ಲೇಖನ

ವಾಸ್ಯ ತಾತ ಈಗ: ಡಾ. ಗವಿ ಸ್ವಾಮಿ

ನೆಂಟರೊಬ್ಬರನ್ನು  ನೋಡಲು ಮೊನ್ನೆ ಆಸ್ಪತ್ರೆಗೆ ಹೋಗಿದ್ದೆ .

ಆಸ್ಪತ್ರೆಯ ಗೇಟಿನ ಬಳಿ ಬೈಕು ನಿಲ್ಲಿಸುತ್ತಿದ್ದಾಗ ಇಬ್ಬರು ಹೊರಬರುತ್ತಿದ್ದರು.

ಒಬ್ಬ ಹೆಂಗಸು ಮಗುವನ್ನು ಕಂಕುಳಿಗೆ ಹಾಕಿಕೊಂಡಿದ್ದಳು.
ಪಕ್ಕದಲ್ಲಿ ಬರುತ್ತಿದ್ದಾತ ಮಗುವಿನ ಕೆನ್ನೆ ಚಿವುಟುತ್ತಾ ಅಂದ, '' ಈ ಗಣಾಂದಾರನ್ಗ ಮುನ್ನೂರ್ರುಪಾಯ್ ಆಯ್ತು ಇವತ್ತು ''

ಆ ಹೆಂಗಸು ಹುಸಿಮುನಿಸಿನಿಂದ   ''ಚುರ್ಕ್ ಅಂದ್ಬುಡ್ತನ ನಿನ್ಗ ..  ನೋಡುಕಂದ ತಾತ ವೊಟ್ಟುರ್ಕತನ''
ಎಂದು ಕಂಕುಳಲ್ಲಿದ್ದ ಮಗುವನ್ನು ನೋಡಿ ಹೇಳಿದಳು.

ಮಗು ಪಿಳಿಪಿಳಿ ಕಣ್ಣು ಮಿಟುಕಿಸುತ್ತಾ ಅವ್ವನನ್ನು ನೋಡಿತು.

''ಸುಮ್ನಂದಿಕವ್ವೈ ತಮಾಸ್ಗ .. ನನ್  ರಾಜನ್ಗಿಂತು ಎಚ್ಚಾ  ಮುನ್ನೂರುಪಾಯ್ … ಯಾನಕಂದ ಯಾನಪ್ನೇ''
ಎಂದು ಅವಳ ಕಂಕುಳಿಂದ ಮಗುವನ್ನು ಬಿಡಿಸಿಕೊಂಡು ಮುದ್ದುಮಾಡತೊಡಗಿದ.

ಅವರು ಆಚೆ ಹೋಗುವುದನ್ನೇ ನೋಡುತ್ತಾ ನಿಂತಿದ್ದೆ. ಅವರು ಮರೆಯಾದ ಮೇಲೆ ಆಸ್ಪತ್ರೆಯ ಒಳಗೆ  ಹೋದೆ.

ಕಾರಿಡಾರಿನಲ್ಲಿದ್ದ ಕುರ್ಚಿಗಳ ಮೇಲೆ ಹೆಂಗಸರೇ ಕಾಣುತ್ತಿದ್ದರು. ಚಿಕ್ಕ ಪಾಪುಗಳನ್ನು ತೊಡೆಯ ಮೇಲೆ ಹಾಕಿಕೊಂಡು ಕುಳಿತಿದ್ದರು .
ಅಂದು ಮಕ್ಕಳ ಡಾಕ್ಟ್ರು  ಬಂದಿದ್ದರು ಅನ್ಸುತ್ತೆ .

ವಾರ್ಡು ನಂಬರ್ ಕೇಳೋಣವೆಂದರೆ ಕೌಂಟರಿನಲ್ಲಿ ಯಾರೂ ಇರಲಿಲ್ಲ .

ಯಾರಾದ್ರೂ ಬರ್ತಾರೇನೋ ನೋಡೋಣ ಎಂದು ಅಲ್ಲೇ ನಿಂತಿದ್ದೆ.

