ವಿಕಟ ವಿನಾಯಕ (ಭಾಗ-2): ಎಸ್. ಜಿ. ಸೀತಾರಾಮ್, ಮೈಸೂರು.

ಚೆಲುಗನ್ನಡದಲ್ಲಿ ಚೆನ್‍ಗಣೇಶ
ಕೆಳಕಾಣುವ “ಕನ್ನಡಗಣೇಶ ಏಕವಿಂಶತಿ ನಾಮಾವಳಿ” ಪಾಠದಲ್ಲಿ “ಓ” ಮತ್ತು “ಕೈಮುಗಿದೆ” ಎಂದು ಪ್ರತಿ ಹೆಸರಿಗೂ ಹಿಂದೆ-ಮುಂದೆ (ಓ ಬೆನಕ! ಕೈಮುಗಿದೆ…ಓ ಆನೆಮೊಗ! ಕೈಮುಗಿದೆ ಎಂಬಂತೆ) ಸೇರಿಸಿಕೊಂಡು ಜಪಿಸಿದವರಿಗೆ ವಿಘ್ನಪತಿಯು ಅಪವಿಘ್ನದ ಅಭಯವನ್ನೀವನು. ಕನ್ನಡರಕ್ತವನ್ನು ಉಕ್ಕೇರಿಸಿ, ಅಂಥವರನ್ನು “ಕನ್ನಡ ಚೆನ್ನೈದಿಲು” ಮಾಡುವನು ಎಂದು “ಬೆನಕ ಬಲ್ಮೆ” ಎಂಬ ಹವಳಗನ್ನಡ ಕೃತಿಯು ವಿಶಿಷ್ಟವಾಗಿ ವಿಶದಪಡಿಸಿದೆ.

ಬೆನಕ= ವಿನಾಯಕ
ಪಿಳ್ಳಾರಿ (ಪಿಳ್ಳೆ)= ಬಾಲಗಣಪತಿ 
ಆನೆಮೊಗ= ಆನೆಯ ಮುಖದವನು 
ಸುಂಡಿಲಮೊಗ= ಸೊಂಡಿಲ ಮುಖದವನು
ಇಲಿದೇರ= ಇಲಿಯನ್ನು ತೇರಾಗಿ ಚಲಿಸುವನು
ಬಿಂಕಣಗಿವಿಯ (ಬಿಂಕಣ: ಬೀಸಣಿಗೆ)= ಬೀಸುಕಿವಿಯವನು (ಚಾಮರಕರ್ಣ)    
ಪೆರ್ಬೊಡೆಯ (ಪೆರ್: ದೊಡ್ಡ; ಪೆÇಡೆ: ಹೊಟ್ಟೆ)= ದೊಡ್ಡಹೊಟ್ಟೆಯವನು (ಲಂಬೋದರ)
ಎಡರ್‍ಗೇಡಿ (ಎಡರು: ವಿಘ್ನ; ಕೇಡಿ: ಕೆಡಿಸುವವನು)= ವಿಘ್ನನಾಶಕ
ಎಲರ್‍ಉಣಿವಸಿರ (ಎಲ: ಗಾಳಿ; ಉಣಿ: ಉಣ್ಣುವುದು; ಎಲರುಣಿ: ಹಾವು; ವಸಿರ: ಬಸಿರು: ಹೊಟ್ಟೆ)= ಹೊಟ್ಟೆಯ ಸುತ್ತ ಹಾವುಳ್ಳವನು (ನಾಗಬದ್ಧೋದರ)
ಎಡರೊಡೆಯ= ವಿಘ್ನರಾಜ
ಮೊದಲಾಣ್ಮ= ಜ್ಯೇಷ್ಠರಾಜ-ಆದಿದೇವ ಗಣೇಶ
ಅರಿವುಸೊಡರ್ (ಜ್ಞಾನದೀಪ)= ಜ್ಞಾನ ಹಚ್ಚುವವನು
ನಂಜನಮಗ= ಈಶಪುತ್ರ ಗಣೇಶ
ನವಿಲ್ದೇರನೊಡಹುಟ್ಟುಗ= ಸುಬ್ರಹ್ಮಣ್ಯ (ನವಿಲುವಾಹನ) ಸಹೋದರ
ನಲ್ಮೊಗ= ಸುಮುಖ (ಹಸನ್ಮುಖಿ ಗಣೇಶ) 
ಡೊಂಕಸುಂಡಿಲ= ವಕ್ರತುಂಡ
ಹೆಬ್ಬೊಡಲ= ಮಹಾಕಾಯ
ಮೊರಗಿವಿಯ= ಮೊರದಂಥ ಕಿವಿಯುಳ್ಳವನು (ಶೂರ್ಪಕರ್ಣ) 
ಕಾಯ್ಗಡುಂಬು ಕಾದಲ= ಮೋದಕಪ್ರಿಯ
ಎಳೆಗರಿಕೆನಲ್ಲ= ಬಾಲದೂರ್ವಾಂಕುರಪ್ರಿಯ 
ಇನಿವಿಲ್ ಇನಿಯ (ಇನಿ: ಸಿಹಿ; ವಿಲ್: ಬಿಲ್ಲು; ಇನಿವಿಲ್: ಕಬ್ಬುಜಲ್ಲೆ; ಇನಿಯ: ಪ್ರಿಯ)= ಕಬ್ಬುಜಲ್ಲೆ ಇಷ್ಟಪಡುವವನು 

