"ಇನ್ನೊಂದ್ ಹೆಜ್ಜೆ ಮುಂದಿಟ್ರೆ ತಲೆ ಒಡಿತೀನಿ" ದೊಣ್ಣೆ ಹಿಡಿದ ವಲ್ಸಮ್ಮನ ಎಚ್ಚರಿಕೆ ನಾಲ್ಕು ಗೋಡೆಗಳ ಒಳಗಿಂದ ಹೊರಗೆ ಕೇಳಿಸುತ್ತಿದೆ. ಗಂಡನೆನೆಸಿಕೊಂಡವ ಇನ್ನೂ ಗುರುಗುಟ್ಟುತ್ತಲೇ ಇದ್ದಾನೆ. ಕುಡಿದ ಬಾಯಿಂದ ಅಸ್ಪಷ್ಟವಾಗಿ ಕೆಟ್ಟ ಪದಗಳು ವಾಸನೆಯೊಂದಿಗೆ ಉರುಳುತ್ತಿವೆ. 6 ವರ್ಷದ ಮಗ ವಿನಿತ್ ಮೂಲೆಯಲ್ಲಿ ನಿಂತುಕೊಂಡು ಅಪ್ಪನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದಾನೆ. ಆದರೆ ವರ್ಗೀಸ್ ಗೆ ಇದ್ಯಾವುದರ ಪರಿವೆಯೂ ಇಲ್ಲ. ಅವನಿಗೆ ಒಂದು ಬಾರಿ ಹೆಂಡತಿಯ ಮೇಲೆ ಕೈ ಮಾಡುವ ಆಸೆ. ಆದರೆ ಅವಳನ್ನು ಸಮೀಪಿಸಲು ಹೆದರಿಕೆ. ಎಲ್ಲಿ ದೊಣ್ಣೆಯ ಹೊಡೆತ ಬೀಳುವುದೋ ಎಂಬ ಆತಂಕ. ಆದರೂ ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದಾನೆ. ಹಾಗೆಯೇ ವಲ್ಸಮ್ಮನ ಎಚ್ಚರಿಕೆಯೂ ಮುಂದುವರಿದಿದೆ.
2006ರಲ್ಲಿ ಈ ವರ್ಗೀಸ್ ಮದುವೆಯಾಗುತ್ತೇನೆ ಎಂದಾಗ ಅಚ್ಚರಿ ಪಟ್ಟಿದ್ದೆ. ಆಗಲೇ ಆತನಿಗೆ ವಯಸ್ಸು 42 ಆಗಿತ್ತು. ಆಗ ಆತ ನನಗೆ ಮರದ ವ್ಯಾಪಾರದಲ್ಲಿ ನೆರವಾಗುತ್ತಿದ್ದ. ಒಳ್ಳೆಯ ಕಮೀಶನ್ ಕೊಡುತ್ತಿದ್ದೆ. ಆತನ ಹಿನ್ನೆಲೆ ಅಂಥ ಒಳ್ಳೆಯದಾಗಿರಲಿಲ್ಲ. ಒಂದು ಜೋಡಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದವನು ಕೆಲವು ವರ್ಷಗಳ ನಂತರ ಕೇಸ್ ಬಿದ್ದು ಹೋಗಿ ಬಿಡುಗಡೆಯಾಗಿದ್ದ. ಉದರದ ಪೋಷಣೆಗಾಗಿ ಎಲ್ಲಾ ಸಮಾಜ ಬಾಹಿರ ಕೆಲಸಗಳಿಗೆ ಕೈಯಿಕ್ಕಿದ್ದ. ನಂತರವೂ ಬದುಕನ್ನು ತಿದ್ದಿಕೊಳ್ಳದೆ ಕುಡಿತದ ದಾಸನಾಗಿ ಸಣ್ಣ-ಪುಟ್ಟ ಪುಂಡಾಡಿಕೆ ಮಾಡಿಕೊಂಡಿದ್ದವನು ಮರದ ವ್ಯಾಪಾರದಲ್ಲಿ ಕಮೀಶನ್ ಏಜೆಂಟ್ ಆಗಿ ಬದಲಾಗಿದ್ದ. ಹಾಗೆಯೇ ಒಮ್ಮೆ ನನ್ನ ಸಂಪರ್ಕಕ್ಕೆ ಬಂದವನು ನನ್ನೊಂದಿಗೆ ಸೇರಿಕೊಂಡು ಎರಡು ವರ್ಷಗಳಾಗಿದ್ದವು. ಈಗ ಸಂಜೆ ಮಾತ್ರ ಒಂದು ಲಿಮಿಟ್ ನಲ್ಲಿ ಕುಡಿಯುತ್ತಿದ್ದ. ಆವಾಗಲೇ ಅವ ನನ್ನೊಡನೆ ಮದುವೆಯ ಪ್ರಸ್ತಾಪ ಮಾಡಿದ್ದು. ಒಳ್ಳೆಯದು ಹುಡುಗಿ ಯಾರೆಂದು ಕೇಳಿದಾಗ ಅವನ ಉತ್ತರದಿಂದ ಆಶ್ಚರ್ಯವಾಗಿತ್ತು. ಅವನು "ಅಣ್ಣಾ, ನಾನು ಮದುವೆಯಾಗುವ ಹುಡುಗಿಗೆ ಒಂದು ಕಾಲು ಸರಿ ಇಲ್ಲ. ಅದು ಪೋಲಿಯೋದಿಂದ ಹಾಗಾಗಿದೆ.ನಾನು ಇದುವರೆಗೆ ಮಾಡಿದ ಪಾಪದ ಕೆಲಸಗಳಿಗೆ ಪ್ರಾಯಶ್ಚಿತ್ತವಾಗಿ ಅವಳಿಗೆ ಬಾಳು ಕೊಡುತ್ತಿದ್ದೇನೆ" ಎಂದಿದ್ದ. ಆಕೆ ವಲ್ಸಮ್ಮ ನನಗೆ ಪರಿಚಯಸ್ಥಳಾಗಿದ್ದು ಶಾಲೆಯಲ್ಲಿ ನನಗಿಂತ ಸೀನಿಯರ್ ಆಗಿದ್ದಳು. ಅಂತೂ ಅಂಗವಿಕಲ ಹೆಣ್ಣಿಗೊಂದು ಬಾಳು ನೀಡುತ್ತಿದ್ದಾನೆ ನಮ್ಮ ವರ್ಗೀಸ್ ಎಂದು ಸಂತಸ ಪಟ್ಟಿದ್ದೆ. ಮದುವೆಯ ಹಿಂದಿನ ದಿನ "ನನ್ನತ್ರ ಮದುವೆಗೆ ದುಡ್ಡಿಲ್ಲ, ಮದುವೆ ಕ್ಯಾನ್ಸಲ್" ಎಂದು ಅವನಂದಾಗ ಜೋರು ಮಾಡಿ 15,000 ರೂಪಾಯಿಗಳನ್ನು ಕೊಟ್ಟು ಮದುವೆ ತಪ್ಪಿಸಬೇಡಿ ಎಂದು ಗದರಿ ಕಳುಹಿಸಿದ್ದೆ. ಅಂತೂ ಮದುವೆ ಸರಳವಾಗಿ ಕೆಲವೇ ಜನರ ಸಮ್ಮುಖದಲ್ಲಿ ನೆರವೇರಿತ್ತು. ಅಂದು ವಲ್ಸಮ್ಮನ ಮುಖದಲ್ಲಿ ಆನಂದದ ಕಳೆ. ಆಗ ಆಕೆಗೂ 33 ಅಥವಾ 34 ವರ್ಷಗಳಾಗಿದ್ದಿರಬೇಕು. ಆಕೆಯ ಸಂಭ್ರಮದ ಮುಂದೆ ಆಕೆ ಅಂಗವಿಕಲಳು ಎಂಬುದು ಅರಿವಾಗುತ್ತಿರಲೇ ಇಲ್ಲ. ಎಲ್ಲರೂ ಆಕೆಗೆ ಬದುಕು ಕೊಟ್ಟ ವರ್ಗೀಸ್ ನನ್ನು ಹೊಗಳುವವರೆ. ವಲ್ಸಮ್ಮ ಕೋಲು ಹಿಡಿದು ನಡೆಯುವಾಗ ಮಾತ್ರ ಆಕೆಯ ಒಂದು ಕಾಲು ಊನ ಎಂಬುದು ತಿಳಿಯುತ್ತಿತ್ತೆಂಬುದನ್ನು ಬಿಟ್ಟರೆ ಉಳಿದಂತೆ ಆಕೆ ಆ ಎಲ್ಲಾ ವಯೋಮಾನದ ಹೆಣ್ಣಿನಂತೆಯೇ ಇದ್ದಳು.