ಸುಮಾರು ನಲವತ್ತೈರ ವಯಸ್ಸಿನ ಒಬ್ಬಳು, ತೊಡೆಯ ಮೇಲೆ ಹೆಣ್ಣು ಮಗುವೊಂದನ್ನು ಕೂರಿಸಿಕೊಂಡಿದ್ದ   ಇನ್ನೊಬ್ಬಳನ್ನು ಗದರುತ್ತಿದ್ದಳು.

''ಯಾನ ತಾಯ್ ಕೂಸ್ಕೊಂಡಗಿ ಈ ರೂಪ್ ಮಾಡಿದ್ದೈ, ಮಕ್ಳ್ ಸಾಕ ಕೂಟ್ವ ಇದು''

''ನಾ ಯಾನ್ ಮಾಡ್ಲ್ಯಕ್ಕ … ಇಲ್ಲಿಗಂಟ ನಾಕೈದ್ ತಂವು  ತೋರ್ಸಿನಿ.. ಜನ ಯಾನ್ಯಾನ್ ಹೇಳ್ತರ ಎಲ್ಲನೂ ಮಾಡ್ದಿ ….ಇವಳ್ಗ ಅಂತದ್ಯಾನು ಸಮಸ್ಯಯಿಲ್ಲಕಕ್ಕ.. ಉಣ್ಣದು,  ತಿನ್ನದು ,ಎಲ್ಲರ್ನೂ ಇಂತೆವ್ರಿಯ  ಇಂತೆವ್ರಿಯ ಅಂತ ಗುರ್ತಿಡಿಯದು,  ನೆಗನಾಡದು ಎಲ್ಲ ಸರಿ , ಆದ್ರ ನಿಂತ್ಕಮಕ ಸಕ್ತಿಯಿಲ್ಲ .. ಎತ್  ನಿಲ್ಸುದ್ರ, ತನ್ ಸಕ್ತಿಲಿ ಏಡ್ ಅಜ್ಜ ಹಾಕಗಂಟೇ ತಾರಾಡ್ಕಂಡ್  ಬಿದ್ಬುಡ್ತಳ ''

''ಎಸ್ಟಾಗಿದ್ದು ಇವಳ್ಗ''

''ಏಡೂವರ ವರ್ಸ ಆಗದಕಕ್ಕ … ಇವ್ಳ್ ವಾರ್ಗ ಮಕ್ಕ  ಅಸ್ಟರ್ಮಟ್ಗ ತುಮುತುಮ್ನ  ಓಡಾಡದ್ ನೋಡ್ತಿದ್ರ ನನ್ ಕಂದನ್ಗ್ಯಾಕ್ ಹೀಗ್ಮಾಡುಟ್ಟ ದೆವ್ರು ಅಂತ ಕಳ್ಳು ಇಂಡ್ದಾಗಾಯಿತ್ತಕಕ್ಕ''

ಎಂದು ಕಣ್ಣೀರು ಕಚ್ಚಿಕೊಂಡಳು.

''ಉಟ್ಟುಸ್ದ್ ದೆವ್ರು ಉಲ್ಮೇಯ್ಸ್ದೇ ಇದ್ದನ.. ಯಾನು ಆಗಲ್ಲ ಸುಮ್ಮಿರು  ..ಬೆಳತ ಬೆಳತ ಸರಿಯಾಯ್ತಳ.. ನಿಮ್ ಅಪ್ಪ ಅವ್ವ ದರ್ಮೊಂತ್ರುಕವ್ವ ..  ಅವ್ರು ಯಾರ್ಗೂ ಅನ್ನಾಯ  ಮಾಡಿಲ್ಲ.. ಅವ್ರು ಮಾಡಿರ ದಾನದರ್ಮ ಇವ್ಳ ಕಾಯ್ತದ ಸುಮ್ನಿರು''

