ಪಂಜು-ವಿಶೇಷ

ವಿಕಲಾಂಗರಿಗೆ ಆಸರೆಯಾಗುತ್ತಿರುವ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಬಿ.ಡಿ.ತಟ್ಟಿ ಸಂಸ್ಥೆ: ದಿಗಂಬರ ಎಂ.ಪೂಜಾರ

 

ಲಕ್ಷ್ಮೇಶ್ವರ-ದಲ್ಲಿ ಕಿವುಡು ಮಕ್ಕಳ ಬಗ್ಗೆ. ನಮಗೆ ತಿಳಿದ ಹಾಗೆ ಸಮಾಜದಲ್ಲಿ ವಿಕಲಚೇತನರಿಗೆ ಸಮಾನತೆ ಹಾಗು ಸೌಲಭ್ಯಗಳ ಕಾನೂನಿನ ಮೂಲಕ ಸಿಕ್ಕಿರಬಹುದು. ಆದರೆ ನಿಜವಾಗಿಯೂ ಅವು ನಿಜವಾದ ಫಲಾನುಭವಿಗಳಿಗೆ ಸಿಗದೇ ಬೇರೆಯವರ ಪಾಲಾಗುತ್ತಿವೆ. ಇಂತಹ ದಿನಮಾನಗಳಲ್ಲಿಯೂ ತಮ್ಮ ಬೆನ್ನು ಮೂಳೆ ಮುರಿಯುವಂತೆ ಕೆಲಸ ಮಾಡುತ್ತಿರುವುದು ಕೆಲವು ಸಂಸ್ಥೆಗಳು ಮಾತ್ರ. ಅಂತಹ ಸಂಸ್ಥೆಗಳ ಸಾಲಿಗೆ ಸೇರುವ ಸಂಸ್ಥೆಗಳಲ್ಲಿ ಗದಗ ಜಿಲ್ಲೆಯ ಐತಿಹಾಸಿಕ ನಗರವಾಗಿರುವ  ಲಕ್ಷ್ಮೇಶ್ವರದಲ್ಲಿರುವ ಬಿ.ಡಿ. ತಟ್ಟಿ(ಅಣ್ಣಾವರು) ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ ಕೂಡಾ ಒಂದು.  ಸುಮಾರು ೧೮ ವರ್ಷಗಳಿಂದ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ವಸತಿಯುತ ಶಾಲೆಯನ್ನು ನಡೆಸುತ್ತಿದ್ದು ನಿರಂತರವಾಗಿ ಈ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ಸೇವೆಯಲ್ಲಿ ನಿರತವಾಗಿದೆ. ಈ ಒಂದು ಕಾರ್ಯಕ್ಕೆ ಸಮಾಜದ ಕೆಲ ವ್ಯಕ್ತಿಗಳು ಸಹ ಕೈಜೋಡಿಸುತ್ತಿರುವದು ಸಹ ಮಹತ್ವದ ಸಾಧನೆಯಾಗಿದೆ.

ಇತ್ತಿಚೇಗೆ ದಿನಗಳಲ್ಲಿ ಇದೇ ಸಂಸ್ಥೆಯು ಪೂರ್ವ ಪ್ರಾಥಮಿಕ ಶಾಲೆ ಎಂಬ ಯೋಜನೆಯನ್ನು ಕಳೆದ ೫-೬ ವರ್ಷಗಳಿಂದ ನಡೆಸುತ್ತಾ ಬಂದಿದ್ದು, ಇದರಲ್ಲಿ ಮಗುವಿನ ಜೊತೆಯಲ್ಲಿ ತಾಯಿಯೂ ಸಹ ಇರುವ ಮೂಲಕ ಮಕ್ಕಳನ್ನು ಅಭ್ಯಾಸ ಮಾಡಿಸುವ ಕಲಿಕಾ ವಿಧಾನ ಇದಾಗಿದೆ. ಇದು  ಪ್ರಾರಂಭ ಮಾಡಿದಾಗಿನಿಂದ ಮಾತು ಬಾರದ ಕಂದಮ್ಮಗಳು ಬದಲಾವಣೆಗಳಾಗುತ್ತಿರುವದು ಕಂಡು ಬರುತ್ತಿದೆ. ಇಂತಹ ಯೋಜನೆಗಳನ್ನು ಶ್ರದ್ದೆಯಿಂದ ಹಾಗೂ ಸಮಾಜದ ಹಿತದೃಷ್ಟಿಯಿಂದ ಪ್ರಾರಂಬಿಸಿ ಯಶಸ್ವಿಯಾಗಿದೆ. 

