“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಕೊನೆಯ ಭಾಗ): ಪ್ರಸಾದ್ ಕೆ.

ಇಲ್ಲಿಯವರೆಗೆ….

1991 ರಲ್ಲಿ ನ್ಯೂಯಾರ್ಕ್ ಗೆ ತೆರಳಿದ ವಾರಿಸ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಾರೆ. ರೆವಲಾನ್, ಲೆವಿಸ್, ಲಾರಿಯಲ್, ಬೆನೆಟನ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳ ರಾಯಭಾರಿಯಾಗಿ ವಾರಿಸ್ ಮಿಂಚುತ್ತಾರೆ. ಮೂರು ತಿಂಗಳಲ್ಲೇ ವಾರಿಸ್ ರ ಚಿತ್ರವನ್ನು ಹೊತ್ತ ದೈತ್ಯ ಜಾಹೀರಾತು ಫಲಕಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಎಲ್ಲೆಲ್ಲೂ ರಾರಾಜಿಸತೊಡಗುತ್ತವೆ. ಸುಗಂಧ ದ್ರವ್ಯಗಳು, ಆಭರಣಗಳು, ಮದ್ಯತಯಾರಿಕೆ, ಬಟ್ಟೆಗಳು ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉತ್ಪನ್ನಗಳ ರಾಯಭಾರಿಯನ್ನಾಗಿಸಿಕೊಳ್ಳಲು ವಾರಿಸ್ ರ ಬೆನ್ನು ಬೀಳುತ್ತವೆ. ರೆವಲಾನ್ ಕಂಪನಿ ನಿರ್ಮಿತ ಜಾಹೀರಾತಿನ ಕಿರುಚಿತ್ರವೊಂದು ಅಮೇರಿಕಾದ ಅಕಾಡೆಮಿ ಅವಾರ್ಡನ್ನು ಪಡೆದುಕೊಳ್ಳುತ್ತದೆ. ವಿಶ್ವವಿಖ್ಯಾತ ಫ್ಯಾಷನ್ ಮ್ಯಾಗಝೀನ್ ಗಳಾದ ಎಲ್ಲೆ, ವೋಗ್, ಗ್ಲ್ಯಾಮರ್ ಗಳು ತಮ್ಮ ವಿವಿಧ ಭಾಷೆಯ ಆವೃತ್ತಿಗಳಲ್ಲಿ ಸಾಲುಸಾಲಾಗಿ ವಾರಿಸ್ ರ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸುತ್ತವೆ. ಕನಸಲ್ಲೂ ಊಹಿಸಿರದಷ್ಟು ಹೇರಳ ಸಂಪತ್ತು ವಾರಿಸ್ ರ ಕಾಲ ಬಳಿ ಕಾಲು ಚಾಚಿಕೊಂಡು ಮಲಗುತ್ತದೆ. ಫ್ಯಾಷನ್ ಜಗತ್ತಿಗೆ ಪರಿಚಯವಾದ ಈ ಕೋಲು ಮುಖದ, ಕಡೆದಿಟ್ಟ ದೇಹದ, ಇದ್ದಿಲ ಕಪ್ಪು ತೊಗಲಿನ ರೂಪದರ್ಶಿ, ಹೊಸದೊಂದು ಕ್ರಾಂತಿಯನ್ನೇ ತರುತ್ತಿದೆ ಎಂಬಂತೆ ವಾರಿಸ್ ಜಗತ್ತಿನ ಮೂಲೆಮೂಲೆಯಲ್ಲೂ ಬಿಂಬಿತರಾಗುತ್ತಾರೆ. 

ಅಂತೆಯೇ ಗೆಲುವಿನ ಅಮಲನ್ನು ನೆತ್ತಿಗೇರಿಸದ ವಾರಿಸ್ ದಿನದಿನವೂ ಹೊಸ ಹೊಸ ವಿಷಯಗಳನ್ನು ಶ್ರದ್ಧೆಯಿಂದ ಕಲಿಯುತ್ತಾರೆ. ಅವರ ಇಂಗ್ಲಿಷ್ ಮೊದಲಿಗಿಂತ ಗಣನೀಯವಾಗಿ ಸುಧಾರಣೆಯಾಗುತ್ತದೆ. ರಿಚರ್ಡ್ ಅವೆದನ್, ಟೆರೆನ್ಸ್ ಡೊನವನ್ ಮುಂತಾದ ಜಗತ್ತಿನ ಶ್ರೇಷ್ಠ ಫೋಟೋಗ್ರಾಫರ್ ಗಳೊಂದಿಗೆ ಕೆಲಸ ಮಾಡುವ ಭಾಗ್ಯ ಪಡೆದುಕೊಂಡ ವಾರಿಸ್ ಛಾಯಾಚಿತ್ರಗಳ ಗುಣಮಟ್ಟ, ನೆರಳು ಬೆಳಕಿನಾಟ, ರೂಪದರ್ಶಿಯಾಗಿ ಕೊಡಬಹುದಾದ ಹಾವಭಾವಗಳ ಬಗ್ಗೆ ಆಳವಾಗಿ ತಿಳಿಯುತ್ತಾರೆ. ಡ್ರೆಸ್ಸಿಂಗ್ ರೂಮಿನಲ್ಲಿ ತನ್ನ ಕಾಲುಗಳು ಮತ್ತು ಪಾದದ ಮಾಯದ ಗಾಯಗಳನ್ನು ಕಂಡು ಆಶ್ಚರ್ಯಪಟ್ಟು ಯಾರಾದರೂ ವಿಚಾರಿಸಿದರೆ,  `ಇವುಗಳು ನಾನು ನಡೆದು ಬಂದ ಹಾದಿಯನ್ನು ಸದಾ ನೆನಪಿಸುತ್ತವೆ' ಎಂದು ಮುಗುಳ್ನಗುತ್ತಾರೆ. ತಮ್ಮ ಆರಂಭಿಕ ದಿನಗಳನ್ನು ಹೊರತುಪಡಿಸಿ ಅವೆಂದೂ ಅಪಮಾನದ ಗುರುತುಗಳೆಂದು ಅವರಿಗನಿಸಲಿಲ್ಲ. ವಿಶ್ವದಾದ್ಯಂತ ಮಾಡಿದ ಪ್ರವಾಸಗಳು ಅವರನ್ನು ವಿವಿಧ ಸಂಸ್ಕøತಿಗಳಿಗೆ ಮೈಯೊಡ್ಡುವಂತೆ ಮಾಡುತ್ತವೆ. ಹಾಲಿವುಡ್ ನ ಚಿತ್ರ ನಿರ್ದೇಶಕರು, ನಟ-ನಟಿಯರು, ರಾಜಕಾರಣಿಗಳು, ಮಾಧ್ಯಮ ಜಗತ್ತಿನ ದಿಗ್ಗಜರು, ಖ್ಯಾತ ಲೇಖಕರು, ಚಿಂತಕರು, ಯಶಸ್ವಿ ಉದ್ಯಮಿಗಳು, ಕ್ರೀಡಾತಾರೆಯರು ವಾರಿಸ್ ರ ಖಾಸಗಿ ಬದುಕಿನ ಒಂದು ಭಾಗವಾಗಿ ಹೋಗುತ್ತಾರೆ. ತನ್ನ ವೃತ್ತಿಯಿಂದಾಗಿ ಜಗತ್ತಿನ ಹಲವು ಐತಿಹಾಸಿಕ ನಗರಗಳನ್ನು, ಕಡಲ ಕಿನಾರೆಗಳನ್ನು, ಮನೋಹರ ದ್ವೀಪಗಳನ್ನು ನೋಡುವ ಭಾಗ್ಯ ವಾರಿಸ್ ದಾಗುತ್ತದೆ. ಜಾಹೀರಾತು ಲೋಕದಲ್ಲಷ್ಟೇ ಅಲ್ಲದೆ, ಮ್ಯೂಸಿಕ್ ಆಲ್ಬಂ ಗಳಲ್ಲೂ ಸಾಲುಸಾಲಾಗಿ ಕಾಣಿಸಿಕೊಂಡು ವಿಶ್ವದಾದ್ಯಂತ ಬಹು ಬೇಡಿಕೆಯುಳ್ಳ ಮತ್ತು ಫ್ರಭಾವೀ ಆಫ್ರಿಕನ್ ಮಹಿಳೆ ಎಂದು ವಾರಿಸ್ ಕರೆಸಿಕೊಳ್ಳುತ್ತಾರೆ.   

