ಲಾಟರಿ ಟಿಕೇಟು: ಜೆ.ವಿ.ಕಾರ್ಲೊ

ಲಾಟರಿ ಟಿಕೇಟು
-ಆಂಟನ್ ಚೆಕೊವ್
ಅನುವಾದ: ಜೆ.ವಿ.ಕಾರ್ಲೊ

ರಾತ್ರಿ ಊಟ ಮುಗಿಯುತ್ತಿದ್ದಂತೆಯೇ ಕೈಯಲ್ಲಿ ಪತ್ರಿಕೆಯನ್ನು ಹಿಡಿದು ಇವಾನ್ ಡಿಮಿಟ್ರಿಚ್ ಸೋಫಾದ ಮೇಲೆ ಮೈಚೆಲ್ಲಿದ. ವರ್ಷಕ್ಕೆ ಸಾವಿರದಿನ್ನೂರು ರೂಬಲುಗಳನ್ನು ದುಡಿಯುತ್ತಿದ್ದ ಅವನ ಸಂಸಾರ ನೌಕೆ ಯಾವುದೇ ವಿಘ್ನಗಳಿಲ್ಲದೆ ಸುಗಮವಾಗಿ ಸಾಗುತ್ತಿತ್ತು.
“ನಾನಿವತ್ತು ಪತ್ರಿಕೆಯನ್ನು ನೋಡುವುದನ್ನೇ ಮರೆತು ಬಿಟ್ಟೆ..” ಊಟದ ಮೇಜನ್ನು ಸ್ವಚ್ಛಗೊಳಿಸಲು ಬಂದಿದ್ದ ಅವನ ಹೆಂಡತಿ ಹೇಳಿದಳು. “ಹಾಗೇ ಲಾಟರಿ ಫಲಿತಾಂಶ ಬಂದಿದೆಯಾ ನೋಡಿ.” ಎಂದಳು.
ಡಿಮಿಟ್ರಿಚ್ ಪತ್ರಿಕೆಯ ಪುಟಗಳನ್ನು ತಿರುವುತ್ತಾ, “ಬಂದಿದೆ ಕಣೆ. ನೀನ್ಯಾವಾಗ ಲಾಟರಿ ಟಿಕೆಟ್ ತೆಗಂಡೆ?” ಎಂದು ಕೇಳಿದ.

“ಮೊನ್ನೆ ಮಂಗಳವಾರ ಕಣ್ರಿ.”
“ನಂಬರ್ ಹೇಳು.”
ಆಕೆ ಒಳಗೆ ಹೋಗಿ ಲಾಟರಿ ಟಿಕೆಟನ್ನು ತಂದಳು.
“ಇಲ್ಲಿ ಕೇಳಿ… ಸೀರಿಯಲ್ 9499 ಮತ್ತು ನಂಬರ್ 26.” ಅವಳು ಓದಿ ಹೇಳಿದಳು.
ಇವಾನನಿಗೆ ಅದೃಷ್ಟದ ಆಟಗಳಲ್ಲಿ ಕಿಂಚಿತ್ತೂ ನಂಬಿಕೆ ಇರಲಿಲ್ಲ. ಬೇರೆ ಸಂದರ್ಭದಲ್ಲಾಗಿದ್ದಿದ್ದರೆ ಅವನು ಪತ್ರಿಕೆಯಲ್ಲಿ ಲಾಟರಿ ನಂಬರನ್ನು ಹುಡುಕುವ ಉಸಾಬರಿಗೆ ಖಂಡಿತಾ ಹೋಗುತ್ತಿರಲಿಲ್ಲ. ಇವತ್ತು ಅವನಿಗೆ ಬೇರಾವುದೇ ಕೆಲಸಗಳಿರಲಿಲ್ಲವಷ್ಟೇ ಅಲ್ಲದೆ ಪತ್ರಿಕೆಯೂ ಕೈಯಲ್ಲಿತ್ತು. ಅವನು ಲಾಟರಿ ಫಲಿತಾಂಶ ಪ್ರಕಟವಾಗಿದ್ದ ಕಾಲಮ್ಮಿನ ಮೇಲಿಂದ ಬೆರಳನ್ನು ಜಾರಿಸುತ್ತಾ ಕೆಳಗೆ ತಂದ. ಅವನ ಸಿನಿಕತನಕ್ಕೆ ಸವಾಲೆಸೆಯುವಂತೆ ಅವನ ಬೆರಳು ಅವನು ಹುಡುಕುತ್ತಿದ್ದ ಸಂಖ್ಯೆ 9499 ರ ಮೇಲೆ ನಿಂತಿತು! ಅವನು ಆಶ್ಚರ್ಯದಿಂದ ತನ್ನ ಕಣ್ಣುಗಳನ್ನೇ ನಂಬದಾದ. ಯಾರೋ ಮುಖದ ಮೇಲೆ ತಣ್ಣೀರೆರೆಚಿದಂತೆ ಪತ್ರಿಕೆ ಅವನ ಕೈಯಿಂದ ಜಾರಿ ಕೆಳಗೆ ಬಿದ್ದಿತು. ಟಿಕೆಟ್ ನಂಬರ್ ನೋಡುವಷ್ಟು ತಾಳ್ಮೆ ಅವನಿಗಿರಲಿಲ್ಲ. ಅವನ ಹೊಟ್ಟೆಯ ತಳದಿಂದ ಸಂತೋಷದ ಬುಗ್ಗೆಯೊಂದು ಮೇಲೆದ್ದು ಅವನ ಮೈಮನವನ್ನೆಲ್ಲಾ ಆವರಿಸಿಕೊಂಡಿತು.

