ಮೊನ್ನೆ ಕೇರಳದ ಮುಖ್ಯಮಂತ್ರಿ ಚಾಂಡಿ ಬಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಒಂದು ಮನವಿಯನ್ನು ಸಲ್ಲಿಸಿದರು. ಕರ್ನಾಟಕ-ಕೇರಳದ ಮಧ್ಯೆ ಸಂರಕ್ಷಿತ ವನ್ಯಪ್ರದೇಶದಲ್ಲಿ ಹಾದು ಹೋಗುವ ಹೈವೇಯಲ್ಲಿ ರಾತ್ರಿ ವೇಳೆಯಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂಬುದು ಮನವಿಯ ಸಾರಾಂಶ. ಕರ್ನಾಟಕದ ಮುಖ್ಯಮಂತ್ರಿಗಳು ಸಧ್ಯಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿಗಳ ಈ ನಿಲುವು ಸಂತೋಷದ ವಿಚಾರವೇ ಸೈ. ಜನಸಂಖ್ಯೆ ಬೆಳೆದ ಹಾಗೆ ಪಟ್ಟಣಗಳು ನಗರಗಳಾಗುತ್ತವೆ. ಹಳ್ಳಿಗಳು ಪೇಟೆಯ ಸ್ವರೂಪ ಪಡೆದು ಗಾತ್ರದಲ್ಲಿ ಹಿರಿದಾಗುತ್ತಾ ಪಟ್ಟಣಗಳಾಗುತ್ತವೆ. ಸಹಜವಾಗಿಯೇ ಅರಣ್ಯ ಪ್ರದೇಶಗಳ ವಿಸ್ತೀರ್ಣ ಕಡಿಮೆಯಾಗಿ ಅಲ್ಲಿ ವಾಸಿಸುವ ಪ್ರಾಣಿಗಳ ಜೀವನ ಸಂಕಷ್ಟಕ್ಕೆ ಸಿಲುಕುತ್ತವೆ. ಮಾನವ-ವನ್ಯಪ್ರಾಣಿಗಳ ಸಂಘರ್ಷ ಶುರುವಾಗುತ್ತದೆ. ಕಟ್ಟಕಡೆಗಿನ ಗೆಲುವು ಮಾನವನದ್ದೇ ಆಗುತ್ತದೆ. ದೇಶದ ಅಭಿವೃದ್ಧಿಗೆ ರಸ್ತೆಗಳು ಅವಶ್ಯ. ರಸ್ತೆಗಳು ನಮ್ಮ ದೇಹದ ನರಮಂಡಲಗಳಿದ್ದಂತೆ ಎಂದು ಆರ್ಥಿಕಚಿಂತಕರು ಅಭಿಪ್ರಾಯ ಪಡುತ್ತಾರೆ. ಮೂಲಭೂತ ಸೌಕರ್‍ಯದಡಿಯಲ್ಲಿ ಬಲುಮುಖ್ಯವಾದ ಅಂಶವೆಂದರೆ ಉತ್ತಮ ರಸ್ತೆಗಳು ಎಂದು ಸರ್ಕಾರಗಳ ನಿಲುವು. ಬರೀ ಮಾನವಾಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಯ ಮಾನದಂಡವನ್ನು ಅಳೆಯಲಾಗುತ್ತದೆ. ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಶತಾಯಗತಾಯ ಒಳ್ಳೆ ರಸ್ತೆಗಳನ್ನು ನಿರ್ಮಿಸಲು ಸಾಕಷ್ಟು ಹಣವನ್ನು ಪ್ರತಿ ಬಜೆಟ್‌ನಲ್ಲೂ ಎತ್ತಿರಿಸಿಕೊಂಡಿರುತ್ತವೆ. ರಸ್ತೆಗಳ ಅಭಿವೃದ್ಧಿಯಾಗದಿದ್ದರೂ, ಯಾರದೋ ಅಭಿವೃದ್ಧಿಯಾಗುವುದು ನಿಶ್ಚಿತ. ಮಾನವನ ಬದುಕು ಇವತ್ತು ವೇಗದಲ್ಲಿ ಸಾಗುತ್ತಿದೆ. ಇವನ ಅಧಿಕ ವೇಗಕ್ಕೆ ಸಾಕಷ್ಟು ಪ್ರಾಣಿಗಳು ಪ್ರಾಣ ತೆರುತ್ತವೆ. ಕಪ್ಪೆ-ಹಾವುಗಳಂತಹ ಚಿಕ್ಕ ಪ್ರಾಣಿಗಳಿಂದ ಹಿಡಿದು, ಚಿರತೆ-ಆನೆಗಳಂತಹ ದೊಡ್ಡ ಪ್ರಾಣಿಗಳು ಮನುಷ್ಯನ ವೇಗಕ್ಕೆ ಬಲಿಯಾಗುತ್ತವೆ. ವೇಗವಾಗಿ ಹೋಗುವ ವಾಹನಕ್ಕೆ ಸಿಕ್ಕ ಚಿಟ್ಟೆ-ಪತಂಗ-ಹಾವು-ಕಪ್ಪೆಗಳನ್ನೆಲ್ಲಾ ಲೆಕ್ಕ ಹಾಕುವುದಕ್ಕೆ ಸಾಧ್ಯವಿಲ್ಲವಾದರೂ, ದೊಡ್ಡ ಜೀವಿಗಳ ಹರಣ ಲೆಕ್ಕಕ್ಕೆ ನಿಲುಕುತ್ತದೆ. ಪ್ರಾಣಿಗಳ ಜೀವಕ್ಕೆ ವಿಮೆ ಇರುವುದಿಲ್ಲವಾದ್ದರಿಂದ ವಿಮಾ ಕಂಪನಿಗಳು ಸೇಫ್.
ಈಗೊಂದು ಇಪ್ಪತೈದು ವರ್ಷದ ಹಿಂದಿನ ಘಟನೆ. ನನ್ನ ಸ್ನೇಹಿತರೊಬ್ಬರು ಮೈಸೂರಿನಲ್ಲಿ ಓದುತ್ತಿದ್ದರು. ಎರೆಡು-ಮೂರು ತಿಂಗಳಿಗೊಮ್ಮೆ ಮಲೆನಾಡಿನ ಕಡಗೆ ಬರುವುದು ವಾಡಿಕೆಯಾಗಿತ್ತು. ಆಗ ವಾಹನ ಸಂಚಾರ ಈಗಿನಷ್ಟು ದಟ್ಟಣೆಯಾಗಿರಲಿಲ್ಲ. ೧೦ ಗಂಟೆ ರಾತ್ರಿ ಕೆ.ಎಸ್.ಆರ್.ಟಿ.ಸಿ. ಬಸ್ಸು ಹತ್ತಿದರೆ ಬೆಳಗಿನ ಹೊತ್ತಿಗೆ ಊರು ಸೇರಬಹುದಿತ್ತು. ಬಸ್ಸಿನ ವೇಗವೇನು ಹೆಚ್ಚು ಇರಲಿಲ್ಲ. ಜಿಂಕೆಯ ಹಿಂಡೊಂದು ರಸ್ತೆ ದಾಟುತ್ತಿತ್ತು. ಅಪಘಾತವನ್ನು ತಪ್ಪಿಸಬಹುದಿತ್ತು. ಡ್ರೈವರ್‌ಗೆ ಅನಾಸಾಯವಾಗಿ ಸಿಕ್ಕಿದ ಬೇಟೆ. ಬಸ್ಸು ಸ್ವಂತದ್ದಲ್ಲ. ಸರ್ಕಾರದ್ದು, ಉದ್ಧೇಶಪೂರ್ವಕವಾಗಿ ಅಪಘಾತ ಮಾಡಿದ. ಬಹುಷ: ಕೊಂದ ಪಾಪ ತಿಂದು ಪರಿಹಾರ ಎನ್ನುವ ಮನೋಭಾವ ಡ್ರೈವರನದ್ದು, ಕಂಡಕ್ಟರ್ ಮತ್ತು ಡ್ರೈವರ್ ಸೇರಿ ಸತ್ತ ಜಿಂಕೆಯನ್ನು ಗೋಣಿಯಲ್ಲಿ ಸುತ್ತಿ ಬಸ್ಸಿನೊಳಗೆ ಹಾಕಿಕೊಂಡರು ಎಂಬ ಘಟನೆಯನ್ನು ನನ್ನ ಸ್ನೇಹಿತರು ವಿವರಿಸಿದ್ದರು. ಬಸ್ಸಿನ ನಂಬರ್ ಬರೆದು ಒಂದು ಕಂಪ್ಲೇಂಟ್ ಕೊಡಬಹುದಿತ್ತು. ಅದೇನೋ ಸಾರ್ವಜನಿಕ ನಿರ್ಲಕ್ಷ್ಯ ಎಲ್ಲರಿಗೂ, ಯಾರೂ ಏನೂ ಮಾಡಲಿಲ್ಲ. ಡ್ರೈವರ್-ಕಂಡಕ್ಟರಿಗೆ ಒಳ್ಳೆ ಬಾಡೂಟವಾಯಿತು.
