ವರ್ತಮಾನದ ಗಾಯಗಳಿಗೆ ಮುಲಾಮು ನೀಡುವ ಸಂಕಲನ -ಬಯಲೊಳಗೆ ಬಯಲಾಗಿ: ಡಾ ವೈ. ಎಂ. ಯಾಕೊಳ್ಳಿ, ಸವದತ್ತಿ

ಇಂದು ಕನ್ನಡದಲ್ಲಿ ತುಂಬ ಸದ್ದು ಮಾಡುತ್ತಿರುವ ಕಾವ್ಯ ಪ್ರಕಾರ ಗಜಲ್. ಕೆಲವಾರು ದಶಕಗಳ ಹಿಂದೆ ರಾಯಚೂರು ನಾಡಿನ ಕವಿ ಶ್ರೀ ಶಾಂತರಸ ರಂಥವರಿಂದ ಕನ್ನಡಕ್ಕೆ ಬಂದ ಈ ಕಾವ್ಯ ಪ್ರಕಾರ ಇಂದು ತನ್ನ ಸಮಸ್ತ ಬಾಹುಗಳನ್ನು ಚಾಚಿ ಘಮ ಘಮಿಸುತ್ತಿದೆ. ಗಜಲ್ ರಚನೆಯ ಹೃದಯವನ್ನು ಅರಿತವರು, ಅರಿಯದವರು ಗಜಲ್ ಗಳನ್ನು ಬರೆಯುತ್ತಿದ್ದಾರೆ. ಅವರದೇ “ಮುಷಾಯಿರಿ ಗಳು ನಡೆಯುತ್ತಿದ್ದು ಹಲವಾರು ಗಜಲ್ ಗ್ರೂಪ್ ಗಳೇ ನಿರ್ಮಾಣವಾಗಿವೆ. ಗಜಲ್ ಕುರಿತ ವಿಚಾರ ಗೋಷ್ಠಿ ಗಳು ಅಲ್ಲಲ್ಲಿ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರತ್ಯೇಕ ಗಜಲ್ ಕವಿತಾ ಗೋಷ್ಠಿಗಳಿಗೆ ಬೇಡಿಕೆ ಬರುವ ಕಾಲವೇನೂ ದೂರವಿಲ್ಲ.

ಇದೇ ತಿಂಗಳು ಶಿಗ್ಗಾವಿ ಉತ್ತರ ಸಾಹಿತ್ಯ ವೇದಿಕೆ ಯವರು ನೀಡುವ ಪ್ರಶಸ್ತಿ ಸಮಾರಂಭದಲ್ಲಿ ಬಿಡುಗಡೆ ಯಾದ ಯುವಕವಿ ಲಕ್ಷ್ಮಿಕಾಂತ ಮಿರಜಕರ ಅವರ ಪ್ರಥಮ ಗಜಲ್ ಸಂಕಲನ ” ಬಯಲೊಳಗೆ ಬಯಲಾಗಿ” ( ಕಾಂತನ ಗಜಲ್ಗಳು)ಎಂಬ ಸಂಕಲನದ ಬಿಡುಗಡೆಗೆ ಸಾಕ್ಷಿಯಾಗಿದ್ದೆ.