“ಮಾಶಾ!!” ಅವನು ಮಡದಿಗೆ ಕೂಗಿ ಹೇಳಿದ, “ನಂಬರ್ 9499 ಇಲ್ಲಿದೆ ಕಣೆ!”
ಅವನ ಹೆಂಡತಿ ಅವಸವರದಿಂದ ಅಡುಗೆ ಕೋಣೆಯಿಂದ ಓಡೋಡುತ್ತಾ ಎಂಬಂತೆ ಹೊರಗೆ ಬಂದಳು. ಅವನ ಮುಖದ ಮೇಲಿನ ಭಾವನೆಗಳನ್ನು ಓದಿದ ಅವಳಿಗೆ, ಅವನು ಸುಳ್ಳು ಹೇಳುತ್ತಿಲ್ಲವೆಂದು ಖಾತ್ರಿಯಾಯ್ತು. ಆದರೂ,
“ನಂಬರು ನಿಜವಾಗ್ಲೂ ಇದೆಯೇನ್ರಿ?” ಕಣ್ಣುಗಳನ್ನು ಹಿರಿದಾಗಿಸುತ್ತಾ ಅವಳು ಕೇಳಿದಳು.

“ಇದೆ ಕಣೆ… ಇರಬಹುದು!.. ನಾನು ಸೀರಿಯಲ್ನಷ್ಟೇ ನೋಡಿದ್ದು ಕಣೆ ಮಾಶಾ.. ಆದರೂ..” ಹುಚ್ಚುಚ್ಚಾಗಿ ನಗುತ್ತಾ ಹೇಳಿದ ಇವಾನ್. ಆಕೆಯ ಮುಖವೂ ಕೂಡ ಖುಷಿಯಿಂದ ಅರಳಿತು. ಲಾಟರಿ ಹೊಡೆದ ನಂಬರನ್ನು ನೋಡಬೇಕೆಂದು ಅವಳಿಗೂ ಅನಿಸಲಿಲ್ಲ. ಲಾಟರಿ ಹೊಡೆದಿದೆ ಎಂದು ಕಲ್ಪಿಸಿಕೊಳ್ಳುವುದೇ ಒಂದು ವಿಶಿಷ್ಟ ಅನುಭವ!
“ಆ ಸೀರಿಯಲ್ ನಂಬರ್ ನಮ್ಮ ಟಿಕೆಟಿನದೇ ಕಣೇ. ನಮಗೇ ಲಾಟರಿ ಹೊಡೆಯುವ ಅವಕಾಶ ಖಂಡಿತಾ ಇದೆ” ಮೌನ ಮುರಿಯುತ್ತಾ ಹೇಳಿದ ಇವಾನ್.
“ಆದರೂ.. ಒಮ್ಮೆ ನೋಡಿರಲ್ಲ?”

“ಇರು ಮಾರಾಯ್ತಿ. ನಿರಾಶೆ ಪಡಲು ಸಮಯವಕಾಶ ಬೇಕಾದಷ್ಟಿದೆ! ಅವಸರ ಏಕೆ?.. ನೋಡ್ತೀನಿ ಇರು. ಬಹುಮಾನದ ಮೊತ್ತ ಎಷ್ಟಂದೆ?.. ಎಪ್ಪತ್ತೈದು ಸಾವಿರ ಅಂದಿದ್ದೆ ಅಲ್ಲ?.. ಇದು ಬರೇ ಹಣ ಅಲ್ಲ ಕಣೆ, ಅಧಿಕಾರ! ಬಂಡವಾಳ!! ಟಿಕೆಟು ನಂಬರ್ 26 ಅಲ್ವಾ?.. ನೋಡ್ತೇನೆ ಇರು.. ಒಂದು ವೇಳೆ ಲಾಟರಿ ನಮ್ಮ ನಂಬರಿಗೇ ಹೊಡಿತು ಅಂದ್ಕೊ… ಆಗ..? ಏನಂತೀಯಾ?”
ಅವರು ಒಬ್ಬರನ್ನೊಬ್ಬರು ನೋಡಿ ಜೋರಾಗಿ ನಗಲಾರಂಭಿಸಿದರು. ಲಾಟರಿ ಗೆಲ್ಲುವ ವಿಚಾರವೇ ಅವರನ್ನು ಚಕಿತಗೊಳಿಸಿತು. ಒಂದು ವೇಳೆ ಅಷ್ಟು ದೊಡ್ಡ ಮೊತ್ತದ ಲಾಟರಿ ಅವರಿಗೇ ಹೊಡೆದರೆ, ಅಷ್ಟು ಹಣವನ್ನು ಏನು ಮಾಡುವುದು, ಏನು ಖರೀದಿಸುವುದು, ಎಲ್ಲಿ ಹೋಗುವುದು ಎಂಬುದನ್ನು ಅವರು ಕನಸಿನಲ್ಲೂ ಕಲ್ಪಿಸಿಕೊಂಡಿರಲಿಲ್ಲ.

