ಗೆಳೆಯನಲ್ಲ (ಭಾಗ 2): ವರದೇಂದ್ರ ಕೆ.

ಇಲ್ಲಿಯವರೆಗೆ..

3

ತನ್ನನ್ನು ಹುಡುಗ ನೋಡಿ ಹೋಗಿದ್ದು, ಅವನು ತನ್ನನ್ನು ಒಪ್ಪಿದ್ದು. ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಿದ್ದು, ತಾನೂ ಒಪ್ಪಿದ್ದು ಎಲ್ಲ ವಿಷಯವನ್ನು ಸಂತೋಷ್ಗೆ ಹೇಳಬೇಕೆಂದು ಎಷ್ಟು ಪ್ರಯತ್ನಿಸಿದರೂ ಸಂತೋಷ್ ಸಂಪರ್ಕಕ್ಕೆ ಸಿಗ್ತಾನೇ ಇರ್ಲಿಲ್ಲ. ಮದುವೆ ಆಗುವ ಹುಡುಗ ಸಂಪತ್ನ ಫೋಟೋ ಕಳಿಸಬೇಕು ಎಂದು ಎಷ್ಟು ಬಾರಿ ಅಂದುಕೊಂಡರೂ ಸಂತೋಷ್ ಸಂಪರ್ಕಕ್ಕೆ ಸಿಗದ ಕಾರಣ ಸುಮ್ಮನಾದಳು.

ಮದುವೆ ದಿನವೂ ಗೊತ್ತಾಯ್ತು, ಪ್ರೀತಿ ತನ್ನ ಎಲ್ಲ ಸ್ನೇಹಿತರಿಗೆ ಬರಲು ತಿಳಿಸಿದಳು. ಹಾಗೆ ಸಂತೋಷ್ಗೆ ಕಾಲ್ ಮಾಡಿ ಹೇಳಬೇಕು. ನನ್ನ ಮದುವೆ ಫಿಕ್ಸ್ ಆಗಿದ್ದಕ್ಕೆ ತುಂಬ ಖುಷಿ ಪಡುತ್ತಾನೆ. ವಿಶ್ ಮಾಡ್ತಾನೆ ಎಂದು ಫೋನ್ ಮಾಡಿದಳು ಸ್ವಿಚ್ಡ್ ಆಫ್ ಬಂತು. ಮೆಸೇಜ್ ಮಾಡಿದ್ರಾಯ್ತು ಎಂದು ನೋಡಿದ್ರೆ. ಒಂದು ವಾರದಿಂದ ಕಳಿಸಿದ ಎಲ್ಲ ಮೆಸೇಜ್ಗಳು ಪೆಂಡಿಂಗ್ ಇವೆ. ಮುಟ್ಟೇ ಇಲ್ಲ ಅವನಿಗೆ. ಪ್ರೀತಿಗೆ ಏನು ವಿಷಯ ತಿಳಿಲಿಲ್ಲ. ಓದಿನ ಕಡೆ ಗಮನಹರಿಸಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದಾನೋ? ಅಥವ ಅವನ ತಾಯಿಗೆ ಏನಾದ್ರೂ…. ಛೇ.. ಛೇ… ನಾನ್ಯಾಕೆ ಕೆಟ್ಟದ್ದು ಯೋಚಿಸಬೇಕು ಎಂದು, ಮದುವೆ ದಿನಾಂಕ ಹಾಕಿ ಬರುವಂತೆ ಮೆಸೇಜ್ ಮಾಡ್ತಾಳೆ.

ರಾತ್ರಿ ೧೦ ಗಂಟೆ ಸಂತೋಷ್ನ ಕಾಲ್ ಬರುತ್ತೆ. ಇಷ್ಟು ಹೊತ್ತಲ್ಲಿ ಮಾತಾಡಿದ್ರೆ ಅಪ್ಪ ಅಮ್ಮ ಎಲ್ಲರಿಗೂ ಕೇಳಿಸಿ ಡಿಸ್ಟರ್ಬ್ ಆಗ್ಬೋದು ಮೆಸೇಜ್ ಮಾಡಿದ್ರಾಯ್ತು, ಎಂದು ಕಾಲ್ ಕಟ್ ಮಾಡ್ತಾಳೆ. ಈ ದಿನ ತಾನು ಕಳಿಸಿದ ಎಲ್ಲ ಮೆಸೇಜ್ ಗಳು ಅವನಿಗೆ ತಲುಪಿ ಓದಿದ್ದಾನೆ. ಅದಕ್ಕೆ ವಿಶ್ ಮಾಡೋಕೆ ಕಾಲ್ ಮಾಡಿದ್ದಾನೆ. ರಿಸೀವ್ ಮಾಡ್ಬೇಕಿತ್ತು ಎಂದುಕೊಂಡು, ಸ್ವಾರಿ ಸಂತೋಷ್ ಅಪ್ಪ ಅಮ್ಮ ಮಲ್ಗಿದಾರೆ ಡಿಸ್ಟರ್ಬ್ ಆಗುತ್ತೆ ಚಾಟ್ ಮಾಡೋಣ ಎಂದು ಮೆಸೇಜ್ ಹಾಕ್ತಾಳೆ.

ಅವನು ಇದ್ದಕ್ಕಿದ್ದಂತೆ, “ಪ್ರೀತಿ ಏನು ನಿಂಗೆ ಮದುವೆ ಗೊತ್ತಾಯ್ತಾ…!? ನಂಗೆ ಒಂದು ಮಾತೂ ಹೇಳಲಿಲ್ಲ”, ಎನ್ನುತ್ತಾನೆ.

