ಪಂಜು-ವಿಶೇಷ

ವಾರಕೊಮ್ಮೆ ಯಶವಂತಪುರ ಸಂತೆ: ಶಿವು ಕೆ.

 

                 ಇತ್ತೀಚೆಗೆ ತೇಜಸ್ವಿಯವರ "ಸಂತೆ" ಕಥೆ ಓದಿದಾಗ ನನಗೂ ಸಂತೆಗೆ ಹೋಗಬೇಕೆನಿಸಿತ್ತು.  ನನ್ನ ಮಡದಿ ಪ್ರತಿ ಭಾನುವಾರ  ಸಂಜೆ  ಯಶವಂತಪುರ ಸಂತೆಗೆ ತರಕಾರಿ ಹಣ್ಣು ಹೂಗಳನ್ನು ತರಲು ಹೋಗುತ್ತಿದ್ದಳು.  ಹೋಗುವ ಮೊದಲು ನಾನು ಜೊತೆಯಲ್ಲಿ ಬರಬೇಕೆಂದು ತಾಕೀತು ಮಾಡುತ್ತಿದ್ದಳು.  ಮೊದಮೊದಲು ಅವಳು ಕರೆದಾಗ ನಾನು ಉತ್ಸಾಹದಿಂದ ಹೋಗುತ್ತಿದ್ದೆನಾದರೂ ಅಲ್ಲಿ ಆಗಾಗ ಆಗುವ ಕೆಲವು ಬೇಸರದ ಅನುಭವಗಳು ನೆನಪಾಗಿ,  ನನಗೆ ಬ್ಲಾಗು, ಫೋಟೊಗ್ರಫಿ ಇತ್ಯಾದಿ ಕೆಲಸಗಳಿದೆಯೆಂದು ತಪ್ಪಿಸಿಕೊಳ್ಳುತ್ತಿದೆ.  ಕೊನೆಗೆ ಅವಳೇ  ತನ್ನ ಗೆಳತಿಯ ಜೊತೆಮಾಡಿಕೊಂಡು  ಇಬ್ಬರೂ ಆಟೂ ಮಾಡಿಕೊಂಡು ಹೋಗಿಬರುತ್ತಿದ್ದರು.  ಸಂತೆಯಿಂದ ತಂದ ತರಕಾರಿಗಳನ್ನೆಲ್ಲಾ ಮನೆಯಲ್ಲಿ ನೆಲಕ್ಕೆ ಸುರಿದು ಅಲ್ಲಿ ನಡೆದ ಕತೆಯನ್ನೆಲ್ಲಾ ಹೇಳುತ್ತಿದ್ದಳು. ಹಾಗೂ ಉಳಿಸಿದ ದುಡ್ಡನ್ನು ತೋರಿಸಿ ಸ್ಚತಃ ಹೆಮ್ಮೆ ಪಡುತ್ತಿದ್ದಳು.

        ಒಂದು ದಿನ ಅವಳ ಗೆಳತಿ ಮನೆ ಖಾಲಿ ಮಾಡಿ ಬೇರೆ ಬಡಾವಣೆಗೆ ಹೋದಾಗ ನನ್ನವಳ  ಸಂತೆ ಜೊತೆಗಾರ್ತಿ ಇಲ್ಲದಂತಾಗಿ ಮತ್ತೆ ನನಗೇ  ಗಂಟುಬಿದ್ದಿದ್ದಳು.  ಈ ಬಾರಿ ನಾನು ತಪ್ಪಿಸಿಕೊಳ್ಳುವಂತಿರಲಿಲ್ಲ.  

ಸರಿ, ನಾನು ವಿಧಿಯಿಲ್ಲದೆ ನನಗೆ  ಈ ಮೊದಲು ಸಂತೆಯಲ್ಲಿ ಆಗಿದ್ದ ಎಲ್ಲಾ ಬೇಸರದ ಸಂಗತಿಗಳನೆಲ್ಲಾ  ತಲೆಯ ಮೆಮೋರಿಯಿಂದ ಅಳಿಸಿಹಾಕಿ,  ಯಾವುದೇ ಪೂರ್ವಗ್ರಹ ಪೀಡಿತನಾಗದೆ,  ಇದೇ ಮೊದಲಬಾರಿ  ಸಂತೆ ಎನ್ನುವ ಸ್ಥಳಕ್ಕೆ ಹೊಸ ಅನುಭವ ಪಡೆಯಲು ಹೋಗುತ್ತಿದ್ದೇನೇನೋ  ಅನ್ನುವಷ್ಟು ಫ್ರೆಶ್ಶಾಗಿ ನನ್ನಾಕೆಯ ಜೊತೆ ಹೊರಟಿದ್ದೆ.

           ಈ ಮೊದಲು ಇದೇ ರೀತಿ ಸಂತೆಗೆ ಹೋದಾಗ ನನಗೆ ಐದೇ ನಿಮಿಷದಲ್ಲಿ ಬೇಸರವಾಗಿ "ನೀನು ಹೋಗಿ ಎಲ್ಲಾ ಮುಗಿಸಿಕೊಂಡು ಬಾ.  ನಾನು ಇಲ್ಲೇ ಟೂ ವೀಲರ್ ಪಾರ್ಕಿಂಗ್ ಬಳಿ ಕಾಯುತ್ತೇನೆ"  ಎಂದು ಹೇಳಿ ಕಳುಹಿಸಿದ್ದೆ.  ಇವಳು ಒಂದು ತಾಸು ಕಳೆದರೂ ಬರದಿದ್ದುದ್ದು  ನೋಡಿ,  ಮತ್ತೆ ಮನಸ್ಸಿಲ್ಲದ  ಮನಸ್ಸಿನಿಂದ ಸಂತೆಯ ಒಳಹೊಕ್ಕು,  ಈ ತುದಿಯಿಂದ ಆ ತುದಿಗೆ ಮೂರ್ನಾಲ್ಕು ಬಾರಿ ಓಡಾಡಿದರೂ ನನ್ನಾಕೆ ಸಿಗದಿದ್ದುದರಿಂದ (ಅದೇ ರೀತಿ ಅವಳು ಕೂಡ ನನ್ನನ್ನು ಹುಡುಕಿದ್ದಳಂತೆ) ಈ ಸಂತೆ ಸಮಾಚಾರ  ಬಲು  ಬೇಸರವೆನಿಸಿತ್ತು. ಮತ್ತೆ ಅದೇ ರೀತಿ ಆದಾಗ ಮೊಬೈಲ್ ಫೋನ್ ಇದ್ದರೆ ಫೋನ್ ಮಾಡಿ ಇರುವ ಜಾಗ ತಿಳಿದುಕೊಳ್ಳಬಹುದೆಂದು ನನ್ನಾಕೆಗೆ ಅವಳ ಮೊಬೈಲ್ ಫೋನ್ ತೆಗೆದುಕೊಳ್ಳಲು  ತಾಕೀತು ಮಾಡಿದ್ದೆ.