ಪತ್ರಿಕೆಯನ್ನು ಕೈಯಲ್ಲಿಡಿದುಕೊಂಡೇ ಇವಾನ್ ಸೋಫಾದ ಮೇಲಿಂದೆದ್ದು ಊಟದ ಮನೆಯೊಳಗೆ ಅಡ್ಡಾಡತೊಡಗಿದ. ಅವನ ಮನಸ್ಸು ಅಷ್ಟರಲ್ಲೇ ಕಾಲ್ಪನಿಕ ಜಗತ್ತಿನೊಳಗೆ ವಿಹರಿಸತೊಡಗಿತ್ತು.
“ಒಂದು ವೇಳೆ ನಮ್ಮ ಟಿಕೆಟಿಗೇ ಲಾಟರಿ ಹೊಡಿತು ಅಂತಿಟ್ಕೊ ಮಾಶಾ, ನಮ್ಮ ಜೀವನ ಶೈಲಿಯೇ ಬದಲಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಲಾಟರಿ ಟಿಕೆಟು ನಿನ್ನದು. ಒಂದು ವೇಳೆ ನನ್ನದೇ ಆಗಿದ್ದಿದ್ದರೆ ಏನು ಮಾಡುತ್ತಿದ್ದೆ ಗೊತ್ತೇನೆ?.. ಇದರಲ್ಲಿ ಒಂದು ಇಪ್ಪತ್ತೈದು ಸಾವಿರ ಫಲವತ್ತಾದ ಭೂಮಿ ಖರೀದಿಸಲು ವಿನಿಯೋಗಿಸಿ, ಹತ್ತು ಸಾವಿರದಷ್ಟು ತುರ್ತು ಕೆಲಸಕ್ಕೆಂದು ತೆಗೆದಿಡುತ್ತಿದ್ದೆ. ಉಳಿದ ಹಣವನ್ನು ಬ್ಯಾಂಕಲ್ಲಿಟ್ಟು ಬಡ್ಡಿ ಪಡೆಯುತ್ತಿದ್ದೆ.”

“ಭೂಮಿ ಖರೀದಿಸುವುದಕ್ಕೆ ನನ್ನದೂ ಸಹಮತವಿದೆ.” ಅವನ ಹೆಂಡತಿ ಗಂಭೀರವಾಗಿ ಹೇಳಿದಳು.

“ನಮಗೆ ಬೇಸಿಗೆ ಕಳೆಯಲಿಕ್ಕೆಂದೇ ಬೇರೆ ಮನೆ ಬೇಕೆಂದು ನನಗೆ ಅನಿಸುವುದಿಲ್ಲ. ಬಾಡಿಗೆಗೆ ಕೊಡುವಂತದ್ದಿರಬೇಕು. ಅಲ್ಲೂ ಆದಾಯ ಬರುವಂತಿರಬೇಕು…” ಅವನ ಮನೋಪಟಲದ ಮೇಲೆ ವಿವಿಧ ರೀತಿಯ ಒಂದಕ್ಕಿಂತ ಒಂದು ಸುಂದರವಾದ ಚಿತ್ವಗಳು ಹಾದು ಹೋಗತೊಡಗಿದವು. ಆ ಎಲ್ಲಾ ಚಿತ್ರಗಳ ಮಧ್ಯೆ ಅವನು ಇದ್ದಿರುತ್ತಿದ್ದ. ನೆಮ್ಮದಿ, ಸಂತುಷ್ಟತೆಯ ಮುಖಭಾವ. ಒಂದು ಕಡು ಬಿಸಿಲಿನ ಮಧ್ಯಾಹ್ನ, ಹೊಟ್ಟೆ ಬಿರಿಯುವಂತೆ ಉಂಡು ಜಮೀನಿನ ಅಂಚಿನಲ್ಲಿ ಹರಿಯುತ್ತಿದ್ದ ಹಳ್ಳದ ದಂಡೆಯಲ್ಲಿದ್ದ ಮರದ ಕೆಳಗೆ ಅವನು ಬಿದ್ದು ಕೊಂಡಿದ್ದ. ಅವನ ಇಬ್ಬರು ಮಕ್ಕಳು, ಒಂದು ಗಂಡು, ಮತ್ತೊಂದು ಹೆಣ್ಣು, ಸನಿಹದಲ್ಲೇ ಮರಳಿನ ಮೇಲೆ ಕಪ್ಪೆಗೂಡುಗಳನ್ನು ಕಟ್ಟುತ್ತಲೋ ಇಲ್ಲ ಚಿಟ್ಟೆಗಳ ಹಿಂದೆ ಓಡುತ್ತಲೋ ಆಟ ಆಡುತ್ತಿದ್ದವು. ನಿದ್ದೆ ತುಂಬಿದ ಅವನ ಕಣ್ಣುಗಳು ಭಾರ ತಡೆಯಲಾರದೆ ಮುಚ್ಚಿಕೊಳ್ಳಲು ಅಣಿಯಾಗುತ್ತಿದ್ದವು. ಬೆಳಿಗ್ಗೆ ಬೆಳಿಗ್ಗೆ ಎದ್ದು ಆಫೀಸಿಗೆ ಹೋಗಬೇಕೆಂಬ ಕಿರಿಕಿರಿ ಇಲ್ಲವೆಂದು ನೆನೆದು ಅವನಿಗೆ ನೆಮ್ಮದಿಯಾಯಿತು. ನಾಳೆಯಷ್ಟೇ ಏಕೆ? ನಾಡಿದ್ದೂ ಇಲ್ಲ! ಮತ್ತೆಂದಿಗೂ ಇಲ್ಲ!! ಈ ವಿಚಾರ ತಲೆಯೊಳಗೆ ಹೊಕ್ಕಿದಂತೆಯೇ ಅವನ ನಿದ್ದೆ ಮಾಯವಾಗಿ ಅವನು ಎದ್ದು ಬಯಲಿನಲ್ಲಿ ಅಣಬೆ ಆಯಲು ಹೋಗುವುದೋ, ಹಳ್ಳದಲ್ಲಿ ಮೀನು ಹಿಡಿಯುತ್ತಿದ್ದವರನ್ನು ನೋಡುವುದೋ ಎಂದು ಯೋಚಿಸತೊಡಗಿದ..