||ಓ! ಕನ್ನಡಬೆನಕಣ್ಣ, ಇಪ್ಪತ್ತು ಮತ್ತೊಂದು ಪೊಡಮಡಿಕೆಗಳನಿದೆಕೊ||

* ಟಿಪ್ಪಣಿ: 1) ಇದರಲ್ಲಿ ಮೊದಲ 9 ಹೆಸರುಗಳು ಸಾಹಿತ್ಯದಲ್ಲಿರುವಂಥವು. ಆದರೆ, ಕಡೆಯ 12 ಹೆಸರುಗಳು, ಮತ್ತು ಅದೇ ರೀತಿ, ಈ ಲೇಖನಕ್ಕೆ ಪ್ರವೇಶವಿತ್ತಿರುವ “ಅಕಟವಿಕಟ ನುಡಿಕಟ್ಟು”, ಈ ಸಂದರ್ಭಕ್ಕಾಗೆಂದೇ ಟಂಕಿಸಲ್ಪಟ್ಟಿದ್ದು, ಆಕರ-ಆಧಾರಗಳಿಲ್ಲದಂಥವು. ಇವುಗಳನ್ನು ಓದಿದವರು ಮತ್ತಷ್ಟು ನುಡಿಗಳನ್ನು ಟಂಕಿಸಿ, ನಗೆಗನ್ನಡದ ನರುಗನ್ನು ನೆರೆಹೊರೆಯಲ್ಲಿ ನೆಗೆಸಬಹುದು. 2) “ನಂಜ” ಎಂದರೆ “ಶಿವ” ಆಗಿದ್ದು, ಗೌರಿಯನ್ನು “ನಂಜಿ” ಎನ್ನಬಹುದು. “ಗೌರ” ಎಂಬುದು “ನಸುಹೊಂಬಣ್ಣ ಅಥವಾ ನಸುಗೆಂಪು ಅಥವಾ ಬಿಳುಪು” ಎಂದಾಗುವುದರಿಂದ, ಗೌರಿಯನ್ನು “ಬಂಗಾರಿ”, “ಕೆಂಚಿ”, “ಬಿಳಿಚಿ” ಎಂದೂ ಕರೆಯಬಹುದು. ಹಾಗಾಗಿ, ಸ್ತ್ರೀವಾದಿ-ಕನ್ನಡವಾದಿಗಳು ಗಣೇಶನನ್ನು “ನಂಜಿಮಗ, ಬಂಗಾರಿಮಗ, ಕೆಂಚಿಮಗ, ಬಿಳಿಚಿಮಗ” ಎಂದು ಕರೆದು ಹರ್ಷಿಸಬಹುದು. 3) “ಗೌರ” ಎಂಬಷ್ಟೇ ಗಣೇಶನಿಗೆ ಹತ್ತಿರವಾಗಿರುವುದು “ಗೌಡ”, ಅಂದರೆ “ಗುಡ” ಅಥವಾ “ಬೆಲ್ಲ” ಮೂಲದ ತಿಂಡಿಗಳು. “ಗುಡ” ಎಂದೊಡನೆ “ಗುಡ್!” ಎಂದು ಆತ ಸ್ವಾಗತಿಸಿದನೆಂದೇ ಅರ್ಥ. 4) ವಿನಾಯಕನ ಅಂಗಪೂಜೆಯೊಂದನ್ನು ನಡೆಸುವಾಗ, “ಭಗ್ನ ವಾಮರದಾಯ” ಎಂದು ಬರುತ್ತದೆ. ಇದನ್ನು ಅನುವಾದಿಸಿದರೆ, “ಎಡ ಹಲ್ಮುರುಕನೇ” ಎಂದಾಗಿ, ಸಂಸ್ಕೃತವನ್ನು ಕನ್ನಡಿಸಿದಾಗ ಎಂಥ “ಆಘಾತ-ಆಭಾಸ” ಆಗಬಹುದು ಎಂಬುದನ್ನು ಸೂಚಿಸುತ್ತದೆ. ಈ ಮುಂದೆ ವಿವರಿಸಲಾಗುವ “ಸ್ಯಮಂತಕ ಶ್ಲೋಕದ ಕನ್ನಡ ಯಥಾರ್ಥ” ತಿಳಿದಾಗಲೂ ಇದೇ ರೀತಿಯ ಮುಜುಗರವಾಗಿ, “ಕನ್ನಡ ಬೇಡ; ಸಂಸ್ಕೃತದಲ್ಲೇ ಇವೆಲ್ಲ ಇದ್ದುಕೊಳ್ಳಲಿ” ಎಂಬ ವಿಚಿತ್ರ ವೈರಾಗ್ಯ ಮೂಡಬಹುದು. ಅರ್ಥಕ್ಕೆ ತಲೆಕೆಡಿಸಿಕೊಳ್ಳದೆ ಭಕ್ತಿಮಾತ್ರದಿಂದ ಸ್ವೀಕರಿಸಿದವರಿಗೆ ಈ ಯಾವ ಗೊಂದಲವೂ ಕಾಣದೆ ಇದ್ದೀತು!

