ಸಹನಾ ಪ್ರಸಾದ್ ಅಂಕಣ

ಲಾಕ್ಡೌನ್ – ವರ್ಕ್ ಫ಼್ರಮ್ ಹೋಮ್ ಮತ್ತು ಫ಼ಾರ್ ಹೋಮ್!!: ಸಹನಾ ಪ್ರಸಾದ್

ಅಬ್ಬಾ, ೪ ತಿಂಗಳು!! ಇಷ್ಟು ಸಮಯ ಒಟ್ಟಿಗೆ ಮನೆಯಲ್ಲಿ ಇದ್ದದ್ದು ನೆನಪಿಲ್ಲ. ಮೊದಲ ಸಲ ಮಾರ್ಚ್ ೨೪ರಿಂದ ಎಲ್ಲಾ ಲಾಕ್ ಎಂದು ಘೋಷಿಸಿದಾಗ ಮೊದಲು ಅನಿಸಿದ್ದು ” ಅಯ್ಯೊ, ಕೆಲಸದವಳು ಇಲ್ಲವಲ್ಲ, ಹೇಗೆ ನಿಭಾಯಿಸುವುದು” ಎಂದು. ಎಲ್ಲರೂ ಕೋವಿಡ್, ಕೋವಿಡ್ ಎಂದು ಕೂಗಾಡುತ್ತಿದ್ದರೂ ಅಷ್ಟೇನು ಭಯವಿರಲಿಲ್ಲ. ಶಾಲಾ, ಕಾಲೇಜು ರಜೆ ಎಂದಾಗ ಮನಸ್ಸು ಸ್ವಲ್ಪ ಸೀರಿಯಸ್ ಆಗಿದ್ದು ನಿಜ.
ಬೆಳಗ್ಗೆ ಎದ್ದ ತಕ್ಷಣ ಶುರುವಾದ ಕೆಲಸಗಳು ಮುಗಿಯುತ್ತಲೇ ಇಲ್ಲ, ಪಾತ್ರೆಗಳು ಸಿಂಕ್ ಅಲ್ಲಿ ಕರಗುತ್ತಲೇ ಇಲ್ಲ! ಮನೆಯ ಮೂಲೆಯಲ್ಲಿ, ಸೋಫ಼ಾದ ಹಿಂಬದಿಯಲ್ಲಿ ಕಟ್ಟಿದ ಕಸ ಉಜ್ಜಿ ತೆಗೆಯುವಷ್ಟರಲ್ಲಿ ಸಾಕು ಸಾಕಾಯಿತು. ಕೆಲಸದವಳು ೪೫ ನಿಮಿಷದಲ್ಲಿ ಮಾಡಿ ಮುಗಿಸುತ್ತಿದ್ದು ನಮಗೇಕೆ ೩-೪ ಗಂಟೆಗಳ ಕಾಲ ಹಿಡಿಯುತ್ತೆ ಎನ್ನುವುದು ಅರ್ಥ ವಾಗತೊಡಗಿತು. ದಿನಗಳು ಸರಿದಂತೆ ಸ್ವಲ್ಪ ಮಟ್ಟಿಗೆ ಮನೆಕೆಲಸ ಅಭ್ಯಾಸವಾಗತೊಡಗಿದರೂ ಕಷ್ಟ ಕಡಿಮೆಯಾಗಲಿಲ್ಲ.

ಏಪ್ರಿಲ್ ೧೫ ರಿಂದ ಆನ್ಲೈನ್ ಅಲ್ಲಿ ಎಲ್ಲ ಚಟುವಟಿಕೆಗಳು ಶುರುವಾದ ಮೇಲೆ ನಿಜವಾದ ಕಷ್ಟದ ಅರಿವಾಗತೊಡಗಿತು. ಒಂದೆಡೆ ಮನೆ ಕೆಲಸ, ಇನ್ನೊಂದೆಡೆ ಸತತವಾಗಿ ಆಫ಼ೀಸಿನ ಕೆಲಸ, ಬಾರಿ ಬಾರಿ ಫೋನ್ಕಾಲುಗಳು, ಮೀಟಿಂಗುಗಳು, ಡೆಡ್ಲೈನ್ಗಳು… ಒಂದೇ ಎರಡೇ? ಒಂದು ಮೀಟಿಂಗ್ ಮುಗಿಸಿ ತರಕಾರಿ ಹೆಚ್ಚುವುದು, ವೀಡಿಯೊ ಆಫ಼್ ಮಾಡಿ ಚಪಾತಿ ಮಾಡುವುದು, ವಾಲ್ಯೂಮ್ ಕಡಿಮೆ ಮಾಡಿ ಪಾತ್ರೆ ಬೆಳಗುವುದು ಇತ್ಯಾದಿ ಮಾಡುತ್ತಾ ಮೋಜೆನಿಸಿದರೂ ಸುಸ್ತಾಗತೊಡಗಿತು.

