“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಭಾಗ 2): ಪ್ರಸಾದ್ ಕೆ.

ಇಲ್ಲಿಯವರೆಗೆ

ಈ ಮೊದಲೇ ಹೇಳಿದಂತೆ ಎಫ್. ಜಿ. ಎಮ್ ಮಾಡಿಸಿಕೊಂಡ ಹೆಣ್ಣುಮಕ್ಕಳಿಗೆ ವಿವಾಹಕ್ಕೆ ಸೊಮಾಲಿಯಾದಲ್ಲಿ ಭಾರೀ ಬೇಡಿಕೆ. ಓರ್ವ ವ್ಯಕ್ತಿ ಎಷ್ಟು ಒಂಟೆಯನ್ನು ಹೊಂದಿರುತ್ತಾನೆ ಎಂಬುದರ ಮೇಲೆ ಇಲ್ಲಿ ಶ್ರೀಮಂತಿಕೆಯನ್ನು ಅಳೆಯುತ್ತಾರಂತೆ. ವಧುದಕ್ಷಿಣೆಯೆಂಬ ಪದ್ಧತಿ ಜಾರಿಯಲ್ಲಿರುವುದರಿಂದ ಒಂಟೆಯನ್ನೇ ವಧುದಕ್ಷಿಣೆಯನ್ನಾಗಿ ಕೊಡುವುದು ಇಲ್ಲಿಯ ವಾಡಿಕೆ. ಹೀಗಾಗಿ ಎಫ್. ಜಿ. ಎಮ್ ಮಾಡಿಸಿಕೊಂಡ ಹೆಣ್ಣುಮಕ್ಕಳು ಇಲ್ಲಿನ ತಂದೆ-ತಾಯಂದಿರಿಗೆ ಶುದ್ಧ ಮಾರಾಟದ ಸರಕುಗಳು.     

************************

ವಾಪಾಸು ನಮ್ಮ ಕಥಾನಾಯಕಿ ವಾರಿಸ್ ಕಥನಕ್ಕೆ ಬರೋಣ. ತನ್ನ ಐದನೇ ವಯಸ್ಸಿಗೆ ಎಫ್. ಜಿ. ಎಮ್ ಮಾಡಿಸಿಕೊಂಡ ವಾರಿಸ್ ಗೆ ಹದಿಮೂರನೇ ವಯಸ್ಸಿನಲ್ಲಿ ತಂದೆ ವಿವಾಹಕ್ಕೆ ವರ ಗೊತ್ತು ಮಾಡುತ್ತಾನೆ. ತನ್ನನ್ನು ಮದುವೆಯಾಗುವ ವರನಾದ ಗಲೂಲ್ ಎಂಬ ಹೆಸರಿನ ಮನುಷ್ಯ ಅರವತ್ತಕ್ಕೂ ಹೆಚ್ಚು ವಯಸ್ಸಿನ ಬಿಳಿಗಡ್ಡದ ವೃದ್ಧ ಎಂಬುದು ತಿಳಿಯುತ್ತಲೇ ವಾರಿಸ್ ಗೋಳಾಡುತ್ತಾಳೆ. ಜುಜುಬಿ ಐದು ಒಂಟೆಯ ವಧುದಕ್ಷಿಣೆಯ ಆಸೆಗಾಗಿ ವಾರಿಸ್ ನ ತಂದೆ ಮಗಳನ್ನು ಈ ವೃದ್ಧನಿಗೆ ಗಂಟುಹಾಕಲು ಹವಣಿಸುತ್ತಿರುತ್ತಾನೆ. ಕೌಟುಂಬಿಕ ಹಿನ್ನೆಲೆಯ ವಿಷಯಕ್ಕೆ ಬಂದರೆ ವಾರಿಸ್ ರ ತಂದೆ-ತಾಯಿ ಉತ್ತರ ಮತ್ತು ದಕ್ಷಿಣ ಧ್ರುವಗಳು. ವಾರಿಸ್ ರ ತಂದೆ ಸ್ಪುರದ್ರೂಪಿ, ಅನಕ್ಷರಸ್ಥ, ಅಲೆಮಾರಿ ಮತ್ತು ತಕ್ಕಮಟ್ಟಿಗೆ ಸ್ತ್ರೀ ಲೋಲ. ಆದರೆ ತಾಯಿ ಸೊಮಾಲಿಯಾದ ನಗರವೊಂದರ ಪ್ರತಿಷ್ಠಿತ ಕುಟುಂಬದಿಂದ ಬಂದ ಸುಸಂಸ್ಕøತೆ. ಇವನೊಂದಿಗೆ ಪ್ರೀತಿಯಲ್ಲಿ ಬಿದ್ದ ಒಂದೇ ಕಾರಣಕ್ಕೆ ತನ್ನ ಎಲ್ಲರನ್ನೂ, ಎಲ್ಲವನ್ನೂ ಬಿಟ್ಟುಬಂದ ಹೆಣ್ಣು ಈ ವಾರಿಸ್ ಳ ತಾಯಿ. ಆಕೆಯ ಕುಟುಂಬದ ರಾಜಕೀಯ, ಕೌಟುಂಬಿಕ ಪ್ರಾಬಲ್ಯಕ್ಕೆ ಹೆದರಿ ದಂಪತಿಗಳು ಈ ಮರಳುಗಾಡಿನಲ್ಲಿ ಬೀಡುಬಿಟ್ಟಿದ್ದರು. ಇಂಥಾ ಹಿನ್ನೆಲೆಯಿಂದ ಬಂದ ವಾರಿಸ್ ರ ತಾಯಿಗೆ ಮಗಳ ಗೋಳು ಅರ್ಥವಾಗುತ್ತದೆ. `ಮೊಗದಿಶು ನಗರದ ಚಿಕ್ಕಮ್ಮನ ಮನೆಗೆ ಓಡಿ ಹೋಗುತ್ತೇನಮ್ಮಾ, ಆದರೆ ಆ ಮುದುಕನನ್ನು ಮದುವೆಯಾಗುವುದಿಲ್ಲ', ಎಂದು ಮಗಳು ಕಣ್ತುಂಬಿ ಹೇಳುವಾಗ ಆ ತಾಯಿ ಮೌನವಾಗಿಯೇ ಕಣ್ಣಲ್ಲೇ ಸಮ್ಮತಿಯನ್ನು ಕೊಡುತ್ತಾರೆ. ಒಂದೆರಡು ದಿನಗಳ ನಂತರ ಒಂದು ಅರ್ಧರಾತ್ರಿಯಲ್ಲಿ ಗುಟ್ಟಾಗಿ ಅಮ್ಮ ವಾರಿಸ್ ನನ್ನು ಗುಟ್ಟಾಗಿ ಎಬ್ಬಿಸಿ `ಓಡು ಮಗಳೇ' ಎಂದು ಅವಳ ಕಿವಿಯಲ್ಲಿ ಉಸುರುತ್ತಾಳೆ. ಅಪ್ಪ ಬಗಲಲ್ಲಿ ಗಡದ್ದಾಗಿ ಗೊರಕೆ ಹೊಡೆಯುತ್ತಿರುತ್ತಾನೆ. ಆ ಕರಾಳ ಕತ್ತಲಿನಲ್ಲಿ ಭಾರವಾದ ಕಳ್ಳ ಹೆಜ್ಜೆಯನ್ನಿಟ್ಟು, ಕಣ್ಣೆಲ್ಲೆಲ್ಲಾ ನೀರು ತುಂಬಿಕೊಂಡು ಅಮ್ಮನನ್ನು ಆಲಂಗಿಸಿ, ವಾರಿಸ್ ಎಂಬ ಹದಿಮೂರು ವರ್ಷದ ಬಾಲೆ ಹಿಂದೆಂದೂ ಕಾಣದ ಚಿಕ್ಕಮ್ಮನನ್ನು ಹುಡುಕಿಕೊಂಡು, ಬರೀ ಹೆಸರಷ್ಟೇ ಗೊತ್ತಿರುವ ನೂರಾರು ಮೈಲು ದೂರದ ಮೊಗದಿಶು ಎಂಬ ಸೊಮಾಲಿಯಾದ ಪಟ್ಟಣದ ಕಡೆಗೆ ಉಟ್ಟಬಟ್ಟೆಯಲ್ಲೇ ಕಾಲ್ನಡಿಗೆಯಲ್ಲೇ ಹೊರಟಿತು.

