ವಂಶೋದ್ಧಾರ !: ಅಶ್ಫಾಕ್ ಪೀರಜಾದೆ

ಪಾತರಗಿತ್ತಿಯಂತಾ ಚಂಚಲ ಚಲ್ವಿ ಈ ಪಾರಿ!
ಕಡ್ಡೀಲೇ ಬರದಾಂಗ ಬಳಕು ಶರೀರದ ವೈಯ್ಯಾರಿ !!
ನಡದರ ನಾಟ್ಯ ನವಿಲಿನ್ಯಾಂಗ„ !!
ಉಲಿದರ ಕೋಗಿಲೆ ಹಾಡಿದಾಂಗ„ !!!

ಹಡದವರ ಮುದ್ದಿನ ಮಗಳಾಗಿ ಆಡಕೊಂತ ಮಾಡಕೊಂತ, ಹಂಗ„ ಚಾರುಚೂರು ಸಾಲೀನೂ ಕಲಕೊಂತ ಬೆಳೆದ ಹುಡ್ಗಿ ಒಂದಿವ್ಸ ದೊಡ್ಡಾಕಿ ಆದ ಸುದ್ದಿ ಮಲೇರಿಯಾ ಜ್ವರದಾಂಗ ಸುತ್ತ ಹಳ್ಳಿಗೆಲ್ಲ ಹರಡಿ, ಮೊದಲ„ ಅವಳ ರೂಪಲಾವಣ್ಯ ಮನಸಿನ್ಯಾಗ ತುಂಬಕೊಂಡ ಕನಸ ಕಾಣಾಕ ಹತ್ತಿದ ಪಡ್ಡೆ ಹುಡಗರ ನಿದ್ದಿಗೆಡಸಿತ್ತ. ಥ್ವಾಡೆ ಮಂದಿಗೆ ಈ ವಿಶ್ಯಾ ಮೊಜಿನ ವಿಸ್ಯಾ ಆದರ, ಹಡ್ದ ಅವ್ವ ಅಪ್ಪಗ ಚಿಂತಿ ವಿಸ್ಯಾ ಆಗಿತ್ತ. ಬೆಳ್ದ ಮಗಳಂದ್ರ ಹಡದಾವ್ರಗ ಗಂಟಲದಾಗಿನ ಸುಡು ಸುಡು ತುಪ್ಪ ಇದ್ದಾಂಗ, ಉಗಳಾಕೂ ಬರಾಂಗಿಲ್ಲ ಇತ್ತ ನುಂಗಾಕೂ ಬರಾಂಗಿಲ್ಲ. ಮೊದಲ„ ಪಾರಿ ಸಾಲಿ ಬಿಡಸಬೇಕ ಅಂತಾ ವಿಚಾರ ಬಂದದ್ದನ ತಡ ಶಂಕ್ರೆಪ್ಪ-
“ನೀ ನಾಳಿಂದ ಸಾಲಿಗ ಹೋಗಾಂಗಿಲ್ಲ” ಅಂತಾ ಆದೇಸ ಮಾಡೇ ಬಿಟ್ಟಾ.

ಹರೆಕ ಬಂದ ಹುಡ್ಗಿ ಸಾಲಿಗ„ ಹ್ವಾದಾಗ ಏನಾದ್ರ ಎಡವಟ್ಟ ಮಾಡ್ಕೊಂಡ ಬಿಟ್ರ ಊರಾಗ ಮುಕಾ ಎತ್ತಿ ತಿರಗದಾಂಗ ಆಗತೈತಿ, ಅದಕ ಗಂಡನ ವಿಚಾರ ಬರೋಬರಿ ಐತಿ ಅನಸತೈತಿ. ಇಂಥಾದ್ರಾಗ ಪಾರಿ ದೊಡ್ಡಾಕಿ ಆದ ಸುದ್ದಿ ಬಾಯಿಂದ ಬಾಯಿಗೆ, ಊರಿಂದ ಊರಿಗೆ ಹಬ್ಬಿ ಹೆಣ್ಣ ಕೇಳಾವ್ರ ದಂಡ ಶಂಕ್ರ್ಯಾನ ಮನಿ ಮುಂದ ಸರತಿ ಸಾಲ ನಿಲ್ಲತೈತಿ. ಪಾರಿ ರೂಪಾನೂ ಹಂತಾದನ„, ಅವ್ಳ ರೂಪಕ ಮರಳಾದ ಹಡುಗರ ಹೃದಯ ಅವಳನ್ನ ಪಡ್ಯಾಕ ಒದ್ದಾಡಕ ಹತ್ತಿ , ಅವಳ್ನ ಮದ್ವಿ ಆಗಾಕ ತುದಿಗಾಲ ಮ್ಯಾಗ ನಿಂತದ್ರ. ಹರೆಕ ಕಾಲಿಟ್ಟ ಪಾರಿ ಬರಬರ್ತಾ ಇನ್ನಷ್ಟ ಸೌಂದರ್ಯ ತುಂಬಕೊಂಡ ರಸಪುರಿ ಮಾವಿನ ಹಣ್ಣಿನಾಂಗ ಆಗಾಕತ್ತಿದ್ಳ. ಮಗ್ಳ ಹಿಂಗ ಕಣ್ಣ ಕುರೈಸುವಾಂಗ ಬೆಳದ ನಿಂತ ಚಿಂತಿ ಶಂಕ್ರ್ಯಾ ಮತ್ತ ಶಾರಿಗ ಕಾಡಾಕ ಹತ್ತಿದ್ರ, ಹಿಂತಾದ್ರಾಗ ಸಂಗವ್ವಾಯಿ ದುತ್ತಂತ್ ಪ್ರತ್ಯಕ್ಷ ಆಗ್ಯಾಳ. ಸಂಗವ್ವಾಯಿ ಬ್ಯಾರೆದಾಕಿಯೇನ ಅಲ್ಲ, ಸ್ವಂತ ಶಾರಿಯ ಹಡದವ್ವ ಅಂದ್ರ ಪಾರಿಯ ಆಯೀ, ಶಂಕ್ರ್ಯಾನ ಅತ್ತಿ. ಶಾರಿ ಎದುರಿಗ ಕುಂತ ಸಂಗವ್ವ ಮುದಕಿ ಕಣ್ಣಾಗ ನೀರ ತಗ್ದ ನಡಗು ಧನ್ಯಾಗ ಸಣ್ಣಗ„ ರಾಗಾ ತಗ್ದಳ.

“ ಯಾಕವ್ವ ಶಾರವ್ವಾ?, ನಿನ್ನ ತವರ ಮನಿ ಒಂದೈತಿ, ಹಡ್ದ ತಾಯಿ ಒಬ್ಬಾಕಿ ಅದಾಳ ಅಂತಾ ಮರತಿಯೇನ„?, ನನ್ನ ಮೊಮ್ಮಗಳ ದೊಡ್ಡಾಕಿ ಆದದ್ದ ನನಗ ಒಂದೀಟರ„ ತಿಳ್ಸಬಾರದೇನ„? ನಿನ್ನ ತವರ ಮನಿಗ ಈ ಸುದ್ದಿ ತಿಳ್ಸಬೇಕಂತ ನಿನ್ಗ ಅನಸಲಿಲ್ಲೇನ„?, ನಿನ್ನ ಬೆನ್ನಿಗ ಬಿದ್ದಾಂವ ಒಬ್ಬ ಅದಾನ ಅಂತಾ ನಿನಗ ಮರತ„ ಹೋತೇನ„?” ಹಣಮಪ್ಪನ ಬಾಲದಾಂಗ ಉದ್ದೂದ್ದ ಬೆಳಕೊಂತ ಹೊಂಟಿದ್ದ ಸಂಗವ್ವಾಯಿ ಪ್ರಶ್ನಗಳಿಂದ ತತ್ತರಿಸಿದ ಶಾರಿ, ಎಷ್ಟ„ ಆಗಲಿ ತಾಯಿಗರಳ ಅನ್ನು ಕಾರಣಕ್ಕ ಸುಳ್ಳ ಸಮಜಾಯಿಷಿ ಹೇಳಾಕ “ ಇಲ್ವಾ ಹಂಗೇನಿಲ್ಲ …” ಅಂತಾ ತಗ್ದ ಬಾಯಿ ಶಂಕ್ರ್ಯಾನ ಅಂಜಿಕೇಲೆ ಹಂಗ ಮುಚ್ಚ್ಯಾಳ. ಮನಿ ಮೂಲ್ಯಾಗ ಮಲ್ಕೊಂಡ ಗಾಡ ನಿದ್ದ್ಯಾಗ ಅದಾನ ಅನ್ನುವಾಂಗ ನಾಟ್ಕಾ ಮಾಡಾಕ ಹತ್ತಿದ ಶಂಕ್ರ್ಯಾ ತಾಯಿ – ಮಗಳ ಮಾತಕತಿ ಮೈಯಲ್ಲ ಕಿವಿಮಾಡಿ ಕೇಳಾಕ ಹತ್ತಿದ್ದ. ಶಾರಿಯ ಒಂದ ಒಂದ ಮಾತ ಆಯಾ ತಪ್ಪಿ ತವರ ಮನಿಕಡಿ ಜಾರಿತಂದ್ರ ಶಂಕ್ರ್ಯಾ ಕೆರಳಿ ಕೆಂಡ ಆಗುದಂತು ಗ್ಯಾರಂಟಿ ಇತ್ತ, ಶಾರಿ ಏನಾರ ತಾಯಿ ಪರ ಒಂದ ಮಾತ ಹೇಳಿದ್ರ ಅವಳ ಹೆಡಮುರ್ಗಿ ಕಟ್ಟುದ ನಕ್ಕಿ ಅಂತಾ ಶಾರಿಗ ಗೊತ್ತಿದ್ದ ವಿಚಾರ ಆಗಿತ್ತ. ಶಾರಿ ತನಗ ಸಮಾಧಾನ ಮಾಡಾಕಂತ ತಗ್ದ ಬಾಯಿ ಹಂಗ ಮುಚ್ಚಿದ್ದರ ಹಿಂದಿನ ಕಾರಣ ಸಂಗವ್ವಾಯಿ ಆಗ ಗ್ರಹಿಸಿ ಆಗಿತ್ತ.

“ಅಂದ್ರ ನಿನ್ನ ಗಂಡನ ಸಿಟ್ಟ ಇನ್ನಾ ಆರಿಲ್ಲ ಅನ್ನ!?, ಏನ್ ಮಾಡುದ„ ಆವಾಗಿನ ಪರಸ್ಥಿತಿನ ಹಂಗಿತ್ತ. ಆಗಿದ್ದ ಆಗಿ ಹೋತ, ಅದ್ನಾ ಹಿಡ್ಕೊಂಡ ಕುಂತ್ರ ಏನ್ ಬರತೈತಿ. ಹಿತ್ತಲದಾಗಿಂದ ತಗ್ದ ಅಂಗಳಾಗ ಅತ್ತಾಂಗ. ನಾವೆಲ್ಲಾ ಅದ್ನೆಲ್ಲ ಮರತ್ವಿ ಅಂತನ„ ನಿಮ್ಮ ಮನಿ ಬಾಗಲಕ ಬಂದ್ವಿ. ಇನ್ನೂ ಹಂಗ ಶಟ್ಕೊಂಡ ಕುಂತ್ರ ಹ್ಯಾಂಗ ನಡೀಬೇಕ?. ನೀವಿಬ್ಬರೂ ಓಡಿ ಹೋಗಿ ಮದ್ವಿ ಮಾಡಕೊಂಡ್ರ„ ನಾವೇನರ ಅಂದ್ವಿಯೇನ„?. ಸಂಗವ್ವಳ ಮಾತ ಶಂಕ್ರ್ಯಾನ ಕಡಿ ಹೊರಳಿದ್ದ ನೋಡಿ ಪಾರಿ-
“ ಆ ಮ್ಯಾಗ ಕೇಳಲ್ಲಿಲ್ಲ ಅಂತನ ಸಿಟ್ಟಂವಗ. ನಾವ್ ಮನಿ ಬಿಟ್ಟ ಬಂದ ಇಷ್ಟ ದಿನಾ ಆದರೂ, ಒಂದಿನಾನೂ ಬಂದ ನೀವ್ ಅದಿರೋ ಸತ್ತಿರೋ ಅಂತಕೇಳಲಿಲ್ಲ. ಬರಿಗಾಲಾಗ ಬರಿಗೈಲೆ ಒಂದು ಪೈಸೆನೂ ಇಲ್ಲದ„ ಬಂದ ಯಾವದೋ ಗುಡ್ಯಾಗ ಮದ್ವಿ ಮಾಡ್ಕೊಂಡ ಸಂಸಾರ ಹೂಡಿದರ„ ನಿಮಗೇನರಬೇಕೇನ„ ಅಂತಾ ಒಂದಿನಾನೂ ಕೇಳಲಿಲ್ಲ. ದೇವ್ರಂಥ ನನ್ನ ಗಂಡ ಎಂಗೋ ಮಾಡಿ ಹಗಲ ರಾತ್ರಿ ದುಡ್ದ ನಮ್ಗ ಜ್ವಾಪಾನ ಮಾಡಿದ. ಅಲ್ಲಿಂದ ಬಂದ ಮ್ಯಾಗ ನಾ ಮನಸಿಗಿ ಹಚ್ಕೊಂಡ ಹಾಸಿಗಿ ಹಿಡದಾಕಿ ಎರಡ್ಮೂರ ವರಸದ ಮ್ಯಾಗ ಎದ್ದೀನಿ. ಅಂಥಾದ್ರಾಗ ಹೆರಗಿ ಬ್ಯಾರಿ ಆಗಿ ಸಾಯಾಕಿ, ಉಳದಿದ್ದನ ಪುಣ್ಯಾ. ಆ ಪುಣ್ಯಾ ಎಲ್ಲ ನನ್ನ ಗಂಡಗ ಸೇರಬೇಕ. ನನಗ, ನನ್ನ ಮಗಳಗ ತನ್ನ ಪಿರುತಿಯಲ್ಲ ಧಾರೆ ಎರ್ದ ಕಾಪಾಡಿದ ಪುಣ್ಯವಂತ ಅಂವಾ. ಇಸ್ಟೇಲ್ಲ ನಡದರೂ ಒಂದಿನಾನೂ ಬಂದ ಕೇಳಲಿಲ್ಲ ಅನ್ನು ಸಿಟ್ಟ ಮತ್ತೇನೈತಿ ಇದ್ರಾಗ”

“ಹೌದವ್ವಾ ಹೌದ ಇದರಾಗ ತಪ್ಪಲ್ಲ ನಮ್ದ„ ಐತಿ, ನಿಮದೇನ ಇಲ್ಲ ನೊಡ್”
“ಹುಂ ಮತ್ತ ಇದರಾಗ ನಮ್ದೇನ ತಪ್ಪೈತಿ? ನಮ್ಮ ಪಿರುತಿನ ಒಪ್ಪಕೊಂಡ ನೀವಾ ನಂ ಮದ್ವೀ ಮಾಡಿದ್ರ ನಾವ್ಯಾಕ ಊರ ಬಿಟ್ಟ ಓಡಿ ಬರತ್ತಿದ್ವಿ? ನಾನೇನ ಬ್ಯಾರೆ ಕುಲದಾವಂಗ ಮದ್ವಿ ಆಗಾಕ ಹತ್ತಿದ್ನೇನ್?. ಶಂಕ್ರ್ಯಾ ನಿನ್ನ ಒಡಹುಟ್ಟಿದಾಂವ ಹೌದಲ್ಲ?.ಅಂವಾ ಬಡತನದಾಗ ಹುಟ್ಟಿದ್ರ ಅತ್ರಾಗ ಅವಂದೇನ ತಪ್ಪೈತಿ? ನಮ್ಮನ್ಯಾಗ ಕೂಲಿ ಮಾಡ್ಕೊಂಡ ಇದ್ದಾಂವ, ಮಾವಾಂ ಅನ್ನು ಕಾರಣಕ್ಕೆ ಸಲಿಗಿ ಬೆಳ್ದ ನಮ್ಮ ನಡಕ ಪಿರುತಿ ಹುಟ್ಟಿದರ ನಾಯೇನ ಮಾಡ್ಲಿ? ಅಂವಾ ಕರ್ಕೊಂಡ ಹೋಗೂ ಮೊದ್ಲ ನಿಮ್ಮ ಕಾಲ್ಗ ಬಿದ್ದ ನಮ್ಮದವೀ ಮಾಡ್ರಿ ಅಂತ್ ಬೇಡ್ಕೊಂಡ್ನೋ ಇಲ್ಲೋ? ನೀವಾ ಆಗುದಿಲ್ಲ ಅಂತ ಕಡ್ಡಿ ಮುರದಾಂಗ ಹೇಳಿದ ಮ್ಯಾಗನ ಓಡಿ ಬಂದ್ವಿ ಅಲ್ಲೋ? ಸಿಟ್ಟ ಕರಗಿದ ಮ್ಯಾಗ ಹುಡ್ಕೊಂಡ ಬರ್ತಾರ ಅಂದ್ರ, ಒಂದಿನಾರ ನಮ್ ನೆನಪ ಬರಲಿಲ್ಲೇನ„?….”
“ಎಲ್ಲಾ ತಪ್ಪೂ ನಂದ„ ಅನ್ನುವಾಂಗ ಹೇಳಾಕ ಅತ್ತಿಯಲ್ಲ. ಶಂಕ್ರ್ಯಾ ಯಾಂವ ಬ್ಯಾರೆದಾಂವೇನ? ನನ್ನ ತವರ ಉದ್ದಾರ ಮಾಡುದ ನಂಗೇನ ಬ್ಯಾಡಾಗಿತ್ತೇನ„?” ನಿಮ್ಮಪ್ಪನ ಸಿಟ್ಟ ನಿನ್ಗ ಗೊತೈತ್ತಿಲ್ಲೋ? ಅಂವಾ ಒಂದ„ ಮಾತಿನ ಮನಶ್ಯಾ. ಅವ್ನ ಮಾತಿಗೆ ಅಡ್ಡ ಬಂದವರಗ ಅಂವಾ ಹೆಡಮುರ್ಗಿ ಕಟ್ಟಾಕನೂ ತಯಾರ. ಅಷ್ಟ ಹಟಾ ಛಲೂ ಅಲ್ಲಂತ ಹೇಳಾಕ ಹೋದಾಗ ಎರಡ್ಮೂರ ಸಲ ಸಾಯುವಾಂಗ ಬಡ್ತಾ ತಿಂದನ„. ನಿಮ್ಮಪ್ಪನ ಆಸ್ತಿಯಲ್ಲ ಬಳಕೊಂಡ ಹೋಗಿ ನನ್ನ ತವರ ತುಂಬಾಕ ನಾನ„ ಈ ಪಿತೂರಿ ಮಾಡೀನಿ ಅಂತ ಅಪವಾದ ಬಂದ ಮ್ಯಾಗ ನಾ ಸುಮ್ಕ ಆಗೀನ”

