ಅರಿಷಡ್ವರ್ಗಗಳು ಮಾನವನನ್ನು ಉತ್ತಮನಾಗಲಿಕ್ಕೆ ಬಿಡುವುದಿಲ್ಲ. ಉತ್ತಮನಾಗಿ ರೂಪಿಸದಿದ್ದರೂ ಪರವಾಗಿಲ್ಲ, ದುಷ್ಟನಾಗುವಂತೆ ಮಾಡುತ್ತವೆ! ಅರಿಷಡ್ವರ್ಗಗಳಲ್ಲಿ ಕೋಪವೂ ಒಂದು. ಕೋಪ ಬೆಂಕಿಯಿದ್ದಂತೆ. ಕೋಪಕ್ಕೆ ತುತ್ತಾದವರ ಮೇಲೆ ದುಷ್ಪರಿಣಾಮ ಬೀರುತ್ತದಲ್ಲದೆ ಕೋಪಗೊಂಡವರನ್ನೇ ಸುಟ್ಟುಬಿಡುತ್ತದೆ. ಆದುನಿಕ ಬದುಕಿನಲ್ಲಿ ಸಮಾಧಾನವಾಗಿರುವುದು ಕಷ್ಟ.
ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಿದ್ದಂತೆ ಅಯ್ಯೋ! ಟೈಂ ಆಯ್ತು! ಅಯ್ಯೋ! ಟೈಂ ಆಯ್ತು! ನಿತ್ಯ ಕರ್ಮ ತೀರಿಸಬೇಕು, ಸ್ನಾನ ಇಲ್ಲ! ಪೂಜೆ ಇಲ್ಲ! ಆ ಕೆಲಸ ಆಗಿಲ್ಲ, ಈ ಕೆಲಸ ಆಗಿಲ್ಲ. ಎಲ್ಲಾ ಮುಗಿಸಿ ಹೊರಡುವುದು ಎಷ್ಟು ಹೊತ್ತಾಗುತ್ತದೋ ಏನೋ? ಎಂದು ಅವಸರ ಅವಸರವಾಗಿ ಎಲ್ಲಾ ಮುಗಿಸಿ ಬಸ್ಟಾಂಡಿಗೆ ಹೋಗುವ ಹೊತ್ತಿಗೆ ಬಸ್ಸು ಹೋಗಿರುವುದು ಆದರೂ ಆಫೀಸಿಗೆ ಆಟನೋ, ಹಿಂದಿನ ಬಸ್ಸೋ ಹಿಡಿದು ಆಫೀಸನ್ನು ತಲುಪುವ ಹೊತ್ತಿಗೆ ಭಾಸ್ ಕೆಂಗಣ್ಣು ಕಿಡಿಗೆ ತುತ್ತಾಗಬೇಕು. ಅದನ್ನೆಲ್ಲಾ ತಲೆಗಿಟ್ಟುಕೊಂಡು ನೆಮ್ಮದಿಗೆಟ್ಟು ಕೆಲಸ ಮಾಡಿ ತಪ್ಪುಗಳ ಸರಮಾಲೆ ಮಾಡುತ್ತಾ ಹೋಗಿ ನೆಮ್ಮದಿ ಕೆಡಿಸಿಕೊಳ್ಳುವುದು. ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಹೀಗೇ ನಡೆಯುತ್ತಿರುತ್ತದೆ. .. ಹೀಗೇ ಒತ್ತಡದಿಂದ, ಬದುಕು ಯಾಂತ್ರಿಕವಾಗಿ ಮಾನವನ ನೆಮ್ಮದಿಯನ್ನೇ ಕಸಿಯುತ್ತಿರುವುದರಿಂದ ಮಾನವ ಶಾಂತಿ ನೆಮ್ಮದಿಗೆ ಹಪಿಹಪಿಸುವಂತಾಗಿದೆ.
