ಪ್ರಶಸ್ತಿ ಅಂಕಣ

ವಾರದ ಸಿನಿಮಾ ಟೂ ಸ್ಟೇಟ್ಸ್: ಪ್ರಶಸ್ತಿ ಪಿ.

ಕಾದಂಬರಿಯಾಧಾರಿತ ಚಿತ್ರಗಳೆಂದ್ರೆ ಅವೆಲ್ಲಾ ಕಲಾತ್ಮಕ ಚಿತ್ರಗಳು. ನಿರ್ಮಾಪಕನ ರೊಕ್ಕ ಖಾಲಿ ಮಾಡಿ ನಿರ್ದೇಶಕನಿಗೊಂದು ಅವಾರ್ಡ್ ತರಬಹುದೇ ಹೊರತು ಪ್ರೇಕ್ಷಕರ ಮನಗೆಲ್ಲೋ ಮಾತಿಲ್ಲ ಅನ್ನೋದು ಸಾಮಾನ್ಯ ಜನರ ಮಾತು. ಕನ್ನಡದಲ್ಲಿ ಕಾನೂರು ಸುಬ್ಬಮ್ಮ ಹೆಗ್ಗಡತಿ, ಹಿಂದಿಯಲ್ಲಿ ಪಹೇಲಿಯಂತಹ ಸಿನಿಮಾಗಳು ಸೋತಿದ್ರೂ ಆಗೋಂದೀಗೊಂದು ಕಾದಂಬರಿಯಾಧಾರಿತ ಚಿತ್ರಗಳು ಸಖತ್ ಹಿಟ್ಟಾಗುತ್ತವೆ. ಆ ಸಾಲಲ್ಲಿ ಇಂಗ್ಲೀಷಿನಲ್ಲಿ ನೆನಪಾಗೋದು ಡಾನ್ ಬ್ರೌನಿನ ಐದು ಕಾದಂಬರಿಯಾಧಾರಿತ ಸಿನಿಮಾಗಳು. ಹಿಂದಿಯಲ್ಲಿ ಚೇತನ್ ಭಗತ್. ಅಮೀರ್ ಖಾನಿನ ತ್ರೀ ಈಡಿಯಟ್ಸೆಂಬ ಸಿನಿಮಾ ಬಂದಾಗ ಆ ಸಿನಿಮಾ ಚೇತನ್ ಭಗತ್ತಿನ ಫೈ ಪಾಯಿಂಟ್ ಸಂಥಿಂಗ್ ಅನ್ನು ಆಧಾರಿಸಿದ್ದು ಎಂಬ ಗುಲ್ಲೆಬ್ಬಿತ್ತು. ಆಗ ಇದು ಹೌದೋ ಅಲ್ಲವೋ ಎಂಬ ಕುತೂಹಲದೊಂದಿಗೆ ಓದಲು ಪ್ರಾರಂಭಿಸಿದ್ದು ಚೇತನ್ ಭಗತ್ತಿನ ಕಾದಂಬರಿಗಳನ್ನು. ಫೈ ಪಾಯಿಂಟ್ ಸಂಥಿಂಗ್ ಆದ ಮೇಲೆ ಬಂದ 3 mistakes of my life ಅನ್ನೋದು ಕಾಯಿಪೋಚೇ ಎಂಬ ಸಿನಿಮಾವಾದರೆ 2 states story of my marriage ಅನ್ನೋದು ಅದೇ ಹೆಸರಿನಲ್ಲಿ ಸಿನಿಮಾವಾಗಿದೆಯೀಗ. ಈ ಕಾದಂಬರಿಗಳು ಸಿನಿಮಾವಾಗೋದು ಎಷ್ಟು ಕಾಯಮ್ಮಾಗಿಬಿಟ್ಟಿದೆ ಅಂದ್ರೆ ಚೇತನ್ ಭಗತ್ ಹೊಸ ಕಾದಂಬರಿ ಬರೀತಾ ಇದಾರೆ ಅಂದ್ರೆ ಒಂದು ಚಿತ್ರವನ್ನಿಟ್ಟುಕೊಂಡೇ ಬರೀತಿದಾರೆ, ಅದು ಕಾದಂಬರಿಯಾಗಿ ಯಾವಾಗ ಹೊರಬರಬಹುದು, ಜೊತೆಗೆ ಯಾವಾಗ ಚಿತ್ರವಾಗಬಹುದು ಅನ್ನೋ ಲೆಕ್ಕಾಚಾರಗಳು ಶುರುವಾಗತ್ತೆ. ಕಾದಂಬರಿ ಹೊರಬರುತ್ತಿದ್ದಂತೆಯೇ ಅದನ್ನು ಸಿನಿಮಾವಾಗಿ ಯಾವ ನಿರ್ದೇಶಕ ತರಬಹುದು. ಹೀರೋ ಹೀರೋಯಿನ್ ಯಾರಾಗಬಹುದು ಎಂಬ ಓದುಗರ ನಿರೀಕ್ಷೆ ಗರಿಗೆದರೋಕೆ ಶುರುವಾಗತ್ತೆ. ಐ.ಐ.ಟಿಯಲ್ಲಿ ಓದಿದ ಚೇತನ್ರ ಕಥಾವಸ್ತುಗಳು ಐ.ಐ.ಟಿಯ ಸುತ್ತ , ನವಪೀಳಿಗೆಯ ತುಮುಲಗಳ ಸುತ್ತಲೇ ಹರಿಯೋದ್ರಿಂದ ಅವರ ಕಾದಂಬರಿಗಳು ಹೊಸ ಪೀಳಿಗೆಯ ಓದುಗರಿಗೆ ಇಷ್ಟವಾಗುತ್ತೆ. ಹಿಂದಿ ಸಿನಿಮಾಗಳ ಸಹಜ ಪ್ರಿಯರೊಂದಿಗೆ ಚೇತನ್ರ ಫ್ಯಾನುಗಳೂ ಕೂಡ ಪುಸ್ತಕವಾಗಿ ಇಷ್ಟವಾಗಿದ್ದು ಸಿನಿಮಾವಾಗಿ ಹೇಗೆ ಹೊರಬರಬಹುದು ಎಂಬ ಕುತೂಹಲ ಹೊಂದೋದ್ರಿಂದ ಚಿತ್ರಮಂದಿರಗಳು ತುಂಬಿ ತುಳುಕತ್ತೆ. ಕಾಯಿಪೋಚೆ ಅಷ್ಟು ತ್ರೀ ಈಡಿಯಟ್ಸ್, ಟೂ ಸ್ಟೇಟ್ಸಿನಷ್ಟು ದುಡ್ಡು ದೋಚದಿದ್ದರೂ ಒಂದು ಸಾಮಾನ್ಯ ಸಿನಿಮಾವಾಗಿ ಯಶಸ್ವಿ ಎಂದೇ ಹೇಳಬಹುದೇನೋ.

