ವಿಕಲಚೇತನರಿಗಾಗಿ ಸಮನ್ವಯ ಶಿಕ್ಷಣ: ವೈ.ಬಿ.ಕಡಕೋಳ

 
ಶೈಕ್ಷಣಿಕ ಮುಖ್ಯವಾಹಿನಿಯಲ್ಲಿ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಅಗತ್ಯವಿರುವ ಮಕ್ಕಳನ್ನು ಸೇರಿಸಿ ನೀಡುವ ಶಿಕ್ಷಣವನ್ನು ಸಮನ್ವಯ ಶಿಕ್ಷಣ ಎನ್ನುವರು.೧೯೮೬ ರ "ರಾಷ್ಟ್ರೀಯ ಶಿಕ್ಷಣ ನೀತಿ",೧೯೯೦ ರಲ್ಲಿ ವಿಶ್ವಸಂಸ್ಥೆ ಮಂಡಿಸಿದ "ಸರ್ವರಿಗೂ ಶಿಕ್ಷಣ" ೧೯೯೫ ರ "ಅಂಗವಿಕಲ ವ್ಯಕ್ತಿಗಳ ಸಮಾನ ಹಕ್ಕುಗಳ ಸಂರಕ್ಷಣೆ ಹಾಗೂ ವಿಕಾಸ ಕಾಯೆ"ಯು ಅಂಗವಿಕಲ ಮಕ್ಕಳು ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಪಡೆಯುವ ಅವಕಾಶವನ್ನು ಹೊಂದಿ ಅಂತಹ ಮಕ್ಕಳು ಕೂಡ ದೈರ್ಯ ಮತ್ತು ಆತ್ಮವಿಶ್ವಾಸದಿಂದ ಜೀವನವನ್ನು ಎದುರಿಸಬೇಕು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಬೇಕು ಎಂಬುದನ್ನು ತಿಳಿಸಿವೆ.

ಸರಕಾರ ಕೂಡ ವಿಕಲಚೇತನ ಮಕ್ಕಳನ್ನು ೧೦ ವಿಧದಲ್ಲಿ ಗುರುತಿಸುವ ಪ್ರಕ್ರಿಯೆಗೆ ತೊಡಗುವ ಮೂಲಕ ಪ್ರತಿವರ್ಷವೂ ಕೂಡ ಅನೇಕ ಸೌಲಭ್ಯಗಳನ್ನು ಅವರಿಗೆ ಒದಗಿಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ. 
ಶ್ರವಣ ದೋಷ;ಕೇಳಿಸಿಕೊಳ್ಳುವ ಕ್ರಿಯೆಯಲ್ಲಿ ಆಗಿರುವ ಹಾನಿ ಮತ್ತು ಮಾತು ಅಥವ ಭಾಷಾ ಬೆಳವಣಿಗೆಯಲ್ಲಿ ತೊಂದರೆ.

ದೃಷ್ಟಿ ದೋಷ; ದೃಷ್ಟಿದೋಷದಲ್ಲಿ ಹಲವು ವಿಧಗಳು ೧) ಕಣ್ಣುಗಳು ಕೆಂಪಾಗಿ ಸದಾ ಕಣ್ಣಿರು ಬರುವುದು. ೨)ವಿಪರೀತವಾಗಿ ಕಣ್ಣುಜ್ಜುವುದು. ೩) ಕಣ್ಣನ್ನು ಪದೇ ಪದೇ ಮಿಟುಕಿಸುವುದು  ೪) ವಸ್ತುಗಳನ್ನ ನೋಡುವಾಗ ಹುಬ್ಬು ಗಂಟಿಕ್ಕುವುದು ಅಥವ ಮೆಳ್ಳೆಗಣ್ಣು ಇರುವುದು,೫)ಪುಸ್ತಕ ಓದುವಾಗ ಅತೀ ಹತ್ತಿರ ಮತ್ತು ದೂರ ಹಿಡಿದು ಓದುವುದು. ೬) ಕಪ್ಪು ಹಲಗೆಯ ಹತ್ತಿರವೇ ಕುಳಿತುಕೊಳ್ಳುವುದು. ೭) ಇರುಳುಗಣ್ಣಿನ ದೋಷ ಹೀಗೆ ಹಲವು ವಿಧ