“ಇಲ್ಲ ಸಂತೋಷ್ ನಾನು ಕಾಲ್ ಮಾಡಿದ್ರೆ ಸ್ವಿಚ್ಡ್ ಆಫ್ ಬರ್ತಿತ್ತು. ಮೆಸೇಜ್ಗಳು ಮುಟ್ತಾನೇ ಇರ್ಲಿಲ್ಲ. ಏನಾಯ್ತು ಮೊಬೈಲ್ ಯಾಕೆ ಸ್ವಿಚ್ಡ್ ಆಫ್ ಆಗಿತ್ತು. ನಂಗೆ ಎಷ್ಟು ಬೇಜಾರ್ ಆಯ್ತು ಗೊತ್ತಾ..? ನನ್ನ ಆತ್ಮೀಯ ಗೆಳೆಯ ನೀನು, ಹುಡುಗ ನನ್ನ ನೋಡೋಕೆ ಬಂದಾಗ್ಲೆ ನಾನ್ ನಿಂಗೆ ಮೆಸೇಜ್ ಮಾಡಿದೆ. ಅದು ನಿಂಗೆ ಮುಟ್ಲೇ ಇಲ್ಲ. ಕಾಲ್ ಮಾಡಿದ್ರೂ ಉಪಯೋಗ ಆಗ್ಲಿಲ್ಲ. ಎಲ್ಲ ಒಂದೇ ವಾರದಲ್ಲೇ ಮುಗಿದೋಯ್ತು. ನಿಶ್ಚಿತಾರ್ಥ ಬೇಡ, ಮದುವೆ ಮಾಡಿಬಿಡೋದಾಗಿ ನಿರ್ಧರಿಸಿದರು. ಈಗ ಇರೋ ಮುಹೂರ್ತ ಬಿಟ್ಟರೆ ಇನ್ನಾರು ತಿಂಗಳು ಮುಹೂರ್ತ ಇಲ್ಲ ಎಂದು ಈಗ್ಲೇ ಮದುವೆ ಫಿಕ್ಸ್ ಮಾಡಿದ್ರು. ಇನ್ನೊಂದು ವಾರಕ್ಕೆ ನನ್ ಮದುವೆ ಇದೆ. ನೀನು ಬರ್ಲೇಬೇಕು ನೋಡು ಮತ್ತೆ.”

ಹೌದು “ಯಾಕೆ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಸಂತೋಷ್?” ಎಂದು ಕೇಳಿದಳು.

“ಇಲ್ಲ ಪ್ರೀತಿ ಅಮ್ಮ ಹೋಗ್ಬಿಟ್ರು. ಒಂದು ವಾರ ಆಯ್ತು ನಾನು ಮೊಬೈಲ್ ನೋಡೇ ಇಲ್ಲ. ಇವತ್ತು ಚಾರ್ಜ್ ಮಾಡಿ ಓಪನ್ ಮಾಡಿ ನೋಡಿದೆ. ನೋಡಿದ್ರೆ ನಿನ್ ಮದುವೆ ಗೊತ್ತಾಗಿದೆ. ನನಗೆ ತುಂಬ ಬೇಸರವಾಗ್ತಿದೆ. ಅಮ್ಮನನ್ನು ಕಳೆದುಕೊಂಡ ದುಃಖ ಇರುವಾಗಲೇ ನೀನೂ ನನ್ನಿಂದ ದೂರ ಆಗ್ತಿ ಅಂತ ನಾನು ಅನ್ಕೊಂಡಿರ್ಲಿಲ್ಲ. ನಾನು ನಿನ್ನ ತುಂಬ ಪ್ರೀತಿ ಮಾಡ್ತೀನಿ. ನಿನ್ನೇ ಮದುವೆ ಆಗ್ಬೇಕು ಅನ್ಕೊಂಡಿದ್ದೆ. ನಿಂಗೆ ನನ್ನ ಪ್ರೀತಿ ಬಗ್ಗೆ ಹೇಳೋಣ ಅನ್ಕೊಂಡೆ ಅಷ್ಟರಲ್ಲೇ ಅಮ್ಮಂಗೆ ಹೀಗಾಗ್ಬಿಡ್ತು, ಏನು ಹೇಳೋಕೆ ಆಗ್ಲೇ ಇಲ್ಲ. ಪ್ಲೀಸ್ ಪ್ರೀತಿ ನೀನ್ ನನ್ನ ಕೈ ಬಿಟ್ರೆ ನಾನು ಸತ್ತೇ ಹೋಗ್ತೀನಿ. ಪ್ಲೀಸ್ ಪ್ಲೀಸ್ ನಿನ್ನ ಬಿಟ್ಟು ಇರೋ ಶಕ್ತಿ ನಂಗೆ ಇಲ್ಲ ಪ್ರೀತಿ” ಎಂದ.

ಪ್ರೀತಿಗೆ ದೊಡ್ಡ ಬೆಟ್ಟವೇ ತನ್ನ ಮೇಲೆ ಬಿದ್ದಂತಾಯ್ತು. ಆತ್ಮೀಯ ಗೆಳೆಯನ ಈ ಮಾತುಗಳಿಗೆ ಅವಳಲ್ಲಿ ಉತ್ತರವಿರಲಿಲ್ಲ. ಉತ್ತರಿಸುವ ಪರಿಸ್ಥಿತಿಯನ್ನೂ ದಾಟಿಬಿಟ್ಟದ್ದಳು. ಸಂತೋಷ್ ನಾಳೆ ಮಾತಾಡೋಣ ಎಂದು ಮೆಸೇಜ್ ಮಾಡಿ ಸುಮ್ಮನಾದಳು.

ಸುಮ್ಮನಾಗಲು ಮನಸ್ಸು ಎಲ್ಲಿ ಬಿಡುತ್ತದೆ. ಸಂತೋಷ್ ನೀನು ಏನು ಹೇಳುತ್ತಿದ್ದೀಯಾ. ನನ್ನ ಆತ್ಮೀಯ ಗೆಳೆಯ ಸದ್ಗುಣಿಯ ಬಾಯಲ್ಲಿ ಈ ಮಾತೆ. ನಿನ್ನ ಸ್ನೇಹಿತೆಯನ್ನು ಒರಿಸುವ ಆಸೆಯೇ. ನಮ್ಮದು ನಿಷ್ಕಲ್ಮಷ ಗೆಳೆತನವಲ್ಲವೇ? ಸಂತೋಷ್, ನಾನು ಎಂದೂ ಈ ರೀತಿ ಯೋಚಿಸಿದವಳಲ್ಲ. ನಿನ್ನ ಮೇಲೆ ನನಗೂ ಮಮತೆ, ವಾತ್ಸಲ್ಯ, ಪ್ರೀತಿಯೂ ಇದೆ. ಆದರೆ ಮದುವೆ ಕುರಿತಾಗಿ ನಾನೂ.. !!?? ಯಾವ ಭಾವನೆಯನ್ನೂ ಇಟ್ಟುಕೊಂಡಿಲ್ಲ.