ಸಮಕಾಲೀನ ಕನ್ನಡದ ಶ್ರೇಷ್ಠ ಗಜಲ್ ಕವಿ ಅಲ್ಲಾಗಿರಿ ರಾಜರಿಂದ ” ಗಜಲ್ ಸಾಹಿತ್ಯ ಲೋಕದ ವಿಶಾಲ ಆಕಾಶದಲ್ಲಿ ಮತ್ತೊಂದು ಮಿಣುಗುವ ನಕ್ಷತ್ರ ” ಎಂದು ಹೊಗಳಿಸಿಕೊಂಡ ಕವಿ ಲಕ್ಷ್ಮಿಕಾಂತ ಮಿರಜಕರ‌ ತಮ್ಮ ಮೊದಲ ಸಂಕಲನದಲ್ಲಿಯೇ ತಾವೊಬ್ಬ ಸಶಕ್ತ ಕವಿ ಎನ್ನುವದನ್ನು ಸಾಬೀತು ಪಡಿಸಿದ್ದಾರೆ. ೬೩ ಗಜಲ್ ಗಳ ಈ ಸಂಕಲನ ನೇತಾಜಿ ಪ್ರಕಾಶನದಿಂದ ೨೦೨೦ ರಲ್ಲಿ ಹೊರಬಂದಿದೆ.
“ಉರ್ದು ಸಾಹಿತ್ಯದ ಕಾವ್ಯರಾಣಿ” ಎಂದು ಕರೆಸಿಕೊಂಡ ಈ ಕಾವ್ಯ ಪ್ರಕಾರ ಮೊದಲು ಶೃಂಗಾರ ಕಾವ್ಯವಾಗಿಯೇ ಕಾಣಿಸಿಕೊಂಡಿದ್ದರೂ ಇಂದು ಬದುಕಿನ ಎಲ್ಲ ಆಯಾಮ ಗಳನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡು ವ್ಯಾಪಕವಾಗಿ ಸೆಳೆಯುತ್ತಿರುವದಕ್ಕೆ ಲಕ್ಷ್ಮಿಕಾಂತರ ಗಜಲ್ ಗಳು ಸಾಕ್ಷಿಯಾಗಿವೆ. ಅಲ್ಲಾಗಿರಿ ರಾಜರೇ ಹೇಳಿರುವ ಮಾತುಗಳನ್ನು ನೆನಪಿಸುವದಾದರೆ ” ಲಕ್ಷ್ಮಿಕಾಂತ ಮಿರಜಕರ ಅವರ ಕಾವ್ಯ – ಕೇವಲ ಮರ ಸುತ್ತುವ ಕಾವ್ಯವಾಗಿರದೆ ವರ್ತಮಾನದ ಗಂಭೀರ ಘಟನಾವಳಿಗಳಿಗೆ ಜೀವ ನೀಡಿವೆ. “

ಕವಿ ಹೇಳಿಕೊಂಡಿರುವಂತೆ ” ಕಾಂತನ ಬದುಕು ಸರಳ, ದೃಷ್ಟಿ ವಿಶಾಲ, ಕಾಣುವ ಕನಸುಗಳು ಅಗಾಧ”. ಮಾನವ ಪ್ರೀತಿಯನ್ನು ಎದಯೊಳಗಿಟ್ಟು ಕೊಂಡೇ ಹೊರಟ ಕವಿ ಅವರು. ಈ‌ ಮೊದಲ ಸಂಕಲನಕ್ಕೆ ಇರಿಸಿರುವ ಹೆಸರೂ ವಿಶಿಷ್ಟವೇ. ” ಬಯಲೊಳಗೆ ಬಯಲಾಗಿ ” ಎನ್ನುವ ಹೆಸರಿನಲ್ಲಿ ಶರಣರು ಟಂಕಿಸಿದ ಪದ ಬಯಲು ಎಂಬುದರ ಅರ್ಥವನ್ನು ವಿಸ್ತಾರವಾಗಿ ಕಾಣುತ್ತಾರೆ. ಮನುಷ್ಯ ಎಂದಿಗೂ ಸ್ಥಾವರವಾಗಬಾರದು ಜಂಗಮವಾಗಬೇಕು ಎನ್ನುವ ಕವಿ ಇದರಾಚೆಗೆ ಜಿಗಿದು ” ಬಯಲಾಗಬೇಕು” ಎನ್ನುತ್ತಾರೆ. ಅವರು ಬಯಲು ಪದಕ್ಕೆ ನೀಡುವ ವಿಶಾಲಾರ್ಥ ನಿಜಕ್ಕೂ ಕವಿಯ ವಿದ್ವತ್ತಿಗೂ ಸಾಕ್ಷಿಯಾಗಿದೆ. ಇವರ‌ ಪ್ರಕಾರ ಬಯಲು ಎಂದರೆ ” ಶಿವತ್ವ, ಬುದ್ದತ್ವ, ಕ್ರಿಸ್ತತ್ವ, ಪೈಗಂಬರತ್ವ, ಜಿನತ್ವ, ಗಾಂಧಿತ್ವ, ಶರೀಪತ್ವ, ಬಸವತ್ವ, ಅಲ್ಲಮತ್ವ” ಇದೆಲ್ಲವೂ ಆಗಿರುವ ಪರಿಪೂರ್ಣ ಚೈತನ್ಯ ” ಎಂದು ವ್ಯಾಖ್ಯಾನಿಸುತ್ತಾರೆ.