ಮದುವೆಯಾದ ಹೊಸತು ಎಲ್ಲವೂ ಚೆನ್ನಾಗಿತ್ತು. ನನ್ನನ್ನು ಬಿಟ್ಟು ವರ್ಗೀಸ್ ಸ್ವಂತ ವ್ಯಾಪಾರ ಮಾಡತೊಡಗಿದ. ವ್ಯಾಪಾರ ಕೈಹಿಡಿದು ತನಗೊಂದು ರೈಟರ್ ನನ್ನೂ ಇಟ್ಟುಕೊಂಡ. ವಲ್ಸಮ್ಮನಿಗೆ ತಾಯಿ ದಾನವಾಗಿ ಕೊಟ್ಟಿದ್ದ ಜಾಗದಲ್ಲೊಂದು ಪುಟ್ಟ ಮನೆ ಕಟ್ಟಿಸಿದ. ಒಂದು ಲಾರಿಯನ್ನೂ ಕೊಂಡುಕೊಂಡ. ಅಷ್ಟರಲ್ಲಿ ಅವರಿಬ್ಬರಿಗೊಂದು ಗಂಡೂ ಹುಟ್ಟಿ ವಿನಿತ್ ಎಂದು ನಾಮಕರಣಗೊಂಡ. ಬದುಕು ಒಂದು ನೆಲೆ ಕಂಡುಕೊಂಡಿತೆನ್ನೆಷ್ಟುವಲ್ಲಿ ವರ್ಗೀಸ್ ಮತ್ತೆ ಕುಡಿತದ ದಾಸನಾದ. ಇದ್ದ ಎರಡು ಬೈಕುಗಳೂ, ಲಾರಿಯೂ ಮಾರಿ ಹೋದವು. ಕುಡಿತ ಜೋರಾಗಿ ಹೆಂಡತಿಯನ್ನು ಹೀಯಾಳಿಸಿ ಹೊಡೆಯತೊಡಗಿದ. ಅಕ್ಕ-ಪಕ್ಕದವರಿಂದ ರಾಜಿ ಪಂಚಾಯ್ತಿಗಳಾದವು. ಒಂದೆರಡು ಬಾರಿ ಪೋಲೀಸ್ ಸ್ಟೇಷನ್ ನ ಜಗುಲಿಯನ್ನೂ ಏರಿದರು ದಂಪತಿಗಳು. ಆಗ ನಾನೇ ಹೋಗಿ ರಾಜಿ ಮಾಡಿಸಿ ಮನೆಗೆ ಕಳುಹಿಸಿದ್ದೆ ಅವರನ್ನು. ಇವರಿಬ್ಬರ ಜಗಳದ ನಡುವೆ ದಷ್ಟ-ಪುಷ್ಟವಾಗಿ ಬೆಳೆಯುತ್ತಿದ್ದ ವಿನಿತ್ ಸೊರಗತೊಡಗಿದ. ಈ ಗಲಾಟೆಗಳು ಎಷ್ಟು ಅತಿರೇಕಕ್ಕೆ ಹೋದುವೆಂದರೆ ಬೆಂಗಳೂರಿನಲ್ಲಿ ನಾನು ಒಂದೆರಡು ಬಾರಿ ಇದ್ದಾಗ ಫೋನ್ ಮಾಡಿದ ವಲ್ಸಮ್ಮ "ಅಣ್ಣಾ, ಅವರು ಎಂದಿಗೂ ಸರಿಯಾಗೊಲ್ಲಾ…ಮಗ ಹೇಳ್ತಿದ್ದ.. ದೊಡ್ಡವನಾದ್ಮೇಲೆ ಅಪ್ಪನ್ನ ಕಡಿದು ಹಾಕ್ತೀನಿ ಅಂತ…ನಮಗೆಲ್ಲಾ ಅವ್ರ ಸಾವಾಸ ಸಾಕಾಗೋಗಿದೆ" ಎಂದು ಕಣ್ಣೀರಿಟ್ಟಿದ್ದಳು. ನಾನು ಊರಿಗೆ ಬಂದಾಗ ಅವರ ಮನೆಗೆ ತೆರಳಿ ಸಮಾಧಾನ ಪಡಿಸಿದ್ದೆ. ಮಗುವಿನ ಭವಿಷ್ಯಕ್ಕಾಗಿ ಒಂದಾಗಿ ಅನ್ಯೋನತೆಯಿಂದಿರಿ ಎಂದು ಬುದ್ಧಿವಾದ ಹೆಳಿದ್ದೆ. ಆದರೆ ನಾಯಿ ಬಾಲ ಡೊಂಕೇ ಎಂಬಂತೆ ವರ್ಗೀಸ್ ಸರಿಯಾಗಲಿಲ್ಲ. ಕುಡಿದು ಮನೆಗೆ ಬಂದು ಹೆಂಡತಿಗೆ ಹೊಡೆಯುವುದು, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಪುಡಿ ಮಾಡಿ ಹಾಳು ಮಾಡುವುದು ಹೀಗೆ ಎಲ್ಲವೂ ಪುನರಾವರ್ತನೆಯಾಗತೊಡಗಿತು. ಕ್ರಮೇಣ ಒಂದು ಕಾಲಿಲ್ಲದ ವಲ್ಸಮ್ಮ ತನ್ನ ದೊಣ್ಣೆಯ ಸಹಾಯದಿಂದ ಕ್ರಮೇಣ ಕುಡುಕ ಗಂಡನನ್ನು ಎದುರಿಸತೊಡಗಿದಳು.
ಮಗನನ್ನು ಹಾಗೂ ಹೀಗೂ ಸರ್ಕಾರಿ ಶಾಲೆಗೆ ಸೇರಿಸಿದ್ದರು. ಈ ವರ್ಗೀಸ್ ಎಂತಹ ಪಾಖಂಡಿಯೆಂದರೆ ತನ್ನ ಹೊರಗಿನ ತಿಕ್ಕಾಟ-ಗಲಾಟೆಗಳಿಗೆಲ್ಲಾ ವಲ್ಸಮ್ಮನನ್ನು ಎಳೆದು ತರತೊಡಗಿದ. ಗಲಾಟೆ ಮನೆ ಬಾಗಿಲ ತನಕ ಬಂದರೆ ಹೆಂಡತಿಯನ್ನು ಮುಂದೆ ಬಿಟ್ಟು ಬಚಾವಾಗುತ್ತಿದ್ದ. ಬಂದವರು ಒಂದು ಕಾಲಿಲ್ಲದ ಆಕೆಯನ್ನು ನೋಡಿ ಅನುಕಂಪ ತೋರಿ ಮರುಳುತ್ತಿದ್ದರು. ಕ್ರಮೇಣ ಅದೇ ಅವನಿಗೆ ಅಭ್ಯಾಸವಾಗತೊಡಗಿತು. ಜವಾಬ್ದಾರಿಗಳನ್ನೆಲ್ಲಾ ಮರೆತವ ಹೆಂಡತಿಗೆ ಬರುತ್ತಿದ್ದ ತಿಂಗಳ ಮಾಶಾಸನವನ್ನೂ ಕಿತ್ತು ತಿನ್ನತೊಡಗಿದ. ಕೆಲವೊಮ್ಮೆ ಊಟಕ್ಕಾಗಿ ವಲ್ಸಮ್ಮ ಪಕ್ಕದಲ್ಲೇ ಇದ್ದ ತಾಯಿ ಮನೆಯನ್ನು ಆಶ್ರಯಿಸುವಂತಾಯಿತು. ಆತನೂ ಕೆಲವೊಮ್ಮೆ ಗಾರೆ ಕೆಲಸಕ್ಕೆ ಸಹಾಯಕನಾಗಿ ಹೋಗತೊಡಗಿದ. ಆದರೆ ಅವನ ಸಂಬಳ ಕುಡಿತಕ್ಕೇ ಸರಿಹೋಗುತ್ತಿತ್ತು. ಈಗೀಗ ನಾನೂ ಊರಿನಲ್ಲಿರುವುದು ಕಡಿಮೆಯಾದ್ದರಿಂದ ಇವರ ವಿಷಯವನ್ನೂ ಮರೆತುಬಿಟ್ಟಿದ್ದೆ.