ಪ್ರೀತಿ, ಮಮತೆ, ವಾತ್ಸಲ್ಯ ಇದೆ ಅಲ್ವ. ಒಂದು ದಿನ ಮಾತಾಡದಿದ್ರೆ ಏನೋ ಕಳೆದುಕೊಂಡAತಾಗುತ್ತದೆ ಇಬ್ಬರಿಗೂ. ಸ್ನೇಹಿತರು ಮದುವೆ ಆದರೆ ಸಂಸಾರ ಇನ್ನೂ ಚೆನ್ನಾಗಿರುತ್ತಲ್ವ. ಉತ್ತಮ ಸ್ನೇಹಿತರು ಮಾತ್ರ ಉತ್ತಮ ದಂಪತಿಗಳಾಗಲು ಸಾಧ್ಯ ಎನ್ನುವ ಮಾತು ಕೇಳಿಲ್ವಾ. ಸ್ನೇಹದಲ್ಲಿ ಒಬ್ಬರನ್ನೊಬ್ಬರು ಅರಿತುಕೊಂಡಾಗಿರುತ್ತದೆ. ಮದುವೆ ನಂತರ ಅರಿಯಬೇಕಾದದ್ದು ಮುಂಚೆಯೇ ಆಗಿದೆ. ಒಳಿತಲ್ವಾ. ಹೀಗಾದಾಗ ಬದುಕು ಸುಂದರವಾಗಿರುತ್ತದೆ. ಅಲ್ವಾ ಗೆಳತಿ.

“ಹಾಗಲ್ಲ ಸಂತೋಷ್, ನಿಂಗೆ ಹೇಗೆ ಹೇಳಬೇಕು ತಿಳಿಯುತ್ತಿಲ್ಲ. ಈಗ ಮದುವೆ ಗೊತ್ತಾಗಿದೆ ನಂಗೆ. ನಾನು ಅವರನ್ನು ಮೆಚ್ಚಿಯೇ ಒಪ್ಪಿಕೊಂಡಿದ್ದೇನೆ. ಈ ಸಮಯದಲ್ಲಿ ನೀನು ಹೀಗೆ ಹೇಳಿದ್ದು, ನನ್ನ ಮನಸನ್ನು ಕೆಡಿಸುತ್ತಿದೆ. ನಿನ್ನ ಜೊತೆಯ ಆ ಸ್ನೇಹಮಯ ಕ್ಷಣಗಳು ನನ್ನ ಜೀವನದ ಮಧುರ ಕ್ಷಣಗಳು. ನಮ್ಮ ಸ್ನೇಹ ಎಂದಿಗೂ ನಿಲ್ಲುವುದಿಲ್ಲ. ನಾನು ಬೇರೆಯವರನ್ನು ಮದುವೆ ಆದರೂ ನಮ್ಮಿಬ್ಬರ ಸ್ನೇಹ ಚಿರಾಯುವಾಗಿರುತ್ತದೆಂದುಕೊಂಡಿದ್ದೆ. ಆದರೆ ಎಲ್ಲರಂತೆ ನಮ್ಮ ಸ್ನೇಹವೂ ಪ್ರೇಮವಾಗಿ ಮದುವೆ ಆಗುವ ಬಯಕೆಯಲ್ಲಿ ಮುಗಿಯುತ್ತದೆಂದು ನಾನು ತಿಳಿದಿದ್ದಿಲ್ಲ. ನಮ್ಮ ಸ್ನೇಹದ ಬಂಡಿ ಹಳಿ ತಪ್ಪುತ್ತಿದೆ ಎನಿಸುತ್ತಿದೆ ನನಗೆ”.

“ಅಯ್ಯೋ ಪ್ರೀತಿ, ನೀನು ಹೇಳುತ್ತಿರುವುದು ನನಗೇನೂ ತಿಳಿಯುತ್ತಿಲ್ಲ. ನನಗೆ ನೀನು ಬೇಕು ಅಷ್ಟೇ.! ನಿನ್ನ ಬಿಟ್ಟು ಬದುಕುವ ಶಕ್ತಿ ನನಗಿಲ್ಲ. ನಾನು ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ. ಇನ್ನು ನೀನು ಮದುವೆ ಆದರೆ, ನಿನ್ನನ್ನೂ ಕಳೆದುಕೊಳ್ಳುವ ಭಯ ನನಗೆ”.

“ಸಾಕು ಸಂತೋಷ್, ಹುಚ್ಚನಂತೆ ಆಡಬೇಡ ನೀನು, ನಾನು ನಿನ್ನಂತವನ ಸ್ನೇಹ ಮಾಡಿದೆನೇ? ನಿನ್ನ ಸ್ನೇಹವೇ ನನಗೆ ಬೇಡ, ಪ್ರೀತಿಗಿಂತಲೂ ಸ್ನೇಹಕ್ಕೆ ಬೆಲೆ ಜಾಸ್ತಿ. ಆದರೆ ನಿನ್ನಿಂದ ಆ ಸ್ನೇಹ ಪದಕ್ಕೂ ಅವಮಾನ” ಎಂದು ಹೇಳಬೇಕೆಂದುಕೊಂಡವಳು, ತಡೆದುಕೊಂಡು, ಅವನ ತಾಯಿ ತೀರಿದ ದುಃಖಕ್ಕೆ ಹೀಗೆ ವರ್ತಿಸುತ್ತಿರಬಹುದೆಂದುಕೊಂಡು,

“ಸಂತೋಷ್, ಇರಲಿ ಈಗ ಏನು ಮಾತಾಡುವುದು ಬೇಡ, ಹೊತ್ತಾಗಿದೆ ನಾಳೆ ನಾವು ಭೇಟಿ ಆಗೋಣ. ಪಾರ್ಕ್ ಗೆ ಬಾ” ಎಂದು ಹೇಳಿದಳು.

