ಸೀನ್ ೧:
ಸೀತೆ: ಏನ್ರೀ ಇದು, ಎಷ್ಟು ಸಲ ಹೇಳಬೇಕು ನಿಮಗೆ. ಒದ್ದೆ ಟವೆಲು ಮಂಚದ ಮೇಲೆ ಹಾಕಬೇಡಿ ಅಂತ. ಒಗೆಯೊ ಬಟ್ಟೆ ವಾಶಿಂಗ್ ಮಶೀನಿಗೆ ಹಾಕಿ, ನೆಲದ ಮೇಲೆ ಬಿಸಾಡಬೇಡಿ. ಅಬ್ಬಾ, ಹೇಳಿ ಹೇಳಿ ಸುಸ್ತಾಯ್ತು!
ರವಿ: ಅಯ್ಯೊ, ಹೋಗೆ. ಮದುವೆ ಆಗಿ ೧೫ ವರುಷ ಆದ್ರೂ ಅದೇ ರಾಗ ಹಾಡ್ತೀಯಲ್ಲ. ಹೊಸದೇನೂ ಸಿಗಲಿಲ್ಲವಾ?
ಸೀ: ಅಲ್ಲ ರೀ, ಇಷ್ಟು ವರುಷ ಆದ್ರೂ ನೀವು ಬದಲಾಗಿಲ್ಲವಲ್ಲ. ಅದೇ ತಪ್ಪುಗಳು ಮಾಡ್ತಾ ಇದ್ರೆ ನಾ ಅದನ್ನೇ ಹೇಳಬೇಕಾಗುತ್ತೆ
ರ: ಆಯ್ತು ಕಣೆ, ಇಗೋ ನೋಡು, ಟವೆಲ್ ಹೊರಗಡೆ ಹರುವುದಕ್ಕೆ ಹೊರಟೆ. ಬಟ್ಟೆ ವಾಶಿಂಗ್ ಮಶೀನ್ ಅಲ್ಲಿ ಹಾಕಿ ನಾನೆ ಆನ್ ಮಾಡ್ತೀನಿ ಆಯ್ತ? ಎಲ್ಲಿ ಈಗ ಬೇಗ ಒಂದ್ಲೋಟ ಕಾಫ಼ಿ ಕೊಡು ನೋಡೊಣ!
ಸೀನ್ ೨:
ರೇವತಿ: ಏನ್ರೀ ಸ್ವಲ್ಪ ಈ ಕಡೆ ಬರ್ತೀರಾ?
ಸುರೇಶ: ಏನೇ ಅದು? ಕಾಣಿಸುತ್ತಾ ಇಲ್ವಾ, ಆನ್ಲೈನ್ ಕಾಲ್ ಅಲ್ಲಿ ಇದೀನಿ
ರೇ: ಸರಿ ಬಿಡಿ. ನಿಮ್ಮದು ಯಾವಾಗ್ಲೂ ಇದೇ ಆಯ್ತು. ಮನೆ ಕೆಲಸ ಎಲ್ಲಾ ನ ಒಬ್ಬಳೇ ಮಾಡಬೇಕು. ಕೂತಿರ್ತೀರ ಅದರ ಮುಂದೆ ಯಾವಾಗ್ಲೂ!
ಸು: ರಜೆ ಅಲ್ಲ ಕಣೆ ಈಗ. ವರ್ಕ್ ಫ಼್ರಮ್ ಹೋಮ್ ಅಂದರೆ ಮನೆಯಿಂದಲೇ ಆಫ಼ೀಸಿನ ಕೆಲಸ ಮಾಡೊದು!
ರೇ: ಹೋಗ್ಲಿ ಬಿಡಿ, ನಿಮ್ಮದು ಯಾವಾಗ್ಲೂ ಇದ್ದಿದ್ದೇ!
ಸೀನ್ ೩:
ಅಮ್ಮ: ಸಾಕು ಕಣೊ ಆಡಿದ್ದು. ಪಕ್ಕದ ಮನೆ ಶಾಮುನ ಕಳಿಸು. ಊಟಕ್ಕೆ ಬಾ
ಮಗ: ಅವನಿಗೂ ಇಲ್ಲೇ ಕೊಡಮ್ಮ. ಆಮೇಲೆ ಗೇಮ್ ಮುಗಿಸಿಬಿಡ್ತೀವಿ.
