ಲೇಖನ

ವರ್ಕ್ ಪ್ರಮ್ ಹೊಮ್ (WFH) ಆಗು -ಹೋಗುಗಳು: ಪ್ರವೀಣ್ ಶೆಟ್ಟಿ, ಕುಪ್ಕೊಡು

ಹಿಂದೆ ಒಂದು ಕಾಲ ಇತ್ತು, ತಿಂಗಳಿಗೆ ಒಂದು WFH ತಗೆದುಕೊಳ್ಳಲು ಮ್ಯಾನೇಜರ್ ಗಳ ಕೈಕಾಲು ಹಿಡಿಯಬೇಕಾಗುತಿತ್ತು. ಆದರೆ ಕೊರೊನಾ ಎಲ್ಲಾ ರೀತಿಯ ವರ್ಕ್ ಕಲ್ಚರ್ ಅನ್ನೇ ಬುಡಮೇಲು ಮಾಡಿಬಿಟ್ಟಿದೆ. ಸರಕಾರ ಲಾಕಡೌನ್ ಜೊತೆಗೆ ಐಟಿ ಕಂಪನಿ ನೌಕರರು ಮನೆಯಿಂದಲೇ ಕಾರ್ಯನಿರ್ವಹಿಸಿ ಎಂದು ಆದೇಶ ನೀಡಿದ ನಂತರ ಕಂಪನಿಗಳು ಮೊದ ಮೊದಲಿಗೆ ಹೆದರಿದರೂ, ಅತೀ ಶೀಘ್ರವಾಗಿ ಹೊಸ ರೀತಿಯ ಕೆಲಸದ ವಾತಾವರಣಕ್ಕೆ ಹೊಂದಿಕೊಂಡವು. ತಮ್ಮ ಉದ್ಯೋಗಿಗಳಿಗೆ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಗಳನ್ನು ಅವರವರ ಮನೆಗಳಿಗೆ ತಲುಪಿಸಲಾಯಿತು. ನೆಟ್ವರ್ಕ್ ಗಾಗಿ ಕಂಪನಿಯಿಂದ ಡೇಟಾ ಕಾರ್ಡ್ ವಿತರಿಸಲಾಯಿತು, ಕೆಲವೊಂದು ಉದ್ಯೊಗಿಗಳಿಗೆ ಯುಪಿಸ್ ಕೂಡಾ ಮನೆಗೆ ಕಳುಹಿಸಿದರು.

ಸರಕಾರ ಜುಲೈ 31 ರ ತನಕ WFH ಸೌಲಭ್ಯ ಘೊಷಿಸಿದ್ದರೂ ಕಂಪನಿಗಳು ಮಾತ್ರ ಎರಡನೇ ತ್ರೈಮಾಸಿಕ ಅಂತ್ಯದ ವರೆಗೆ ಮುಂದುವರಿಸುವ ಯೋಜನೆಯನ್ನು ಹಾಕಿಕೊಂಡಿದ್ದವು. ಆದರೆ ಈಗ ಸರಕಾರ ಮುಂದಿನ ಡಿಸೆಂಬರ್ ತನಕ WFH ಯೋಜನೆಯನ್ನು ಮುಂದುವರಿಸಿಯೇ ಬಿಟ್ಟಿತು.

ಸರಕಾರದ ಈ ಆದೇಶವನ್ನು ಐಟಿ ಕಂಪನಿಗಳು ಜಿದ್ದಿಗೆ ಬಿದ್ದವರಂತೆ ನಾಮುಂದು ತಾಮುಂದು ಎಂದು ಸ್ವಾಗತಿಸಲು ಪ್ರಾರಂಭಿಸಿದವು. ಇದರಿಂದಲೇ ಅರ್ಥವಾಗುವುದು WFH ನಿಂದ ಕಂಪನಿಗಳಿಗೆ ಅದೆಷ್ಟು ಲಾಭವಿದೆ ಎಂಬುದು ಅರ್ಥವಾಗುತ್ತದೆ. ಕಂಪನಿಗಳ ಕಛೇರಿ ನಿರ್ವಹಣಾ ವೆಚ್ಚ ಗಣನೀಯವಾಗಿ ಇಳಿಮುಖವಾಗಿದೆ. ಟ್ರಾನ್ಸ್‌ಪೋರ್ಟ್‌ ‌, ಕ್ಯಾಫಿಟೇರಿಯಾ, ಏಸಿ, ಲಿಫ್ಟ್, ಸೆಕ್ಯುರಿಟಿ, ವಿದ್ಯುತ್, ಹೌಸ್ ಕೀಪಿಂಗ್ ಗಳ ಖರ್ಚುಗಳು ಇಳಿಮುಖವಾಗಿವೆ ಹಾಗೂ ಇಲ್ಲವೇ ಇಲ್ಲವಾಗಿವೆ. ಇವುಗಳ ಲಾಭಗಳ ಜೊತೆಗೆ ನೌಕರರ ಸವಲತ್ತುಗಳನ್ನು ಕಡಿತಗೊಳಿಸಲಾಗಿದೆ. ಹೆಚ್ಚಿನ ಕಂಪನಿಗಳು ಈ ವರ್ಷ ನೌಕರರ ವೇತನ ಹೆಚ್ಚಿಸಿಲ್ಲಾ. ಆದರೆ WFH ದೆಸೆಯಿಂದ ಹೆಚ್ಚಿನ ಸಮಯ ದುಡಿಸಿಕೊಳ್ಳುತ್ತಿವೆ.