“ಬದುಕನ್ನು ಬಯಲೊಳಗಿಟ್ಟು ನೋಡುವ ಮನುಷ್ಯ‌ ಪ್ರೀತಿಯ ಕವಿ” ( ಇದೂ ಅಲ್ಲಾಗಿರಿರಾಜ್ ರದೆ ಮಾತು) ಲಕ್ಷ್ಮೀಕಾಂತ ಮಿರಜಕರ ” ಪ್ರೀತಿಯೇ ಜಗತ್ತಿನ ಅಂತಿಮ‌ ಸ್ಥಾಯಿಭಾವ, ಯಾರೂ ಪ್ರೀತಿಯಿಂದ ವಂಚಿತರಾಗಬಾರದು” ಎಂದು ನಂಬಿ ಕಾವ್ಯ ಹೆಣೆದಿದ್ದಾರೆ.
ಈ ಗಜಲ್ ಗಳಲ್ಲಿ ತಾಯಿ ತಂದೆಯ ಪ್ರೀತಿ, ಮಗಳ‌ ಮೋಹ, ಪ್ರೇಮದ ಅಮಲು, ಘಮಲು, ಕಳೆದು‌ಹೋದ ಪ್ರೇಮದ ಅಹವಾಲು ಇವೆಲ್ಲವೂ ಇವೆ. ಜೊತೆಗೆ‌ ದೇಶದ ಸಮಕಾಲೀನ ತಲ್ಲಣಗಳಿಗೆ ಧ್ವನಿಯಾಗುವ ಗಜಲ್ ಗಳು ಇವೆ. ಅಲ್ಲಿ ಮಾನವೀಯತೆ ನಾಶವಾಗುತ್ತಿರುವ ಚಿಂತೆ, ಕೋಮುದ್ವೇಷ ಧರ್ಮಾಂಧತೆಗಳು ಹೆಚ್ಚುತ್ತಿರುವ ಬಗ್ಗೆ ಆತಂಕ, ಕಳೆದು ಹೋಗುತ್ತಿರುವ ರೈತನ ಬದುಕು, ಇವೆಲ್ಲವುಗಳು ಕವಿತೆಯಾಗಿವೆ. ಪ್ರೇಮದ ಅಮಲಿನೊ ಳಗೆ ಓದುಗನಿಗೂ ನಶೆ ಏರಿ, ಲಕ್ಷ್ಮಿಕಾಂತರ ಎದೆಯ‌ ಮಾತುಗಳು ನಮ್ಮೊಳಗೂ ಇಳಿದು‌ ಒಂದಿಷ್ಟು ಕಣ್ಣ ಹನಿ‌ ಜಾರುವಂತೆ ಮಾಡುತ್ತಾರೆ. ಇದರೊಂದಿಗೆ ಲಕ್ಷ್ಮಿಕಾಂತರ ಕಾವ್ಯಕ್ಕೆ ವಿಶೇಷವಾದ ಅನುಭಾವ ಕಾವ್ಯದ ಎಳೆಯೂ ಸೇರಿಕೊಂಡು, ಈ ಸಂಕಲನ ಕವಿಯ ಮೊದಲ ಸಂಕಲನವೆನ್ನುವದನ್ನು ಪರಿಭಾವಿಸಿದಾಗ ಅದು ಅಚ್ಚರಿಯಾಗಿಯೂ ಕಾಣಿಸುತ್ತದೆ. ಒಂದಿಷ್ಟು ಆಧ್ಯಾತ್ಮದ ಸೆಳೆತದ ಗುಂಗು ಇವರ ಗಜಲ್ ಗಳಿಗೆ ವಿಶೇಷ ಮಹತ್ವ ತಂದಿದೆ. ಬಹುಶಃ‌ ಶರೀಫರ, ಸರ್ವಜ್ಞನ, ಕನಕದಾಸರ ನೆಲ ದವರಾದ ಕವಿಗೆ ಈ ಅನುಭಾವ ದ ಅಭಿವ್ಯಕ್ತಿ‌ ನೆಲದ ಗುಣವಾಗಿ ಸಹಜವಾಗಿಯೇ ದಕ್ಕಿದಂತಿದೆ.