ಲಾಕ್ಡೌನ್ ಶುರುವಾದಾಗಲಿಂದ ಮನೆಮನೆಯ ಕತೆ ಇದು. ಒಂದೊಂದು ವಯಸ್ಸಿನವರಿಗೆ ಒಂದೊಂದು ಅನುಭವ. ಚಿಕ್ಕ ಮಕ್ಕಳು. ಸ್ಕೂಲ್ಗೆ ಹೋಗುವ ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ. ಶಾಲೆ ಇಲ್ಲ, ಪರೀಕ್ಷೆಯ ಗೋಳಿಲ್ಲ. ಹಾಯಾಗಿ ಆಟವಾಡಿಕೊಂಡು, ಟೀವಿ, ಮೊಬೈಲ್ ಗೇಮ್,ಕತೆ ಬುಕ್ಕು ಓದಿಕೊಂಡು ಆಟ ಆಡಿಕೊಂಡು ಹಾಯಾಗಿದಾರೆ. ಚಿಕ್ಕ ವಯಸ್ಸಿನ, ಮದುವೆಯಾಗದ ಟೀನೇಜರ್ಸ್ ತಮ್ಮ ತಮ್ಮ ಪ್ರಪಂಚದಲ್ಲಿ. ವಾಟ್ಸಪ್, ಜ಼ೂಮ್ ಮುಂತಾದುವುಗಳಲ್ಲಿ ಬ್ಯುಸಿ. ಹಾ, ಪ್ರೇಯಸಿ/ಪ್ರಿಯಕರನ ಭೇಟಿ ಮಾತ್ರ ಸಾಧ್ಯವಿಲ್ಲ. ಆದರೆ ಈಗಿನ ಕಾಲದ ಹತ್ತು ಹಲವಾರು “ಕಣ್ಣು ತಪ್ಪಿಸಿ” ಕಳಿಸಬಹುದಾದ ಮಾಧ್ಯಮಗಳಿರುವುದರಿಂದ ಯೋಚನೆಯಿಲ್ಲ.
ನವದಂಪತಿಗಳಿಗೆ ಇದು ಮತ್ತೊಮ್ಮೆ ಮಧುಚಂದ್ರ ಆಚರಿಸುವ ಸಮಯವಾಗಿರಬಹುದು. ಮದುವೆಯಾದ ಮೇಲೆ ಎಲ್ಲೂ ಹೋಗಕ್ಕೆ ಆಗಿರಲಿಲ್ಲ, ಕೆಲಸದ ಒತ್ತಡದಿಂದ, ಈಗ ಒಟ್ಟಿಗೆ ಅಡುಗೆ ಮಾಡಿಕೊಂಡು, ತಮಾಶೆ, ಪ್ರೀತಿಯಿಂದ ಬದುಕು ಸಾಗುತ್ತಲಿದೆ. ಕೆಲಸ ಹೊರೆ ಅನಿಸುತ್ತ ಇಲ್ಲ, ಇನಿಯನ ಸಂಗಡ ಹಾಯಾಗಿರುವೆ! ಇದು ಹೊಸದಾಗಿ ಮದುವೆಯಾದ ತಾನ್ಯಾಳ ಅನಿಸಿಕೆ.
ಇನ್ನು ತಂದೆ ತಾಯಂದಿರಿಗೆ ಮಕ್ಕಳನ್ನು ನೋಡಿಕೊಳ್ಳುವ ಯೋಚನೆ. ಮಕ್ಕಳಿಗೆ ಆಡಲು ಜತೆಯಿದ್ದರೆ, ನೋಡಿಕೊಳ್ಳುವರಿದ್ದರೆ ಪರವಾಗಿಲ್ಲ. ಮನೆ ಕೆಲಸ ಮಾಡಿಕೊಂಡು, ಮಕ್ಕಳನ್ನು ಸುಧಾರಿಸುವುದು ಸಾಮಾನ್ಯ ಅಲ್ಲ. ಏನೊ ಒಂದು ಬೇಯಿಸಿ ಹಾಕೋಣ ಅನ್ನುವುದು ವಯಸ್ಸಾದವರು, ಮಕ್ಕಳು ಇದ್ದರೆ ಆಗೊಲ್ಲ. ಸ್ವಲ್ಪ ದೊಡ್ಡ ಮಕ್ಕಳು ಇದ್ದರೆ ಅವುಗಳ ಆನ್ಲೈನ್ ಹೋಂವರ್ಕ್, ಕ್ಲಾಸುಗಳು,ಪ್ರಾಜೆಕ್ಟ್ ಇತ್ಯಾದಿ ಗಮನಿಸುವುದು, ಅಡುಗೆ ಕೆಲಸ, ಮನೆ ಕೆಲಸ ಇವುಗಳಲ್ಲಿ ಸಮಯ ಜಾರುವುದು ಗೊತ್ತಾಗುವುದೇ ಇಲ್ಲ.ಕೆಲಸ ಮಾಡಿ ತಲೆ ಚಿಟ್ಟು ಹಿಡಿದು ಸಾಕಪ್ಪ ಈ ಕೊರೋನ ಅನ್ನುವುದಕ್ಕೂ ತ್ರಾಣ ಇರುವುದಿಲ್ಲ!