1991 ರಿಂದ 1995 ರ ಮಧ್ಯೆ ನಿರಂತರವಾಗಿ ಯೂರೋಪ್ ಖಂಡದಾದ್ಯಂತ ವಾರಿಸ್ ಪ್ರವಾಸವನ್ನು ಮಾಡುತ್ತಾರೆ. ಇದೇ ಅವಧಿಯಲ್ಲಿ ಲಂಡನ್ ನ ಬಿಬಿಸಿ ಕಛೇರಿಯಿಂದ ಬಂದ ದೂರವಾಣಿ ಕರೆ ವಾರಿಸ್ ಡಿರೀ ಜೀವನದ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಲು ಅನುಮತಿಯನ್ನೂ, ಯೋಜನೆಯ ಸಂಪೂರ್ಣ ಗತಿವಿಧಿಗಳ ಬಗ್ಗೆ ಚರ್ಚಿಸಲು ಒಂದು ಆಹ್ವಾನವನ್ನೂ ನೀಡುತ್ತದೆ. `ಅ ಡೇ ದಾಟ್ ಚೇಂಜ್ಡ್ ಮೈ ಲೈಫ್' ಎಂಬ ಟೈಟಲ್ ನೊಂದಿಗೆ ಶುರುವಾದ ಈ ವಾರಿಸ್ ಡಿರೀ ಜೀವನಾಧಾರಿತ ಡಾಕ್ಯುಮೆಂಟರಿ ಪ್ರಾಜೆಕ್ಟ್ ಮುಂದೆ `ಆ ನೋಮಾಡ್ ಇನ್ ನ್ಯೂಯಾರ್ಕ್' ಎಂಬ ಹೆಸರಿನಲ್ಲಿ ಗೆರ್ರಿಯವರ ನಿರ್ದೇಶನದಲ್ಲಿ 1995 ರಲ್ಲಿ ಪ್ರಸಾರವಾಯಿತು. ಈ ಡಾಕ್ಯುಮೆಂಟರಿಯ ಚಿತ್ರೀಕರಣಕ್ಕಾಗಿ ನಿರ್ದೇಶಕ ಗೆರ್ರಿಯವರ ಚಿತ್ರೀಕರಣದ ತಂಡ ಸೊಮಾಲಿಯಾದ ದುರ್ಗಮ ಮರಳುಗಾಡಿನಲ್ಲಿ ಮೂರು ತಿಂಗಳುಗಳಷ್ಟು ಕಾಲ ತಂಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈ ಡಾಕ್ಯುಮೆಂಟರಿಯಿಂದಾಗಿ ಹದಿನೈದು ವರ್ಷಗಳ ನಂತರ ವಾರಿಸ್ ಮತ್ತೊಮ್ಮೆ ಸೊಮಾಲಿಯಾ ನಗರದಲ್ಲಿ ಕಾಲಿಟ್ಟು ಅಪ್ಪ, ಅಮ್ಮ, ಗುಡಿಸಲು, ಮರಳುಗಾಡು, ಕುರಿ, ಮೇಕೆ, ಒಂಟೆ, ಕಳ್ಳಿ ಗಿಡಗಳು ಹೀಗೆ ಸೊಮಾಲಿಯಾದ ಜಗತ್ತಿನಲ್ಲಿ ಮತ್ತೊಮ್ಮೆ ಸೇರಿಹೋದರು. ಸೊಮಾಲಿಯಾಕ್ಕೆ ಬಂದಿಳಿದ ಕೂಡಲೇ ಆ ನೆಲವನ್ನು ನಾನು ಚುಂಬಿಸಿದೆ. ಮರಳನ್ನು ಅರಿಶಿನದಂತೆ ಕೆನ್ನೆಗೆ, ಕೈಗೆ, ಹಣೆಗೆಲ್ಲಾ ಹಚ್ಚಿಕೊಂಡೆ ಎಂದು ಭಾವುಕರಾಗಿ ವಾರಿಸ್ ದಾಖಲಿಸುತ್ತಾರೆ.   

ಹಣ, ಕೀರ್ತಿ, ಗೌರವ ಎಲ್ಲವನ್ನೂ ಪಡೆದುಕೊಂಡ ವಾರಿಸ್ ರ ಬಾಳು ಬಂಗಾರವಾಗಿರುತ್ತದೆ. ಅದರೆ ಎಲ್ಲವೂ ಮುಗಿದು ಅಮೇರಿಕಾದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಯೋಚನೆಯಲ್ಲಿದ್ದಾಗ ಹೊಸ ಯೋಜನೆಯೊಂದು ವಾರಿಸ್ ರ ಮನದಲ್ಲಿ ಸದ್ದಿಲ್ಲದೆ ಮೊಳಕೆಯೊಡೆಯುತ್ತಿತ್ತು.  