ಸಂಕಲನದ ಮೊದಲ ಗಜಲ್ ನ‌ ಕೊನೆಯ ಮಕ್ತಾದಲ್ಲಿ ಕವಿಯ ಉದ್ದೇಶ, ಕಾವ್ಯದ ಗಮ್ಯ ಘೋಷಿತವಾ ಗಿರುವದು ಸ್ಪಷ್ಟ.

ನಮ್ಮ ನಮ್ಮಲ್ಲೆ ಭೇಧ ಮಾಡುವದು ಸರಿಯಲ್ಲ ಕಾಂತ
ಸೇವಿಸೋ ಗಾಳಿ ಉಣ್ಣುವ ಅನ್ನದ ಎದುರು ಎಲ್ಲವೂ ಒಂದೇ( ಗಜಲ್ -೧}

ಎಂದು ಸಾರುವ ಸಾಲು ಇಡೀ ಸಂಕಲನದ ಧ್ಯೇಯ ವಾಕ್ಯದಂತಿದೆ. ಇಂದು

ಓಣಿಗೊಂದು ದೇವ ಗುಡಿ, ತಿರುವಿಗೊಂದು ಚರ್ಚು, ಗಲ್ಲಿಗೊಂದು ಮಸೀದಿ
ಸ್ವಾರ್ಥದಿ ನಿರ್ಮಿಸಿರುವ ವರ ಒಳಮರ್ಮ ಅರಿಯರು ಹರಕೆಯ‌ ಕುರಿಯಂತೆ

ಎನ್ನುವ ಕವಿ ಸಾಮಾನ್ಯ ಜನ‌ ಹರಕೆಯ ಕುರಿಯಾಗಿ ಇವರ ಕೈಯ‌ದಾಳವಾಗಿ ಕೋಮು ದ್ವೇಷಕ್ಕೆ ಬಲಿಯಾಗುತ್ತಿರುವದನ್ನು ಸ್ಪಷ್ಟವಾಗಿ ಸಾರುತ್ತಾನೆ.

ಭಾವೈಕ್ಯತೆ‌ ಮನಸುಗಳು ಚೂರಾಗುವ ಮುನ್ನ ಭಾವೈಕ್ಯತೆಯ ಬೀಜ ಬಿತ್ತಬೇಕು
ಕೋಮು ದ್ವೇಷದ ಬೇರು‌ ಕಡಿಯಬೇಕು” ಎಂಬುದೇ ಕವಿಯ ಆಸೆ. ಇಂದು ಅಭಿವೃದ್ದಿಯ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ನಾಶ, ಕೇವಲ ಭೋಗದ ವಸ್ತು ವಾಗಿರುವ ಹೆಣ್ಣಕುಲ ಇವೆಲ್ಲದರ ಬಗೆಗೆ ಆಳದಲ್ಲಿ ನೋವಿದೆ.

ಸ್ವರ್ಗ ಸುಖ ತಂದುಕೊಡುವೆನೆಂದರೂ‌ ಮನಸಿಗೆ ಧೋಖಾ ಮಾಡಲಾರೆ” ಎಂದು‌ ಹೊರಟ ಕವಿಯದು ಪ್ರಾಮಾಣಿಕ. ಬದುಕಿನ‌ ಹಾದಿ. ” ಸುಳ್ಳಿನ‌ ವೇಷದಲ್ಲಿ ಕಪಟಿಗಳ ಆಡಳಿತ‌ ನಡೆದಿಹುದು, – ಅವನಿಗೆ ಬೇಸರ ತರಿಸಿದೆ. ಆದ್ದರಿಂದ ” ಗಾಂಧಿಯಂಬ‌ ಬಯಲಿನಲ್ಲಿ ಸತ್ಯವಾಗಬೇಕಿದೆ ಸಾಕಿ” ಎನ್ನುತ್ತಾನೆ. ಸಮಕಾಲೀನ ರಾಜಕಾರಣವನ್ನು ತುಂಬ ಸೂಕ್ಷ್ಮವಾಗಿ ಚುಚ್ಚುವ ಕವಿ ” ವಿಫಲತೆ ಪ್ರಶ್ನಿಸದೆ ಕೈ ಜೋಡಿಸಿ ನಿಲ್ಲುವ ಭಕ್ತರಿರುವಾ ಗ ನಾನೇಕೆ ಹೆದರಲಿ” ಎಂದು ಅವರು (ಗಜಲ್ ೧೪) ಮಾತನಾಡುತ್ತಿರುವದು ಸಹಜವೇ ಆಗಿದೆ. ಸಾಮಾನ್ಯರಾದ ನಾವು ಎಷ್ಟು ಜಡಗಟ್ಟಿದ್ದೇವೆಂಬು ದನ್ನು ” ಸುರಕ್ಷಿತ ಜೀವನದ ಚೌಕಟ್ಟಿನಲ್ಲಿ ಜೀವಿಸುತ್ತಿರುವ ಪ್ರಜೆಗಳು ನಾವು” ಎಂದು ಕವಿ ವಿಡಂಬಿಸುತ್ತಾರೆ.

ಮನಸು ಮಾರಿಕೊಂಡು ಉಘೇ ಎನ್ನುವ ಭಕ್ತರಿರುವಾಗ ನಾನೇಕೆ ಹೆದರಲಿ” -ಎಂದು ನಮ್ಮ ರಾಜಕಾರಣಿಗಳು ಘಂಟಾ ಘೋಷವಾಗಿ ಸಾರುತ್ತಿ ದ್ದಾರೆ. ಏಕೆಂದರೆ ಅವರು‌ ” ತಪ್ಪು ಮಾಡಿದರೂ‌ ಜೈ ಎನ್ನಲು ಭಕ್ತರಿರುವಾಗ ನಾನೇಕೆ ಹೆದರಲಿ ” ( ಗಜಲ್ -೧೪) ಎಂದು ಅವರು ಸಾರುತ್ತಿದ್ದಾರೆ. ಇಲ್ಲಿ‌ಕವಿ ರಾಜಕಾರಣಿ ಗಳನ್ನಷ್ಠೇ ದೂಷಿಸುತ್ತಿಲ್ಲ.. ಅವರನ್ನು ಮೆರೆಸುವ ಹಿಂಬಾಲಕ‌ ಪ್ರಜೆಗಳನ್ನೂ ಚುಚ್ಚುತ್ತಾರೆ. ಅವರಿರುವದರಿಂದಲೇ ರಾಜಕಾರಣಿಗಳ ಆಟ‌ ನಡೆದಿದೆ. ಸರ್ವಾಧಿಕಾರ ತೋರಿದರೂ ಸುಮ್ಮನಿದ್ದು ಬಿಡುವ, ಅವರನ್ನು ಪ್ರತಿಭಟಿಸದೆ ಹಿಂಬಾಲಿಸುವ ಜನಗಳ ನಡುವೆ ಆಗುವದು ಇಷ್ಟೇ ಎಂದು‌ ಕವಿ ನಿರಾಶರಾಗಿದ್ದಾರೆ. ಸಮಕಾಲೀನ ರಾಜಕಾರಣದ ಸ್ಥಿತಿಯನ್ನು ತುಂಬ ಸೂಕ್ಷ್ಮವಾಗಿ ವಿಡಂಬಿಸುವ ಸಶಕ್ತ ಗಜಲ್ ಗಳನ್ನು ನೀಡಿರುವದು ಲಕ್ಷ್ಮಿಕಾಂತ ಮಿರಜಕರ ಅವರ ಹೆಗ್ಗಳಿಕೆಯಾಗಿದೆ.
ಕಳೆದ ವರ್ಷ ಬಂದ ಅಕಾಲಿಕ‌ ಮಳೆಯಿಂದ ರೈತನಿಗೆ ಬಹು ದೊಡ್ಡ ಅನ್ಯಾಯವಾಗಿದೆ. ಆದರೆ ನಿಜವಾಗಿ ಯೂ ರೈತನ‌ ಆತ್ಮಬಲ ಉಡುಗಿಲ್ಲ ಎನ್ನುವ ಲಕ್ಷ್ಮಿಕಾಂತ ಅವರು

ಕನಸು ಮುರಿದಿದೆ, ಮನಸು ಮುರಿದಿಲ್ಲ ರಟ್ಟಿ ಗಟ್ಟಿಯಿದೆ ಇನ್ನೂ
ಕೆಸರಾದ ಭೂಮಿಯೆಲ್ಲ ಕಮಲ ಅರಳಿಸುವೆವು ಮುಳುಗಿಲ್ಲ ಬದುಕು

ಎನ್ನುತ್ತಾರೆ. ರೈತರ ಬವಣೆಗಳನ್ನು ಚಿತ್ರಿಸುವ ಕವಿತೆಗ ಳಿರಬಹುದು. ಆದರೆ ಲಕ್ಷ್ಮೀಕಾಂತರಂತೆ ರೈತರ ದೃಡ ಮನೋಬಲವನ್ನು ಚಿತ್ರಿಸುವ ಮೂಲಕ ಇಡೀ ರೈತ ಸಮುದಾಯವನ್ನೇ ಅವರು ಗೌರವಿಸಿರುವ ರೀತಿ ಅಭಿನಂದನೀಯವಾಗಿದೆ.

ಹಾಗೆಂದು ಇಲ್ಲಿ‌ ಒಲವಿನ ಪಲಕುಗಳು, ಎದೆಯ ಭಾವದ ರಾಗಗಳು ಇಲ್ಲವೆಂದಲ್ಲ, ೨೧ ನೆಯ ಗಜಲ್

ನಿನ್ನರಂಗೇರಿದ ಸುಂದರ ವದನ ಸ್ಪರ್ಶಿಸುವ ಭಾಗ್ಯ ನನಗಿರಲಿ ಸಖಿ
ಅಮೃತ ತುಂಬಿದ ನಿನ್ನ ಅಧರಗಳ ತಾಂಬೂಲ ಸವಿಯುವ ಭಾಗ್ಯ ನನಗಿರಲಿ ಸಖಿ

ಎನ್ನುವಂತಹ ಮುದವಾದ. ಸಾಲುಗಳನ್ನೂ ಬರೆಯಬಲ್ಲವರಾಗಿದ್ದಾರೆ. ಒಲವು ತುಂಬಿದ ಹಲವು ಗಜಲುಗಳಿರುವಂತೆಯೆ ವಿರಹದ ನೋವು ಅಭಿವ್ಯಕ್ತಿಸುವ ಸಾಲುಗಳೂ ಇವೆ. ಅವರ ಒಲವು ಎಲ್ಲವನ್ನೂ ಮರೆಸಬಲ್ಲ ತಾಕತ್ತಿರುವ ಶಕ್ತಿಯಾಗಿದೆ ಎಂದು‌ ಕವಿಯ ನಂಬಿಕೆ. ಇದು ಒಲಿದವರ ಎಲ್ಲ ನಂಬಿಕೆಯೂ ಹೌದು.

ಪ್ರೇಮ ಕಾವ್ಯ ಜಪಿಸುವ ಸಂತನಂತೆ ‘ಕಾಂತ’ ನಡೆದು ಹೋದರೆ
ನಿರ್ಜನ ರಸ್ತೆಗಳಿಗೂ ಉಸಿರು ಬರುವದು ನಿನ್ನ ನೆನೆದಾಗ