Sslc, puc ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಫೇಲಾದ ಕಾರಣಕ್ಕೆ ಕೆಲವರು, ಕಡಿಮೆ ಅಂಕ ಬಂದವೆಂದು ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮರು ಮೌಲ್ಯಮಾಪನ, ಇನ್ನೊಮ್ಮೆ ಪರೀಕ್ಷೆ ಬರೆಯುವ ಬಗ್ಗೆ ಯೋಚಿಸುವ ತಾಳ್ಮೆ, ಸಮಾಧಾನ ಇಲ್ಲದೆ ದುಡುಕಿ ಕೆಡುಕು ಮಾಡಿಕೊಳ್ಳುವರು. ಇತ್ತೀಚೆಗೆ ಯುವಕ ಯುವತಿಯರು ತಾಳ್ಮೆಯಿಲ್ಲದೆ, ದುರಹಂಕಾರದಿಂದ, ನಾ ಹೆಚ್ಚು, ನಾ ನಿನಗಿಂತ ಏನು ಕಡಿಮೆ ಎಂದು ಬದುಕ ತೊಂದರೆಗೆ ಸಿಲುಕಿಸುತ್ತಿದ್ದಾರೆ. ಗಂಡ ಗೊರಕೆ ಹೊಡೆಯುತ್ತಾರೆಂದು, ಹೆಂಡತಿ ಅಡುಗೆ ರುಚಿಯಾಗಿ ಮಾಡುತ್ತಿಲ್ಲವೆಂದು ಇನ್ನು ಇಂಥಾ ಸಣ್ಣ ಕಾರಣಗಳಿಗೆ ತಾಳ್ಮೆ, ಸಹನೆಯಿಲ್ವದೆ ವಿಚ್ಛೇಧನಕ್ಕೆ ಮುಂದಾಗುತ್ತಾರೆ! ಇತ್ತೀಚಿಗೆ ಮಕ್ಕಳಂತೂ ಏನಾದರೂ ಸಮಸ್ಯೆಗಳು ಬಂದಾಗ ನಿಧಾನಿಸುವುದಿಲ್ಲ. ನಿಧಾನಿಸಿದರೆ ಉತ್ತರಗಳು ಸಿಗಲು ಸಾಧ್ಯ! ಆಗ ಸಮಾಧಾನದ ಸ್ಥಿತಿಗೆ ಬರಬಹುದು.
ಮಾನವ ಕಾಮ, ಕ್ರೋಧ, ಮಧ, ಮತ್ಸರ, ಲೋಭ, ಮೋಹ ಮುಂತಾದವುಗಳಿಗೆ ಒಳಗಾದಗ ಸಮಸ್ಯೆಗಳು ಸೃಷ್ಟಿಯಾಗುವುದು ಸಹಜ. ಅರಿಷಡ್ವರ್ಗಗಳಿಗೆ ತುತ್ತಾಗದ ಸ್ಥಿತಿಯನ್ನು ‘ ಸಮಾಧಾನ ‘ ದ ಸ್ಥಿತಿ ಎನ್ನಬಹುದು. ಹೀಗೆ ಸಮಾಧಾನವಾಗಿರುವುದರಿಂದ ನೆಮ್ಮಧಿ ದೊರೆಯುತ್ತದೆ. ಈ ಸ್ಥಿತಿಯನ್ನು ಸಾಧಿಸುವುದು ತುಂಬಾ ಕಷ್ಟ. ಸಮಾಧಾನವಾಗಿರುವುದೆಂದರೆ ತಪಸ್ಸು ಮಾಡಿದಂತೆ! ಸಂಸಾರ ಎಂಬುದು ಕಷ್ಟ – ಸುಖ, ಲಾಭ – ನಷ್ಟ, ನೋವು – ನಲಿವು, ಅಪಮಾನ – ಬಹುಮಾನಗಳ ಸರಣಿ! ಈ ಸರಣಿಯ ಒಂದೊಂದು