ಇತ್ತೀಚೆಗೆ ಮೊನ್ನೆ ಬಾಳೆಹೊನ್ನೂರಿನ ಚರ್ಚ್ ನಲ್ಲಿ ಪೂಜೆ ಮುಗಿದ ನಂತರ ಹೊರಗೆ ದೊಣ್ಣೆ ಹಿಡಿದ ವಲ್ಸಮ್ಮ ಮಗನೊಂದಿಗೆ ಕಾಣಸಿಕ್ಕಳು. ’ನಮಸ್ಕಾರ ಅಣ್ಣಾ’ ಅಂದವಳು ಮಗನ ಕೈಯಿಂದ ನನ್ನಲ್ಲಿ ಆಶೀರ್ವಾದ ಕೇಳಿಸಿದಳು. ವರ್ಷದೊಳಗೆ ವಲ್ಸಮ್ಮ ಬದಲಾಗಿದ್ದಳು. ತಲೆಗೂದಲು ಅರ್ಧಕರ್ಧ ನೆರೆತು ಹೋಗಿ ದೇಹ ಅವಳ ಪೋಲಿಯೋ ಪೀಡಿತ ಕಾಲಿನಂತೆಯೇ ಕೃಶವಾಗಿತ್ತು. ಮಗನೂ ತುಂಬಾ ಇಳಿದುಹೋಗಿದ್ದ. "ಹೇಗಿದ್ದೀಯಾ ವಲ್ಸಮ್ಮ? ವರ್ಗೀಸ್ ಎಲ್ಲಿ?" ಎಂದೆ. "ಅಯ್ಯೋ ಅಣ್ಣಾ, ನಂಗೆ ಈ ಬದುಕು ಬೇಡಿತ್ತು. ಕುಂಟಿಯಾಗಿ ಮನೇಲೇ ಯಾವ ಆಸೆಗಳೂ ಇಲ್ದೆ ಆರಾಮಾಗಿ ಇರ್ತಿದ್ದೆ. ಆ ಮನುಷ್ಯ ನನ್ನ ಬಾಳಲ್ಲಿ ಎಂಟ್ರಿ ಕೊಟ್ಟು ಇಲ್ಲ ಸಲ್ಲದ ಆಸೆಗಳ್ನೆಲ್ಲಾ ಹುಟ್ಟಿಸಿ ಈಗ ಎಲ್ಲವನ್ನೂ ಮಣ್ಣುಪಾಲು ಮಾಡಿದ್ರು… ನನ್ನ ಮಗನಿಗೋಸ್ಕರ ಬದುಕಿದ್ದೀನಿ…ಅವ್ರು ಎಂದಿಗೂ ಬದಲಾಗೊಲ್ಲಾ…ಆಯಪ್ಪ ಸತ್ರೆನೇ ನಮ್ಗೆ ನೆಮ್ಮದಿ…!ಈಗ್ಲೂ ಒಂಥರಾ ನಮ್ ಪಾಲಿಗೆ ಆತ ಸತ್ತಂತೇನೇ…ಇವ್ನ್ ವಿನಿತ್ ಅಪ್ಪನ ಮುಖ ನೋಡ್ಲಿಕ್ಕೂ ಹೇಸ್ತಾನೆ…ನಂದೂ ಒಂದು ಜನ್ಮ" ಎಂದು ಕಣ್ಣೀರಾದಳು. ಮಗನ ಕೈಗೆ 500ರ ನೋಟೊಂದನ್ನು ತುರುಕಿ "ಫ್ರೀ ಆದಾಗ ಮನೆ ಕಡೆ ಬರ್ತೀನಿ" ಎಂದ ನನ್ನ ಕಣ್ಣಾಲಿಗಳೂ ತೇವಗೊಂಡಿದ್ದವು. (ಇದು ನೈಜ ಕಥೆ)
– ಭಾರವಿ