*****

ಸೊಮಾಲಿಯಾವನ್ನು ಬಿಟ್ಟು ಹಲವು ವರ್ಷಗಳು ಸಂದಿದ್ದರೂ ವಾರಿಸ್ ರ ಬೇರು ಸೊಮಾಲಿಯಾದ ಮರಳುಗಾಡಲ್ಲೇ ಇತ್ತು. ಐದನೇ ವಯಸ್ಸಿಗೆ ಬ್ಲೇಡಿನಡಿಗೆ ಸಿಕ್ಕಿ ನಲುಗಿ ಹೋದ ಘಟನೆಯನ್ನು ದುಃಸ್ವಪ್ನದಂತೆ ಮರೆಯಲು ಯತ್ನಿಸಿದರೂ ಆಗಾಗ ಮರುಕಳಿಸುತ್ತಿದ್ದ ಯಮಸದೃಶ ನೋವು ವಾರಿಸ್ ರನ್ನು ಹಿಂಡಿ ಹಿಪ್ಪೆ ಮಾಡಿ ಹಾಕಿದ್ದವು. ಚಿಕ್ಕಪ್ಪನ ಮನೆಯಲ್ಲಿದ್ದಾಗ ಪ್ರಾಣ ಹೋಗುವಂಥಾ ನೋವು ಆಗಾಗ ಕಾಣಿಸಿಕೊಂಡಿದ್ದರೂ ಹೆಚ್ಚಿನ ಆರೈಕೆಯ ಗೋಜಿಗೆ ಹೋಗದೆ, ನೋವು ನಿರೋಧಕ ಮಾತ್ರೆಗಳನ್ನು ನೀಡಲಾಗುತ್ತಿತ್ತು. ಒಂದೆರಡು ಬಾರಿ ವೈದ್ಯರಿಗೆ ಹೇಳಲು ಬಾಯಿ ತೆರೆದರೂ ಚಿಕ್ಕಮ್ಮ ಬಾಯಿಮುಚ್ಚಿಸಿದ್ದರು. ಇನ್ನೊಬ್ಬರಿಗೆ ಅರ್ಥವಾಗುವಂತೆ ಹೇಗೆ ತಿಳಿಸಿ ಹೇಳುವುದೆಂಬುದೂ ಭಾಷೆ ಗೊತ್ತಿಲ್ಲದ ವಾರಿಸ್ ರ ಚಡಪಡಿಕೆಯಾಗಿತ್ತು. ಇವರು ನೋವು ನಿವಾರಕ ಮಾತ್ರೆಗಳನ್ನು ನುಂಗುವುದನ್ನು ಕ್ರಮೇಣ ನಿಲ್ಲಿಸಿದ್ದು ಸೈಡ್ ಅಫೆಕ್ಟ್ ಗಳ ಕಾರಣದಿಂದಾಗಿ. ಈ ಮಾತ್ರೆಗಳನ್ನು ತಿಂದು ಹಾರ್ಮೋನುಗಳಲ್ಲಿ ಭಯಂಕರ ಏರಿಳಿತಗಳಾದವು. ಅಚಾನಕ್ಕಾಗಿ ದೇಹ ದಪ್ಪಗಾಗುವುದಷ್ಟೇ ಅಲ್ಲದೆ, ಕೂದಲುಗಳು ದೇಹದ ವಿವಿಧ ಭಾಗಗಳಲ್ಲಿ ಯದ್ವಾತದ್ವಾ ಬೆಳೆಯಲಾರಂಭಿಸಿದವು. ಮುಂದೆ ವಾರಿಸ್ ಗೆ ತನ್ನ ದಿನನಿತ್ಯದ ಭಯಾನಕ ನೋವಿನಿಂದ ಮುಕ್ತಿ ಸಿಕ್ಕಿದ್ದು ಲಂಡನ್ನಿನಲ್ಲಿ ಗೆಳತಿ ಮರ್ಲಿನ್ ಜೊತೆ ಇದ್ದಾಗ.   

ರೂಪದರ್ಶಿಯಾಗಲು ಹೊರಟ ಆರಂಭದ ದಿನಗಳು ಅವು. ಪಾರ್ಟಿ, ಗಂಡಸರು, ಲೈಂಗಿಕತೆ ಹೀಗೆ ಹಲವಿಷಯಗಳ ಬಗ್ಗೆ ಮಾತುಕತೆಯಾಡುತ್ತಾ ಕಾಲಕಳೆಯುತ್ತಿದ್ದ ಗೆಳತಿ ಮರ್ಲಿನ್ ಜೊತೆ ನಡೆದ ಆ ದಿನದ ಚರ್ಚೆ ಕಣ್ಣೀರಿನಲ್ಲಿ ಅಂತ್ಯವಾಗಿತ್ತು. ಮರ್ಲಿನ್ ಆ ದಿನ ವಾರಿಸ್ ರ ಬಾಲ್ಯದ ಕ್ರೌರ್ಯದ ಕಥೆ ಕೇಳಿ ಗರಬಡಿದವರಂತೆ ದಂಗಾಗಿದ್ದರು. ಇಂಥದ್ದೊಂದು ಭಯಾನಕ ಆಚರಣೆ ಈಗಲೂ ಅಸ್ತಿತ್ವದಲ್ಲಿದೆ ಎಂಬ ಮಾತನ್ನು ಕೇಳಿ ಮರ್ಲಿನ್ ಅವಾಕ್ಕಾಗಿದ್ದರು. ವಾರಿಸ್ ಜೀನ್ಸ್ ಪ್ಯಾಂಟ್ ಕಳಚಿ, ಟೀ ಶರ್ಟ್ ಎತ್ತಿ ತನ್ನ ಗುಪ್ತಾಂಗವನ್ನು ತೋರಿಸಿದ ಮೇಲಂತೂ ತನ್ನ ಕೈಗಳಿಂದ ಮುಖವನ್ನು ಮುಚ್ಚಿಕೊಂಡು `ಓ ಮೈ ಗಾಡ್… ಓ ಮೈ ಗಾಡ್' ಎಂದು ಒಂದೇ ಸಮನೆ ಕಣ್ಣೀರಾದರು. `ಅಂಥಾ ಭಯಾನಕ ದೃಶ್ಯವನ್ನು ನಾನೆಲ್ಲೂ ನೋಡೇ ಇಲ್ಲ. ಇಂಥಾ ನೋವನ್ನು ತನ್ನಲ್ಲಿಟ್ಟುಕೊಂಡು ಅದ್ಹೇಗೆ ದಿನಕಳೆಯುತ್ತೀ?' ಎಂದು ಹೌಹಾರಿ, ಕಣ್ಣೀರಾಗಿ ವಾರಿಸ್ ರನ್ನು ಆಲಂಗಿಸಿ ಗೋಳೋ ಎಂದು ಅತ್ತರಂತೆ ಮರ್ಲಿನ್. ಆ ರಾತ್ರಿ ವಾರಿಸ್ ರ ಬಹುತೇಕ ದೈಹಿಕ ರಹಸ್ಯಗಳ ಬಗ್ಗೆ ಮರ್ಲಿನ್ ಳಿಗೆ ಉತ್ತರ ಸಿಕ್ಕಿತು. ಇಬ್ಬರೂ ಗೆಳತಿಯರು ಒಬ್ಬರನ್ನೊಬ್ಬರು ಆಲಿಂಗಿಸಿ ಕಣ್ಣೀರಿನಲ್ಲಿ ಸಮಭಾಗಿಗಳಾದರು. ತಕ್ಷಣವೇ ವೈದ್ಯರಿಗೆ ಫೋನಾಯಿಸಿ ಮುಂದಿನ ತಿಂಗಳ ದಿನವೊಂದನ್ನು ಶಸ್ತ್ರಚಿಕಿತ್ಸೆಗಾಗಿ ಗೊತ್ತುಪಡಿಸಲಾಯಿತು. ಏನಾದರಾಗಲಿ ಇದಕ್ಕೊಂದು ಶಾಶ್ವತ ಪರಿಹಾರವನ್ನು ಹುಡುಕಬೇಕೆಂದು ಆ ದಿನ ನಿರ್ಣಯವಾಯಿತು. ಗೆಳತಿ ಮರ್ಲಿನ್ ಅಮ್ಮನಂತೆ ಆ ದಿನ ವಾರಿಸ್ ಜೊತೆಗಿದ್ದು ಧೈರ್ಯ ತುಂಬಿದರು.  