ವಿಶೇಷ ವಿಘ್ನೇಶ
> ಆನೆಮುಖದ, ಜೋಲುಹೊಟ್ಟೆಯ, ಗರಿಕೆ-ಕಡುಬು ಮೆಲ್ಲುವ, ಹಾವುಬೆಲ್ಟ್ ಕಟ್ಟಿ ಇಲಿಬೆನ್ಜ್ ಓಡಿಸುವ “ಮುದ್ದುಮರಿ” ಗಣೇಶನನ್ನೇ ಜನರು ಸಾಧಾರಣವಾಗಿ ಕಾಣುತ್ತಿದ್ದು, ಆತನು ವಿಘ್ನನಾಶಕನಷ್ಟೇ ವಿಘ್ನಕಾರಕನೂ ಆಗಿರುವ ಪರಸ್ಪರ ವಿರುದ್ಧಲಕ್ಷಣಗಳ ಸಂಗತಿಯು ಸಾರ್ವಜನಿಕ ಆಸಕ್ತಿಯನ್ನು ಸೆಳೆದಿಲ್ಲ. “ವಿಘ್ನ” ಎಂಬುದು ಒಂದೆಡೆ “ಅಡಚಣೆ” ಎಂದಾದರೆ, ಇನ್ನೊಂದೆಡೆ “ತಡೆಯುವುದು, ಒಡೆಯುವುದು, ನಾಶಮಾಡುವುದು” ಎಂದಾಗುತ್ತದೆ. ಹಾಗಾಗಿ, “ವಿಘ್ನನಾಯಕ” ಎಂದರೆ “ಅಡಚಣೆಗಳನ್ನು ಮುಂಚಾಲಿಸುವವನು” ಎಂದಾಗುತ್ತದೆ, “ಅಡಚಣೆಗಳನ್ನು ತೆಗೆದುಹಾಕುವವನು” ಎಂದಲ್ಲ. (ಆತನನ್ನು “ಉಗ್ರಾಯ” ಎಂದೂ ಪೂಜಿಸುತ್ತಾರೆ ಎಂದು ಇಲ್ಲಿ ನೆನೆಯಬಹುದು.) “ಅಡಚಣೆ ಮಾಡುವವನು”, ಹಾಗಾಗಿ “ಅಡಚಣೆಗಳಿಗೂ ಅಡಚಣೆ ಮಾಡಿ ಅವುಗಳನ್ನು ನಿಷ್ಕ್ರಿಯಗೊಳಿಸುವವನು (ವಿಘ್ನಘ್ನ)” ಎಂಬ “ದ್ವಂದ್ವ ನಕಾರ” (ಡಬಲ್ ನೆಗೆಟಿವ್) ವ್ಯಾಖ್ಯಾನದಲ್ಲಿ, ಅಥವಾ “ದೇವನು ಅದೂ ಹೌದು, ಇದೂ ಹೌದು” ಎಂಬ ಚಿಂತನೆಯಲ್ಲಿ, ಇದಕ್ಕೆ ಅರ್ಥ ದೊರಕಬಹುದು. ಈ ದ್ವಂದ್ವ ಸಂಗತಿಯು ನಿಜಕ್ಕೂ ಸ್ವಾರಸ್ಯಕರ, ಚಿಂತನಾರ್ಹ.