ಕಲ್ಲು, ಮಣ್ಣು, ಮರಳು, ಮುಳ್ಳು, ಹಾವು, ಚೇಳು, ಹಸಿವು, ನೀರಡಿಕೆ ಗಳೆಂಬ ಪರಿವೆಯಿಲ್ಲದೆ ಬರಿಗಾಲಿನಲ್ಲೇ ಎರಡು ದಿನ ನಿರಂತರವಾಗಿ ದಿಕ್ಕು ದೆಸೆಯಿಲ್ಲದೆ ದಾಪುಗಾಲು ಹಾಕುತ್ತಿರುವ ವಾರಿಸ್ ನಿಧಾನಕ್ಕೆ ಕುಸಿಯತೊಡಗುತ್ತಾಳೆ. ಮಾರ್ಗಮಧ್ಯದಲ್ಲಿ ಸಿಂಹವೊಂದು ಎದುರಾಗಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ, ಎಲುಬಿನ ಗೂಡಾಗಿ ಮಲಗಿದ್ದ ವಾರಿಸ್ ಳನ್ನು ಕಂಡು, ಏನೂ ಮಾಡದೆ, ಹಾಗೆಯೇ ಸುಮ್ಮನೆ ತಿರುಗಿ ಹೋಗುತ್ತದೆ. ಹಾಗೋ ಹೀಗೋ ಮುಖ್ಯ ಹೆದ್ದಾರಿಯನ್ನು ತಲುಪುವಷ್ಟರಲ್ಲಿ ಅವಳ ಒಡೆದ, ಚರ್ಮ ಕಿತ್ತು ಹೋದ ಪಾದಗಳಿಂದ ರಕ್ತ ಸೋರುತ್ತಿರುತ್ತದೆ, ಕಣ್ಣುಗಳು ಮಂಕಾಗಿ, ಕೂದಲು, ಮೈ, ಬಟ್ಟೆಗಳು ಮರಳಿನಿಂದ ಆವೃತವಾಗಿರುತ್ತವೆ. ರಾತ್ರಿಯಲ್ಲಿ ಭಿಕ್ಷುಕಿಯಂತೆ ಕಾಣಿಸುವ, ಏಕಾಂಗಿಯಾಗಿ ನಡೆಯುತ್ತಿರುವ ವಾರಿಸ್ ಳನ್ನು ಓರ್ವ ಸಹಚರನೊಂದಿಗೆ ಸಾಗುತ್ತಿರುವ ಟ್ರಕ್ ಚಾಲಕ ತನ್ನ ಕಲ್ಲು ತುಂಬಿದ ಟ್ರಕ್ ನ ಹಿಂಬದಿಯಲ್ಲಿ ಕೂರಿಸಿಕೊಳ್ಳುತ್ತಾನೆ. ರಾತ್ರಿಯ ಬಿರುಸಾದ ಗಾಳಿಯ ಚಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಲಾರಿಯ ಹಿಂಭಾಗದ ಮೂಲೆಯೊಂದಕ್ಕೆ ಒತ್ತಾಗಿ ಕುಳಿತ ವಾರಿಸ್ ಮೆಲ್ಲನೆ ತೂಕಡಿಸುತ್ತಿರುವಂತೆಯೇ ತನ್ನ ತೊಡೆಗಳ ಮಧ್ಯೆ ಏನೋ ಆಗುತ್ತಿರುವುದು ಅವಳಿಗೆ ಅರಿವಾಗುತ್ತದೆ. ಚಲಿಸುವ ಲಾರಿಯಲ್ಲೇ ಚಾಲಕನ ಕಚ್ಚೆಹರುಕ ಸಹಚರ ತನ್ನ ಪ್ಯಾಂಟ್ ಬಿಚ್ಚಿ ಹಾಕಿ ಹಿಂಭಾಗದಿಂದ ವಾರಿಸ್ ಳ ಬಟ್ಟೆಯನ್ನು ಹರಿಯತೊಡಗುತ್ತಾನೆ. ಹಿಂದೊಮ್ಮೆ ಅಪ್ಪನ ವಿಕೃತಕಾಮಿ ಗೆಳೆಯನೊಬ್ಬ ನಕ್ಷತ್ರದ ಕಥೆ ಹೇಳುತ್ತೇನೆಂದು ಹೇಳಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡ ನೆನಪು ಇನ್ನೂ ಹಸಿಹಸಿಯಾಗಿರುವಾಗಲೇ, ತಕ್ಷಣ ಏನಾಗುತ್ತಿದೆಯೆಂಬುದನ್ನು ಅರಿತ ವಾರಿಸ್ ನನಗೆ ಮೂತ್ರ ವಿಸರ್ಜನೆ ಮಾಡಬೇಕು ಎಂಬಂತೆ ಕೈಕಾಲು ಆಡಿಸುತ್ತಾಳೆ. ಅಸಮಾಧಾನದಿಂದಲೇ ಅಸ್ತು ಎನ್ನುವ ಆತ ಲಾರಿಯ ಆ ಮೂಲೆಗೆ ಹೋಗಿ ಮಾಡು ಎನ್ನುತ್ತಾನೆ. ಸುಳ್ಳು ನೆಪ ಮಾಡಿ ಮೂಲೆಗೆ ಹೋದ ಅವಳು ದಟ್ಟಕತ್ತಲಿನ ಲಾಭವನ್ನು ಪಡೆದುಕೊಂಡು ಒಂದೆರಡು ಚೂಪಾದ ಕಲ್ಲುಗಳನ್ನು ಕೈಗಳಲ್ಲಿ ಅಡಗಿಸಿಟ್ಟುಕೊಳ್ಳುತ್ತಾಳೆ. ಮರುಕ್ಷಣವೇ ಆತನ ಬಳಿಗೆ ಬಂದು ಮಲಗಿಕೊಂಡು ಸಹಕರಿಸುವಂತೆ ನಟಿಸುತ್ತಾಳೆ. ಸಂತಸಗೊಂಡ ಆತ ತನ್ನ ಮೇಲೇರತೊಡಗಿದಂತೆಯೇ ವಾರಿಸ್ ಚೂಪಾದ ಕಲ್ಲುಗಳಿಂದ ಆತನ ತಲೆಗೆ ಭೀಕರವಾಗಿ ಚಚ್ಚತೊಡಗುತ್ತಾಳೆ. ಚೀರಾಡತೊಡಗಿದ ಆತನ ಆರ್ತನಾದ ಜೋರಾಗುತ್ತಲೇ ಏನಾಯಿತೆಂದು ಒಳಗಿನ ಪುಟ್ಟಕಿಂಡಿಯಲ್ಲಿ ನೋಡಿದ ಚಾಲಕ, ಎಲುಬಿನ ಹಂದರದಂತಿರುವ ಈ ಹುಡುಗಿ ತನ್ನ ಸಹಚರನ ತಲೆಯನ್ನು ಕಲ್ಲಿನಿಂದ ಹುಚ್ಚಿಯಂತೆ ಚಚ್ಚುತ್ತಿರುವುದನ್ನು ಕಂಡು ಗಾಬರಿಯಾಗಿ ಕೂಡಲೇ ಗಾಡಿಯನ್ನು ನಿಲ್ಲಿಸುತ್ತಾನೆ. ಅವನು ಟ್ರಕ್ ನ ಹಿಂಭಾಗಕ್ಕೆ ಬರುವಷ್ಟರಲ್ಲಿ ವಾರಿಸ್ ಕತ್ತಲಿನಲ್ಲಿ ಮಾಯವಾಗಿರುತ್ತಾಳೆ. ಆತನ ಸಹಚರನ ಅರೆನಗ್ನ ದೇಹ ರಕ್ತದ ಮಡುವಿನಲ್ಲಿ ವಿಲವಿಲನೆ ಒದ್ದಾಡುತ್ತಿರುತ್ತದೆ. ವಾರಿಸ್ ಳನ್ನು ಆತಂಕದಿಂದ ಹುಡುಕುವ ಚಾಲಕನ ಪ್ರಯತ್ನ ಮಣ್ಣುಪಾಲಾಗುತ್ತದೆ.      