 

`ಮುಂದಿನ ತಿಂಗಳು ಡಾ. ಮ್ಯಾಕ್ರೆ ನನ್ನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಕಣ್ಣಲ್ಲಿ ನೀರು ತುಂಬಿದ ನನ್ನನ್ನು ನೋಡಿ, ಭಯಪಡಬಾರದೆಂದೂ, ನನ್ನಂತೆಯೇ ಈಜಿಪ್ಟ್, ಸುಡಾನ್ ನಂಥಾ ದೇಶಗಳಿಂದ ಹಲವು ಹೆಣ್ಣುಮಕ್ಕಳು ರಹಸ್ಯವಾಗಿ ತಮ್ಮ ಕುಟುಂಬಗಳಿಗೆ ತಿಳಿಯದಂತೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡು ಹೋಗುತ್ತಾರೆ ಎಂದು ಹೇಳಿ ಹಲವು ಕಣ್ಣೀರಿನ ಕಥೆಗಳನ್ನು ಬಿಚ್ಚಿಟ್ಟರು. ನಾನು ಸುಮ್ಮನೆ ಮಾತಿಲ್ಲದೆ ಕೇಳುತ್ತಾ ಹೋದೆ. ನನ್ನ ಕಣ್ಣುಗಳು ಮಂಜಾಗಿದ್ದವು. ಮಹಿಳೆಯರನ್ನು ಭೋಗದ ವಸ್ತುವಿನಂತೆ ಧರ್ಮದ, ಸಮಾಜದ ಗುರಾಣಿಯಡಿಯಲ್ಲಿ ಬಳಸುವ ಪುರುಷ ಕೇಂದ್ರಿತ ಸಮಾಜಕ್ಕೆ ಕ್ಯಾಕರಿಸಿ ಉಗಿಯುವಷ್ಟು ಹೇಸಿಗೆಯಾಯಿತು. ಶಸ್ತ್ರಚಿಕಿತ್ಸೆಯ ಎರಡು ವಾರಗಳ ಬಳಿಕ ಕಮೋಡ್ ನಲ್ಲಿ ಕುಳಿತು ಎಲ್ಲರಂತೆಯೇ ಸರಾಗವಾಗಿ ಮೂತ್ರವಿಸರ್ಜಿಸಿದ ಆ ಮುಕ್ತಿಯ ಕ್ಷಣಗಳನ್ನು ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ' ಎಂದು ನೆನಪಿಸಿಕೊಳ್ಳುತ್ತಾರೆ ವಾರಿಸ್. ಮರ್ಲಿನ್ ರ ಸಹಕಾರ ಮತ್ತು ಕಾಣದ ದೇವರ ದಯೆ ಆ ದಿನವೂ ವಾರಿಸ್ ಜೊತೆಗಿತ್ತು. 

****

ವಾರಿಸ್ ಜೀವನದ ಕಡು ಕಷ್ಟದ ಬಾಲ್ಯ ಮತ್ತು ಯಶಸ್ಸಿನ ಉತ್ತುಂಗಕ್ಕೆ ಪ್ರಯಾಣದ ನಂತರ ಬರುವ ಬಹುಮುಖ್ಯ ಭಾಗವೇ ಎಫ್.ಜಿ.ಎಮ್ ವಿರುದ್ಧ ಅವರು ಸಾರುವ ಮಹಾಯುದ್ಧ. 1995 ರಲ್ಲಿ ಬಿಬಿಸಿ ಯಿಂದ ನಿರ್ಮಿತ ಡಾಕ್ಯುಮೆಂಟರಿ ವಿಶ್ವದಾದ್ಯಂತ ಬಿಡುಗಡೆಯಾಗಿ, ಪ್ರಸಾರವಾದಾಗಲೇ ವಾರಿಸ್ ತನ್ನ ವೃತ್ತಿ ಜೀವನದ ಯಶಸ್ಸಿನ ತುತ್ತತುದಿಯಲ್ಲಿದ್ದರು. ಶತಮಾನಗಳಿಂದ ಉಳಿದು ಬಂದ ಕಣ್ಣೀರಿಗೆ ತಿಲಾಂಜಲಿಯಿತ್ತು ಒಂದು ಶಾಶ್ವತ ಪರಿಹಾರದೆಡೆಗೆ ಇಡಬೇಕಾದ ಹೆಜ್ಜೆ ವಾರಿಸ್ ರನ್ನು ಮಾನಸಿಕವಾಗಿ ಅಣಿಯಾಗುವಂತೆ ಮಾಡಿದವು. 1998 ರಲ್ಲಿ `ಮೇರಿ ಕ್ಲೈರ್' ಪತ್ರಿಕೆಯ ಲೇಖಕಿ ಲೌರಾಗೆ ನೀಡಿದ ಸಂದರ್ಶನದಲ್ಲಿ ತನ್ನ ಐದು ವರ್ಷದ ಪ್ರಾಯದಲ್ಲಿ ನಡೆದ ಎಫ್.ಜಿ.ಎಮ್ ನಿಂದ ಹಿಡಿದು, ಸೊಮಾಲಿಯಾದಲ್ಲಿ ಅದೆಷ್ಟರ ಮಟ್ಟಿಗೆ ಈ ಅನಿಷ್ಟವು ಬೇರೂರಿದೆ ಎಂಬುದನ್ನು ತಣ್ಣಗಿನ ದನಿಯಲ್ಲಿ ಯಾವುದೇ ಮುಚ್ಚುಮರೆಯಿಲ್ಲದೆ ಹೇಳುತ್ತಾ ಬಂದರು. ಮೊದಲೇ ಇದರ ಬಗ್ಗೆ ಒಂದು ಮಟ್ಟಿನ ಅಧ್ಯಯನಗಳು ನಡೆದಿದ್ದರೂ ವಾರಿಸ್ ರ ಬಾಯಿಯಿಂದ ಇಂಥಾ ಅರಗಿಸಿಕೊಳ್ಳಲಾರದ ಮಾತುಗಳನ್ನು ಓದಿದ ಓದುಗರು ವಿಶ್ವದಾದ್ಯಂತ ಹೌಹಾರಿದರು. ಇಪ್ಪತ್ತನೆಯ ಶತಮಾನದಲ್ಲೂ, ಐರೋಪ್ಯ ದೇಶಗಳ ವಿಲಾಸಿ ಜೀವನದ ಕಕ್ಷೆಯ ಆಚೆಗೂ ಜೀವಗಳಿಗೆ ಬೆಲೆಯೇ ಇಲ್ಲದ ಒಂದು ಭಯಾನಕ ಜಗತ್ತಿದೆ ಎಂಬುದನ್ನು ಸಂದರ್ಶನ ಮೂಲಕ ತಿಳಿದ ಓದುಗರಿಗೆ ದಂಗುಬಡಿದಿತ್ತು. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಈ ಸಂದರ್ಶನಕ್ಕೆ ಪ್ರತಿಕ್ರಿಯೆಗಳು ಪತ್ರ ಮುಖೇನ ಹರಿದು ಬಂದವು. ಒಂದೆರಡು ಟೀಕೆಗಳನ್ನು ಬಿಟ್ಟರೆ, ಬಹುಪಾಲು ಪ್ರತಿಕ್ರಿಯೆಗಳು ಎಫ್.ಜಿ.ಎಮ್ ವಿರುದ್ಧ ಸಿಡಿದೇಳುವ ವಾರಿಸ್ ರ ಒಂದು ಕರೆಗೆ ಓಗೊಟ್ಟಿದ್ದವು.    