“ನಮ್ಮಪ್ಪಗರ ತಿಳಿಬೇಕೋ ಬ್ಯಾಡೋ? ನಾ ಅಂತಾದೇನ ದೊಡ್ಡ ತಪ್ಪ ಮಾಡೀನಿ? ಅಂವಾ ಬಡ್ತನದಾಗನ ಹುಟ್ಟಿದ ನಿನ್ನ ಅಂದ ಚೆಂದಕ, ರೂಪಕ ಮರಳಾಗಿ ನಿನ್ನ ಮದ್ವಿ ಆದ್ನೋ ಇಲ್ಲೋ? ಹಂಗ„ ನಾ ನನ್ನ ಗಂಡನ ಗುಣಾ ನೋಡಿ ಮದ್ವಿ ಆದ್ರ ತಪ್ಪೇನೈತಿ?’
“ಗ್ವಾಡಿ ತೊಳಕೋತ ಹ್ವಾದಾಂಗ ರಾಡಿ ಹೊಂಡುದನ„, ನಾ ಇಟ್ಟೇಲ್ಲ„ ಹೇಳೀನ, ಇನ್ಮ್ಯಾಕ ನಿಮ್ಮ ಮರ್ಜಿ. ಇದ ಒಂದ ನೆವದಾಗ ಒಂದಾಗೂದ ಛಲು. ನಿನಗ ನಿನ್ನ ತವರ ಬೇಕಂದ್ರ ನಿನ್ನ ಗಂಡಗ„ ತಿಳಿಹೇಳ. ಇಲಂದ್ರ ಬಿಡ್. ನಾವ್ ಯ್ಯಾರರ ಸತ್ತರ ಮಣ್ಣಗೂ ಬರಬ್ಯಾಡ. ಆತೋ ಇಲ್ಲೋ?. ನಿನ್ನ ಗಂಡಾ ಹುಂ ಅಂದ್ರ ನಾಳಿಂದ ನಾಳೇನ„ ಮದ್ವಿ ಅಂತ ತಿಳಕೋ. ನಾ ಹೇಳುದೆಲ್ಲ ಮುಗೀತ ನೋಡ, ಮುಂದ ನಿಮ್ಗ ಬಿಟ್ಟಿದೈತಿ. ಇಬ್ಬರೂ ವಿಚಾರ ಮಾಡಿ ಏನೆಂಬುದ ಹೇಳಕಳಸ್ರಿದ್ರ ಮುಂದಿನ ಹಾದಿ..” ಅಂತಾ ಸೀರಿ ಝಾಡಿಸಿಕೊಂಡು ಹೊಂಟ ನಿಂತ ತಾಯಿನ ತಡಿಬೇಕಂತ ಮನಸ್ಸ ಬಂದರೂ ಶಂಕ್ರ್ಯಾನ ಅಂಜಿಕಿಲೇ ಸುಮ್ಗಾದಳು.

-2-

ಅದ ರಾತ್ರಿ ಹಾಸಗ್ಯಾಗ ಕುಂತ ಶಂಕ್ರ್ಯಾನ ಮುಂದ ಶಾರಿ ಸಣ್ಣಗ ರಾಗ ತಗ್ದ-
“ಅವ್ವಾ ಹೇಳಿದ್ರಾಗ ಒಂದಿಟರ„ ನ್ಯಾಯಾ ಐತಿ ಅನಸ್ತೈತಿ!?”
“ಹೌದ ನಂಗೂ ಹಂಗ„ ಅನ್ಸತೈತಿ ಆದರ ನಿಮ್ಮಪ್ಪನ ಕೆಟ್ಟ ಹಠದಿಂದ ಇದೆಲ್ಲ ಆತ. ಆದರೇನ ಬಂತ ನಾವ್ ಇಟ್ಟ ದಿನಾ ಉಪವಾಸ ವನವಾಸ ಅನಭವಿಸಿದ್ದ ಮರ್ಯಾಕ ಆಗತೈತೇನ„”
“ಎಸ್ಟ„ ಆಗ್ಲಿ ಅವ್ಳ ನನ್ನವ್ವಾ, ನಿನ್ಗ ಅಕ್ಕ. ಈ ರಕ್ತ ಸಂಬಂದ ಎಂದರ ಸುಳ್ಳಾಗತೈತೇನ? ನಮ್ಮಪ್ಪನ ಕೆಟ್ಟ ಹಟದಿಂದ ಆಗುದ ಆಗೈತಿ.ಬರೀ ನಮ್ದ ಹಟಾ ಸಾದಸ್ಕೋತ ಕುಂಡ್ರು ಕಾಲಲ್ಲ, ನಮ್ಗ ಈಗ ನಮ್ಮ ಮಗಳ ಭವಿಷ್ಯಾ ಮುಖ್ಯ ಐತಿ, ನನಗ ಸಿಗದ ನನ್ನ ತವರ ಮನಿ ಹಕ್ಕ ನಮ್ಮ ಮಗಳ ಅನುಭವಿಸುದ್ರಾಗ ತಪ್ಪೈನೈತಿ?”
“ಅದೂ ಅಸ್ಟ„ ಖರೇ ಐತಿ. ನಮಗಂತೂ ನಿಮ್ಮಪ್ಪನ ಆಸ್ತಿ ಅನುಭವಸಾಕ ಆಗಲಿಲ್ಲ. ನಮ್ಮ ಮಗಳರ„ ಆಸುಖಾ ಉಣ್ಣಾಕಬೇಕ” ಅಂದಾಗ ಶಾರಿ ಕಣ್ಮುಂದ ತವರಿನ ಸಂಭ್ರಮ. ಮಗಳ ಮದ್ವಿ, ದಿಬ್ಬಣ, ವಾಲಗ… ಎಲ್ಲ ಕನಸಿಗೆ ನುಗ್ಗಿ ಬಂದಾಂಗ ಆತು.

“ಆದ್ರೂ ನನಗ ಅಂಜಿಕಿ ಆಗಾಕತೈತಿ?” ಮತ್ತ ಹಿಂದೇಟ ಹಾಕಿದ ಶಂಕ್ರ್ಯಾ.
“ಆದ್ರ ಗೀದ್ರ ಎನ್ ಇಲ್ಲ, ನಮ್ಮ ಪಾಲಿನ ಸುಖ ನನ್ನ ಮಗಳ ಅನುಭವಿಸಾಕನ„ ಬೇಕ, ಸುಮ್ನ ನಮ್ಮ ಅಪ್ಪನ ಹಾಂಗ ಹಠಾ ಹಿಡದ ಮಗಳ ಜೀವನಾ ಬರಬಾದ ಮಾಡಬ್ಯಾಡ. ಹಿಂಗ„ ನಮ್ಮಪ್ಪ ಎಲ್ಲಾ ಕಡಿನೂ ಬೆಂಕಿ ಹಚ್ಚಿ ಮಸಣಾ ಸೇರಿದ ಈಗ ಅಂವಗ ಯಾರ್ ಚಲೂ ಅಂತಾರ„?. ನೀನು ಅವನಹಂಗ„ ಆಗಬೇಕಂತಿಯೇನ„.
“…………” ಶಂಕ್ರ್ಯಾನ ಮೌನ ಸಮ್ಮತಿ ಸೂಚಕವಾಗಿತ್ತು.
ಇದಾದ ನಂತರ ಶಾರಿ ಮನಸ ಹಗರ ಆದಾಂಗ ಆಗಿ, ಹಾಯಾಗಿ ನಿದ್ರಿ ಹ್ವಾದಳು.

-3-

ಈ ನಡು ಪಾರಿ ತೀರ ಮೌನ ವಹಿಸಿದ್ದು ಯಾರ ಗಮನಕ್ಕೂ ಬರಲಿಲ್ಲ. ಸಾಲಿ ಕಲ್ತಕೊಂಡ ಆಟ ಆಡಕೊಂಡ ಇರಬೇಕಾದ ವಯಸದಾಗ ಮದ್ವಿ ಅನ್ನು ವಿಚಾರ ಅವಳ ಎದ್ಯಾಗ ಬಿತ್ತಿದ್ದು, ಅವಳಿಗೆ ಮದ್ವಿ ಮನಸಿಲ್ಲದಿದ್ರೂ ಬಡತನ ಅನುಭವಿಸಿ ಬೆಳದ ಜೀವಕ ಗಂಡನ ಮನಿ ಶ್ರೀಮಂತಿಕಿ, ವೈಭೋಗ, ತಾನು ಮಹಾರಾಣಿ ಹಾಂಗ ಮೆರೆಬಹುದೆನ್ನು ಕನಸ ಅವಳ ಹೃದಯದಾಗ ಸದ್ದಿಲ್ಲದ ಸೂಪ್ತವಾಗಿ ಅರಳಿತ್ತ. ಒಡ್ದ ಹಾಲಿನಂತಾದ ಮನಸ್ಸಗಳು, ಸಂಬಂಧಗಳು ತನ್ನ ಮದ್ವಿ ನೆವದಿಂದರ ಒಂದಾಗಿ ಹೆಪ್ಪಿಟ ಮೊಸರಿನ್ಯಾಂಗ ಸವಿ ಆದ್ರ ಸಾಕ ಅಂದಳು.

ಹೆಣ್ಣಿನ ಮನಿ ಒಪ್ಪಗಿ ಗಂಡಿನ ಮನಿಗಿ ತಲಪ್ಪಿದ„ ತಡ, ಮದ್ವಿ ತಯಾರಿ ಶುರು ಮಾಡಿಯೇ ಬಿಟ್ಟರು. ಎರಡೂ ಮನ್ಯಾಗ ಮದ್ವಿ ಸಂಭ್ರಮ. ಅತ್ತ ಸಂಗವ್ವಾಯಿ ಎಲ್ಲಾ ಜವಾಬ್ದಾರಿನೂ ತಾನ ಹೊತ್ತಕೊಂಡ ಯಾವದಕ್ಕೂ ಕಡಿಮಿ ಇಲ್ಲದಾಂಗ ತಯಾರಿ ನಡಸಿದಳು. ಅರವಿ ಹಂಚಡಿ, ಬಂಗಾರ ಗಿಂಗಾರ, ದೊಡ್ಡದಾದ ಸುಂದರವಾದ ಹಂದರ, ಊರಿಗೆಲ್ಲ ಭರ್ಜರಿ ಊಟ ಊರ ಮಂದಿಯಲ್ಲ ಹೌದ ಅನ್ನುವಾಂಗ ಧಾಂ ಧೂಂ ಅಂತಾ ಮುಗಿಸಿ ನಿಟ್ಟುಸಿರು ಬಿಟ್ಟಳು. ಪಾರಿ ಆನಂದ ಆತಂಕ ನಡು ಗಂಡನ ವiನ್ಯಾಗ ಪ್ರವೇಶ ಮಾಡಿದರ ಗಂಡಾ ಅನ್ನು ಪ್ರಾಣಿ ತಮ್ಮಾಂವ ಅನ್ನುದ ಬಟ್ರ ಗುಣ ಸ್ವಭಾವದಿಂದ ತೀರ ಅಪರಿಚಿತ. ಗಂಡ ಹೆಂಗದಾನ ಅನ್ನು ಚಿಂತಿ ಒಂದ ಬಿಟ್ರ ತನ್ನ ಮದ್ವಿ ಮುಖಾಂತರ ಎಲ್ಲಾರೂ ಒಂದಾದ ಸಂತೋಸ ಒಂದ ಕಡೆ ಆದರ, ಇನ್ನೊಂದ ಕಡೆ ಇದ್ದ ಗಂಡ,ಅತ್ತಿ ,ಹೊಲಾ ಮನಿ, ತನ್ನ ಬಂಧು ಬಳಗ, ತನ್ನ ಊರು ಅನ್ನುವ ಅಕ್ಕರೆ ಅಭಿಮಾನದಿಂದ ತನ್ನ ಆ ಮನೆ ಸೇವೆ ಶುರು ಮಾಡಿದಳು.

