್ನು ಹಾಡು ಹಗಲೇ ಕೊಂದದ್ದು, ಕಲಾವಿದ ಎಂ.ಎಫ್ ಹುಸೇನ್ ರವರ ಕಲಾಕೃತಿಗಳನ್ನು ನಾಶಮಾಡಿ ಹತ್ಯೆ ಮಾಡಲು ಯತ್ನಿಸಿದ್ದು, ಹಲವು ಬರಹಗಾರರು, ಕಲಾವಿದರು, ಕಾರ್ಟೂನಿಸ್ಟರ ಮೇಲೆ, ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಸರಣಿ ಧಾಳಿಗಳಲ್ಲೊಂದು ಇದೊಂದಷ್ಟೆ. ಇದು ಬೆಳೆಯುತ್ತಿರುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಕೋಮುವಾದಿಗಳ ಶಕ್ತಿಯನ್ನು ತೋರಿಸುತ್ತದೆ. 

ಇದು ೧೬ ನೇ ಶತಮಾನದ ಖ್ಯಾತ ವಿಚಾರವಾದಿ ಜಿಯಾರ್ಡಿನೊ ಬ್ರುನೋ ಗಲ್ಲಿಗೇರಿದ ಘಟನೆ ನೆನಪಿಸಿಕೊಳ್ಳಬಹುದು. ಆತ ವಿಚಾರವಾದಿ ಮಾತ್ರವೇ ಅಲ್ಲ, ಖಗೋಳವಿಜ್ಞಾನದಲ್ಲಿ ಕೊಪರ್ನಿಕಸ್‌ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸೂರ್ಯಕೇಂದ್ರಿತ ಮಾದರಿಯನ್ನು ಜನಪ್ರಿಯಗೊಳಿಸಿ, ಸೂರ್ಯ ಕೂಡ ಒಂದು ನಕ್ಷತ್ರ, ನಮ್ಮ ವಿಶ್ವದಲ್ಲಿ ಹಲವಾರು ನಕ್ಷತ್ರಗಳು ಗ್ರಹಗಳು ಹೀಗೆ ವ್ಯವಸ್ಥಿತವಾಗಿ ಭೌತಿಕ ನಿಯಮನುಸಾರ ಅಸ್ತಿತ್ವದಲ್ಲಿದೆ ಎಂದಿದ್ದ. ಇಂಥಹ ಪ್ರಭುತ್ವ-ವಿರೋಧಿ ವಿಚಾರಗಳಿಂದ ಕ್ರೋಧಗೊಂಡ ರೋಮನ್ ಪ್ರಭುತ್ವ ಅವನನ್ನು ಗಲ್ಲಿಗೇರಿಸಿತ್ತು. 

೧೯೫೮ ರಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರೂ ರವರು ’ವಿಜ್ಞಾನ ನೀತಿ ನಿರ್ಣಯ’ ವೊಂದನ್ನು ಲೋಕಸಭೆಯಲ್ಲಿ ಮಂಡಿಸಿ ’ಇದು ದೇಶಕ್ಕೆ ವಿಜ್ಞಾನದ ಸಾಧನಗಳನ್ನು ನೀಡಲಿದ್ದು, ಭೌತಿಕ ತಿಳುವಳಿಕೆ ವಿಸ್ತರಿಸುತ್ತದೆ. ಜೀವನದ ಮೌಲ್ಯಗಳು ಉತ್ತಮಗೊಳ್ಳುತ್ತವೆ. ಇದು ಭಾರತೀಯ ನಾಗರೀಕತೆಗೆ ಹೊಸ ಚೈತನ್ಯ ಮತ್ತು ನವನವೀನ ಶಕ್ತಿ ನೀಡುತ್ತದೆ.’ ಎಂದಿದ್ದರು. ಇದರ ಚರ್ಚೆಗೆ ಅಂದಿನ ಲೋಕಸಭಾ ಸದಸ್ಯರೆಲ್ಲರು ಬಹಳ ಸಮಯ ನೀಡಿದ್ದರು.

