ಲೇಖನ

ವಾಹನದ ವೇಗ ಮತ್ತು ಮಿತಿ: ಗಾಯತ್ರಿ ನಾರಾಯಣ ಅಡಿಗ

‘ಅವಸರವೇ ಅಪಾಯಕ್ಕೆ ಕಾರಣ ‘ ಎಂಬ ಮಾತೊಂದಿದೆ. ಪ್ರತಿಯೊಂದು ವಿಷಯದಲ್ಲಿಯೂ ಈ ಮಾತು ನೂರಕ್ಕೆ ನೂರು ಸತ್ಯ. ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಕನಿಷ್ಠ ಒಂದಾದರೂ ವಾಹನವನ್ನು ಹೊಂದಿರುತ್ತಾರೆ. ಒಂದೆಡೆ ವಾಹನಗಳಿಂದ ನಮಗೆ ಎಷ್ಟು ಅನುಕೂಲಗಳಿವೆಯೋ  ಇನ್ನೊಂದೆಡೆ ಆಷ್ಟೇ ಅನನುಕೂಲಗಳಿವೆ. ಅತಿಯಾದರೆ ಅಮೃತವೂ ವಿಷ ಎಂಬ ಮಾತೊಂದು ಇಲ್ಲಿ ನೆನಪಿಗೆ ಬರುತ್ತದೆ.

ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ನಮ್ಮ ವಾಹನದ ವೇಗಕ್ಕೆ ಮಿತಿ ಇಲ್ಲದ ಕಾರಣ ಅಪಘಾತಗಳು ಹೆಚ್ಚು ಸಂಭವಿಸುತ್ತದೆ. ಇಂದಿನ ಯುವಕರಿಗಂತೂ ಇರುವ ಕ್ರೇಜ್ ನಿಂದಾಗಿ ಹೆಚ್ಚಿನ ಅಪಘಾತಗಳು ಉಂಟಾಗುತ್ತವೆ. ತಾವು ಅತಿ ಕಡಿಮೆ ಸಮಯದಲ್ಲಿ ಹೆಚ್ಚು ದೂರವನ್ನು ಕ್ರಮಿಸಿದ್ದೇವೆ ಎಂಬುದು ಮುಖ್ಯವೇ ಹೊರತು ಎಷ್ಟು ಸುರಕ್ಷಿತವಾಗಿ ತಲುಪಿದ್ದೇವೆ ಎಂಬುದು ಮುಖ್ಯವಾಗಿರುವುದಿಲ್ಲ. ವಾಹನವನ್ನು ಓವರ್ಟೇಕ್  ಮಾಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾವೇ  ಅಪಘಾತವನ್ನು ಬರಮಾಡಿಕೊಳ್ಳುತ್ತಿದ್ದೇವೆ. ಜೀವನದಲ್ಲಿನ ಅತಿಯಾದ ಜಂಜಾಟಗಳಿಂದ ಇಂದಿನ ಜನಾಂಗವು ತಮಗೆ ನೈಸರ್ಗಿಕವಾಗಿ ಬಂದಂತಹ ತಾಳ್ಮೆ , ಸಹನೆ ಇತ್ಯಾದಿ ಮುತ್ತು ರತ್ನಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗೆಯೇ
ಪಾನಮತ್ತರಾಗಿ ವಾಹನವನ್ನು ಚಲಿಸುವುದಂತೂ ನಮ್ಮ ಸಾವಿಗೆ ನಾವೇ ಮುನ್ನುಡಿ ಬರೆದಂತೆ.
ಅಪಘಾತಕ್ಕೆ ಹೀಗೆ ಇನ್ನೂ ಹತ್ತು ಹಲವು ಕಾರಣಗಳನ್ನು  ಪಟ್ಟಿ ಮಾಡುತ್ತಾ ಹೋಗಬಹುದು.