''ನಮ್ ಅತ್ಗ ಕೂಸ್ನ್  ನೆಳ್ಳೇ ಬಿಳಕಿಲ್ಲಕಕ್ಕ ..  ತಿರ್ಗಾಡ್ತ್  ಬಳಸಾಡ್ತ  ಉರುಉರು ಅಂತಿರ್ತಳ ..  ಇದ್ನೂ ಕೂಸು ಅಂತ ಸಾಕ್ದರ, ನಾನಾಗಿದ್ರ ಮೆಟ್ರ ಅಂವ್ಕಿ ಸಾಯಸ್ಬುಡ್ತಿದ್ದಿ ಅಂತಳಕಕ್ಕ ನನ್ ನಾದ್ನಿ'' ಎಂದು ಸೀರೆ ಸೆರಗಿನಿಂದ ಕಣ್ಣೊರೆಸಿಕೊಂಡಳು

''ನಿನ್ ನಾದ್ನ್ಯಾದ್ರು ಎಳ್ಸು, ನಿಮ್ ಅತ್ತ ಬಾಯ್ಗ್ಮೊಣ್ಣಾಕವ ಮಕ್ಳ್ ಸಾಕಿಲ್ವ .. ಅದ್ಯಾಗ್ ಮನ್ಸ್ ಬಂದದು ಬೊಯ್ಯಕ ಅವ್ಳೆದಾರವಳ್ಗ.. ನಿನ್ ಗಂಡ ಯಾನು ಅನ್ನಲ್ವ ಅದ್ಕ? ''

''ಅವ್ರ್ಯಾನ್ನ ಅನ್ನದು  .. ಏಡ್ದಿಕೂ ಅವ್ರ …  ನಮ್ ಮಾವ್ನೆ ವಾಸಿ .. ದೇವ್ರಂತ ಮನ್ಸ, ಕೂಸ್ಕಂಡ್ರ ಜಿಂವ ಬುಡಸ್ಕತರ''

ಅಷ್ಟರಲ್ಲಿ ಎದುರುಗಡೆಯಿಂದ  ನರ್ಸ್ ಬರುತ್ತಿದ್ದರು.

ಅವರ ಬಳಿ ಹೋಗಿ ವಾರ್ಡ್ ನಂಬರ್ ತಿಳಿದುಕೊಂಡು ವಾರ್ಡಿಗೆ ಹೋದೆ.

ನೆಂಟರ ಆರೋಗ್ಯ ವಿಚಾರಿಸುತ್ತಾ ಕುಳಿತಿದ್ದೆ. ನೆನ್ನೆ ರಕ್ತ ಪರೀಕ್ಷೆ ಮಾಡಿದರು,  ಟೈಫಾಯ್ಡ್ ಜ್ವರ ಅಂತ ರಿಪೋರ್ಟಿನಲ್ಲಿ ಬಂದಿದೆ ಎಂದರು. ಸ್ಟೂಲಿನ ಮೇಲೆ ಮಡಗಿದ್ದ ಕವರನ್ನು ಎತ್ತಿ ಕೊಟ್ಟರು. ಕವರಿನೊಳಗಿದ್ದ ಬ್ಲಡ್ ರಿಪೋರ್ಟಿನ ಮೇಲೆ ಕಣ್ಣಾಡಿಸುತ್ತಿದ್ದೆ. 

ಅಷ್ಟರಲ್ಲಿ ಸುಮಾರು ಮೂವತ್ತರ ವಯಸ್ಸಿನ ಇಬ್ಬರು ,  
ಕಿಟಕಿಯ ಪಕ್ಕದ ಹಾಸಿಗೆಯಲ್ಲಿ ಗೋಡೆಗೊರಗಿ ಕುಳಿತಿದ್ದ ವೃದ್ಧನ  ಬಳಿ ಬಂದರು .