ಹೀಗೆ ವಿಲಕ್ಷಣವಾಗಿ ಶುರುವಾದ ವಾರಿಸ್ ಳ ಪ್ರಯಾಣ ಬೆಳಕು ಹರಿಯುವಷ್ಟರಲ್ಲಿ ಎಲ್ಲೋ ಬಂದು ತಲುಪುತ್ತದೆ. ಇವಳ ಸ್ಥಿತಿಯನ್ನು ಕಂಡು ಮರುಗುವ ಸಭ್ಯ ನಾಗರಿಕನೊಬ್ಬ ತನ್ನ ಮರ್ಸಿಡಿಸ್ ಕಾರಿನಲ್ಲಿ ಪಟ್ಟಣದ ಹೊರಭಾಗಕ್ಕೆ ಅವಳನ್ನು ತಂದು ಬಿಡುತ್ತಾನೆ. ರಕ್ತ ಮತ್ತು ಮರಳಿನಿಂದ ಆವೃತವಾದ ಚಿಂದಿ ಬಟ್ಟೆಯನ್ನುಟ್ಟ, ಕೂದಲು ಕೆದರಿದ, ಎಲುಬಿನ ಗೂಡಾದ ಭಿಕ್ಷುಕಿಯಂತೆ ಕಾಣುವ ವಾರಿಸ್ ತನ್ನ ಚಿಕ್ಕಪ್ಪ ಅಹ್ಮದ್ ಡಿರೀ ಹೆಸರು ಹೇಳಿ, ಅವರ ಮನೆ ಎಲ್ಲಿದೆ ದಯವಿಟ್ಟು ಹೇಳಿ ಎಂದು ಕಂಡಕಂಡವರಲ್ಲಿ ಗೋಗರೆಯುತ್ತಾ, ಆ ದೊಡ್ಡ ಪಟ್ಟಣವನ್ನು ತನ್ನ ಪುಟ್ಟ ಅಚ್ಚರಿಯ ಕಂಗಳಲ್ಲಿ ನೋಡುತ್ತಾ ಅಲೆಯತೊಡಗುತ್ತಾಳೆ. ಕೊನೆಗೂ ಚಿಕ್ಕಮ್ಮ ಬಾಗಿಲು ತೆಗೆದಾಗ ಎದುರು ನಿಂತ ವಾರಿಸ್ ಳನ್ನು ಕಂಡು ದಿಗಿಲಾಗುತ್ತಾಳೆ. ವಾರಿಸ್ ಒಬ್ಬಳೇ ಮರಳುಗಾಡಿನಿಂದ ನೂರಾರು ಮೈಲು ದೂರದಲ್ಲಿರುವ ಮೊಗದಿಶು ಪಟ್ಟಣದವರೆಗೆ ಪಲಾಯನಗೈದು ಬಂದಳು ಎಂಬ ಸತ್ಯ ಆಕೆಯನ್ನು ತಲ್ಲಣಗೊಳಿಸುತ್ತದೆ. ಆದರೂ `ಮನೆಗೆ ಹೋಗು ಮಗಳೇ' ಎಂದು ಅವಳನ್ನು ಆಗಾಗ ಪುಸಲಾಯಿಸುತ್ತಾ, ಒಂದು ತಿಂಗಳ ಮಟ್ಟಿಗೆ ಅವಳಿಗೆ ಆಶ್ರಯವನ್ನು ನೀಡುತ್ತಾರೆ. ಇದೇ ಸಮಯದಲ್ಲಿ ಚಿಕ್ಕಮ್ಮನ ಇಬ್ಬರು ಗಂಡುಮಕ್ಕಳು ಪ್ರೀತಿಯ ಸಹೋದರರಂತೆ ವಾರಿಸ್ ಗೆ ಸ್ನೇಹಿತರಾಗುತ್ತಾರೆ. ಇವರಿಂದಲೇ ತನ್ನ ಅಕ್ಕನೂ ಇಲ್ಲಿ ವಾಸವಾಗಿದ್ದಾಳೆ ಎಂಬ ಸತ್ಯ ವಾರಿಸ್ ಗೆ ಗೊತ್ತಾಗುತ್ತದೆ. ಅಲೆಮಾರಿ ಜೀವನದಿಂದ ಬೇಸತ್ತು, ವಾರಿಸ್ ಳ ಅಕ್ಕ ಪ್ರೀತಿಸಿದ ಹುಡುಗನೊಂದಿಗೆ ಊರು ಬಿಟ್ಟು ಇಲ್ಲಿ ಬೀಡುಬಿಟ್ಟಿರುತ್ತಾಳೆ. ಒಂದು ತಿಂಗಳ ಬಳಿಕ, ಅಪ್ಪ ತನ್ನನ್ನು ವಾಪಾಸು ಕರೆದುಕೊಂಡು ಹೋಗಲು ಬರುತ್ತಿದ್ದಾನೆ ಎಂಬ ವಿಷಯವನ್ನು ತಿಳಿದ ಕೂಡಲೇ ವಾರಿಸ್ ತನ್ನನ್ನು ಉಳಿಸುವಂತೆ ಸಹೋದರರಲ್ಲಿ ಗುಟ್ಟಾಗಿ ಅಂಗಲಾಚುತ್ತಾಳೆ. ವಾರಿಸ್ ಳ ಸ್ಥಿತಿಯನ್ನು ಕಂಡು ಮರುಗಿದ ಈ ಹುಡುಗರು ಅವಳ ಕೈಗೆ ಒಂದೆರಡು ನೋಟನ್ನು ತುರುಕಿ, ಅವಳ ಅಕ್ಕನ ಮನೆಗೆ ತೆರಳುವ ಬಸ್ಸೊಂದರಲ್ಲಿ ರಹಸ್ಯವಾಗಿ ಕೂರಿಸುತ್ತಾರೆ. ಈ ವಿಷಯ ಯಾವ ಕಾರಣಕ್ಕೂ ಹೊರಬೀಳಬಾರದು ಎಂಬುದು ಮೂವರಲ್ಲೇ ಮೌಖಿಕ ಒಪ್ಪಂದವಾಗಿರುತ್ತದೆ. ಅಂತೂ ಇಂತೂ ವಾರಿಸ್ ತನ್ನ ಅಕ್ಕ ಅಮನ್ ಮನೆಯನ್ನು ತಲುಪುತ್ತಾಳೆ. ಇಲ್ಲಿ ಮೂರು ತಿಂಗಳುಗಳ ಬಳಿಕ ಸೇವಕಿಯಂತೆ ಉಳಿದ ವಾರಿಸ್ ಬಳಿಕ ತನ್ನ ಅಕ್ಕನಿಗೂ ಭಾರವಾಗಿ ಹೊರ ದಬ್ಬಲ್ಪಡುತ್ತಾಳೆ. ನಾಲ್ಕು ತಿಂಗಳಲ್ಲಿ ಎರಡು ಮನೆಗಳಿಂದ ಹೊರದಬ್ಬಲ್ಪಟ್ಟ ವಾರಿಸ್ ಮತ್ತೊಮ್ಮೆ ಅನಾಥೆಯಾಗಿ ಬೀದಿಪಾಲಾಗಿರುತ್ತಾಳೆ. 