        ಮೊದಲೇ ಹೇಳೀದೆನಲ್ಲ  ಎಲ್ಲಾ ಮರೆತು ಫ್ರೆಶ್ಶಾಗಿ ಹೋಗಬೇಕು ಅಂತ.  ಅದೇ ರೀತಿ ಯಶವಂತಪುರದ ಸಂತೆಗೆ ನನ್ನಾಕೆ ಜೊತೆ  ಒಳಗೆ ನುಗ್ಗಿದೆ.

         ಆ ಸಂತೆಯೋ  ಕೇವಲ ಒಂದು ಫರ್ಲಾಂಗ್ ದೂರದ ಆಳತೆಯಲ್ಲಿ, ಒಂದು ಬದಿಯ ಫುಟ್ ಪಾತಿನಲ್ಲಿ, ಹೆಬ್ಬಾವಿನಂತೆ  ಉದ್ದುದ್ದ ಸಾಗಿ ಹೋಗಿದ್ದ ಸ್ಥಳ.  ಸಾವಿರಾರು ಜನ ಕೊಳ್ಳುವವರು-ಮಾರುವವರು ತುಂಬಿ ತುಳುಕುತ್ತಿದ್ದ ಜಾಗ.  ನನ್ನ ಮಡದಿ ಮುಂದೆ.  ನಾನು ಅವಳ ಹಿಂದೆ.  ನನಗಂತೂ ಕುತೂಹಲ.  ಅವಳು ಹೇಗೆ ವ್ಯಾಪಾರ ಮಾಡುತ್ತಾಳೆಂದು !   ಏಕೆಂದರೆ ಪ್ರತಿವಾರವೂ   ಈ ಚಕ್ರವ್ಯೂಹದಂತಹ ಸಂತೆಗೆ ನುಗ್ಗಿ  ತನ್ನ ಬುದ್ಧಿಯನ್ನೆಲ್ಲಾ  ಉಪಯೋಗಿಸಿ,  ಚೌಕಾಶಿ ಮಾಡಿ,  ಕಡಿಮೆ ಹಣದಲ್ಲಿ  ಹೆಚ್ಚು ತರಕಾರಿ, ಹಣ್ಣು ಹೂ ಇತ್ಯಾದಿಗಳನ್ನೆಲ್ಲಾ ತಂದ ಬಗ್ಗೆ ದೊಡ್ಡ ವರದಿ ಒಪ್ಪಿಸುತ್ತಿದ್ದಳು. ಇದರಿಂದಾಗಿ  ನನಗೂ ಸಹಜವಾಗಿ  ಕುತೂಹಲ ತುಸು ಹೆಚ್ಚಾಗೆ ಇತ್ತು.   ಮೊದಲು  ಪಕ್ಕದಲ್ಲೇ  ಕೈಗಾಡಿಯಲ್ಲಿದ್ದ  ಟಮೋಟೊ ನೋಡಿ ರೇಟು ಕೇಳಿದಳು.  ಅವನು ಒಂದು ಬೆಲೆ ಹೇಳಿದ.  ಇವಳು ಮತ್ತೇನು ಮಾತಾಡದೆ  ಮುಂದೆ ಹೋದಳು. ಐದಾರು  ಹೆಜ್ಜೆ ಮುಂದೆ ಹೋಗಿ ಆಲೂಗಡ್ಡೆ ರೇಟು ವಿಚಾರಿಸಿದಳು.  ಆಲ್ಲೂ ರೇಟು ಕೇಳಿ  ಮುಂದೆ ಸಾಗಿದಳು.  ಮತ್ತೆ ಇನ್ನೂ ಐದಾರು ಹೆಜ್ಜೆ ಮುಂದೆ ಸಾಗಿ ಸೊಪ್ಪಿನ ರೇಟು ಕೇಳಿದಳು.  ನಂತರ ಕ್ಯಾರೆಟ್,  ಎಲೆಕೋಸು,  ಬೆಂಡೆಕಾಯಿ,  ಈರುಳ್ಳಿ….  ಹೀಗೆ ಕೇಳಿ ಹೋಗುತ್ತಿದ್ದರೂ  ಯಾರ ಬಳಿಯೂ ವ್ಯಾಪಾರ ಮಾಡದೆ ಮುಂದೆ ಸಾಗುತ್ತಿದ್ದಳು. ಹೆಜ್ಜೆಗೊಂದರಂತೆ  ರಾಶಿ ರಾಶಿ ಹಾಕಿದ ತರಾವರಿ  ರೀತಿಯ ತರಕಾರಿ,  ಹಣ್ಣುಗಳಿದ್ದರೂ  ಯಾವುದನ್ನು  ಕೊಳ್ಳದೇ  ಮುಂದೆ ಮುಂದೆ ಸಾಗುತ್ತಿದ್ದಾಳಲ್ಲ !  ಮೊದಲೇ  ಆ  ಜಾಗದಲ್ಲಿ  ಕಾಲಿಗೆ,  ಕೈಗೆ,  ಬೆನ್ನಿಗೆ, ಮುಖಕ್ಕೆ,  ಕಣ್ಣಿಗೆ  ಜನರೂ ಎಡತಾಕುತ್ತಿದ್ದುದರಿಂದ  ನನಗೆ  ಒಂದೊಂದು ಹೆಜ್ಜೆ ಇಡಬೇಕಾದರೂ  ತಿರುಪತಿ ತಿಮ್ಮಪ್ಪನ ದರ್ಶನದ ಸರತಿ ಸಾಲು ನೆನಪಾಗುತ್ತಿತ್ತು.  