ಒಬ್ಬ ಅಂದ , 
''ವಾಸ್ಯ ತಾತ ಈಗ''

'' ಪರ್ವೇಲ್ಲಕಪ್ಪ,  ಸಟ್ಗ  ಸರಾಗ ಆಗದ .. ಸನ್ವಾರ ರಾತ್ರೆಂತೂ  ವಾಂತಿ  ತಟ್ಮಗ್ಬುಡ್ತು''

''ಗ್ಯಾನರ್ದೋಗ್ ಬಿದ್ದಿದ್ರೆಂತಲ್ಲಾ.. ಎಲ್ಲರ್ಗೂ ಕೈಕಾಲ್ ಬುಟ್ಟೋಗಿತ್ತು, ಉಳಿಯದೇ ಡೌಟಾಗೋಗಿತ್ತು ಅಂತಿದ್ದ ನಿಮ್ ಕಿರಿಮಗ  ಕರಿಯಪ್ಪಣ್ಣ ''

(ನಗುತ್ತಾ) ''ಆ ಬಡ್ಡೀಕೂಸ್ಗ  ನಾ ವೊಂಟೋಗಿದ್ರೇ ವಾಸ್ಯಾಗಿತ್ತು ಅನ್ನಗದಾ…ನನ್ ನೆಳ್ಳೇ ಬಿಳಕಿಲ್ಲ ಅದ್ಕ ''

''ಅವ್ನೇ ಸರಿ ನಿಮ್ಗ .. ಜಿನ್ಕ ಏಡ್ಕಟ್ ಬೀಡಿ ಚಟ್ಳ್ ಮಾಡಿರೆಂತಲ್ಲಾ ,ಈ ವಯಸ್ಲಿ ಅಷ್ಟ್ ಸೇದದ್ರ ಇನ್ನ್ನಾನಾದ್ದು ಮತ್ತ…'

ಇನ್ನೊಬ್ಬ ಅಂದ , ''ವತಾರೆ ಸುರುಮಾಡ್ಕಂಡ್ರ ರಾತರ್ಗ  ಕಣ್ಮುಚ್ಚಗಂಟೂ  ಕಚ್ದಾಗೇ ಅವ್ರ  ಕಮಾರಾಯಾ ''

ಮುದುಕಪ್ಪ ಅಂದ, ''ಡೇ ಐಕ್ಳೇ , ನಾ ಇದ್ದು ಇನ್ನ್ಯಾನ್ ಮಾಡ್ಬೇಕು.. ಮೂರ್ ಜನ ಎಣ್ ಮಕ್ಕಳ್ಗ ಮದುವ ಮಾಡ್ದಿ..ನಮ್ ಅಪ್ನ್ ಆಸ್ತೀಲಿ ಒಂದ್ ಪೈಸ್ದ್ ಅಗ್ಲನೂ ಕಳೀನಿಲ್ಲ..  ನಾಕ್ ಜನ ಗಂಡ್ ಮಕ್ಕಳ್ಗ  ಮದ್ವ ಮಾಡಿ ಪಾಲ್ ಕೊಟ್ಟಿ.. ಗೇಯ್ಕಂಡ್ ತಿನ್ಬುಡು ಬಡ್ಡೆತ್ತವು ನನ್ನಿಂದ್ಯಾನ''

''ಎಲ್ಲ ಸರಿ ನಿಮ್ದು … ನಿಮ್ ಸರೀಕ್ರು ಯ್ಯೋಳ್ತರಲ್ಲ , ನಿಮ್ ಸಮ್ಕ ಆರಂಬ ಮಾಡ್ತಿದ್ ಮಗ್ನೇ ಇರ್ನಿಲ್ವಂತ ..ಅದರ್ಲಿ ಬೆಳ್  ಮಡ್ಚಾ ಅಷ್ಟಿಲ್ಲ.. 
ಆದ್ರ ಬೀಡಿ ಕಮ್ಮಿ ಹಾಕಿ ಅಂದ್ರ  ಕ್ಯಾನ್ ಬಂದ್ಬುಡುತ್ತಾ ನಿಮ್ಗ''

''ತೊಂಬತ್ರ್ ದಂಡ್ ದಂಡ್ಕಾಗಿಲ್ವ ನಿಮ್ಗ''

''ಯಾವ್ ಬಡ್ಡೈದ್ನಿಗ್ ಗೊತ್ತು .. ಈಗನ್ಕಂಡಗ ಬರ್ದ್ಮಡಿಕತಿದ್ರಾ ನಮ್ ಕಾಲ್ದಲ್ಲಿ .. ಅದ್ಸರೀ  ಬರ್ಗೈಲಿ ಬಂದಿದ್ದರೆಲ್ಲಾ ಈ ಮುದ್ಕನ್ಗ ಯಾನಾದ್ರೂ ತರ್ಬಾರ್ದುಡ ನೀವು''
ಎಂದು ನಗುತ್ತಾ ಛೇಡಿಸಿದರು ಮುದುಕಪ್ಪ .