*************************************     

ಆದರೆ ತನ್ನ ಅಕ್ಕ ಅಮನ್ ಮನೆಯಲ್ಲಿ ಕಳೆದ ಮೂರು ತಿಂಗಳ ವಾಸ್ತವ್ಯ ಅವಳನ್ನು ಮೊಗದಿಶು ನಗರದಲ್ಲಿರುವ ಅವಳ ಒಂದೆರಡು ಸಂಬಂಧಿಕರನ್ನು ಪರಿಚಯ ಮಾಡಿಸಿರುತ್ತದೆ. ಅಕ್ಕನ ಮನೆಯ ಬಳಿಕ ವಾರಿಸ್ ತನ್ನ ಅತ್ತೆ ಲೂಲುಳ ಮನೆಬಾಗಿಲು ತಟ್ಟುತ್ತಾಳೆ. ಇಲ್ಲೂ ಅಲ್ಪಸಮಯದ ವಾಸ್ತವ್ಯದ ಬಳಿಕ ವಾರಿಸ್ ಳನ್ನು ಕ್ಷುಲ್ಲಕ ಕಾರಣಗಳಿಂದ ಹೊರಹಾಕಲಾಗುತ್ತದೆ. ಹೀಗೆ ಹೋದಲ್ಲೆಲ್ಲಾ ಬಹಿಷ್ಕøತೆಯಾಗಿ ಕಂಗಾಲಾಗಿದ್ದ ಅವಳಿಗೆ ನೆರವು ಸಿಗುವುದು ಅಮ್ಮನ ತಂಗಿ ಶಾರು ಮನೆಯಲ್ಲಿ. ಈ ಮನೆಯಲ್ಲಿ ಮನೆಕೆಲಸ ಮಾಡುತ್ತಾ ಬಿಟ್ಟಿ ಸೇವಕಿಯಂತೆ ದುಡಿಯುವ ವಾರಿಸ್ ಗೆ ಏನಾದರೂ ಸ್ವಲ್ಪ ಸಂಪಾದನೆ ಮಾಡಿ ದೂರದ ಅಮ್ಮನಿಗೆ ನೆರವಾಗುವ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗುತ್ತದೆ. ಇದಕ್ಕಾಗಿಯೇ ಆಸುಪಾಸಿನ ಕಟ್ಟಡ ನಿರ್ಮಾಣ ನಡೆಯುತ್ತಿದ್ದ ಜಾಗವೊಂದರಲ್ಲಿ ಕೂಲಿ ಆಳಾಗಿ ಒಂದು ತಿಂಗಳು ದುಡಿದು ಸುಮಾರು ಎರಡು ಸಾವಿರ ರೂಪಾಯಿಗಳಷ್ಟು ಸಂಬಳವನ್ನು ಹೆಮ್ಮೆಯಿಂದ ಸಂಪಾದಿಸುತ್ತಾಳೆ. ಆದರೆ ಈ ಹಣವನ್ನು ಹಳ್ಳಿಯಲ್ಲಿರುವ ಅಮ್ಮನಿಗೆ ತಲುಪಿಸಬೇಕಾದ ವ್ಯಕ್ತಿ ಮಾತ್ರ ತಲುಪಿಸಲಿಲ್ಲ ಎಂಬ ಸುದ್ದಿ ಕೇಳಿ ನಂತರ ವಾರಿಸ್ ಗೆ ದುಃಖವಾಗುತ್ತದೆ. ಮುಂದೆ ಲಂಡನ್ನಿನಲ್ಲಿ ಸೊಮಾಲಿಯಾ ದೇಶದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಮ್ಮನ ಕಿರಿಯ ತಂಗಿಯ ಗಂಡ, ಚಿಕ್ಕಮ್ಮ ಶಾರು ಮನೆಗೆ ಭೇಟಿಯಿತ್ತಾಗ ವಾರಿಸ್ ಳ ಬದುಕು ಮೊದಲ ಟರ್ನಿಂಗ್ ಪಾಯಿಂಟ್ ಅನ್ನು ಪಡೆದುಕೊಳ್ಳುತ್ತದೆ. ಲಂಡನ್ನಿನ ಚಿಕ್ಕಪ್ಪ ತನ್ನ ಮನೆಕೆಲಸಕ್ಕೊಂದು ಹೆಣ್ಣುಮಗಳ ತಲಾಶೆಯಲ್ಲಿದ್ದಾರೆ ಎಂದು ಪಕ್ಕದ ರೂಮಿನಲ್ಲಿ ಮಾತನಾಡುವ ಸುದ್ದಿ ತನ್ನ ಕಿವಿಗೆ ಬೀಳುತ್ತಲೇ ಜಾಗೃತಳಾದ ವಾರಿಸ್ ತನ್ನ ಚಿಕ್ಕಮ್ಮ ಶಾರುಳಲ್ಲಿ `ಚಿಕ್ಕಪ್ಪನಿಗೆ ಹೇಳಿ ನನ್ನನ್ನು ಲಂಡನ್ನಿಗೆ ಕಳಿಸಿಕೊಡು' ಎಂದು ಅಂಗಲಾಚುತ್ತಾಳೆ. ಕೊನೆಗೂ ಇವಳ ಗೋಳಾಟಕ್ಕೆ ಮಣಿದ ಚಿಕ್ಕಮ್ಮ, ಈ ರಾಯಭಾರಿ ಚಿಕ್ಕಪ್ಪನೊಂದಿಗೆ ಮಾತಾಡಿ ಅವರನ್ನು ಒಪ್ಪಿಸುತ್ತಾಳೆ. ಜೀವನದಲ್ಲಿ ಮೊದಲ ಬಾರಿಗೆ ಚಿಕ್ಕಪ್ಪನ ನೆರವಿನಿಂದ ತನ್ನ ಹೆಸರಿನಲ್ಲಿ ಮಾಡಿಸಿದ ಪಾಸ್ ಪೋರ್ಟ್ ಮತ್ತು ಇತರ ಅಧಿಕೃತ ದಾಖಲೆಗಳನ್ನು ಕಂಡು ರೋಮಾಂಚನಗೊಳ್ಳುವ ವಾರಿಸ್ ಬಲುಬೇಗ ಏಕಾಂಗಿಯಾಗಿ, ಚಿಕ್ಕಪ್ಪನ ಸೇವಕರುಗಳ ನೆರವು ಪಡೆದು ಲಂಡನ್ ವಿಮಾನ ಹತ್ತುತ್ತಾಳೆ.

