ಲೇಖನ

ವಿಂಡೀಸ್ ಪಾಲಿಗೆ ಒಬ್ಬನೇ ಶಿವ, ಒಬ್ಬನೇ ಚಂದ್ರ: ಆದರ್ಶ ಯು ಎಂ

ನೀವು ತೊಂಭತ್ತರ ದಶಕದಿಂದ ಕ್ರಿಕೆಟ್ ನೋಡುವವರಾಗಿದ್ದರೆ ನಿಮಗೆ ಶಿವನಾರಾಯಣ್ ಚಂದ್ರಪೌಲ್ ನೆನಪಿನಲ್ಲಿ ಇದ್ದೇ ಇರುತ್ತಾನೆ, ಹೆಚ್ಚೂ ಕಡಿಮೆ ಬೌಲರ್ ಗೆ ಅಡ್ಡವಾಗಿ ನಿಲ್ಲುವ ಆತನ ಬ್ಯಾಟಿಂಗ್ ಶೈಲಿಯನ್ನು ಮರೆಯಲಾದರೂ ಹೇಗೆ ಸಾಧ್ಯ? ಶಿವನಾರಾಯಣ್ ಚಂದ್ರಪಾಲ್ ನ ವಂಶದ ಹಿಂದಿನವರು ಜೀತ ಪದ್ಧತಿಯಿಂದ ಭಾರತದಿಂದ ವೆಸ್ಟ್ ಇಂಡೀಸ್ ಗೆ ಹೋಗಿ ನೆಲೆಸಿದರು ಅಂತ ಇತಿಹಾಸ ಹೇಳುತ್ತದೆ. ಅಂತಹ ವಂಶದ ಚಂದ್ರಪಾಲ್ ಮುಂದೆ ವೆಸ್ಟ್ ಇಂಡೀಸ್ ತಂಡದ ಆಧಾರ ಸ್ಥಂಭವಾಗಬಲ್ಲ ಅಂತ ಅಂದು ಜೀತದಾಳುಗಳಾಗಿದ್ದ ಆತನ ಪೂರ್ವಜರಿಗೆ ಗೊತ್ತಿರಲಿಲ್ಲವೇನೋ.

ಚಂದ್ರ ಪಾಲ್ ತಂಡ ಸೇರಿದಾಗ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಟಾರ್ ಆಟಗಾರರು ಜಾಸ್ತಿಯಿದ್ದರು, ಅಂತಹ ತಂಡದಲ್ಲಿ ಮೊದಲ ಮೂರು ವರ್ಷ ಒಂದು ಶತಕವನ್ನೂ ಹೊಡೆಯದೇ ತನ್ನ ಅಸಂಪ್ರದಾಯಿಕ ನಿಲುವಿನೊಂದಿಗೆ ಚಂದ್ರಪಾಲ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಆಮೇಲೆ ಶಿವನಾರಾಯಣ್ ಚಂದ್ರಪಾಲ್ ಗಳಿಸಿದ್ದು ಬರೋಬ್ಬರೀ ಇಪ್ಪತ್ತು ಸಾವಿರ ಅಂತರಾಷ್ಟ್ರೀಯ ರನ್ ಗಳು ಹಾಗೂ ಆಕರ್ಷಕ 41 ಅಂತರಾಷ್ಟ್ರೀಯ ಶತಕಗಳು. ಚಂದ್ರಪಾಲ್ ಎಂತಹ ಸಾಧಕ ಅಂತ ಇದು ತಿಳಿಸುತ್ತದೆ.

ಚಂದ್ರಪಾಲ್ ನ ವಿಶೇಷತೆಯಂದರೆ ಟೆಸ್ಟ್ ನಲ್ಲಿ ಅವುಡುಗಚ್ಚಿ ನಿಲ್ಲುತ್ತಿದ್ದರೂ ಕೇವಲ ರಕ್ಷಣಾತ್ಮಕ ಆಟ ಮಾತ್ರವಲ್ಲದೇ ಬಿರುಸಿನ ಹೊಡೆತಗಳನ್ನು ಆಗಾಗ ಹೊಡೆಯುತ್ತಿದ್ದ, ಕೊನೆಯ ಎಸೆತದಲ್ಲಿ ಚಮಿಂಡಾ ವಾಸ್ ಬೌಲಿಂಗ್ ನಲ್ಲಿ ಸಿಕ್ಸರ್ ಹೊಡೆದು ತಂಡ ಗೆಲ್ಲಿಸಿದ್ದ. ಟೆಸ್ಟ್ ನಲ್ಲಂತೂ ಚಂದ್ರಪಾಲ್ ನಿಂತಿದ್ದಾನೆ ಅಂದರೆ ಜಯ ಸಾಧ್ಯವಿಲ್ಲ ಅಂದುಕೊಳ್ಳುತ್ತಿದ್ದ ದಿನಗಳೂ ಇದ್ದವು, ಈತ ನಮ್ಮ ಆರ್ ಸಿ ಬಿ ಗೂ ಮೊದಲ ಆವೃತ್ತಿಯಲ್ಲಿ ಆಡಿದ್ದ ಅಂದರೆ ಕೆಲವರಿಗಷ್ಟೇ ನೆನಪಾಗಬಹುದು.
ಚಂದ್ರಪಾಲ್ ಗೆ 2008 ರಲ್ಲಿ ಐಸಿಸಿ ಯ ವರ್ಷದ ಅತ್ಯುತ್ತಮ ಬ್ಯಾಟ್ಸ್ ಮನ್ ಎಂಬ ಪುರಸ್ಕಾರ ದೊರೆತಿದೆ, ಅದೇ ವರ್ಷ ವಿಸ್ಡನ್ ವರ್ಷದ ಕ್ರಿಕೆಟಿಗ ಪುರಸ್ಕಾರವೂ ದೊರೆತಿತು, 2004 ರಲ್ಲಿ ವಿಂಡೀಸ್ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ಆ ತಂಡದಲ್ಲಿ ಚಂದ್ರಪಾಲ್ ಕೂಡಾ ಇದ್ದ, ಆದರೆ 2015 ರಲ್ಲಿ ಫಾರ್ಮ್ ಇಲ್ಲದೇ ಇದ್ದಿದ್ದರಿಂದ ತಂಡದಿಂದ ಚಂದ್ರಪಾಲ್ ಸ್ಥಾನ ಕಳೆದುಕೊಂಡ, ಅದರ ಮುಂದಿನ ವರ್ಷವೇ ಚಂದ್ರಪಾಲ್ ನಿವೃತ್ತಿ ಘೋಷಿಸಿದ. !ಆತನಿಗೆ ಒಂದು ವಿದಾಯದ ಪಂದ್ಯವೂ ದೊರೆಯಲಿಲ್ಲ.