ಬುದ್ದಿ ದೋಷ; ಮಿತಿಯುಳ್ಳ ಬುದ್ದಿಶಕ್ತಿ  ಮತ್ತು ಜ್ಞಾಪಕ ಶಕ್ತಿ ಏಕಾಗ್ರತೆ ಶಕ್ತಿ ಕಡಿಮೆ ಇರುವ ಮಕ್ಕಳು ದೈಹಿಕವಾಗಿ ವಿಳಂಬವಾದ ಬೆಳವಣಿಗೆ ಹೊಂದಿರುವವರು.

ಕಲಿಕಾದೋಷ; ಈ ಮಕ್ಕಳುನಿರ್ಧಿಷ್ಠ ಕಲಿಕಾ ತೊಂದರೆಯನ್ನು ಒಂದು ಅಥವ ಹಲವು ವಿಷಯದಲ್ಲಿ ಹೊಂದಿರುವವರು.ಸೂಚನೆಗಳನ್ನು ಪಾಲಿಸುವಂತೆ ಹೇಳಿದಾಗ ಮತ್ತೊಮ್ಮೆ ಹೇಳುವಂತೆ ಕೇಳುವರು ಇವರನ್ನು ಕಲಿಕಾದೋಷದಲ್ಲಿ ಗುರುತಿಸಲಾಗುತ್ತದೆ.

ದೈಹಿಕ ದೋಷ; ಇಂಥ ಮಕ್ಕಳು ದೈಹಿಕವಾಗಿ ಓಡಾಡಲು ತೊಂದರೆ ಅನುಭವಿಸುತ್ತಿರುವವರು. ಅಂಗಾಗ ಅಥವ ಮಾತಿನ ಬೆಳವಣಿಗೆ ಕುಂಠಿತವಾಗಿರುವವರು. ಸ್ನಾಯುಗಳ ಬಿಗಿತ ಅನೈಚ್ಚಿಕ ಚಲನೆಗಳನ್ನು ಹೊಂದಿರುವವರು.

ಬಹುವಿಕಲತೆ: ಒಂದಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ಮಕ್ಕಳು

ಮೆದುಳಿನ ಪಾರ್ಶ್ವವಾಯು(ಸೆರೆಬ್ರಲ್ ಪಾಲ್ಸಿ): ಕೈ ಕಾಲುಗಳು ತಿರುಚಿರುವುದು.ಜೊತೆಗೆ ಕೈಕಾಲುಗಳ ಮೂಳೆಗಳು ಮಡಿಚಲು ಆಗದೇ ಸೆಟೆದು ನಿಂತಿರುವುದು. ತೆವಳುತ್ತಾ ಮುಂದೆ ಸಾಗುವುದು. ಮಗು ಮಲಗಿದ್ದಲ್ಲಿಯೇ ಮಲಗುವುದು ಕೂತಲ್ಲಿಯೇ ಕೂತಿರುವುದು ಹೀಗೆ ಹಲವು ವಿಧಗಳು.

ಆಟಿಸಂ: ಸದಾ ಏಕಾಂಗಿ ಆಗಿರುವುದು. ವಿಚಿತ್ರ ಧ್ವನಿ ಮಾಡುವುದು. ತನ್ನಷ್ಟಕ್ಕೆ ತಾನೇ ಮಾತನಾಡುವುದು. ಬೇಗನೇ ಉದ್ವೇಗಗೊಳ್ಳುವುದು ಇಂಥ ಲಕ್ಷಣವುಳ್ಳ ಮಕ್ಕಳು.

ಸಾಧನ ಸಲಕರಣೆಗಳ ವಿತರಣೆ

ಪ್ರತಿವರ್ಷವೂ ವೈದ್ಯಕೀಯ ತಪಾಸಣಾ ಶಿಬಿರವನ್ನು ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗುತ್ತಿದ್ದು. ಅದೂ ಕೂಡ ಅವರಿಗೆ ಅನುಕೂಲವಾಗುವಂತೆ ತಾಲೂಕಿನ ಆಯ್ದ ಸ್ಥಳದಲ್ಲಿ ವೈದ್ಯರ ತಂಡ ಬರುವ ಮೂಲಕ. ಇಂಥ ಸಂದರ್ಭದಲ್ಲಿ ಆ ಶಿಬಿರದ ದಿನಾಂಕ, ಸಮಯ, ಸ್ಥಳ ಇತ್ಯಾದಿ ಮಾಹಿತಿಯನ್ನು ಸಂಬಂಧಿಸಿದ ಎಲ್ಲ ಶಾಲೆಗಳಿಗೆ ಮುಂಚಿತವಾಗಿ ತಿಳಿಸುವ ಮೂಲಕ ಆ ಶಿಬಿರದಲ್ಲಿ ಮಕ್ಕಳಿಗೆ ವೈದ್ಯರು ಸೂಚಿಸುವ ಅಗತ್ಯವುಳ್ಳ ಸಾಧನ ಸಲಕರಣೆಗಳನ್ನು ಪೂರೈಸುವ ಕಾರ್‍ಯ ಆದ್ಯತೆಯ ಮೇಲೆ ಯೋಜನೆಯ ಮಿತಿಗೆ ಒಳಪಟ್ಟು ಸಲಕರಣೆಗಳ ಪೂರೈಕೆಗೆ ಕ್ರಮ  ಜರುಗುತ್ತಿರುವುದು.   

*****                   

ಸಮನ್ವಯ ಶಿಕ್ಷಣವು ಎಲ್ಲಾ ಮಕ್ಕಳಿಗೂ ಅವರವರ ಅಗತ್ಯಗಳನ್ನು ಆಧರಿಸಿ ನೀಡುವ ಸಮಾನವಾದ ಶಿಕ್ಷಣವಾಗಿದ್ದು ಇಲ್ಲಿ ಮೇಲೆ ಕಾಣಿಸಿದ ವಿವಿಧ ಬಗೆಯ ದೋಷಗಳನ್ನು ಹೊಂದಿದ ಮಕ್ಕಳನ್ನು ಗುರುತಿಸಿ ಸರಕಾರ ವೈದ್ಯಕೀಯ ತಪಾಸಣಾ ಶಿಬಿರ ನಡೆಸುವ ಮೂಲಕ ಇಂಥ ಮಕ್ಕಳಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದು.ಇಂಥ ಮಕ್ಕಳ ಶಿಕ್ಷಣಕ್ಕಾಗಿ ಸಮನ್ವಯ ಶಿಕ್ಷಣ ಪೌಂಡೇಷನ್ ಆರ್.ಸಿ.ಐ ನಿಂದ ಆದ್ಯತೆಯ ಮೇರೆಗೆ ಶಿಕ್ಷಕರಿಗೆ ತರಭೇತಿ ನೀಡುವ ಮೂಲಕ ಅಂಥ ಶಿಕ್ಷಕರು ಇನ್ನಿತರ ಶಿಕ್ಷಕರಿಗೂ ಕೂಡ ಸಮನ್ವಯ ಶಿಕ್ಷಣ ಕುರಿತ ತಿಳುವಳಿಕೆ  ನೀಡುವ ಮೂಲಕ ಸಾಮಾನ್ಯ ಶಿಕ್ಷಕ ಶಿಕ್ಷಕಿಯರು ಕೂಡ ಸಮನ್ವಯ ಶಿಕ್ಷಣ ನೀಡುವಂತೆ ಯೋಜನೆ ರೂಪಿಸಿರುವರು. ಅಷ್ಟೇ ಅಲ್ಲ ಕಳೆದ ವರ್ಷ ಸೇವಾ ಇನ್ ಆಕ್ಷನ್ ಎಂಬ ಸರ್ಕಾರೇತರ ಸಂಸ್ಥೆಯು ೮ ಜಿಲ್ಲೆಗಳಲ್ಲಿ ಸರ್ವ ಶಿಕ್ಷಣ ಅಭಿಯಾನದ ಸಹಯೋಗದೊಂದಿಗೆ "ಬಡ್ತೆ ಕದಂ" ಎಂಬ ಕಾರ್ಯಕ್ರಮವು ಕೂಡ ಜಾಗೃತಿಯನ್ನುಂಟು ಮಾಡಿದೆ.      