ಪ್ರಪಂಚದಲ್ಲಿ ಭೇಟೆಯ ಹೊರತಾಗಿ ಅತಿಹೆಚ್ಚು ಸಂಖ್ಯೆಯಲ್ಲಿ ವನ್ಯಜೀವಿಗಳು ಸಾಯುತ್ತಿರುವುದು ರಸ್ತೆ ಅಪಘಾತಗಳಿಂದ ಎಂದು ವರದಿ ಹೇಳುತ್ತದೆ. ಹಲವು ಬಾರಿ ಉದ್ಧೇಶಪೂರ್ವಕವಾಗಿ ಮಾಡಿದ ಅಪಘಾತಗಳಲ್ಲದಿದ್ದರೂ, ನಿರ್ಲಕ್ಷ್ಯದಿಂದಾಗುವ ಅಪಘಾತಗಳೂ ವನ್ಯಪ್ರಾಣಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತಿವೆ. ಹೊಸದೊಂದು ರಸ್ತೆ ನಿರ್ಮಾಣವಾಯಿತೆಂದರೆ ಅಲ್ಲಿ ವಾಸಿಸುತ್ತಿರುವ ನೈಸರ್ಗಿಕ ಜೀವಿಗಳ ಆವಾಸಸ್ಥಾನವನ್ನು ಬೇರ್ಪಡಿಸಿದಂತೆ ಆಗುತ್ತದೆ. ಆಹಾರಕ್ಕಾಗಿ ಸದಾ ಸಂಚರಿಸುವ ಪ್ರಾಣಿಗಳಿಗೆ ತಂಗಲು ಒಂದೊಂದು ನಿರ್ದಿಷ್ಟ ತಾಣಗಳಿರುತ್ತವೆ. ಹಗಲು ಸಂಚಾರಿ ಪ್ರಾಣಿಗಳಿಗೆ ರಸ್ತೆಯಲ್ಲಿ ವಾಹನ ದಟ್ಟಣೆ ವಿಪರೀತ ತೊಂದರೆ ಮಾಡುತ್ತದೆ. ಹಗಲು ಹೊತ್ತಿನಲ್ಲಿ ರಸ್ತೆ ದಾಟಿ ಹೋಗಲಾರದ ಪ್ರಾಣಿಗಳು ಮೇವು-ನೀರು ಸಿಗದೆ ಸೊರಗುತ್ತವೆ. ಕೆಲವು ಹಸಿದು ಸತ್ತರೆ, ಇನ್ನುಳಿದವು ಕೆಲವು ಅಪಘಾತಕ್ಕೀಡಾಗುತ್ತವೆ. ಹಲವು ಅಪಘಾತದಿಂದ ಪಾರಾಗಿ ಹೋದರೂ ಅವುಗಳ ಜೀವನದ ನೆತ್ತಿಯ ಮೇಲೆ ಸಾರಿಗೆ ವಾಹನಗಳ ಕತ್ತಿ ತೂಗುತ್ತಲೇ ಇರುತ್ತದೆ. ಇನ್ನು ರಾತ್ರಿ ಸಂಚಾರಿ ಪ್ರಾಣಿಗಳ ಪಾಡು ಹೇಳ ತೀರದು. ಕಡಿದಾದ ಬೆಟ್ಟದಿಂದ ರಸ್ತೆಗೆ ನೆಗೆದು ರಸ್ತೆ ದಾಟಿ ಹೋಗಬೇಕಾದ ಪ್ರಾಣಿಗಳು ರಾತ್ರಿ ಸಾರಿಗೆ ವಾಹನಗಳಿಗೆ ಸಿಗುವ ಸಂಭವ ಹೆಚ್ಚು. ವಾಹನದ ತೀಕ್ಷ್ಣ ಬೆಳಕು ನಿಶಾಚರಿ ಪ್ರಾಣಿಗಳ ದಿಕ್ಕು ತಪ್ಪಿಸುತ್ತವೆ.