ಇನ್ನು ಸಿನಿಮಾ ಬಗ್ಗೆ ಬರೋದಾದ್ರೆ ಪಂಜಾಬಿ ಹುಡ್ಗ, ತಮಿಳಿಯಿನ್ ಹುಡ್ಗಿಯ ಪ್ರೇಮ ಕತೆ. 2 states ಅಂದ್ರೆ ಪಂಜಾಬ್ , ಚೆನ್ನೈಯಾ ಅನ್ನೋ ಅನುಮಾನ ಸಿನಿಮಾ ನೋಡ್ತಾ ಬಂತು. ನೋಡೋ ನಿಮಗೂ ಬರಬಹುದೆನ್ನುವಂತೆ ಅವೆರಡರ ಮಧ್ಯೆಯೇ ಸಿನಿಮಾ ಕೇಂದ್ರೀಕೃತವಾಗಿದೆ. ಚೇತನ್ನರ ಉಳಿದ ಸಿನಿಮಾಗಳಂತೆಯೇ ಇಲ್ಲಿನ ಹೀರೋ ಹೀರೋಯಿನ್ನುಗಳ ಪರಿಚಯವಾಗೋದು , ಪ್ರೇಮಾಂಕುರವಾಗೋದು ಐ.ಐ.ಟಿಯಂತಹ ಉನ್ನತ ಸಂಸ್ಥೆಯ ಎಂಬಿಎ ಕಾಲೇಜಿನಲ್ಲಿ. ಕಾಲೇಜಿನ ಸಹಜ ಕಾಲೆಳತಗಳು, ಮೋಜು ಮಸ್ತಿಗಳು ಅಲ್ಲಲ್ಲಿ ಹಾಸಿವೆ. ಅವರ ಮೊದಲ ಭೇಟಿಯ ಬಗ್ಗೆ, ಪ್ರೀತಿ ಹುಟ್ಟಿದ ಬಗೆಯೇ ಒಂಥರಾ ಮಜವಾಗಿದೆ. ಅದನ್ನ ಹೇಳೋಕಿಂತ ಚಿತ್ರ ನೋಡೇ ಅದ್ರ ಮಜಾ ಸವಿಯಬೇಕು.ಸರಿ, ಪ್ರೀತಿಯಾಯ್ತು. ಕಾಲೇಜು ಮುಗಿಯೋ ಸಮಯವೂ ಬಂತು. ಮುಂದೇನು ? ಅಲ್ಲೇ ಸಿನಿಮಾದ ನಿಜವಾದ ಟ್ವಿಸ್ಟ್ ಶುರುವಾಗೋದು.