ಮುಂದೆ ಈ ಸಂದರ್ಶನವನ್ನು ಓದಿದ ನ್ಯೂಯಾರ್ಕಿನ 20/20 ಛಾನೆಲ್ಲಿನ ಖ್ಯಾತ ನಿರೂಪಕಿ ಬಾರ್ಬರಾ ವಾಲ್ಟೇರ್ ಕರೆ ಮಾಡಿ ಮತ್ತೊಂದು ಟೆಲಿವಿಷನ್ ಸಂದರ್ಶನಕ್ಕೆ ಆಹ್ವಾನವಿತ್ತಳು. `ಅ ಹೀಲಿಂಗ್ ಜರ್ನಿ' ಎಂಬ ಶೀರ್ಷಿಕೆಯಡಿ ಪ್ರಸಾರವಾದ ಈ ಸಂದರ್ಶನ ಅಮೇರಿಕಾದಾದ್ಯಂತ ಪ್ರಸಾರವಾಗಿ ತಮ್ಮದೇ ಗೂಡಿನಲ್ಲಿ ಬೆಚ್ಚಗಿದ್ದ ವಿಚಾರವಾದಿಗಳ, ಸಾಮಾಜಿಕ ಕಾರ್ಯಕರ್ತರ ಮನೆಮನಗಳನ್ನು ತಟ್ಟಿತು. ಇದರ ಬಿಸಿ ಎಷ್ಟರ ಮಟ್ಟಿಗೆ ಕಾಯತೊಡಗಿತೆಂದರೆ, 1997 ರಲ್ಲಿ ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳು ಖುದ್ದಾಗಿ ವಾರಿಸ್ ರನ್ನು ಸಂಪರ್ಕಿಸಿ ತನ್ನ ವಿಶ್ವ ಆರೋಗ್ಯ ಸಂಸ್ಥೆಯ ಬಹು ಮಹಾತ್ವಾಕಾಂಕ್ಷಿ ಯೋಜನೆಯಾದ ಜನಸಂಖ್ಯಾ ನಿಧಿ ಮತ್ತು ಎಫ್.ಜಿ.ಎಮ್ ವಿರುದ್ಧದ ಜನ ಜಾಗೃತಿಯ ಅಭಿಯಾನಕ್ಕೆ ವಿಶೇಷ ರಾಯಭಾರಿಯಾಗಲು ಕೋರಿದರು. ವಿಶ್ವಸಂಸ್ಥೆ ಆಗಲೇ ಎಫ್.ಜಿ.ಎಮ್ ಬಗ್ಗೆ ಇಪ್ಪತ್ತೇಳಕ್ಕೂ ಹೆಚ್ಚು ಆಫ್ರಿಕನ್ ರಾಷ್ಟ್ರಗಳಿಂದಲ್ಲದೆ, ಯೆಮನ್ ಮತ್ತು ಇತರೆ ಗಲ್ಫ್ ರಾಷ್ಟ್ರಗಳಿಂದಲೂ ಮಾಹಿತಿ ಸಂಗ್ರಹಿಸಿ ಅಂಕಿ ಅಂಶಗಳನ್ನು ಕಲೆಹಾಕಿದ್ದವು. ಅನಸ್ತೇಸಿಯಾದ ಸಹಾಯವೇ ಇಲ್ಲದೆ ನಡೆಸುವ ಈ ಪ್ರಕ್ರಿಯೆಯಲ್ಲಿ 1997 ರಲ್ಲೇ ಹದಿಮೂರು ಕೋಟಿಗೂ ಹೆಚ್ಚು ಹೆಣ್ಣುಮಕ್ಕಳು ಈ ಕ್ರಿಯೆಗೆ ಒಳಗಾಗಿದ್ದರು. ಪ್ರತೀ ವರ್ಷ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ತುಕ್ಕು ಹಿಡಿದ ಬ್ಲೇಡು, ಗಾಜಿನ ಚೂರು, ಚೂಪಾದ ಕಲ್ಲುಗಳನ್ನು ಉಪಯೋಗಿಸಿದರ ಪರಿಣಾಮ ಸೋಂಕಿನಿಂದ ಸಾವನ್ನಪ್ಪಿದ್ದರು. ಇವಿಷ್ಟೇ ಅಲ್ಲದೆ ಪ್ರತೀ ದಿನ ಸುಮಾರು ಆರು ಸಾವಿರದಷ್ಟು ಮಕ್ಕಳು ಈ ಕ್ರಿಯೆಯನ್ನು ಮಾಡಿಸಿಕೊಳ್ಳುವುದಕ್ಕಾಗಿ ಯಮನ ಬಾಗಿಲು ತಟ್ಟಿ ಬರುತ್ತಿದ್ದರು ಎಂದು ಸಂಖ್ಯೆಗಳು ಹೇಳುತ್ತಿದ್ದವು. ವಿಶ್ವಸಂಸ್ಥೆಯ ಕೋರಿಕೆಗೆ ತಕ್ಷಣವೇ ಸಂತಸದಿಂದ ಒಪ್ಪಿದ ವಾರಿಸ್ ಗೆ ಈ ಹೊತ್ತಿಗೆ ತಾನು ಇಡುವ ಹೆಜ್ಜೆಗಳ ಬಗ್ಗೆಯೂ, ಗುರಿಯ ಕಡೆ ಸಾಗುವ ಮಾರ್ಗವೂ ನಿಚ್ಚಳವಾಗಿ ಕಾಣತೊಡಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಅಂತೂ ವಾರಿಸ್ ರ ಬಹುದಿನದ ಕನಸೊಂದು ನಿಧಾನಕ್ಕೆ ನೈಜತೆಯ ರೂಪವನ್ನು ಪಡೆದುಕೊಳ್ಳಲಾರಂಭಿಸಿತು. ಎಫ್.ಜಿ.ಎಮ್ ವಿರುದ್ಧದ ಮಹಾಯುದ್ಧಕ್ಕೆ ವಾರಿಸ್ ಆಗಲೇ ನಾಂದಿ ಹಾಡಿದ್ದರು. 