ಭಾವಗಳೆಂಬ ಅಲೆಗಳು ಸಂಸಾರ ಸಾಗರದ ಒಂದೊಂದು ತೀರಕ್ಕೆ ಒಯ್ಯುತ್ತವೆ. ಒಂದು ಪೂರ್ವದ ತೀರಕ್ಕೆ ಒಯ್ದರೆ ಮತ್ತೊಂದು ಪಶ್ಚಿಮದ ತೀರಕ್ಕೆ ಒಯ್ಯುತ್ತದೆ! ಬಿರುಗಾಳಿ, ಸುಂಟರಗಾಳಿ, ಸುನಾಮಿಗಳೆಂಬ ನೋವು – ನಲಿವು, ಕಷ್ಟ – ಸುಖ, ಕರುಣೆ, ಪ್ರೀತಿ, ವ್ಯಾಮೋಹ ಈ ಯಾವ ಭಾವಗಳಿಗೂ ಸಿಲುಕಿ ಕೊಚ್ಚಿಕೊಂಡು ಹೋಗದಂತೆ ಸ್ಥಿರವಾಗಿ ನಿಲ್ಲಿಸಬೇಕು ಎಂದು ಮೊದಲು ಮನಸ್ಸು ಮಾಡಬೇಕು. ಹಾಗೆ ನಿತ್ಯ ಪ್ರಯತ್ನಿಸಿದರೆ ಸಮಾಧಾನವಾಗಿರಲು, ಸ್ಥಿರವಾಗಿ ನಿಲ್ಲಿಸಲು ಸಾಧ್ಯವಾಗಬಹುದು!
ನಮ್ಮವರೇ ನಮಗೆ ಮತ್ತೆ ಮತ್ತೆ ನಷ್ಟ ಮಾಡುತ್ತನೋ ತೊಂದರೆ ಕೊಡುತ್ತನೋ ಇರುತ್ತಾರೆ. ಮತ್ತೆ ಮತ್ತೆ ತಿಳಿಹೇಳಿದರೂ ನಷ್ಟ ಮಾಡುವ , ತೊಂದರೆ ಕೊಡುವ ಕೆಟ್ಟ ಪ್ರೌವೃತ್ತಿಯನ್ನು ನಿಲ್ಲಿಸದಿದ್ದಾಗ ಅವರ ಮೇಲೆ ಸಿಟ್ಟಾಗದಂತೆ ಸಮಾಧಾನವಾಗಿ ಹೇಗೆ ಇರಲು ಸಾಧ್ಯ? ಒಂದು ದಿನವಲ್ಲ ಇನ್ನೊಂದು ದಿನ ಸಿಟ್ಟು ಬಂದೇ ಬರುತ್ತದೆ! ಬೈಯ್ಯುವುದು ದೈಹಿಕವಾಗಿ ಹಲ್ಲೆ ಮಾಡುವವರೆಗೂ ಕೋಪ ಶಮನವಾಗದೆ ಇರಬಹುದು. ಕೋಪ ಅತಿಯಾದಾಗ ಬಿಪಿ ಹೆಚ್ಚುತ್ತದೆ. ದೈಹಿಕವಾಗಿ ಹಲ್ಲೆ ಮಾಡಿದ್ದರಿಂದ ಅವನನ್ನು ಶತೃ ಮಾಡಿಕೊಂಡು ಅವರ ಬಲ ಹೆಚ್ಚಿಸಿದಂತಾಗಬಹುದು. ಕೋಪ ವಿವೇಚನೆಯನ್ನು ಕಳೆದುಬಿಡುತ್ತದೆ. ಕೋಪಗೊಂಡಾಗ ಕೈಗೊಂಡ ತೀರ್ಮಾನಗಳು ಕೋಪಗೊಂಡವರಿಗೆ ಹಾನಿಯನ್ನುಂಟು ಮಾಡುವಂತಹವಾಗಿರುತ್ತವೆ. ನ್ಯಾಯಧಾನ ಮಾಡಲು ಸಾಧ್ಯವಾಗುವುದಿಲ್ಲ. ಅನ್ಯಾಯವಾಗಿ ಅನ್ಯಾಯಗಳ ಅಟ್ಟಹಾಸ ಮೆರೆಯಿಸಲು ಅವಕಾಶ ಮಾಡಿಕೊಟ್ಟೆನಲ್ಲ ಎಂದು ಪಶ್ಚಾತ್ತಾಪದಿಂದ ನಿತ್ಯ ಕೊರಗುವಂತಾಗುತ್ತದೆ. ಆದ್ದರಿಂದ ಕೋಪದ ಕೈಗೆ ಬುದ್ದಿ ಕೊಡಬಾರದು! ಸಮಾಧಾನವಾಗಿಯೇ ಸಮಸ್ಯೆಯನ್ನು ಬಗೆಹರಿಸಬೇಕು. ಸಮಾಧಾನವಾಗಿರುವಾಗ ವಸ್ತುವನ್ನು, ಸಮಸ್ಯೆಯನ್ನು ಅಮೂಲಾಗ್ರವಾಗಿ ನೋಡುತ್ತೇವೆ. ಆಗ ಸರಿಯಾಗಿ ಪರಿಶೀಲಿಸಲು ಅವಕಾಶವಾದ್ದರಿಂದ ಸತ್ಯಾಸತ್ಯಗಳ ಸರಿಯಾಗಿ ಪರಿಶೀಲಿಸಿ ತೀರ್ಮಾನಿಸುವುದರಿಂದ ತೀರ್ಪು ನ್ಯಾಯದ ಪರವಾಗಿರುವಂತಾಗಿ ನೆಮ್ಮಧಿ ನೀಡುವುದು. ಆದ್ದರಿಂದ ಸಮಾಧಾನದ ಸ್ಥಿತಿ ಕಾಪಾಡಿಕೊಳ್ಳುವುದು ಬಹು ಮುಖ್ಯ!
ಜನಸಂದಣಿಯಲ್ಲಿ ಯಾರಾದರೂ ಹುಟ್ಟಿದ ಸ್ಥಿತಿಯಲ್ಲೇ ಓಡಾಡುತ್ತಿದ್ದರೆಂದರೆ ಅವರು ಹುಚ್ಚರಾಗಿರಬೇಕು ಇಲ್ಲಾ ಜ್ಞಾನದ ತುತ್ತ ತುದಿಯನ್ನು ತಲುಪಿರಬೇಕು! ಅಕ್ಕ ಹುಟ್ಟಿದ ಸ್ಥಿತಿಯಲ್ಲೇ ನಡೆದಾಡುತ್ತಿದ್ದಳು! ಅಕ್ಕನನ್ನು ಕಂಡ ಜನ ಒಬ್ಬೊಬ್ಬರು ಒಂದೊಂದು ರೀತಿ ಕೆರಳಿಸುವ ಪ್ರಯತ್ನ ನಡೆಯಿಸಿರಬೇಕು. ವಚನಕಾರರೇ ಅವಳನ್ನು ಪರೀಕ್ಷಿಸಲು ಕೆಣಕಿದಾಗ ಸಮಾಧಾನವಾಗಿ ಉತ್ತರಿಸಿ ವಿಚಲಿತಳಾಗದ ಸ್ಥಿತಿ ತಲುಪಿದ್ದನ್ನು ಕಾಣುತ್ತೀವೆ. ಆ ಸ್ಥಿತಿಗೆ ತಲುಪಬೇಕೆಂದರೆ ಅವಳಲ್ಲಿ ತಾಳ್ಮೆ ಎಷ್ಟಿದ್ದಿರಬೇಕು? ಕೋಪ, ಸಮಾಧಾನದ ಬಗೆಗಿನ ಅಕ್ಕನ ಒಂದು ವಚನ:
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದೊಡೆಂತಯ್ಯ
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ ಈ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ – ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ
ಸಮಾಧಾನಿಯಾಗಿರಬೇಕು.