ನಮ್ಮ ಜೀವನದಲ್ಲಿ ಪ್ರಯಾಣ ಎಷ್ಟು ಮುಖ್ಯವೋ ಗುರಿಯು ಕೂಡ ಆಷ್ಟೇ ಪ್ರಮುಖವಾಗಿದೆ. ನಮ್ಮನ್ನೇ ನಂಬಿರುವ ಜೀವಗಳನ್ನು ಸಂತೋಷದಿಂದಡಬೇಕಾದರೆ ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ವಾಹನಗಳನ್ನು ಚಲಿಸುವಾಗ ಆಗುವ ಸಮಸ್ಯೆಗಳಿಗೆ ಸಣ್ಣ ಮಟ್ಟಿನ ಪರಿಹಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
*ವಾಹನಗಳನ್ನು ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು. ವಾಹನಗಳನ್ನು ನಿಲ್ಲಿಸಿಯೇ ಕರೆ ಸ್ವೀಕರಿಸಬೇಕು.
*ಇತ್ತೀಚಿನ ದಿನಗಳಲ್ಲಿ ಕಂಡುಬರುವ ಅಂಶವೆಂದರೆ ತಲೆಗೆ ಪೆಟ್ಟಾಗಿ ಸಾವು ಸಂಭವಿಸುವುದು. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಉತ್ತಮ ಗುಣಮಟ್ಟದ ISI ಪ್ರಮಾಣೀಕೃತ ಶಿರಸ್ತ್ರಾಣವನ್ನು ಬಳಸುವುದು.

  • ಕಾರಿನ ಚಾಲಕರು ಚಾಲನೆ ಮಾಡುವ ಸಂದರ್ಭದಲ್ಲಿ ಸೀಟ್ ಬೆಲ್ಟನ್ನು ಬಳಸಬೇಕು .
  • ದ್ವಿಚಕ್ರ ವಾಹನವನ್ನು ಕೇವಲ ಇಬ್ಬರು ಸವಾರರಿಗೆ ಮಾತ್ರ ವಿನ್ಯಾಸಗೊಳಿಸುವುದರಿಂದ ಹೆಚ್ಚಿನ ಭಾರವನ್ನು ಹೇರಬಾರದು.
  • ಅತಿಯಾದ ವೇಗದಿಂದ ವಾಹನವನ್ನು ಚಲಾಯಿಸಿದರೆ ಅದನ್ನು ನಿಯಂತ್ರಣಕ್ಕೆ ತರುವುದು ಕಠಿಣ. ಆದ್ದರಿಂದ ವಾಹನದ ವೇಗವನ್ನು ಇತಿಮಿತಿಯೊಂದಿಗೆ ಚಲಾಯಿಸಬೇಕು.
  • ಮದ್ಯಸೇವನೆಯು ವಾಹನವನ್ನು ಚಲಾಯಿಸುವುದರಲ್ಲಿ ತೀವ್ರತರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಪಾನಮತ್ತರಾಗಿ ವಾಹನ ಚಲಾಯಿಸುವುದನ್ನು ನಿರ್ಬಂದಿಸಬೇಕು.
  • ಜೀಬ್ರಾ ಕ್ರಾಸ್ ಗಳು, ಸಿಗ್ನಲ್, ಉಬ್ಬುಗಳು ಬಂದಾಗ ವಾಹನದ ವೇಗದ ಮಿತಿ ನಿಧಾನವಾಗಿರಬೇಕು.
  • ವಾಹನವನ್ನು ಒಳ್ಳೆಯ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು.ಇದರಿಂದ ದಾರಿಯ ಮಧ್ಯದಲ್ಲಿ ವಾಹನ ಕೆಟ್ಟು ನಿಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ.
  • ಪದೇ ಪದೇ ಅನವಶ್ಯಕವಾಗಿ ವಾಹನದ ಹಾರ್ನ ಬಳಸಬಾರದು.

  • ಈ ಎಲ್ಲಾ ನಿಯಮಗಳನ್ನು ಪಾಲಿಸುವುದರೊಂದಿಗೆ ಡ್ರೈವಿಂಗ್ ಪರವಾನಗಿ, ಹೊಗೆ ಪರೀಕ್ಷೆ ಇತ್ಯಾದಿ ಅಗತ್ಯ ದಾಖಲೆಗಳನ್ನು ನಮ್ಮೊಂದಿಗೆ ಒಯ್ಯಬೇಕು. ನಮ್ಮ ಜೀವವನ್ನು , ನಮ್ಮದೇ ಜೀವನವನ್ನು ಉಳಿಸಿಕೊಳ್ಳಬೇಕಾದರೆ ಸಂಚಾರಿ ನಿಯಮಗಳನ್ನು ಪಾಲಿಸುವುದರ ಜೊತೆಗೆ ವಾಹನದ ವೇಗ ಮತ್ತು ಮಿತಿಯನ್ನು ಸರಿಯಾಗಿ  ಅನುಸರಿಸಬೇಕು ಎಂಬುದು ನನ್ನ ಅನಿಸಿಕೆ.

ಗಾಯತ್ರಿ ನಾರಾಯಣ ಅಡಿಗ 


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *