ಕಥಾಲೋಕ ಪಂಜು-ವಿಶೇಷ

ಲಿಂಗೇರಿ ವಿಜಿಯ ಗುಟ್ಟು: ವಾಸುಕಿ ರಾಘವನ್

ತನ್ನ ಅಜ್ಜನ ಭಾವಚಿತ್ರದ ಮುಂದೆ ನಿಂತಿದ್ದ ವಿಜಿಯ ಮುಖದಲ್ಲಿ ತೃಪ್ತಿಯ ಮಂದಹಾಸವಿತ್ತು. "ಅಜ್ಜ, ನಿನ್ನ ಮಾತು ನಿಜ ಆಯ್ತು  ನೋಡು. ನೀನು ಹೇಳ್ತಿದ್ದ ಆ ದಿನ ಇವತ್ತು ಬಂತು" ಅಂದವನ ಕಣ್ಣಂಚು ಸ್ವಲ್ಪ ತೇವಗೊಂಡಿತ್ತು. ಅಜ್ಜ ಪಟ್ಟ ಕಷ್ಟಕ್ಕೆ, ಅನುಭವಿಸಿದ ನಿರಾಶೆ, ಅವಮಾನ, ಮೂದಲಿಕೆ ಇವೆಲ್ಲದಕ್ಕೂ ಒಂದು ಚಿಕ್ಕ ಸಮಾಧಾನ ಅನ್ನುವಂತೆ ಇತ್ತು ಆ ದಿನ. ವಿಜಿಯ ದೆಸೆಯಿಂದ ಲಿಂಗೇರಿ ಅನ್ನುವ ಆ ಪುಟ್ಟ ಹಳ್ಳಿಯ ಹೆಸರು ಜಗತ್ತಿನಾದ್ಯಂತ ಹರಡಿತ್ತು. ಯಾವುದೋ ಟಿವಿ ಚಾನಲ್ಲಿನವರು "ವಸ್ತ್ರ ಜಾದೂಗಾರ ಲಿಂಗೇರಿ ವಿಜಯ್" ಅನ್ನುವ ಬಿರುದು ಬೇರೆ ಕೊಟ್ಟುಬಿಟ್ಟಿದ್ದರು.