ಇದು ಅಕ್ಕನ ಪ್ರಸಿದ್ದ ವಚನಗಳಲ್ಲಿ ಒಂದು. ಈ ಲೋಕದಲ್ಲಿ ಹೊಗಳುವವರು ಇರುವಂತೆ ತೆಗಳುವವರೂ ಇದ್ದಾರೆ ಆ ಎರಡೂ ಸಂದರ್ಭಗಳಲ್ಲೂ ನಾವು ವಿಚಲಿತರಾಗದೆ ಸಮಾಧಾನಿಯಾಗಬೇಕು ಎಂದು ಹೇಳಿದ್ದಾರೆ. ಇದು ಈ ವಚನದ ಸಾರ.
ಈ ವಚನವನ್ನು ವಿವರವಾಗಿ ನೋಡಿದಾಗ ಇದನ್ನು ಎರಡು ನೆಲೆಯಲ್ಲಿ ಅರ್ಥೈಸಲು ಸಾಧ್ಯ! ಬೆಟ್ಟದ ಮೇಲೆ ಮನೆ ಮಾಡಿದ ಮೇಲೆ ಹಾ! ಬೆಟ್ಟದ ಮೆಲೆ ಮನೆ ಮಾಡಿಬಿಟ್ಟೆನಾ! ಇಲ್ಲಿ ಮೊಲ ಜಿಂಕೆಯಂತಹ ನಿರುಪದ್ರವ ಜೀವಿಗಳಿರುವಂತೆ ಹುಲಿ ಸಿಂಹದಂತಹ ಕ್ರೂರ ಪ್ರಾಣಿಗಳೂ ಇವೆ. ಇವುಗಳ ಉಪಟಳ ಸಹಿಸುತ್ತಾ ಬದುಕುವುದು ಹೇಗೆ ಎಂದು ಹೆದರಿದರೆ ಬದುಕಲಾಗುವುದೇ? ಎಂಬ ಪ್ರಶ್ನೆ ದೈರ್ಯವಾಗಿ ಬದುಕಬೇಕು ಎಂಬ ಉತ್ತರವನ್ನೂ ಅದೇ ಸಂದರ್ಭದಲ್ಲಿ ಕೊಡುತ್ತದೆ. ಈ ಲೋಕದಲ್ಲಿ ಹುಟ್ಟಿದಮೇಲೆ ನಮ್ಮ ಸುತ್ತ ಸಾಧು ಜೀವಿಗಳಾದ ಮೊಲ ಜಿಂಕೆ ಸ್ವಭಾವದ ಜನರಿರುವಂತೆ ಕ್ರೂರ ಪ್ರಾಣಿಗಳಾದ ಹುಲಿ ಸಿಂಹ ಸ್ವಭಾವದ ಜನರೂ ಇದ್ದಾರೆ. ಅವರ ಜತೆಗೆ ಹೇಗೆ ಬದುಕಲಿ? ಎಂದು ಪ್ರಶ್ನೆ ಹಾಕಿರುವಲ್ಲಿ ಹೆದರದೆ ಬದುಕಬೇಕು ಎಂಬ ಉತ್ತರವೂ ಇದೆ! ಇಲ್ಲಿ ಇವರಿಬ್ಬರ ಜತೆಗೂ ಸಮಾಧಾನವಾಗಿ ಬದುಕಬೇಕೆಂದಿದ್ದಾರೆ ಅಕ್ಕ! ಹೀಗೆ ಎರಡನೆಯ ನೆಲೆಯಲ್ಲಿ ಅರ್ಥೈಸಬಹುದು.
ಸಮುದ್ರದ ದಡದಲ್ಲಿ ಮನೆಯ ಮಾಡಿದ ಮೇಲೆ ನೊರೆ ತೆರೆಗಳಿಗೆ ಹೆದರಿದರೆ ಹೇಗೆ? ಎಂದು ಪ್ರಶ್ನಿಸುವಲ್ಲಿ ನೊರೆ ತೆರೆಗಳಿಗೆ ಅಂಜದೆ ಬದುಕಬೇಕೆಂಬ ದ್ವನಿ ಇದೆ. ಈ ಲೋಕದಲ್ಲಿ ಹುಟ್ಟಿದ ಬಳಿಕ ನೊರೆ ತೆರೆಗಳೆಂಬ ತೊಂದರೆ ಕೊಡುವ, ಅನಾವುತ ಮಾಡುವ, ಬೆದರಿಕೆ ಒಡ್ಡುವ ಜನರು ನಮ್ಮನ್ನು ಸುತ್ತುವರಿದಿವುದು ಸಾಮಾನ್ಯ ಅವರಿಗೆ ಹೆದರಿದರೆ ಹೇಗೆ? ಅಂದರೆ ಅವರಿಗೆ ಹೆದರದೆ ಬದುಕಬೇಕು ಎಂಬುದು ಅಲ್ಲಿನ ದ್ವನಿ!