ಆದರೂ ನಿಜವಾದ ಪರೀಕ್ಷೆ ಈಗ ಶುರುವಾಗಿತ್ತು. ಶತಮಾನಗಳಿಂದ ನಡೆಯುತ್ತಾ ಬಂದಿರುವ ಆಚರಣೆಯೊಂದನ್ನು ರಾತ್ರೋರಾತ್ರಿ ನಿಷೇಧಿಸಿ ಎಂದರೆ ಅದು ಸಾಧ್ಯವೂ ಅಲ್ಲ. ಆಫ್ರಿಕಾದ ಬಹುತೇಕ ರಾಷ್ಟ್ರಗಳಲ್ಲಿ ಹೆಣ್ಣುಮಕ್ಕಳಿಗೆ ಅಕ್ಷರಜ್ಞಾನದ ಭಾಗ್ಯವಿಲ್ಲ. ಹೀಗಾಗಿ ಮಾನವ ಹಕ್ಕುಗಳು, ದಬ್ಬಾಳಿಕೆ, ಸ್ವಾತಂತ್ರ್ಯ, ನೈರ್ಮಲ್ಯ, ವೈದ್ಯಕೀಯ ಸೌಲಭ್ಯ ಹೀಗೆ ಯಾವುದರ ಗಂಧಗಾಳಿಯೂ ಅವರಿಗಿರಲಿಲ್ಲ. ವಿಶ್ವ ಸಂಸ್ಥೆಯ ವಿಶೇಷ ರಾಯಭಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ವಾರಿಸ್ ಆಫ್ರಿಕಾದ ಉದ್ದಗಲಕ್ಕೂ ಬಿಡುವಿಲ್ಲದೆ ತಂಡ ಕಟ್ಟಿಕೊಂಡು ಓಡಾಡಿದರು. ಆಫ್ರಿಕಾದ ದುರ್ಗಮ ರಸ್ತೆ, ವಿದ್ಯುತ್ತುಗಳಿಲ್ಲದ ಮರಳುಗಾಡು, ಕುಗ್ರಾಮಗಳೆಂದು ಲೆಕ್ಕಿಸದೆ ಮನೆ ಮನೆಗೂ ತೆರಳಿ ಶಿಕ್ಷಣದ ಅಗತ್ಯತೆಯ ಬಗ್ಗೆ, ಎಫ್.ಜಿ.ಎಮ್ ನಂತಹಾ ಅಮಾನವೀಯ ಆಚರಣೆಯ ನಿರ್ಮೂಲನೆಗಳ ಬಗ್ಗೆ ಮಾತನಾಡಿ ಜನಜಾಗೃತಿಯನ್ನು ಮೂಡಿಸಿದರು. ಪೋಷಕರಲ್ಲಿ, ಸ್ಥಳೀಯ ನಾಯಕರುಗಳಲ್ಲಿ, ಧಾರ್ಮಿಕ ಮುಖಂಡರಲ್ಲಿ ತಮ್ಮ ಕರುಳಿನ ಕುಡಿಗಳಾದ ಮನೆಯ ಹೆಣ್ಣುಮಕ್ಕಳನ್ನು ಈ ಕ್ರೂರ ಪದ್ಧತಿಯ ಹೆಸರಿನಲ್ಲಿ ಸಾವಿನ ಮನೆಗೆ ದೂಡಬೇಡಿ ಎಂದು ವಿನಂತಿಸಿದರು. ಪುರುಷ ಸ್ವಾರ್ಥಕ್ಕಾಗಿ ಧರ್ಮದ ಹೆಸರಿನಲ್ಲಿ ನಡೆಯುವ ಈ ಅಮಾನುಷ ಕ್ರಿಯೆಯ ಕರಾಳ ಪರಿಣಾಮಗಳನ್ನು ಜನರಿಗೆ ಮನಮುಟ್ಟುವಂತೆ ವಿವರಿಸಿದರು. ಆಫ್ರಿಕಾವಷ್ಟೇ ಅಲ್ಲದೆ ವಿಶ್ವದ ಇತರ ಮೂಲೆ ಮೂಲೆಗಳಿಗೂ ಅಂಕಿ ಅಂಶದ ಆಧಾರದ ಮೇಲೆ ಪ್ರದೇಶಗಳನ್ನು ಆಯ್ಕೆ ಮಾಡಿ ಖುದ್ದಾಗಿ ಹೋಗಿ ಈ ಅಜ್ಞಾನದ ವಿರುದ್ಧ ಅರಿವನ್ನು ಮೂಡಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದರು. ಈ ನಿಟ್ಟಿನಲ್ಲಿ ತನ್ನ ಪ್ರತೀ ಹೆಜ್ಜೆಗೂ ಜೊತೆಗಿದ್ದ ವಿಶ್ವಸಂಸ್ಥೆಯ ಜನಸಂಖ್ಯಾನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಸಫೀಸಾ ಸಾದಿಕ್ ರವರನ್ನು ಕೃತಜ್ಞತೆಯಿಂದ ಸ್ಮರಿಸಲೂ ವಾರಿಸ್ ಮರೆಯುವುದಿಲ್ಲ. ಧಾರ್ಮಿಕ ಸಂಘಟನೆಗಳಿಂದ, ಅವುಗಳ ಮುಖಂಡರಿಂದ ಬಂದ ವಿರೋಧ, ಕೊಲೆ ಬೆದರಿಕೆ ಮತ್ತು ಒಂದೆರಡು ಕೊಲೆ ಯತ್ನ ಗಳಿಗೂ ಬಗ್ಗದ ವಾರಿಸ್ ಈ ಸಾಮಾಜಿಕ ಅನಿಷ್ಟವನ್ನು ಬುಡಸಮೇತ ಕಿತ್ತು ಎಸೆಯುತ್ತೇನೆ ಎಂಬ ಧೈರ್ಯದಲ್ಲೇ ಯಾವ ಬಾಹ್ಯ ಒತ್ತಡಕ್ಕೂ ಜಗ್ಗದೆ ಮುನ್ನುಗ್ಗಿದರು.

ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ವಾರಿಸ್ 2002 ರಲ್ಲಿ `ವಾರಿಸ್ ಡಿರೀ ಫೌಂಡೇಷನ್' ಎಂಬ ಸಂಸ್ಥೆಯನ್ನು ವಿಯೆನ್ನಾದಲ್ಲಿ ಸ್ಥಾಪಿಸುತ್ತಾರೆ. ವಿಶ್ವದಾದ್ಯಂತ ಎಫ್.ಜಿ.ಎಮ್ ನ ವಿರುದ್ಧ ಜನಜಾಗೃತಿ ಮೂಡಿಸಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಥಾ ತೆರೆಮರೆಯಲ್ಲಿ ನಡೆಸಲಾಗುವ ಎಫ್.ಜಿ.ಎಮ್ ಅನ್ನು ಬೆಳಕಿಗೆ ತಂದು ಅದನ್ನು ಹೊಡೆದೋಡಿಸಲು, ಎಫ್.ಜಿ.ಎಮ್ ನಿಂದ ಬಾಧಿತರಾದ ಹೆಣ್ಣು ಮಕ್ಕಳಿಗೆ ಆಶ್ರಯ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು… ಹೀಗೆ ಹತ್ತು ಹಲವು ಮಹತ್ವದ ಬೃಹತ್ ಹೆಜ್ಜೆಗಳನ್ನು ಈ ಸಂಸ್ಥೆ ಇಟ್ಟು ಅದನ್ನು ಯಶಸ್ವಿಯಾಗಿ ನಡೆಸುತ್ತಲೂ ಬಂದಿದೆ. 2010 ರಲ್ಲಿ ಈ ಸಂಸ್ಥೆ `ಡೆಸರ್ಟ್ ಫ್ಲವರ್ ಫೌಂಡೇಷನ್' ಎಂಬುದಾಗಿ ಹೆಸರನ್ನು ಬದಲಾಯಿಸಿಕೊಂಡು ತನ್ನ ಜನಸೇವೆಯ ಮಹಾಕಾರ್ಯವನ್ನು ಮುಂದುವರೆಸಿತು. ಎಫ್.ಜಿ.ಎಮ್ ಕುರಿತಾದ ಹಲವು ತರಬೇತಿ ಶಿಬಿರಗಳು, ವಿಚಾರಗೋಷ್ಠಿಗಳು, ಜನಜಾಗೃತಿಯ ರ್ಯಾಲಿಗಳು ಹಾಗೂ ಚ್ಯಾರಿಟಿ ಕಾರ್ಯಕ್ರಮಗಳನ್ನು ದೊಡ್ಡಮಟ್ಟಿನಲ್ಲಿ ಈ ಸಂಸ್ಥೆಯು ಸ್ಥಳೀಯ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳ ಜೊತೆಗೆ ಕೈಜೋಡಿಸಿ ವಿವಿಧ ದೇಶಗಳಲ್ಲಿ ನಿಷ್ಠೆಯಿಂದ ಮಾಡುತ್ತಿದೆ. ತಮ್ಮ ಹೆಣ್ಣುಮಕ್ಕಳನ್ನು ಈ ಕ್ರೂರ ಪದ್ಧತಿಗೆ ದೂಡದ ಕುಟುಂಬಗಳಿಗೆ ಕೆಲವು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವೂ ಫೌಂಡೇಷನ್ ವತಿಯಿಂದ ನಡೆದಿದೆ. ದಾನಿಗಳ ಕೊಡುಗೆಯನ್ನು ಹೊರತುಪಡಿಸಿ ವಾರಿಸ್ ರ ಲೇಖನಗಳು, ಸಂದರ್ಶನಗಳು ಹಾಗೂ ಇತರೆ ಚಟುವಟಿಕೆಯಿಂದ ಬರುವ ಆದಾಯವು ನೇರವಾಗಿ ಸಂಸ್ಥೆಯ ಬೊಕ್ಕಸದಲ್ಲಿ ಯೋಜನೆಗಳ ಅನುಷ್ಠಾನಕ್ಕಾಗಿ ಜಮೆಯಾಗುತ್ತಿದೆ. ಹಾಗೆಯೇ, `ಜೊತೆಜೊತೆಗೇ ನೀವೂ ನಿಮ್ಮೊಂದಿಗೆ ಕೈ ಜೋಡಿಸಿ. ಈ ಅಮಾನುಷ ಪದ್ಧತಿಯನ್ನು ಹೊಡೆದುರುಳಿಸೋಣ' ಎಂದು ಈ ಫೌಂಡೇಷನ್ ತನ್ನ ವೆಬ್ ಸೈಟ್ ಮುಖಾಂತರ ಎಲ್ಲರಲ್ಲೂ ವಿನಂತಿಸುತ್ತಿದೆ. 