''ಅಯ್ಯಾ ಮರ್ತೇಬುಟ್ವುಂ ನೋಡಿ.. ಒಂದ್ ಬಂಡ್ಲ್ ಗಣೇಶ್ ಬೀಡಿ ಪಾರ್ಸೆಲ್ ಮಾಡಸ್ಕಬರ್ಬೇಕಾಯ್ತು.. ಗ್ಯಾಪಸ್ಬಾರ್ದುಡ ನೀನು?''
ಇನ್ನೊಬ್ಬನೆಡೆಗೆ ತಮಾಷೆಯಿಂದ ನೋಡಿದ.

ಅಷ್ಟರಲ್ಲಿ ನರ್ಸ್ ಒಳಗೆ ಬಂದರು.ಪಕ್ಕದ ಹಾಸಿಗೆಯಲ್ಲಿ ಮಲಗಿದ್ದವರಿಗೆ ಹಾಕಿದ್ದ ಡ್ರಿಪ್  ಮುಗಿದು ಬಂದಿತ್ತು. ಅದನ್ನು ಡಿಸ್ಕನೆಕ್ಟ್ ಮಾಡುತ್ತಿದ್ದರು .

ಮುದುಕಪ್ಪನೊಂದಿಗೆ ಮಾತಾಡುತ್ತಿದ್ದ ಒಬ್ಬ ಅಂದ,  ''ಒಂಚೂರ್ ಬನ್ನಿ ಸಿಸ್ಟ್ರೇ ಇಲ್ಲಿ.. ಈ ತಾತಪ್ನ ಜೋಬ್ ಸೋಸಿ.. ಬೀಡಿಗೀಡಿ ಇದ್ರ ಎತ್ಗಳಿ ''

''ಅಯ್ಯಾ ಅವತ್ತೇ ಕಿತ್ಕಂಡ್ರುಕುಡ.. ಯಾನ ಕೂಸು ನೀನೇ ಇದ್ದೆಲ್ಲವ್ವಾ ''
ಎಂದು ನರ್ಸ್ ಕಡೆ ನೋಡಿದ ಮುದುಕಪ್ಪ.

ನರ್ಸ್, ಹೌದೆನ್ನುವಂತೆ ತಲೆಯಾಡಿಸುತ್ತಾ ನಗುತ್ತಾ ಹೊರಟು ಹೋದರು.

''ಊರ್ನ್ ಸಮಾಚಾರ ಯಾನಪ್ಪಾ?''

''ಮೂರ್ ದಿನ್ಕೇ ಊರ್ನ್ ಗ್ಯಾನ್ಬಿದ್ಬುಡ್ತಾ ನಿಮ್ಗಾ..''

ಇನ್ನೊಬ್ಬ ಅಂದ, ''ಅಂಕದ ಮ್ಯಾಲ್  ಗ್ಯಾಂಗ್ ಸೇರಿದ್ದ ನಿಮ್ ದೋಸ್ತ್ಗಳು ಕೇಳ್ತಿದ್ರು.. 
.. ಮಾದತಾತ, ಎಲ್ಯಾ ನಮ್ ದ್ಯಾವಣ್ಣ ಅಂದ್ರು.. ಅದ್ಕ ನಾನು ದರ್ಮಸ್ತಳ್ಕ ಸ್ಟೂರ್ಗೋಗಗರ ಅಂದಿ.. ಅದ್ಕ ಅವ್ರು ಬರ್ಲಿ ತಡು ಇಲ್ಲಿ  ನಮ್ನೂ ಕರದೇ ಹೋಗನ ಅಂತಿದ್ರು!''

