ಲಿಂಗ ಸಾಮರಸ್ಯತೆ  ಮತ್ತು ಸ್ತ್ರೀ ಸಂವೇದನೆ: ನಾಗರೇಖಾ ಗಾಂವಕರ

nagarekha

ನನ್ನೊಳಗಿನ ತುಡಿತಗಳು ಅವನಿಗೆ ಅರ್ಥವಾಗುವುದಿಲ್ಲ. ಅವನದೇನಿದ್ದರೂ ತನ್ನ ಮೇಲುಗಾರಿಕೆಯ ನೆಲೆಯಲ್ಲಿಯೇ ನನ್ನನ್ನು ಉದ್ದರಿಸುವ ನಿಲುವು. ಇದು ಧೀಮಂತ ವ್ಯಕ್ತಿತ್ವ ಎನ್ನಿಸಿಕೊಳ್ಳುವ ಪ್ರತಿಯೊಬ್ಬ ಸಜ್ಜನ ಪುರುಷನ ಲಕ್ಷಣ. ಹೆಣ್ಣು ದುರ್ಬಲೆ ಎಂಬ ಧೋರಣೆಯ ಅಂಚಿನಿಂದ ಆತನಿನ್ನೂ ಹೊರಬಂದಿಲ್ಲ. ಅವಳ ಮಾನಸಿಕ ಸಾಮಥ್ರ್ಯ ತನಗೆ ಮಿಕ್ಕಿದ್ದರೂ ಒಪ್ಪಲಾರ. ಅದು ಅವರಿಬ್ಬರ ಜಗತ್ತಿಗೆ ಅನ್ವಯಿಸಿ ಹೇಳುವಾಗ ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ ಎಂದು ಉದ್ಘರಿಸುವ ಹಲವು ಮುಖಗಳು ಸದಾ ನಮ್ಮ ಸುತ್ತಮುತ್ತ ಸಂಚರಿಸುತ್ತಿರುತ್ತವೆ.

ಅದಕ್ಕಾಗೆ ಪ್ರತ್ಯೇಕ ಸ್ತ್ರೀ ಪ್ರಜ್ಞೆಯ ಸ್ತ್ರೀ ಸಂವೇದನೆಯ ಅಗತ್ಯತೆಯ ನಿರಾಕರಿಸಿ, ಎಲ್ಲರಲ್ಲೂ ಒಳಗೊಳ್ಳಬೇಕಾದ ಅಪ್ರಜ್ಞಾಪೂರ್ವಕ ಸ್ತ್ರೀತ್ವ ಪರಿಕಲ್ಪನೆ ಇಂದಿನ ಅನಿವಾರ್ಯತೆ. ಆ ಮೂಲಕ ಹೆಣ್ಣು ಮತ್ತು ಗಂಡೆಂಬ ಲಿಂಗ ಬೇಧದ ಜಟಾಪಟಿ ನಿಂತು ಸಾಮರಸ್ಯತೆ ಸಾಧ್ಯ. ಮಹಿಳಾ ಬರಹಗಾರ್ತಿಯರು ಕೂಡಾ ಸ್ತ್ರೀತ್ವ ಎಂಬ ಆದರ್ಶವಾದದಲ್ಲಿ ಮನೆ ದೇವತೆ ಇಲ್ಲ ಗೃಹಿಣಿ ಎಂಬ ಆದರ್ಶದಲ್ಲಿ ಬಂಧಿಯಾಗಿದ್ದಾರೆ ಎಂದು ವರ್ಜಿನಿಯಾ ವೊಲ್ಫ ಎಂಬ ಪಾಶ್ಚಾತ್ಯ ಮಹಿಳೆ  ಅಭಿಪ್ರಾಯಪಟ್ಟಿದ್ದಾಳೆ. ಸ್ತ್ರೀ ವಾದ ಒಂದು ಏಕಮುಖ ಸಿದ್ಧಾಂತ. ಅದು ಸ್ತ್ರೀ ಸಮುದಾಯದ ಪ್ರತ್ಯೇಕ ನಿಲುವು. ಸಾಮಾಜಿಕ ನಿಲುವಲ್ಲ ಎಂಬ ವಿಚಾರ ಇಂದಿನ ಆಧುನಿಕ ಜಗತ್ತಿಗೆ  ಒಪ್ಪಿಕೊಳ್ಳಲಾಗದ ಸಂಗತಿ. ಎಲ್ಲ ರಂಗಗಳಲ್ಲಿ ಪುರುಷನಿಗೆ ಸಮಾನ ಜ್ಞಾನ,ಚಾತುರ್ಯ, ಬೌದ್ಧಿಕತೆ ತೋರ್ಪಡಿಸುವ ಸ್ತ್ರೀ ತನ್ನದೇ ಆದ ಪ್ರತ್ಯೇಕತೆಯನ್ನು ಇಂದಿಗೆ ವಿರೋಧಿಸುತ್ತಾಳೆ ಕೂಡ. ಹಾಗಾಗೇ ಮೂರನೇ ಜಗತ್ತಿನ ಅರ್ಥಾನ್ವಯ ಸ್ತ್ರೀ ಸಂವೇದನೆಗಳು ಹಿಂದಿನ ವಿಚಾರಗಳಿಗೆ ಕೊಂಚ ಭಿನ್ನವೇ.

ಸ್ತ್ರೀ ಬರವಣಿಗೆ ಮತ್ತು ಆಕೆಯ ದೇಹ ರಚನೆ ಇಲ್ಲಿ ಗಮನಿಸತಕ್ಕ ಸಂಗತಿ. ಸ್ತ್ರೀ ದೇಹದ ಭಿನ್ನತೆ ಪ್ರಮುಖವಾಗಿ ಪುರುಷನಿಗೂ ಸ್ತ್ರೀಗೂ ಇರುವ ವೈತ್ಯಾಸವೆಂದರೆ ಅದು ದೇಹ ಸ್ವರೂಪದ ವೈತ್ಯಾಸ. ಸಮಾಜದಲ್ಲಿ ಆಕೆಯ ಬಗೆಗಿನ ಮೂಲಭೂತ ವಿಚಾರಗಳು ಈ ಹಿನ್ನೆಲೆಯಲ್ಲಿಯೇ  ಪರಿಗ್ರಹಿಸಲ್ಪಡುತ್ತವೆ. ಸ್ತ್ರೀ ಬರವಣಿಗೆಗಳಲ್ಲಿ ಈ ಜೈವಿಕ ಕಲ್ಪನೆ ಉಪಯೋಗಕಾರಿ. ಆದರೆ ಸ್ತ್ರೀ ಸಾಹಿತ್ಯದಲ್ಲಿ ಆಕೆಯ ದೇಹಕ್ಕಿಂತ ಆಕೆಯ ಸಾಹಿತ್ಯದ ದೇಹ ಉತ್ಕøಷ್ಟವಾಗಿರಬೇಕು. ಸ್ತ್ರೀ ಬರಹಗಳಲ್ಲಿ ಮೂಡಿ ಬರುವ ಜೈವಿಕ ಗೃಹಿಕೆಗಳು ಮುಖ್ಯವಾಗಿದ್ದು ಸ್ತ್ರೀಗ್ರಾಹಿತ್ವ, ಸ್ತ್ರೀ ಶರೀರಗಳಿದ್ದರೂ ಸಾಂಸ್ಕøತಿಕ ಸಂದರ್ಭಗಳಲ್ಲಿ ಸ್ತ್ರೀತ್ವದ ಸಾಹಿತ್ಯಿಕ ಸಾಮಾಜಿಕ ಭಾಷಿಕ ಹಿನ್ನೆಲೆಯಲ್ಲಿಯೂ ಸ್ತ್ರೀ ಸಂವೇದನೆಗಳನ್ನು ಒಡಮೂಡಿಸುತ್ತವೆ. ಸ್ತ್ರೀ ತನ್ನ ಬರವಣಿಗೆ  ಮತ್ತು ಭಾಷೆಗಳಲ್ಲಿ ಹೊಸತನ್ನು ಸೃಜಿಸಿದರೂ ಲಿಂಗತ್ವ ಆಧಾರಿತ ಮೇಲುಗಾರಿಕೆ  ಇದ್ದು ಆಕೆಗೆ ಮನ್ನಣೆಯ ಕೊರತೆ ಕಾಣುತ್ತದೆ.

 ಸ್ತ್ರೀ ವಾದಿ ವಿಮರ್ಶೆ ಎಂದರೆ ಬರೀಯ ಸ್ತ್ರೀ ರಚಿತ ಸಾಹಿತ್ಯ, ಅದರ ರೂಪ ರೇಷೆಗಳು,ಬರವಣಿಗೆಯ ವಿಧಾನ ಶೈಲಿ, ಪ್ರಭೇದ, ಅದರ ಇತಿಹಾಸ ಸ್ತ್ರೀ ಸೃಜನಾತ್ಮಕತೆಯ ಮನೋಭೌತಿಕತೆ ಮಹಿಳಾ ಸಾಹಿತ್ಯ ಸಂಪ್ರದಾಯಗಳ ವಿಕಸನ ಇತ್ಯಾದಿಗಳ ಕುರಿತು ಮಾತ್ರ ಅಧ್ಯಯನಗೈದು ಸ್ತ್ರೀ ವಾದಿ ವಿಮರ್ಶೆ ಅಪಾಯದಲ್ಲಿದೆ. ಪುರುಷ ಸಾಹಿತ್ಯ ಬಹುತ್ವ ಆಧಾರಿತ. ವಿಪರ್ಯಾಸವೆಂದರೆ ಸ್ತ್ರೀ ಸಾಹಿತ್ಯದಲ್ಲೂ ಗಂಡಿನ ಮೇಲುಗಾರಿಕೆಯನ್ನು ತೋರ್ಪಡಿಸುವ, ಪುರುಷತ್ವದ ಮೂಲ ತಾತ್ವಿಕತೆಯ ಬಿಂಬಿಸುವ ಪ್ರಯತ್ನದಿಂದ ನಾವೇನೂ ಹೊಸತು ಸಾಧಿಸಿದಂತಾಗುವುದಿಲ್ಲ. ನಿರಂತರ ಇಂತಹ ಪೃಕ್ರಿಯೆಗಳಿಂದಲೇ ಪುರುಷ ವಿಮರ್ಶಕರು ಸ್ತ್ರೀ ಸಾಹಿತ್ಯ ಮತ್ತು ವಿಮರ್ಶೆಗಳ ಉಪೇಕ್ಷಿಸಿ ಅದನ್ನು ಕಡೆಗಣಿಸುವಂತಾಗಿದೆ. ಸ್ತ್ರೀಯರು ಅಪ್ಪಟ ಸ್ತ್ರೀ ಕೇಂದ್ರಿತ ಸರ್ವಸ್ವತಂತ್ರ ಹೊಸ ಕಾವ್ಯ ಮೀಮಾಂಸೆಯನ್ನು ಸಂರಚಿಸಬೇಕು. ಅದು ಭೌದ್ದಿಕ ಸಮಂಜಸತೆಯಿಂದ ಸಾಕಷ್ಟು ಶ್ರೇಷ್ಟವಾಗಿರಬೇಕು. ಪುರುಷ  ಬಹುತ್ವವಾದಿ ಮತ್ತು ಸ್ತ್ರೀವಾದಿ ವಿಮರ್ಶೆಗಳ ತುಲನೆಗೆ ಒಂದು ರೋಚಕ ತಿರುವು ಸಿಗಲು ಸಾಧ್ಯ.

ಸ್ತ್ರಿ ವಾದ ಹಿಂದಿನಿಂದಲೂ ಇದ್ದರೂ ಅದು ಏಕಮುಖವಾಗಿಲ್ಲ. ಅದು ಮೂರು ಬಗೆಯಲ್ಲಿ ತೆರೆದುಕೊಳ್ಳುವುದು ಎಂದು  ಷೋವಾಲ್ಟರ್ ಎಂಬ ಅಮೇರಿಕನ್ ಮಹಿಳಾ ಲೇಖಕಿ ವಿಶ್ಲೇಷಿಸುತ್ತಾಳೆ. ಮಹಿಳಾ ಲೇಖಕಿಯರ ಬರವಣಿಗೆಗಳಲ್ಲಿ ಮೂಡಿಬಂದಿರುವುದು ಅವರವರ ವೈಚಾರಿಕ ನೆಲೆಯ ಹಿನ್ನೆಲೆಯಲ್ಲಿ. ಅದು ಉಗ್ರವಾದಿ ಸ್ತ್ರೀ ಸಂವೇದನೆ, ಉದಾರವಾದ, ಹಾಗೂ ತರ್ಕಬದ್ಧ ಸ್ತ್ರೀವಾದಗಳೆಂದು ಗುರುತಿಸಬಹುದು. ಮೂರು ಹಂತಗಳಲ್ಲೂ ಅದನ್ನು ವಿಂಗಡಿಸಿದರೆ ಮೊದಲ ಹಂತ ಮಹಿಳಾ ಲೇಖಕಿಯರ ಕಾಲ. ಪುರುಷ ಬರವಣಿಗೆಯ ಪ್ರಭಾವಕ್ಕೆ ಒಳಗಾದ ಲೇಖಕಿಯರ ಬರವಣಿಗೆಯ ಅವಧಿ. ಅದನ್ನು ಸುಮಾರು 1840ರಿಂದ 1880 ಎಂದು  ಷೋವಾಲ್ಟರ್ ವಿಂಗಡಿಸುತ್ತಾಳೆ. ನಂತರದ ಬೆಳವಣಿಗೆ ಎಂದರೆ 1880ರಿಂದ 1920ರವರೆಗಿನ ಅವಧಿ. ಇದು ಕೊಂಚ ಭಿನ್ನ ಸ್ತ್ರೀವಾದಿ ಧೋರಣೆಗಳ ಎತ್ತಿ ಹಿಡಿದು ಅದನ್ನು ಸಮರ್ಥಿಸುವ ಅದನ್ನು ಉಧ್ಘೋóಷಿಸಿದ ಸ್ತ್ರೀವಾದಿ ಹಂತ. ಮೂರನೇಯ ಮಜಲಿಗೆ ಬಂದರೆ ಆಗ ಕಂಡುಬರುವ ಸಂಪೂರ್ಣ ಸ್ವತಂತ್ರ ಅಭಿವ್ಯಕ್ತಿಯ ಸಾಮಥ್ರ್ಯವುಳ್ಳ ಕಸುವುಳ್ಳ ಮಹಿಳಾ ವಿರಚಿತ ಸಾಹಿತ್ಯ ಸುಗಂಧ ಪಸರಿಸಿದ ಕಾಲ. ಸುಮಾರು 1920ರಿಂದ ಮುಂದುವರೆದು ಇಂದಿನವರೆಗೂ.

 ಆಧುನಿಕ ಸ್ತ್ರೀ ಬರವಣಿಗೆಗಳು ಸಹಜವಾಗಿ ಪುರಾಣ ವೇದ ಕಾಲದಿಂದಲೂ ಪುರುಷ ಸಾಹಿತ್ಯಗಳಲ್ಲಿ ಪಡಿಮುಡಿದ   ಸ್ತ್ರೀತ್ವದ ಪರಿಕಲ್ಪನೆಗಳಿಗೆ ವಿರೋಧವಾಗಿ ಕಂಡುಬಂದರೂ ಪ್ರಾರಂಭಿಕ ಹಂತದಲ್ಲಿ ಅಂತಹ ಸ್ತ್ರೀ ಪಾತ್ರಗಳ ರಚನೆಯಲ್ಲಿಯೇ ಪುರುಷ ಸಾಹಿತ್ಯದ ಅನುಕರಣೆಯಲ್ಲಿಯೇ ತನ್ನತನ ಬಿಟ್ಟು ಮುಡಿಬಂದವುಗಳೆ ಆಗಿದ್ದವು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಭಾರತದಲ್ಲಿ  12ನೆ ಶತಮಾನಕ್ಕೆ ಅಕ್ಕ ಮಹಾದೇವಿ ಸ್ತ್ರೀ ಸಮಾನತೆಯ ಬೀಜಮಂತ್ರ ಪಠಿಸಿದ್ದು ಭಕ್ತಿಮಾರ್ಗದ ಪ್ರತಿಪಾದನೆಯಲ್ಲಿ ಮತ್ತೆಲ್ಲೋ ಪುನಃ ಪುರುಷ ಶ್ರೇಷ್ಟತೆಯ ಹಾದಿಯನ್ನೆ ಬಿಂಬಿಸಿವೆ.

ಸ್ತ್ರೀ ಮತ್ತು  ಪುರುಷ ಸಂವೇದನೆಯ ಏಕೀಕರಣ  ಅಸಾಧ್ಯವೇ? ಪ್ರಕೃತಿಯ ನಿಯಮದನುಸಾರ ಅದಕ್ಕೆ ಕಾರಣ ದೈಹಿಕ ಚಹರೆ, ಮಾನಸಿಕ ನಿಲುವು. ಹೆಂಗರುಳಿನ ಪರಿಕಲ್ಪನೆಯಲ್ಲಿಯೇ ಹೆಣ್ತನದ ಜೀವಧಾತು ಅಡಗಿರುವುದಲ್ಲವೇ? ಎಂಬುದ ವಿಶ್ಲೇಷಿಸಿದಾಗ ಮಹಿಳಾ ಅನುಭವಗಳು, ಆಲೋಚನಾ ಪ್ರಕ್ರಿಯೆ ಪುರುಷನಿಗೆ ಕೊಂಚ ಭಿನ್ನವಿರುವುದು ಸ್ಪಷ್ಟವಾದರೂಈ ಅದೇನೂ ಅಂತಹ ಸಂಪೂರ್ಣ ಭಿನ್ನ ಸಂವೇದನೆ ಆಗಲಾರದು. ಆಕೆಯ ದೈಹಿಕ ನಿಲುವಿನ ಭಿನ್ನತೆ  ನೈಸರ್ಗಿಕ. ಆದಾಗ್ಯೂ ಆಕೆಯಲ್ಲಿಯೂ ಅಲ್ಪ ಪ್ರಮಾಣದ ಪುರುಷ ನಿಲುವುಗಳು, ಇದ್ದರೂ   ಸಾಮಾಜಿಕ ಸಾಂಸ್ಕøತಿಕ ಜೀವನದ ರೂಪು ರೇಖೆಗಳು,ಪಿತೃಪ್ರಧಾನ ವೈವಸ್ಥೆಯ ಆಳವಾದ ಬೀಳಲುಗಳು ಅವಳ ಹಕ್ಕು ಹಾಗೂ ಸ್ವತಂತ್ರ ಅಭಿವ್ಯಕ್ತಿಗೆ ತಡೆಗೋಡೆ ನಿಲ್ಲಿಸಿವೆ ಎಂಬುದನ್ನು ಅಲ್ಲಗಳಿಯುವಂತಿಲ್ಲ. ಸ್ತ್ರೀ ವಾದಿಗಳಲ್ಲಿಯೂ ಸ್ತ್ರೀ ಸಾಹಿತ್ಯದಲ್ಲೂ ಕಂಡುಬರುವ ಹಲವು ಮುಖಗಳ ಪರಿಚಯ ನಿಜಕ್ಕೂ ಅಚ್ಚರಿಯ ಮೂಡಿಸುತ್ತವೆ. ಬರೀಯ ಸಂವೇದನೆಯ ಮೂಲಕ ಕಟ್ಟಿಕೊಡುವ ಕಾವ್ಯ ಕಥೆಗಳು ಸಾಹಿತ್ಯದ ಅಭಿರುಚಿ ಆ ಮೂಲಕ ಸ್ತ್ರೀಯ ಸಾಮಾಜಿಕ ಸಾಂಸ್ಕøತಿಕ ನೆಲೆಯಲ್ಲಿ ಸಶಕ್ತತೆಯನ್ನು ಬಿಂಬಿಸಲಾರವು. ತನ್ನತನದ ಗಟ್ಟಿ ಅಭಿವ್ಯಕ್ತಿಯ ಮೂಲಕವೇ ಆಕೆ ಸಮಾನ ನೆಲೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಸ್ತ್ರೀ ಸಂವೇದನೆಯ ಮೂಲ ಸಂಭಾವ್ಯ ಬೀಜಗಳು ಕೂಡಾ ಕಾಲಕಾಲಕ್ಕೆ ಬದಲಾವಣೆಯ ಗಾಳಿಯಲ್ಲಿ ರೂಪಾಂತರಗೊಳ್ಳುತ್ತಿವೆ. ಶಿಕ್ಷಣವೂ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ಆಕೆ ಆಧುನಿಕರಣಗೊಳ್ಳುತ್ತಿದ್ದಾಳೆ. ಆ ಮೂಲಕ ತನ್ನದೇ ಆದ ಅದ್ವಿತೀಯ ದಿವ್ಯ ಚಕ್ಷುವ ಪಡೆದು ಮುಂದೆ ಸಾಗುವ ಮಹತ್ವಾಕಾಂಕ್ಷೆ ಬರಲಿ ಎಂದು ಆಶಿಸೋಣವೇ?


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x