ಪಂಜಾಬಿಗಳಂದ್ರೆ ವಿದ್ಯೆ, ವಿನಯ, ಶಿಸ್ತಿಲ್ಲದವರು ಅನ್ನೋ ಮನೋಭಾವ ನಾಯಕಿಯ ಮನೆಯವರದ್ದಾದ್ರೆ, ಮದರಾಸಿಗಳೆಂದ್ರೆ ಕಪ್ಪು, ತನ್ನ ಸುಂದರ ಮಗನನ್ನ ಬುಟ್ಟಿಗೆ ಹಾಕಿಕೊಳ್ಳುವಂತವರು ಅನ್ನೋ ಮನೋಭಾವ ನಾಯಕನ ತಾಯಿಯದು. ಇನ್ನು ನಾಯಕನ ಅಪ್ಪ ಮತ್ತು ನಾಯಕನದು ವಿರುದ್ದ ಧೃವಗಳು. ನಾಯಕನ ಹಳಿ ತಪ್ಪಿದ್ದ ಬದುಕನ್ನು ಕೊನೆಗೆ ಸರಿದಾರಿಗೆ ತರೋದು ಅವನಪ್ಪನೇ ಅನ್ನೋದು ಕೊನೆಗಾದರೂ ಸಾಮಾನ್ಯ ಕುಟುಂಬವೊಂದರಲ್ಲಿನ ಅಪ್ಪ-ಮಗ, ಗಂಡ-ಹೆಂಡತಿ ಸಂಘರ್ಷಗಳು ಇಲ್ಲಿ ಪಾತ್ರಗಳಾಗಿವೆ. ಇನ್ನು ಬರಹಗಾರನಾಗಬೇಕೆಂಬ ಹಂಬಲ, ಹೊಟ್ಟೆಪಾಡಿಗಾಗಿ , ಮನೆಯವರ ಇಷ್ಟಕ್ಕನುಗುನವಾಗಿ ಮುಂದೆ ಓದಿ ಕೆಲಸ ಹಿಡಿಯಬೇಕಾದ ಅನಿವಾರ್ಯತೆಯಲ್ಲಿರೋ ಮಗ ಅತ್ತಲೋ ಇತ್ತಲೋ ಎಂಬ ಸಂದಿಗ್ದದಲ್ಲಿ ಸಿಲುಕೋ ಕತೆಯ ಎಳೆಯನ್ನ ನೋಡಿದಾಗ ಸ್ವತಃ ಚೇತನ್ರೇ ಇಲ್ಲಿ ಕತೆಯಾಗಿದ್ದಾರಾ ಅನಿಸುತ್ತೆ. ಅವರ ಜೀವನ, ಮನದ ತುಮುಲಗಳೇ ಪಾತ್ರಗಳಾಗಿದ್ಯಾ ಅನಿಸುತ್ತೆ.ಇನ್ನು ಸಂದೇಶದ ದೃಷ್ಟಿಯಲ್ಲಿ ನೋಡಿದ್ರೆ ಅದಕೇನೋ ಕಮ್ಮಿಯಿಲ್ಲ. ವರದಕ್ಷಿಣೆ ಬಗ್ಗೆ, ಜಾತಿ -ಮತ-ಪ್ರದೇಶಗಳೆಂಬ ಭೇಧಗಳ ಸಂಕುಚಿತ ಮನೋಭಾವನೆ ಬಗ್ಗೆ ಭಾಷಣಗಳಂತ ಡೈಲಾಗುಗಳಿವೆ ಮತ್ತು ಪೂರಕ ದೃಶ್ಯಗಳಿವೆ. ಶಂಕರ್ -ಎಹಸಾನ್ -ಲಾಯ್ ರ ಸಂಗೀತವೂ ಮತ್ತೆ ಮತ್ತೆ ಕೇಳುವಷ್ಟು ಇಂಪಾಗಿದೆ. ಇನ್ನು ಹೀರೋ ಹೀರೋಯಿನ್, ಅವರ ಮನೆಯ ಪಾತ್ರಗಳನ್ನ ನೋಡಿದ್ರೆ ಈ ಕಲಾವಿದ್ರನ್ನ ದೃಷ್ಟಿಯಲ್ಲಿಟ್ಟುಕೊಂಡೇ ಚೇತನ್ ಕತೆ ಬರದಿದ್ರಾ ಅನಿಸುವಷ್ಟು ಪಾತ್ರಗಳಲ್ಲಿ ಪರಾಕಾಯ ಪ್ರವೇಶ ಮಾಡಿದ್ದಾರೆ ಅವರು. ಅನಗತ್ಯ ಕಾಮಿಡಿ, ಫೈಟು, ಹಿಂಸೆಗಳನ್ನು ತುರುಕದೆಯೋ ಒಂದು ನೆನಪಲ್ಲುಳಿಯುವ ಚಿತ್ರ ಮಾಡೋ ಸಾಧ್ಯತೆಯನ್ನ ತೆರೆದಿಡುತ್ತೆ ಈ ಚಿತ್ರ. ಇನ್ನು ಮೊದಲೇ ಹೇಳಿದಂತೆ ಎರಡೇ ವಾರದಲ್ಲಿ ೨೦ ಕೋಟಿ ಬಾಚಿಕೊಂಡ ಇದು ಕಮರ್ಷಿಯಲಿ ಹಿಟ್ ಚಿತ್ರವೂ ಹೌದು.