ಸೂರ್ಯ ಪಶ್ಚಿಮದ ದಿಗಂತದಲ್ಲಿ ಇಳಿಯುತ್ತಿದ್ದಂತೆ ಇವಾನ್ ಹೆಗಲಿಗೊಂದು ಟವೆಲ್ ಏರಿಸಿ, ಸೋಪಿನ ಬಾಕ್ಸನ್ನು ಹಿಡಿದುಕೊಂಡು ಸ್ನಾನಕ್ಕೆಂದು ಹಳ್ಳದ ಕಡೆಗೆ ಹೆಜ್ಜೆ ಹಾಕಿದ. ಆರಾಮವಾಗಿ ಬಟ್ಟೆಗಳನ್ನು ಕಳಚುತ್ತಾ ತೆರೆದ ಎದೆಯನ್ನು ಉಜ್ಜುತ್ತಾ ನೀರಿಗಿಳಿದ. ಸಣ್ಣ ಸಣ್ಣ ಮೀನುಗಳು ಅವನ ಪಾದಗಳನ್ನು ಮುತ್ತಿಕ್ಕುತ್ತಾ ಕಚುಗುಳಿ ಇಟ್ಟು ಸ್ವಾಗತಿಸಿದವು. ಸ್ನಾನ ಮುಗಿಯುತ್ತಿದ್ದಂತೆ ಅವನಿಗಾಗಿ ಬಿಸಿ ಬಿಸಿ ಚಹಾ ಕಾಯುತ್ತಿತ್ತು. ನಂತರ ಸಂಜೆ ಊಟದವರೆಗೆ ವೈನ್ ಸೇವನೆಯೊಂದಿಗೆ ನೆರೆಹೊರೆಯವರೊಂದಿಗೆ ಹರಟೆ!

