ನಾನೀಗ ಭಾಷಣ ಮಾಡಲು ನಿಮ್ಮ ಮುಂದೆ ನಿಂತಿದ್ದೇನೆ. ಸಂಘಟಕರು ಕೇವಲ ಐದೇ ನಿಮಿಷದಲ್ಲಿ ಮಾತುಗಳನ್ನು ಮುಗಿಸಬೇಕೆಂಬ ಅತ್ಯಂತ ಕಠಿಣ ನಿಬಂಧನೆಯೊಂದನ್ನು ನನ್ನ ಮುಂದೆ ಇಟ್ಟಿದ್ದಾರೆ. ಆದರೂ ನಾನು ಒಪ್ಪಿಕೊಂಡು ವೇದಿಕೆ ಮೇಲೆ, ಮೈಕ್ ಮುಂದೆ ನಿಂತು ಮಾತನಾಡುವ ಧೈರ್ಯ ಮಾಡುತ್ತಿರುವೆ. ಈಗ ನಾನು ನನ್ನ ಮನದಲ್ಲಿ ನನ್ನ ಮಡದಿಯನ್ನು ನೆನೆದು ಧೈರ್ಯ ತಂದುಕೊಳ್ಳುತ್ತೇನೆ. ಏಕೆಂದರೆ ನಾನು ಐದೇ ನಿಮಿಷದಲ್ಲಿ ತಯಾರಾಗಬೇಕೆಂದು ಮಡದಿಗೆ ಹೇಳಿದಾಗ, ಯಾವದೇ ಉದ್ವೇಗಕ್ಕೊಳಗಾಗದೆ, ಮುಖದ ಮೇಲೆ ಯಾವುದೇ ಭಾವ ತೋರಿಸದೆ, ಸಹಜವಾಗಿಯೇ ಒಪ್ಪಿಕೊಂಡು ಒಳಗೆ ಹೋದಳೆಂದರೆ ಐದು ನಿಮಿಷಗಳ ಹನ್ನೆರಡು ಕಂತುಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಹೊರಬಂದವಳೆ ನೋಡ್ರಿ, ನಾ ಲಗೂನ ತಯಾರಾಗಿ ಬಂದ್ನಲ್ರಿ ಎಂದು ಯಾವುದೇ ಅಂಜಿಕೆ ಅಳುಕಿಲ್ಲದೆ ಧೈರ್ಯದಿಂದ ಜಂಬ ಕೊಚ್ಚಿಕೊಳ್ಳುತ್ತಾಳೆ. ಹೊರಗೆ ಕುಳಿತು ದಾರಿ ಕಾಯ್ದು ಕಾಯ್ದು ಸುಸ್ತಾಗಿದ್ದರೂ ಕೂಡ ತೋರಿಸಿಕೊಳ್ಳದೆ ಹ್ಞುಗುಟ್ಟುತ್ತ ಮುಂದೆ ನಡೆಯುತ್ತೇನೆ. ಆ ಒಂದು ಅನುಭವದಿಂದಲೇ ನಾನೂ ಕೂಡ ಸಂಘಟಕರ ಮಾತಿಗೆ ಎರಡು ಮಾತನಾಡದೆ ಮಾತುಗಳನ್ನು ಆರಂಭಿಸುತ್ತಿದ್ದೇನೆ.
ರಾಜ್ಯದ, ಅಷ್ಟೇ ಏಕೆ ಹೊರರಾಜ್ಯಗಳಲ್ಲಿಯೂ ಕೂಡ ತಮ್ಮ ನಗೆಮಾತುಗಳಿಂದ, ಹಾಸ್ಯ ಹನಿಗವನಗಳಿಂದ ಜನಪ್ರಿಯರಾಗಿರುವ ಡುಂಡಿರಾಜರ ಚುಟುಕೊಂದು ಈ ಸಂದರ್ಭದಲ್ಲಿ ನೆನಪಾಗುತ್ತಲಿದೆ –
ಕನ್ನಡಿ ಮುಂದೆ
ನಿಂತ ಯುವತಿ
ಮೈಕಿನ ಮುಂದೆ
ನಿಂತ ಸಾಹಿತಿ
ಇಬ್ಬರಿಗೂ ಇಲ್ಲ
ಸಮಯದ ಇತಿ ಮಿತಿ!!