 

       

ನೆಟ್ಟಗೆ ಹದಿನಾಲ್ಕೂ ಆಗಿರದಿದ್ದ, ಕೇವಲ ಬುಡಕಟ್ಟು ಸೊಮಾಲಿಯನ್ ಭಾಷೆ ತಿಳಿದಿದ್ದ ಅನಕ್ಷರಸ್ಥೆ ವಾರಿಸ್ ಗೆ ಐರೋಪ್ಯರ ಬಿಳಿ ತೊಗಲು, ದೈತ್ಯ ವಿಮಾನಗಳು, ಲಂಡನ್ನಿನ ಸೌಂದರ್ಯ, ಪಾಶ್ಚಿಮಾತ್ಯ ಜೀವನ ಶೈಲಿ, ಚಿಕ್ಕಪ್ಪನ ರಾಯಭಾರ ನಿವಾಸದ ಐಷಾರಾಮಿ ಜೀವನ ಇವೆಲ್ಲವೂ ದಂಗು ಬಡಿಸುತ್ತವೆ. ಅಡುಗೆ ಭಟ್ಟ ಮತ್ತು ಕಾರು ಚಾಲಕನ ಹೊರತಾಗಿ ವಾರಿಸ್ ಆ ಮನೆಯ ಏಕಮಾತ್ರ ಸೇವಕಿಯಾಗಿರುತ್ತಾಳೆ. ಪ್ರತೀದಿನ ಮುಂಜಾನೆ ಐದಕ್ಕೆ ಎದ್ದು ರಾತ್ರಿ ಹನ್ನೆರಡರ ವರೆಗೂ ತಿಂಡಿ ಮಾಡಿ, ಕೋಟೆಯಂಥಾ ಮನೆಯ ಮೂಲೆಮೂಲೆಯನ್ನು ಕನ್ನಡಿಯಂತೆ ಸ್ವಚ್ಛಗೊಳಿಸಿ, ಅದೂ ಇದೂ ಎಂಬ ಭೇದವಿಲ್ಲದೆ ಎಲ್ಲಾ ಕೆಲಸಗಳನ್ನೂ ವಾರಿಸ್ ನಿಷ್ಠೆಯಿಂದ ವರ್ಷದ ಮುನ್ನೂರೈವತ್ತು ದಿನವೂ ಬಿಡುವಿಲ್ಲದೆ ಮಾಡತೊಡಗುತ್ತಾಳೆ. ದಿನ ಕಳೆದಂತೆ ಸೊಮಾಲಿಯನ್ ಶೈಲಿಯ ಅಡುಗೆಯಲ್ಲದೆ, ಪಾಶ್ಚಿಮಾತ್ಯ ಶೈಲಿಯ ಅಡುಗೆ ಮಾಡುವ ಕಲೆಯಲ್ಲೂ ಅವಳು ನಿಷ್ಣಾತಳಾಗುತ್ತಾಳೆ. ಚಿಕ್ಕಪ್ಪ-ಚಿಕ್ಕಮ್ಮಂದಿರು ರಾಜಕೀಯ, ಪಾರ್ಟಿ, ಪ್ರವಾಸ ಎಂದು ಪುರುಸೊತ್ತಿಲ್ಲದಂತೆ ಓಡಾಡಿಕೊಂಡಿರುತ್ತಿದ್ದರೆ ಮನೆಯ ಹಿರಿ ಮಗಳು, ಮಿತಭಾಷಿ, ಪುಸ್ತಕದ ಹುಳು ಬಸ್ಮಾ ವಾರಿಸ್ ಗೆ ಸ್ನೇಹಿತೆಯಾಗಿ, ಮಾರ್ಗದರ್ಶಕಿಯಾಗುತ್ತಾಳೆ. ಓದುವ, ಅಕ್ಷರ ಕಲಿಯುವ ವಾರಿಸ್ ಳ ಹಪಾಹಪಿಗೆ ಮಣಿದು ಬಸ್ಮಾ ತನ್ನ ಬೆರಳೆಣಿಕೆಯ ಪುಸ್ತಕಗಳನ್ನು ಇವಳಿಗೆ ನೀಡುತ್ತಾಳೆ. ವಾರಿಸ್ ಗುಟ್ಟಾಗಿ ರಾತ್ರಿ ಇಂಗ್ಲಿಷ್ ಶಾಲೆಯಂದನ್ನು ಸೇರಿದ್ದ ವಿಷಯ ಚಿಕ್ಕಪ್ಪನ ಕಿವಿಗಪ್ಪಳಿಸುತ್ತಿದ್ದಂತೆಯೇ ಅದಕ್ಕೂ ಎಳ್ಳು-ನೀರು ಬಿಡುವಂತಾಗುತ್ತದೆ.  