ಲೈಕು ಕಾಮೆಂಟುಗಳಲ್ಲಿ ಮರೆಯಾದ ಲೈಫು: ಪ್ರಶಸ್ತಿ ಪಿ.

ಮೊನ್ನೆ ವಾಟ್ಸಾಪಲ್ಲೊಂದು ವೀಡಿಯೋ ನೋಡ್ತಿದ್ದ್ರೆ. ಒಬ್ಬ ಸಮುದ್ರದಲ್ಲಿ ಮುಳುಗೋಕೆ ಅಂತ ಕಡಲಮಧ್ಯದಲ್ಲಿ ತಯಾರಾಗಿ ಕೂತಿರ್ತಾನೆ. ಮೀನುಗಳು ಅವನ ಕಡಲ ವಸ್ತ್ರ ತೊಟ್ಟ ಕಾಲಿಗೆ ಮುತ್ತಿಕ್ಕುತಿರುತ್ವೆ. ಆದ್ರೆ ಅವ ತನ್ನ ಸ್ಮಾರ್ಟ್ ಫೋನಲ್ಲಿ ಏನೋ ಮಾಡೋದ್ರಲ್ಲಿ ಬಿಸಿ ! ಇನ್ನೊಬ್ಬ ಟಾಯ್ಲೆಟ್ಟಲ್ಲಿ ತಾನು ಬಂದ ಕೆಲಸವನ್ನೇ ಮರೆತು ಸ್ಮಾರ್ಟ್ ಫೋನಲ್ಲಿ ಮುಳುಗಿ ಅದನ್ನಲ್ಲಿ ಬೀಳಿಸಿಕೊಳ್ತಾನೆ. ಮತ್ತೊಬ್ಬಳು ಆಯಿಲ್ ಮಸಾಜ್ ಮಾಡಿಸ್ಕೊಳ್ಳೋಕೆ ಅಂತ ಬಂದ ಪೇಷಂಟನ್ನೂ ಮರೆತು ತನ್ನ ಸ್ಮಾರ್ಟ್ ಫೋನಲ್ಲಿ ಮುಳುಗಿರ್ತಾಳೆ. ಉದಾಹರಣೆಗಳು ಹೀಗೇ ಮುಂದುವರೆದು ಇಷ್ಟೆಲ್ಲಾ ಹಚ್ಚಿಕೊಳ್ಳುವಿಕೆ(addiction) ಬೇಕಾ , ಈ ಮಿಥ್ಯಲೋಕದಿಂದ ವಾಸ್ತವಕ್ಕೆ ಮರಳಿ ಎಂಬರ್ಥದ ಸಂದೇಶದೊಂದಿಗೆ ಅದು ಕೊನೆಗೊಳ್ಳುತ್ತೆ. ಅದು ಅಲ್ಲಿಗೇ ಮುಗಿದ್ರೂ ನಮ್ಮ ಜೀವನದಲ್ಲಿ ಕೊನೆಗೊಳ್ಳದ , ಕ್ಷಣ ಕ್ಷಣಕ್ಕೂ ಎಡತಾಗೋ ಘಟನೆಗಳು ನಮ್ಮನ್ನು ಇನ್ನಷ್ಟು ಯೋಚನೆಗೆ ಹಚ್ಚುತ್ವೆ. 

ಆಫೀಸು ಬಸ್ಸು.ನಿತ್ಯ ಕಾಲು ಘಂಟೆಯಿಂದ ಎರಡು ಘಂಟೆಯವರೆಗೂ ಅದರಲ್ಲೇ ಪಯಣಿಸಬಹುದಾದ ಅನಿವಾರ್ಯ. ಆದ್ರೆ ಬಸ್ಸಿಗೆ ಕಾಯುತ್ತಿರುವಾಗ ಇಯರ್ ಫೋನು. ಬಸ್ಸಿಗೆ ಹತ್ತಿದ ತಕ್ಷಣ ಆನಾಗೋ ವೈಫೈಯಲ್ಲಿ ಬ್ರೌಸಿಂಗು, ಚಾಟಿಂಗು. ಇನ್ನೆಲ್ಲೋ ಕೂತ ಗೆಳೆಯ/ಗೆಳತಿಯ ಹತ್ತಿರ ಮಾತಾಡುತ್ತೇವೆಯೇ ಹೊರತು ಪಕ್ಕದಲ್ಲಿ ಕೂತವನ ಹತ್ತಿರ ಮಾತಾಡುವಷ್ಟು ಸಮಯವಿಲ್ಲ ! ಅವನೂ ಅದನ್ನೇ ಮಾಡುತ್ತಿರುತ್ತಾನಲ್ಲ !! ಕೊನೆಯಲ್ಲಿ ಕೇಳಿದ್ರೆ ಬ್ಯುಸಿ ದುನಿಯಾ? ಬೇರೆಯವ್ರ ವಿಷಯದಲ್ಲಿ ಮೂಗುತೂರಿಸೋ ಅಧಿಕಾರ, ಅನಿವಾರ್ಯತೆ ನಮಗೇನಿದೆ ಅನ್ನೋ ಮಾತುಗಳು(ಇದು ದೊಡ್ಡಸ್ಥಿಕೆಯಲ್ದೇ ಮತ್ತೇನೋ ಅಂದ್ರೆ ಅನೇಕರಿಗೆ ಕೋಪವೂ ಬಂದೀತು !).ಅಲ್ಲಪ್ಪಾ, ದಿನಾ ಒಂದೇ ಬಸ್ಸಲ್ಲಿ ಹೋಗೋ, ಅಕ್ಕಪಕ್ಕದ ಡಿಪಾರ್ಟ್ಮೆಂಟ್ಗಳಲ್ಲಿ ಕೆಲಸ ಮಾಡೋ ವ್ಯಕ್ತಿಯ ಪರಿಚಯ ಮಾಡ್ಕೊಂಡ್ರೆ, ದಿನಾ ಅಲ್ಲದಿದ್ರೂ ವಾರಕ್ಕೆ ನಾಲ್ಕು ಮಾತಾಡಿದ್ರೆ ಏನಾದೀತು ? ಎಲ್ಲೋ ಕೂತವನ ಜೊತೆ ಗಂಟೆಗಟ್ಲೆ ಹರಟೋ ಬದ್ಲು ಪಕ್ಕದವನ ಜೊತೆ ಮಾತಾಡಿದ್ರೆ ಹೋಗೋ ಗಂಟಾದ್ರೂ ಏನು ? ನಾಳೆ ಇದೇ ಬಸ್ಸಲ್ಲಿ ನಮಗೇನಾದ್ರೂ ಆಯ್ತಂದ್ರೆ(ದೇವರು ಹಾಗೇನೂ ಆಗದಂತೆ ನಮ್ಮನ್ನ ಚೆನ್ನಾಗಿಟ್ಟಿಲ್ರಿ ಅಂತ ಎಷ್ಟು ಬೇಡಿಕೊಂಡ್ರೂ) ನೆರವಿಗೆ ಬರೋರು ಇಲ್ಲಿರೋರೇ ಹೊರತು ದೂರದಲ್ಲೆಲ್ಲೋ ಕೂತವನಲ್ಲ ! ಅಂತಹ ಪ್ರಸಂಗ ಬರೋದೇ ಇಲ್ಲ ಅಂದ್ಕೊಂಡ್ರೂ ಜೊತೆಗಿರುವವನ ಜೊತೆ ಒಂದೆರಡು ನಗೆಮಾತಿನಿಂದ, ಕುಷಲೋಪರಿಯಿಂದ ಏನಾಗುತ್ತೆ ?   ಒಂದಿಷ್ಟು ಸ್ನೇಹ, ಸಲಿಗೆ ಬೆಳೆಯಬಹುದು. ಮಿಥ್ಯಲೋಕದ ಬದಲು ಸತ್ಯಲೋಕದಲ್ಲೊಂದಿಷ್ಟು ಹೊತ್ತು ವಿಕಿರಣಗಳ ಹಂಗಿಲ್ಲದೆ ಉಸಿರಾಡಬಹುದು. ಊಹೂಂ. ಅದೆಲ್ಲಾ ಬೇಡ ನಮಗೆ. ಎಷ್ಟಂದ್ರೂ ನಾವೆಲ್ಲಾ ೪ಜಿ ಜನರೇಷನ್ನಿನ್ನ ಜನರಲ್ವೇ ?  