ಇಷ್ಟರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಹುಚ್ಚುಚ್ಚು ನಿಲುಮೆಗಳು. ಇಲ್ಲಿ ತುರಿಸಿಕೊಳ್ಳಲು ಪುರುಸೊತ್ತಿಲ್ಲ, ಅಲ್ಲಿ ತರತರಹದ ಅಡುಗೆ ತಿಂಡಿಯ ಪಟಗಳು, ನೋಡಿದ ಫ಼ಿಲಂ ಗಳ ಲಿಸ್ಟು, ಮನೇಲಿದೀನಿ ಅಂತ ಬೇಜಾರಾಗಬೇಡಿ ಅಂತ ಸಲಹೆಗಳು… ಕಿರಿಕಿರಿ ಅನಿಸಿತು. ಆದರೇನು ಮಾಡುವುದು. ಇದು ಸ್ವಾತಂತ್ರ ದೇಶ, ಯಾರು ಏನು ಬೇಕಾದರೂ, ಹೇಗೆ ಬೇಕಾದರೂ ನಿಲುಮೆ ಹಾಕಬಹುದು. ” ಇಫ಼್ ಯು ಕಾಂಟ್ ಬೀಟ್ ದೆಮ್, ಜಾಯಿನ್ ದೆಮ್” ಅವರನ್ನು ಸೋಲಿಸಲಾಗದಿದ್ದರೆ ಅವರೊಡನೆ ಸೇರಿಕೊ ಅನ್ನುವಂತೆ ನಾನು ಸಹ ಹೊಸ ರುಚಿ ಮನೆಯವರ ಮೇಲೆ ಪ್ರಯೋಗ ಮಾಡಿ, ತಟ್ಟೆಯಲ್ಲಿಇಟ್ಟು, ಮನೇಲಿದ್ದು ನಾನು ಎಷ್ಟು ಮಜಾ ಮಾಡ್ತಾ ಇದೀನಿ ಅನ್ನುವ ಪೋಸ್ಟ್ ಹಾಕತೊಡಗಿದೆ. ಆದರೆ ಸಿನೆಮಾ ನೋಡೊ ಬಗ್ಗೆ ಸುಳ್ಳು ಪೋಸ್ಟ್ ಸೃಷ್ಟಿಸಲು ಆಗಲಿಲ್ಲ. ಬಾಲ್ಕನಿಗೆ ಬರಲು ಪುರುಸೊತ್ತಿಲ್ಲ, ಇನ್ನು ಟೀವಿಯ ಬಳಿ, ಉಹೂ… ಹೊಸದಿರಲಿ, ಹಳೆ ಸಿನೆಮಾ ಹೆಸರು ಕೂಡ ನೆನಪಲ್ಲಿಇಲ್ಲ, ಇನ್ನೇನು ಹಾಕುವುದು!