ಇದು WFH ಒಂದು ಮುಖವಾದರೆ, ಇನ್ನೊಂದು ಕಡೆ ಹೆಚ್ಚಿನ ಐಟಿ ಕಂಪನಿಗಳು ದೊಡ್ಡ ದೊಡ್ಡ ಟೆಕ್ ಪಾರ್ಕ್ ಗಳಿಂದ ವಿಮುಖಗೊಂಡು, ಸಣ್ಣ ಸಣ್ಣ ಆಫೀಸ್ ನ ಜಾಗ ಹುಡುಕುತ್ತಿವೆ. ಅಂದರೆ ಇದರರ್ಥ ಡಿಸೆಂಬರ್ 31 ಕ್ಕೆ ಮುಗಿಯುವಂತಹದ್ದು ಅಲ್ಲಾ ಎಂದು. ಟಿಸಿಎಸ್ ಮುಂದಿನ ಆದೇಶದ ತನಕ ಶೇಕಡಾ 75 ರಷ್ಟು ನೌಕರರು ಮನೆಯಿಂದಲೇ ಕೆಲಸ ನಿರ್ವಹಿಸಿ ಎಂದು ಆದೇಶಿಸಿದೆ. ಹಾಗೆ ಗೂಗಲ್ ಕೂಡಾ ಮುಂದಿನ ವರ್ಷ ಅಂದರೆ 2021ರ ಜುಲೈ ತನಕ ವರ್ಕ್ ಪ್ರಾಮ್ ಹೊಮ್ ಮುಂದುವರಿಸಿದೆ. ಬಹುತೇಕ ಕಂಪನಿಗಳು ಖಾಯಂ ಮನೆಯಿಂದಲೇ ಕೆಲಸಮಾಡುವಂತೆ ಘೊಷಿಸಿದರೂ ಆಶ್ಚರ್ಯವೇನಿಲ್ಲ.

ಇದೆಲ್ಲದರ ನಡುವೆ ಐಟಿ ಕಂಪನಿಗಳ ಸುತ್ತಮುತ್ತ ಬದುಕು ಕಟ್ಟಿಕೊಂಡವರು ನಿಜವಾಗಿಯೂ ಜೀವನ ಮೂರಾಬಟ್ಟೆಯಾಗಿದೆ. ಚಿಕ್ಕ ಸೈಕಲ್ ನಲ್ಲಿ ಸಿಗರೇಟ್ ಮಾರುವವನಿಂದ ಹಿಡಿದು, ಬಹು ಐಶಾರಾಮಿ ಹೋಟೆಲ್ ತನಕ ಐಟಿ ಕಂಪನಿಗಳ ನೌಕರರನ್ನೇ ನಂಬಿಕೊಂಡಿವೆ. ಒಂದು ಟೆಕ್ ಪಾರ್ಕ್ ನಲ್ಲಿ ಹೊಟೇಲ್, ಜ್ಯೂಸ್ ಸೆಂಟರ್, ಐಸ್ ಕ್ರಿಮ್ ಪಾರ್ಲರ್, ಫಾಸ್ಟ್ ಪೂಡ್ ಸೆಂಟರ್, ಸೂಪರ್ ಮಾರ್ಕೆಟ್ ಹೀಗೆ ಹತ್ತು ಹಲವು ಬಿಸಿನೆಸ್ ‌ಮಾಡಿಕೊಂಡವರು ಮುಂದೇನು ಎಂಬ ಆತಂಕದಲ್ಲಿದ್ದಾರೆ. ಐಟಿ ಉದ್ಯೋಗಿಗಳನ್ನೇ ಬಹುವಾಗಿ ನಂಬಿಕೊಂಡಿರುವ ಓಲಾ, ಉಬರ್ ಟ್ಯಾಕ್ಸಿ ಚಾಲಕರು ಬೇರೆ ಉದ್ಯೋಗದ ಕಡೆ ಮನ ಮಾಡಿದ್ದಾರೆ.

WFH ನಿಂದ ಬಹುತೇಕರು ಮನೆಯಿಂದಲೇ ಕೆಲಸ ನಿರ್ವಹಿಸುವುದರಿಂದ ಬೆಂಗಳೂರನ್ನು ತೊರೆದು ತಮ್ಮ ಸ್ವಂತ ಊರಿನತ್ತ ಮುಖ ಮಾಡಿದ್ದಾರೆ. ಇದರಿಂದ ಬೆಂಗಳೂರಿನ ಬಹುತೇಕ ಪಿಜಿಗಳು ಖಾಲಿಯಾಗಿವೆ. ಹೆಚ್ಚಿನ ಮನೆಗಳ ಮುಂದೆ ಟು-ಲೆಟ್ ಬೊರ್ಡುಗಳು ಸಾಮಾನ್ಯ. ಹೀಗಾಗಿ ಹುಚ್ಚೆದ್ದು ಕುಣಿಯುತ್ತಿದ್ದ ಬೆಂಗಳೂರಿನ ರಿಯಾಲ್ಟಿ ಮುಂದಿನ ದಿನಗಳಲ್ಲಿ ಕುಸಿದು ಬೀಳುವುದರಲ್ಲಿ ಅಚ್ಚರಿ ಇಲ್ಲಾ.

ಲಾಸ್ಟ್ ಪಂಚ್:
ಇಲ್ಲಿ ತನಕ ಇತಿಹಾಸ ಕ್ರೀ.ಪೂ, ಕ್ರೀ.ಶ ಅಂತ ಓದುತ್ತಾ ಇದ್ದೀವಿ. ಇನ್ಮುಂದೆ ಕೊ.ಪೂ (ಕೊರೋನಾ.ಪೂರ್ವ) ಕೋ.ಶ (ಕೊರೊನಾ.ಶಕ) ಎಂದು ಓದಬೇಕಾಗಬಹುದು!

ಪ್ರವೀಣ್ ಶೆಟ್ಟಿ, ಕುಪ್ಕೊಡು


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.