“ಹಳ್ಳಿಯಲ್ಲಿ ಭೂಮಿ ಕೊಂಡರೆ ಎಷ್ಟೊಂದು ಅನುಕೂಲಗಳಲ್ಲವೇ” ಅವನ ಹೆಂಡತಿ ಹೇಳಿದಳು. ಆಕೆಯೂ ಕೂತಲ್ಲಿಂದಲೇ ಕನಸು ಕಾಣುತ್ತಿದ್ದಳು ಅವಳ ಮುಖವೂ ಸಂತೃಪ್ತಿಯಿಂದ ಊರಗಲ ಅರಳಿತ್ತು.
ಇವಾನ್ ಡಿಮಿಟ್ರಿಚ್ ತಾನು ಒಳ ಹೊಕ್ಕಿದ್ದ ಕಾಲ್ಪನಿಕ ಜಗತ್ತಿನಿಂದ ಇನ್ನೂ ಹೊರಬಂದಿರಲಿಲ್ಲ. ಅವನು ಹಳ್ಳಿಯಲ್ಲಿ ಶರದ್ಕಾಲದ ಆಕಸ್ಮಿಕ ಮಳೆ ಮತ್ತು ಚಳಿಯನ್ನು ಕಲ್ಪಿಸಿಕೊಳ್ಳತೊಡಗಿದ. ಮೈಯೊಳಗೆ ಸರಿಯಾಗಿ ಚಳಿ ಇಳಿಯಬೇಕಾದರೆ ಹೂದೋಟದಲ್ಲಿ ಮತ್ತು ಹಳ್ಳದ ಗುಂಟ ಬಹಳ ಹೊತ್ತು ನಡೆಯಬೇಕಾಗಿತ್ತು. ನಡೆದು ಬಂದು ಕೈಯಲ್ಲೊಂದು ದೊಡ್ಡ ಗ್ಲಾಸು ವೋಡ್ಕಾ ಹಿಡಿದು ಕುಳಿತುಕೊಂಡು ಎದುರಿಗೆ ನೆಂಚಿಕೊಳ್ಳಲು ಬೆಳ್ಳುಳ್ಳಿ, ಕರಿಮೆಣಸು ಹಾಕಿ ಕರಿದ ಒಂದು ದೊಡ್ಡ ತಟ್ಟೆ ಅಣಬೆಯ ಪಲ್ಯ ನೆನೆಸಿಕೊಂಡೇ ಅವನ ಮೈ ಪುಳಕಗೊಂಡಿತು. ಆಹ್! ಮತ್ತೊಂದು ಗ್ಲಾಸ್ ವೋಡ್ಕಾ ಖಾಲಿಯಾದರೂ ಆದೀತು! ಹಿತ್ತಲಿನಿಂದ ಮಕ್ಕಳು, ಗಾಳಿಯಲ್ಲಿ ತಾಜಾ ಮಣ್ಣಿನ ಸುವಾಸನೆಯನ್ನು ಎಬ್ಬಿಸುತ್ತಾ ಗಜ್ಜರಿ ಮತ್ತು ಮೂಲಂಗಿಯನ್ನು ಕಿತ್ತು ಕೊಂಡು ಒಳನುಗ್ಗುವ ದೃಶ್ಯ ಅವನ ಮುಂದೆ ತೇಲಿ ಬಂದು ಅವನ ತುಟಿಗಳು ಖುಷಿಯಿಂದ ಬಿರಿದವು. ಅವನ ತಲೆ ಭಾರವಾಗತೊಡಗಿತು. ಕೈಯಲ್ಲೊಂದು ವರ್ಣರಂಜಿತ ನಿಯತಕಾಲಿಕವನ್ನು ಹಿಡಿದು ಸೋಫಾದ ಮೇಲೆ ಅಡ್ಡಾಗುವ, ಹಾಗೆಯೇ ಅದನ್ನು ಮುಖಕ್ಕೆ ಮುಚ್ಚಿ ನಿದ್ದೆ ಹೋಗುವ ಕಲ್ಪನೆಯನ್ನು ಮಾಡತೊಡಗಿದ.

ಶರತ್ಕಾಲ ಮುಗಿಯುತ್ತಿದ್ದಂತೆ ಮಳೆಗಾಲ ಆರಂಭವಾಗುತ್ತಿತ್ತು. ನೀರಸ ವಾತಾವರಣ. ದಿನವಿಡೀ ಜಿಟಿಜಿಟಿ ಮಳೆ. ರೋಧಿಸುತ್ತಿರುವ ಬೋಳು ಮರಗಳು. ಹೊರಗೆ ಕಾಲಿಡುವಂತೆಯೇ ಇಲ್ಲ. ದೇಹದ ಮೂಳೆ ಮೂಳೆಗಳಗನ್ನೂ ಬೇಧಿಸಿ ನುಗ್ಗುವ ಕುಳಿರ್ಗಾಳಿ. ಮಳೆಗೆ ನೆಂದು ಕಂಪಿಸುತ್ತಿರುವ ನಾಯಿ, ಕೋಳಿ, ದನಗಳು. ಒಳಗಡೆಯೇ ಅಡ್ಡಾಡುವ ಅನಿವಾರ್ಯತೆ! ಅಡ್ಡಾಡುತ್ತಿದ್ದ ಇವಾನ್ ಒಂದು ಗಳಿಗೆ ನಿಂತು,
“ಮಾಶಾ, ಎಲ್ಲಾದರೂ ಹೊರದೇಶಕ್ಕೆ ಹೋಗಿ ಬರೋಣ ಅಂತ ಅನಿಸ್ತಾ ಇದೆ ಕಣೆ. ಏನಂತೀಯಾ?” ಎಂದ.