ಸಮನ್ವಯ ಶಿಕ್ಷಣದ ಉದ್ದೇಶಗಳು

  • ವಿಶೇಷ ಅಗತ್ಯವುಳ್ಳ ಮಕ್ಕಳು ಸಾಮಾನ್ಯ ಶಾಲೆಗಳಲ್ಲಿ ಕಲಿಯಲು ಅವಕಾಶ ಕಲ್ಪಿಸುವುದು.
  • ವಿಶೇಷ ಅಗತ್ಯವುಳ್ಳ ಮಕ್ಕಳು ಇತರೆ ಮಕ್ಕಳೊಂದಿಗೆ ಸಾಮಾಜಿಕ ಸಂಬಂಧ ಏರ್ಪಡಿಸುವುದು.
  • ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಿಶೇಷ ಕಲಿಕಾ ಸಾಮಗ್ರಿಗಳನ್ನು ಹಾಗೂ ಬೋಧಕರಿಗೆ ಭೋಧನಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ಇತರರಲ್ಲಿರುವ ಋಣಾತ್ಮಕ ಭಾವನೆ ಹೋಗಲಾಡಿಸುವುದು.
  • ಇಂಥ ಮಕ್ಕಳಲ್ಲಿ ದೈರ್‍ಯ,ಆತ್ಮವಿಶ್ವಾಸ ತುಂಬಿ ಅವರನ್ನು ಇತರರಂತೆ ಸ್ವಾವಲಂಬನ ಜೀವನ ನಡೆಸಲು ಅಣಿಗೊಳಿಸುವುದು.

ಗೃಹಾಧಾರಿತ ಕೇಂದ್ರಗಳು
ವಿಕಲಚೇತನರಲ್ಲಿ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ನೀಡುವ ವ್ಯವಸ್ಥೆಯು ಸಮನ್ವಯ ಶಿಕ್ಷಣದ ಒಂದು ಚಟುವಟಿಕೆಯಾಗಿದ್ದು.ಈ ಮಕ್ಕಳಿಗೆ ಅವರ ಮನೆಗಳಿಗೆ ತೆರಳಿ ಅವರ ದೈನಂದಿನ ಕೌಶಲ್ಯವನ್ನು ವೃದ್ದಿಸುವ ಕಾರ್ಯವನ್ನು ಸ್ವಯಂ ಸೇವಕರು ಮಾಡುತ್ತಿದ್ದು ಅಂಥಹ ಸ್ವಯಂ ಸೇವಕರಿಗೂ ಕೂಡ ವೃತ್ತಿಕೌಶಲ್ಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ತರಭೇತಿ ಕೂಡ ಆಯೋಜಿಸುವ ಮೂಲಕ ಅಂಥಹ ಮಕ್ಕಳಿಗೂ ಇಲಾಖೆ ಶಿಕ್ಷಣವನ್ನು ಒದಗಿಸುತ್ತಿದ್ದು.ಪ್ರತಿವರ್ಷ ಅಂಥಹ ಮಕ್ಕಳ ಪ್ರಮಾಣವನ್ನು ಗುರುತಿಸುವ ಮೂಲಕ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ನೀಡುವ ಪರಂಪರೆಯನ್ನು ಇಲಾಖೆ ಕೈಗೊಂಡಿರುವುದು.

ಕರೆಕ್ಟೀವ್ ಸರ್ಜರಿ
೬ ರಿಂದ ೧೪ ವಯೋಮಾನದ ವಿಶೇಷ ಸಾಮರ್ಥ್ಯವಿರುವ ವಿಕಲಚೇತನ ಮಕ್ಕಳಿಗೆ ತುಟಿ, ಕಣ್ಣು, ಕೂಡಿದ ಬೆರಳು ಮತ್ತು ತಿರುಚಿದ ಪಾದ ಇಂಥಹ ಹಲವು ನ್ಯೂನತೆಗಳನ್ನು ಸರಿಪಡಿಸಲು ಕರೆಕ್ಟೀವ್ ಸರ್ಜರಿಯನ್ನು ಆದ್ಯತೆಯನುಸಾರ ಕೈಗೊಳ್ಳಲಾಗುತ್ತಿದ್ದು ಇದರ ಸದುಪಯೋಗ ಕೂಡ ಅನೇಕ ಮಕ್ಕಳಿಗೆ ಈಗಾಗಲೇ ದೊರೆತಿರುವುದು.