ಇವತ್ತು ಮಾವಿನ ಹಣ್ಣು ತಿಂದೆ ಅಂತ ಫೇಸ್ಬುಕ್ಕಲ್ಲಿ ಸ್ಟೇಟಸ್ಸು ಹಾಕೋ ಹುಡ್ಗಿ. ಅದಕ್ಕೆ ನೂರಿಪ್ಪತ್ತು ಲೈಕು, ಎರಡಂಕಿ ಕಾಮೆಂಟು. ಅದನ್ನೇ ಕಾಪಿ ಪೇಸ್ಟ್ ಮಾಡೋ ತರ, ಅಣಕಿಸೋ ತರ ಇವತ್ತು ಮಿರಿಂಡಾ ಕುಡಿದೆ ಅನ್ನೋದನ್ನೂ ಸ್ಟೇಟಸ್ಸಾಗಿಸೋ ಮತ್ತೊಬ್ಬ.ಅದಕ್ಕೆ ಮತ್ತೊಂದು, ಇನ್ನೊಂದು ಉತ್ತರ, ಪ್ರತ್ಯುತ್ತರಗಳು.ದಿನ ಬೆಳಗಾದರೆ ನನ್ನ ಸ್ಟೇಟಸ್ಸಿಗೆ, ಫೋಟೋಗೆ ಎಷ್ಟು ಲೈಕು, ಕಾಮೆಂಟು ಬಿದ್ದಿರಬಹುದು, ಯಾರ್ಯಾರು ಲೈಕ್ ಮಾಡಿರಬಹುದೆಂಬುದೇ ಕಾತುರ. ಕಮ್ಮಿ ಬಂತೆಂದ್ರೆ ನಂಗ್ಯಾಕೆ ಕಮ್ಮಿ, ಅವಳಿಗ್ಯಾಕೆ ಜಾಸ್ತಿ, ಅಥವಾ ನಂಗ್ಯಾಕೆ ಕಮ್ಮಿ, ಅವನಿಗ್ಯಾಕೆ ಜಾಸ್ತಿ ಅನ್ನುವಂತದೇ ಟೆನ್ಷನ್ನುಗಳು. ಯಾರ ಕಮೆಂಟಿಗೆ ಏನು ಪ್ರತಿಕಮೆಂಟ್ ಹಾಕ್ಲಿ ಅಂತಲೋ, ಯಾರ ಸ್ಟೇಟಸ್ಸಿಗೆ ಏನತ ಕಾಲೆಳಿಲಿ ಅನ್ನೋದನ್ನೇ ಕನಸಲ್ಲೂ ಯೋಚಿಸೋ ಜನರೂ ಇದ್ದಾರೆ. ಆದ್ರೆ ಇವುಗಳಲ್ಲೇ ದಿನ ಕಳೆಯುವಂತದ್ದೇನಿದೆ ? ಸಮಾಜ ಮಾಧ್ಯಮಗಳು ಬದುಕ ಭಾಗವಾಗೋ ಬದಲು ಅವೇ ಬದುಕಾದ್ರೆ ಹೇಗೆ ? ಪಕ್ಕದ ರೂಮಲ್ಲಿರೋ ಗೆಳೆಯರ ರೂಮಿಗೆ ಹೋಗಿ ಮಾತಾಡಲು ಸಮಯವಿಲ್ಲ. ರೂಮಲ್ಲಿರೋ ಮೂರು ಜನರೂ ಅವರವರ ಲ್ಯಾಪಿಯಲ್ಲಿ ಮತ್ಯಾರೊಂದಿಗೋ ಚಾಟ್ ಮಾಡೋದ್ರಲ್ಲಿ ಮಗ್ನ ! ಕೆಲಸದ ದಿನಗಳಲ್ಲಿ ಟೈಂ ಪಾಸಪ್ಪ. ಸರಿ ಅಂದ್ರೆ ಹಾಗಲ್ಲ. ವಾರಾಂತ್ಯಗಳಲ್ಲೂ ಅದೇ ಕೆಲಸ. ಶನಿವಾರ, ಭಾನುವಾರಗಳಲ್ಲಿ ಏನ್ಮಾಡ್ತೀಯಪ್ಪ ಅಂದ್ರೆ ಫ್ರೆಂಡ್ಸ್ ಜೊತೆ ಚಾಟು, ಫೇಸ್ಬುಕ್ಕು, ವಾಟ್ಸಾಪು ಅನ್ನೋ ಎಷ್ಟೋ ಜನ ನಮ್ಮ ನಿಮ್ಮಗಳ ಮಧ್ಯೆ ಸಿಕ್ಕಬಹುದು! ಫ್ರೆಂಡ್ಸನ್ನೇ ನೋಡ್ಬೇಕು ಅಂದ್ರೆ ರೂಮಿಂದ ಹೊರಬಂದು ಎಲ್ಲಾದ್ರೂ ಒಂದ್ಕಡೆ ಸಿಗೋಣ, ಎಲ್ಲಾದ್ರೂ ಟ್ರಿಪ್ಪೋ, ಟ್ರೆಕ್ಕೋ ಹೋಗೋಣ ಅಂದ್ರೆ ಅದಕ್ಕೆ ಊಹೂಂ. ನನಗಿವತ್ತು ಫ್ರೆಂಡ್ ಜೊತೆ ಚಾಟ್ ಮಾಡ್ಲಿಕ್ಕಿದೆ, ಕ್ಲಾಷ್ ಆಫ್ ಕ್ಲಾನ್ಸಿನ ವಾರ್ ಇದೆ(!!), ಸ್ಕೈಪೆಯಲ್ಲಿ ಕಾಲ್ ಮಾಡ್ಲಿಕ್ಕಿದೆ ಇಂಥಾ ನೂರೆಂಟು ಕಾರಣಗಳು ಸಿಗಬಹುದು. ಕೊನೆಗೆ ಎಲ್ಲಾ ಅವರವರ ಕೆಲಸಗಳಲ್ಲಿ ಬಿಸಿ ಮಗಾ, ಯಾರಿಗೂ ಸಮಯವಿಲ್ಲ ಎಂಬ ಉದ್ಗಾರ. ಆದ್ರೆ ಎಲ್ಲಾ ಬುಸಿಯಾಗಿದ್ದು ಹೇಗೆ ಅಂದ್ರೆ ಅದು ಈ ತರ !