 

ಗಣೇಶನು “ಪ್ರಮಥನಾಥ” ಕೂಡ ಎಂಬುದು ಈ ಚರ್ಚೆಯಲ್ಲಿ ಉಲ್ಲೇಖನೀಯ. “ಮಥನ” ಎಂದರೆ “ಕಡೆಯುವುದು, ಉಜ್ಜುವುದು, ಪೀಡಿಸುವುದು, ಹಿಂಸಿಸುವುದು, ನಾಶಪಡಿಸುವುದು” ಎಂದಾಗಿ, ಈ ಗುಣದಿಂದ ವರ್ತಿಸುವ “ಪ್ರಮಥ” ಎಂಬುವ ಗಣವೇ ಒಂದಿದ್ದು, ಗಣೇಶ ಮತ್ತು ಶಿವ ಇಬ್ಬರನ್ನೂ ಅದಕ್ಕೆ ನಾಯಕರೆಂದು ಗುರುತಿಸಲಾಗುತ್ತದೆ.  ಆ ಕಾರಣದಿಂದ, ಪ್ರಥಮಪೂಜೆಯನ್ನು “ಪ್ರಮಥನಾಥ” ಗಣನಾಥನಿಗೆ ಸಲ್ಲಿಸಿ, ಆತನನ್ನು ಷೋಡಶೋಪಚಾರ ಪೂಜೆಗಳಿಂದ “ರಮಿಸಿ,” ಎಲ್ಲಕ್ಕೂ ಮೊದಲು ವಿಘ್ನಶಾಂತಿಯನ್ನು ಆಹ್ವಾನಿಸಲಾಗುತ್ತದೆ.  