       ಈ ಮಧ್ಯೆ  ನಾನು  ಅವಳ  ಹಿಂದೆ ಸಾಗುತ್ತಿದ್ದಾಗ ಕೊಂಚ ಅತ್ತ  ಇತ್ತ ನೋಡಿದರೂ  ಖಂಡಿತ ಒಬ್ಬರಿಗೊಬ್ಬರು ತಪ್ಪಿಸಿಕೊಳ್ಳುವ ಸಾಧ್ಯತೆಗಳಿತ್ತು. ಕೊನೆಗೆ ನಾನು ವಿಧಿಯಿಲ್ಲದೆ ನನ್ನ ಗಮನವನ್ನು ಬೇರೆಲ್ಲೂ ಕೊಡದೆ  ನಾಯಿಬಾಲದಂತೆ ಅವಳನ್ನು ಹಿಂಬಾಲಿಸುತ್ತಿದ್ದೆ.  

       ಈ ಕೊನೆಯಿಂದ ಆ ಕೊನೆ ತಲುಪುವ ಹೊತ್ತಿಗೆ  ವ್ಯಾಪಾರ ಮಾಡಿದ್ದು  ಕೇವಲ ಟೋಮೋಟೊ  ಮತ್ತು ಕೊತ್ತಂಬರಿ ಸೊಪ್ಪು.  ಇಷ್ಟಕ್ಕೆ  ಸುಮಾರು ಒಂದು ತಾಸು ಖಾಲಿಯಾಗಿತ್ತು. ಸಮಯದ  ವಿಚಾರದಲ್ಲಿ  ನಾನು ತುಂಬಾ ಲೆಕ್ಕಾಚಾರವಾದಿಯಾದ್ದರಿಂದ,  ಒಂದು ತಾಸು ವ್ಯಯಿಸಿ  ಕೇವಲ ಎರಡೇ ಪದಾರ್ಥ ಕೊಂಡಿದ್ದು  ನನಗೆ ಸ್ವಲ್ಪ ಇರಿಸುಮುರಿಸಾಗಿತ್ತು. ಈ ಮಾರ್ಗ ಮಧ್ಯದಲ್ಲಿ ಮೊದಲೇ  ತೀರ್ಮಾನಿಸಿದಂತೆ  ಎಲ್ಲೂ ಪೂರ್ವಗ್ರಹಪೀಡಿತನಾಗಬಾರದೆಂಬ ವಿಧೇಯಕವನ್ನು  ನನಗೆ ನಾನೇ ಪಾಸು ಮಾಡಿಕೊಂಡಿದ್ದರಿಂದ  ಅಲ್ಲಲ್ಲಿ  ಬೇಸರವಾದರೂ ಅದು  ಮನಸ್ಸಿಗೆ ಮತ್ತು  ತಲೆಗೇರದಂತೆ ಕಾಪಾಡಿಕೊಂಡಿದ್ದೆ.  

ಅದರೆಷ್ಟು ತಡೆದುಕೊಳ್ಳುವುದು ?  ಆ ಕೊನೆ ತಲುಪುವ ಹೊತ್ತಿಗೆ ಕುತೂಹಲ ತಡೆದುಕೊಳ್ಳಲಾರದೇ  ಕೇಳಿಯೇ ಬಿಟ್ಟೆ ! "ಅಲ್ಲಾ  ಕಣೇ  ಅಲ್ಲಿಂದ ಇಲ್ಲಿಯವರೆಗೆ ಏನೂ ತೆಗೆದುಕೊಳ್ಳದೆ  ಕೇವಲ ರೇಟು ವಿಚಾರಿಸಿಕೊಳ್ಳುತ್ತಾ ಬಂದೆಯಲ್ಲ ಯಾಕೆ ? ಏನೂ ವ್ಯಾಪಾರ ಮಾಡುವ ಯೋಚನೆಯಿಲ್ಲವೇನು ?" ಅದಕ್ಕವಳು " ಅದೇರೀ….. ನಿಮಗೆ ಗೊತ್ತಾಗಲ್ಲ !  ಇಲ್ಲಿಯವರೆಗೆ ಎಲ್ಲಾ ತರಕಾರಿ ರೇಟು ಹಾಗೂ ಕ್ವಾಲಿಟಿ ತಿಳಿದುಕೊಂಡೆ.  ಈಗ ಮತ್ತೆ ಕಡಿಮೆ ಇರುವ ಜಾಗದಲ್ಲಿ  ಹೋಗಿ  ನನಗೆ ಬೇಕಾದ ಐಟಂ ತಗೋತೀನಿ"  ಅಂದಳು.  

 ಅವಳ ಉತ್ತರ ನನಗೆ ಸಮಾಧಾನ ತರಲಿಲ್ಲ. "ಅಲ್ವೇ  ಪ್ರಾರಂಭದಲ್ಲೇ  ಎಲ್ಲಾ ವೆರೈಟಿ  ತರಕಾರಿ ಇತ್ತು, ಫ್ರೆಶ್ಶಾಗಿಯೂ ಇತ್ತಲ್ಲ !  ತಗೋಬಹುದಿತ್ತಲ್ಲ !  ಎಂದೆ. "ಆಯ್ಯೋ ನೀವೊಂದು.  ಮೊದಲು ಈ ರೀತಿ ವಿಚಾರಿಸಿಕೊಂಡಾಗ ಕಡಿಮೆ ರೇಟಲ್ಲಿ ಎಲ್ಲಿ ಒಳ್ಳೇ  ಐಟಂ  ಸಿಗುತ್ತೆ ಅಂತ ಗೊತ್ತಾಗುತ್ತೆ". ನನಗಂತೂ  ಅವಳ ಹಿಂದೆ  ನಡೆಯುವಾಗ, ಅವಳು  ವಿಚಾರಿಸಿದ ರೇಟು ಒಂದೆರಡು ನೆನಪಿನಲ್ಲಿಟ್ಟುಕೊಂಡರೂ , ನಂತರ ಒಂದರ ಮೇಲೊಂದು ಮಿಕ್ಸ್ ಆಗಿ  ಎಲ್ಲಾ ಮರೆತುಹೋಗಿತ್ತು. "ನಿನಗೀಗ ಎಲ್ಲಿ ಕಡಿಮೆ ರೇಟಿಗೆ ಸಿಗುತ್ತೆ ಅಂತ ಈಗ ಗೊತ್ತಾ ? ನನ್ನ ಪ್ರಶ್ನೆ.         "ಹೋ ಗೊತ್ತು.  ನನ್ನ ಹಿಂದೆ ಬನ್ನಿ."  ಎಂದಳು.