ವರ್ಷದ ಈ ಋತುವಿನಲ್ಲಿ ಒಂದೋ, ಫ್ರಾನ್ಸ್, ಇಟೆಲಿ ಅಥವಾ ಭಾರತಕ್ಕೆ ಹೋಗಿ ಬಂದರೆ ಹೇಗೆ ಎಂದು ಅವನು ಯೋಚಿಸುತ್ತಿದ್ದ.
“ಒಳ್ಳೆ ಐಡಿಯ ಕಣ್ರೀ.. ನನಗೂ ಹಾಗೇ ಅನಿಸುತ್ತೆ! ಮೊದಲು ಟಿಕೆಟ್ ನಂಬರ್ ಒಮ್ಮೆ ನೋಡಿ ಹೇಳ್ರಿ.” ಎಂದಳು ಅವನ ಮಡದಿ.
“ಇರಮ್ಮ ಇರು. ಯಾಕಿಷ್ಟು ಅವಸರ?” ಎನ್ನುತ್ತಾ ಅವನು ಮತ್ತೆ ಅಡ್ಡಾಡಲು ಶುರುವಿಟ್ಟುಕೊಂಡ. ಅವನ ತಲೆಯೊಳಗೆ ಏನೆಲ್ಲಾ ಯೋಚನೆಗಳು ಸುತ್ತುತ್ತಿದ್ದವು. ಒಂದು ವೇಳೆ ಮಾಶಾ ಕೂಡ ತನ್ನ ಜೊತೆ ಬರುತ್ತೇನೆಂದು ಹೊರಟರೆ!.. ಥತ್ತ್.. ಯಾರಿಗೆ ಬೇಕು ಅವಳ ಕಿರಿಕಿರಿ.. ಪ್ರಯಾಣದುದ್ದಕ್ಕೂ ‘ಮಕ್ಕಳೇನು ಮಾಡ್ತಿದ್ದಾರೋ, ಮನೆ ಕಡೆ ಏನಾಗ್ತಿದೆಯೋ.. ಇದಕ್ಕೆ ಎಷ್ಟು ಕೊಟ್ರಿ? ಜಾಸ್ತಿಯಾಯ್ತು! ನಿಮಗೆ ಬಿಡಿ, ದುಡ್ಡಿಂದು ಬೆಲೆನೇ ಗೊತ್ತಿಲ್ಲ, ನೀರಿನ ಹಾಗೆ ಖರ್ಚು ಮಾಡ್ತೀರಿ.. ಥೂ ಕರ್ಮ! ನನಗೆ ಯಾಕಾಗಿ ಬಂದ್ನೋ ಅನ್ಸುತ್ತೆ. ಮೊದ್ಲೇ ಈ ರೈಲು ಪ್ರಯಾಣ ಅಂದ್ರೆ ತಲೆ ನೋವು..’ ಎಂದು ಅವಳ ರಾಗ ಕೇಳಬೇಕು! ಒಬ್ಬನೇ ಹೋಗೊದಾಗಿದ್ರೆ ಎಷ್ಟು ಚೆನ್ನ! ಹಾಗೇ ಸ್ವತಂತ್ರವಾಗಿ ಹೊರಟಿರೋ ಹೆಣ್ಕಳ್ಳೂ ರೈಲಿನೊಳಗೆ ಇರೋದಾಗಿದ್ರೆ!,,, ಅವರ ಮಧ್ಯೆ ಹತ್ತಾರು ಬ್ಯಾಗುಗಳನ್ನು ತನ್ನ ಸುತ್ತ ಹರವಿಕೊಂಡು ವಟಗುಡುತ್ತಾ ಕುಳಿತುಕೊಂಡಿರುವ ತನ್ನ ಹೆಂಡತಿಯನ್ನು ಕಲ್ಪಿಸಿಕೊಂಡು ಅವನ ಉತ್ಸಾಹ ಜರ್ರನೆ ಇಳಿಯಿತು. ಪ್ರತಿ ನಿಲ್ದಾಣದಲ್ಲೂ ರೈಲು ನಿಂತಾಗ ಅವಳಿಗಾಗಿ ಬಿಸಿ ನೀರು, ಬ್ರೆಡ್ಡು, ಬೆಣ್ಣೆ ಎಂದು ಓಡಾಡುತ್ತಿರಬೇಕು! ದುಬಾರಿ ಅಂತ ಅವಳು ಊಟ ಖಂಡಿತಾ ಮಾಡಲಾರಳು!

ಅವನು ಹೆಂಡತಿ ಕುಳಿತಿದ್ದೆಡೆಗೊಂದು ವಾರೆ ನೋಟ ಬೀರಿದ.
ತಾನು ದುಡ್ಡು ಖರ್ಚು ಮಾಡುತ್ತಿರುವುದು ಅವಳಿಗೆ ಸರಿ ಕಾಣುತ್ತಿಲ್ಲವೆಂದು ಅವನಿಗೆ ಗೊತ್ತಿತ್ತು. ಯಾಕಂದ್ರೆ ಲಾಟರಿ ಟಿಕೆಟು ಅವಳದ್ದು. ದುಡ್ಡೂ ಅವಳದ್ದು! ನನ್ನದಲ್ಲವಲ್ಲ! ಅವಳು ಯಾಕಾಗಿ ತನ್ನಜೊತೆ ಹೊರದೇಶಕ್ಕೆ ಹೊರಟಿದ್ದಾಳೊ, ಅದೂ ಅವನಿಗೆ ಗೊತ್ತಾಗಲಿಲ್ಲ. ದಿನವಿಡೀ ಹೋಟೆಲ್ ರೂಮಲ್ಲೇ ಕುಳಿತಿದ್ದು ತನಗೂ ಹೊರಗೆ ತಿರುಗಾಡಿಕೊಂಡು ಬರಲು ಬಿಡಲಾರಳು.
ಮದುವೆಯಾದಂದಿನಿಂದ ಇಂದು ಮೊದಲ ಭಾರಿ ಇವಾನ್ ಹೆಂಡತಿಯ ಮೇಲೊಂದು ವಿಮರ್ಶಾತ್ಮಕ ದೃಷ್ಟಿಯನ್ನು ಬೀರಿದ. ಹೇಗೆ ನೋಡಿದರೂ, ತನ್ನ ಯೌವನೋತ್ಸಾಹಕ್ಕೆ ಅವಳು ಸರಿಸಾಟಿ ಎಂದು ಅವನಿಗೆ ಅನಿಸಲೇ ಇಲ್ಲ. ಮನಸ್ಸು ಮಾಡಿದರೆ ತಾನು ಈಗಲೂ ಬೇರೊಂದು ಸುಂದರ ಹೆಣ್ಣನ್ನು ಒಲಿಸಿಕೊಳ್ಳಬಲ್ಲೆ ಎಂಬ ವಿಶ್ವಾಸ ಅವನಿಗಿತ್ತು. ಅವನಿಗೆ ಹೆಂಡತಿ ಮೈಯೆಲ್ಲಾ ಅಡುಗೆ ಮನೆಯ ಜಿಡ್ಡು ಹೊರಸೂಸುವ ಒಂದು ಬಣ್ಣಗೆಟ್ಟ ಆಕಾರಗೆಟ್ಟ ಪಿಪಾಯಿಯಂತೆ ಕಾಣಿಸತೊಡದಿದಳು!