ಈ ಚುಟಕನ್ನು ಸಂಘಟಕರ ಕಿವಿಯ ಮೇಲಿಟ್ಟು ನನ್ನ ಮಾತುಗಳನ್ನು ಮುಂದುವರಿಸುತ್ತೇನೆ.
ಬೆಳಗಾವಿ, ನಾಡಹಬ್ಬ ಉತ್ಸವ ಎಂಭತ್ತಮೂರು ವರ್ಷಗಳಿಂದ ಆಚರಿಸುತ್ತ ಬಂದಿದೆ. ಬೆಟಗೇರಿ ಕೃಷ್ಣಶರ್ಮಾ, ಬಸವರಾಜ ಕಟ್ಟಿಮನಿ, ಚನ್ನವೀರ ಕಣವಿ, ಹಾಮಾನಾ ಹೀಗೆ ನಾಡಿನ ಎಲ್ಲ ಖ್ಯಾತನಾಮರು ಇದರಲ್ಲಿ ಪಾಲ್ಗೊಂಡಿದ್ದಾರೆ. ಬೆಳಗಾವಿ ನನ್ನ ಸ್ನೇಹಿತ ಸಿ.ಕೆ. ಜೋರಾಪುರ ಮತ್ತು ನಾನು ಕಾರ್‍ಯಕ್ರಮದ ಆಮಂತ್ರಣ ಪತ್ರಿಕೆಗಳನ್ನು ಕೊಡಲು ಹೋಗುತ್ತಿದ್ದಾಗಿನ ಸಂದರ್ಭ. ಜೋರಾಪುರರ ಸ್ಕೂಟರ್ ಮೇಲೆ ಹಿಂದೆ ಅರ್ಜುನಂತೆ ಯುದ್ದಕ್ಕಾಗಿ ಸಜ್ಜಾಗಿ ಕೂಡ್ರೂತ್ತಿದ್ದೆ. ಜೋರಾಪುರ ಅವರು ಕೃಷ್ಣನಂತೆ ಸಾರಥಿಯಾಗಿರುತ್ತಿದ್ದರು. ಜೋರಾಪುರರ ಸ್ಕೂಟರ್ ಪ್ರಾರಂಭವಾದರೆ ನಿಲ್ಲುವುದು ಕಷ್ಟವಾಗುತ್ತಿತ್ತು. ಅಕಸ್ಮಾತ್ ಏನಾದರೂ ನಿಂತಿತೋ ಹೊರಡುವುದು ಕಷ್ಟ. ಈ ಸ್ಕೂಟರಿನ ಇನ್ನೊಂದು ವಿಶೇಷತೆಯಂದರೆ, ಸ್ಟ್ಯಾಂಡ್ ಹಚ್ಚಿದರೆ ನಿಲ್ಲುತ್ತಿರಲಿಲ್ಲ. ಒಂದೆಡೆ ವಾಲಿಕೊಂಡು ಬಿದ್ದುಬಿಡುತ್ತಿತ್ತು. ಅದಕ್ಕೊಂದು ಹಚ್ಚಲು ಕಲ್ಲು ಬೇಕಾಗುತ್ತಿತ್ತು. ಸ್ಕೂಟರ್ ನಿಲ್ಲಿಸುವ ಸಂದರ್ಭ ಬರುತ್ತಿದ್ದಂತೆ ಕಲ್ಲನ್ನು ಹುಡುಕುವ ಕೆಲಸ ನನ್ನ ಪಾಲಿನದ್ದು. ಕಾರ್‍ಯಕ್ರಮಕ್ಕೆ ಆಹ್ವಾನಿಸಿದ್ದ ಅತಿಥಿಗಳ ಮನೆ ಬರುತ್ತಿದ್ದಂತೆ, ಸ್ಕೂಟರನ್ನು ನಿಲ್ಲಿಸಬೇಕಾಗುತ್ತಿದ್ದುದರಿಂದ ಜೋರಾಪುರ ಜೋರಿನಿಂದ ಚೀರುತ್ತಿದ್ದರು. "ಗುಂಡ್ಯಾನಟ್ಟಿ ಲಗೂನ ಕಲ್ಲ್ ತುಗೋಳ್ರೀ…!! ಗುಂಡ್ಯಾನಟ್ಟಿ ಲಗೂನ ಕಲ್ಲ್ ತುಗೋಳ್ರೀ… " ಅತಿಥಿಗಳ ಮನೆ ಬಂತು ಎಂದು ಅವರು ಸಹಜವಾಗಿ ಹೇಳುತಿದ್ದರೂ ಸಹ ನನಗೆ ನಗೆ ತಡೆದುಕೊಳ್ಳಲಾಗದೆ ಮರೆಯಲ್ಲಿಯೇ ಮುಸಿ ಮುಸಿ ನಕ್ಕದ್ದುಂಟು.