> ಮಹಾರಾಷ್ಟ್ರದ ಸಾಂಗ್ಲಿಯಲ್ಲಿ “ಚೋರ್ ಗಣಪತಿ” ದೇವಸ್ಥಾನವಿದೆ. ಕನ್ನಡ “ಟಿ.ವಿ. ಗುರು” ಒಬ್ಬರೂ, “ಚೋರ ಗಣಪತಿ ಪೂಜಾವಿಧಾನ” ಬೋಧಿಸಿರುತ್ತಾರೆ. ಬೇರೆ ದೇವರುಗಳ ಪೂಜೆಯಿಂದ ಬರುವ ಪೂಜಾಫಲವನ್ನು ಅಪಹರಿಸದಿರುವಂತೆ ಗಣಪತಿಗೆ “ಚೋರಮಂತ್ರ” ಅರ್ಪಿಸಬೇಕು, ಮತ್ತು ಹಾಗಾಗುವುದರಿಂದ “ಹಲವಾರು ಗಣಪತಿಗಳು” ಒಮ್ಮೆಲೇ ಸಂತುಷ್ಟರಾಗುವರೆಂದು ನಂಬಲಾಗುತ್ತದೆ. ಇದೇ ವಿಚಿತ್ರವೆನಿಸಿದರೆ, ಗಂಡುಗಣಪತಿ-“ಹೆಣ್ಣುಗಣಪತಿ” (ವಿನಾಯಕಿ, ಗಣೇಶಾನಿ, ಗಣವತಿ?) ಅಪ್ಪುಗೆಯ ಎರಡುಮುಖಗಳುಳ್ಳ ಮತ್ತು ವಿವಿಧ ಹಸ್ತಗಳಲ್ಲಿ ವಿವಿಧ ಆಯುಧ-ವಸ್ತುಗಳನ್ನುಳ್ಳ ಜಪಾನಿ-ಚೀನಿ ತಾಂತ್ರಿಕಬೌದ್ಧರ “ಕಾಂಗೀ-ತೆನ್” (“ಪರಮಾನಂದ ಪರಮಾತ್ಮ”) ಗಣಪತಿಯನ್ನು ಏನೆನ್ನಬೇಕು? ಹಾಗೆಯೇ, ಮಂಗೋಲಿಯಾ, ಟಿಬೆಟ್ (ತ್ರಿವಿಷ್ಟಪ), ಆಫ್ಘಾನಿಸ್ತಾನ (ಗಾಂಧಾರ), ಬರ್ಮ (ಬ್ರಹ್ಮದೇಶ) ಮೊದಲಾದೆಡೆಗಳಲ್ಲಲ್ಲದೆ, ತಾಯ್‍ಲ್ಯಾಂಡ್ (“ಸಯಾಮ್” ಅಥವಾ “ಶ್ಯಾಮ” ದೇಶ; ತಾಯಿಭೂಮಿಯ “ವಿಘ್ನೇಶ-ಗಣೇಶ”, ತಾಯ್‍ಲ್ಯಾಂಡ್‍ನಲ್ಲಿ “ಫಿಕನೇಸುಅನ್-ಫಿಕ್ಕನೇತ್-ಕಣೇತ್” ಆಗಿದ್ದಾನೆ; ಈ ಹೆಸರುಗಳಿಗೆ “ಫ್ರ” ಅರ್ಥಾತ್ “ವರ” ಎಂಬ ಗೌರವನಾಮವನ್ನೂ ಸೇರಿಸುವುದುಂಟು), ಕಾಂಪೂಚಿಯಾ (“ಕುಂಭಜ” ಅಗಸ್ತ್ಯನ ದೇಶ?; ಇಲ್ಲಿ ಗಣೇಶ “ಕನೇಸ್” ಆಗಿದ್ದಾನೆ), ಇಂಡೋನೇಶ್ಯಾ ಮತ್ತು ಮಲೇಶ್ಯಾಗಳಲ್ಲಿ ವಿಶೇಷ್ಯ ವಿಘ್ನೇಶ ವ್ಯಕ್ತನಾಗುತ್ತಾನೆ. ತಾಯ್‍ಲ್ಯಾಂಡ್ ಒಂದು ಅಪೂರ್ವ “ಗಣೇಶ ಪಾರ್ಕ್” ನಿರ್ಮಿಸಿದೆ ಮತ್ತು ಆ ಸೀಮೆಯಲ್ಲಿ “ಲಾಫಿಂಗ್ ಬುದ್ಧ” ಮಾದರಿ, ಗಣೇಶನ ಮೂರ್ತಿಯನ್ನೂ, “ತಾಯಿತ” ಎಂದು ಆದರಿಸುತ್ತಾರೆ. ಏಶ್ಯಾಕ್ಕೆ “ಆಗ್ನೇಯ ವಿಘ್ನೇಶ”, ಸಂಶೋಧಕರಿಗೆ “ಅಜ್ಞೇಯ ವಿಘ್ನೇಶ”, ಈ ತೆರನಾಗಿ ಗಜಮುಖನು ಬಹುಮುಖನಾಗಿ “ವಿಶ್ವವಂದ್ಯ” ಆಗಿಬಿಟ್ಟಿದ್ದಾನೆ. 

> “ಶಮ” ಎಂದರೆ “ಶಾಂತಿ”, ಅದನ್ನು “ಅಂತ”ಗೊಳಿಸುವುದು, ಅರ್ಥಾತ್ (ಕಾಮದೇವನಂತೆ) ನೆಮ್ಮದಿ ಕೆಡಿಸಿ, ಆಸೆ ಕೆರಳಿಸುವುದೇ, “ಶಮಂತಕ.” ಇದನ್ನೇ ಹಿಂದಿನ ಪುಟವೊಂದರಲ್ಲಿ ಲಘುವಾಗಿ ಬಳಸಿ (“ಹಾ-ಸ್ಯಮಂತಕ!”), “ಶಮಂತಕ” ಮಣಿ ಎನ್ನಲಾಗಿದೆ. ಪುರಾಣಪ್ರಸಿದ್ಧ “ಸ್ಯಮಂತಕ” ಮಣಿಯೇ ಬೇರೆ.