ಎಲ್ಲೋ ದೂರದಲ್ಲಿರುವ ಮನೆಯವ್ರ ಹತ್ರ ದಿನಾ ಕಾಲುಘಂಟೆ ಮಾತಾಡೋಕೆ ಸಮಯವಿಲ್ಲ ಹಲವರ ಬಳಿ. ದಿನಾ ಮಾತಾಡೋಕೆ ಏನಿದೆ ಅಂತ. ಹೌದಪ್ಪಾ. ದಿನಾ ಚಾಟ್ ಮಾಡೋಕೆ ? ! ಇಡೀ ದಿನ ಅದರಲ್ಲಿ ಕಳೆದ ಸಮಯ ಘಂಟೆಗಳ ದಾಟಿರುತ್ತೆ ಅನ್ನೋ ಲೆಕ್ಕವಿಲ್ಲವಲ್ಲ. ಒಂದೊಂದು ಸಮಯ ಐದೋ ಹತ್ತೋ ನಿಮಿಷ ಕಳೆದಿರುತ್ತೇವೆ ಅಷ್ಟೆ.! ಫೇಸ್ಬುಕ್ಕು, ಟ್ವಿಟರ್, ವಾಟ್ಸಾಪು, ಹೈಕ್, ವೆಬರ್ .. ಹೀಗೆ ಮಾಧ್ಯಮಗಳು ಹಲವುಂಟು ಸಮಯ ಕಳೆಯಲಿಕ್ಕೆ. ಆದ್ರೆ ಅದರಲ್ಲಿ ಸಮಯ ಕಳೆಯೋದ್ರಲ್ಲಿ ಜೀವನದ ಅತ್ಯಮೂಲ್ಯ ಕ್ಷಣಗಳೇ ಕಳೆದುಹೋಗಿ ನಂತರ ಪರಿತಪಿಸುವಂತಾಗಬಾರದಷ್ಟೇ. ಎಲ್ಲಕ್ಕೂ ಶನೀಶ್ವರನೇ ಕಾರಣ ಅಂದಾಗೆ ಎಲ್ಲಕ್ಕೂ ಇವುಗಳನ್ನೇ ದೂರುತ್ತಿದ್ದೇನೆ ಅಂತಲ್ಲ. ಆದ್ರೆ ಇವುಗಳ ಹುಚ್ಚು ಪ್ರತ್ಯಕ್ಷ ಪರೋಕ್ಷವಾಗಿ ಹಲವು ಅವಘಡಗಳಿಗೆ ಕಾರಣವಾಗಿದೆ ಅಂತ ಹೇಳೋಕೆ ಹೊರಟಿದಷ್ಟೆ. ಫೇಸ್ಬುಕ್ಕು ಅಂದ್ರೆ ಫೋಟೋಗಳ ಹುಚ್ಚು. ತಾವು ಚೆನ್ನಾಗಿಯೇ ಕಾಣಬೇಕೆಂಬೋ ಬಯಕೆಯಲ್ಲಿ ವಾರಕ್ಕೆರೆಡು ಫೋಟೋ ಬದಲಾಯಿಸೋರೂ ಇದ್ದಾರೆ. ಮುಂಚೆಯೆಲ್ಲಾ ಬೇರೆಯವರಿಂದ ಫೋಟೋ ತೆಗಿಸಿಕೊಂಡು ಹಾಕುತ್ತಿದ್ದ ಪರಂಪರೆ ಹೋಗಿ ಈ ಹಲತರದ ಸೆಲ್ಫಿಗಳು ಬಂದಿವೆ. ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಬೇಕಾಗಿದ್ದ ಸೆಲ್ಫಿಗಳು ಈಗ ಎಲ್ಲದಕ್ಕೂ ಕಾರಣವಾಗುತ್ತಿದೆ.ಚಲಿಸೋ ರೈಲೊಂದ್ರ ಮುಂದೆ ಸೆಲ್ಫಿ ತೆಗಿಸಿಕೊಳ್ಳಬೇಕೆಂಬ ಹುಚ್ಚು ಮೂರು ಜನರ ಜೀವ ತೆಗೆದಿದ್ದು, ಜೋಗ ಜಲಪಾತದ ಎತ್ತರದಿಂದ ಮುಂಗಾರು ಮಳೆಯಂತಾ ಪೋಸಲ್ಲಿ ಫೋಟೋ ತೆಗೆಸಿಕೊಳ್ಳೋಕೆ ಹೋಗಿ ಜೀವತೆತ್ತ ಜನರು, ಕಟ್ಟಡದ ಮೇಲಿಂದ ಕೆಳಗಿನದ್ರ ಫೋಟೋ ತೆಗೆಯೋ ಹುಚ್ಚಿಗೆ ಜೀವತೆತ್ತ ಬಾಲಕ .. ಹೀಗೆ ಹಲವು ಹುಚ್ಚಾಟಗಳು ಪೇಪರಲ್ಲಿ ವರದಿಯಾದಾಗ ಸಹಜವಾಗೇ ಬೇಕಿತ್ತಾ ಇದು ಅನಿಸದಿರಲ್ಲಾ ? ಜೊತೆಗೆ ಇದಕ್ಕೆಲ್ಲಾ ಕಾರಣವಾಗೋದೇನಪಾ ಅಂತಂದಾಗ ಅವರು ನೋಡಿದ ಇಂತದೇ ಘಟನೆಗಳ ಅವರ ಗೆಳಯ/ಗೆಳತಿಯ ಫೋಟೋಕೆ ಸಿಕ್ಕ ಲೈಕು ಕಾಮೆಂಟುಗಳು ! ಒಬ್ಬ ಮಾಡಿದ ಅಂತ ಎಲ್ಲರೂ ಕುರಿ ಮಂದೆಯಂತೆ ಮಾಡ್ಲೇಬೇಕೆಂದೇನಿಲ್ಲವಾದ್ರೂ ಸಮಾಜ ಮಾಧ್ಯಮಗಳ ಬಳಕೆಯ ಮೇಲೆ ಹತೋಟಿಯಿಲ್ಲದಿದ್ರೆ ಇಂತಹ ಹುಚ್ಚಾಟಗಳು ಹೆಚ್ಚಾಗೋ ಸಾಧ್ಯತೆ ಅಲ್ಲಗಳೆಯುವಂತಿಲ್ಲ. 