ಚಿಕ್ಕ ವಯಸ್ಸಿನಲ್ಲೇ ಅಪ್ಪ ಅಮ್ಮನನ್ನು ಕಳೆದುಕೊಂಡ ವಿಜಿ ಬೆಳೆದದ್ದು ತನ್ನ ಅಜ್ಜನ ಜೊತೆಯಲ್ಲೇ. ಮಹಾನ್ ಸ್ವಾಭಿಮಾನಿಯೂ, ಹಠವಾದಿಯೂ ಆದ ರಾಮಣ್ಣ ರಾಯರಿಗೆ ಮೊಮ್ಮಗ ಅಂದರೆ ಪ್ರಾಣ. ರಾಮಣ್ಣನವರ ಮುಖ್ಯ ಹವ್ಯಾಸ ಅಂದರೆ ಬಟ್ಟೆ ತಯಾರಿಸುವುದು. ಅವರಿಗೆ ಅದು ಕೇವಲ ಕೆಲಸವಲ್ಲ, ಅವರು ಅದನ್ನೊಂದು ಕಲೆ ಎಂದು ಪರಿಗಣಿಸಿದ್ದರು. ಜೊತೆಯಲ್ಲೇ ಬೆಳೆದ ಮೊಮ್ಮಗನಿಗೂ ಅದರ ಹುಚ್ಚು ಹತ್ತಿಸಿಬಿಟ್ಟಿದ್ದರು. ತಕ್ಕಮಟ್ಟಿಗೆ ಪೂರ್ವಜರ ಆಸ್ತಿ ಇತ್ತು, ಜೀವನೋಪಾಯಕ್ಕೆ ಏನೂ ತೊಂದರೆ ಇರಲಿಲ್ಲ, ಹಾಗಾಗಿ ತಮ್ಮೆಲ್ಲಾ ಬಿಡುವಿನ ಸಮಯವನ್ನು ಬಟ್ಟೆ ತಯಾರಿಕೆಗೆ ಮೀಸಲಿಟ್ಟಿದ್ದರು. ಅವರ ಆವಿಷ್ಕಾರಗಳೂ ಒಂದೆರಡಲ್ಲ, ಆ ಹಳ್ಳಿಯಲ್ಲಿ ಯಾರೂ ಕಂಡಿರದ ಕೇಳಿರದ ಚಿತ್ರವಿಚಿತ್ರ ನಮೂನೆಯ ಬಟ್ಟೆಗಳನ್ನು ತಯಾರಿಸುತ್ತಿದ್ದರು. "ಅಜ್ಜಯ್ಯಾ, ಈ ವಯಸ್ಸಲ್ಲಿ ಯಾಕೀ ತಾಪತ್ರಯ ಹೇಳು ನಿಂಗೆ" ಅಂತ ಊರವರು ಆಡಿಕೊಂಡರೆ, ಮುದುಕ ಅದನ್ನು ತನ್ನ ತಲೆಗೇ ಹಾಕಿಕೊಳ್ಳುತ್ತಿರಲಿಲ್ಲ. "ಇದೇನು ಮನುಷ್ಯರು ಹಾಕೋ ಬಟ್ಟೆಗಳಾ ರಾಮಣ್ಣಾ" ಅಂತ ಯಾರಾದರೂ ಹೀಯಾಳಿಸಿದರೆ, "ಇದು ಮನುಷ್ಯರದ್ದು ಅಲ್ಲಪ್ಪಾ, ಇದನ್ನ ಅಪ್ಸರೆಯರು ಹಾಕ್ಕೋತಾರೆ ಮುಂದೊಂದು ದಿನ" ಅಂತ ಇಷ್ಟಗಲ ನಗುತ್ತಿದ್ದರು ರಾಮಣ್ಣ. “ಊರಿನ ಜನ ಹಾಕೋ ಥರದ್ದು ಬಟ್ಟೆ ಮಾಡ್ಕೊಡಿ” ಅಂತ ಕ್ಲಾತ್ ಮರ್ಚೆಂಟುಗಳಾದ ಹನುಮಣ್ಣ ಮತ್ತೆ ಜಾಕಿರ್ ಆಗಾಗ ಕೇಳಿಕೊಂಡು ಬರುತ್ತಿದ್ದರು, ಆದರೆ ಪ್ರತೀ ಸಲ ಅವರು ನಿರಾಸೆಯಿಂದ ಬರಿಗೈಯಲ್ಲಿ ವಾಪಸ್ಸು ಹೋಗಬೇಕಾಗುತ್ತಿತ್ತು. “ಏನೇ ಹೇಳು, ಗುಲಬರ್ಗಾದಲ್ಲಿ ಸಿಗೋ ಥರ ಹತ್ತಿ ಇನ್ನೆಲ್ಲೂ ಸಿಗಲ್ಲ. ಉಣ್ಣೆ ಅಂದರೆ ಶಹಾಪುರದ್ದೇ ಆಗಬೇಕು ನೋಡು” ಅಂತ ಯಾವಾಗಲೂ ಬಟ್ಟೆಗಳ ವಿಷಯವನ್ನೇ ಅವರು ಮಾತಾಡುತ್ತಿದ್ದರು. ಇಷ್ಟು ಸಾಲದು ಅಂತ, ತಂಗಪಲ್ಲಿಯಿಂದ ರೇಷ್ಮೆ ಹುಳುಗಳನ್ನು ಬೇರೆ ತಂದು ಸಾಕಿಕೊಂಡಿದ್ದರು! ಜನ ಏನೆಂದುಕೊಳ್ಳುತ್ತಾರೆ ಅನ್ನುವ ಸಣ್ಣ ಗೊಡವೆಯೂ ಇಲ್ಲದೇ ತಮ್ಮಿಷ್ಟ ಬಂದಂತೆ ಜೀವನ ನಡೆಸಿದ್ದವರು ರಾಮಣ್ಣ ರಾಯರು. 

ಟಿವಿ ಚಾನಲ್ ಚೇಂಜ್ ಮಾಡುತ್ತಿದ್ದ ವಿಜಿ ತನ್ನದೇ ಸಂದರ್ಶನ ಕಂಡಾಗ ಚಾನಲ್ ಬದಲಾಯಿಸುವುದನ್ನು ನಿಲ್ಲಿಸಿದ.

"ನಿಮ್ಮ ಈ ಯಶಸ್ಸಿನ ಗುಟ್ಟೇನು?" ಅಂತ ಕೇಳುತ್ತಿದ್ದಳು ನಿರೂಪಕಿ.

"ಗುಟ್ಟು" ಅನ್ನುವ ಪದ ಕೇಳಿದ ಕೂಡಲೇ, ವಿಜಿಯ ತಲೆಯಲ್ಲಿ ಬಾಲ್ಯದ ಅದೆಷ್ಟೋ ನೆನಪುಗಳು ಸರಸರನೆ ಬಂದುಹೋದವು. ಅಜ್ಜನ ತೊಡೆಯ ಮೇಲೆ ಕುಳಿತುಕೊಂಡು ಕೈತುತ್ತು ತಿನ್ನುವಾಗ, "ಅಜ್ಜಾ, ನೀವು ಮಾಡುವ ಬಟ್ಟೆಯನ್ನ ಯಾಕೆ ಯಾರೂ ತೆಗೆದುಕೊಳ್ಳುವುದಿಲ್ಲ?" ಅಂತ ಮುಗ್ಧವಾಗಿ ತಾನು ಪ್ರಶ್ನಿಸುತ್ತಿದ್ದದ್ದು ನೆನಪಿಗೆ ಬಂತು. ಅಜ್ಜ ಒಂಚೂರೂ ಬೇಸರಿಸಿಕೊಳ್ಳದೆ, "ಯಾಕಂದರೆ ಅವೆಲ್ಲಾ ಅತ್ಯಂತ ವಿಶೇಷವಾದ ಬಟ್ಟೆಗಳು ಅದಿಕ್ಕೇ" ಅಂತಿದ್ದ. ಏನೂ ಅರ್ಥವಾಗದೆ ತಲೆ ಕೆರೆದುಕೊಳ್ಳುತ್ತಾ "ಅಜ್ಜಾ…ನಂಗೇನೂ ಅರ್ಥ ಆಗ್ಲಿಲ್ಲ" ಅಂದಾಗ ಅಜ್ಜ ಮೆಲ್ಲನೆ ಅವನ ಬಳಿ ಬಂದು "ಶ್, ಅದೊಂದು ದೊಡ್ಡ ಗುಟ್ಟು" ಅಂತ ಕುತೂಹಲ ಮೂಡಿಸುತ್ತಿದ್ದ. "ಏನದು ಬೇಗ ಹೇಳೂ" ಅಂತ ಕೇಳಿದಾಗ, ಅಜ್ಜ ಮೆತ್ತಗೆ ಇವನ ಕಿವಿಯಲ್ಲಿ "ಆ ಗುಟ್ಟು ಏನಪ್ಪಾ ಅಂದ್ರೆ…ನೀನು ಯಾರಿಗೂ ಹೇಳೋ ಹಂಗಿಲ್ಲ, ಸರೀನಾ? ಆ ಗುಟ್ಟು ಏನಪ್ಪಾ ಅಂದ್ರೆ…ನೀನು…ನೀನು ದೊಡ್ಡವನಾದ ಮೇಲೆ ಹೇಳ್ತೀನಿ ಹೋಗು" ಅಂತ ಅಂದು ಬೊಚ್ಚುಬಾಯಿ ನಗು ನಗುತ್ತಿದ್ದ. ಅಜ್ಜನಿಗೆ ವಿಜಿಯನ್ನು ಈ ರೀತಿ ಆಟ ಆಡಿಸುವುದು ಒಳ್ಳೇ ತಮಾಷೆಯ ವಿಷಯವಾಗಿತ್ತು. ವಿಪರ್ಯಾಸ ಅನ್ನುವಂತೆ ಅಜ್ಜ ಸಾಯುವ ಕೆಲವೇ ದಿನಗಳ ಮುಂಚೆ ವಿಜಿಗೆ ಆ "ಗುಟ್ಟು" ಹೇಳಿದ್ದ!

"ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಈ ಮಟ್ಟಕ್ಕೆ ಫೇಮಸ್ ಆಗಿರೋದು ನಿಜಕ್ಕೂ ಅಪರೂಪ. ನಮ್ಮ ಬಹಳಷ್ಟು ಪ್ರೇಕ್ಷಕರೂ ಈ ಪ್ರಶ್ನೆ ಕೇಳ್ತಾ ಇದಾರೆ – ನಿಮ್ಮ ಯಶಸ್ಸಿನ ಗುಟ್ಟು ಏನು?" ಅಂತ ನಿರೂಪಕಿ ಮತ್ತೊಮ್ಮೆ ಕೇಳಿದಳು. 

"ನನ್ನ ಅಜ್ಜನ ಆಶೀರ್ವಾದ ಹಾಗೂ ಆ ದೇವರ ದಯೆ" ಅಂತ ಚಿಕ್ಕದಾಗಿ ಉತ್ತರ ಕೊಟ್ಟಿದ್ದ ವಿಜಿ!

ಈ ಯಶಸ್ಸಿಗೆ ಕಾರಣಗಳನ್ನು ಹೇಳುವಾಗ ಶೂಲಿಯ ಹೆಸರನ್ನು ಯಾಕೆ ತಾನು ಪ್ರಸ್ತಾಪಿಸಲಿಲ್ಲ ಅಂತ ವಿಜಿಗೆ ಆಶ್ಚರ್ಯವಾಯಿತು. ಫ್ರೆಂಚ್ ಹುಡುಗಿ ಶೂಲಿ ತನ್ನ ಹಳ್ಳಿಗೆ ಬಂದಿರದಿದ್ದರೆ ತನ್ನ ಬಗ್ಗೆ, ಆ ಬಟ್ಟೆಗಳ ಬಗ್ಗೆ ಇಡೀ ಪ್ರಪಂಚಕ್ಕೆ ಗೊತ್ತಾಗುತ್ತಿತ್ತಾದರೂ ಹೇಗೆ? ಆಗಿನ್ನೂ ಅಜ್ಜ ತೀರಿ ಹೋಗಿ ಮೂರು ತಿಂಗಳಾಗಿತ್ತು ಅಷ್ಟೇ. ವೀರಗಲ್ಲುಗಳ ಮೇಲೆ ಥೀಸಿಸ್ ಮಾಡಲಿಕ್ಕೆ ಅಂತ ಆ ಹಳ್ಳಿಗೆ ಬಂದಿದ್ದಳು ಶೂಲಿ. ಅವಳಿಗೆ ಫ್ರೆಂಚ್ ಬಿಟ್ಟರೆ ಒಂಚೂರು ಹರುಕು ಮುರುಕು ಇಂಗ್ಲೀಶ್ ಬರುತ್ತಿತ್ತು. ಲಿಂಗೇರಿಯಲ್ಲಿ ಇಂಗ್ಲೀಶ್ ಬರುತ್ತಿದ್ದದ್ದು ವಿಜಿಗೆ ಮಾತ್ರ. ಅವನ ಇಂಗ್ಲೀಶ್ ಕೂಡ ಹರುಕು ಮುರುಕು ಆಗಿದ್ದರೂ, ವಿಚಾರ ವಿನಿಮಯಕ್ಕೆ ಸಾಕಾಗುವಷ್ಟಿತ್ತು. ಸುಮಾರು ಎರಡು ತಿಂಗಳ ಕಾಲ ಅವಳ ಅನಧಿಕೃತ 'ಗೈಡ್' ಆಗಿಬಿಟ್ಟಿದ್ದ ವಿಜಿ. ಅವಳು ತನ್ನ ಹೆಸರನ್ನು ಜೂಲಿ ಅಂತ ಬರೆದುಕೊಂಡರೂ, ಹೇಳಬೇಕಾದರೆ ಅತ್ಲಾಗೆ ಜೂಲಿಯೂ ಅಲ್ಲ, ಶೂಲಿಯೂ ಅಲ್ಲ ಹಾಗೊಂಥರಾ ಹೇಳುತ್ತಿದ್ದಳು. ಮೊದಮೊದಲಿಗೆ ವಿಜಿ ಅವಳನ್ನು ಜೂಲಿ ಅಂತ ಕರೆದಾಗ, ಅವಳು ವಿಜಿಯನ್ನು ತಿದ್ದಲು ಹೋದದ್ದೇ ಬಂತು, ಇವನು ಅವಳನ್ನು 'ಶೂಲಿ' ಅಂತಲೇ ಕರೆಯಲು ಶುರುಮಾಡಿಕೊಂಡ. ಅವಳಿಗೆ ಅದು ಇಷ್ಟವಾಗುತ್ತಿತ್ತು ಕೂಡ. ಅವಳು ನಕ್ಕಾಗ ಕಣ್ಣು ಕಿರಿದಾಗಿ ತುಟಿಯ ಪಕ್ಕ ಗೆರೆಗಳು ಮೂಡುತ್ತಿದ್ದವು. ಹಣೆಯ ಮೇಲಿದ್ದ ಸಣ್ಣಸಣ್ಣ ಕಪ್ಪು ಮಚ್ಚೆಗಳು ಅವಳನ್ನು ಮುದ್ದಾಗಿ ಕಾಣುವಂತೆ ಮಾಡುತ್ತಿತ್ತು.