> ಸ್ಯಮಂತಕ ಮಣಿಹರಣ ಕಥೆ ಕೇಳಿದೊಡನೆ ಮೂರುಬಾರಿ ಜಪಿಸಬೇಕೆನ್ನುವ “ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ| ಸುಕುಮಾರಕ ಮಾರೋದೀಸ್ತವಹ್ಯೇಷಃ ಸ್ಯಮಂತಕಃ||” ಶ್ಲೋಕದ ಅರ್ಥವೇನಿರಬಹುದು? “ಪ್ರಸೇನನನ್ನು ಸಿಂಹವು ಕೊಂದಿತು. ಸಿಂಹವನ್ನು ಜಾಂಬವಂತನು ಕೊಂದ. ಎಲೈ ಮುದ್ದು ಕುಮಾರನೆ (ಸುಕುಮಾರಕ), ಅಳಬೇಡ (ಮಾ ರೋದೀ), ಈ ಸ್ಯಮಂತಕಮಣಿಯು ನಿನ್ನದೇ! (ತವಹ್ಯೇಷಃ ಸ್ಯಮಂತಕಃ)”ಎಂದಷ್ಟೇ ಇಲ್ಲಿನ ಅರ್ಥವಿವರಣೆ! (ಇದು ತಿಳಿದ ತರುವಾಯ ಸ್ಯಮಂತಕೋಪಾಖ್ಯಾನದ ಬಗ್ಗೆ ಕೋಪ ಬಂದರೆ, “ಬೃಹದಾರಣ್ಯಕೋಪನಿಷತ್” ಕೇಳಿ, ಕೋಪ ತಗ್ಗಿಸಿಕೊಳ್ಳಬಹುದು!)

> “ವಿಗ್ನ” ಎಂದರೆ “ನಡುಗುತ್ತಿರುವ”, “ಗಾಬರಿಯಾಗಿರುವ”, “ಕೆರಳಿರುವ” ಇತ್ಯಾದಿ; “ವಿಘನ” ಎಂದರೆ “ಗಾಯಮಾಡುವಂಥ”, “ಸುತ್ತಿಗೆ/ಕೊಡತಿ” ಇತ್ಯಾದಿ; “ವಿಗಾನ” ಎಂದರೆ “ಅಸಂಬದ್ಧ”, “ಜಿಗುಪ್ಸೆ” ಇತ್ಯಾದಿ; “ವಿನಾಯಕ” ಎಂದರೆ “ಆಚೆಗೊಯ್ಯುವ”, “ನಿವಾರಕ”, “ಪ್ರಮುಖ”, “ಅಡಚಣೆ”, “ನಾಯಕರಹಿತ” ಇತ್ಯಾದಿ; “ವೈನಾಯಿಕಾ” ಎಂದರೆ “ವೈನಾಯಕ” (ವಿನಾಯಕ-ಸಂಬಂಧಿತ) ಎಂಬುದರ ಸ್ತ್ರೀಲಿಂಗ; “ವೈನಾಯಿಕ” ಎಂದರೆ “ಬೌದ್ಧ”; “ವೈನಯಿಕ” ಎಂದರೆ “ವಿನಯ” ಅಥವಾ ಒಳ್ಳೆನಡತೆಗೆ ಸಂಬಂಧಿತ (ವಿನಯವುಳ್ಳ ಕನ್ನಡಿತಿ “ವಿನಯಕ್ಕ” ಆಗುವಳೇ!); “ವಿಘ್ನ-ನಾಯಕ” ಎಂದರೆ ವಿಘ್ನಗಳಿಗೆ ಮುಖಂಡ; “ವಿಘ್ನ-ವಿನಾಯಕ” ಎಂದರೆ “ವಿಘ್ನಗಳನ್ನು ತೆಗೆದುಹಾಕುವವನು” – ಈ ಬಗೆಯಲ್ಲಿ ಅಕ್ಷರಗಳ ತುಸು ವ್ಯತ್ಯಾಸದಲ್ಲಿ ಮೂಲ ಅರ್ಥಗಳೇ ಬದಲಾಗುವುವು ಎಂಬುದು ಗಮನಾರ್ಹ. (“ವಿಘ್ನ-ವಿನಾಯಕ” ವಿಘ್ನವನ್ನು ಆಚೆಗೊಯ್ದರೆ, “ಸಿದ್ಧಿ-ವಿನಾಯಕ” ಸಿದ್ಧಿಯನ್ನು ಆಚೆಗೊಯ್ವನೇ?!)