ತನ್ನ ಮನ್ಯಾಗ ಆದಸ್ಟ ಜಲ್ದಿ ದೀಪ ಬೆಳಗಬೇಕ ವಂಸಾ… ಮುಂದವರಿಬೇಕ…ವಂಸೋದ್ಧಾರಕ ಹುಟ್ಟಕಬೇಕ. ತನ್ನ ಆಸ್ತಿಗೊಬ್ಬ ವಾರಸದಾರ ಬರಾಕಬೇಕ. ತನ್ನ ಮೈಯಾಗ ಶಕ್ತಿ ಇರುತನಕ, ತಾ ಕಣ್ಮುಚುದ್ರಾಗ ಮೊಮ್ಮಗನ ಎತ್ತಕೊಂಡ ಆಡಬೇಕ, ಸತ್ ಗಂಡನ ಹೆಸರ ಮೊಮ್ಮಗಗ ಇಟ್ಟ ಖುಷಿ ಪಡಬೇಕ ಅನ್ನು ಚಿಂತಿ ಸಂಗವ್ವಾಯಿಯ ತೆಲಿ ತುಂಬ. ಮದ್ವಿ ಆಗಿ ತಿಂಗಳೊಪ್ಪತ್ತ, ಎರಡ್ಮೋರ ತಿಂಗಳ, ವರಸ ಎಡು ವರಸ ಕಳದರನೂ ಏನೂ ಇಲ್ಲ. ಪಾರಿಗ ವಾಂತಿ ಬಯಕಿಯರ ಹತ್ತಾವ ಅಂದ್ರ ಅದೂ ಇಲ್ಲ. ಮುದಕಿ ಆಸೆ ನಿರಾಸೆ ಆದಾಂಗ ಆಗಿ, ಮುದಕಿ ಮನದಾಗ ಗುದಮುರಗಿ ನಡಿತು. ಇಸ್ಟ್ರಾಗ ಎರಡ ಮಕ್ಕಳ ತಾಯಿ ಆಗಬೇಕಾದ ಪಾರಿ ಸೊರಗಿ ಸಣ್ಣ ಆಗಾಕ ಹತ್ತಿದ್ದ ನೋಡಿ ಸಂಗವ್ವಾಯಿ ಚಿಂತೀಗ ಬಿದ್ದರ, ಅತ್ತ ಶಾರಿ ತನ್ನ ಮಗಳ ಹೊಟ್ಟ್ಯಾಗ ಒಂದ ಕೂಸೋ ಕುನ್ನಿಯೋ ಮಿಸಕಾಡದಿರುದ ಆತಂಕಕ್ಕ ಕಾರಣ ಆಗಿತ್ತ. ಪಾರಿಗ ಇನ್ನಾ ಎನೂ ಇಲ್ಲೇನ? ಅನ್ನು ಪ್ರಶ್ನೆಗಳು ಎಲ್ಲಾ ಕಡಿನೂ ಎದುರಾಗ ಹತ್ತಿದ್ದು. ಈ ಪ್ರಸ್ನೆಗಳಿಂದ ವಿಚಲಿತಗೊಂಡ ಪಾರಿ ಒಳಗೊಳಗ ನೋವು ಅನುಭವಿಸಾಕತ್ತಳು. ಸಂಗ್ಗವಾಯಿ ಮನದಾಗಂತೂ ಚಿಂತಿ ಚಿತಿ ಹೊಗಿ ಆಡಾಕ ಶುರೂ ಮಾಡಿತ್ತು. ಸ್ವಸಿ ಪಾರಿಯ ಬಂಜಿತನಕ್ಕ ಕಾರಣಾರ ಏನೈತಿ? ಪತ್ತೆ ಹಚ್ಚದ ಗತಿ ಇರಲಿಲ್ಲ.

ಅತ್ತಿ ಸ್ವಸಿ ಕಾಳಕಡಿ ಹಸನ ಮಾಡ್ಕೊಂತ ಮನಿ ಕಟ್ಟಿ ಮ್ಯಾಕ ಕುತ್ತಿರಬೇಕಾದರ ಕಾಳಿನ ಕರಕರ ಸದ್ದ ಬಿಟ್ಟರ ವಾತಾವರಣ ಸ್ಮಶಾನ ಮೌನ ತಾಳಿತ್ತ. ಅತ್ತಿ ಸ್ವಸಿ ಇಬ್ರ„ ಮನದಾಗನೂ ಕೆಂಡಮೌನದ ರೂಪ ತಾಳಿ ಕುಂತ ಪ್ರಶ್ನೋತ್ತರಗಳು. ನಾಲಗಿಗ ಬಾರದ ಮಾತಗಳು ಗಂಟಲದಾಗನ ಸಿಕ್ಕ ಗಿರಕಿ ಹೊಡ್ಯಾಕ ಹತ್ತಿದ್ದು. ಸಂಗ್ವಾಯೀ ಕಡಿಗೊಮ್ಮಿ ಧೈರೇ ಮಾಡಿ ಪಾರಿಯತ್ತ ತೀಕ್ಷಣ ದೃಸ್ಟಿ ಚಲ್ಲಿದಳು. ಚಿವಟಿದರ ಸಾಕ ಚರ್ರ್ ಅಂತಾ ರಕ್ತಾ ಚಿಮ್ಮುವಾಂಗ ಒಳ್ಳೆ ಕೆಂಪಂನ ಟಮಾಟಿ ಹಣ್ಣಿನಾಂಗ ಇದ್ದ ಸ್ವಸಿ ಈಗ ಒಣಗಿದ ಬದನಿಕಾಯಿ ಹಂಗ ಸೋತ ಸಣ್ಣಗಾಗಿ ಕುಂತಿದ್ದ ನೋಡಿದರ ಕರಳ ಕಿಂವಚಿ ಬರತಿತ್ತ. ಪಾರಿಗ ಸುಖಾ ಸಿಕ್ಕಿಲ್ಲ ಅನ್ನು ಸತ್ಯ ಸಂಗ್ಗವಾಯಿಯ ನುರಿತ ಕಣ್ಣಗಳಿಗೆ ಗೊತ್ತಾಗಿ ಹೋಗಾಕ ತಡಾ ಹತ್ತಲಿಲ್ಲ. ಎಸ್ಟ್ ಆಗಲಿ ಮಗಳ ಮಗಳ, ಮಗನ ಮಡದಿ, ಮನಿ ಮಹಾಲಕ್ಷ್ಮೀಗ ಈ ಗತಿ ಬಂದಿದ್ದ ನೋಡಿ ಇದರ ಹಿಂದಿನ ಮಜಕೂರರ ಏನೈತಿ ತಿಳಿಯುವ ಹಂಬಲಾ ಮುದಕಿಗ ಹೆಚ್ಚಾಗಿ ಮಾತ ತಡ್ಯಾಕ ಆಗದನ ಕೇಳೇಬಿಟ್ಟಳು.

“ ಯವ್ವಾ ಪಾರವ್ವಾ, ನೀ ನನ್ನ ಮನ್ಯಾಗ ನನ್ನ ಸ್ವಂತ ಮಗಳಕಿಂತ ಹೆಚ್ಚಾಗಿ ಸುಖದಿಂದ ಇರ್ತಿ ಅಂದ್ರ ಹಿಂಗ ದಿನದಿನಾ ಸೊರಕೋತ ಹೊಂಟಿದ್ದ ನೋಡಿದರ„ ನನಗ ಚಿಂತಿ ಆಗತೈತಿ ಮಗಳ„. ಮದ್ವಿ ಆಗಿ ಇಟ ದಿನಾ ಆದ್ರೂ ಇನ್ನೂ ವಾಂತಿ ಬ್ಯಾನಿ ಎನೂ ಇಲ್ಲ. ಈ ಮನಿಗ ಬೇಳಕ ನೀಡಾಕ ಒಂದ್ ನಂದಾದೀಪ ಹಚ್ಚತಿ ಅಂದ್ರ„ ನೀನ ಹಿಂಗ ರೋಗ ಹತ್ತಿದಾಂಗ ಸೊರಕೊಂತ ಹೊಂಟಿ. ನೀಯೇನ ಹೊರಗಿನಾಕಿ ಅಲ್ಲ, ಮೊಮ್ಮಗಳಂದ್ರ ಸ್ವಂತ ಮಗಳಕಿಂತ್ ಹೆಚ್ಚ ಇದ್ದಾಂಗ. ನಿನಗೇನ ಕಡಿಮಿ ಆಗೈತಿ? ನಿನಗೇನ ಚಿಂತಿ? ನನ್ಮಗ ಸಂಗ್ಯಾ ನಿನ್ಜತಿ ಸರಿ ನಡ್ಯಾಕ ಹತ್ತಾನೋ ಇಲ್ಲೋ? ಯಾವ್ದ ಮುಚ್ಚಿಟ್ಟಕೊಳ್ಳದ ಮನಸ್ಸ ಬಿಚ್ಚಿ ಹೇಳ ನೋಡ….” ಮುದಕಿ ಮಾತ ಇನ್ನೂ ಬಾಯಾಗಿಂದ ಬಾಯಾಗ ಇತ್ತ ಪಾರಿ ಕಣ್ಣಾಗ ರಕ್ತ ಕಣ್ಣೀರ!. ಇದ್ನ ಮುದಕಿ ಗಮನಿಸು ಮುಂಚೇನ ಅಲ್ಲಿಂದ ಹೋಗಬೇಕ ಅಂತ ನಿರ್ಧಾರ ಮಾಡಿದ ಪಾರಿ ಭಡ್ಕನ ಎದ್ದಾಕೀನ ಓಡಹೋಗಿ ಧಡಕ್ಕಂತಾ ಖೋಲೆ ಬಾಗಲಾ ಹಾಕೊಂಡ ಮಂಚದ ಮ್ಯಾಗ ಡಬ್ಬ ಬಿದ್ದ ಮನಸ ಹಗರ ಆಗುವಾಂಗ ಬಿಕ್ಕಿ ಬಿಕ್ಕಿ ಅಳಾಕತ್ತಳು.