ಅಂಗವಿಕಲರು ಅನುಭವಿಸುತ್ತಿರುವ ತೊಂದರೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ ಶಿರಹಟ್ಟಿ ತಾಲೂಕಿನಾದ್ಯಂತ ಇರುವ ಅಂಗವಿಕಲ ಸರ್ವೆ ಕಾರ್ಯವನ್ನು ಮಾಡಿ ಮುಗಿಸಿದೆ.  ಈ ನಿಟ್ಟಿನಲ್ಲಿ ದೈಹಿಕ ಅಂಗವಿಕಲತೆ ಇರುವವರನ್ನು ಗುರುತಿಸಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಯೋಜನೆಯನ್ನು ಸಂಸ್ಥೆಯ ಆಡಳಿಮಂಡಳಿ ಹಾಕಿಕೊಳ್ಳುವ ಮೂಲಕ ವಿಕಲಾಂಗರಿಗೆ ಸಹಾಯವನ್ನು ಸಂಸ್ಥೆಯು ಮಾಡುತ್ತಿರುವದು ಈ ಭಾಗಕ್ಕೆ ಒಂದು ಮಾದರಿ ಎನ್ನಬಹುದಾಗಿದೆ.

ಲಕ್ಷ್ಮೇಶ್ವರದ ಬಿ.ಡಿ.ತಟ್ಟಿ(ಅ)ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರು ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ವಸತಿಯುತ ಶಾಲೆಯ ನೋಟ. ಶಾಲೆಯ ಆವರಣದಲ್ಲಿ ನಲಿದಾಡುತ್ತಿರುವ ವಿಕಲಾಂಗ ಮಕ್ಕಳು.

’ಶುಶ್ರಾವ್ಯ’(ತಾಯಿ ಕೇಂದ್ರೀಕೃತ) ಪೂರ್ವ ಪ್ರಾಥಮಿಕ ಶಾಲೆಯಲ್ಲಿ ತಾಯಿಯೊಂದಿಗೆ ಕಲಿಯುತ್ತಿರುವ ಮಗು.

ಶಾಲೆಯಲ್ಲಿ ಪರಸ್ಪರ ಸಂಜ್ಞೆ ಭಾಷೆಯಿಂದ ಚರ್ಚಿಸುತ್ತಿರುವ ಶಾಲೆಯ ಮಕ್ಕಳು.

ಶುಶ್ರಾವ್ಯ ಶಾಲೆ :-೧೯೯೬ ರಲ್ಲಿ ಕಿವುಡು ಮಕ್ಕಳ ವಸತಿಯುತ ಶಾಲೆಯನ್ನು ಪ್ರಾರಂಭಿಸಿದರೆ ೨೦೦೭ ರಲ್ಲಿ ’ಶುಶ್ರಾವ್ಯ’(ತಾಯಿ ಕೇಂದ್ರೀಕೃತ) ಪೂರ್ವ ಪ್ರಾಥಮಿಕ ಶಾಲೆಯನ್ನು ಕೇವಲ ನಾಲ್ಕು ಮಕ್ಕಳೊಂದಿಗೆ ಪ್ರಾರಂಭಿಸಿತು. ಇದು ಉತ್ತರ ಕರ್ನಾಟಕದಲ್ಲಿ ಮಾದರಿ ಶಾಲೆಯಾಗಿ ಇಂದು ಬೆಳೆದಿದೆ. ಈ ಶಾಲೆಯಲ್ಲಿ ೬ ವರ್ಷದೊಳಗಿನ ಮಗುವಿನ ಶ್ರವಣ ನ್ಯೂನ್ಯತೆಯ ಪ್ರಮಾಣವನ್ನು ಪತ್ತೇ ಮಾಡಿ ಆ ಮಗುವಿಗೆ ಅಷ್ಟೇ ಅಲ್ಲದೇ, ಆ ಮಗುವಿನ ತಾಯಿಗೂ ಸಹ ತರಬೇತಿ ಕೊಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ಮಗು ಮುಂದೆ ಯಾವುದೇ ಸಾಮಾನ್ಯಶಾಲೆಯಲ್ಲಿ ತನ್ನ ಶಿಕ್ಷಣವನ್ನು ಮುಂದುವರೆಸಬಹುದಾಗಿದೆ. ಇಂದು ಒಟ್ಟು ೩೫ ಮಕ್ಕಳು ಸಾಮಾನ್ಯ ಶಾಲೆಯಲ್ಲಿ ತಮ್ಮ ಶೈಕ್ಷಣಿಕ ಜೀವನವನ್ನು ಮುಂದುವರೆಸಿದ್ದಾರೆ.            