ಭಾರತದಲ್ಲಿ ಸುಮಾರು ೧೩ ಸಾವಿರ ರೈಲುಗಳು ದಿನನಿತ್ಯ ಚಲಿಸುತ್ತವೆ. ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ತಲುಪುವಾಗ ದಟ್ಟಾರಣ್ಯ ಪ್ರದೇಶಗಳನ್ನು ಹಾದು ಹೋಗಬೇಕಾಗುತ್ತದೆ. ಕೊಲ್ಕಾತ್ತದಿಂದ ೩೮೫ ಮೈಲು ದೂರದ ಮರ್‌ಘಾಟ್ ಅರಣ್ಯ ಪ್ರದೇಶದಲ್ಲಿ ಪ್ರಯಾಣಿಕ ರೈಲಿನಿಂದಾಗಿ ಮಧ್ಯವಯಸ್ಸಿನ ನಾಲ್ಕು ಆನೆಗಳು ದಾರುಣವಾಗಿ ಸತ್ತಿವೆ. ಗುರುವಾರ ಮುಂಜಾನೆ ರೈಲು ಹಳಿಯನ್ನು ದಾಟುವಾಗ ಈ ಅಪಘಾತ ಸಂಭವಿಸಿದೆ. ರೈಲು ಡ್ರೈವರನ ನಿರ್ಲಕ್ಷತೆಯೇ ಅಪಘಾತಕ್ಕೆ ಕಾರಣ ಎಂದು ಪಶ್ಚಿಮ ಬಂಗಾಳದ ಅರಣ್ಯ ಮಂತ್ರಿ ಹಿತೇನ್ ವರ್ಮನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮಾರ್ಚ್ ತಿಂಗಳಲ್ಲಿ ಬಕ್ಸಾ ಸಂರಕ್ಷಿತ ಪ್ರದೇಶದಲ್ಲೂ ಆನೆಯೊಂದು ರೈಲಿಗೆ ಸಿಕ್ಕಿ ಸತ್ತಿತ್ತು. ಪಕ್ಕದ ರಾಜ್ಯ ಒರಿಸ್ಸಾದಲ್ಲೂ ಕಳೆದ ಡಿಸೆಂಬರ್‌ನಲ್ಲಿ ರೈಲಿಗೆ ಸಿಕ್ಕು ೫ ಆನೆಗಳು ಮೃತಪಟ್ಟಿದ್ದವು. ೨೦೦೪ರಿಂದ ಒಟ್ಟು ೪೨ ಆನೆಗಳು ರೈಲಿಗೆ ಸಿಕ್ಕಿ ಸತ್ತಿವೆ ಎಂದು ಅರಣ್ಯ ಮಂತ್ರಿಗಳು ಹೇಳಿಕೆ ನೀಡಿದ್ದಾರೆ.
ಎಲ್ಲಾ ದೇಶಗಳು ವನ್ಯಜೀವಿ ಸಂರಕ್ಷಣೆಗೆ ಕಾನೂನುಗಳನ್ನು ರೂಪಿಸಿರುತ್ತವೆ ಹಾಗೆಯೇ ಕೆಲವು ನಿಯಮಗಳನ್ನು ವಾಹನ ಚಾಲಕರು ಪಾಲಿಸಬೇಕಾಗುತ್ತದೆ. ದೊಡ್ಡದಾಗಿ ಹಾಡುಹಾಕಿಕೊಂಡು, ಕಿಟಕಿ ಗಾಜುಗಳನ್ನೆಲ್ಲಾ ಬಂದ್ ಮಾಡಿಟ್ಟುಕೊಂಡು ೧೨೦-೧೪೦ರ ವೇಗದಲ್ಲಿ ವಾಹನ ಚಲಾಯಿಸುವಾಗ ವನ್ಯಜೀವಿಗಳು ಅಡ್ಡ ಬಂದರೆ, ಅಪಘಾತ ನಿಶ್ಚಿತ. ಹಾಗಾಗಿಯೇ ಚಾಲಕರು ಕೆಲವು ಕನಿಷ್ಟ ನಿಯಮಗಳನ್ನು ಸ್ವಯಂ ನಿಭಾಯಿಸಬೇಕಾಗುತ್ತದೆ. ಇಲ್ಲಿವೆ ಇಂತಹ ಟಿಪ್ಸ್.