ವಿನಾಯಕನ ವಿನಿಕೆಗಾಗಿ
      “ಘನೇಶ” ಎಂಬುವರಿಗೆ ಘನತೆ-ಗೌರವಗಳ ಜೀವನ, “ಗಾನೇಶ” ಎಂಬುವರಿಗೆ ಗಾನಾನಂದ, “ಗಹನೇಶ” ಎಂಬುವರಿಗೆ ಕಠಿಣಕಡಲುಗಳನ್ನು  ಕಡೆಹಾಯುವ ಕಸುವು, “ಗಮನೇಶ” ಎಂಬುವರಿಗೆ ಏಕಾಗ್ರಚಿತ್ತ, “ಗುಣೇಶ” ಎಂಬುವರಿಗೆ ಗುಣಸಂಪನ್ನತೆ, “ಸಿದ್ಧೀಶ” ಎಂಬುವರಿಗೆ ಸಫಲತೆ, “ಬುದ್ಧೀಶ” ಎಂಬುವರಿಗೆ ಬುದ್ಧಿವೈಭವ, “ವಿಘ್ನಹರ” ಎಂಬುವರಿಗೆ ವಿಘ್ನಪರಂಪರೆಗಳನ್ನು ವಿಧ್ವಂಸಗೊಳಿಸುವ ವೀರಗುಣ, “ನಿಧಿಪ” ಎಂಬುವರಿಗೆ ಧನಾಢ್ಯತೆ, “ಲಂಬೋದರ” ಎಂಬುವರಿಗೆ ಸುದೃಢತೆ, “ಸುಮುಖ” ಎಂಬುವರಿಗೆ ನಲ್ಮೊಗ (ಸೌಂದರ್ಯ), “ವಿಕಟ” ಎಂಬುವರಿಗೆ ನಲ್ಸೊಗ (ಉಲ್ಲಾಸ), “ಮೋದಕವಲ್ಲಭ” ಎಂಬುವರಿಗೆ ನಲ್ಲುಣಿಸು (ರಸಪಾಕ), “ಗಣಪತಿ” ಎಂದವರಿಗೆ “ಘನಪ್ರೀತಿ” – ಹೀಗೆ ನಿನಗೆ ವಿಧವಿಧವಾಗಿ ವಿಮಲಮನದಿಂದ ವಿಜ್ಞಾಪಿತವಾದುದಕ್ಕೆ ವಿಘ್ನರಹಿತ ವಿಜಯವಿರಿಸು! ‘ವಿಘ್ನರಾಜ ಕತೆ’ ಕೇಳಿದಲ್ಲಿ ‘ಅ-ರಾಜಕತೆ’ ಇಲ್ಲವಾಗಿಸಿ, ಪ್ರಜೆಗಳಿಗೆ ಜ್ಯೇಷ್ಠರಾಜರ ಆಳ್ವಿಕೆಯನ್ನು ಕೊಡಿಸು! ಅಖಿಲಾನಂದವನ್ನು ಪ್ರೇರಿಸುವ ಒಂದು ನವನೂತನ “ಮಹಾನಂದ ಮಹಾಭಾರತ” ಬರೆದು ಕೊಡು! ಪ್ರಜಾಪ್ರಭುತ್ವಕ್ಕಿಂತಲೂ ಪ್ರಧಾನವಾದ ಪ್ರಜ್ಞಾಪ್ರಭುತ್ವವು ಪ್ರಪಂಚದಿಡೀ ಪ್ರಸರಿಸುವಂತಾಗಿಸು!
ಬಾರಯ್ಯ, ಬುವಿಯೆಲ್ಲ ಬೆಳಗುವ ಬೆನಕ!!!

||~0~|| 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x