ಸರಿ ಪ್ರೀತಿ, ಪ್ಲೀಸ್ ನಾ ಹೇಳಿದ್ದನ್ನು ಕಡೆಗಣಿಸಬೇಡ ಎಂದು ಹೇಳಿ ಶುಭ ರಾತ್ರಿ ಹಾಕಿದ.
ಇಬ್ಬರ ನಿದ್ದೆಯೂ ಹಾರಿ ಹೋಗಿತ್ತು. ಪ್ರೀತಿಯ ಮನವಂತೂ ಛಿದ್ರವಾದಂತಾಗಿತ್ತು. ಹೇಗಾದರೂ ಮಾಡಿ ನಾಳೆ ಸಂತೋಷ್ಗೆ ಸಮಾಧಾನ ಮಾಡಬೇಕು. ಮನಸನ್ನು ಬದಲಾಯಿಸುವಂತೆ, ಬುದ್ಧಿಹೇಳಬೇಕು. ತಾಯಿಯನ್ನು ಕಳೆದುಕೊಂಡಿದ್ದಾನೆ ನನ್ನನ್ನೂ ಕಳೆದುಕೊಂಡುಬಿಡುತ್ತೇನೆ ಎಂಬ ಭಯ ಅವನಿಗೆ. ನಾನು ಎಂದಿಗೂ ನನ್ನ ಸ್ನೇಹಿತನನ್ನು ಬಿಟ್ಟುಕೊಡುವುದಿಲ್ಲ. ಮದುವೆ ನಂತರ ನಮ್ಮ ಸ್ನೇಹದ ಬಗ್ಗೆ ನನ್ನ ಗಂಡನಿಗೆ ಹೇಳಬೇಕು. ಅವರಿಗೂ ಸಂತೋಷ್ನನ್ನು ಪರಿಚಯ ಮಾಡಿಸಿ ಸ್ನೇಹಿತರನ್ನಾಗಿ ಮಾಡಬೇಕು. ನಾನೇ ಒಬ್ಬ ಸುಂದರ ಹುಡುಗಿಯನ್ನು ಹುಡುಕಿ ಅವನ ಜೊತೆ ಮದುವೆ ಮಾಡಿಸಬೇಕು. ನಮ್ಮ ಕುಟುಂಬ, ಸಂತೋಷ್ನ ಕುಟುಂಬದ ನಡುವೆ ಉತ್ತಮ ಸ್ನೇಹದ ಬಾಂಧವ್ಯ ಇರಬೇಕು.
ನಾಳೆ ಸಂತೋಷ್ ಮನಕ್ಕೆ ನೆಮ್ಮದಿ ತಂದು, ಈಗಿನ ಯೋಚನೆಯನ್ನು ಅವನ ಮನದಿಂದ ದೂರವಾಗುವಂತೆ ಮಾಡಬೇಕು. ತಾಯಿ ಕಳೆದುಕೊಂಡ ದುಃಖದಲ್ಲಿದ್ದಾನೆ ನನ್ನ ಗೆಳೆಯ, ಪಾಪ ಸಂತೋಷ್, ಎಂಬ ಕನಿಕರ ಪ್ರೀತಿಯ ಮನದಲ್ಲಿ ಮೂಡಿತು.

ಪ್ರೀತಿಗೆ ದುಃಖ ಉಮ್ಮಳಿಸಿ ಬಂದು, ಕಣ್ಣು ತೇವವಾದವು. ಯಾವಾಗಲೋ ನಿದ್ದೆ ಹತ್ತಿತು. ಬೆಳಿಗ್ಗೆ ಎದ್ದರೆ ಕಣ್ಣೆಲ್ಲ ಕೆಂಪು.

ಅಮ್ಮ “ಏನೇ ಪ್ರೀತಿ, ರಾತ್ರಿ ಎಲ್ಲಾ ಸಂಪತ್ ಜೊತೆ ಮೆಸೇಜ್ ಮಾಡ್ತಾ ಇದ್ದೇನೆ, ಮದುವೆ ಹತ್ರ ಬಂದಿದೆ, ನಿದ್ದೆಗೆಡಬೇಡ ಪುಟ್ಟಿ”, ಎಂದು ಹೇಳಿದರು.

ಮನದಲ್ಲೇ ಅಮ್ಮಂಗೆ, ಸಂತೋಷ್ ನ ವಿಷಯ ಹೇಳಬೇಕೆನಿಸಿತು, ಆದರೆ ಹೇಳಲಿಲ್ಲ. ಇವತ್ತು ಸಂತೋಷ್ ನ ಭೇಟಿ ಆಗಬೇಕು. ಬುದ್ಧಿ ಹೇಳಬೇಕು. ಶಾಶ್ವತವಾದ ಸ್ನೇಹಕ್ಕಿಂತ ಪ್ರೀತಿ ದೊಡ್ಡದಲ್ಲ, ಮಧುರವಾದ ಸ್ನೇಹವೇ ಅಮರ. ಪ್ರೀತಿಯಲ್ಲಿರುವ ಮುಚ್ಚು ಮರೆ ಸ್ನೇಹದಲ್ಲಿರೋದಿಲ್ಲ. ನಲ್ಲನಿಗಿಂತ ಆತ್ಮೀಯತೆ ಗಳೆಯನಲ್ಲಿರುತ್ತದೆ. ಅದು ನಮ್ಮಿಬ್ಬರ ನಡುವೆ ಇದೆ, ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮಿಬ್ಬರದಾಗಿದೆ. ನಿನ್ನ ತಾಯಿ ತೀರಿದ ದುಃಖದಲ್ಲಿ ನೀನು ನನ್ನನ್ನು ಕಳೆದುಕೊಳ್ಳುವ ಭೀತಿಯಲ್ಲಿದೀಯ. ಮನಸನ್ನು ತಿಳಿ ಮಾಡಿಕೊ, ನಾನು ಎಂದಿಗೂ ನಿನ್ನ ಪ್ರೀತಿಯ, ನೆಚ್ಚಿನ, ಆತ್ಮೀಯ ಸ್ನೇಹಿತಳಾಗಿಯೇ ಇರುತ್ತೇನೆ. ಎಂದಿಗೂ ನಿನ್ನ ಸ್ನೇಹವನ್ನು ಕಳೆದುಕೊಳ್ಳುವುದಿಲ್ಲ. ನೀನು ಬದಲಾಗಬೇಕು. ಜೀವನದಲ್ಲಿ ಏನಾದರು ಸಾಧಿಸಬೇಕು, ನಾನು ಇಂತಹ ಸಾಧಕನ ಗೆಳತಿಯೆಂದು ಬೀಗಬೇಕು. ಅದೇ ನನ್ನಾಸೆ ಸಂತೋಷ್, ಎಂದು ಹೇಳಿ ಸಂತೋಷ್ನ ಮನಸಿಗೆ ಸಮಾಧಾನದ ಜೊತೆ ಬುದ್ಧಿ ಹೇಳಬೇಕು. ಅದು ನನ್ನ ಕರ್ತವ್ಯವೂ ಹೌದು, ಎಂದು ಕೊಂಡು ಪಾರ್ಕ್ನತ್ತ ಹೆಜ್ಜೆ ಹಾಕಿದಳು.

ಇವಳು ಬರುವ ಹೊತ್ತಿಗೆ ಸಂತೋಷ್ ಪಾರ್ಕ್ ಹತ್ತಿರ ಕಾರಿನಲ್ಲಿ ಕುಳಿತಿದ್ದ. ಅವಳನ್ನು ಕಂಡವನೇ, ಬಾ ಪ್ರೀತಿ ಹೇಗಿದ್ದೀಯಾ? ಎಂದು ಕರೆದ. ಕಾರಲ್ಲಿ ಅವಳು ಕುಳಿತೊಡನೆ, ಚಲಾಯಿಸಿಕೊಂಡು ಹೊರಟ. “ಎಲ್ಲಿಗೆ ಹೋಗ್ತಿದೀಯಾ? ಸಂತೋಷ್” ಎಂದಳು. “ಹೇ ನನ್ ಜೊತೆ ಬರೋಕೆ ಭಯಾನಾ!!?? ಎಂದ. ನನ್ನ ಸ್ನೇಹಿತನ ಜೊತೆ ಬರೋಕೆ ನಂಗೇನು ಭಯ, ನಡಿ ಎಲ್ಲಿಗಂತಿ ಅಲ್ಲಿಗೆ”. ಸಂತೋಷ್ ಕಾರನ್ನು ಸೀದ ಅವರ ಮನೆಗೆ ನಡೆಸಿದ.