ಎಂಬಂತಹ ಸಾಲುಗಳನ್ನು ಓದುವುದೇ ಸೊಗಸು. “

ನೀನು ಇರುವ ಕ್ಷಣ ನನ್ನದಲ್ಲಎನ್ನುವ ಕವಿ ಲಕ್ಷ್ಮಿಕಾಂತ ಒಲವನ್ನು ಕೇವಲ ಗಂಡು ಹೆಣ್ಣಿನ‌ ಪ್ರೇಮವೆಂದು ಭಾವಿಸದೇ
ನನ್ನೆದೆಯ ಒಲವ ಮಂದಿರದಲ್ಲಿ ಸರ್ವ ಧರ್ಮಗಳ ಝೇಂಕಾರ, ‘ ಕಾಂತ ‘ ಮಾನವತೆಯ ಅತ್ತರು ಸಿಂಪಡಿಸಬೇಕಿದೆ ಒಂಚೂರು” ಒಲವನ್ನು ಸಕಲರಿಗೆ ಲೇಸ ಬಯಸುವ ಸರ್ವ ಧರ್ಮಗಳ ಸಂಯೋಜನೆ ಎಂಬಂತೆ ಕಾಣುತ್ತಾರೆ. ಮಾನವ‌ಜಗತ್ತಿಗೆ ಒಳ್ಳೆಯದು ಮಾಡದ ಧರ್ಮ ಅವರಿಗೆ ಒಪ್ಪಿತವಲ್ಲ. ಇದು ಕಾವ್ಯದ ನಿಜವಾದ ದಾರಿಯಾಗಬೇಕು ಕೂಡ. ಅದಕ್ಕೇ

ಗೆಳೆಯ ನಿನ್ನ ಎದೆಯಲ್ಲಿ ಸೌಹಾರ್ದದ ದೀಪ ಹಚ್ಚುತ್ತೇನೆ
ಎಂದಿಗೂ ಆರದೆ ಉರಿಯುವ ವಿವೇಕದ ದೀಪ ಹಚ್ಚುತ್ತೇನೆ

ಎನ್ಬುತ್ತಾರೆ. ‌ಕವಿತೆಯನ್ನು ಪ್ರಾಮಾಣಿಕವಾಗಿ ಧ್ಯಾನಿಸುತ್ತಿರುವ ಕವಿಯ ಕೆಲವು ಗಜಲ್ ಗಳು ಅವರ ವಯಸ್ಸಿಗೆ ಮೀರಿದ ಅನುಭಾವ ಕಾವ್ಯದ ಕಡೆಗೆ ಹೊರಟಿರುವದು ಒಂದು ರೀತಿಯ ಅಚ್ಚರಿ ತರಿಸುತ್ತದೆಯಾದರೂ ಎಲ್ಲ ಕವಿತೆಯ ಕೊನೆಯ ಗಮ್ಯ ಅದೇ ಅನಿಸುತ್ತದೆ. ಈ ಕವಿಯ

ಸರಕು ಮುಗಿದ ಮೇಲೆ ಸಂತೆಗೆ ಹೊರಡಲೇಬೇಕು ಒಂದಲ್ಲ ಒಂದು ದಿನ
ಋಣದ ತೀರಿದ ಮೇಲೆ ಮಸಣದ ಹಾದಿ ಹಿಡಿಯಲೆ ಬೇಕು ಒಂದಲ್ಲ‌ ಒಂದು ದಿನ