ಸಂಗವ್ವಾಯಿಗ ಪಾರಿ ಮನಸನ್ಯಾಗಿನ ಸಂಕಟ ಅರ್ಥಾ ಆಗಿರಬೇಕ! ಆಗೀಗ ದುಕ್ಕಾ ಉಮ್ಮಳಿಸಿ ಬಂದ ತಡ್ಯಾಕ ಆಗದನ ಎದ್ದ ಹೋಗಿ ಖೋಲೆದಾಗ ಬಿದ್ದ ಅಳಾಕ ಹತ್ತ್ಯಾಳ ಅನ್ನುದ ಗೊತ್ತಾಗಿ ಹೋಗಿತ್ತ. ಪಾರಿ ಜೀವನದಾಗ ಎನೋ ತಪ್ಪ ಜರಗೈತಿ ಅನ್ನುದ ಸಂಗವ್ವಾಯೀ ಬುದ್ದಿಗ ನಿಲಕಿದ ವಿಷಯ ಖರೆಆದ್ರ ಖರೇನ„ ಏನ್ ಆಗೈತಿ ಅನ್ನುದ ತಿಳಿಯಬೇಕ ಅನ್ನು ಕುತೂಹಲ ಕಳವಳ ಜಾಸ್ತಿ ಆತ. ಇಸ್ಟೆಲ್ಲ ಕೇಳಿದ್ರನೂ ಪಾರಿ ಬಾಯಿ ಬಿಡಲಿಲ್ಲ ಅಂದ್ರ ಏನೋ ಭಾರಿ ಕಾರಣಾನ ಐತಿ ಅನ್ನುದ ಮಾತ್ರ ಸಂಗವ್ವಗ ಅರಿವಾಗಿತ್ತ. ಪಾರಿ ಬಂದ ಇಟ ದಿನಾ ಆದರೂ ಈ ಮನಿಗೊಂದ ಕೂಸ ಕುನ್ನಿ ಕರುಣಿಸಲಿಲ್ಲ ಅನ್ನು ಪಶ್ಚಾತಾಪಕ್ಕ ಆಳಾಕ ಹತ್ತಿದ್ದರ? ಅನ್ನು ಸಂಶಯ ಕೂಡ ಸಂಗ್ಗವ್ವಳ ಮನದಾಗ ಮೂಡದ ಇರಲಿಲ್ಲ. ಅಂಗೇನಾರ ಇದ್ರ ಸಂಗ್ಯಾಗ ಇನ್ನೊಂದ ಮದ್ವಿ ಮಾಡಿದ್ರ ಆತು ಅನ್ನು ಸ್ವಾರ್ಥ ಮನಸ್ಸು ಬಂದ್ರೂ ತನ್ನ ಮಗನ ಕಡೇನ ಏನಾದರ ತಪ್ಪಿತ್ತಂದ್ರ? ಅನ್ನು ಚಿಂತಿನೂ ಒಂದ ಚಣ ಕಾಡದ„ ಇರಲಿಲ್ಲ.

ತನಗಿಂತ ವಯಸ್ಸಿನ್ಯಾಗ ಅನುಭವದಾಗ ದೊಡ್ಡವರಾದವರ ಮುಂದ ತನ್ನ ಅಳಲ ತೊಡಿಕೊಂಡ ಸಂಗ್ಗವ್ವ ಅತ್ತಳು. ತನ್ನ ಸಮಸ್ಯೆಕ ಏನರ ಪರಿಹಾರ ಸಿಗತೈತಿ ಅನ್ನು ಭರವಸೆ ಸುಳ್ಳಾಗಿತ್ತ. ಒಳಗಿಂದ ಹಕೀಕತ್ತ ಏನೈತಿ ಅವರಿಬ್ರಗನ ಗೊತ್ತ ನಾವ್ಯಾಂಗ ಹೇಳಾಕ ಬರತೈತಿ ಅಂದ್ರು. ಮಗನರ ವಿಚಾರ ಮಾಡೂಣಂತಾ ಕೇಳಿದರ ಅಂವನೂ ಮೌನ. ಮುದಕಿ ಚಿಂತಿ ಚಿಂತಿಯಾಗೀನ ಉಳಿತ. ಊರಾಗೆಲ್ಲ ತನ್ನ ಮಗಾ ಹೆಂಗದಾನ, ಏನರ ದಾರಿ ಬಿಟ್ಟಾನೇನ ಅಂತಾ ವಿಚಾರ ಮಾಡಿದ್ರ ಸಂಗ್ಯಾ ದೇವ್ರಂತಾ ಮನಶಾ ಅನ್ನುದ ಉತ್ತರಾ ಬಿಟ್ರ ಬ್ಯಾರೇನ ಉತ್ತರಾ ಸಿಗಲಿಲ್ಲ. ಆದ್ರ ಈ ನಡಕ ಸಂಗ್ಯಾ ನರಾ ಸತ್ತವರಾಂಗ, ನಿರುತ್ಸಾದಿಂದ ಇರಾಕ ಹತ್ತಿದ್ದನ್ನ ಗಮನಿಸಿದ್ದ ಸಂಗ್ಗವ್ವ ಅವಂಗೂ ಮಕ್ಕಳಾ ಇಲ್ಲ ಅನ್ನು ಚಿಂತಿ ಇರಬೇಕಂತ ತಿಳಕೊಂಡ ಸುಮ್ಕಾದಳು.

-4-

ಅತ್ತ ಶಾರಿಗೂ ಸಂಕ್ರಂಗೂ ಅದ ಚಿಂತಿ!. ತನ್ನ ಮಗಳ ಹಿಂಗ ಆಗಾಕ ಕಾರಣಾರ ಏನೈತಿ. ಸಂಗವ್ವ ಆಕೀನಾ ತನ್ನ ಮಗಳಕಿಂತ್ ಹೆಚ್ಚಿಗ ನೋಡಕೋಳಾಕ ಹತ್ತ್ಯಾಳ. ಸಂಗ್ಯಾನೂ ಅಸ್ಟ ಪಿರುತಿಯಿಂದ ಅದಾನ ಅನ್ನು ಸಮಾಧಾನ ಒಂದಕಡಿ ಆದರ, ಇವರಿಬ್ಬರೂ ಹಿಂದಿನ ರಾಡಿ ಏನರ ತಗ್ದ ಪಾರಿ ಮ್ಯಾಗ ಹಗತನ ಏನರ ಸಾದಾಸಕ ಹತ್ತಾರೋ ಅನ್ನು ಅನುಮಾನ ಇನ್ನೊಂದ ಕಡಿ. ಮುಂದೇನ ಮಾಡುದ ಅನ್ನು ಚಿಂತ್ಯಾಗ ಇದ್ದಾಗನ ತನ್ನೂರ ಹುಡ್ಗ ಸುರೇಸ, ಸಾಲಿ ಮಾಸ್ತರ ಆಗಿ ಪಾರಿ ಊರಾಗ ಅದಾನ ಅನ್ನುದ ತಿಳ್ದ ಒಂದ ರವಿವಾರ ಸಾಲಿ ಸೂಟಿ ದಿನ ಸುರೇಸ ಮನ್ಯಾಗ ಇರುದ ಖಾತ್ರಿ ಮಾಡ್ಕೊಂಡ ಶಂಕ್ರ್ಯಾ ಅವನ ಮನಿಗ ಓಡಿದ. ಸುರೇಸ ಮಾಸ್ತರನ ಮುಂದ ಎಲ್ಲಾ ವಿಶ್ಯಾನೂ ಹೇಳಿದ ಶಂಕ್ರ್ಯಾ ಅಲ್ಲಿ ಎನ್ ನಡಿತೈತಿ ಅನ್ನುದ ತಿಳಕೊಂಡ ಬಂದ ಹೇಳಬೇಕಂದ. ತನ್ನ ಮಗಳ ಭವಿಷ್ಯದ ಬಗ್ಗೆ ಭಾಳಾ ಚಿಂತೆ ಆಗೈತಿ ಅಂತಾ ಕಾಲಿಗಿ ಬಿದ್ದ ಬೇಡಕೊಂಡಾಗ ಸುರೇಸ ಮಾಸ್ತರ ಪಾರಿ ಮನಿಗ ಹೋಗಾಕ ಒಪ್ಪಕೊಂಡ.