೧. ಜಿಂಕೆ, ಕಾಡೆಮ್ಮೆ, ನರಿ ಹೀಗೆ ರಾತ್ರಿ ಸಂಚರಿಸುವ ಪ್ರಾಣಿಗಳ ಕುರಿತು ಪ್ರಾಥಮಿಕ ತಿಳುವಳಿಕೆಯನ್ನು ಹೊಂದಿರಬೇಕು. ಯಾವ ಸಮಯದಲ್ಲಾದರೂ ನಿಶಾಚರಿ ಪ್ರಾಣಿಗಳು ರಸ್ತೆಗೆದುರಾಗಿ ಬರಬಹುದು ಎಂಬ ಪ್ರಜ್ಞೆಯಿರಬೇಕು.
೨. ಹೆಚ್ಚಿನ ಬಾರಿ ಅತಿಯಾದ ವೇಗವೇ ಅಪಘಾತಕ್ಕೆ ಕಾರಣವಾಗುತ್ತದೆ. ವಾಹನವನ್ನು ತಕ್ಷಣ ನಿಯಂತ್ರಿಸುವಷ್ಟೇ ವೇಗದಲ್ಲಿ ಚಲಿಸಿರಿ.
೩. ಕಾಡುಪ್ರಾಣಿಗಳು ಸಂಚರಿಸುವ ಸ್ಥಳಗಳಲ್ಲಿ ಅರಣ್ಯ ಇಲಾಖೆಯವರು ಎಚ್ಚರಿಕೆ ಫಲಕಗಳನ್ನು ಅಳವಡಿಸುತ್ತಾರೆ. ಇದನ್ನು ಗಮನಿಸಿ.
೪. ಸಂಜೆಯ ಅಥವಾ ಕತ್ತಲಿನ ಸಮಯದಲ್ಲಿ ಚಲಿಸುವಾಗ ನಿಮ್ಮ ಗಮನ ರಸ್ತೆಯ ಇಕ್ಕೆಲಗಳಲ್ಲೂ ಇರಬೇಕು. ಏಕೆಂದರೆ ಪಾಪ ಪ್ರಾಣಿಗಳಿಗೆ ಸಾರಿಗೆ ನಿಯಮಗಳು ತಿಳಿದಿರುವುದಿಲ್ಲ.
೫. ವಾಹನದ ಬೆಳಕಿಗೆ ಒಂದೊಂದು ಪ್ರಾಣಿಗಳು ಒಂದೊಂದು ರೀತಿ ಪ್ರತಿಕ್ರಯಿಸುತ್ತವೆ. ಹೊಳೆಯುವ ಕಣ್ಣುಗಳನ್ನು ಕಂಡಾಗ ವಾಹನದ ವೇಗವನ್ನು ಕಡಿಮೆ ಮಾಡಿ, ಪ್ರಖರವಾದ ದೀಪವನ್ನು ಆರಿಸಿ ಅವುಗಳಿಗೆ ಮೊದಲು ರಸ್ತೆ ದಾಟಲು ಅನುವು ಮಾಡಿಕೊಡಿ. ಪ್ರಾಣಿಗಳು ಗಾಲಿಯಡಿಯಲ್ಲಿ ಸಿಕ್ಕಿ ಸತ್ತರೆ ಯಾರೂ ಮೊಕದ್ದಮೆ ಹೂಡುವವರಿಲ್ಲ ಎಂದು ಉಪೇಕ್ಷೆ ಮಾಡಬೇಡಿ.
೬. ಕಡಿದಾದ ರಸ್ತೆಗಳು, ತಿರುವು ರಸ್ತೆಗಳು ಮತ್ತು ಘಾಟಿ ರಸ್ತೆಗಳಲ್ಲಿ ಅಚಾನಕ್ ಆಗಿ ಪ್ರಾಣಿ ಅಡ್ಡ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ನಿಧಾನವೇ ಪ್ರಧಾನ ನಿಯಮ ಪಾಲಿಸಿ.