''ಅಯ್ಯ ಮುದೇವಿ, ಅದ್ಯಾಕುಡ ಆಗನ್ನಕೋದ''  ಎಂದು ನಕ್ಕರು ಮುದುಕಪ್ಪ.

'' ನಮ್ ದ್ಯಾವಣ್ಣ ಇಲ್ದೆರಾ ಸಿಬ್ರಿಕಯ್ಯ ಅಂತಿದ್ರು ಬಸತಾತ''

''ಅಯ್ಯ ಪಾಯಿ.. ನಾ ಇದ್ದಿದ್ರ ಬೀಡಿಗೀಡಿ  ಕೊಡ್ತಿದ್ದಿ  ಈಗ್ಯಾರ್ ಕೊಟ್ಟರು ಅವನ್ಗ''

''ರಾಮತಾತ ಅವ್ರಲ್ಲಾ ಕೊಡ್ತರ ತಕ್ಕಳಿ''

''ಅವ್ನಿಗಪಾ ಕೊಡವ್ನಿಯಾ.. ರಣಂಟುಕಪ್ಪೋ ರಣಂಟು .. ತುಟಿಸುಡಗಂಟು ಎಳತನ ''

ಮುದುಕಪ್ಪ ಮಾತು ಮುಂದುವರೆಸುತ್ತಾ  ''ಹೊಲದ್ದಿಕ್ ಹೋಗಿದ್ರಿಡಾ ಐಕ್ಳೇ.. ಈರುಳಿ ಒಣಗ್ತಾ ಅದ ನೀರ್ ಕಟ್ಟುಡ ಅಂದಿದ್ದಿ.. ಯಾನ್ಮಾಡಿದ್ದನು ಒಂಚೂರ್ ನ್ವಾಡ್ಬೇಕಾಗಿತ್ತುಕಯಾ ''

''ತಾತೈ , ಈರುಳ್ಳಿ ಬೆಳ್ಳುಳ್ಳಿ ಅಂದ್ಕಂಡು ಯಾಕ್ ತಲಕೆಡಸ್ಕಂಡರಿ,  ಮಕ್ಕಳ್ಗೊತ್ತು ಮಾಡ್ತರ ನೀವು ಉಸಾರಾಗದ್ ನೋಡಿ ''

''ಅದ್ಯಾಕ ಒಂದೊಂದ್ಸೊತ್ಗ ಮನಸ್ಗ ಸ್ಯಾನೇ ಸಂಕ್ಟಾ ಆಗೋಯ್ತದಕಪ್ಪಾ.. 
ಇಂದ್ಗ ಎಂಟ್ಜಿನ್ದಲಿ ಕಬ್ಬಳ್ಳಿಗೋಗಿದ್ದಿ .. ಅಲ್ಲಿ ಒಂದ್ ಸಾವಾಗಿತ್ತು.. ಅವನ್ಗ ಒಂದೈವತ್ತಾಗಿರ್ಬೆದು ಅಷ್ಟಿಯಾ..  ಅಯ್ಯಾ ಆ ಗೋಳ್ ನ್ವಾಡ್ಬಾರಕಪ್ಪ.. ಅವ್ನ್ ಎಡ್ತಿ ಮಕ್ಳ್ ಸ್ವಾಕಕ್ಕಿಂತ್ಲುವ ಅವ್ವ ಗೋಳ್  ನ್ವಾಡಕಾಯ್ತಿರ್ನಿಲ್ಲಕಪ್ಪ… ತನ್ಗ್ ಮೊಣ್ಣಾಕ್ಬೇಕಾಗಿದ್ದಂವ  ತನ್ ಕೈಲೇ ಹಾಕಸ್ಕಂಡು ಹೋಯ್ತಾವ್ನಲ್ಲ ಅಂತ ಎತ್ ಕಳ್ಳು ಎಷ್ಟ್ ಅಯ್ಯೋ ಅಂದಿರ್ಬ್ಯಾಡ..
ಆ ಸ್ವಾಕಾಟ ನೋಡ್ತಿದ್ರ ,  ಅಯ್ಯೋ ಪಾಪಿ ಬಗ್ವಂತಾ ನಮ್ ತೊಡಮ್ಯಾಲ ಬೆಳ್ದ  ಮಕ್ಕಳ್ನೆಲ್ಲಾ ಕರ್ಕತಾಯಿದ್ದಯೆಲ್ಲ.. ನನ್ನ ಆಯ್ಸ ಅವನ್ಗ್ ಕೊಟ್ಬುಟ್ಟು ನನ್ನೇ ಕರ್ಕ ಬಾರ್ದಾಗಿತ್ತ ನಿನ್ ಮನ ಹಾಳಾಗವ್ನೇ ಅನಿಸ್ತಿತ್ತು ನನ್ ಮನಸ್ಲಿ''