"ಅಣ್ಣಾ ನೀವು ಟಿವಿಯಲ್ಲಿ ಬಂದಿದ್ದನ್ನು ಬೆಳಗ್ಗೇನೇ ನೋಡಿದೆ" ಅಂತ ಪಕ್ಕದ ಮನೆಯ ಹುಡುಗ ಸೋಮೇಶ ಕಿಟಕಿಯಾಚೆಯಿಂದಲೇ ಕೂಗಿದ. ಬೆಳಗ್ಗೆಯಿಂದ ಐದಾರು ಜನ ಗೆಳೆಯರು ಕೂಡ ಫೋನ್ ಮಾಡಿ ವಿಶ್ ಮಾಡಿದ್ದರು. ಶೂಲಿಯನ್ನು ಮರೆತಿದ್ದಕ್ಕಾಗಿ ವಿಜಿಗೆ ತಪ್ಪಿತಸ್ಥ ಭಾವನೆ ಕಾಡತೊಡಗಿತು. ಮೊದಲ ದಿನವೇ “ನಂಗೆ ನಿಮ್ಮೂರಿನ ಪೂರ್ತ ಪರಿಚಯ ಮಾಡಿಕೊಡಿ” ಅಂತ ದುಂಬಾಲು ಬಿದ್ದಿದ್ದಳು ಶೂಲಿ. "ನಂ ಹಳ್ಳಿಯ ಹೆಸರು ಹೇಗೆ ಬಂತು ಅಂತನಾ? ಅಲ್ಲಿ ನೋಡಿ ಏರಿ ಮೇಲೆ ಶಿವಪ್ಪನ ಗುಡಿ ಇದೆಯಲ್ಲಾ, ಹಾಗಾಗಿ ನಮ್ಮೂರಿಗೆ ಲಿಂಗೇರಿ ಅಂತ ಹೆಸರು ಬಂತು" ಅಂತ ವಿಜಿ ಹೇಳ್ತಾ ಇದ್ರೆ, ಶೂಲಿ ಎಲ್ಲವನ್ನೂ ತನ್ನ ಹ್ಯಾಂಡೀ ಕ್ಯಾಮ್ ಅಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಾ ಇದ್ದಳು. “ಒಂದು ಮೂರ್ನಾಕು ಕಡೆ ಈ ವೀರಗಲ್ಲುಗಳು ಇವೆ. ಊರಾಚೆ ಪಾಳುಬಿದ್ದಿರೋ ಒಂದು ಹಳೆಯ ಮಸೀದಿ ಇದೆ, ಸುಮಾರು ನಾನೂರು ವರ್ಷ ಹಳೇದು. ಅಷ್ಟೇ, ಇನ್ನೇನೂ ಸ್ಪೆಶಲ್ ಇಲ್ಲ ನಮ್ಮೂರಲ್ಲಿ" ಅಂದಾಗ ಅವಳು ಅವಾಕ್ಕಾಗಿ "ನಿಮ್ಮ ಜನಕ್ಕೆ ಚರಿತ್ರೆಯ, ಇತಿಹಾಸದ ಬೆಲೆ ಗೊತ್ತೇ ಇಲ್ಲ" ಅಂತ ನಕ್ಕಿದ್ದಳು. ಪ್ರತಿಯೊಂದು ವೀರಗಲ್ಲಿನ ಮುಂದೆಯೂ ದಿನಗಟ್ಟಲೆ ಕುಳಿತುಕೊಂಡು ಅದೇನೇನೋ ನೋಟ್ಸ್ ಮಾಡಿಕೊಳ್ಳುತ್ತಾ ಇದ್ದಳು. ಯಾವತ್ತೋ ಒಂದು ದಿನ ಮಾತಿನ ಮಧ್ಯ ತನ್ನ ಅಜ್ಜನ ಬಟ್ಟೆಯ ತಯಾರಿಕೆಯ ಬಗ್ಗೆ ಹೇಳಿದಾಗ, ನಾನದನ್ನ ಇವತ್ತೇ ನೋಡಬೇಕು ಅಂತ ರಚ್ಚೆ ಹಿಡಿದುಬಿಟ್ಟಿದ್ದಳು.