ಶಂಕ್ರ್ಯಾ ಹೇಳಿದಾಂಗ ಸುರೇಸ ಸಂಗ್ಗವಾಯಿ ಮನಿಗ ಒಂದೆರಡ ಸರ್ತಿ ಹೋಗೋಗಿ ಬಂದ. ಸಾಲಿ ಮಾಸ್ತರ ಅಂದ್ರ ಗುರುವಿನ ಸ್ಥಾನದಾಗ ಇದ್ದಾಂವ, ದೇವರ ಸಮಾನ ಅನ್ನು ಕಾರಣಕ್ಕ ಅವಂಗ ಆ ಮನ್ಯಾಗ ಆದರಾತಿಥ್ಯನೂ ಸಿಕ್ತು. ಹೊಸದಾಗಿ ಆ ಊರಕ ನೌಕರಿ ಹೋಗಿದ್ದ ಸುರೇಸಗ ಹೆಂಗರೇ ಯಾಕ ಆಗ್ವಾಲ್ತ ತನ್ನದಂತ ಒಂದ ಮನಿ ಪರಿಚಯ ಆಗಿದ್ದಕ ಒಳಗೊಳಗ ಆನಂದ ಪಟ್ಕೊಂಡಿದ್ದ. ಪ್ರತಿ ಶನಿವಾರ ಸಾಲಿ ಸೂಟಿ ಬಿಟ್ಟ ಮ್ಯಾಗ ಸುರೇಸ ಊರ ಕಡೆ ಮುಕಾ ಮಾಡತ್ತಿದ್ದ. ಊರಿಗ ಹ್ವಾದ ಮ್ಯಾಗ ಸಂಗ್ಗವಾಯೀ ಮನಿ ಸುದ್ದಿ ಶಂಕ್ರ್ಯಾನ ಮನಿಗ ಮುಟ್ಟಿಸಿ ಬರತಿದ್ದ. ಪಾರಿ ಜ್ವತಿ ಎಲ್ಲಾರೂ ಚನ್ನಾಗಿ ಅದಾರ, ಆದರ ಪಾರಿಗ ಮಕ್ಕಳ ಆಗವಾಲ್ತ ಅನ್ನು ಚಿಂತಿ ಮನಿ ಮಂದಿಗೆಲ್ಲ ಸುಡಾಕ ಹತ್ತೈತಿ ಅನ್ನು ಸತ್ಯಾ ಅಂವಾ ಬಿಚ್ಚಿಟ್ಟಿದ್ದ. ಸುರೇಸ ಪಾರಿ ತನಗ ಚಾ ತಂದ ಕೊಟ್ಟಿದ್ದ, ಊಟಾ ತಂದ ಕೊಟ್ಟಿದ್ದ ಎಲ್ಲಾ ಹೇಳತ್ತಿದ್ದ. ಆಕೀ ಮಕ್ಕಳ ಆಗಾಕ ಹತ್ತಿಲ್ಲ ಅನ್ನು ಚಿಂತಿ ಬಿಟ್ಟರ ಬ್ಯಾರೇನ ಚಿಂತಿ ಇಲ್ಲಾ ಅಂತಾ ಹೇಳಿದಾಗ ಗಂಡಾ ಹೇಣ್ತಿ ಇಬ್ಬರೂ ನೆಮ್ಮದಿ ಉಸರ ಬಿಟ್ಟಿದರು,

-5-

ದಿನಾ ಕಳದಾಂಗ, ಪಾರಿ ಒಳಗ ಒಂತರಾ ಅಸಮಾಧಾನ ಹೊಗಿ ಆಡಾಕ ಸುರು ಮಾಡ್ತು. ಊರಾಗಿನ ಮಂದಿ ಅವ್ಳಗ ಬಂಜಿ ಅನ್ನು ಪಟ್ಟಾ ಕಟ್ಟಿದರು. ಸಂಗ್ಗವಾಯಿ ತನ್ನ ಮನಿ ಬೆಳಗಾಕ ಒಂದ ದೀಪಾ ಇಲ್ಲಂದ್ರ ಹ್ಯಾಂಗ ಅಂತಾ ತೆಲಿ ಕೆಡಿಸಿಕೊಂಡಳು .ಒಂದಿನ ರಾತ್ರಿ ಹನ್ಯಾಡ ಗಂಟೆ! ತೆಲ್ಯಾಗ ಚೋಳ ಕಡ್ದಾಂಗ ಆಗಿ ಮಗಾ ಸ್ವಸಿ ಮಲಗು ಖೋಲಿ ಕಡೆ ನಡದಳು. ಖೋಲಿ ಕಿಡಕಿ ಬಾಗಲ ತೆರದಿತ್ತ. ಸಾವಕಾಸ ಹೋಗಿ ಕಿಡಕಿಯಿಂದ ಕಣ್ಣಗಲಿಸಿ ಒಳಗ ನೋಡಿದರ ಅವಳ ಪಡು ಆತಂಕಕ ಉತ್ತರಾ ಸಿಕ್ಕಾಂಗ ಆಗಿತ್ತ. ಮಗಾ ಒಂದ ಮೂಲ್ಯಾಗ, ಸ್ವಸಿ ಒಂದ ಮೂಲ್ಯಾಗ ಹಿಂಗ ಅಗಲಿ ಮಲಗಾಕ ಕಾರಣ ಏನೈತಿ?. ಚಿಂತಿ ಮತ್ತಸ್ಟ ಹೆಚ್ಚಾಗಿತ್ತ. ಹಿಂಗ„ ಮೂರ್ನಾಲ್ಕ ದಿನ ಕದ್ದ ಕದ್ದ ನೋಡಿ ಬಂದ ಸಂಗ್ಗವಾಯಿಗ ಗಂಡಾಹೆಣ್ತಿ ಸಂಬಂಧ ಸರಿಯಿಲ್ಲ ಅಂತಾ ಸ್ಪಸ್ಟ ಆಗಿತ್ತ. ಇವರಿಬ್ಬರೂ ಹಿಂಗ ಸಂಬಂದ ಇಲ್ಲದಾವರಾಂಗ ಮಲಗಿದ ನೋಡಿದರ ಇವರು ಇಸ್ಟ ದಿನಾ ಆದರೂ ಬಾಳೆ ಮಾಡಿಲ್ಲ ಅನ್ನು ಅನುಮಾನ ಸುರು ಆತು. ಇಟ್ಟೆಲ್ಲ ಗೊತ್ತಾದ ಮ್ಯಾಗ ಈಶ್ಯಾ ಮುಚ್ಚಡಾಕ ಆಗದ ಮುದಕಿ ಒಂದಿನ ಎಲ್ಲಾನು ಸುರೇಸ ಮಾಸ್ತರ ಮುಂದ ಹೇಳ್ತಾಳ. ಎಲ್ಲಾ ಈಶ್ಯಾ ಮನನ ಮಾಡ್ಕೊಂಡ ಮಾಸ್ತರ ಸಂಗವ್ವಗ ಒಂದ ಮಾತ ಹೇಳ್ತಾನ.

“ ಇದೆಲ್ಲ ಕೇಳಿದರ ಅವರಿಗ ಏನೋ ತೊಂದರೆ ಐತಿ ಅನಸ್ತದ. ಇವರನ್ನ ಹಿಂಗ ಬಿಟ್ರ ಕೆಲಸ ಆಗುದಿಲ್ಲ. ಇವರ್ಗ ವೈದ್ಯಕೀಯ ಸ¯ಹಾದ ಅಗತ್ಯ ಐತಿ. ಬೆಳಗಾಂವ್ಯಾಗ ನನ್ನ ಪ್ರೆಂಡ್ ಒಬ್ಬ ದೊಡ್ಡ ಡಾಕ್ಟರ ಅದಾನ, ಭಾಳ ಛಲೂ ನೋಡ್ತಾನ, ಏನ್ ಇದ್ದಿದ್ದ ಹೇಳ್ತಾನ, ಗಂಡಾಹೆಣ್ತಿ ಇಬ್ಬರನೂ ಒಯ್ದು ಪರೀಕ್ಷೆ ಮಾಡಿಸಿದ್ರ ಸತ್ಯಾ ಏನಂತ್ ಗೊತ್ತಾಗತೈತಿ” ಅಂದ.

“ ತಮ್ಮಾ ಹಿಂಗಂತಿಯೇನ„?, ನೀ ಹೇಳುದೂ ಖರೆ ಐತಿ, ಹೆಂಗಾರ ಮಾಡಿ ಅವರ ಇಬ್ಬರನೂ ಒಪ್ಪಿಸಿ ಕರ್ಕೊಂಡ ಬರು ಜವಾಬ್ದಾರಿ ನಂದ, ಡಾಕ್ಡರಗ ಹೇಳಿ ಪರೀಕ್ಷಾ ಮಾಡಿಸುದ ನಿಂದ. ಹೆಂಗಾರ ಮಾಡಿ ಒಂದ ಕೂಸ ಕುನ್ನಿ ಹುಟ್ಟಿದರ„ ಸಾಕ. ನಿನ್ಗ ಭಾಳ ಪುಣ್ಯಾ ಬರತೈತ ನೋಡಪ್ಪ„” ಅಂದಳು ಸಂಗ್ಗವಾಯಿ.
ಸುರೇಶ ಹೇಳಿದಾಂಗ ಸಂಗ್ಯಾ ಮತ್ತು ಪಾರಿನ ಬೆಳಗಾಂವಿಗ ಕರ್ಕೊಂಡ ಹೋಗಿ ಖ್ಯಾತ ಮನರೋಗ ಲೈಂಗಕ ತಜ್ಞರ ಹತ್ತರ ಪರೀಕ್ಷಾ ಮಾಡಿಸಿದ ಮ್ಯಾಗ ಡಾಕ್ಟರ ಗಂಡಾ ಹೆಣ್ತೀನ ಹೊರ್ಗ ಹೋಗಾಕ ಹೇಳಿ ಸುರೇಸ ಮತ್ತು ಸಂಗ್ಗವ್ವಳ ಮುಂದ ಇದ್ದ ಹಕೀಕತ್ ಹೇಳಿದ.
“ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿ ಹೆಣ್ಣಿನ ಕಡೆ ಯಾವುದೂ ದೋಷವಿಲ್ಲ ಅನ್ನುದ ಸ್ಪಷ್ಟ ಆಗಿದೆ, ಆದರೆ ಗಂಡಿನೊಳಗನ ಮಕ್ಕಳಾ ಆಗು ಲಕ್ಷಣ ಭಾಳ ಕಮ್ಮಿ. ಇಮ್‍ಪೊಟೆನಸಿ ಎಂದು ಕರೆಯುವ ಈ ರೋಗಕ್ಕ ಚಿಕತ್ಸೆ ಅದ ಆದರ ವೇರಿ ಲಾಂಗ ಪ್ರೋಸೆಸ್, ಈಗ ತುಂಬಾ ಲೇಟ ಆಗಿರುದರಿಂದ ಭಾಳಾ ಪ್ರಯತ್ನ ಮಾಡಬೇಕು”

