ಹೀಗೆ ವಾರದ ಹಿಂದೆ ನಡೆದ ಘಟನೆ ನನ್ನ ಹೊಸ ಸೀರೆಗೆ ರವಿಕೆ ಹೊಲೆಸಲು ಬೋಟಿಕ್ ಗೆ ಹೋಗಿದ್ದೆ. ಅಲ್ಲಿಗೆ ಒಂದು ನಡುವಯಸ್ಸಿನ ಹುಡುಗಿ ಮತ್ತು ಆಕೆಯ ತಾಯಿ ಬಂದರು. ಆ ಹುಡುಗಿಯ ನಿಶ್ಚಿತಾರ್ಥಕ್ಕೆ ರವಿಕೆ ಹೊಲಿಸಲು ಬಂದವರು ಸುಮಾರು ತರಹದ ಡಿಸೈನ್ಗಳನ್ನೂ ನೋಡಿ ಅವನ್ನು ಆಕೆ ಮದುವೆಯಾಗುವ ಹುಡುಗನಿಗೆ ವಾಟ್ಸ್ ಆಪ್ನಲ್ಲಿ ಫೋಟೋ ಕಳುಹಿಸಿ ಸೆಲೆಕ್ಟ್ ಮಾಡಲು ಹೇಳಿದಳು.
ನಾನೆಂದುಕೊಂಡೆ ಇಬ್ಬರದು ಲವ್ ಮ್ಯಾರೇಜ್ ಇರಬಹುದು ಅದಕ್ಕಾಗಿಯೆಂದು. ಆದರೆ ನಂತರ ಆತ ಅವರಮ್ಮನ ನಂಬರ್ ಕೊಟ್ಟು ಕೇಳಲು ಹೇಳಿದ. ಆಗಲು ನಾನು ಸಾಮಾನ್ಯವಾಗಿ ಪರಿಗಣಿಸಿದೆ. ಮತ್ತೆ ಅ ಹುಡುಗಿ ಹುಡುಗನ ಅಮ್ಮನಿಗು, ಅವನ ಅಕ್ಕನಿಗು ಫೋನ್ ಆಯಿಸಿ ಡಿಸೈನ್ ಸೆಲೆಕ್ಟ್ ಮಾಡಲು ಕೇಳಿದಾಗ ನನಗೊಂದು ರೀತಿಯ ಇರುಸು ಮುರುಸಾಯಿತು.
ಇದೆಲ್ಲ ನಡೆಯುವಲ್ಲಿ ಸುಮಾರು ಅರ್ದ ಗಂಟೆ ಕಳೆದು ಹೋಯಿತು. ಕೊನೆಗೂ ಹುಡುಗನ ಅಕ್ಕ ಮಹಾತಾಯಿ ಒಂದು 4,000/- ಬೆಲೆಯ ಒಂದು ಡಿಸೈನ್ ಸೆಲೆಕ್ಟ್ ಮಾಡಿದಳು ಫೋನಿನಲ್ಲಿಯೇ. ಪಕ್ಕದಲ್ಲೇ ನಿಂತ ಹುಡುಗಿಯ ತಾಯಿಯ ಕಡೆ ನೋಡಿದೆ. ಆಕೆಯ ಮುಖದಲ್ಲಿ ಪ್ರಕಟಿಸಲಾರದ ಕೆಲವು ಭಾವನೆಗಳಿದ್ದವು. ಅಷ್ಟೊತ್ತಿಗೆ ಕೌಂಟರ್ನಲ್ಲಿದ್ದ ಹುಡುಗಿ ಕೇಳಿದಳು "ಏನ್ ಮೇಡಮ್ ಹುಡುಗನಿಂದ ಬಾರಿ ಡಿಮ್ಯಾಂಡ್ ಇರೋ ಹಾಗಿದೆ?" ಅವಳು ಅಷ್ಟು ಕೇಳಿದ್ದೆ ಆ ಮಹಿಳೆಯ ಕಣ್ಣಲ್ಲಿ ನೀರು ಜಿನುಗಿತು.
" ಹೌದಮ್ಮ ನನಗಿರೋದು ಒಬ್ಬಳೇ ಹೆಣ್ಣು ಮಗಳು ಅವಳನ್ನು ಒಂದು ಒಳ್ಳೆ ಮನೆ ಸೇರಿಸೋ ಆಸೆ. ಈ ಹುಡುಗ ಅದೇನೋ ಇಂಜಿನಿಯರ್ ಅಂತೆ ಅದಕ್ಕೆ ಒಪ್ಪಿದ್ವಿ. ಏನೊ ನಮ್ ಕೈ ಮೀರಿ ಮಾಡೋಣ ಅಂತ. ಆದ್ರೆ ಇವರೋ ಶುರುವಿನಿಂದಾನು ಅದು ಇದು ಕೇಳ್ತಾನೆ ಇದಾರೆ ಇನ್ನು ನಿಸ್ಚಿತಾರ್ಥನು ಆಗಿಲ್ಲ ಆಗಲೇ 50,000/- ಖರ್ಚು ಇನ್ನು ಏನೇನ್ ಕೇಳ್ತಾರೋ…." ಅಂತ ಕಣ್ಣಲ್ಲಿ ನೀರಾಕಿದ್ರು.