ಸಂತೆಯೊಳಗೆ ಮನೆ ಮಾಡಿದ ಮೇಲೆ ಸದ್ದು ಗದ್ದಲ ಅಂತ ನಾಚಿ ಬದುಕದಂತೆ ಇರಲಾದೀತೆ? ಅಂದರೆ ಎಷ್ಟೇ ಸದ್ದು ಗದ್ದಲವಿದ್ದರೂ ಬದುಕಲೇಬೇಕು ಎಂಬ ಅರ್ಥವಿದೆ! ಈ ಲೋಕದಲ್ಲಿ ಹುಟ್ಟಿದ ಬಳಿಕ ಸಂತೆಯಂತೆ ಗದ್ದಲ ಮಾಡುವವರು ನಮ್ಮ ಸುತ್ತ ಮುತ್ತ ಇರುತ್ತಾರೆ. ಅವರಿಗೆ ನಾಚಿಕೊಂಡು ಬದುಕದಂತೆ ಇರಲಾದೀತೆ? ಅಂದರೆ ಅವರಿಗೆ ನಾಚದೆ ಬದುಕಬೇಕು ಎಂಬ ಧ್ವನಿ ಇದೆ! ಹೀಗೆ ಮೂರು ಪ್ರಶ್ನೆಗಳನ್ನು ಹಾಕಿಕೊಂಡು ದ್ವನಿಯರೂಪದಲ್ಲಿ ಉತ್ತರಿಸಿರುವುದ ಕಾಣುತ್ತೇವೆ.
ಈ ವಚನದಲ್ಲಿ ಈ ಲೋಕವನ್ನು ಬೆಟ್ಟದ ಮೇಲಿನ ವಾತಾವರಣಕ್ಕೆ, ಸಂತೆಯೊಳಗಿನ ಸದ್ದು ಗದ್ದಲದ ಸ್ಥಿತಿಗೆ, ಸಮುದ್ರದ ಅನಿಯಮಿತ ಅಲೆಗಳು ನಿರಂತರವಾಗಿ ಬಂದು ತಾಡನ ಮಾಡುವ ಸಮುದ್ರ ತಡಿಗೆ ಹೊಲಿಸಿದ್ದಾರೆ,! ಈ ರೀತಿಯ ಉಪಟಳಗಳು ಈ ಲೋಕದಲ್ಲಿ ಸಾಮಾನ್ಯ. ಇದನ್ನೆಲ್ಲಾ ಕೋಪಿಸಿಕೊಳ್ಳದೆ ಸಹಿಸಿ ಸಮಾಧಾನಿಯಾಗಿ ಬದುಕಬೇಕು. ಎನ್ನುತ್ತಾರೆ ಅಕ್ಕ. ಈ ವಚನ ಸರಳ, ನೇರ, ಸುಂದರ, ಆಕರ್ಷಕ, ಮಧುರವೂ ಆಗಿ ಎಲ್ಲರ ಗಮನಸೆಳೆದಿದೆ!
