ರಹ! ರಹ!! ರಹ!!! ಎನ್ನುವ ಪಿಸುಧ್ವನಿಗಿಂತ ಕೊಂಚ ದೊಡ್ಡದಾದ ಧ್ವನಿ ಕೇಳಿ ನಿಂತದ್ದು ಬರೋಬ್ಬರಿ 8 ಅಡಿ ಎತ್ತರದ ಕಾಡಾನೆ ಲಕ್ಷ್ಮಿ ಮತ್ತು ಅದರ ಜೊತೆಗಿರುವ 25ಕ್ಕೂ ಹೆಚ್ಚು ಆನೆಗಳಿರುವ ಹಿಂಡು. ಧ್ವನಿಸಿದ್ದು, 5 ಅಡಿ ಎತ್ತರದ, ಶಾಶ್ವತವಾದ ನೌಕರಿಯಿಲ್ಲದ ಬರೀ 200 ರೂಪಾಯಿಗಳಿಗೆ ದಿನಗೂಲಿಗೆ ದುಡಿಯುವ ಪಂಚಾನನ್ ನಾಯಕ್ ಎಂಬ ಅರಣ್ಯ ಇಲಾಖೆಯ ವಾಚರ್!! 25ರ ಸಂಖ್ಯೆಯಲ್ಲಿರುವ ಆನೆಯ ಹಿಂಡಿಗೆ ಲಕ್ಷ್ಮೀಯೇ ನಾಯಕಿ. ಪಂಚಾನನ್ ಧ್ವನಿ ಕೇಳುತ್ತಿದ್ದಂತೆ, ಇಡೀ ಹಿಂಡು ಸ್ತಬ್ಧವಾಯಿತು. ಇಡೀ ಗುಂಪಿನ ವಯಸ್ಕ ಆನೆಗಳು ವೃತ್ತಾಕಾರವಾಗಿ ನಿಂತು ತಂಡದ ಕಿರಿಯ ಸದಸ್ಯರಿಗೆ ರಕ್ಷಣೆ ಒದಗಿಸುವ ಕಾಯಕಕ್ಕೆ ನಿಂತವು. ಸಾಕಿದಾನೆ ಅಥವಾ ಸರ್ಕಸ್ಸಿನ ಆನೆಗಳಿಗೆ ತಿವಿದು, ಹೊಡೆದು, ಬಡಿದು, ಉಪವಾಸ ಕೆಡವಿ ಮಾತುಗಳನ್ನು ಕೇಳುವಂತೆ ಮಾಡುವ ವಿದ್ಯೆ ನಮಗೆ ಗೊತ್ತು. ಕಾಡಾನೆಗಳು ಒಬ್ಬ ಮನುಷ್ಯನ ಮಾತು ಕೇಳುತ್ತವೆ ಎಂದರೆ ನಂಬಲು ಅಸಾಧ್ಯ. ಆದರೆ ಇದು ನಿಜ. ಇದನ್ನು ಮಾಡಿ ತೋರಿಸಿದ್ದು, ಪಂಚಾನನ್ ನಾಯಕ್ ಯಾನೆ ಪಂಚು ಮತ್ತವನ ಟೀಮ್.
ಓಡಿಶಾ ರಾಜ್ಯದ ಭುವನೇಶ್ವರ್-ಅಥ್‍ಗರ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಂತ ಲಕ್ಷ್ಮೀಯ ತಂಡಕ್ಕೆ ಬಾಯಾರಿಕೆಯಾಗಿದೆ. ತುರ್ತಾಗಿ ನೀರಿನ ಬಳಿಗೆ ಹೋಗಬೇಕು. ಆನೆಗಳ ಪಾರಂಪಾರಿಕ ರಸ್ತೆಯನ್ನು ಉದ್ದುದ್ದ ಸೀಳಿ ರಾಷ್ಟ್ರೀಯ ಹೆದ್ದಾರಿಯನ್ನು ಮಾಡಲಾಗಿದೆ, ಈ ರಾಷ್ಟ್ರೀಯ ಹೆದ್ದಾರಿ ವಾಹನಗಳ ಭರಾಟೆಯಿಂದ ತುಂಬಿ ಹೋಗಿದೆ. ಈಗ ಆನೆಗಳು ರಸ್ತೆಗೆ ಬಂದರೆ ಹೆಚ್ಚಿನದಾಗಿ ಆನೆಗಳಿಗೆ ಅಪಾಯ. ಪಂಚುವಿನ ಇನ್ನೊಂದು ಸೂಚನೆಗಾಗಿ ಕಾಯುತ್ತಿರುವ ಲಕ್ಷ್ಮಿಯ ತಂಡ ಅಸಹನೆಯಿಂದ ಕೂಡಿದೆ. ಹೌದು! ಮನುಷ್ಯರ ಹಾಗೂ ಆನೆಗಳ ನಡುವಿನ ಸಂಘರ್ಷವನ್ನು ತಗ್ಗಿಸಲು ರೂಪಿಸಿದ ತಂಡವೇ “ಅಥ್‍ಗರ್ ಎಲಿಫೆಂಟ್ ಮಿಟಿಗೇಷನ್ ಸ್ವ್ಯಾಡ್” ಈ ತಂಡದ ಇತರ ಸದಸ್ಯರು ಸಂತಾನ್ ನಾಯಕ್, ದಿಲೀಪ್ ಸಾಹು ಹಾಗೂ ಸಂತಾ ಸಾಹು.
ಜನಸಂಖ್ಯೆ ಹೆಚ್ಚುತ್ತಿದ್ದಂತೆ ಪ್ರಪಂಚದ ಎಲ್ಲಾ ಅರಣ್ಯಗಳ ಮೇಲೆ ಮಾನವನ ಒತ್ತಡ ಹೆಚ್ಚಾಯಿತು. ಇದೇ ತರಹ ಒಡಿಶಾದಲ್ಲೂ ಸಂಭವಿಸಿತು. ಆನೆಗಳ ಪಾರಂಪಾರಿಕ ಅರಣ್ಯ ಛಿದ್ರವಾಯಿತು. ಅವುಗಳ ನೆಲೆಯನ್ನು ಅಭಿವೃದ್ಧಿಗಾಗಿ ನಾಶ ಮಾಡಲಾಯಿತು. ವನ್ಯಜೀವಿಗಳ ಪ್ರದೇಶವನ್ನು ಬಲವಂತವಾಗಿ ಅವುಗಳಿಂದ ಕಿತ್ತುಕೊಂಡೆವು. ಆದರೂ ಸಂಘರ್ಷಕ್ಕಿಳಿಯದ ವನ್ಯಸಂಕುಲಕ್ಕೆ ಇದೀಗ ವಾಸಯೋಗ್ಯ ಅರಣ್ಯಗಳೇ ವಿರಳವಾಗಿವೆ. ಅನಿವಾರ್ಯವಾಗಿ ಪೇಟೆ-ಪಟ್ಟಣಕ್ಕೆ ನುಗ್ಗಿ ಸಂಘರ್ಷಕ್ಕೆ ಕಾರಣವಾಗುತ್ತವೆ. ನಾವೇನು ಕಡಿಮೆಯಿಲ್ಲ. ದೈತ್ಯದೇಹದ ಆನೆಗಳಿಗೆ ಪಟಾಕಿ ಸಿಡಿಸಿ ಬೆದರಿಸುತ್ತೇವೆ. ಕತ್ತಿ-ದೊಣ್ಣೆಗಳ ಪ್ರಯೋಗವೂ ಹೇರಳವಾಗಿ ಆಗುತ್ತದೆ. ಗುಂಡೇಟು, ವಿದ್ಯುತ್ ತಂತಿ, ವಿಷಪ್ರಾಶನ ಹೀಗೆ ನಮ್ಮ ಬತ್ತಳಿಕೆಯಲ್ಲಿ ರಾಮನ ಬತ್ತಳಿಕೆಯಲ್ಲಿದ್ದುದ್ದಕ್ಕಿಂತ ಹೆಚ್ಚು ಅಸ್ತ್ರಗಳಿವೆ. ರೈತರ ತೋಟಕ್ಕೆ ನುಗ್ಗುವ ಆನೆಗಳನ್ನು ಮೊದಲು ಪಂಚು ತಂಡ ಪಟಾಕಿ ಸಿಡಿಸಿಯೇ ಓಡಿಸುತ್ತಿತ್ತು. ದೊಂದಿ ಹಚ್ಚಿ ಬೆದರಿಸುತ್ತಿತ್ತು. ಕರ್ಕಷವಾಗಿ ಕೂಗಿ ಓಡಿಸುವ ಪ್ರಯತ್ನ ಮಾಡುತ್ತಿತ್ತು. ಈ ಕ್ರಮದಿಂದ ಆನೆಗಳ ರೊಚ್ಚು ಹೆಚ್ಚಾಯಿತೆ ಹೊರತು ಕಡಿಮೆಯಾಗಲಿಲ್ಲ. ಈ ಕ್ರಮ ಸರಿಯಲ್ಲವೆಂದು ಪಂಚು ತಂಡ ಕಂಡುಕೊಂಡಿತು. ಸರಿ, ಮುಂದೇನು? ಸಂಘರ್ಷದ ಕ್ರಮವನ್ನು ಬಿಟ್ಟು ಸಂಧಾನ ಪ್ರಯೋಗ ಶುರು ಮಾಡಿದರು. ತಂಡದ ನಾಯಕಿಗೆ ಲಕ್ಷ್ಮಿಯೆಂದು ಹೆಸರಿಟ್ಟರು. ಆನೆ ಹಿಂಡು ಹೋದಲೆಲ್ಲಾ ಹಿಂಡಿನ ಹಿಂದೇ ಅಲೆದು ಹಿಂಡಿನ ವಿಶ್ವಾಸವನ್ನು ಗಳಿಸಿಕೊಳ್ಳಲು ಸಫಲರಾದರು. ಲಕ್ಷ್ಮಿಗೂ ಪಂಚುವಿನ ತಂಡ ಅಪಾಯಕಾರಿಯಲ್ಲ ಎಂಬ ಮನವರಿಕೆಯಾಯಿತು. ಅಲ್ಲಿನ ಸರ್ಕಾರದ ತಪ್ಪು ನಿರ್ಧಾರಗಳು, ಯಡವಟ್ಟು ಯೋಜನೆಗಳು ಅಲ್ಲಿ£ 190 ಚ.ಕಿ.ಮೀ ವಿಸ್ತೀರ್ಣದ ಚಂದಕ ಅಭಯಾರಣ್ಯದ ಕೆಲಭಾಗವನ್ನು ಛಿದ್ರ ಮಾಡಿತು. ಛಿದ್ರಗೊಂಡ ಭಾಗದಲ್ಲೇ 25 ಸದಸ್ಯರಿರುವ ಲಕ್ಷ್ಮಿಯ ತಂಡ ಬೀಡು ಬಿಟ್ಟಿದೆ. ಚಂದಕ ಅಭಯಾರಣ್ಯವು ಒಂದು ಕಾಲದಲ್ಲಿ ಹುಲಿಗಳನ್ನು ಹೊಂದಿತ್ತು. 1967ರಲ್ಲಿ ಅಲ್ಲಿಯ ಕೊನೆಯ ಹುಲಿ ಅಳಿದುಹೋಯಿತಾದರೂ, ಆನೆ, ಚಿರತೆ ಇತ್ಯಾದಿಗಳು ಕಂಡು ಬರುತ್ತಿದ್ದವು. 1982ರಲ್ಲಿ ಕೇಂದ್ರ ಸರ್ಕಾರ ಈ ಪ್ರದೇಶಕ್ಕೆ ಅಭಯಾರಣ್ಯದ ಮಾನ್ಯತೆ ನೀಡಿತು.