ಮೊದಲಬಾರಿಗೆ ಪ್ರೀತಿ ಸಂತೋಷನ ಮನೆಗೆ ಬಂದಿದ್ದಾಳೆ.

“ಬಾ ಪ್ರೀತಿ ಇದೇ ನಮ್ಮನೆ. ಅಷ್ಟು ಆತ್ಮೀಯ ಸ್ನೇಹಿತರಾದ್ರೂ ನಮ್ಮನೆಗೆ ನೀ ಬರೋದು ಇದೇ ಮೊದಲಸಲ. ವೆಲ್ ಕಮ್, ವೆಲ್ ಕಮ್” ಎಂದ. ಮನೇಲಿ ಯಾರೂ ಇಲ್ವಾ ಸಂತೋಷ್. “ಇಲ್ಲ ಪ್ರೀತಿ ಅಮ್ಮ ಹೋದ್ರಲ್ಲ. ಅಪ್ಪ ನಮ್ ದೊಡ್ಡಪ್ಪನ ಮನೆಗೆ ಹೋಗಿದಾರೆ. ಅಮ್ಮ ಇಲ್ಲದ ಈ ಮನೆ, ಹೂ ಇಲ್ಲದ ತೋಟದಂತಾಗಿದೆ. ಇಲ್ಲಿದ್ರೆ ಅಮ್ಮನ ನೆನಪಲ್ಲಿ ಕೊರಗ್ತಾರೆ ಅಂತ ದೊಡ್ಡಪ್ಪ ಕರ್ಕೊಂಡು ಹೋಗಿದಾರೆ. ಬರ್ತಾರೆ, ತುಂಬ ಬಿಜಿ ಅವರು. ನಂಗೆ ಒಂಟಿತನ ಕಾಡ್ತಿದೆ ಈಗ ಮನೇಲಿ”, ಎನ್ನುವಷ್ಟರಲ್ಲಿ ಕಣ್ಣು ತುಂಬಿ ಬಂದವು. ಗಮನಿಸಿದ ಪ್ರೀತಿ ಅವನ ಕಣ್ಣೀರನ್ನು ಒರೆಸಿ ಸಂತೈಸಿದಳು.

“ಸಮಾಧಾನ ಮಾಡ್ಕೋ ಗೆಳೆಯ ನಾನಿಲ್ವ ನಿನ್ನ ದುಃಖ ಹಂಚಿಕೊಳ್ಳೋಕೆ. ಆದದ್ದಾಯ್ತು ಸುಮ್ಮನಿರು, ಮತ್ತೆ “ನಿಂದೇನ್ ಕಥೆನಪ್ಪ; ನಿನ್ನೆ ರಾತ್ರಿ ಏನಾಗಿತ್ತೋ ನಿಂಗೆ? ಏನೇನೋ ಮಾತಾಡ್ತಿದ್ದೆ ಒಂದ್ ಕೊಟ್ಟೆ ಅಂದ್ರೆ ನೋಡು ಮುಖಾನೇ ಅಪ್ಪಚ್ಚಿ ಆಗೋಗುತ್ತೆ” ಎಂದು ಛೇಡಿಸಿದಳು.

“ಪ್ರೀತಿ ಆಯ್ ಲವ್ ಯು, ನಂಗೆ ನಿನ್ ಬಿಟ್ ಇರೋ ಶಕ್ತಿ ಇಲ್ಲ. ನೀನ್ ಒಂದ ಕ್ಷಣ ದೂರ ಇದ್ರೂ ಸಹಿಸೋಕ್ ಆಗೊಲ್ಲ ನಂಗೆ. ಪ್ರೀತಿಯ ತಾಯಿಯನ್ನ ಕಳ್ಕೊಂಡೀನಿ ನಿನ್ನ ಕಳ್ಕೊಳೋಕೆ ಇಷ್ಟ ಇಲ್ಲ ನಂಗೆ. ಪ್ಲೀಸ್ ನನ್ ಕೈ ಬಿಡಬೇಡ. ನೀನು ನಂಗೆ ಬೇಕೇ ಬೇಕು”, ಎಂದು ಕೈ ಹಿಡಿದು, ಅಳೋದಕ್ಕೆ ಪ್ರಾರಂಭಿಸ್ತಾನೆ.

“ಸಮಾಧಾನ ಮಾಡ್ಕೊ ಸಂತೋಷ್. ಅಳ್ಬೇಡ ತಾಯಿನ ಕಳ್ಕೊಂಡವರ ದುಃಖ ನನಗೆ ಅರ್ಥ ಆಗುತ್ತೆ. ಹಾಗಂತ ನೀನು ನನ್ನನ್ನ ಮದುವೆ ಮಾಡ್ಕೋಬೇಕು ಅನ್ನೋದು ತಪ್ಪು. ನಾನೇನು ನಿನ್ನಿಂದ ದೂರವಾಗೊಲ್ಲ. ಮದುವೆ ಆಗ್ತಿದೀನಿ ಅಷ್ಟೆ, ಮದುವೆ ಆದರೆ ಸ್ನೇಹವನ್ನು ಕಳ್ಕೋಬೇಕು ಅಂತ ಏನಿಲ್ಲ. ಈಗಾಗಲೇ ಮದುವೆ ಫಿಕ್ಸ್ ಆಗಿರುವ ನನ್ನನ್ನು ಹಾರೈಸೋದು ಬಿಟ್ಟು ಸುಮ್ಮನೆ ಏನೇನೋ ಯೋಚನೆ ಮಾಡಿ ಕಾಡ್ತಾ ಇದೀಯಲಾ!