ಇಂತಹ ಸಾಲುಗಳು ಕವಿಯನ್ನು ಇನ್ನೂ ಪ್ರೀತಿಸುವಂತೆ ಮಾಡುತ್ತವೆ. ಇಲ್ಲಿ ಇಂತಹ ಹಲವು ಗಜಲ್ ಗಳಿರುವದಕ್ಕೆ ಇಂತಹ‌ ಭಾವ ಕವಿಯಲ್ಲಿರುವದು ಆಕಸ್ಮಿಕವಲ್ಲ, ಅಂತಹುದೊಂದು ಭಾವ ಕವಿಯ ಕಾವ್ಯದ ಒಳದನಿಯಾಗಿ ಹರಿಯುತ್ತದೆ ಎನ್ನುವದಕ್ಕೆ ಸಾಕ್ಷಿಯಾಗಿದೆ.
ಇಲ್ಲಿನ ಎಲ್ಲ‌ ಗಜಲ್ ಗಳ ಒಂದೊಂದು ಶೇರ್ ನ್ನು ಎತ್ತಿ ಹೇಳಬೇಕು ಎನ್ನುವಷ್ಟು ಎಲ್ಲ ಬಗೆಯ ಗಜಲುಗಳು ಮುದವಾಗಿವೆ. ಒಂದೆರಡೆ ಕಡೆ ವಾಚ್ಯತೆಯು ಹಣಕಿ ಹಾಕಿದರೂ ಒಂದೆ ಭಾವದ ಕವಿತೆ ಬರೆಯುವಾಗ ಈ ಬಗೆಯ ವಾಚ್ಯತೆ ಅನಿವಾರ್ಯ. ಮುಂದಿನ ಸಂಕಲನದಲ್ಲಿ ಇಂತಹ ಒಂದೆರಡು‌ ಸಣ್ಣ ‌ತಪ್ಪುಗಳನ್ನು ಮೀರಿ ಲಕ್ಷ್ಮಿಕಾಂತ ಕಾವ್ಯದ ಫಸಲು ಬೆಳೆಯುತ್ತಾರೆ ಎಂಬ ನಂಬಿಕೆಯನ್ನು ಖಂಡಿತ ಇಟ್ಟುಕೊಳ್ಳಬಹುದು‌. ಅಪ್ಪನ ಪ್ರೀತಿಯನ್ನು‌ ಮರೆಯದ ಕವಿ ಅದನ್ನು ಮಗಳಲ್ಲೂ ಕಾಣುತ್ತಾನೆ. ತಂದೆಯ ಪದವಿ ದಯಪಾಲಿಸಿದ ಮಗಳ ಬಗೆಗೆ ಕವಿ ಬರೆಯುವಾಗ
ವಸಂತ ಕಾಲು ಮುರಿದು ಬಿದ್ದಿರುವನು ಇದ್ದರೆ ಮಗಳ ಮನೆಯಲ್ಲಿ” (ಗಜಲ್ ೬೩)
ಎಂದು ಮುಂತಾಗಿ ಸಂತಸ ಪಡುತ್ತಾನೆ. ಮಗಳಿಂದ ಬದುಕಿನ ಸಂಭ್ರಮ ಇಮ್ಮಡಿಯಾಗುತ್ತದೆ ಎನ್ನುವ ಭಾಗ್ಯ ಪ್ರತಿ ತಂದೆಯದೂ ಹೌದು.

ಲಕ್ಷ್ಮಿಕಾಂತರ ಗಜಲ್ ಸಂಕಲನ ಬದುಕಿನ ಸಕಲ ಆಯಾಮ ಗಳನ್ನು ಒಳಗೊಂಡು ಕನ್ನಡ ಗಜಲ್ ಲೋಕಕ್ಕೆ ಒಂದು ವಿಶಿಷ್ಠ ಸಂಕಲನವಾಗಿ ಪ್ರವೇಶ ಪಡೆದಿದೆ ಎನ್ನುವದು ನನ್ನ ಗಟ್ಟಿ ನಂಬಿಕೆಯಾಗಿದೆ.
ಯಾರೂ ಇಲ್ಲಿ ಕಾಪಾಡುವದಿಲ್ಲ ಮನುಷ್ಯತ್ವ ಮರೆತರೆ” ಎನ್ನುವದೇ ಅವರ ಕಾವ್ಯದ ಸತ್ವವಾಗಿದೆ. ಲಕ್ಷ್ಮೀಕಾಂತರಿಂದ ಗಜಲೋ, ಕಾವ್ಯವೋ ಅದು ಸಾಹಿತ್ಯದ ಯಾವುದೇ ಪ್ರಕಾರವಿರಲಿ, ಒಳ್ಳೆಯ ಕಾವ್ಯ ಬರುತ್ತಲೇ ಇರಲಿ ಎಂದು ಹಾರೈಸುತ್ತೇನೆ.

ಡಾ ವೈ. ಎಂ. ಯಾಕೊಳ್ಳಿ, ಸವದತ್ತಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x