ಮೊದಲ ಸಲ ಅಜ್ಜನ ಬಟ್ಟೆ ತಾಯಾರಿಕೆ ಕೋಣೆಯನ್ನು ನೋಡಿದಾಗ ಶೂಲಿ ಕಣ್ಣುಗಳಲ್ಲಿ ಕಂಡ ಬೆರಗನ್ನು ವಿಜಿ ಇನ್ನೂ ಮರೆತಿಲ್ಲ. ತನ್ನ ಅಜ್ಜ ಪಟ್ಟ ಕಷ್ಟಗಳು, ಊರಿನವರ ಮೂದಲಿಕೆ, ಅಜ್ಜನ ತಪಸ್ಸಿನಂಥ ಶ್ರದ್ಧೆ, ಬಟ್ಟೆ ಅಂದರೆ ಹೀಗೇ ಇರಬೇಕು ಅಂತ ಅಜ್ಜ ಒದ್ದಾಡುತ್ತಿದ್ದ ರೀತಿ ಎಲ್ಲವನ್ನೂ ವಿವರವಾಗಿ ವಿಜಿ ಹೇಳುತ್ತಿದ್ದರೆ, ಅಜ್ಜಿಯ ಬಳಿ ಕಥೆ ಕೇಳಿಸಿಕೊಳ್ಳುವ ಪುಟ್ಟ ಮಗುವಿನಂತೆ ಶೂಲಿ ಬಾಯಿಬಿಟ್ಟುಕೊಂಡು ಕೇಳುತ್ತಿದ್ದಳು. ಕಿಟಕಿಯ ಸಂದಿಯಿಂದ ತೂರಿಬಂದ ಸೂರ್ಯನ ಕಿರಣಗಳು ಅವಳ ನೀಳವಾದ ಕತ್ತನ್ನು ಇನ್ನೂ ಸುಂದರವಾಗಿಸಿತ್ತು! ಒಂದೆರಡು ಬಟ್ಟೆಗಳನ್ನು ಅವಳೂ ಟ್ರೈ ಮಾಡಿ, "ಇವು ಅಪ್ಸರೆಯರು ಹಾಕುವ ಬಟ್ಟೆಗಳಲ್ಲ, ಹಾಕಿಕೊಂಡ ಪ್ರತಿಯೊಬ್ಬಳಿಗೂ ತಾನೇ ಅಪ್ಸರೆ ಅನ್ನಿಸುವಂತೆ ಮಾಡುವ ಚಮತ್ಕಾರ ಇರುವ ಬಟ್ಟೆಗಳು ಇವು" ಅಂತ ಇಷ್ಟಗಲ ನಕ್ಕಿದ್ದಳು! ಮುಂದೊಂದು ದಿನ ಅವಳ ಹ್ಯಾಂಡಿ ಕ್ಯಾಮ್ ದಾಖಲಿಸಿಕೊಳ್ಳುತ್ತಿದ್ದ ಚಿತ್ರಗಳು ಫ್ರೆಂಚ್ ಚಾನೆಲ್ ಒಂದರಲ್ಲಿ ಯಶಸ್ವೀ ಡಾಕ್ಯುಮೆಂಟರಿ ಆಗುತ್ತದೆ ಅಂತ ಅವನಿಗಿರಲೀ, ಖುದ್ದು ಶೂಲಿಗೂ ಗೊತ್ತಿರಲಿಲ್ಲ. ನಂತರ ಅದೇ ಡಾಕ್ಯುಮೆಂಟರಿ ಬಿಬಿಸಿಯಲ್ಲಿ ಪ್ರಸಾರವಾಗಿದ್ದೇ ತಡ, ನಮ್ಮ ದೇಶದ ಟಿವಿ ಚಾನಲ್ಲುಗಳು ಹೆಮ್ಮೆಯಿಂದ ಇವನನ್ನು ಸಂದರ್ಶಿಸಲು ಮುಗಿಬಿದ್ದವು. ಅವಳಿಗೊಂದು ಥ್ಯಾಂಕ್ಸ್ ಹೇಳೋಣ ಅಂದರೆ, ವಿಜಿಗೆ ಅವಳ ಫೋನ್ ನಂಬರ್ ಸಹ ಗೊತ್ತಿರಲಿಲ್ಲ.