ನೇಪಲ್ಸೋ.. ಪ್ಯಾರಿಸ್ಸೋ, ಅವಳಿಗೇನು ಗೊತ್ತಾಗುತ್ತೆ? ಅವಳಿಗೆಲ್ಲಾ ಒಂದೆ. ತನ್ನ ದಾರಿಗೊಂದು ಮುಳ್ಳು, ಅಷ್ಟೇ! ತಾನೂ ಅವಳನ್ನು ಅವಲಂಬಿಸಿಕೊಳ್ಳದೆ ಬೇರೆ ದಾರಿಯಿಲ್ಲವಲ್ಲ! ಲಾಟರಿ ಹಣ ಕೈಗೆ ಸಿಕ್ಕಿದ ಕೂಡಲೆ ಖಂಡಿತ ಭದ್ರ ಮಾಡಿಕೊಂಡು ಬಿಡುತ್ತಾಳೆ. ನಾನು ಖರ್ಚು ಮಾಡುವ ಪೈಸೆಪೈಸೆಯ ಮೇಲೂ ಕಣ್ಣಿಟ್ಟು ಠೀಕಿಸುತ್ತಿರುತ್ತಾಳೆ.
ಇವಾನನ ಯೋಚನೆಗಳು ಹೆಂಡತಿಯ ಸಂಬಂಧಿಕರ ಕಡೆಗೆ ತಿರುಗಿದವು, ಅವಳಿಗೆ ಲಾಟರಿ ಹೊಡೆದಿದೆ ಎಂದು ಗೊತ್ತಾಗುವುದೇ ತಡ ಅವಳ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರೆಲ್ಲಾ ಶುಭಾಶಯಗಳನ್ನು ಕೋರುವ ನೆಪದಲ್ಲಿ ಓಡೋಡಿ ಬರುತ್ತಾರೆ. ಹಳ್ಳಿ ಗಮಾರುಗಳು. ತನ್ನ ಸಂಬಂಧಿಗಳೂ ಅಷ್ಟೇ.

ಎಲ್ಲಾ ವಿಷ ಜಂತುಗಳು!
ಅವನಿಗೆ ಹೆಂಡತಿಯ ಮುಖವೂ ಒಂದು ನಾಗಿಣಿಯಂತೆ ಕಾಣಿಸತೊಡಗಿತು.
ದುಡ್ಡು ಅಂದರೆ ಏನಂತ ಈ ಗುಗ್ಗುಗೆ ಹೇಗೆ ಗೊತ್ತಾಗಬೇಕು? ಕಂಜೂಸು ಮುಂಡೆ.!.. ಲಾಟರಿ ಏನಾದ್ರೂ ಹೊಡಿತೂ ಅಂದ್ರೆ, ಹೆಚ್ಚೆಂದರೆ ನನಗೆ ಒಂದು ನೂರು ರೂಬಲ್ ಗಳನ್ನು ಕೊಟ್ಟಾಳು ಅಷ್ಟೇ! ಉಳಿದದ್ದು ಯಾರಿಗೂ ಸಿಗದಂತೆ ಭದ್ರಪಡಿಸುತ್ತಾಳೆ.

ಇವಾನ್ ಹೆಂಡತಿಯ ಕಡೆಗೊಮ್ಮೆ ನೋಡಿದ. ಅವಳ ಕಣ್ಣುಗಳಲ್ಲಿ ತೃಪ್ತಿಯ ಬದಲು ದ್ವೇಷ, ಸಿಟ್ಟು ತುಂಬಿತ್ತು. ಅವಳ ದೃಷ್ಟಿಯೂ ಇವನತ್ತ ಹರಿಯಿತು. ಆಕೆಯೂ ಅವನಂತೆಯೇ ಹಗಲು ಕನಸುಗಳನ್ನು ಕಾಣುತ್ತಿದ್ದಳೆಂಬುದರಲ್ಲಿ ಯಾವುದೇ ಸಂಶಯಗಳಿರಲಿಲ್ಲ. ಅವಳಿಗೂ ಅವಳದೇ ಯೋಜನೆಗಳಿದ್ದವು ಎಂಬುದರಲ್ಲಿ ಸಂಶಯಗಳಿರಲಿಲ್ಲ. ಇವನ ಕನಸ್ಸುಗಳನ್ನು ಅವಳು ಸರಿಯಾಗಿ ಅರ್ಥೈಸಿಕೊಂಡಂತಿತ್ತು. ಅವಳ ದುಡ್ಡಿನ ಮೇಲೆ ಮೊದಲು ಯಾರು ಹಕ್ಕು ಮಂಡಿಸುತ್ತಾರೆಂದು ಅವಳಿಗೆ ಚೆನ್ನಾಗಿ ಅರ್ಥವಾಗಿತ್ತು.