ಇದನ್ನು ಕೇಳಿದ ಮೇಲೆ ಬಹಳ ಬೇಸರ ಆಗಿದ್ದು ಗಂಡಿನವರ ಬಗ್ಗೆ ಅಲ್ಲ ಹೆಣ್ಣೆತ್ತವರ ಬಗ್ಗೆ. ಅಲ್ಲ ಈಗಲೇ ಇಷ್ಟೆಲ್ಲಾ ಗೋಳಾಡಿಸೋರು ನಾಳೆ ಆ ಹುಡುಗಿನ ಚೆನ್ನಾಗಿ ನೋಡ್ಕೋತಾರೆ ಅಂತ ಹೇಗ್ ನಂಬ್ತಾರೆ ಇವ್ರು. ದಿನಕ್ಕೊಂದು ಪೇಪರ್ನಲ್ಲಿ, ಟಿವಿನಲ್ಲಿ ವರದಕ್ಷಿಣೆ ಹಿಂಸಾಚಾರ ನೋಡ್ತಾನೆ ಇದ್ರೂ ನಂಬಿಕೆ ಹೇಗ್ ಬರುತ್ತೆ ಇವರಿಗೆ. ಮದುವೆ ಅನ್ನೋದು ಭಾಂದವ್ಯಗಳ ಬೆಸುಗೆ ಆಗದೆ ವ್ಯಾಪರವಾಗುತ್ತಿದೆ.
ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಕನ್ಯಾದಾನ ಮಾಡುವಾಗ ತಮ್ಮ ಸಂತೋಷಕ್ಕಾಗಿ ಐಶ್ವರ್ಯವನ್ನು ದಾರೆ ಎರೆಯುತ್ತಿದ್ದರಂತೆ ಅದೇ ರೀತಿ ವರನ ಕಡೆಯವರು ಹೆಣ್ಣನ್ನು ತಮ್ಮ ಗೃಹಲಕ್ಷ್ಮಿ ಎಂದು ಮನೆ ತುಂಬಿಸಿಕೊಳ್ಳುತ್ತಿದ್ದರು. ಇದು ಸಿರಿವಂತರಿಗೆ ಸಂಬಂದ ಪಟ್ಟಿದ್ದು. ಆದರೆ ಬರು ಬರುತ್ತಾ ಇದೆ ಆಚಾರವಾಗಿ, ನಂತರ ಹಿಂಸಾಚಾರವಾಗಿ, ಹೆಣ್ಣು ಕೇವಲ ಹಣವನ್ನು ಹೊತ್ತು ತರುವ ಭೋಗದ ವಸ್ತುವಾಗಿ ಹೋಗಿದ್ದಾಳೆ. ಗಂಡನ ಮನೆಯ ದೀಪವಾಗಬೇಕಾದ ಹೆಣ್ಣು, ತವರಿನಲ್ಲಿ ಸೂತಕದ ದೀಪವಾಗಿ ಆರಿ ಹೋಗುತ್ತಿದ್ದಾಳೆ. ಎಲ್ಲಕ್ಕಿಂತ ಮುಖ್ಯವೆಂದರೆ ಹೆಣ್ಣು ವರದಕ್ಷಿಣೆಗೆ ವಿಚಾರದಲ್ಲಿ ದಿಟ್ಟೆಯಾಗಬೇಕು, ವರದಕ್ಷಿಣೆ ವಿರೋಧಿಸಬೆಕು. ತನ್ನಲ್ಲಿರುವ ದುರ್ಬಲತೆಯನ್ನು ಮೆಟ್ಟಿ ನಿಲ್ಲಬೇಕು, ತನ್ನ ಸಾಮರ್ಥ್ಯವನ್ನು ಕಂಡುಕೊಳ್ಳಬೇಕು. ಎಲ್ಲಿಯವರೆಗೂ ವರದಕ್ಷಿಣೆ ಕೊಡುವವರಿರುತ್ತಾರೋ ಅಲ್ಲಿಯವರೆಗೂ ಈ ಹಿಂಸಾಚಾರ ತಪ್ಪಿದ್ದಲ್ಲ ಅಲ್ಲವೇ????
****