ಪುಸ್ತಕ ಓದೋಕೆ ಟೈಂ ಇಲ್ಲ ಅಂತಿದ್ದ ನಮ್ಮನ್ನೆಲ್ಲಾ ಕಾಲೆಳೆಯೋಕೆ ಗೆಳೆಯ ಪ್ರಸನ್ನ ಹೇಳ್ತಿದ್ರು..ಒಂದು ವಾರ ಸಾಮಾಜಿಕ ತಾಣಗಳ ಹಂಗಿಂದ ಹೊರಬಂದು ಬಿಡಿ, ಇಂತಾ ನಾಲ್ಕು ಪುಸ್ತಕಗಳ ಓದಬಹುದು ಅಂತ. ಆ ಮಾತು ೧೦೦% ಹೌದು. ಸೀನಿಯರೊಬ್ರು ಒಂದು ತಿಂಗಳು ಫೇಸ್ಬುಕ್ ಬಿಟ್ಟು ಅದ್ರಲ್ಲಿ ಉಪಯೋಗಿಸುತ್ತಿದ್ದ ಸಮಯದಲ್ಲೇ ರೆಡ್ ಹ್ಯಾಟಿನ ಸರ್ಟಿಫಿಕೇಷನ್ ಮಾಡಿದ್ರು ! ನಾಲ್ಕು ದಿನ ಫೇಸ್ಬುಕ್ಕು, ವಾಟ್ಸಾಪುಗಳಿಗೆ ನಮಸ್ಕಾರ ಹಾಕಿದ ಕಾರಣ ದಿನಾ ಹನ್ನೆರಡಕ್ಕೆ ಮಲಗೋ ಬದ್ಲು ಅದೇ ಕೆಲಸಗಳನ್ನು ಹನ್ನೊಂದಕ್ಕೆ ಮುಗಿಸಿ ದಿನಾ ಒಂದೊಂದು ಘಂಟೆ ಜಾಸ್ತಿ ನಿದ್ರೆ ಮಾಡಲೂ ಸಾಧ್ಯವಾಗಿತ್ತು. ಹಂಗಂದ ಮಾತ್ರಕ್ಕೆ ಎಲ್ಲವನ್ನೂ ಬಿಟ್ಟು ನಾವು ಹತ್ತು ಹದಿನೈದು ವರ್ಷಗಳ ಹಿಂದೆ ಬದುಕುತ್ತಿದ್ದಂತೆ, ಸಮಾಜಕ್ಕೆ ಅಭಿಮುಖವಾಗಿ ಬದುಕಬೇಕಂತಲ್ಲ. ಆದ್ರೆ ತಂತ್ರಜ್ನಾನ, ಅಭಿವ್ಯಕ್ತಿ ಮಾಧ್ಯಮ ಅನ್ನೋದನ್ನ ನಮ್ಮ ದೈನಂದಿನ ಜೀವನದ ಇತರ ಚಟುವಟಿಕೆಗಳಿಗೆ ಕುತ್ತಾಗದಂತೆ, ಅಮೃತವಾಗಿದ್ದು ವಿಷವಾಗದಿರಲೆಂಬ ಎಚ್ಚರಿಕೆಯಿಂದ ಮಿತವಾಗಿ ಬಳಸಬೇಕಷ್ಟೆ.  ಮಾಧ್ಯಮಗಳಲ್ಲಿನ ತೋರಿಕೆಯಲ್ಲೇ , ಲೈಕು ಕಾಮೆಂಟುಗಳಲ್ಲೇ ಕಳೆದುಹೋಗೋ ಬದ್ಲು ನಮ್ಮ ಅಂತಸಃತ್ವದ ಹುಡುಕಾಟಕ್ಕೊಂದಿಷ್ಟು ಸಮಯವ ಮೀಸಲಿಡೋಣ. ವರ್ಷಗಳಿಂದ ಧೂಳು ಹಿಡಿದ ಪುಸ್ತಕವೋ, ತಿಂಗಳುಗಳಿಂದ ಕಾಲ್ ಮಾಡದ ಫ್ರೆಂಡಿಗೋ ಯಾವ ಅನಿವಾರ್ಯತೆಯೂ ಇಲ್ಲದಿದ್ರೂ ಸುಮ್ನೇ ಹೆಂಗಿದ್ದಾನೆ ಅಂತ ವಿಚಾರಿಸಲಾದ್ರೂ ಫೋನ್ ಮಾಡೋಣ. ಆಗ ಸಿಗೋ ಖುಷಿಯ ಅನುಭವಿಸಿ ನೋಡಿ. ಜೀವನದ ಇಂತಾ ಸಣ್ಣ ಸಣ್ಣ ಖುಷಿಗಳು ಸಾಮಾಜಿಕ ಮಾಧ್ಯಮಗಳ ಖುಷಿಗಿಂತ ಕೊಂಚ ಭಿನ್ನ ಅನುಭವವ ದೊರಕಿಸೀತು, ಮಿಥ್ಯಲೋಕದಿಂದ ವಾಸ್ತವ ಲೋಕಕ್ಕೆ ನಮ್ಮನ್ನು ಹೆಚ್ಚೆಚ್ಚು ತೆರೆದಿಟ್ಟೀತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
SV
SV
9 years ago

Lekhana tumba chennagide..

prashasti.p
9 years ago

Thank you 🙂

Roopa Satish
Roopa Satish
9 years ago

Too gud an article 🙂 prati vaakyavu sathya prashasti …….. 

3
0
Would love your thoughts, please comment.x
()
x