ಮೇಲಿನ ಪ್ರಸಂಗದ ಮುಂದಿನ ಕಂತೆಂದರೆ, ಹಾಗೇ ರಸ್ತೆಯಲ್ಲಿ ಹೋಗುತ್ತಿರಬೇಕಾದ್ರೆ ಎದುರಿನಲ್ಲಿ ಪಾಟೀಲರೆನ್ನುವ ಪರಿಚಿತರೊಬ್ಬರು ಬರುತ್ತಲಿದ್ದರು. ಅವರಿಗೆ ನಾಡಹಬ್ಬದ ಆಮಂತ್ರಣ ಪತ್ರ ಕೊಡಬೇಕಾಗಿತ್ತು. ಜೋರಪುರ ಮತ್ತೆ ಪಾಟೀಲ್ರ ಬರಾಗತ್ತಿದಾರ "ಲಗೂನ ಕಲ್ಲ್ ತುಗೋಳ್ರಿ ಗುಂಡೇನಟ್ಟಿ…." ಎಂದು ದೊಡ್ಡ ಧ್ವನಿಯಲ್ಲಿ ಚೀರಿಕೊಳ್ಳಲಾರಂಭಿಸಿದರು. ನಾನು ಕಲ್ಲು ಹುಡುಕಲು ಪ್ರಾರಂಭಿಸಿದೆ ಇದನ್ನೆಲ್ಲ ಗಮನಿಸಿದ ಪಾಟೀಲರು ಏನೋ ಘಾತವಾಯಿತೆಂಬಂತೆ ಓಡಲಾರಂಭಿಸಿದರು! ಮತ್ತೆ ಸ್ಕೂಟರಿನಲ್ಲಿ ಅವರನ್ನು ಬೆನ್ನಟ್ಟಿ ಅವರಿಗೆ ಆಮಂತ್ರಣ ಪತ್ರಿಕೆ ಕೊಟ್ಟು ಸಮಾಧಾನಪಡಿಸಿ, ಸ್ಕೂಟರ್ ಹಾಗೂ ಕಲ್ಲಿನ ವೃತ್ತಾಂತವನ್ನು ಅವರ ಮುಂದೆ ಹೇಳಿದಾಗ ಅವರೂ ಬಿದ್ದು ಬಿದ್ದು ನಕ್ಕರು.
ಸರ್ದಾರಜಿ ಎಂದೊಡನೇ ಮೂರ್ಖರೆಂದೂ ತಿಳಿಗೆಡಿಗಳೆಂಬ ಕಲ್ಪನೆಯನ್ನು ಜನರಲ್ಲಿ ಮೂಡಿಸಿದವರು ಖ್ಯಾತ ಲೇಖಕ ಖುಷವಂತಸಿಂಗ್. ಮೂರ್ಖರಿಗೆ ಸಂಬಂಧಿಸಿದ ಎಲ್ಲ ಜೋಕುಗಳನ್ನು ಸರ್ದಾರಜಿಗಳ ಸುತ್ತಲೇ ಹೆಣೆಯುತ್ತಾರೆ. ಅಲ್ಲದೇ ಅವರು ಮೂರ್ಖರೇ ಎಂಬುದಕ್ಕೊಂದು ಒಂದೇ ಸಾಲಿನ ಜೋಕಿದೆ ನೀವು ಗಮನಿಸಬಹುದು. ಇಬ್ಬರು ಹೊಟಿದ್ದರಂತೆ ಅದರಲ್ಲಿ ಒಬ್ಬ ಶ್ಯಾಣ್ಯಾ ಇದ್ದಂತ ಇನ್ನೊಬ್ಬ ಸರ್ದಾಜಿ ಇದ್ದಂತ! ಇಷ್ಟರ ಮಟ್ಟಿಗೆ ಸರ್ದಾರಜಿ ಮೂರ್ಖರೆಂದು ಸಾಬಿತುಪಡಿಸಿದ್ದಾರೆ. ಈಗ ಫೋಟೊಕ್ಕೆ ಸಂಬಂಧಿಸಿದ ಸರ್ದಾರಜಿ ಜೋಕೊಂದನ್ನು ನಿಮ್ಮ ಮುಂದೆ ಹೇಳಬೇಕೆಂದರೆ. ಒಮ್ಮೆ ಒಬ್ಬ ಸರ್ದಾರಜಿ, ಗುಡುಗು ಮಿಂಚಿನಿಂದ ಕೂಡಿದ ಮಳೆಯಲ್ಲಿ ನಡೆಯುತ್ತ ಹೊರಟಿದ್ದ. ಜೋರಿನಿಂದ ಮಿಂಚಿತು, ಸಿಡಿಲೊಂದು ಬಡಿದು ಆ ಸರ್ದಾರಜಿ ಸತ್ತು ಬಿಟ್ಟ. ವಿಚಿತ್ರವೆಂದರೆ ಆ ಸತ್ತು ಹೆಣವಾಗಿ ಬಿದ್ದಿದ್ದ ಆ ಸರ್ದಾರಜಿ ಮುಖದಲ್ಲಿ ನಗುವಿತ್ತಂತೆ!