ಹುಟ್ಟು ಒಂದು ಆಕಸ್ಮಿಕ ಅಂತ ಕೆಲವರು ಹೇಳಿದರೆ ಮತ್ತೆ ಕೆಲವರು ಅದು ಪೂರ್ವ ನಿಯೋಜಿತ ಅಂತ ನಂಬುವವರು ಇದ್ದಾರೆ. ಅದೇನೇ ಇದ್ದರೂ ಆ ಯಾವ ಜ್ಞಾನಗಳೂ ನಮ್ಮ ಅನುಭವಕ್ಕೆ ಬರುವುದಿಲ್ಲ. ಆದ್ದರಿಂದ ನಮ್ಮ ಅನುವದ ಮಿತಿಯೊಳಗೆ ಚಿಂತಿಸುವುದು ಅರ್ಥಪೂರ್ಣ! ಮಾನವ ಈ ಲೋಕದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿ ಹುಟ್ಟದಿದ್ದರೂ ಹುಟ್ಟಿದ ಮೇಲೆ ಕೋಪ ತಾಳದೆ ಬದುಕುವುದು ಹೇಗೆ ಎಂಬ ಚಿಂತನೆ ಮಾಡಬೇಕು! ಈ ಲೋಕದೊಳಗೆ ಹುಟ್ಟಿದ ಬಳಿಕ ಇಲ್ಲಿ ಹೊಗಳುವವರು ಇರುವಂತೆ ತೆಗಳುವವರೂ ಇದ್ದಾರೆ. ನಮ್ಮ ನಡೆ ನುಡಿಗಳು ಕೆಲವರಿಗೆ ಸಂತಸವನ್ನುಂಟು ಮಾಡಿದರೆ ಮತ್ತೆ ಕೆಲವರಿಗೆ ಕೋಪವನ್ನುಂಟು ಮಾಡುವಂತಿರುತ್ತವೆ. ಸಂತಸಗೊಂಡು ಹೊಗಳುವವರನ್ನು ಕೋಪಗೊಂಡು ತೆಗಳುವವರನ್ನೂ ಕಂಡು ಕೋಪವ ಮಾಡದೆ ಸಮಾಧಾನಿಯಾಗಿ ಬದುಕಬೇಕು .
ಜೀವನದಲ್ಲಿ ಕಷ್ಟಗಳು, ನೋವು, ಸಮಸ್ಯೆಗಳು ಸಾಮಾನ್ಯ. ಏನು ನನಗೇ ಇಷ್ಟೊಂದು ಕಷ್ಟಗಳು, ಸಮಸ್ಯೆಗಳು ಬಂದವಲ್ಲ ಎಂದು ಯಾರು ಯಾರ ಮೇಲೋ ಸಿಟ್ಟಾದರೆ ಕಷ್ಟಗಳು ಉಲ್ಬಣಿಸುತ್ತವೆಯೇ ಹೊರತು ಪರಿಹಾರವಾಗುವುದಿಲ್ಲ! ಸಮಾಧಾನವೇ ಎಲ್ಲದಕ್ಕೂ ಸೂಕ್ತ ಪರಿಹಾರ! ಆದರೆ ಆ ಸಂದರ್ಭಗಳು ಸಮಾಧಾನವಾಗಿರಲು ಬಿಡುವುದಿಲ್ಲ! ಅಂತಹ ಸಂದರ್ಭದಲ್ಲೂ ಸಮಾಧಾನ ತಂದುಕೊಳ್ಳುವವ ಸಾಧಕನಾಗುತ್ತಾನೆ.
ಕೋಪ ‘ ಅರಿಷಡ್ವರ್ಗಗಳಲ್ಲಿ ಒಂದು. ಅರಿಷಡ್ವರ್ಗಗಳಿಗೆ ಈಡಾದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯವಿಲ್ಲ! ಪ್ರಯುಕ್ತ ಅರಿಷಡ್ವರ್ಗಗಳಿಗೆ ಸಿಲುಕಿ ವಿಚಲಿತನಾಗದೆ ಸಮಾಧಾನವಾಗಿ ಶಾಂತಿಯಿಂದ ಬದುಕಬೇಕಿದೆ.
–ಕೆ ಟಿ ಸೇಮಶೇಖರ ಹೊಳಲ್ಕೆರೆ
Very good article. Chennagide.
Thank you Raju bhat sir
Thank you Raju bhat sir…
Thank you Raju bhat sir…