1998 ರಲ್ಲಿ ಪ್ರಕಟವಾದ ಆತ್ಮಕಥನ `ಡೆಸರ್ಟ್ ಫ್ಲವರ್' ಸೇರಿದಂತೆ ಇನ್ನೂ ಹಲವು ಪುಸ್ತಕಗಳ ಲೇಖಕಿಯೂ ಹೌದು ಈ ವಾರಿಸ್ ಡಿರೀ. ಇವರ ಆತ್ಮಕಥನ `ಡೆಸರ್ಟ್ ಫ್ಲವರ್' ಮತ್ತು ಮಹಾತ್ವಾಕಾಂಕ್ಷಿ ಸಂಸ್ಥೆ `ಡೆಸರ್ಟ್ ಫ್ಲವರ್ ಫೌಂಡೇಷನ್' ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರಗಳಲ್ಲಿ ಕ್ರಮವಾಗಿ ತನ್ನ ಮುಡಿಗೇರಿಸಿಕೊಂಡಿದೆ. `ಡೆಸರ್ಟ್ ಫ್ಲವರ್' ಪುಸ್ತಕ ಅಂತಾರಾಷ್ಟ್ರೀಯ ಬೆಸ್ಟ್ ಸೆಲ್ಲರ್ ಆಗಿದ್ದಷ್ಟೇ ಅಲ್ಲದೆ ವಿಶ್ವದಾದ್ಯಂತ ಎಂಭತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿ, ಹಲವು ಆವೃತ್ತಿಗಳನ್ನು ಕಂಡಿದೆ. ಹಿರಿಯ ಲೇಖಕ ಡಾ. ಎನ್. ಜಗದೀಶ್ ಕೊಪ್ಪ ಇದರ ಅನುವಾದವನ್ನು `ಮರುಭೂಮಿಯ ಹೂ' ಎಂಬ ಹೆಸರಿನಲ್ಲಿ ಮನಮುಟ್ಟುವಂತೆ ಕನ್ನಡಕ್ಕೆ ತಂದಿದ್ದಾರೆ. 2009 ರಲ್ಲಿ `ಡೆಸರ್ಟ್ ಫ್ಲವರ್' ಎಂಬ ಹೆಸರಿನಲ್ಲೇ ಇವರ ಜೀವನಗಾಥೆ ಒಂದು ಯಶಸ್ವೀ ಚಲನಚಿತ್ರವಾಯಿತು. ವಾರಿಸ್ ರ ಪಾತ್ರವನ್ನು ಮನೋಜ್ಞವಾಗಿ ತೆರೆಯ ಮೇಲೆ ತಂದಿರುವ ಇಥಿಯೋಪಿಯನ್ ಮೂಲದ ನಟಿ, ಮಾಡೆಲ್ ಲಿಯಾ ತನ್ನ ಅದ್ಭುತ ಅಭಿನಯದಿಂದ ವಾರಿಸ್ ರ ನೋವು, ಹತಾಶೆ, ಅಸಹಾಯಕತೆ, ಜೀವನಪ್ರೀತಿ, ಧೈರ್ಯ, ಹೋರಾಟ ಎಲ್ಲವನ್ನೂ ನಮ್ಮೊಳಗೆ ಇಳಿಸಿ ವಾರಿಸ್ ಇನ್ನೂ ಆಪ್ತರಾಗುವಂತೆ ಮಾಡುತ್ತಾರೆ. 