ಟಿ. ಪಿ. ಕೈಲಾಸಂ ಅವರು ಹೇಳುತ್ತಿದ್ದರಂತೆ ’ನನ್ನ ಹೆಣ ಕೂಡ ನಗ್ತಿರಬೇಕು’ ಎಂದು. ಅವರು ನುಡಿಯುತ್ತಿದ್ದರಂತೆ ಅವರು ಮರಣ ಹೊಂದಿದ ಸಂದಂರ್ಭದಲ್ಲಿಯ ಅವರ ಮುಖ ಯಾವುದೋ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿತ್ತು. ಟಿ.ಪಿ.ಕೈಲಾಸಂರ ಆ ಫೋಟೋವನ್ನು ನೋಡಿದಾಗ, ಮುಗಳ್ನಗುತ್ತ ಮಲಗಿರುವಂತೆ ಭಾಸವಾಗುತ್ತಿತ್ತು. ಏಕೋ ಟಿ.ಪಿ. ಕೈಲಾಸಂರ ನೆನಪಾಯಿತು ಸ್ಮರಿಸಿಕೊಂಡೆ ಅಷ್ಟೆ.
ಇರಲಿ, ಈಗ ಮತ್ತೆ ನಗೆಭಾಷಣದ ವಿಷಯಕ್ಕೆ ಬರೋಣ ನಗುತ್ತ ಸತ್ತಿದ್ದ ಸರ್ದಾರಜಿಯನ್ನು ಸಾಕ್ಷಾತ್ ಯಮ ಬಂದು ಕೇಳಿದನಂತೆ, "ಎಲ್ರು ಸಾವು ಅಂದರೆ ಹೆದರ್‍ತಾರ, ಸಾವು ಸಮೀಪಿಸುತ್ತಿದ್ದಂತೆ ಮುಖ ವಿಕಾರವಾಗ್ತದ, ಆದ್ರ ನೀನು ಸಾವನ್ನು ನಗುತ್ತ ಸ್ವಾಗತಿಸಿದ್ದೀಯಾ? ನಿನ್ನ ಧೈರ್ಯವನ್ನು ಮೆಚ್ಚಲೇಬೇಕು, ಏನಿದರ ಗುಟ್ಟು?" ಎಂದು ಕೇಳಿದನಂತೆ.
ಅದಕ್ಕೆ ಸರ್ದಾರಜಿ "ನನಗೆ ಮಿಂಚೆಂದು ತಿಳಿಯಲಿಲ್ಲ ಯಾರೋ ನನ್ನ ಫೋಟೋ ತೆಗಿತಿದ್ದಾರೆಂದು ತಿಳಿದು ಸ್ಮೈಲ್ ಕೊಟ್ಟಿದ್ದೆ!" ಎಂಬ ಸರ್ದಾರಜಿ ಉತ್ತರ ಕೇಳಿದ ಯಮ ಕೂಡ ಗಹಗಹಿಸಿ ನಕ್ಕನಂತೆ.