ಟಿವಿಯಲ್ಲಿನ ನಿರೂಪಕಿ "ದೊಡ್ಡದೊಡ್ಡ ಕಂಪನಿಗಳಿಗೆ ನಿಮ್ಮ ತಂತ್ರಜ್ಞಾನವನ್ನು ಮಾರಲು ನೀವೇಕೆ ನಿರಾಕರಿಸಿದ್ದು?" ಅಂತ ಕೇಳಿದಾಗ, "ಇಲ್ಲ, ನನ್ನ ಅಜ್ಜ ಹಣ ಮಾಡುವ ಉದ್ದೇಶದಿಂದ ಈ ಹವ್ಯಾಸ ಇಟ್ಟುಕೊಂಡಿರಲಿಲ್ಲ. ಬಟ್ಟೆ ಬರೀ ಮಾನ ಮುಚ್ಚುವುದಕ್ಕೆ ಮಾತ್ರ ಅಲ್ಲ, ಅದು ಮನಸ್ಸಿಗೆ ಸಂತೋಷ ಕೊಡುವಂಥದ್ದು ಆಗಿರಬೇಕು ಅನ್ನುತ್ತಿದ್ದ ನಮ್ಮಜ್ಜ. ನಾನು ಅವರು ತೋರಿಸಿಕೊಟ್ಟ ದಾರಿಯಲ್ಲೇ ಸಾಗುತ್ತೇನೆ. ನಮ್ಮೂರಲ್ಲೇ ಸಹಾಯಕ್ಕೆ ಕೆಲವರನ್ನು ಇಟ್ಟುಕೊಳ್ಳೋಣ ಅನ್ನುವ ಇರಾದೆ ಇದೆ, ನೋಡೋಣ. ನನಗೆ ಸಂಖ್ಯೆಯ ದೃಷ್ಟಿಯಿಂದ ಬೆಳೆಯುವ ಉದ್ದೇಶ ಇಲ್ಲ. ವರ್ಷಕ್ಕೆ ಇಪ್ಪತ್ತೇ ಬಟ್ಟೆ ತಯಾರಿಸಿದರೂ, ಇಪ್ಪತ್ತು ನಗುಮುಖಗಳನ್ನು ಕಾಣಲು ಇಷ್ಟ ಪಡುತ್ತೇನೆ" ಅಂದಿದ್ದ ವಿಜಿ!