ಮೊದಲಿಗೆ ಒಮ್ಮೆ ಎಲ್ಲಾ ವಿಚಾರಿಸಿ  ಒಳ್ಳೇ ಮಾಲು ಕಡಿಮೆ ಬೆಲೆಗೆ ಸಿಗುವುದನ್ನು  ಕಂಡು ಹಿಡಿದು ಮತ್ತೆ  ಅದೇ  ಜಾಗಕ್ಕೆ ಹುಡುಕಿಕೊಂಡು ಹೋಗಿ ತರಕಾರಿ ಕೊಳ್ಳುವುದು  ಒಂದು ರೀತಿ   ಚಿನ್ನದ ಗಣಿಯೊಂದರಿಂದ ಟನ್ನುಗಟ್ಟಲೇ  ಮಣ್ಣನ್ನು  ತೆಗೆದು ಅದರಿಂದ ಗ್ರಾಂಗಳಷ್ಟು  ಶುದ್ಧ ಚಿನ್ನ ತೆಗೆಯುವ ಕೆಲಸಕ್ಕೆ ಸಮವೆನಿಸಿತ್ತು.

ನನ್ನವಳ ತಾಳ್ಮೆಗೆ,  ಸಾಹಸಕ್ಕೆ ಮೆಚ್ಚುಗೆ ಸೂಚಿಸಬೇಕೆನಿಸಿದರೂ,  ನಾನು  ಮತ್ತೆ ವಾಪಾಸು  ಅದೇ ರೀತಿ ನಾಯಿ ಬಾಲದ ಹಾಗೆ  ಅವಳ ಹಿಂದೆ ಹೋಗಬೇಕಲ್ಲ !  ಎಂದುಕೊಂಡಾಗ  ಮನದಲ್ಲಿ  ಎಲ್ಲೋ ಒಂದು ಕಡೆ  ಸಣ್ಣದಾಗಿ  ಕೋಪ ಮೊಳಕೆಯೊಡೆಯತೊಡಗಿತ್ತು.   

 ಮುಂದೆ ಆಗುವ ಅನಾಯಾಸ ತೊಂದರೆಗಳನ್ನು ತಪ್ಪಿಸಬೇಕಾದರೆ  ನಾನು ಮತ್ತೆ ಅವಳ ಜೊತೆ ಹೋಗಬಾರದೆಂದುಕೊಂಡೆ.  ಬೈ ಚಾನ್ಸ್  ಹೋದರೂ,  ಅವಳು ವ್ಯಾಪಾರದಲ್ಲಿ ಚೌಕಾಶಿ  ಮಾಡುತ್ತಾ,  ಮಣ್ಣಿನಿಂದ ಚಿನ್ನ ತೆಗೆಯುವ ಕೆಲಸದಲ್ಲಿ ನಿರತಳಾದರೂ  ನನಗೆ ಅಲ್ಲಿ ಓಡಾಡಿದ ಸಮಯವನ್ನು  ಈ ವಿಚಾರಕ್ಕೆ ತಾಳೆ ಹಾಕಿ,  ನನ್ನ ಲೆಕ್ಕಾಚಾರದಲ್ಲಿ  ನನ್ನ ಶ್ರೀಮತಿ  ಮಾಡುತ್ತಿರುವುದುದೆಲ್ಲಾ  ನಷ್ಟವೆಂದು  ನನಗೆ ಗೊತ್ತಾಗಿಬಿಟ್ಟರೆ !! ಇದರಿಂದಾಗಿ  ನನ್ನೊಳಗೆ ಸಣ್ಣದಾಗಿ ಮೊಳಕೆಯೊಡೆದಿದ್ದ  ಸಿಟ್ಟು  ಈ  ಲೆಕ್ಕಾಚಾರದ ಸಹಾಯ ಪಡೆದುಕೊಂಡು,  ದೊಡ್ಡದಾಗಿ ಅವಳ ಮೇಲೆ ಪ್ರಯೋಗವಾಗಿಬಿಟ್ಟರೆ !   ಅದರಿಂದಾಗುವ ಅನಾಹುತವನ್ನು  ತಪ್ಪಿಸಬೇಕಾದರೆ ಅವಳ  ಜೊತೆ ಮತ್ತೆ ಹೋಗದಿರುವುದೇ ಸರಿಯೆನಿಸಿತ್ತು.

 "ನಾನು  ನನ್ನ ಟೂ ವೀಲರ್  ಬಿಟ್ಟ ಪಾರ್ಕಿಂಗ್  ಜಾಗದಲ್ಲಿ  ಇರುತ್ತೇನೆ  ಎಲ್ಲಾ ಮುಗಿಸಿಕೊಂಡು ಬೇಗ ಬಾ"  ಎಂದೆ.  "ಸರಿ ಆಯ್ತು" ಎಂದು ನನ್ನಿಂದ ಬ್ಯಾಗ್ ಪಡೆದುಕೊಂಡು  ಮುಂದೆ ಹೊರಟಳು. ನಾನು ಬೇರೆ ದಾರಿಯಿಂದ ವಾಪಸ್ಸು ಬಂದು  ನನ್ನ ಟೂ ವೀಲರ್ ಇದ್ದ ಕಡೆ ನಿಂತೆ.  ಅದು ಏನು ದೂರವಿರಲಿಲ್ಲ.  ಪಕ್ಕದಲ್ಲೇ ಸಂತೆಯುದ್ದಕ್ಕೂ ಇತ್ತು. 