ಚಂದ್ರಪಾಲ್ ನೆನಪಾದಾಗಲೆಲ್ಲ ನೆನಪಾಗುತ್ತಿದ್ದುದ್ದು ಆತನ ಕಣ್ಣಿನ ಕೆಳಗೆ ಕಾಣುತ್ತಿದ್ದ ಬಾವುಟದ ಹಚ್ಚೆಯಂತಹ ಪಟ್ಟಿ, ನಾವೆಲ್ಲಾ ಆಗ ಚಂದ್ರಪಾಲ್ ದೇಶಭಕ್ತಿ ಹೆಚ್ಚಾಗಿ ತನ್ನ ಕಣ್ಣ ಕೆಳಗೆ ದೇಶದ ಬಾವುಟ ಹಚ್ಚೆ ಹಾಕಿಸಿಕೊಂಡಿದ್ದಾನೆ ಅಂದುಕೊಂಡಿದ್ದೆವು, ಆದರೆ ಅದು ಚಂದ್ರಪಾಲ್ ಪ್ರಖರ ಬೆಳಕು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಳಸುತ್ತಿದ್ದ ಬೆಳಕಿನ ಪ್ರತಿರೋಧಕ(Anti Sun Glare) ಆಗಿತ್ತು. ಫುಟ್ ಬಾಲ್ ನಲ್ಲಿ ಇದನ್ನು ಬಳಸುವವರು ಒಂದಷ್ಟು ಮಂದಿ ಇದ್ದಾರೆ, ಆದರೆ ಕ್ರಿಕೆಟ್ ನಲ್ಲಿ ಚಂದ್ರಪಾಲ್ ಮಾತ್ರ ಇದನ್ನು ಬಳಸುತ್ತಿದ್ದರು.

ವಿಂಡೀಸ್ ನಲ್ಲಿ ಹೊಡಿ ಬಡಿ ಆಟಗಾರರೇ ಗಮನ ಸೆಳೆಯುತ್ತಾರೆ. ಲಾರಾ ನಂತಹ ಸ್ಟಾರ್ ಆಟಗಾರ, ಗೇಯ್ಲ್ ನಂತಹ ಸ್ಫೋಟಕ ಬ್ಯಾಟ್ಸ್ ಮನ್ ಮುಂದೆ ಚಂದ್ರಪಾಲ್ ನ ತಣ್ಣಗಿನ ಆದರೆ ತಂಡಕ್ಕೆ ಬೆನ್ನೆಲುಬಾಗಿದ್ದ ಆಟ ಅಷ್ಟೊಂದು ಗಮನ ಸೆಳೆಯದೇ ಇರಬಹುದು, ಆದರೆ ತಾನಾಯಿತು, ತನ್ನ ಆಟವಾಯಿತು ಎಂಬಂತಿದ್ದ ಆತನ ಆಟ, ನಡವಳಿಕೆ ಬಹು ಕಾಲ ನೆನಪಿನ್ನಲ್ಲುಳಿಯುತ್ತದೆ. ವಿಂಡೀಸ್ ತಂಡಕ್ಕೆ ಹಲವಾರು ಲಾರಾ, ಗೇಯ್ಲ್ ರಂತಹ ನಕ್ಷತ್ರಗಳು-ಸೂರ್ಯ ರು ಇರಬಹುದು. ಆದರೆ ಅವರೆಲ್ಲರೂ ಕೆಕೊಟ್ಟಾಗ ಚಂದ್ರನಂತಹ ಚಂದ್ರಪಾಲ್ ನೆರವಾಗುತ್ತಿದ್ದ, ಹಾಗಾಗಿ ವಿಂಡೀಸ್ ತಂಡಕ್ಕೊಬ್ಬನೇ ಚಂದ್ರ ಶಿವನಾರಾಯಣ್ ಚಂದ್ರಪಾಲ್.

-ಆದರ್ಶ ಯು ಎಂ

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ವಿಂಡೀಸ್ ಪಾಲಿಗೆ ಒಬ್ಬನೇ ಶಿವ, ಒಬ್ಬನೇ ಚಂದ್ರ: ಆದರ್ಶ ಯು ಎಂ

  1. ಆದಶ೯ರವರ ಲೇಖನ ಕ್ರಿಕೆಟಿಗ ಚಂದ್ರಪಾಲರ ಬಗ್ಗೆ ಹಲವಾರು ಜನರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವಂತಹ ಆದಶ೯ಚಂದ್ರಯುಕ್ತ ಲೇಖನವಾಗಿದೆ.

Leave a Reply

Your email address will not be published. Required fields are marked *