ಅಲ್ಲದೆ, ನಮ್ಮ ಸಂವಿಧಾನದ ವಿಧಿ ೫೧ ಎ (ಹೆಚ್) ವೈಜ್ಞಾನಿಕ ಮನೋಭಾವದ ಕುರಿತು ಈ ರೀತಿ ಹೇಳುತ್ತದೆ: ದೇಶದ ಪ್ರತಿಯೊಬ್ಬ ನಾಗರೀಕನೂ ವೈಜ್ಞಾನಿಕ ಮನೋಭಾವ, ಮಾನವೀಯತೆ ಮತ್ತು ವೈಚಾರಿಕ ಮನೋಭಾವವನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿ ಹೊಂದಿರತಕ್ಕದ್ದು.

ಆದರೆ, ಡಾ: ನರೇಂದ್ರ ದಾಭೋಲ್ಕರ್‌ರವರು ಈ ಆಶಯಗಳನ್ನು ಜಾರಿಗೊಳಿಸುವಾಗಲೇ ಬಲಿಯಾದದ್ದು ಸಂವಿಧಾನದ ಮೇಲಿನ ಧಾಳಿಯಷ್ಟೆ.

ಈ ಹತ್ಯೆಯನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸೋಣ. 

ಅವರನ್ನು ಹತ್ಯೆಗೈದ ಕೊಲೆಗಡುಕರನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸೋಣ. 

ಮೂಢನಂಬಿಕೆಗಳನ್ನು ಬಯಲುಗೊಳಿಸುವ ವಿಚಾರವಾದಿಗಳ ಮೇಲೆಯೇ ಧಾರ್ಮಿಕ ಸಹಿಷ್ಣುತೆಗಾಗಿ ಇರುವ ಹಲವು ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅವುಗಳಿಗೆ ಸಂವಿಧಾನದ ವಿಧಿ ೫೧ ಎ (ಹೆಚ್) ಗೆ ಪೂರಕವಾಗಿ ತಿದ್ದುಪಡಿ ಮಾಡಬೇಕು.

ವೈಜ್ಞಾನಿಕ ಮನೋಭಾವ ಹರಡುತ್ತಾ ಮೂಢನಂಬಿಕೆಗಳು ಮತ್ತು ಅಂಧಶ್ರದ್ದೆಗಳ ವಿರುದ್ದ ಜಾಗೃತಿ ಮೂಡಿಸಿ ಅವುಗಳನ್ನು ತೊಡೆದುಹಾಕಬೇಕು.  

 -ಜೈಕುಮಾರ್

ಬಿಜಿವಿಎಸ್,  ಕರ್ನಾಟಕ,

ಐ.ಐ.ಎಸ್.ಸಿ. ಆವರಣ, ಬೆಂಗಳೂರು

*********

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ವಿಚಾರವಾದಿ ಡಾ. ನರೇಂದ್ರ ದಾಬೋಲ್ಕರ್ ಕಗ್ಗೊಲೆ ವೈಚಾರಿಕತೆಯ ಮೇಲಿನ ಧಾಳಿ: ಜೈಕುಮಾರ್

  1. ಸಹಿಷ್ಣುತೆಗೆ ಹೆಸರಾದ ವಾರಕರಿ ಮಂದಿ ಕೂಡ ಈ ಸಲ ವಾರಿಯಲ್ಲಿ ದಾಬೋಲ್ಕರ್ ವಿರುದ್ದ ಮಾತಾಡಿದ್ದರು..
     
    ಪುಲೆ-ಅಂಬೇಡ್ಕರ್ ಕೊಟ್ಟ ನಾಡು ಅದೇಕೆ ಕೊಲೆಗಡುಕರನ್ನೂ ಕೊಡುವುದೋ…???

  2. ಲೇಖನ ಸಕಾಲಿಕ ಮತ್ತು ಪ್ರಜ್ಞಾವಂತ ಸಮಾಜದ ಕಣ್ಣುತೆರೆಸುವಂತಿದೆ. ಇಂತಹ ವಿಚಾರಗಳು ಆಚರಣೆಯಲ್ಲಿ ಎಲ್ಲರೂ ಅಳವಡಿಸಿಕೊಂಡರೆ ದೇಶ ಇನ್ನಷ್ಟೂ ವೈಜ್ಞಾನಿಕ ಮನೋಭಾವದಿಂದ ಮುನ್ನಡೆಯಲು ಅನುವು ಮಾಡಿಕೊಟ್ಟಂತಾಗುತ್ತದ.

Leave a Reply

Your email address will not be published. Required fields are marked *