ಸಂತೋಷ್!! ಕೇಳಿಲ್ಲಿ “ಶಾಶ್ವತವಾದ ಸ್ನೇಹಕ್ಕಿಂತ ಪ್ರೀತಿ ದೊಡ್ಡದಲ್ಲ, ಮಧುರವಾದ ಸ್ನೇಹವೇ ಅಮರ. ಪ್ರೀತಿಯಲ್ಲಿರುವ ಮುಚ್ಚು ಮರೆ ಸ್ನೇಹದಲ್ಲಿರೋದಿಲ್ಲ. ನಲ್ಲನಿಗಿಂತ ಆತ್ಮೀಯತೆ ಗೆಳೆಯನಲ್ಲಿರುತ್ತದೆ. ಅದು ನಮ್ಮಿಬ್ಬರ ನಡುವೆ ಇದೆ, ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮಿಬ್ಬರದಾಗಿದೆ. ನಿನ್ನ ತಾಯಿ ತೀರಿದ ದುಃಖದಲ್ಲಿ ನೀನು ನನ್ನನ್ನು ಕಳೆದುಕೊಳ್ಳುವ ಭೀತಿಯಲ್ಲಿದೀಯ. ಮನಸನ್ನು ತಿಳಿ ಮಾಡಿಕೊ, ನಾನು ಎಂದಿಗೂ ನಿನ್ನ ಪ್ರೀತಿಯ, ನೆಚ್ಚಿನ, ಆತ್ಮೀಯ ಸ್ನೇಹಿತಳಾಗಿಯೇ ಇರುತ್ತೇನೆ. ಎಂದಿಗೂ ನಿನ್ನ ಸ್ನೇಹವನ್ನು ಕಳೆದುಕೊಳ್ಳುವುದಿಲ್ಲ. ನೀನು ಬದಲಾಗಬೇಕು. ಜೀವನದಲ್ಲಿ ಏನಾದರು ಸಾಧಿಸಬೇಕು, ನಾನು ಇಂತಹ ಸಾಧಕನ ಗೆಳತಿಯೆಂದು ಬೀಗಬೇಕು. ಅದೇ ನನ್ನಾಸೆ ಸಂತೋಷ್” ಎಂದು ಏನೆಲ್ಲ ಹೇಳಬೇಕೆಂದುಕೊಂಡಿದ್ದಳೋ ಎಲ್ಲವನ್ನೂ ಹೇಳುತ್ತಾಳೆ.

ಆದರೆ ಸಂತೋಷ್ ಒಪ್ಪಲು ಸಿದ್ಧವಿಲ್ಲ. “ಪ್ರೀತಿ ನಾ ಹೇಳೋದು ಅರ್ಥ ಮಾಡಿಕೊ ನೀನು ಬೇರೆಯವರನ್ನು ಮದುವೆ ಆದರೆ, ನಮ್ಮ ಸ್ನೇಹ ಮುರಿದಂತೆ, ಈಗಿನಂತೆ ಇರಲು ಸಾಧ್ಯವಿಲ್ಲ, ಪ್ಲೀಸ್ ನಾವು ಮದುವೆ ಆಗೋಣ, ನಿನ್ ಬಿಟ್ ಬದುಕೋ ಶಕ್ತಿ ನಂಗಿಲ್ಲ.. ಪ್ಲೀಸ್ ನನ್ ಬಿಡಬೇಡ ಬಿಡಬೇಡ” ಎಂದು ಉದ್ವೇಗದಿಂದ ಹೇಳಿದ್ದನ್ನೇ ಹೇಳುತ್ತ, ಪ್ರೀತಿಯನ್ನು ಬರಸೆಳೆದು ಅಪ್ಪಿಕೊಂಡುಬಿಡುತ್ತಾನೆ.

(4)

ಸಂತೋಷ್ “ಏನ್ ಮಾಡ್ತಾ ಇದೀಯಾ, ಬಿಡು ನನ್ನ ಬಿಡು ನೀನು ಮಾಡುತ್ತಿರುವುದು ಸರಿಯಿಲ್ಲ, ನಿನ್ನ ನಂಬಿ ನಾನಿಲ್ಲಿ ಬಂದಿರುವೆ ಬಿಡು ಬಿಡು” ಎಂದು ಕೊಸರಿಕೊಳ್ಳುತ್ತಾಳೆ. ಸಂತೋಷನ ಬಾಹು ಬಂಧನದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.

“ಇಲ್ಲ ಪ್ರೀತಿ ನಾ ನಿನ್ನನ್ನು ಬೇರೆಯವರ ಪಾಲಾಗಲು ಬಿಡುವುದಿಲ್ಲ. ನೀ ಎಂದಿಗೂ ನನ್ನವಳೇ, ನನಗೇ ಸೇರಬೇಕು, ನಾ ಬಿಡವುದಿಲ್ಲ” ಎಂದು ಘಟ್ಟಿಯಾಗಿ ತಬ್ಬಿಕೊಂಡು ಮುತ್ತಿಡಲು ಪ್ರಾರಂಭಿಸುತ್ತಾನೆ.

ತಪ್ಪಿಸಿಕೊಳ್ಳಲಾಗದೆ ಪ್ರೀತಿ ಬಿಡು ಬಿಡು ಎನ್ನುತ್ತಲೇ, ಉದ್ರೇಕಗೊಂಡು ಅವನಿಗೆ ಶರಣಾಗಿಬಿಡುತ್ತಾಳೆ. ಆ ಕ್ಷಣದಲ್ಲಿ ಸ್ಥಿಮಿತ ಕಳೆದುಕೊಂಡು ಯಾವುದಕ್ಕೆ ಬಲಿಯಾಗಬಾರದಿತ್ತೋ ಅದಕ್ಕೆ ಪ್ರೀತಿಗೆ ಬೇಡವಾಗಿದ್ದರೂ ಸಂತೋಷ್ ನ ಒತ್ತಡಕ್ಕೆ ಸಿಲುಕಿ ಬಲಿಯಾಗಿಬಿಡುತ್ತಾಳೆ.

ಪೂರ್ವಯೋಜಿತವಾಗಿಯೇ ಸಂತೋಷ್ ಇದನ್ನೆಲ್ಲ ಮಾಡಿದ್ದನೋ ಏನೊ ಎನ್ನುವಂತೆ, ಇಬ್ಬರು ಒಂದಾಗಿ ಬಿಡುತ್ತಾರೆ. ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಪ್ರೀತಿಯ ಫೋನ್ ರಿಂಗಿಸುವ ಶಬ್ದಕ್ಕೆ ಎಚ್ಚರಗೊಂಡು ತಾನೆಲ್ಲಿರುವೆ ಎಂತಹ ಅಚಾತುರ್ಯ ನಡೆದು ಹೋಯಿತು ಎಂದು ಸಂಕಟಪಡುತ್ತಾಳೆ.

ಸಂತೋಷ್ನೂ ಮನದಾಳದಲ್ಲಿ ತಾನು ಕಳೆದುಕೊಂಡ ಮನೋಸ್ಥಿಮಿತವನ್ನು ನೆನೆದು ಬೇಸರಿಸಿಕೊಳ್ಳುತ್ತಾನೆ.