ಮತ್ತೊಮ್ಮೆ ಹೊಸದಾಗಿ ಎಲ್ಲವನ್ನು ನೋಡತೊಡಗಿದೆ.  ಕಣ್ಣಿಗೆ ಎಲ್ಲವೂ ಚೆನ್ನಾಗಿ ಕಾಣುತ್ತಿತ್ತಾದರೂ  ಕಿವಿಗೆ ಏನೂ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ.  "ಪಪ್ಪಾಯಿ ೧೫ ರೂ ಕಿಲೋ, ಟೊಮೋಟೊ ೩೦ ರೂ,  ಈರುಳ್ಳಿ,  ಸಪೋಟ, ಸೊಪ್ಪು, ಅನಾನಸ್………. ಹೀಗೆ ಎಲ್ಲಾ ತರಕಾರಿಗಳ,  ಹಣ್ಣುಗಳ ಹೆಸರುಗಳು ಕೇಳಿಬರುತ್ತಿದ್ದರೂ ಅವುಗಳ ಬೆಲೆಗಳು ಸರಿಯಾಗಿ ಕೇಳುತ್ತಿರಲಿಲ್ಲ. ಒಂದರ ಬೆಲೆ ಮತ್ತೊಂದಕ್ಕೆ ಜೋಡಿಸಿದಂತೆ,  ಇನ್ನೊಂದರ ಬೆಲೆ ಮಗದೊಂದಕ್ಕೆ  ಸೇರ್ಪಡೆಯಾದಂತೆ ಅನಿಸುತ್ತಿತ್ತು.  ಒಮ್ಮೆ ಬೆಲೆ ಜೋರಾಗಿ ಕೇಳಿ,  ವಸ್ತುವಿನ ಹೆಸರು ದ್ವನಿಯಲ್ಲಿ  ಕರಗಿಹೋದಂತೆ,  ಒಟ್ಟಿನಲ್ಲಿ ಒಂದರೊಳಗೊಂದು ಸೇರಿ  ಕಲಸು ಮೇಲೊಗರವಾಗಿಬಿಟ್ಟಿತ್ತು.

ನನಗೆ ಎಫ್ ಎಮ್ ರೇಡಿಯೋ ಕೇಳುವ ಅಭ್ಯಾಸವಿತ್ತಾದ್ದರಿಂದ ಅಲ್ಲಿ  ಒಂದು ಚಾನೆಲ್ಲಿಗೆ ಒಂದು ದ್ವನಿ ಬರುವಂತೆ,  ನಾನು ಇಲ್ಲಿ ಮನಸನ್ನು ಎಷ್ಟೇ  ಕೇಂದ್ರೀಕರಿಸಿದರೂ,   ಒಂದು ವಸ್ತು ಮತ್ತು ಅದಕ್ಕೆ ಸೇರಿದ ಬೆಲೆ ಸರಿಯಾಗಿ ಕೇಳಿಸಲೇ ಇಲ್ಲ. ಕೊನೆಗೆ ಈ ಬೆಲೆಗಳ ವಿಚಾರವನ್ನು ಪಕ್ಕಕ್ಕಿಟ್ಟು  ಅಲ್ಲಿಗೆ ಬಂದವರು-ಹೋದವರನ್ನು   ನೋಡತೊಡಗಿದೆ. 

ಅಲ್ಲೊಂದು ಹೊಸ ಜೋಡಿ. ಮದುವೆಯಾಗಿರಬೇಕು.  ಅವರು ಇಲ್ಲಿ ತರಕಾರಿ ಕೊಳ್ಳಲು ಬಂದಿದ್ದರೂ,  ಒಬ್ಬರಿಗೊಬ್ಬರೂ  ನೋಡುತ್ತಾ ಹುಸಿನಗು, ಕಿರುನೋಟ, ಕೀಟಲೆಗಳೇ  ಹೆಚ್ಚಾಗಿತ್ತು.  ಇಂಥ ಯುವ ದಂಪತಿಗಳಿಂದ ಶುರುವಾಗಿ  ವಯಸ್ಸಾದ ಅಜ್ಜ-ಅಜ್ಜಿಯವರೆಗೆ,  ಎಲ್ಲರೂ ಕಾಣಿಸಿದರು.  ಯಾರಿಗೂ ಬೇರೊಬ್ಬರ ಮೇಲೆ ಗಮನವಿಲ್ಲ.  ಅವರವರ ಲೋಕದಲ್ಲಿ ಅವರು.

ಇವರೆಲ್ಲರಿಗೂ ತರಕಾರಿಗಳ ವಿಚಾರದಲ್ಲಿ ನನ್ನ ಹೆಂಡತಿಗಿರುವ [ಸಮಯ ಹಾಳು ಮಾಡುವ] ಬುದ್ದಿವಂತಿಕೆ  ಬಂದುಬಿಟ್ಟಿದ್ದರೆ ಏನು ಗತಿ ?   ಅಥವಾ  ಅವರಿಗೂ ಈ ವಿಚಾರದಲ್ಲಿ ಬೇರೆ ಬೇರೆ ತರಹಾವರಿ  ಟ್ಯಾಲೆಂಟ್  ಇದ್ದಿರಬಹುದೇ ?  ಗೊತ್ತಿಲ್ಲ. 

ಇವುಗಳ ನಡುವೆ  ದೂರದ  ಮತ್ತಿಕೆರೆ, ಜಾಲಹಳ್ಳೀ ಕ್ರಾಸ್,  ಮಲ್ಲೇಶ್ವರ,  ರಾಜಾಜಿನಗರದಂತ ದೂರದ ಬಡಾವಣೆಗಳಿಂದ ಬಂದಿದ್ದರೂ  ಪಂಚೆ ಲುಂಗಿಗಳಲ್ಲಿ  ಗಂಡಸರು,  ನೈಟಿಗಳ  ಹೆಂಗಸರು  ಕಂಡಾಗ,  ಇವರೂ ಇಲ್ಲೂ ಹೀಗೆ ಅವರ ಮನೆಯ ಪಕ್ಕದ ಅಂಗಡಿಗೆ ಹೋಗುವಂತೆ ಈ  ಒರಿಜಿನಲ್  ಡ್ರೆಸ್ಸಿನಲ್ಲಿ  ಬರಬೇಕಾ  ಎನಿಸಿತ್ತು. ಇದು ಸಾಲದು ಅನ್ನುವಂತೆ  ಸೊಂಟದಲ್ಲಿ  ಅಳುವ ಕಂದಮ್ಮಗಳು ಬೇರೆ. ಇವರ ಮಧ್ಯೆ  ಮಾರಾಟಗಾರರಿಗೆಲ್ಲಾ  ಗಂಟೆಗೊಮ್ಮೆ ಗಳಿಗೆಗೊಮ್ಮೆ  ಟೀ,  ಕಾಫಿ ಸಪ್ಲೇ  ಮಾಡುವ ಮೊಬೈಲು ಟೀ  ಹುಡುಗರು. ತರಕಾರಿ ಕೊಳ್ಳುವ ನೆಪದಲ್ಲಿ  ಸುಂದರ ಹುಡುಗಿಯರನ್ನು  ಕಿರುಗಣ್ಣಲ್ಲೇ  ನೋಡಲು  ಬರುವ ಬ್ಯಾಚುಲರ್ಸುಗಳು…ಹೀಗೆ ಸಾಗಿತ್ತು.

ಅಲ್ಲೊಬ್ಬ ಉರಿಬಿಸಿಲನ್ನು ಲೆಕ್ಕಿಸದೆ ಹತ್ತಕ್ಕೆ ಒಂದುವರೆ, ಹತ್ತಕ್ಕೆ ಒಂದುವರೆ ಎಂದು ರಾಗವಾಗಿ ಕೂಗಿ ಈರುಳ್ಳಿ ಮಾರುತ್ತಿದ್ದ. ಹತ್ತಕ್ಕೆ ಒಂದುವರೆ ಎಂದರೇನು ಅಂತ ನನಗೆ ಗೊತ್ತಾಗಲಿಲ್ಲ.  ಅವನ ಬಳಿಯೇ ಹೋಗಿ ಕೇಳಬೇಕೆನಿಸಿ ಕೇಳಿದೆ. ಅವನು ನನ್ನ ಅಪಾದಮಸ್ತಕ ನೋಡಿ,  "ಸಾರ್ ಅದು ನಿಮಗೆ ಗೊತ್ತಾಗೊಲ್ಲ ಬಿಡಿ, ಹೆಂಗಸರಿಗೆ ಬೇಗ ಗೊತ್ತಾಗಿಬಿಡುತ್ತೆ" ಅಂತ ನಕ್ಕ. "ಅದಕ್ಕೆ ಕಣ್ರೀ ಕೇಳೀದ್ದು, ಗೊತ್ತಾಗಿದ್ದರೆ ಯಾರು ಕೇಳುತ್ತಿದ್ದರು ಹೇಳಿ?" ನನ್ನನ್ನು ಸಮರ್ಥಿಸಿಕೊಳ್ಳುತ್ತಾ ಮರು ಪ್ರಶ್ನೆ ಹಾಕಿದೆ. ಒಂದೂವರೆ ಕೇಜಿಗೆ ಹತ್ತು ರೂಪಾಯಿ ಅಷ್ಟೇ, ಎಷ್ಟು ಕೊಡಲಿ?" ಅಂದ. ಅಷ್ಟರಲ್ಲಿ ನನ್ನ ಪಕ್ಕ ಒಂದು ವಯಸ್ಕ ಹೆಂಗಸು " ಕಡಿಮೆ ಮಾಡಿಕೊಳ್ಳಪ್ಪ ಸ್ವಲ್ಪ" ಅಂದಳು.   

 ಓ ಇದಕ್ಕಿಂತ ಕಡಿಮೇನಾ.,  ನನಗೆ ಇಬ್ಬರು ಹೆಂಡ್ತೀ ನಾಲ್ಕು ಹೆಣ್ಣುಮಕ್ಕಳು ಸಾಕಬೇಕು. ಇನ್ನೂ ಕಡಿಮೆ ಮಾಡಿದ್ರೆ ಅಷ್ಟೆ" ತಕ್ಷಣವೇ ಅವನಿಂದ ಉತ್ತರ ಬಂತು. ಅಲ್ಲಿದ್ದವರಿಗೆಲ್ಲಾ ಅವನ ಮಾತು ಗೊಳ್ಳೆಂದು ನಕ್ಕರು.

ಹೋಗ್ಲಿ ಬಿಡಪ್ಪ, ಹತ್ತು ರೂಪಾಯಿಗೆ ಒಂದುವರೆ ಕೆಜಿ ಕೊಟ್ಟು ನಿಮ್ಮ ಹೆಂಡ್ತಿ ಮಕ್ಕಳನ್ನ ಮಹಾರಾಜನಂತೆ ಸಾಕು"  ಮರು ಉತ್ತರ ನೀಡಿ ಈರುಳ್ಳಿ ಕೊಂಡು ಹೊರಟುಹೋದಳು. 

" ಬನ್ನಿ ಅಕ್ಕ, ಬನ್ನಿ ಅಮ್ಮ, ಹತ್ತಕ್ಕೆ ಒಂದುವರೆ, ನಮ್ಮ ಈರುಳ್ಳಿ ತಿಂದವರ ಮನೆಯಲ್ಲಿ ದೀಪಾವಳಿ ಹಬ್ಬ, ಬನ್ನಿ ತಂಗಿ" ಒಂದೇ ಸಮನೇ ಕೂಗುತ್ತಿದ್ದ.  ಎಲಾ ಇವನ ಬರೀ ಅಮ್ಮ, ಅಕ್ಕ, ತಂಗಿ ಅಂತ ಕೇವಲ ಹೆಂಗಸರನ್ನೇ ಕರೀತಾನಲ್ಲ.  ಅಂದುಕೊಂಡು ಸಮಯ ನೋಡಿದೆ. ಅಷ್ಟರಲ್ಲಾಗಲೇ  ಮತ್ತೊಂದು  ತಾಸು ಕಳೆಯಿತು.   ನನ್ನ ಶ್ರೀಮತಿ ಇನ್ನೂ ವಾಪಸ್  ಬಂದಿಲ್ಲ.   ನಾವು ಇಲ್ಲಿಗೆ ಬಂದು ಎರಡು ತಾಸು ಕಳೆದರೂ  ನನ್ನವಳ   ಈ ತರಕಾರಿ ವ್ಯಾಪಾರ  ಮುಗಿದಿಲ್ಲವಲ್ಲ !  ಅವಳ ಬಳಿ  ಈಗ  ಮೊಬೈಲ್ ಫೋನ್ ಇರುವುದು ನೆನಪಾಗಿ ಫೋನ್ ಮಾಡಿದೆ.