ಬೇರೆಯವರ ದುಡ್ಡಿನ ಮೇಲಿಂದ ಕನಸುಗಳನ್ನು ಕಾಣುವುದು ಸಲೀಸು ಹೌದಾದರೂ ತಾನು ಇದಕ್ಕೆಲ್ಲಾ ಅವಕಾಶ ಕೊಡಲಾರೆ ಎಂದು ಅವಳ ಕಣ್ಣುಗಳು ಹೇಳುತ್ತಿದ್ದವು.
ಅವಳ ಮನದೊಳಗೆ ನಡೆಯುತ್ತಿದ್ದ ಮೌನ ಸಂಭಾಷಣೆ ಅವನ ಕಿವಿಗಪ್ಪಳಿಸಿತು! ಅವನೊಳಗೆ ಮತ್ತೆ ಕ್ರೋಧ ಉಕ್ಕಲಾರಂಭಿಸಿತು. ಅವಳಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂಬ ಅಭಿಲಾಷೆ ಜೋರಾಯಿತು. ಸೋಫಾ ಮೇಲಿದ್ದ ದಿನಪತ್ರಿಕೆಯನ್ನು ತನ್ನತ್ತ ಎಳೆದು ಅವನು ಪುಟಗಳನ್ನು ತಿರುವಲಾರಂಭಿಸಿದ
“ಸೀರಿಯಲ್ 9499…ಲೇ… ಲಾಟರಿ ಹೊಡೆದಿರುವುದು ನಂಬರ್ 46 ಕ್ಕೆ ಕಣೆ! ನಿನ್ನ 26 ಕ್ಕೆ ಅಲ್ಲ!!” ಅವನು ವಿಕೃತ ಖುಷಿಯಿಂದ ಹೇಳಿದ.

ನಿಧಾನವಾಗಿ ದ್ವೇಷ ಮತ್ತು ಕುರುಡು ವಿಶ್ವಾಸ ಆ ಕೊಠಡಿಯಿಂದ ಚದುರಿ ಹೋಗಿ ವಾತಾವರಣ ತಿಳಿಯಾಗಿ ಮಾಮೂಲು ಸ್ಥಿತಿಗೆ ಬಂದಿತು. ಈಗಷ್ಟೇ ಉಂಡಿದ್ದ ಅನ್ನ ಹೊಟ್ಟೆಯೊಳಗೆ ಕಲ್ಲಾಗಿ ಕುಳಿತಿರುವಂತೆ ಅವರಿಗೆ ಭಾಸವಾಯಿತು….
“ಇದೊಂದು ದರಿದ್ರ ಮನೆ..” ವಿನಾಃ ಕಾರಣ ಇವಾನ್ ಡಿಮಿಟ್ರಿಚ್ ತಾಳ್ಮೆ ಕಳೆದುಕೊಳ್ಳತೊಡಗಿದ. “ಎಲ್ಲಿ ನೋಡಿದರಲ್ಲಿ ಕಸ.! ಧೂಳು!!. ಗಲೀಜು.!!! . ಥುತ್ತ್! ಇಲ್ಲಿ ಇರೋದಕ್ಕಿಂತ ಹೊರಗೆ ಹೋಗಿ ಅಂಗಳದ ಮರಕ್ಕೆ ನೇಣು ಹಾಕ್ಕೊಂಡು ಸಾಯೋದು ಮೇಲು!” ಎಂದು ಎದ್ದು ದಾಪುಗಾಲಗಳನ್ನಿಡುತ್ತಾ ಹೊರಗೆ ಹೋದ.

ಜೆ.ವಿ.ಕಾರ್ಲೊ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Girija Jnanasundar
Girija Jnanasundar
4 years ago

ಬಹಳ ಚೆನ್ನಾಗಿದೆ.

Gerald Carlo
Gerald Carlo
4 years ago

Thank you Madam.

Karthik
Karthik
3 years ago

Anton checkov avara vanka mattu hudugaru kathe iruva ಕನ್ನಡಕ್ಕೆ ಅನುವಾದಿಸಿದ ಪುಸ್ತಕದ ಹೆಸರು ನಿಮಗೆ ತಿಳಿದಿದ್ದರೆ, ದಯವಿಟ್ಟು ನಮಗೆ ತಿಳಿಸಿ

3
0
Would love your thoughts, please comment.x
()
x