ಐದು ನಿಮಿಷ ಕುಟುಂಬದೊಂದಿಗೆ ಕುಳಿತು ಟೆಲಿವಿಷನ್ ನೋಡುವ ಭಾಗ್ಯವಿಲ್ಲದ ವಾರಿಸ್, ದೂರದ ತನ್ನ ಪುಟ್ಟ ಕೋಣೆಯಿಂದ ಕಿವಿಗೆ ಬಿದ್ದ ಆಂಗ್ಲ ಶಬ್ದಗಳನ್ನು ಕೇಳಿ, ನೆನಪಿಟ್ಟು, ಪುಸ್ತಕಗಳು ಮತ್ತು ಬಸ್ಮಾ ನೆರವಿನಿಂದ `ಸಿಕ್ಕಿದ್ದೇ ಅದೃಷ್ಟ' ಎಂಬ ಉತ್ಕಟ ಮನೋಭಾವದಿಂದ, ಅದಮ್ಯ ಮಹಾತ್ವಾಕಾಂಕ್ಷೆಯಿಂದ ಕಲಿಯುತ್ತಾಳೆ. ಇವೆಲ್ಲದರ ಮಧ್ಯೆಯೇ ಜರ್ಮನಿಯಿಂದ ಬಂದ ಚಿಕ್ಕಪ್ಪನ ಸಂಬಂಧಿಯ ಮಗು ಸೋಫಿಯಾಳನ್ನು ಲಂಡನ್ನಿನ ಶಾಲೆಗೆ ಸೇರಿಸಿದ್ದರಿಂದ ಅವಳನ್ನು ಶಾಲೆಗೆ ಬಿಡುವ ಮತ್ತು ಪಿಕ್ ಮಾಡಿಕೊಳ್ಳುವ ಜವಾಬ್ದಾರಿಯೂ ವಾರಿಸ್ ಹೆಗಲ ಮೇಲೆ ಬೀಳುತ್ತದೆ. ಈ ದಿನಗಳಲ್ಲಿ ಆಂಗ್ಲವ್ಯಕ್ತಿಯೊಬ್ಬ ಒಂದೆರಡು ಬಾರಿ ವಾರಿಸ್ ಳನ್ನು  ಮಾರ್ಗಮಧ್ಯದಲ್ಲಿ ನಿಲ್ಲಿಸಿ ತನ್ನ ವಿಸಿಟಿಂಗ್ ಕಾರ್ಡನ್ನು ಅವಳ ಕೈಗೆ ತುರುಕಿ ಇಂಗ್ಲಿಷಿನಲ್ಲಿ ಏನೇನೋ ಬಡಬಡಿಸುತ್ತಿರುತ್ತಾನೆ. ಭಾಷೆ ಗೊತ್ತಿಲ್ಲದ ವಾರಿಸ್ ದಿಗಿಲಾಗಿ ಅವನನ್ನು ಓಡಿಸಿರುತ್ತಾಳೆ. ಮುಂದೆ ಇಂಗ್ಲಿಷ್ ಮಾತನಾಡಲು ತಿಳಿದಿದ್ದ ಸೋಫಿಯಾ ಬಳಿ `ಇದೇನು ಕಾರ್ಡು, ಅವನೇನು ಹೇಳುತ್ತಿದ್ದಾನೆ' ಎಂದು ಕೇಳಿದಾಗ ಅವನೊಬ್ಬ ಫ್ಯಾಷನ್ ಫೋಟೊಗ್ರಾಫರ್ ಒಂದು ಗೊತ್ತಾಗುತ್ತದೆ. ಕಾರ್ಡು ವಾರಿಸ್ ಳ ಜೇಬು ಸೇರಿ, ಈ ವಿಷಯವೂ ಕ್ರಮೇಣ ಬಿಡುವಿಲ್ಲದ ದಿನಚರಿಯಲ್ಲಿ ಮರೆತುಹೋಗುತ್ತದೆ.