ರ್ಯಾಂಪ್ಸ್ ನಿರ್ಮಾಣ
ಪ್ರತಿಯೊಂದು ಶಾಲೆಯೂ ವಿಶೇಷ ಅಗತ್ಯವುಳ್ಳ ಮಕ್ಕಳ ಸ್ನೇಹಿಯಾಗಿರಬೇಕೆಂಬುದು ಸರ್ವ ಶಿಕ್ಷಣ ಅಭಿಯಾನದ ಆಶಯ. ಹೀಗಾಗಿ ಹ್ಯಾಂಡ್ ರೈಲಿಂಗ್ಸ ಸಮೇತ ಶಾಲಾ ಆವರಣ ಹಾಗೂ ಶಾಲೆಗೆ ಹೊಂದಿಕೊಂಡಂತೆ ರ್ಯಾಂಪ್ಸ್ ನಿರ್ಮಿಸಿರುವರು..

ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಜಿಲ್ಲಾದರ್ಶನ ಕಾರ್ಯಕ್ರಮ
೨೦೧೦-೧೧ ನೇ ಸಾಲಿನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಜಿಲ್ಲಾದರ್ಶನ ಕಾರ್‍ಯಕ್ರಮ ಯೋಜಿಸಿ"ಸಮನ್ವಯ ಶಿಕ್ಷಣ"ಮಧ್ಯವರ್ತನೆಯಲ್ಲಿ ಅನುಷ್ಠಾನಗೊಳಿಸಿ ಜಾರಿಗೆ ತರುವ ಮೂಲಕ ಈ ಮಕ್ಕಳು ಸಹ ಜಿಲ್ಲಾದರ್ಶನ ಪ್ರವಾಸ ಕಾರ್‍ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದಾಯಕ ಸಂಗತಿಯಾಗಿದೆ.

ಸಮನ್ವಯ ಶಿಕ್ಷಣ ಬಲಪಡಿಸುವ ನಿಟ್ಟಿನಲ್ಲಿ ವಿಶೇಷ ತರಭೇತಿ ನೀಡುವ ಮೂಲಕ ತಾಲೂಕಾ ಹಂತದಲ್ಲಿ ಐಇಆರ್‌ಟಿ ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿಗಳನ್ನು ಇಲಾಖೆ ಯೋಜಿಸಿದ್ದು.ಅವರಿಗೆ ಹಲವು ಕ್ಲಸ್ಟರ್ ಗಳ ಜವಾಬ್ದಾರಿ ವಹಿಸಿದ್ದು.ಸದರಿ ಸಂಪನ್ಮೂಲ ವ್ಯಕ್ತಿಗಳ ಶಾಲೆಗಳ ಸಂದರ್ಶನ ಮಾಡಿ ಆ ಶಾಲೆಯಲ್ಲಿರುವ ವಿಕಲಚೇತನ ಮಗುವಿನ ಶೈಕ್ಷಣಿಕ ಗುಣಮಟ್ಟ ಹಾಗೂ ಸದರಿ ಮಗುವಿಗೆ ಇಲಾಖೆಯ ಸೌಲಭ್ಯಗಳ ಕುರಿತು ಸಮಾಲೋಚನೆ ನಡೆಸುವ ಮೂಲಕ ಅಂಥ ಮಕ್ಕಳಿಗೆ ಪ್ರೋತ್ಸಾಹ ನೀಡುವರು.

ಸ್ಕಾಲರ್ ಶಿಪ್ ಮತ್ತು ಬಸ್ ಪಾಸ್ ರೈಲ್ವೆ ಪಾಸ್ ಸೌಲಭ್ಯ
ಪ್ರಾಥಮಿಕ ಶಿಕ್ಷಣ ಹಂತದಿಂದ ಹಿಡಿದು ಶೈಕ್ಷಣಿಕವಾಗಿ ಆರ್ಥಿಕ ಸೌಲಭ್ಯವಾಗಿ ಅನುಕೂಲವಾಗುವಂತೆ ಆಯಾ ಹಂತಕ್ಕೆ ನಿಗದಿ ಪಡಿಸಿದ ಸ್ಕಾಲರ್‌ಶಿಪ್ ಪ್ರೋತ್ಸಾಹಧನ ಅಲ್ಲದೇ ಅಂಚೆ ಮೂಲಕವೂ ಕೂಡ ನೇರವಾಗಿ ಅವರ ಮನೆಗಳಿಗೆ ತಲುಪುವಂತೆ ಪ್ರೋತ್ಸಾಹ ಧನ ನೀಡುವ ಸೌಲಭ್ಯ ಕೂಡ ಇದೆ.ಜೊತೆಗೆ ಬಸ್ ಪಾಸ್ ಮತ್ತು ರೈಲ್ವೆ ಪಾಸ್ ಕೂಡ ರಿಯಾಯತಿಯಲ್ಲಿ ನೀಡುವರು. ಸಂಬಂಧಪಟ್ಟ ಸಾರಿಗೆ ರೈಲ್ವೆ ಕಛೇರಿಗೆ ಭೇಟಿ ನೀಡಿದರೆ ಈ ಕುರಿತು ಮಾಹಿತಿ ನೀಡುವರು.

ಪಂಚಾಯತಿ ಮಟ್ಟದಲ್ಲಿಯೂ ಎನ್.ಜಿ.ಓ ನೇಮಕ
ಇತ್ತೀಚಿನ ವರ್ಷಗಳಲ್ಲಿ ವಿಕಲಚೇತನರನ್ನು ಗುರುತಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲು ಕೂಡ ಎನ್.ಜಿ.ಓ ಗಳನ್ನು ನೇಮಕ ಮಾಡಲಾಗುತ್ತಿದೆ.ಅವರು ಸ್ವತಃ ವಿಕಲಚೇತನರನ್ನು ಗುರುತಿಸುವುದು.ಅವರಿಗೆ ಶೈಕ್ಷಣಿಕವಾಗಿ.ಆರ್ಥಿಕವಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ಒದಗಿಸುವುದಲ್ಲದೇ ಆ ದಿಸೆಯಲ್ಲಿ ಕಾರ್ಯ ಮಾಡುತ್ತಿರುವರು.ಪಂಚಾಯತಿಯಲ್ಲಿ ಅಂಥಹ ಎನ್.ಜಿ.ಓಗಳ ಪ್ರತಿನಿಧಿಯಿದ್ದಲ್ಲಿ ಅವರಿಂದ ಕೂಡ ಮಾಹಿತಿ ಪಡೆದು ಸೌಲಭ್ಯ ಪಡೆಯಬಹುದು.

ವಿಶ್ವವಿದ್ಯಾಲಯ ಮಟ್ಟದಲ್ಲಿ ವಿಶೇಷ ಬಿ.ಈಡಿ ತರಭೇತಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದವರು ವೃತ್ತಿ ನಿರತ ಬಿ.ಈಡಿ ಪದವಿ ಪಡೆಯದ ಶಿಕ್ಷಕರಿಗಾಗಿ ಎರಡು ವರ್ಷಗಳ ಬಿ.ಈಡಿ ವ್ಯಾಸಾಂಗವನ್ನು ವಿಕಲಚೇತನ ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿಯೇ ಆರಂಭಿಸಿದ್ದು. ಸಾಮಾನ್ಯ ಬಿ.ಈಡಿ ಪದವಿಗೆ ಸಮಾನ ಶಿಕ್ಷಣ ನೀಡುತ್ತಿದ್ದು. ಇಲ್ಲಿ ತರಭೇತಿ ಪಡೆದು ಬಂದವರಿಗೆ ಮೇಲೆ ತಿಳಿಸಿದ ಹತ್ತು ವಿಧದ ಅಷ್ಟೇ ಅಲ್ಲ ವಿಕಲ ಚೇತನರ ಶಿಕ್ಷಣಕ್ಕೆ ಶಿಕ್ಷಕರು ಅಗತ್ಯ ಸಿದ್ದತೆಯೊಂದಿಗೆ ಹೇಗೆ ಅವರನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರಬಹುದು ಎಂಬುದನ್ನು ನೀಡುತ್ತಿದ್ದು ಇವೆಲ್ಲವುಗಳ ಪ್ರಯೋಜನ ಪಡೆಯಬೇಕು.