ಹಿಂದಿ ಚಿತ್ರವೊಂದನ್ನ ಹೊಗಳಿದ ಮಾತ್ರಕ್ಕೆ ನಾನು ಕನ್ನಡ ದ್ವೇಷಿಯೇನಲ್ಲ. ಇತ್ತೀಚೆಗೆ ಬಂದ ಉಳಿದವರು ಕಂಡಂತೆ, ಉಗ್ರಂ , ಲೂಸಿಯಾದಂತಹ ವಿಭಿನ್ನ ಪ್ರಯೋಗಗಳೂ ಇಷ್ಟವಾಗಿದ್ದವು.ಆದ್ರೆ ಈ ವಾರ ಇಷ್ಟವಾಗಿ  ಬರಹಕ್ಕೆ ವಸ್ತುವಾದ ಚಿತ್ರ ಮಾತ್ರ ಇದೇ. ಇನ್ನು ಸಿನಿಮಾ ಅಂದ್ರೆ ಅದು ಎಲ್ಲಾ ರೀತಿಯಲ್ಲೂ ಪರಿಪೂರ್ಣ ಅನ್ನುವಂತೇನಿಲ್ಲ. ಮಾನವನೆಂದ ಮೇಲೆ ತಪ್ಪು ಸಹಜ. ಎಂಬಿಎ ಅನ್ನೋದು ಎರಡು ವರ್ಷ. ಆದ್ರೆ ೩ ಸಾಲ್ ಕಾಫಿ ನಹೀತೆ ಕ್ಯಾ ಅನ್ನೋ ಹೀರೋಯಿನ್ನಿನ ಮಾತು ಇದ್ಯಾವದಪ್ಪಾ ಮೂರು ವರ್ಷದ ಎಂಬಿಎ ಅನ್ನಿಸತ್ತೆ. ನಾನು ಸಾಯಬಯಸುತ್ತೇನೆ ಅಂತ ಎಲ್ಲೋ ಕುಳಿತ ಮನುಷ್ಯ ಕೊನೆಗೆ ಎರಡು ಮಗು ಎತ್ಕೊಂಡು, ಟೂ ಸ್ಟೇಟ್ಸ ಎಂಬ ಬುಕ್ಕೂ ತಗೊಂಡು ಹೋಗೋದು ಯಾವ ಪರಿಯಪ್ಪಾ ಅಂತ ಪ್ರೇಕ್ಷಕರಿಗೂ ಕನಫ್ಯೂಸ್ ಮಾಡತ್ತೆ. ಆದ್ರೆ ಏನೇ ಹೇಳಿ ಕಾದಂಬರಿಯೊಂದು ಸಿನಿಮಾ ಆಗುತ್ತೆ ಅನ್ನೋ ಸಂಗತಿ ಹಿರಿ-ಕಿರಿ-ಮರಿ ಬರಹಗಾರರಿಗೆಲ್ಲಾ ತಾನೂ ಒಂದು ದಿನ ಒಂದೊಳ್ಳೆ ಕೃತಿ ರಚಿಸುತ್ತೇನೆ. ಅದು ಈ ತರಹ ಸಿನಿಮಾ ಆಗದಿದ್ದರೂ ಸಾಮಾನ್ಯ ಜನರಿಗೆ ಇಷ್ಟವಾಗುವ ಮಟ್ಟಿಗಾದರೂ ಬರೆಯುತ್ತೇನೆ ಅನ್ನೊ ಭಾವವನ್ನು ಮೂಡಿಸಿದ್ರೆ ಈ ಚಿತ್ರ ನಿರ್ದೇಶಕನಿಗೆ, ಬರೆದ ಭಗತ್ಗೆ ಇನ್ನೇನು ಬೇಕು ಹೇಳಿ. ಅದಕ್ಕಿಂತ ದೊಡ್ಡ ಪ್ರಶಸ್ತಿ ಉಂಟೇ ? 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ವಾರದ ಸಿನಿಮಾ ಟೂ ಸ್ಟೇಟ್ಸ್: ಪ್ರಶಸ್ತಿ ಪಿ.

Leave a Reply

Your email address will not be published. Required fields are marked *