ಅಂತೂ ಇಂತೂ ಈ ಮನೆಯಲ್ಲಿ ನಾಲ್ಕು ವರ್ಷಗಳು ಸರಿದುಹೋಗಿರುತ್ತವೆ. ತನ್ನ ಅಧಿಕಾರಾವಧಿ ಮುಗಿದ ಪರಿಣಾಮ ಚಿಕ್ಕಪ್ಪ ಮತ್ತು ಕುಟುಂಬ ಸರ್ಕಾರಿ ಮನೆ ಖಾಲಿ ಮಾಡಿ ಮರಳಿ ಸೊಮಾಲಿಯಾಗೆ ತೆರಳಲು ಅಣಿಯಾಗುತ್ತದೆ. ಸೊಮಾಲಿಯಾದ ನರಕಕ್ಕೆ ತೆರಳಲು ಎಳ್ಳಷ್ಟೂ ಇಷ್ಟವಿಲ್ಲದ ವಾರಿಸ್ ಇಲ್ಲೇ ಏನಾದರೊಂದು ಮಾಡಿ ಜೀವಿಸುವ ನಿರ್ಧಾರ ಕೈಗೊಳ್ಳುತ್ತಾಳೆ. ತೆರಳಲು ಒಂದು ದಿನವಷ್ಟೇ ಬಾಕಿ ಇರುವಾಗ ತನ್ನ ಪಾಸ್ ಪೋರ್ಟ್ ಅನ್ನು ಪ್ಲಾಸ್ಟಿಕ್ ಕವರಿನಿಂದ ಸುತ್ತಿ ಹೂಕುಂಡದ ಮಣ್ಣಿನಲ್ಲಿ ಮುಚ್ಚಿಟ್ಟು ಪಾಸ್ ಪೋರ್ಟ್ ಕಾಣಿಸುತ್ತಿಲ್ಲ ಎಂದು ನಾಟಕ ಮಾಡುತ್ತಾಳೆ. ಸಂಬಂಧಿಯೆಂಬ ಏಕಮಾತ್ರ ಕೊಂಡಿಯಷ್ಟೇ ಹೊರತು ವಾರಿಸ್ ಬಗ್ಗೆ ಅಂಥಾ ವಿಶೇಷವಾದ ವಾತ್ಸಲ್ಯವೇನೂ ಈ ಕುಟುಂಬಕ್ಕಿರುವುದಿಲ್ಲ. ಮರುದಿನ ಸುಮ್ಮನೆ ಮನೆಖಾಲಿ ಮಾಡಿ, ವಾರಿಸ್ ಗೆ ಒಂದು ತಾತ್ಕಾಲಿಕ ವ್ಯವಸ್ಥೆಯನ್ನೂ ಮಾಡದೆ ಎಲ್ಲರೂ ಸೊಮಾಲಿಯಾಗೆ ತೆರಳುತ್ತಾರೆ. ಮಾಜಿ ಮಾಲೀಕ ಮನೆ ಖಾಲಿ ಮಾಡಿ ಮರೆಯಾದಂತೆಯೇ ಮನೆಯ ಅಡುಗೆಯವನು ತನ್ನ ವರಸೆ ಬದಲಿಸಿ, `ಈ ಮನೆಯ ಋಣ ನಿನಗಿನ್ನು ಮುಗಿಯಿತು' ಎಂದು ಅವಳನ್ನು ಹೊರದಬ್ಬುತ್ತಾನೆ. 