ವೈದ್ಯರ ಒಂದೊಂದ ಮಾತೂ ಸಂಗ್ಗವಳ ಎದಿಮ್ಯಾಗ ಒಂದರ ಮ್ಯಾಗ ಒಂದ ಬರಸಿಡ¯ ಎರಗಿದಾಂಗ ಏರಗಾಕ ಹತ್ತಿದ್ದು. ಮುದಕಿ ಕಟ್ಟಿದ ಕನಸಗಳು ಒಡದ ಪುಡಿ ಪುಡಿ ಆಗಾಕ ಹತ್ತಿದಾಂಗ ಅನಸಿತ್ತ. ಹೊರಗ ಬಂದ ಮುದಕಿ ಕಣ್ಣಾಗ ನೀರ ತುಂಬಕೊಂಡ ಮುಕಾ ಸಣ್ಣ ಮಾಡಕೊಂಡ ಕುಂತಿದ್ದ ನೋಡಿ ಸುರೇಶ ಧೈರ್ಯಾ ತುಂಬು ಪ್ರಯತ್ನ ಮಾಡಿದ.
“ ಅಂಜಾಕ ಹೋಗಬ್ಯಾಡ ಆಯೀ, ದೇವ್ರದಾನ, ಅಂವಾ ಮನಸ್ಸ ಮಾಡಿದರ ಒಂದ ದಿವ್ಸನ್ಯಾಗ ಅವಳಿ ಜವಳಿ ಮಕ್ಕಳಾಗತಾವ, ಡಾಕ್ಟರ್ ಛಲೂ ಅದಾನ ಅಂವಾ ಹೇಳಿದಾಂಗ ಮಾಡ್ಕೋತ ಹೋಗೂಣ. ಎಲ್ಲಾ ಸರಿ ಆಗತೈತಿ.”
“ಹಂಗ„ ಮಾಡೋಣ, ಇದ ಬಿಟ್ಟರ ಬ್ಯಾರೆ ದಾರಿನ ಇಲ್ಲ. ಪಾರಿ ಕಡೆ ಏನಾರ ದೋಸ ಇದ್ದಿದ್ದರ ಸಂಗ್ಯಾಗ ಇನ್ನೊಂದ ಮದ್ವಿರ ಮಾಡತಿದ್ನಿನಿ. ಸಂಗ್ಯಾನ ಕಡಿನ ಏನ್ ಇಲ್ಲ ಪಾಪ ಪಾರಿ ಎನ್ ಮಾಡ್ತಾಳ. ಹೆಂಗಾರ ಪ್ರಯತ್ನ ಮಾಡಿ ಪಾರಿ ಹೊಟ್ಟ್ಯಾಗ ಒಂದ ಕೂಸ ಕುನ್ನಿ ಮಿಸಕಾಡು ಹಂಗ ಮಾಡಿದರ ನಮ್ಮ ಮನಿ ಮರ್ಯಾದೆ ಉಳಿತೈತಿ” ಅನ್ನು ಅಭಿಪ್ರಾಯಕ ಬಂದಳು. ಡಾಕ್ಟರ್ ಹೇಳಿದ ಎಲ್ಲ ಇಚಾರ ಸಂಗ್ಯಾ ಮತ್ತು ಪಾರಿಗ ತಿಳಿಸದನ ಊರಿಗೆ ಮರಳಿದರು.

-6-

ಸಮಸ್ಯೆ ಹಂಗ„ ಮುಂದವರದಿತ್ತ!. ಡಾಕ್ಟರ್ ಹೇಳಿದ ಈಶ್ಯಾ ಪಾರಿ ಅವ್ವ ಅಪ್ಪಗ ತಿಳ್ದ, ಹಂಗ„ ಪಾರಿಗೂ ತಿಳ್ದ, ಪಾರಿ ಗಂಡಗೂ ಗೊತ್ತಾಗಿ ಹೋಗಿತ್ತ. ಪಾರಿದೂ ಎಂತಾ ನಸೀಬು ಎಂತೆಂಥ ಮನೆತನ ಬಂದ್ರ ಕೊಡ್ದ ತವರ ಮನಿ ಅಂತಾ ಕೊಟ್ಟ ತಪ್ಪಗ ಪಾರಿ ಗಂಡನ ಸುಖಾ ಇಲ್ಲದನ ನರಳುವಂತಾತು ಅಂತಾ ಪಾರಿ ಅವ್ವ ಹಣಿ ಹಣಿ ಚಚ್ಚಕೊಂಡಳು, ಇರಲಿ ಸಮಾಧಾನ ತಗೋ ದೇವರ ದೊಡ್ಡಾಂವ ಏನರೆ ದಾರಿ ಮಾಡ್ತಾನಂತ ಶಂಕ್ರ್ಯಾ ಹೆಂಡ್ತಿಗ ಸಮಾಧಾನ ಹೇಳಿದ. ಸಂಗವ್ವಾಯೀ ಪಾಲಿಗಂತೂ ಮನೆ ಬೆಳಗಾಕ ಒಂದ ದೀಪಾ ಇಲ್ಲದಾಂಗಾತು ಅನ್ನು ಚಿಂತಿ ತೆಲಿ ತುಂಬ ಉರ್ಯಾಕ ಹತ್ತಿತ್ತ. ವಂಸೋದ್ಧಾರಕ, ಕುಲ ದೀಪಕ ಅನ್ನು ಪದಗಳು ಸಂಗ್ಯಾನ ಪಾಲಿಗ ಕನಸಿನ ಮಾತಾಗಿದ್ದವು. ಯಾಕಂದ್ರ ಅವನ ಮ್ಯಾಗ, ಅವನ ಪುರಸತ್ವದ ಮ್ಯಾಗ ಅವಂಗ ನಂಬಕಿ ಹೊಂಟ ಹೋಗಿತ್ತ. ಸಂಗ್ಯಾನಿಂದ ಇನ್ನ್ಯಾವತ್ತು ಮಕ್ಕಳ ಹುಟ್ಟುದ ಒಂದ ಕಡಿ ಇರಲಿ ತನಗ ಸುಖಾ ಸಿಗಾಂಗಿಲ್ಲ ಅಂತಾ ತಿಳ್ದ ಪಾರಿ ಕಂಗಾಲಾದಳು. ತನಗ ಬಂದ ಬಂಜಿ ಅನ್ನು ಅಪಾವಾದ ಹೆಂಗಾರ ಮಾಡಿ ಅಳಕಿಸಿ ಹಾಕಬೇಕ ಅಂತಾ ಜಿದ್ದಿಗಿ ಬಿದ್ದಾಂಗ ಮಾಡಾಕÀತ್ತಳು. ಸಂಗವ್ವಾಯಿ ಪಾರಿ ಹುಚ್ಚರಾಂಗ ವರ್ತಿಸುದ್ರಾಗ ನ್ಯಾಯಾ ಐತಿ ಅಂದಕೊಂಡ ಸುಮ್ಕಾದಳು. ಈ ನಡು ಸುರೇಶ ಮಾಸ್ತರ ಎಲ್ಲಾರಗೂ ಸಮಾಧಾನ ಹೇಳಾಕಂತ ಮನಿಗಿ ಬಂದೂ ಹೋಗೋದ ಹೆಚ್ಚಾತು. ತನ್ನಿಂದ ಏನೂ ಆಗುದಿಲ್ಲ ಅಂತಾ ಮನಗೊಂಡ ಸಂಗ್ಯಾ ತ್ವಾಟದ ಮನಿ ದಾರಿ ಹಿಡದ. ಅಲ್ಲೇ ಹೆಚ್ಚಿಗ ಟೈಮ ಕಳ್ಯಾಕ ಸುರು ಮಾಡಿದ. ಈ ನಡು ಇನ್ನ ಮದ್ವಿ ಅಗ್ದ ತರುಣ ಯುವಕ ಸುರೇಸ ಪಾರಿ ಕಣ್ಣಿಗೆ ಮೊದಲ ಬಾರಿ ಸಿನೇಮಾ ಹೀರೋ ಕಂಡಾಂಗ ಕಂಡ. ಸುರೇಸ ಮನಿಗ ಬರುದ ಹೋಗುದ ಹೆಚ್ಚಾದಾಂಗ ಇಬ್ಬರ ನಡು ಸಲಗಿನೂ ಹೆಚ್ಚಾತು. ಹೆಂಗರ ಯಾಕ ಆಗವಾಲ್ತ ಪಾರಿ ಹೊಟ್ಟಿಂದ ಒಬ್ಬ ಅಂಸೋದ್ಧಾರ ಮಾಡಾಂವ ಹುಟ್ಟಿದರ ಸಾಕಂತ ತಾಯಿ ಮಗ ಇಬ್ಬರೂ ಕಣ್ಮುಚ್ಚಿ ಕುಂತರು. ಒಮ್ಮೊಮ್ಮಿ ಸುರೇಸ ಮನಿಗ ಬಂದಾಗ ಸಂಗ್ಯಾ ಮನ್ಯಾಗ ಇದ್ರ ನಡಿ ಹೊಲ್ಕ್ ಹೋಗೂಣ ಅಂತಾ ಸಂಗವ್ವಾಯಿ ಕರ್ಕೊಂಡ ಹೊರಡತ್ತಿದ್ದಳು. ಅಸ್ಟರಾಗ ಪಾರಿ ಸುರೇಸ ಕೂಡಿ ಕಡೆಕ ಆಗತ್ತಿದ್ದರು. ಒಮ್ಮೊಮ್ಮಿ ಸಂಗವ್ವನ ಖುದ್ದ ನಿಂತ ನಾ ಹೊರಗ ಇರ್ತನ ನೀವ್ ಒಳಗ ಇರ್ರಿ ಅಂತಾ ಧೈರೇ ಹೇಳಿ ಕಳಸತ್ತಿದ್ದಳು. ಹಿಂಗ ಕಾಮೋ„ ಪ್ರೇಮೋ„„ ಸುರೇಸ ಮತ್ತ ಪಾರಿ ನಡು ಒಡನಾಟ ಹೆಚ್ಚಾಕೊಂತ ಹೊಂಟ್ತು.