ಆದರೆ ಈ ಸೋಶಿಯಲ್ ಮೀಡಿಯ ಇಣುಕಿಣುಕಿ ನೋಡುವುದು ಅಭ್ಯಾಸವಾಗತೊಡಗಿತು! ಇದರಿಂದ ಬಹಳ ಸಮಯ ವ್ಯರ್ಥವಾಗತೊಡಗಿತು. ಒಂದು ಹೊರೆ ಕೆಲಸದಲ್ಲಿ ನಾನು ಕೇಕು ಮಾಡಿದೆ, ನಾನು, ನಮ್ಮವರು ಆತುಕೂತು ಒಂದಾದ ಮೇಲೆ ಒಂದು ಮೂವಿ ನೋಡಿದೆವು ಈ ರೀತಿಯ ನಿಲುಮೆಗಳನ್ನು, ಅವರ ಸೊಗಸಾದ ಮನೆಗಳ ಪಟವನ್ನು ನೋಡಿ ಮನಸ್ಸು ಪಿಚ್ಚಿಸಲು ಶುರುವಾಯ್ತು. ಅದನ್ನು ಮರೆಸುವಂತೆ ಕೆಲಸಗಳ ಸಾಲು ಸಾಲು ಬಂದಾಗ ತೆಪ್ಪಗಾದೆ!

ಲಾಕ್ದೌನ್ ಮುಗಿದ ತಕ್ಷಣ ಖುಶಿಯಾಗಿ ಬರಮಾಡಿಕೊಂಡೆ ಮನೆ ಕೆಲಸದವಳನ್ನು. ಎಲ್ಲಿಲ್ಲಿ ಕಸ ಸಿಕ್ಕಿತು, ಮನೆ ಎಷ್ಟು ಗಲೀಜಾಗಿತ್ತು ಎಂದು ಹೇಳಬೇಕು ಅಂದುಕೊಂಡಿದ್ದ ಮಾತುಗಳೆಲ್ಲ ಗಂಟಲಲ್ಲೆ ಉಳಿದವು. ” ಅಯ್ಯೊ, ಅಕ್ಕ, ಮೈ ಬಗ್ಗುತ್ತಲೇ ಇಲ್ಲ, ಆರಾಮವಾಗಿ ೪೫ ದಿನ ಕಳೆದ ಪರಿಣಾಮ. ಹೋಗ್ಲಿ ಒಂದೋಟ ಟೀ ಕೊಟ್ಬಿಡಿ, ನಿಮ್ಮ ಕೈ ಟೀ ಮಿಸ್ಸ್ ಆಯ್ತು ಇಷ್ಟು ದಿನ!” ಸುಸ್ತಾದೆ. ಅವಳ ಡುಮ್ಮಗೆ ಖಳೆಖಳೆಯಾದ ಮುಖ, ಸಪ್ಪಗೆ ಸಣ್ಣಕ್ಕಾಗಿದ್ದ ನಾನು… ಉಫ಼್ಫ಼್. ” ನನ್ಗಂಡ ಇನ್ನು ಸ್ವಲ್ಪ ದಿನ ಹೋಗಲೇ ಬೇಡ, ಹೇಗಿದ್ರು ಸಂಬಳ ಸಿಗುತ್ತೆ ಅಂದ. ನಿಮ್ಮನ್ನು ನೆನೆಸಿಕೊಂಡು ಅಯ್ಯೊ, ಪಾಪ ಅನಿಸಿತು, ಬಂದೆ” ಅವಳ ಅಕ್ಕರೆ, ಪ್ರೀತಿಗೆ ಕರಗಿ ಇನ್ನು ಸ್ವಲ್ಪ ಜಾಸ್ತಿ ಸಕ್ಕರೆ ಹಾಕಿದೆ!!

ಈಗ ದಿನ ನಿತ್ಯ ಏರುತ್ತಿರುವ ಕೇಸುಗಳು, ಜಾಸ್ತಿಯಾಗುತ್ತಿರುವ ಕೆಲಸದ ಒತ್ತಡ. ನಮ್ಮನೆಯಲ್ಲಿ ದಿನ ” ಅಯ್ಯೊ, ಅವಳು, ಅವಳ ಗಂಡ ಎಲ್ಲಾ ಕಡೆ ಸುತ್ತುತ್ತಾರೆ. ಬೇಡ ಅಂದುಬಿಡು. ನಾವೇ ಹೇಗೋ ಮಾಡಿಕೊಳ್ಳೋಣ” ಜಾಣ ಕಿವಿಡಾಗಿ ಬಿಡುತ್ತೇನೆ ಆಗ!!

-ಸಹನಾ ಪ್ರಸಾದ್


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.