ವಾರಿಸ್ ಮತ್ತೊಮ್ಮೆ ಬೀದಿ ಪಾಲಾಗಿರುತ್ತಾಳೆ. ತುರ್ತಾಗಿ ಸೂರಿನ ವ್ಯವಸ್ಥೆಯೊಂದು ಆಗಬೇಕಾಗಿರುತ್ತದೆ. ಆದರೂ ಬದುಕಬೇಕೆಂಬ ಮಹಾತ್ವಾಕಾಂಕ್ಷೆ ವಾರಿಸ್ ಳಲ್ಲಿ ಕೊಂಚವೂ ಬತ್ತಿರುವುದಿಲ್ಲ. ಚಿಕ್ಕಪ್ಪನ ಒಂದಿಬ್ಬರು ಸಹೋದ್ಯೋಗಿಗಳ ಬಾಗಿಲು ತಟ್ಟಿ ವಿಫಲಳಾಗುತ್ತಾಳೆ. ಎಲ್ಲಿಗೆ ಹೋಗಬೇಕೆಂದೇ ದಿಕ್ಕು ತೋಚದೆ ದಿನವಿಡೀ ಒಂದು ಬಟ್ಟೆಯ ಮಳಿಗೆಯಿಂದ ಇನ್ನೊಂದು ಬಟ್ಟೆಯ ಮಳಿಗೆಗೆ ಗ್ರಾಹಕಳಂತೆ ಸೋಗು ಹಾಕುತ್ತಾ, ಅಲೆಯುತ್ತಾ ಸಂಜೆಯವರೆಗೆ ದಿನ ದೂಡುತ್ತಾಳೆ. ಹೀಗೆ ಸುಮ್ಮನೆ ಖರೀದಿಸಲಾಗದ ಬಟ್ಟೆಯೊಂದನ್ನು ಹಿಡಿದುಕೊಂಡು, ಕನ್ನಡಿಯ ಮುಂದೆ ಪೆದ್ದು ಪೆದ್ದಾಗಿ ಟ್ರೈ ಮಾಡುವಂತೆ ಪೋಸು ಕೊಡುವ, `ನನ್ನ ಸೈಝಿಗೆ ಮತ್ತು ಆಯ್ಕೆಗೆ ತಕ್ಕದಾದ ಬಟ್ಟೆ ನಿಮ್ಮಲ್ಲಿಲ್ಲ' ಎಂದು ತುಂಡು ತುಂಡು ಇಂಗ್ಲಿಷಿನಲ್ಲಿ ಮಾತನಾಡಿ ಬಟ್ಟೆಗಳನ್ನು ಗುಡ್ಡೆ ಹಾಕುತ್ತಿರುವ ಹಾಸ್ಯಾಸ್ಪದ ದೃಶ್ಯ ಓರ್ವ ಆಫ್ರಿಕನ್ ತರುಣಿಗೆ ಕಾಣಿಸುತ್ತದೆ. ಈ ಅಪರಿಚಿತ ಹೆಣ್ಣು ಏನೋ ತೊಂದರೆಯಲ್ಲಿದ್ದಾಳೆ ಎಂದೆನಿಸಿ, ವಾರಿಸ್ ಕಡೆ ತೆರಳಿ `ನಾನು ಹಾಲ್ವು' ಎಂದು ಮುಗುಳ್ನಗುತ್ತಾ ಗೆಳೆತನದ ಹಸ್ತವನ್ನು ಚಾಚುತ್ತಾಳೆ. ಅಚಾನಕ್ಕಾಗಿ ದೇವರಂತೆ ಬಂದ ಹಾಲ್ವುಗೆ ಎಲ್ಲಾ ವಿಷಯವನ್ನು ಬಿಡದೇ ವಿವರಿಸಿ ವಾಸ್ತವ್ಯಕ್ಕೆ ಏನಾದರೂ ಮಾಡಲು ಸಾಧ್ಯವೇ ಎಂದು ವಾರಿಸ್ ದೈನ್ಯಳಾಗಿ ಕೇಳಿಕೊಳ್ಳುತ್ತಾಳೆ. ತಾನು ಒಂದು ವರ್ಕಿಂಗ್ ವಿಮೆನ್ ಹಾಸ್ಟೆಲ್ ನಲ್ಲಿ ಇರುವುದಾಗಿಯೂ, ಇವತ್ತೊಂದು ರಾತ್ರಿ ಅಲ್ಲಿ ಬಂದು ಇರಬಹುದಾಗಿಯೂ ಹಾಲ್ವು ಹೇಳುತ್ತಾಳೆ. ವಾರಿಸ್ ಗೆ ಹೋದ ಜೀವ ಮರಳಿ ಬಂದಂತಾಗುತ್ತದೆ. ಮರುದಿನವೇ ಒಂದು ಅಪ್ಲಿಕೇಷನ್ ಅರ್ಜಿಯನ್ನು ಬರೆಸಿ ವಾರಿಸ್ ಕೈಯಿಂದ ಸಹಿ ಮಾಡಿಸಿ, ಮೆಕ್ ಡೊನಾಲ್ಡ್ ರೆಸ್ಟೊರೆಂಟಿನಲ್ಲಿ ಕ್ಲೀನರ್ ಉದ್ಯೋಗವನ್ನು ವಾರಿಸ್ ಗೆ ದೊರಕಿಸಿಕೊಡುವುದರಲ್ಲಿ ಹಾಲ್ವು ಯಶಸ್ವಿಯಾಗುತ್ತಾಳೆ. ವಾರಿಸ್ ಳ ಅಲ್ಪ ಸ್ವಲ್ಪ ಇಂಗ್ಲಿಷ್ ಇಂಥಾ ಕಷ್ಟದ ಸಮಯದಲ್ಲಿ ಕೆಲಸಕ್ಕೆ ಬರುತ್ತದೆ. ತಲೆಯ ಮೇಲೊಂದು ಸೂರು, ಕೈಯಲ್ಲೊಂದಿಷ್ಟು ದುಡ್ಡು, ಸಂತೈಸಲು ಓರ್ವ ಗೆಳತಿಯೂ ಸಿಕ್ಕಿ ವಾರಿಸ್ ನ ಜೀವನ ಒಂದು ತಹಬದಿಗೆ ಬಂದು ನಿಲ್ಲುತ್ತದೆ. ಎಂಥಾ ಏರಿಳಿತಗಳಲ್ಲೂ ವಾರಿಸ್ ಳ ಒಳದನಿಯೊಂದು `ಇನ್ನೂ ಸಾಧಿಸಲಿಕ್ಕೆ ಬಹಳಷ್ಟಿದೆ, ಧೃತಿಗೆಡಬೇಡ' ಎಂದು ಹೇಳುತ್ತಾ ಮೌನವಾಗಿ ಅವಳನ್ನು ಮುನ್ನಡೆಸುತ್ತಿರುತ್ತದೆ. 


(ಮುಂದುವರೆಯುವುದು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
SHRIVATHSA
SHRIVATHSA
8 years ago

Nice article

2
0
Would love your thoughts, please comment.x
()
x