ಬೆಳಗಾವಿ ಡಾಕ್ಟರ್ ಔಸದ ಸುರು ಆಗಿ ವರಸದಾಗ ಪಾರಿಗ ವಾಂತಿ ಸುರು ಆತು. ಊರಾಗಿನ ಗಾಂವಟಿ ಡಾಕ್ಟರ ಕಡಿ ತೋರಿಸಿ ಪಾರಿ ಬಸರ ಅದಾಳ ಅನ್ನುದ ಖಾತ್ರಿ ಮಾಡಕೊಂಡ ಮುದಕಿ ಸಂತೋಸದಿಂದ ಹಿಗ್ಗಿ ಹಿರಿಕಾಯಿ ಆದಳ. ಸಂಗ್ಯಾನು ತಾ ತಂದಿ ಆಗ್ತಿನ ಅನ್ನು ಸುದ್ದಿ ತಿಳ್ದ ಉಬ್ಬಿ ಹ್ವಾದ. ಬೆಳಗಾಂವಿ ಡಾಕ್ಟರ್ ಕೈಗುಣ ಭಾಳಾ ಛಲೂ ಪಾರಿ ಹೊಟ್ಟ್ಯಾಗ ಕೂಸ ಕದಲುವಾಂಗ ಮಾಡಿದ ಅಂತಾ ಊರ ತುಂಬ ಸುದ್ದಿ ಆತು. ಅತ್ತ ಶಂಕ್ರ್ಯಾನು, ಶಾರಿನೂ ಪಾರಿ ಬಸವಂತಿ ಆದ ಸುದ್ದಿ ತಿಳ್ದ ಕುಣಿದಾಡಿದರು. ಪಾರಿ ಬಸರಿ ಆದ ಸುಧ್ಧಿಯಿಂದ ಎಲ್ಲಾ ಕಡಿನೂ ಸಂಭ್ರಮ ಅಂದ್ರ ಸಂಭ್ರಮ!.

-7-

ಮುಂದ ಒಂಭತ್ತ ತಿಂಗಳ ಮುಗ್ದ ಒಂಭತ್ತ ದಿವ್ಸಕ್ಕಂದ್ರ ಸಂಗವ್ವಾಯಿ ಮನ್ಯಾಗ ಕುಂಯೀ ಅಂತಾ ಕೂಸಿನ ಧ್ವನಿ ಆನಂದದ ತರಂಗ ಎಬ್ಬಿಸಿತ್ತ. ಹುಟ್ಟಿದ್ದು ಗಂಡ ಮಗೂನ ಅಂತಾ ಖಾತ್ರಿ ಆದ ಮ್ಯಾಗಂತೂ ಆನಂದ ನೂರ ಪಟ್ಟ ಹೆಚ್ಚಾತು. ಊರ ಜನಕ್ಕ ಎಲ್ಲಾ ಕರ್ದ ಹುಟ್ಟಿದ ಕೂಸಿಗಿ ನಾಮಕರಣ ಮಾಡು ಕಾರ್ಯಕ್ರಮ ಇಟ್ಟ್ಕೊಂಡ್ರು. ಶಾರಿ, ಶಂಕ್ರ್ಯಾ, ಸಂಗ್ಯಾ, ಸಂಗ್ಗವಾಯೀ ಆನಂದ ಸಾಗರದಾಗ ತೇಲಿ ಹೋಗಿದ್ದರ, ಪಾರಿನೂ ಸಂತೋಸ ಶಿಖರದ ತುತ್ತ ತುದಿಗೆ ಏರಿದ್ದಳು. ಮತ್ತ„ ರಜಾದ ಮ್ಯಾಗ ಹೋಗಿದ್ದ ಕೂಸಿನ ನಿಜವಾದ ಅಪ್ಪ ಸುರೇಸ ಈ ಆನಂದದಾಗ ಭಾಗಿ ಆಗಬೇಕ ಅಂತಾ ಬಯಸಿದಳು. ಈ ಕಾರ್ಯಕ್ರಮದಾಗ ಭಾಗವೈಸಾಕಂತನ„ ಸುರೇಸ ಮಾಸ್ತರ ಬರಾಕ ಅತ್ತಾನ ಅನ್ನು ಸುದ್ದಿ ಬಂದಿತ್ತ. ಅಂವಾ ಬೆಳಗಾವಿಗ ಕರಕೊಂಡ ಹೋಗಿರಲಿಲ್ಲ ಅಂದ್ರ ಪಾರಿಗ ಮಕ್ಕಳಾಗತಿರಲಿಲ್ಲ ಅಂತಾ ಜನಾ ಮಾತಾಡಾಕ ಹತ್ತಿದರ. ಎಲ್ಲಾರೂ ಸುರೇಸ ಮಾಸ್ತರ ಬರು ಹಾದಿನ ನೋಡಾಕ ಹತ್ತಿದರು. ಕಾರ್ಯಕ್ರಮ ಚಾಲೂ ಆಗಿ ಒಂದೆರಡ ತಾಸ ಕಳದರೂ ಸುರೇಸ ಬರಲಿಲ್ಲ, ಆದರ ಅಂವ ಸತ್ತ ಸುದ್ದಿ ಬಿರುಗಾಳಿಯಾಗಿ ಬಂದ್ ಅಲ್ಲಿದ್ದವರ ಆನಂದ ನುಂಗಿ ಹಾಕಿತ್ತ. ಸುರೇಸ ಬರಾಕ ಹತ್ತಿದ ಟೆಂಪೂ ಫೂಲ ಮ್ಯಾಗಿಂದ ಹೊಳ್ಯಾಗ ಬಿದ್ದ ಗಾಡ್ಯಾಗ ಇದ್ದಾವರೆಲ್ಲ ಹೆಣಾ ಅಗಿದ್ದರು. ಸುರೇಶ ಮಾಸ್ತರ ಕೂಡ ! ಸುದ್ದಿ ತಿಳ್ದ ಪಾರಿ ತಾ ಇವ್ವತ್ತ ಖರೇನ ರಂಡಿಮುಂಡಿ ಆದನಿ ಅಂತಾ ಮನಿಸನ್ಯಾಗ ಅಂದಕೊಂಡ ಬಿಕ್ಕಿ ಬಕ್ಕಿ ಅತ್ತಳು. ಸಂಗ್ಯಾ ಮತ್ತ ಸಂಗವ್ವಾಯಿ ಅಂವಾ ಮಾಡಿದ ಉಪಕಾರ ನೆನಸ್ಕೊಂಡ ಕಣ್ಣೀರ ಹಾಕಿದರು. ಬಂದ ಸುದ್ದಿಯಿಂದ ಸೇರಿದ ಜನರಾಗ ಉತ್ಸಾ ಇರಲಿಲ್ಲ ಆದ್ರೂ ಪಾರಿ, ಸಂಗ್ಯಾ,ಮತ್ತ ಸಂಗವ್ವಾಯಿಗ ಸಮಾದಾನ ಹೇಳಿ ನಾಮಕರಣ ಕಾರ್ಯಕ್ರಮ ಮುಗಸದ ಗತಿ ಇರಲಿಲ್ಲ. ಮನಿ ಸದಸ್ಯರೆಲ್ಲ ಶೋಕ ತಪ್ತ ಆಗಿ ಮೂಕರಾಂಗ ಮಂಕ ಕವಿದಾವ್ರಾಂಗ ಕುಂತ ಸಂದರ್ಭದಾಗ ಮಗು ಥೇಟ ಸುರೇಸ ಮಾಸ್ತರನಾಂಗ ಇದ್ದದ ನೋಡಿ ಅವಂದ ಪಡಿಯಚ್ಚ ಅಂದ್ಕೊಂಡ ಅವ್ನ ನೆನಪನ್ಯಾಗ ಮಗುಗ “ಸುರೇಶ” ಅಂತಾ ಹೆಸರ ಕೂಗಿ ಹೊಂಟ ಹ್ವಾದರು. ತನ್ನ ಮಗಗ ಸುರೇಸನದ ಮುಕಾ ಮೋತಿ, ಅದನ ನೋಡ್ಯಾರ ತನ್ನ ದುಃಖ ಮರಿಬಹುದ ಅನ್ನು ಸಮಾಧಾನ ಪಾರಿಗಾದರ, ವಂಸೋದ್ಧಾರಕ ಹುಟ್ಟಿದ ಅವ್ಯಕ್ತ ಆನಂದ ಸಂಗ್ಯಾ ಸಂಗವ್ವಗ ಆಗಿತ್ತ. ಒಂದ ಮನ್ಯಾಗ ದೀಪಾ ಉರದರ, ಇನ್ನೊಂದ ಮನಿ ದೀಪಾ ಆರಿ ಹೋಗಿ ಕತ್ತಲಾವರಸಿದ್ದು ವಿಧಿಯ ವಿಪರ್ಯಾಸಂತಾ ಬಂದ ಜನ ಮಾತಾಡಕೊಂಡ ತಂತಮ್ಮ ಮನಿ ಕಡಿ ನಡದರು.

-ಅಶ್ಫಾಕ್ ಪೀರಜಾದೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x