“ಸ್ವಾರಿ ಪ್ರೀತಿ ಹೀಗೆಲ್ಲ ಆಗುತ್ತೆ ಅನ್ಕೊಂಡಿರ್ಲಿಲ್ಲ. ಸ್ವಾರಿ ಸ್ವಾರಿ… ಪ್ರೀತಿ, ಇದು ಉದ್ದೇಶಪೂರ್ವಕವಾದುದಲ್ಲ. ನನ್ನನ್ನು ಕ್ಷಮಿಸು ಪ್ಲೀಸ್.. ಎನ್ನುತ್ತಾನೆ.

ಪ್ರೀತಿ ಮರು ಮಾತಾಡದೆ, ಬಟ್ಟೆ, ಹೆರಳು ಎಲ್ಲ ಸರಿ ಮಾಡಿಕೊಂಡು ಹೊರಡುತ್ತಾಳೆ. ಅವಳನ್ನು ತಡೆದು ನಿಲ್ಲಿಸಿ ತಾನೇ ಕಾರಲ್ಲಿ ಕರೆದುಕೊಂಡು ಹೋಗಿ ಪಾರ್ಕ್ ಬಳಿ ಬಿಡುತ್ತಾನೆ. ಸಂತೋಷ್ ಎಷ್ಟೇ ಮಾತಾಡಿಸಿದರೂ ಪ್ರೀತಿ ತುಟಿ ಬಿಚ್ಚಲಿಲ್ಲ. ಪ್ರೀತಿ ನಾವು ಮದುವೆ ಆಗೋಣ ಎಂದು ಹೇಳುತ್ತಿದ್ದನಾದರೂ, ಪ್ರೀತಿ ಸಂತೋಷ್ನ ಮುಖವನ್ನೂ ನೋಡದೆ, ಕಾರಿಂದ ಇಳಿದು ಹೋಗುತ್ತಾಳೆ.

ಮನೆ ಸೇರಿದ ಕೂಡಲೇ, “ಪ್ರೀತಿ ಇಷ್ಟು ಹೊತ್ತು ಎಲ್ಲಿ ಹೋಗಿದ್ದೆ, ಕಾಲ್ ಮಾಡಿದ್ರೂ ಎತ್ಲಿಲ್ವಲ. ಏನ್ ಹುಡುಗೀನೋ ಏನೋ” ಎಂದು ತಾಯಿ ಗೊಣಗುತ್ತಿರುವಾಗ, ಪ್ರೀತಿಯ ತಂದೆ, “ಇರಲಿ ಬಿಡೆ, ಇನ್ನೂ ಒಂದ್ ವಾರ ಮದುವೆ ಆದ್ಮೇಲೆ ಫ್ರೆಂಡ್ಸು, ಪಾರ್ಟಿ ಅಂತ ಸುತ್ತೋಕಾಗುತ್ತಾ”? ಎಂದು ಹೆಂಡತಿಯನ್ನು ಸುಮ್ಮನಾಗಿಸುತ್ತಾರೆ.
ಪ್ರೀತಿ ಕೋಣೆ ಸೇರಿಕೊಳ್ಳುತ್ತಾಳೆ.
ರಾತ್ರಿ ಊಟಕ್ಕೆ ಕರೆದರೂ, ಹಸಿವಿಲ್ಲ ಎಂದು ಹಾಲು ಕುಡಿದು ಮಲಗುತ್ತಾಳೆ.

ಹಸಿವೇ ಆಗೊಲ್ಲ ಇವಳಿಗೆ, “ಸಂಪತ್ ಜೊತೆ ಚಾಟಿಂಗ್ ಮಾಡಿ ಮಾಡಿ ಪ್ರೀತಿಯ ಮಾತುಗಳಿಂದ ಹೊಟ್ಟೆ ತುಂಬಿಸಿಕೊಂಡಿರುತ್ತಾಳೆ. ಮದುವೆ ಹತ್ತಿರ ಬಂದಂತೆ ಹುಡುಗ ಹುಡುಗಿ ಏನೇನ್ ಮಾತಾಡ್ತಾರೋ ಏನೋ?” ಒಟ್ನಲ್ಲಿ ನಮ್ಮ ಪ್ರೀತಿ ಮುಂದೆ ಸಂತೋಷವಾಗಿದ್ರೆ ಅಷ್ಟೇ ಸಾಕು ಎಂದು ಮನದಲ್ಲೇ ತಾಯಿ ಖುಷಿ ಪಡುತ್ತಾಳೆ.

ಪ್ರೀತಿಗೆ ನಿದ್ರೆ ಹತ್ತುತ್ತಿಲ್ಲ, ಸಂತೋಷ್, ಸಂಪತ್ ಇಬ್ರೂ ಮೆಸೇಜ್ ಮಾಡ್ತಿದಾರೆ. ಸ್ವಾರಿ.. ಸ್ವಾರಿ.. ಅಂತ ಸಂತೋಷ್ ಮೆಸೇಜ್ ಮಾಡ್ತಾ, ಮಾತಾಡು ಪ್ರೀತಿ ಅಂತಿದಾನೆ.

ಸಂಪತ್ ಎಂದಿನಂತೆ,

ಹಲೋ ಡಿಯರ್ ಊಟ ಆಯ್ತಾ? ಏನ್ ಮಾಡ್ತಾ ಇದೀಯ, ಲವ್ ಯು. ಬೆಳಿಗ್ಗೆಯಿಂದ ಬಿಜಿ ನಾ ಡಿಯರ್, ಮೆಸೇಜೇ ಮಾಡಿಲ್ಲ. ನನ್ ಬಂಗಾರಿ ಏನ್ ಮಾಡ್ತಿದೆ ಈಗ. ಮದುವೆ ತಾಯಾರೀಲಿ ನನ್ನೇ ಮರೆತ್ರೆ ಹೇಗೆ…..? ಎಂದು ವರ್ಷಾನುಗಟ್ಟಲೆ ಪ್ರೀತಿ ಮಾಡ್ತಿರೋರ್ ಹಾಗೆ ಒಂದೇ ವಾರದಲ್ಲಿ ಪ್ರೀತೀನ ಅಷ್ಟು ಹಚ್ಕೊಂಡ್ ಮೆಸೇಜ್ ಮಾಡ್ತಿದಾನೆ, ಸಂಪತ್.
ಪ್ರೀತಿನೂ ಮಧುರವಾದ ಮೆಸೇಜ್ಗಳಿಂದ ಸಂಪತ್ನನ್ನು ತನ್ನ ಪ್ರೀತಿಯಿಂದ ಕಟ್ಟಿಹಾಕಿದ್ದಾಳೆ. ಆದ್ರೆ ಈ ದಿನ ಯಾವುದಕ್ಕೂ ರಿಪ್ಲೆನೇ ಮಾಡ್ತಿಲ್ಲ. ಮನಸೆಲ್ಲ ನಡೆದ ಕಹಿ ಘಟನೆ ಬಗ್ಗೆ ಯೋಚಿಸ್ತಾ ಇದೆ. ಸಂಪತ್ನನ್ನು ಮದುವೆ ಆಗೋದು ಹೇಗೆ. ಮದುವೆ ಆದರೆ ಅವರು ತೋರುತ್ತಿರುವ ಪ್ರೀತಿಗೆ ನಾನು ಮೋಸ ಮಾಡಿದಂತೆ, ನನ್ನ ಈ ಮೈಲಿಗೆ ದೇಹವನ್ನಿಟ್ಟುಕೊಂಡು ಹಸೆಮಣೆ ಏರಲಿ ಹೇಗೆ. ವಿಷಯ ತಿಳಿಸಿ ಮದುವೆ ಮುರಿದರೆ, ಮನೆಯ ಮರ್ಯಾದೆ ಏನಾಗುತ್ತದೆ? ಭಯಪಡುತ್ತಾಳೆ..