 "ಹಲೋ…..   ಹೇಮಾ  ಎಲ್ಲಿದ್ದೀಯಾ ?"  

"ರ್ರೀ…… ಇನ್ನೇನು  ಆಯ್ತು.  ಇಲ್ಲೇ ಇದ್ದೀನಿ.  ಬರ್ತಿದ್ದೀನಿ".

 "ನನಗೆಲ್ಲೂ ಕಾಣಿಸುತ್ತಿಲ್ಲವಲ್ಲ"  

"ರ್ರೀ..  ಇಲ್ಲೇ ಎಲೆಕೋಸು ತಗೋತಿದ್ದೀನಿ"

"ಹೇ  ಇಲ್ಲಿ ಎಷ್ಟೊಂದು ಜನ ಎಲೆಕೋಸು ಮಾರ್ತಿದ್ದಾರೆ,  ಎಲ್ಲಿ ಹುಡುಕಲಿ ?" 

"ಅದರ ಪಕ್ಕ ಸಪೋಟಾ ಇಟ್ಟಿದ್ದಾರೆ ನೋಡಿ ಕಾಣಿಸ್ತಾ …?

 "ನನಗೆ ಗೊತ್ತಾಗುತ್ತಿಲ್ಲ"

"ಸರಿ ನಿಮಗೆ ಪಪ್ಪಾಯಿ ಕೈಗಾಡಿ  ಕಾಣಿಸ್ತಿದೆಯಾ?"

 "ಎಲ್ಲಿ ?"

"ಅದರ ಪಕ್ಕದಲ್ಲಿ ಕ್ಯಾರೆಟ್ ಇದೆ…"

 ಹೀಗೆ ನಮ್ಮ ಮಾತು ಸಾಗಿದರೂ  ಅವಳು ಎಲ್ಲಿ ಅಂತ ನನಗೆ ಕಂಡುಹಿಡಿಯಲಾಗಲಿಲ್ಲ.

"ಸರಿ ನಾನೇ  ಹುಡುಕಿಕೊಂಡು  ಬರ್ತೀನಿ.  ಹಾಗೆ ಲೈನಲ್ಲೇ  ಇರು" ಎಂದು ಮತ್ತೆ  ನೂರಾರು ಜನರಿರುವ ಸಂತೆಯೆಂಬ ಸಾಗರದೊಳಗೆ ಮತ್ತೆ ನುಗ್ಗಿದೆ. ಫೋನಿನಲ್ಲಿ "ಎದುರುಬನ್ನಿ.,  ಪಕ್ಕದಲ್ಲಿ ಈ  ಅಂಗಡಿ ಇದೆ ನೋಡಿ. ಎನ್ನುತ್ತಿದ್ದಂತೆ ನಾನು ಹೂಗುಟ್ಟುತ್ತಾ ಎದುರಿಗೆ ಸಿಕ್ಕವರಿಗೆ ಕೈಕಾಲು ತಗುಲಿಸುತ್ತಾ… ಮಧ್ಯದಲ್ಲಿ  ಸಾರಿ…ಸಾರಿ… ಎನ್ನುತ್ತಾ  ಹುಡುಕಾಟ ಸಾಗಿತ್ತು.  ಆಷ್ಟರಲ್ಲಾಗಲೇ ಫೋನು ಸಂಭಾಷಣೆ  ೧೫ ನಿಮಿಷ ದಾಟಿತ್ತು.

ಕೊನೆಗೂ  ನನ್ನ ಶ್ರೀಮತಿ  ತರಕಾರಿ ಬ್ಯಾಗಿನ ಸಮೇತ ನನಗೆ ಇಡಿಯಾಗಿ ಸಿಕ್ಕಿಳು.  ವಾಪಸು ಬರುವಾಗ ದಾರಿಯುದ್ದಕ್ಕೂ ವ್ಯಾಪಾರದಲ್ಲಿ  ನಡೆದ ಮಾತುಕತೆ, ಚೌಕಾಶಿ ಮಾಡಿ ಉಳಿಸಿದ ಹಣ ಎಲ್ಲವನ್ನು  ಅವಳು ಖುಷಿಯಿಂದ  ಹೇಳುತ್ತಿದ್ದರೇ.. ನನ್ನ ತಲೆಯಲ್ಲಿ  ಅದಕ್ಕೆ ತದ್ವಿರುದ್ದವಾಗಿ,  ತರಕಾರಿ ತರುವುದಕ್ಕೆ ಹೋಗಿಬರಲು  ಪೆಟ್ರೋಲ್ ಖರ್ಚು,  ಅಲ್ಲಿ ಕಳೆದ ಎರಡುವರೇ  ಗಂಟೆ ಸಮಯ,  ಮೊಬೈಲಿನ ೧೫ ನಿಮಿಷದ ಮಾತಿನ ಕರೆನ್ಸಿ ಸೋರಿಕೆ,  ಎಲ್ಲವೂ ಸೇರಿ  ನನ್ನವಳು ಉಳಿಸಿದ ಹಣಕ್ಕೆ ಕೈ ಚಾಚುತ್ತಿದ್ದವು. ಮನೆಯ  ಮುಂದೆ ಕೈಗಾಡಿಯವನು ಬಂದಾಗ ಒಂದೆರಡು ರೂಪಾಯಿ  ಹೆಚ್ಚಾಗಿ  ಕೇಳಿದರೆ ಚೌಕಾಸಿಗಿಳಿದು  ಅವನ ಬೆಲೆ ಜಾಸ್ತಿಯಾಯ್ತೆಂದು ವಾಪಸ್ಸು  ಕಳಿಸಿದ್ದ ನನ್ನಾಕೆ,  ಈಗ  ನೋಡಿದರೆ  ಸಂತೆಯಲ್ಲಿ  ಉಳಿಸಿದ ಹಣ ಪೆಟ್ರೋಲಿಗೆ,  ಮೊಬೈಲ್ ಫೋನಿಗೆ,  ಕಳೆದ  ಸಮಯಕ್ಕೆ ಸೋರಿಹೋಗಿತ್ತು. ಈ ರೀತಿ ಎಲ್ಲೆಲ್ಲೋ ಸೋರಿಹೋಗುವ ದುಡ್ಡು ಕೈಗಾಡಿಯವನಿಗೆ ಸಿಕ್ಕಿದ್ದರೆ ಅವನ ಮಕ್ಕಳ ಒಪ್ಪೊತ್ತಿನ ಊಟಕ್ಕೆ ದಾರಿಯಾಗುತ್ತಿತ್ತಲ್ವ !  ಅನ್ನಿಸಿತ್ತು.