ಒಟ್ಟಿನಲ್ಲಿ ಸಮನ್ವಯ ಶಿಕ್ಷಣವು ವಿಶೇಷ ಅಗತ್ಯವುಳ್ಳ ಮಕ್ಕಳು ಸಹ ಇತರೆ ಮಕ್ಕಳೊಡನೆ ಸಮಾನ ಶಿಕ್ಷಣ ಪಡೆಯುವಂತೆ ವಾತಾವರಣ ಕಲ್ಪಿಸುವ ಜೊತೆಗೆ ಅವರಲ್ಲಿ ದೈರ್ಯ ಉತ್ಸಾಹ ತುಂಬುವ ಮೂಲಕ ಸ್ವಾವಲಂಬನ ಜೀವನಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಾರ್‍ಯ ಮಾಡುತ್ತಿದ್ದು ಈ ಮಕ್ಕಳಿಗೆ ಜಿಲ್ಲಾ ಹಂತದಿಂದ ಸ್ಕಾಲರ್ ಶಿಪ್ ಹಾಗೂ ಅಂಚೆ ಮೂಲಕ ಅಂಗವಿಕಲ ಪ್ರೋತ್ಸಾಹ ಧನ ನೀಡುತ್ತಿದ್ದು, ಬಸ್ ಪಾಸ್ ಸೌಲಬ್ಯ ಇನ್ನಿತರ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ವರಿಗೂ ಶಿಕ್ಷಣ ನೀಡುವ ಸಂಕಲ್ಪವನ್ನು ಕೈಗೊಂಡಿರುವುದು.ಸಾಮಾನ್ಯ ಮಕ್ಕಳೊಂದಿಗಿನ ಸಹಚರ್ಯೆದಲ್ಲಿ ಈ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಇವರು "ವಿಶೇಷ ಅಗತ್ಯವಿರುವ ಮಕ್ಕಳಷ್ಟೇ ಅಲ್ಲ ವಿಶೇಷ ಸಾಮರ್ಥ್ಯವಿರುವ ಮಕ್ಕಳು"ಎಂಬ ಅಂಶವನ್ನು ನಿರೂಪಿಸಲು ಇಲಾ ವಿವಿಧ ಕಾರ್‍ಯಕ್ರಮಗಳನ್ನು ಯೋಜಿಸಿರುವುದು.

ವೈ.ಬಿ.ಕಡಕೋಳ

*****         

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಶ್ರೀನಿವಾಸ್ ಪ್ರಭು
ಶ್ರೀನಿವಾಸ್ ಪ್ರಭು
9 years ago

ಕಡಕೋಳರವರೇ,

ಒಳ್ಳೆಯ ಮಾಹಿತಿ ಒಳಗೊಂಡ ಬರಹ ನೀಡಿದ್ದಿರಿ. ಯಾವುದೇ ಸೌಲತ್ತು ಅಗತ್ಯ ಇರುವವರ ಕಾಲ ಬಳಿ ಸಿಗುವಂತೆ, ಮತ್ತು ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸ ಮೊದಲು ಆಗಬೇಕಿದೆ. ಕೆಲವು ಕಡೆ ಇದು ಆಗುತ್ತಿದೆ ಕೆಲವು ತೀರಾ ಹಿಂದುಳಿದ ಪ್ರದೇಶಗಳಲ್ಲಿ ಇನ್ನೂ ಜನರಿಗೆ ಈ ಬಗ್ಗೆ ಅರಿವು ಬಂದಿಲ್ಲ. ಪ್ರತೀ ಹಳ್ಳಿಯಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವುಳ್ಳ ಬೀದಿ ನಾಟಕದಂತಹ ಕಾರ್ಯಕ್ರಮಗಳ ಮೂಲಕ ಸಂದೇಶ ರವಾನೆಯಾಗುವಂತೆ ಮಾಡಲು ನಾವೆಲ್ಲಾ ಕೈ ಜೋಡಿಸಬೇಕಿದೆ. 

prashasti.p
9 years ago

nice info 🙂

2
0
Would love your thoughts, please comment.x
()
x