ಇನ್ನೊಂದು ಸಂದಂರ್ಭದಲ್ಲಿ ಜೆ.ಎನ್.ಎಂ.ಸಿ. ಮೆಡಿಕಲ್ ಕಾಲೇಜಿನ ಕನ್ನಡ ಬಳಗದವರು ಹಾಸ್ಯಸಂಜೆಯೊಂದನ್ನು ಹಮ್ಮಿಕೊಂಡಿದ್ದರು. ಆವಾಗ್ಯೆ ಬಿ. ಪ್ರಾಣೇಶ ಬಂದಿದ್ದರು. ನಾನೂ ಹೋಗಿದ್ದೆ. ಅತಿಥಿಯಾಗಿ ಅಲ್ಲ. ಪ್ರಾಣೇಶರ ಪರಿಚಯವಿದ್ದುದರಿಂದ, ಅವರೊಂದಿಗೆ ಸ್ವಲ್ಪ ಮಾತನಾಡಿ ಬರೋಣವೆಂದು ಹೋಗಿದ್ದೆ. ನಾನು ಪ್ರಾಣೇಶ ಮಾತನಾಡುತ್ತ ಕುಳಿತಿದ್ದೆವು. ಆ ಕಡೆಯಿಂದ ಬಂದ ಒಬ್ಬ ಫೋಟೋಗ್ರಾಫರ್ ಏನನ್ನೂ ಮಾತನಾಡದೆ ಫೋಟೋ ಹೊಡೆದುಕೊಂಡ, ಹೋಗಿಬಿಟ್ಟ. ಇದನ್ನು ಗಮನಿಸಿದ ಪ್ರಾಣೇಶ ಸಂಘಟಕರನ್ನು ಕೇಳಿದರು, "ಫೋಟೋ ಗ್ರಾಫರ್‌ಗಳಂದರೆ ಸಾಮಾನ್ಯವಾಗಿ ಮುಖ ಮೇಲೆ ಮಾಡಿ, ಕೆಳಗೆ ಮಾಡಿ, ನೆಟ್ಟಗೆ ಕುಳಿತುಕೊಳ್ಳಿ ಕನಿಷ್ಟ ’ಸ್ಮೈಲ್ ಪ್ಲೀಜ’ ಅಂತ ಹೇಳ್ತಾರ. ಏನ್ರಿ ನಿಮ್ಮ ಫೋಟೋಗ್ರಾಫರ್ ಸುಮ್ನ ಬಂದ ಫೋಟೊ ಹೊಡಕೊಂಡ ಹೋಗಿಬಿಟ್ಟ, ಇವೆಂಥ ಫೋಟೋಗ್ರಾಫರ್‌ರಿ" ಎಂದು.
ಅದಕ್ಕೆ ಸಂಘಟಕರಲ್ಲೊಬ್ಬರು ಹೇಳಿದ ಉತ್ತರ ತುಂಬಾನೇ ನಗುವನ್ನು ತರಿಸುವಂತಿತ್ತು. "ರೆಗ್ಯೂಲರ್ ಫೋಟೋಗ್ರಾಫರ್ ಕೈ ಕೊಟ್ಟ ಬಿಟ್ಟರಿ, ಆ ಫೋಟೋಗ್ರಾಫರ್ ನಮ್ಮ ಮೆಡಿಕಲ್ ಕಾಲೇಜನವಾ. ಬರಿ ಹೆಣದ ಫೋಟೋ ಅಷ್ಟ ತಗ್ಯಾಂವರಿ ಆಂವಾ!!" ಎಂದಾಗ ಅಲ್ಲಿ ಕುಳಿತಿದ್ದವರ ನಗುವೆಲ್ಲ ಪ್ರತಿಧ್ವನಿಸಿತ್ತು. ಈ ನಗೆಯಲ್ಲಿಯೇ ನನ್ನ ಹಾಗೂ ಪ್ರಾಣೇಶರ ನಗೆಯೂ ಕೂಡಿತ್ತು. ಮುಂದೆ ಇದೇ ಪ್ರಸಂಗವನ್ನು ಪ್ರಾಣೇಶರು ಅದೇ ತಮ್ಮ ಭಾಷಣದಲ್ಲಿ ಹೇಳಿದಾಗ ಕೂಡಿದ ಜನರ ನಗೆ ಮುಗಿಲು ಮುಟ್ಟಿತ್ತು.