''ಯಾನ್ಮಾಡಕಾದ್ದು ತಾತ.. ನಿಮ್ ಕಾಲ್ದ್ ಗಾಡೆವು ಒಳ್ಳಿ ಮೈಲೇಜ್ ಕೊಡ್ತವ.. ಆದ್ರ ಈಗ್ನ್ ಕಾಲ್ದವು ಅಮ್ಮಮ್ಮಾಂದ್ರ ಅರವತ್ಕೊಟ್ರೇ ಹೆಚ್ಚು.. ಅದೂ ಚೆಂದಾಗ್ ಮೇಂಟನ್ ಮಾಡದ್ರ!''

ಇನ್ನೊಬ್ಬ ಅಂದ, '' ಯಾನ್ನು  ತಲ್ಗಾಕಬೇಡಿ.. ನೀವ್ ಉಸಾರಾಗದ್  ಕಲ್ತ್ಗಳಿ..  ಬೀಡಿ ಬುಟ್ಟಾಕ್ಬುಡಿ ಇನ್ನು''

''ಆಯ್ತು ತಕ್ಕ ದೊರ ಬುಟ್ಬುಡ್ತಿನಿ''
ಎಂದು ಮುಗುಳ್ನಗೆ ಬೀರಿದರು ಮುದುಕಪ್ಪ''

''ತಾತೈ ತಮಾಸ್ಯೆಲ್ಲ ಸೀರಿಯಸ್ಸಾಗ್ ತಕ್ಕಳಿ…   ನಾವ್ ಬತ್ತಿಂವಿ ಜ್ವಾಪಾನ''

''ಬತ್ತಿಂವಿ ಅನ್ಬಾರ್ದು ಕ ಮುದವೈ. … ಆಸ್ಪತ್ರಮನ ಇದು!''

''ಹೋಯ್ತಿಂವಿ!''

ಎಂದು ನಗುತ್ತಾ ಹೊರಟರು.

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ವಾಸ್ಯ ತಾತ ಈಗ: ಡಾ. ಗವಿ ಸ್ವಾಮಿ

  1. ''ಅಯ್ಯಾ ಮರ್ತೇಬುಟ್ವುಂ ನೋಡಿ.. ಒಂದ್ ಬಂಡ್ಲ್ ಗಣೇಶ್ ಬೀಡಿ ಪಾರ್ಸೆಲ್ ಮಾಡಸ್ಕಬರ್ಬೇಕಾಯ್ತು.. ಗ್ಯಾಪಸ್ಬಾರ್ದುಡ ನೀನು?''
    ''ಒಂಚೂರ್ ಬನ್ನಿ ಸಿಸ್ಟ್ರೇ ಇಲ್ಲಿ.. ಈ ತಾತಪ್ನ ಜೋಬ್ ಸೋಸಿ.. ಬೀಡಿಗೀಡಿ ಇದ್ರ ಎತ್ಗಳಿ ''

    Sir….I laughed reading these lines. Superb way of writing….. I remembered my place Kollegal once again. Thank you.

Leave a Reply

Your email address will not be published. Required fields are marked *