 ಮನೆಗೆ ಬಂದ ಮೇಲೆ ನನಗನ್ನಿಸಿದ ಈ ವಿಚಾರವನ್ನು ಅವಳಿಗೆ ಹೇಳಿದೆ.  ಅದರೆ  ನನ್ನ ಲೆಕ್ಕಾಚಾರವನ್ನು  ಅವಳು ಒಪ್ಪಲೇ ಇಲ್ಲ.   ಬಹುಶಃ  ಮೊಬೈಲ್ ಕರೆನ್ಸಿ,  ಪೆಟ್ರೋಲಿಗೆ ಖರ್ಚಾದ ಹಣ  ನನ್ನದಾದ್ದರಿಂದ ಅವಳಿಗೆ  ನನ್ನ ವಾದ ಒಪ್ಪಿಗೆಯಾಗಲಿಲ್ಲ. ನಾವು ಮಾಡುವ ಖರ್ಚಿಗಿಂತ ಅವರು ಉಳಿಸುವ ರೂಪಾಯಿಯೇ  ಹೆಚ್ಚು ಅಂತ ಅವಳ ನಂಬಿಕೆ.  ಬಹುಶಃ  ಎಲ್ಲಾ ಹೆಂಗಸರ ನಂಬಿಕೆಯೂ ಇದೇ ಇರಬೇಕೆಂದು  ಸುಮ್ಮನಾದೆ.

ಇದಾದ ನಂತರ ಮುಂದಿನ ವಾರ ನಾನೊಬ್ಬನೇ  ತರಕಾರಿ ತರಲು ಅದೇ ಯಶವಂತಪುರ ಸಂತೆಗೆ  ಹೋಗಿದ್ದೆ.  ಅವಕಾಶ ಸಿಕ್ಕರೆ ಫೋಟೋ ತೆಗೆಯೋಣವೆಂದು  ಜೊತೆಯಲ್ಲಿ ನನ್ನ ಕ್ಯಾಮೆರಾವನ್ನು ಒಯ್ದಿದ್ದೆ.  ನನ್ನಾಕೆ ಕೊಟ್ಟ ಲಿಷ್ಟಿನ ಪ್ರಕಾರ ತುಂಬಾ ಹೊತ್ತು  ಸುತ್ತಾಡದೇ  ಕೇವಲ ಅರ್ಧಗಂಟೆಯಲ್ಲಿ, ಒಳ್ಳೆಯ ಫ್ರೆಶ್ಶಾದ ತರಕಾರಿ ಸೊಪ್ಪು ಹಣ್ಣುಗಳನ್ನು  ಮನೆಗೆ ತೆಗೆದುಕೊಂಡು ಹೋದೆ.  ನಾನೇನು ಹಣ ಉಳಿಸಿರಲಿಲ್ಲವಾದರೂ  ಕೊಟ್ಟ ಹಣಕ್ಕೆ ತಕ್ಕ ಒಳ್ಳೆಯ ಮಾಲು ತಂದಿದ್ದೇನೆಂಬ ನಂಬಿಕೆ ನನಗಿತ್ತು. ಕೊನೆಯಲ್ಲಿ  ತಂದಿದ್ದ ತರಕಾರಿ ಹಣ್ಣುಗಳನ್ನೆಲ್ಲಾ ಒಮ್ಮೆ ಕೂಲಂಕುಶವಾಗಿ ನೋಡಿದ ನನ್ನಾಕೆ,  ಕೊಟ್ಟ ಹಣದ ಮಾಹಿತಿಯನ್ನೆಲ್ಲಾ  ಅಳೆದು ತೂಗಿ. "ನಿಮಗೆ ಚೆನ್ನಾಗಿ ಏಮಾರಿಸಿದ್ದಾರೆ.  ನಾನು ಹೋಗಿದ್ದರೆ ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಇನ್ನೂ ಚೆನ್ನಾಗಿರುವ ಮಾಲು ತರುತ್ತಿದ್ದೆ'  ಎಂದಳು.

ಯಶವಂತಪುರ ಸಂತೆಯಿಂದ ತರುವಾಗ ತುಂಬಾ ಚೆನ್ನಾಗಿ, ಪ್ರೆಶ್ಶಾಗಿದ್ದ  ಟೊಮೋಟೊ, ಸೊಪ್ಪು, ಕ್ಯಾರೆಟ್, ಬೆಂಡೆಕಾಯಿ,  ಕೋಸು….ಎಲ್ಲವೂ  ನನ್ನ ಶ್ರೀಮತಿ ಹೇಳಿದ ಮಾತು  ಕೇಳೀ  ಮಂಕಾದಂತೆ ಕಂಡವು.

ಫೋಟೋ ಮತ್ತು ಲೇಖನ:  ಶಿವು.ಕೆ     

       

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ವಾರಕೊಮ್ಮೆ ಯಶವಂತಪುರ ಸಂತೆ: ಶಿವು ಕೆ.

  1. ಚೆನ್ನಾಗಿದೆ ಸರ್ ನಿಮ್ಮ ಅನುಭವಗಳು ಹಾಗೂ ಲೇಖನ, ಧನ್ಯವಾದಗಳು. 🙂

Leave a Reply

Your email address will not be published. Required fields are marked *