ವಿಜಿಗೆ ಅಜ್ಜನ ಜೊತೆ ಕೊನೆಯ ಸಲ ಮಾತಾಡಿದ್ದು ಇನ್ನೂ ನೆನಪಿದೆ. ನಡುಗುವ ಸುಕ್ಕು ಕೈಗಳಿಂದ ವಿಜಿಯನ್ನು ಹತ್ತಿರ ಕೂತುಕೊಳ್ಳುವಂತೆ ಸನ್ನೆ ಮಾಡಿದ್ದ ಅಜ್ಜ. ಅಜ್ಜನ ಬಾಯಿಯ ಹತ್ತಿರ ತನ್ನ ಕಿವಿಯನ್ನು ತಂದಾಗ – "ನಿನಗೆ ಗುಟ್ಟು ಗುಟ್ಟು ಅಂತ ಸತಾಯಿಸುತ್ತಿದ್ದೆನಲ್ಲಾ, ಅಂಥಾ ದೊಡ್ಡ ಗುಟ್ಟೇನಲ್ಲಾ ಅದು. ನೋಡೂ, ನೀನು ಇಪ್ಪತ್ತು ಸಾವಿರ ಬಟ್ಟೆ ತಯಾರಿಸಿದರೆ, ಅದನ್ನು ಇನ್ನೂರಿನ್ನೂರು ರೂಪಾಯಿ ಕೊಟ್ಟು ಜನ ಕೊಂಡುಕೊಳ್ಳುತ್ತಾರೆ. ನೀನು ಇಪ್ಪತ್ತೇ ಬಟ್ಟೆ ತಯಾರಿಸಿದೆ ಅಂತಿಟ್ಟುಕೋ, ಅದೇ ಜನ ನಾ ಮುಂದು ತಾ ಮುಂದು ಅಂತ ಒಂದೊಂದಕ್ಕೆ ಇಪ್ಪತ್ತಿಪ್ಪತ್ತು ಸಾವಿರ ಕೊಟ್ಟು ಕೊಂಡುಕೊಳ್ಳುತ್ತಾರೆ. ನಮ್ಮ ಬಟ್ಟೆಯಲ್ಲಿ ಏನು ವಿಶೇಷತೆ ಇದೆ ಅನ್ನುವುದಕ್ಕಿಂತ ಮುಖ್ಯ ನಮ್ಮ ಬಟ್ಟೆಯಲ್ಲೇನೋ ವಿಶೇಷತೆ ಇದೆ ಅಂತ ಜನಕ್ಕೆ ಅನ್ನಿಸುವುದು" ಅಂದಿದ್ದ. 

ಒಂದು ಕ್ಷಣ ತುಂಬಾ ಮಿಸ್ ಮಾಡಿಕೊಂಡಂತೆ ಅನಿಸಿದರೂ, ಆ ದಿನ ತನ್ನಜ್ಜ ತನ್ನೊಡನೆಯೇ ಇದ್ದಾನೆ ಅನ್ನುವ ಭಾವನೆ ವಿಜಿಗೆ ಮೂಡಿತು. ಭಾವಚಿತ್ರದಲ್ಲಿನ ಅಜ್ಜ ಒಮ್ಮೆ ಬೊಚ್ಚುನಗು ನಕ್ಕಂತಾಗಿ, ವಿಜಿಯ ಮುಖದ ಮೇಲೂ ನಗು ಮೂಡಿತು!

******

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಲಿಂಗೇರಿ ವಿಜಿಯ ಗುಟ್ಟು: ವಾಸುಕಿ ರಾಘವನ್

  1. ನಿಜ ಅಲ್ವಾ ಅಜ್ಜನ ಬಟ್ಟೆ ತಯಾರಿಸುವ ಗುಟ್ಟು…….ಚೆನ್ನಾಗಿದೆ….ಸರ್.

  2. eshtu chennagi barediddeera! eshtu tanmayavaagi OdisikonDu hoytu andre, Viji 'Julie' hesarannu ucchariso scene alli naanE 2-3 sala French 'Julie' na pronounce maaDde. innenu… kathe bareyoke shuru maaDi pratee vaara 🙂

  3. ಕಥೆ ಚೆನ್ನಾಗಿದೆ. ಕಥೆಯೊಳಗೆ ಹೊಕ್ಕಾಗ ಹೊಸ ಉಸಿರು ಸಿಕ್ಕ೦ತೆ, ಕಥೆ ಜೀವವಾಗಿ ತಲೆಯೊಳಗೆ ಖ೦ಡಿತಾ ಕೂರುತ್ತದೆ. ಬರೆಯುತ್ತಿರಿ

Leave a Reply

Your email address will not be published.