ಅಡಲ್ಟ ಡೆಫ್ ಎಜುಕೇಶನ್ :ಎಸ್.ಎಸ್.ಎಲ್.ಸಿ. ಮುಗಿಸಿದ ಮಕ್ಕಳಿಗೂ ಸಹ ಒಂದು ವರ್ಷದ ’ಸೇತು ಬಂಧ’ ತರಬೇತಿಯನ್ನು ಪ್ರಾರಂಭಿಸಿದೆ. ಇಲ್ಲಿ ಸಂಪೂರ್ಣ ಇಂಗ್ಲೀಷ ಮಾದ್ಯಮದಲ್ಲಿ ಬೇಸಿಕ್ ಮೆಥಮೆಟಿಕ್ಸ, ಬೇಸಿಕ್ ಕಂಪ್ಯೂಟರ್, ಬೇಸಿಕ್ ಇಂಗ್ಲೀಷ ಗ್ರಾಮರ್, ಜನರಲ್ ನಾಲೆಜ್ ಹಾಗು ಸೈನ್ ಲ್ಯಾಂಗ್ವೆಜ್‌ಗಳನ್ನು ಕಲಿಸಲಾಗುತ್ತದೆ. ಇದರಿಂದ ನಮ್ಮ ಮಕ್ಕಳು ತಮ್ಮ ಮುಂದಿನ ಹೆಚ್ಚಿನ ವಿದ್ಯಾಭ್ಯಾಸದಲ್ಲಿ ಎದುರಾಗುವ ಇಂಗ್ಲೀಷ ಎಂಬ ಮಾಯೆಯ ಹೊಡೆತದಿಂದ ಪಾರಾಗಿ ತಮ್ಮ ಜೀವನದ ಗುರಿಯನ್ನು ತಲುಪಲು  ಸಹಕಾರಿಯಾಗಿದೆ.      

ಈ ಸಂಸ್ಥೆಯ ಒಂದು ವಿಶೇಷತೆ ಏನೆಂದರೆ, ಇದು ಕೇವಲ ಕಿವುಡು ಮಕ್ಕಳಪ್ರಗತಿಗಾಗಿ ಕೆಲಸ ಮಾಡುತ್ತಿಲ್ಲ. ಅದರ ಜೊತೆಗೆ ೨೦೦೮ ರಂದು ಶಿರಹಟ್ಟಿ ತಾಲೂಕಿನ ೨೪ ಗ್ರಾಮ ಪಂಚಾಯತಿಯ ಅಡಿ ಬರುವ ಗ್ರಾಮಗಳಲ್ಲಿಯ ಎಲ್ಲಾ ವಿಧದ ವಿಕಲಚೇತನರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಹೋಗಿ ಸೇವೆಯನ್ನು ಕೊಡುತ್ತಿದೆ. ಈ ವರ್ಷದ ಕೊನೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ವಿಕಲಚೇತನರಿಗೆ ಸಂಸ್ತೆಯಲ್ಲಿಯ ಸೇವೆಗಳನ್ನು ಮುಟ್ಟಿಸುವಲ್ಲಿ ನಮ್ಮ ಸಿಬ್ಬಂದಿಯ ಪಾತ್ರ ಅತಿ ಮಹತ್ವದ್ದಾಗಿದೆ.

ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಜೆ.ತಟ್ಟಿ ಹಾಗೂ ಆಡಳಿತ ಮಂಡಳಿ ಸದಸ್ಯರ ನೇತೃತ್ವದಲ್ಲಿ ಸಂಸ್ಥೆ ಅಂಗವಿಕಲರ ಕ್ಷೇಮಾಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಸಮಾಜದಲ್ಲಿ ಅವಹೇಳನಕ್ಕೆ ಈಡಾಗುವ ಅಂಗವಿಕಲರನ್ನು  ಮುಖ್ಯವಾಹಿನಿಗೆ ತರುವಲ್ಲಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು. ಈ ಶಾಲೆಯಲ್ಲಿ ಕಲಿತ ಮೂಕ ಹಾಗೂ ಕಿವುಡ ಮಕ್ಕಳು ಇಂದು ಎಲ್ಲರಂತೆ ಸಾಮಾನ್ಯ ಶಾಲೆಗೆ ತೆರಳಿ ಅಭ್ಯಾಸ ಮಾಡುತ್ತಿರುವದನ್ನು ನೋಡಿದಾಗ ಈ ಸಂಸ್ಥೆಯ ಶ್ರಮ ಅರ್ಥವಾಗುತ್ತದೆ. ಸಂಸ್ಥೆಯು ಅಸ್ತಿತ್ವಕ್ಕೆ ಬಂದ ಮೇಲೆ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ವಿಕಲಾಂಗರಿಗೆ ಆಸರೆಯ ಸಂಸ್ಥೆಯಾಗಿ ಬೆಳೆಯುತ್ತಾ, ಈ ಉತ್ತರ ಕರ್ನಾಟಕದಲ್ಲಿ ಶ್ರೇಷ್ಠವಾಗಿರುವ ಕಿವುಡ ಮಕ್ಕಳ ಹೆಮ್ಮೆಯ ಸಂಸ್ಥೆಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್.ಮಹಾಜನಶೆಟ್ಟರ ನಿರಂತರ ಪರಿಶ್ರಮ, ಆಡಳಿತ ಮಂಡಳಿಯ ಸಹಕಾರ, ಸಿಬ್ಬಂದಿಗಳ ಅವಿರತ ಕಾರ್ಯ ಎಲ್ಲವೂಗಳಿಂದ ಇದೊಂದು ಶ್ರೇಷ್ಠ ಗುಣಮಟ್ಟದ ಹಾಗೂ ಆಧುನಿಕ ಶಿಕ್ಷಣವನ್ನು ಈ ಭಾಗದ ವಿಕಲಾಂಗರಿಗೆ ನಿಸ್ವಾರ್ಥದಿಂದ ನೀಡುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎನ್ನಬಹುದು. ಇಲ್ಲಿನ ವಸತಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ ಉತ್ತಮ ಶಿಕ್ಷಣ ನೀಡಲು ಬಯಸಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ೦೮೪೮೭-೨೭೩೩೨೬/ ೯೪೪೮೩೦೯೯೯೪ ಸಂಪರ್ಕಿಸಬಹುದಾಗಿದೆ. 

-ದಿಗಂಬರ  ಎಂ. ಪೂಜಾರ

*****
                                                      

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ವಿಕಲಾಂಗರಿಗೆ ಆಸರೆಯಾಗುತ್ತಿರುವ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಬಿ.ಡಿ.ತಟ್ಟಿ ಸಂಸ್ಥೆ: ದಿಗಂಬರ ಎಂ.ಪೂಜಾರ

  1. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶಾಲೆಯ ಸಿಬ್ಬ೦ದಿಗಳಿಗೆ ನಮನ …ನಿರ೦ತರ ಸಾಗಲಿ ಮನುಜತ್ವ ಸಾರುವ ಈ ಕೈ೦ಕರ್ಯ …. 

Leave a Reply

Your email address will not be published. Required fields are marked *