ಪ್ರಾಣಕ್ಕಿಂತ ಹೆಚ್ಚು ಆತ್ಮೀಯನಾಗಿದ್ದ ಸಂತೋಷ್ ಮಾಡಿದ ಮೋಸವನ್ನು ನೆನದರೆ, ಪ್ರಾಣವನ್ನೇ ಆತ್ಮಹತ್ಯೆಗೆ ದೂಡಬೇಕೆನಿಸುತ್ತದೆ. ಸಂತೋಷ್ ಯಾಕೆ ಹೀಗೆ ಮಾಡಿದ, ಇದು ಬೇಕು ಅಂತಲೇ ಮಾಡಿದ್ದೋ, ಅಥವಾ ಸಂದರ್ಭ ಹಾಗೆ ಮಾಡಿತೋ, ಇದರಲ್ಲಿ ನನ್ನ ತಪ್ಪೂ ಇದೆಯೇ… ನಾನೂ ಮೈ ಮರೆತುಬಿಟ್ಟೆನೇ…. ಏನೆಲ್ಲ ಯೋಚನೆ ಮಾಡಿ ಮಾಡಿ ತಲೆ ಸಿಡಿದಂತಾಗುತ್ತಿದೆ.

ಒಂದು ಕ್ಷಣ ನಡೆದ ಘಟನೆ ನೆನೆಸಿಕೊಂಡರೆ ಮೈ ರೋಮಾಂಚನವಾಗುತ್ತೆ. ಸಂತೋಷನ ಆ ಬಾಹು ಬಂಧನದಲ್ಲಿ ಕರಗಿ ಹೋಗಿದ್ದು. ಆ ನಿಮಿಷದಲ್ಲಿ ತಲ್ಲೀನವಾಗಿದ್ದು ನೆನದರೆ, ಸಾಂಗತ್ಯದ ಸುಖ ಮತ್ತೊಮ್ಮೆ ಬರಬಾರದೇ, ಬರಲು ಅವನನ್ನೇ ಮದುವೆ ಮಾಡಿಕೊಂಡರೆ ಹೇಗೆ? ಎನ್ನಿಸಿ, ಮರುಕ್ಷಣವೇ ಛೀ.. ಥೂ.. ಅದೆಂತಹ ಮಿಲನ, ಒಬ್ಬರ ಅನುಮತಿ ಇಲ್ಲದೆ ಅವರನ್ನು ಸೆಳೆದು ಬಲವಂತವಾಗಿ ಒರಿಸುವುದೆಂದರೆ, ಹಾದರ ಮಾಡಿದಂತೆ. ಇಬ್ಬರ ದೇಹಗಳು ಮಿಲನವಾಗುವ ಮುನ್ನ ಮನಸುಗಳ ಮಿಲನವಾಗಬೇಕು. ನಿಷ್ಕಲ್ಮಷ ಸ್ನೇಹದ ಅರಮನೆಗೆ ಕೊಳ್ಳಿ ಇಟ್ಟ ಗೆಳೆಯನೊಂದಿಗೆ ಮದುವೆಯೇ.?! ಸಾಧ್ಯವೇ ಇಲ್ಲ.

ಹಾಗದರೆ ಪ್ರಿತಿಯ ಅರಮನೆಯನ್ನು ಕಟ್ಟಲು ಸಿದ್ಧವಾಗುತ್ತಿರುವ ಭಾವಿ ನಲ್ಲನೊಂದಿಗೆ ಮದುವೆ ಆಗಿ ನಡೆದ ಘಟನೆಯನ್ನು ಮರೆತು ಇರುವುದೇ? ಏನು ಮಾಡಲು ತೋಚದಂತಾಯಿತು. ಕೂಡಲೇ ಸಂತೋಷ್ಗೆ ಕಾಲ್ ಮಾಡಿ, ನಮ್ಮ ಸ್ನೇಹ ಇಂದು ಸುರಿಸಿದ ಬೆವರಿನಲ್ಲೇ ಕರಗಿಹೋಯಿತು, ಇನ್ನೆಂದೂ ನಿನ್ನ ಮುಖ ನನಗೆ ತೋರಿಸಬೇಡ ಎಂದು ಹೇಳಬೇಕೆಂದು ಕಾಲ್ ಮಾಡಿದಳು. ಆದರೆ ಸಂತೋಷನ ಫೋನ್ ನಾಟ್ ರೀಚಬಲ್. ಮತ್ತೆ ಮತ್ತೆ ಕಾಲ್ ಮಾಡಿದರೂ ಅದೇ ಉತ್ತರ. ಕೊನೆಯಲ್ಲಿ ಸ್ವಿಚ್ಡ್ ಆಫ್. ನನ್ನ ಮನಸಿಂದನೇ ನಾಟ್ ರೀಚಬಲ್ ಆದವನಿಗೆ ಏನು ಹೇಳಿದರೂ ಏನು ಪ್ರಯೋಜನ ಎಂದು, ಅವನ ಬಗೆಗೆ ಇದ್ದ ಸ್ನೇಹದ ಭಾವನೆಗಳನ್ನೇ ಬಂದ್ ಮಾಡಿಕೊಳ್ಳಬೇಕು ಅಷ್ಟೆ ಎಂದುಕೊಂಡಳು.

ವರದೇಂದ್ರ ಕೆ.


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x