ಮಕ್ಕಳು ದೊಡ್ಡವರಾಗಿದ್ದರೆ ತಂದೆ ತಾಯಂದಿರಿಗೆ ಸ್ವಲ್ಪ ಆರಾಮ. ಆಫ಼ೀಸಿನ ಕೆಲಸ ಇದ್ದರೂ ಅಷ್ಟು ಕಷ್ಟವಾಗುವುದಿಲ್ಲ. ಹೇಗೊ ಏನೋ ನಿಭಾಯಿಸಿಬಿಡಬಹುದು.
ಮಿಡ್ಡಲ್ ಕ್ಲಾಸ್ ಜನಕ್ಕೆ ಒಂದು ರೀತಿ ಬಹಳವೇ ಕಷ್ಟ. ಇತ್ತ ಮನೆ ಕೆಲಸ, ಅತ್ತ ಆಫ಼ೀಸಿನದು, ಟ್ಯಾಕ್ಸ್, ತಿಂಗಳ ಸಾಲದ ಕಂತು ಕಟ್ಟುವುದು ಎಲ್ಲವೂ ಇದೆ. ಇವರ ಟ್ಯಾಕ್ಸ್ ಹಣದಿಂದ ನಡೆಯುತ್ತಿರುವ ದೇಶದಲ್ಲಿ ಇವರ ದನಿ ಯಾರಿಗೂ ಕೇಳುವುದೇ ಇಲ್ಲ. ಈ ಮಹಾಮಾರಿಯಿಂದ ಆಗಿರುವ ಕಷ್ಟ ಅಷ್ಟಿಷ್ಟಲ್ಲ. ದಿನಗೂಲಿ ಮಾಡಿ ಜೀವಿಸುವವರು, ಹೊರ ರಾಜ್ಯಗಳಿಂದ ವಲಸೆ ಬಂದು ಇಲ್ಲಿ ಕೆಲಸ ಮಾಡುತ್ತಿರುವರು, ಆರ್ಥಿಕವಾಗಿ ಹಿಂದುಳಿದವರು ಇವರಿಗೆ ಆಗಿರುವ ನಷ್ಟ ಅಪಾರ. ಇವರು ಅನುಭವಿಸುತ್ತಿರುವುದು ನೋಡಿದರೆ ಸಂಕಟವಾಗುತ್ತದೆ. ಇವರಿಗೆ ಸಹಾಯ ಹಸ್ತ ಚಾಚುತ್ತಿರುವ ಬಹುತೇಕರು ಇದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸುತ್ತಿರುವುದೇ ಜಾಸ್ತಿ. ಒಟ್ಟಿನಲ್ಲಿ ಆರ್ಥಿಕ ವ್ಯವಸ್ಥೆ ಕುಸಿದು ಬೀಳುವುದರಲ್ಲಿದೆ. ಆದರೂ ಸರಕಾರ, ವೈದ್ಯರು, ದಾದಿಯರು, ಪೋಲೀಸರು, ಪೌರಕಾರ್ಮಿಕರು ಮತ್ತಿತ್ತರ ಶ್ರಮಗಳು ವ್ಯರ್ಥವಾಗದಂತೆ ಜೋಪಾನವಾಗಿರುವುದೇ ಈಗಿರುವ ದಾರಿ.
–ಸಹನಾ ಪ್ರಸಾದ್