೭. ಸಾಮಾನ್ಯವಾಗಿ ಪ್ರಯಾಣಿಕರು ತಾವು ತಿಂದು ಉಳಿದಿದ್ದನ್ನು ವಾಹನಗಳಿಂದ ಹೊರಗೆಸೆಯುತ್ತಾರೆ. ಈ ತಿಂಡಿ ಅಥವಾ ಹಣ್ಣುಗಳು ಪ್ರಾಣಿಗಳನ್ನು ಆಕರ್ಷಿಸುತ್ತವೆ. ತಿನ್ನಲು ರಸ್ತೆಗಿಳಿಯುವ ಪ್ರಾಣಿಗಳು ವಾಹನಕ್ಕೆ ಸಿಕ್ಕಿ ಸಾಯುವ ಸಂಭವ ಹೆಚ್ಚು. ಹಾಗಾಗಿ ತಿಂಡಿ-ಹಣ್ಣುಗಳನ್ನು ಹೊರಗೆಸೆಯಬಾರದು.
೮. ಪ್ರಯಾಣಿಸುವಾಗ ಯಾವುದಾದರೂ ಪ್ರಾಣಿಗಳು ಗಾಯಗೊಂಡು ಬಿದ್ದಿದ್ದಲ್ಲಿ, ಅದಕ್ಕೆ ಸಹಾಯ ಮಾಡಲು ಸಾಧ್ಯವೇ ಯೋಚಿಸಿ. ಸಾಧ್ಯವಿದ್ದರೆ ನಿಮ್ಮ ವಾಹನದಲ್ಲೇ ಹತ್ತಿರದ ಪ್ರಾಣಿಗಳ ಆಸ್ಪತ್ರೆಗೆ ತಲುಪಿಸಿ.
೯. ಅಕಸ್ಮಾತ್ ಯಾವುದಾದರೂ ಪ್ರಾಣಿಗಳು ಸತ್ತೇ ಹೋದಲ್ಲಿ ಅದನ್ನು ಹಾಗೆಯೇ ರಸ್ತೆಯಲ್ಲೇ ಬಿಟ್ಟು ಹೋಗುವುದು ತರವಲ್ಲ. ಆ ಪ್ರಾಣಿಯ ಗುಂಪಿನ ಇತರ ಪ್ರಾಣಿಗಳು ರಸ್ತೆಗೆ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ರಸ್ತೆಯಿಂದ ದೂರ ತಳ್ಳಿ.
೧೦. ನಾವು ಅಂದರೆ ಮನುಷ್ಯರು ಹಗಲು ಸಂಚಾರಿಗಳು. ನಿಶಾಚರಿ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಆದ್ದರಿಂದ ರಾತ್ರಿ ಪ್ರಯಾಣದಿಂದ ದೂರವಿರಿ.
ಪ್ರಾಣಿಗಳ ಸಂಚಾರಕ್ಕೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ ಎಂಬುದನ್ನು ನಂಬುವುದು ಸ್ವಲ್ಪ ಕಷ್ಟವೆನಿಸುತ್ತದೆ. ಆದರೆ ಇದನ್ನು ಮಾಡಿ ತೋರಿದ ದೇಶಗಳಲ್ಲಿ ಮಂಚೂಣಿಯಲ್ಲಿರುವುದು ನೆದರ್‌ಲ್ಯಾಂಡ್. ನೆದರ್‌ಲ್ಯಾಂಡ್‌ನ ಮಾದರಿಯನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಿದ್ದು ಜರ್ಮನಿ. ಜರ್ಮನಿಯ ಅರಣ್ಯ ಮಂತ್ರಿಯ ಹೆಸರು ಗೆರಾರ್ಡ್ ಕ್ಲೆಸೆನ್. ವನ್ಯಜೀವಿಗಳಿಗಾಗಿಯೇ ೬೦ ಲಕ್ಷ ಡಾಲರ್ ಖರ್ಚು ಮಾಡಿ ಒಂದು ಸೇತುವೆಯನ್ನು ಜರ್ಮನಿಯ ಶೆಂಬರ್ಕ್ ಎಂಬ ಸ್ಥಳದಲ್ಲಿ ನಿರ್ಮಿಸಿದ್ದಾರೆ. ಮನುಷ್ಯರಿಗಾಗಿ ನಿರ್ಮಿಸಿದ ಸೇತುವೆಯ ಮೇಲೆ ಪ್ರಾಣಿಗಳು ಹೋದರೆ ಅಪಘಾತ ಕಟ್ಟಿಟ್ಟ ಬುತ್ತಿ. ಹಾಗಾಗಿಯೇ ಪ್ರಾಣಿಗಳಿಗೆ ಅನುಕೂಲವಾಗುವಂತೆ ಸೇತುವೆಯನ್ನು ನಿರ್ಮಿಸಿ ಬಿಟ್ಟಿದ್ದಾರೆ. ಅಲ್ಲಿ ಮನುಷ್ಯರು ಓಡಾಡುವಂತಿಲ್ಲ. ಕುತೂಹಲಕ್ಕಾಗಿ ನೋಡಲು ಹೋದರೂ ೫೦ ಡಾಲರ್ ದಂಡ ತೆರಬೇಕು. ಹಾಗೆ ವ್ಯವಸ್ಥೆ ಮಾಡಿಟ್ಟಿದ್ದಾರೆ. ಸೇತುವೆ ನಿರ್ಮಿಸಿ ಬರೀ ೩ ದಿನದಲ್ಲಿ ಆ ಸೇತುವೆ ಮೇಲೆ ಜಿಂಕೆ-ಕರಡಿಗಳು ಓಡಾಡುವುದನ್ನು ದಾಖಲು ಮಾಡಿಟ್ಟುಕೊಂಡಿದ್ದಾರೆ. ಮೊಲದಂತಹ ಚಿಕ್ಕ-ಪ್ರಾಣಿಗಳಿಗೆ ಅನುಕೂಲವಾಗುವಂತೆ ಪುಟ್ಟ ಪೊದೆಗಳನ್ನು ನಿರ್ಮಾಣ ಮಾಡಿದ್ದಾರೆ. ಪಕ್ಷಿಗಳಿಗೆ ಅನುಕೂಲವಾಗುವಂತೆ ಹೂ-ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಯಾವುದೇ ಭಯವಿಲ್ಲದೆ ಅಲ್ಲಿ ಕಾಡುಪ್ರಾಣಿಗಳು ಓಡಾಡಿಕೊಂಡಿವೆ. ಮುಂದಿನ ಹತ್ತು ವರ್ಷಗಳಲ್ಲಿ ಇನ್ನೂ ಇಂತಹ ೧೦೦ ಸೇತುವೆಗಳನ್ನು ನಿರ್ಮಿಸಲು ಲಕ್ಷಾಂತರ ಡಾಲರ್ ಹಣವನ್ನು ಎತ್ತಿಟ್ಟಿದ್ದಾರೆ. ಪ್ರಾಣಿಗಳಿಗೂ ನಿರ್ಭಯವಾಗಿ ಬದುಕುವ ಹಕ್ಕು ಇದೆ ಎಂಬುದನ್ನು ಕಾರ್ಯತ: ಮಾಡಿ ತೋರಿದ್ದಾರೆ.
*****
ಗಿಡ ಮರಗಳಿಂದ ಆವೃತವಾಗಿರುವ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು ಬೆಳಿಗ್ಗೆ ನಡೆದಾಡುವವರಿಗೆ ಹೇಳಿ ಮಾಡಿಸಿದ ಜಾಗ. ಬಹಳಷ್ಟು ಜನರು ಬಳಸುತ್ತಲೂ ಇರುತ್ತಾರೆ. ಈ ದಿನಗಳಲ್ಲಿ , ಕಾಲೇಜಿನ ಸುತ್ತಾ ನಡೆದಾಡಲು ಜನರು ಉಪಯೋಗಿಸುತ್ತಿರುವ ರಸ್ತೆಯಲ್ಲಿ ಗಜ ಗಾತ್ರದ ನೂರಾರು ಬಸವನ ಹುಳುಗಳು (ಯಾರೋ ಇದನ್ನು ಆಫ್ರಿಕನ್ ಸಂಜಾತ ಎಂದರು?) ರಸ್ತೆ ದಾಟಲು ಹೋಗಿ ಜನರ ಕಾಲುಗಳಡಿಯಲ್ಲಿ ಸಿಕ್ಕಿ ನುಚ್ಚು ನೂರಾಗಿರುವುದು ಕಂಡು ಬೇಜಾರಾಗುತ್ತದೆ. ಕೆಲವರು ಇದೊಂದು pest ಎಂತಲೂ, ಕೇವಲ ಹುಲಿ, ನವಿಲು ಇತ್ಯಾದಿ ಮಾತ್ರ ನಿಜವಾದ ಸಂರಕ್ಷಣೆ ಎಂತಲೂ ಹೇಳುತ್ತಿರುತ್ತಾರೆ!