ಹೀಗೆ ಒಟ್ಟಿನಲ್ಲಿ ನಗೆಮಾತುಗಾರರ ಮಧ್ಯದಲ್ಲಿ ಸಮಯ ತೆಗೆಯುವುದಾಗಲಿ, ಹಾಸ್ಯಭಾಷಣ ಕೇಳುವುದಾಗಲಿ, ನಗೆಬರಹಗಳನ್ನು ಓದುವುದರಲ್ಲಿ ನನ್ನೆಲ್ಲ ನೋವು, ದಣಿವುಗಳನ್ನು ಮರೆಯುತ್ತೇನೆ. ಹೊಸ ಮನುಷ್ಯನಾಗುತ್ತೇನೆ. ಇದುವರೆಗೆ ತಮ್ಮ ತಮ್ಮ ಶಖ್ಯಾನುಸಾರ ನಕ್ಕು ನನ್ನನ್ನು ಪ್ರೋತ್ಸಾಹಿಸಿರುವ ನಿಮ್ಮಲ್ಲರಿಗೂ ವಂದಿಸುತ್ತ ಇಂದಿನ ನನ್ನ ನಗೆ ಮಾತಿಗೆ ಮಂಗಳ ಹಾಡುತ್ತೇನೆ, ನಮಸ್ಕಾರ.
nice….
ಪಿ. ಮಂಜುನಾಥ,
ಲೇಖನವನ್ನೋದಿ ಎಲ್ಲಿ ಕಲ್ಲು ತೆಗೆದುಕೊಳ್ಳುತ್ತಿರೋ ಎಂದು ಮಾಡಿದ್ದ. ಮೆಚ್ಚಿಗೆ ವ್ಯಕ್ತ ಪಡಿಸಿದ್ದೀರಿ ಧನ್ಯವಾದಗಳು.
ಖರೇನ ನಾ ಬಾಳ ದಿನಾ ಆದ ಮ್ಯಾಲ ನಿಮ್ಮ ಲೇಖನ ಓದಿ ಮನಸಾಪೂರ್ವಕ ನಕ್ಕಬಿಟ್ಟೆ ನೋಡ್ರೀ…..ಶುಭಾಶಯಗಳು
Nice article. Laguna innondu haasys lekhana Baredu Panjina belakinallirisi."-)
ಸಹೋದರಿ ಸಾವಿತ್ರಿ
ನನ್ನ ಲೇಖನದ ಬಗ್ಗೆ ನಿಮಗಿರುವ ಅಭಿಮಾನದ ಕುರಿತು ನಾನು ಋಣಿ. ನಿಮ್ಮ ಆಪೇಕ್ಷೆಯಂತೆ ಇನ್ನೊಂದು ನಗೆಬರಹ ಬರೆದು ಕಳುಹಿಸಲು ಪ್ರಯತ್ನಿಸುವೆ.
-ಗುಂಡೇನಟ್ಟಿ ಮಧುಕರ, ಬೆಳಗಾವಿ. ಮೊ: 9448093589
Chenagidhe sir nimma lekana
Hige bareyuthiri namanu nagisutiri
. ಉತ್ತಮ ಅವರೇ, ನೀವು ಇಷ್ಟೊಂದು ಮನದುಂಬಿ ನಗುತ್ತೀರೆಂದರೆ ನಾನು ಖಂಡಿತವಾಗಿಯೂ ಬರೆಯುತ್ತಿರುತ್ತೇನೆ. ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ
-ಗುಂಡೇನಟ್ಟಿ ಮಧುಕರ, ಬೆಳಗಾವಿ. ಮೊ: 9448093589
Wonderful madhu sir.. I enjoyed it
nice article..
tumba chendada lekhana sir..
tumba ishtavaayithu… 🙂
ತಮ್ಮ ಅನಿಸಿಕೆಗಳನ್ನು ತಿಳಿಸಿದ ಎಲ್ಲ ಓದುಗರಿಗರಿಗೂ ವಂದನೆಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
-ಲೇಖಕ
ಪ್ರತಿಕ್ರಿಯೆ ನೀಡಿದ ಎಲ್ಲ ಓದುಗರಿಗೂ ಧನ್ಯವಾದಳು……….. ನಿಮ್ಮ ಪ್ರೀತಿ ಸದಾ ಹೀಗೇ ಇರಲಿ…………….
-ಗುಂಡೇನಟ್ಟಿ ಮಧುಕರ