******

ಪ್ರಸ್ತುತ ಎಫ್.ಜಿ.ಎಮ್ ಎಂಬ ಅಮಾನವೀಯ ಆಚರಣೆಯ ವಿರುದ್ಧದ ಅಭಿಯಾನ ಹಲವು ಅಡೆತಡೆಗಳನ್ನು ದಾಟುತ್ತಾ ಒಂದು ಹಂತಕ್ಕೆ ಬಂದಿದೆ. ಹಲವು ದೇಶಗಳಲ್ಲಿ ಎಫ್.ಜಿ.ಎಮ್ ಅನ್ನು ಕಾನೂನುಬಾಹಿರವೆಂದು ಸರ್ಕಾರಗಳು ಅಧಿಕೃತವಾಗಿ ಘೋಷಿಸಿವೆ. ಆದರೂ ತೆರೆಮರೆಯಲ್ಲಿ, ಗುಟ್ಟಾಗಿ ಕಟ್ಟರ್ ಸಂಪ್ರದಾಯವಾದಿಗಳು ಇಂದಿಗೂ ಸಂಸ್ಕøತಿಯ ಹೆಸರಿನಲ್ಲಿ ತಮ್ಮ ತೆವಲನ್ನು ತೀರಿಸಿಕೊಳ್ಳುತ್ತಿದ್ದಾರೆ. ಎಫ್.ಜಿ.ಎಮ್ ನಡೆಸಿಕೊಡುವ ಯಾವುದೇ ಮಾಹಿತಿ ಸಿಕ್ಕರೂ ಕೂಡಲೇ ಸ್ಥಳೀಯ ಪೋಲೀಸ್ ವ್ಯವಸ್ಥೆಯನ್ನು ಸಂಪರ್ಕಿಸುವಂತೆ ಪಾಶ್ಚಿಮಾತ್ಯ ದೇಶಗಳೂ ಸೇರಿದಂತೆ ಹಲವು ದೇಶಗಳು ತಮ್ಮ ಪ್ರಜೆಗಳಿಗೆ ಕರೆಕೊಟ್ಟಿವೆ. ಕೆನ್ಯಾ, ಸೊಮಾಲಿಯಾ, ಇಥಿಯೋಪಿಯಾ ಮೊದಲಾದ ದೇಶಗಳಲ್ಲಿ ಎಫ್.ಜಿ.ಎಮ್ ವಿರುದ್ಧ ವ್ಯವಸ್ಥಿತವಾಗಿ ಜನಜಾಗೃತಿಯನ್ನು ಮೂಡಿಸಲಾಗುತ್ತಿದೆ. ಸಂಪೂರ್ಣವಾಗಿ ಇದರ ನಿವಾರಣೆ ಸಾಧ್ಯವಾಗದಿದ್ದರೂ ಎಫ್.ಜಿ.ಎಮ್ ಸಂಬಂಧಿ ಅಂಕಿಅಂಶಗಳಲ್ಲಿ ಗಣನೀಯವಾದ ಸುಧಾರಣೆ ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಒತ್ತಡದ ಪರಿಣಾಮ ಸೊಮಾಲಿಯಾದಂತಹ ದೇಶಗಳ ಸರ್ಕಾರಗಳು ಎಫ್.ಜಿ.ಎಮ್ ಅನ್ನು ನಿಷೇಧಿಸುವ ಬಗ್ಗೆ ಗಂಭೀರವಾಗಿ ಚಿಂತನೆಯನ್ನು ನಡೆಸುತ್ತಿವೆ.  

ಎರಡು ಗಂಡು ಮಕ್ಕಳ ತಾಯಿಯಾದ ವಾರಿಸ್, `ಎಫ್.ಜಿ.ಎಮ್ ಗೆ ಬಲಿಯಾಗದಂತೆ ಹೆಣ್ಣುಮಕ್ಕಳಿಗೆ, ಪೋಷಕರಿಗೆ ಜಾಗೃತಿ ಮೂಡಿಸುವುದರ ಜೊತೆಯೇ, ಗಂಡು ಮಕ್ಕಳಿಗೂ ಈ ಕ್ರೂರ ಪದ್ಧತಿಯ ಬಗ್ಗೆ ಯಾವುದೇ ಪೂರ್ವಾಗ್ರಹ ಮತ್ತು ಮುಚ್ಚುಮರೆಯಿಲ್ಲದೆ ಬಿಡಿಸಿ ಹೇಳಬೇಕು. ಹೆಣ್ಣೆಂದರೆ ಕೇವಲ ಭೋಗದ ವಸ್ತುವೆಂದು ತಿಳಿಯದೆ, ಲಿಂಗ ತಾರತಮ್ಯ ಮಾಡದೆ ಒಂದು ಸೌಹಾರ್ದ ಸಮಾಜವನ್ನು ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ' ಎಂದು ಅಭಿಪ್ರಾಯ ಪಡುತ್ತಾರೆ. ಎಫ್.ಜಿ.ಎಮ್ ಸಂಪೂರ್ಣವಾಗಿ ನಿರ್ಮೂಲನೆಯಾಗುವರೆಗೂ ಯಾವ ಕಾರಣಕ್ಕೂ ಇಟ್ಟ ಹೆಜ್ಜೆಯನ್ನು ಹಿಂದಿಡುವುದಿಲ್ಲ ಎಂದು ವಾರಿಸ್ ಘೋಷಿಸಿದ್ದಾರೆ. ತನ್ನ ಜೀವಿತಾವಧಿಯಲ್ಲೇ ಈ ಪದ್ಧತಿಯನ್ನು ಶಾಶ್ವತವಾಗಿ ಅಳಿಸಿಹಾಕುವ ಆಶಾಭಾವವೂ ವಾರಿಸ್ ಗಿದೆ.  

`ಕಗ್ಗತ್ತಲೆಯ ಖಂಡ' ಎಂಬ ಕಪ್ಪುಚುಕ್ಕೆ ಇನ್ನಾದರೂ ಆಫ್ರಿಕಾದಿಂದ ಕಳಚಿಕೊಳ್ಳಲಿ. ಏನೂ ಅರಿಯದ ಪುಟ್ಟ ಹೆಣ್ಣುಜೀವವೊಂದು ತುಕ್ಕು ಹಿಡಿದ ಚಾಕುವಿನಡಿಗೆ ಸಿಕ್ಕಿ ಹೇಳಹೆಸರಿಲ್ಲದಂತೆ ಅಸುನೀಗದಿರಲಿ. ವಿಶ್ವದ ಯಾವುದೋ ಮೂಲೆಯೊಂದರಲ್ಲಿ ಕೋಣೆಯ ಕದ ಮುಚ್ಚಿ ಜೀವನವಿಡೀ ಹೊಟ್ಟಿಹಿಡಿದುಕೊಂಡು ಮೌನವಾಗಿ ರೋದಿಸುವ, ನರಳಾಡುವ ಸ್ಥಿತಿ ಯಾವ ಹೆಣ್ಣಿಗೂ ಬರದಿರಲಿ. ಅಷ್ಟರ ಮಟ್ಟಿಗೆ ವಾರಿಸ್ ಮತ್ತು ಅವರ ಸಾವಿರಾರು ಕಾರ್ಯಕರ್ತರ ನಿಸ್ವಾರ್ಥ ಸೇವೆಯ ಶ್ರಮ ಸಾರ್ಥಕ.  

(ಮುಗಿಯಿತು….)    

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Anantha Ramesh
8 years ago

ಮರುಭೂಮಿ ಖಂಡದ ಹೆಂಗಳ ವಿದ್ರಾವಕ ಕಥೆಯನ್ನು ಮತ್ತು ವಾರಿಸ್ ಡಿರೀ ಅವರ ಹೋರಾಟದ ದಾರಿಯನ್ನು ಮನ ಮುಟ್ಟುವಂತೆ ಬರೆದ ಉತ್ತಮ ಸರಣಿ ಬರಹ. ಲೇಖಕರಿಗೆ ಧನ್ಯವಾದಗಳು.

Prasad
Prasad
8 years ago

ಪ್ರಿಯ ರಮೇಶ್ ಅವರೇ, ಪ್ರತಿಕ್ರಿಯೆಗಾಗಿ ಧನ್ಯವಾದಗಳು… ಪ್ರಕಟಿಸಿದ ಪಂಜು ತಂಡಕ್ಕೂ ವಂದನೆಗಳು…

Chaithra
Chaithra
8 years ago

ಉತ್ತಮವಾದ ನಿರೂಪಣೆಯ ಸರಣಿ ಬರಹ 🙂

Prasad
Prasad
8 years ago

ಚೈತ್ರಾರಿಗೆ ಥ್ಯಾಂಕ್ಯೂ… ಓದಿನ ಪಯಣ ಹೀಗೇ ಮುಂದುವರಿಯಲಿ ಎಂಬ ಹಾರೈಕೆಯೊಂದಿಗೆ… 🙂

4
0
Would love your thoughts, please comment.x
()
x