ಸ್ವಾತಂತ್ರ್ಯ ನಂತರದ ದೇಶ ಕಟ್ಟುವ ಕಲ್ಪನೆಯಲ್ಲಿ ಅಲ್ಲಿನ ಅರಣ್ಯದ ಮೂಲ ಸ್ವರೂಪವೇ ಬದಲಾಯಿತು. ಕೋಲ್ಕತ್ತಾಗೆ ಸರಿಸಮನಾಗಿ ಭುವನೇಶ್ವರವನ್ನು ಕಟ್ಟಬೇಕೆಂಬ ಮಹತ್ವಾಕಾಂಕ್ಷಿ ಯೋಜನೆಗಳು ಚೌದ್ವಾರ್-ಕಟ್ಟಕ್-ಭುವನೇಶ್ವರ ನಗರಗಳು ಸಂಘಟಿತವಾಗಿ ವ್ಯಾಪಾರ ಕೇಂದ್ರಗಳಾದವು ಎಲ್ಲೆಲ್ಲೂ ವಸಾಹಾತುಗಳು ನಿರ್ಮಾಣಗೊಂಡವು, ದೊಡ್ಡ ವಿದ್ಯಾಸಂಸ್ಥೆಗಳು (ಭುವನೇಶ್ವರದಲ್ಲಿ 100ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ), ತಂತ್ರಜ್ಞಾನ ಪಾರ್ಕುಗಳು, ಆಸ್ಪತ್ರೆಗಳು, ಮಾಲ್‍ಗಳು ಇವೆಲ್ಲದರ ವಿಪರೀತ ಅಭಿವೃದ್ಧಿ ‘ಚಂದಕ’ ಅಭಯಾರಣ್ಯದ ಮೇಲಾಯಿತು. ಅಭಯಾರಣ್ಯದ ಒಳಭಾಗದಲ್ಲೂ ಬೇಕಾಬಿಟ್ಟಿ ಜಾನುವಾರುಗಳನ್ನು ಅಟ್ಟಲಾಯಿತು, ಬೇಕಾಬಿಟ್ಟಿ ಕಟ್ಟಿಗೆಯನ್ನು ತೆಗೆಯಲಾಯಿತು, ಹಳ್ಳಿಗರು ಒತ್ತುವರಿ ಮಾಡಿದರು. ಮಾನವ ನಿರ್ಮಿತ ದ್ವಂಸವು ಅಲ್ಲಿನ ಆನೆಗಳಿಗೆ ನೆಲೆಯಿಲ್ಲದಂತೆ ಮಾಡಿತು. ಆನೆಗಳು ಹೊಟ್ಟೆಗಿಲ್ಲದೆ ರೈತರ ಜಮೀನುಗಳಿಗೆ ನುಗ್ಗಿದವು. ಮಾನವ ದೌರ್ಜನ್ಯ ಮೇರೆ ಮೀರಿತು. ಮಾನವ ಸಾರಿದ ಯುದ್ಧದಲ್ಲಿ ಹಲವು ಆನೆಗಳು ಇನ್ನಿತರ ವನ್ಯಜೀವಿಗಳು ನೀರಿಲ್ಲದೆ, ಆಹಾರವಿಲ್ಲದೆ ಅಲ್ಲಲ್ಲೇ ಅಸುನೀಗಿದವು. ಗುಂಡೇಟು, ವಿಷ, ವಿದ್ಯುತ್ ನೀಡಿ ಹಲವು ಆನೆಗಳನ್ನು ಬಲಿ ಪಡೆಯಲಾಯಿತು. ಆನೆಪಥದಲ್ಲಿ ನಿರ್ಮಿಸಿದ ರೈಲು ಹಳಿಗೆ ಅನೇಕ ಆನೆಗಳು ಬಲಿಯಾದವು. ಇತ್ತ ಲಕ್ಷ್ಮಿಯ ತಂಡ ಅನೇಕ ಪಟ್ಟಣ-ಹಳ್ಳಿ, ಕೈಗಾರಿಕ ವಸಾಹಾತು, ರಾಷ್ಟ್ರೀಯ ಹೆದ್ದಾರಿಗಳನ್ನು ಸುತ್ತುಬಳಸಿ ಮಹಾನದಿಯನ್ನು ದಾಟಿ ಅಥ್‍ಗರ್ ತಲುಪಿದವು.
ಆನೆಗಳ ಆವಾಸಸ್ಥಾನ ಛಿದ್ರವಾಗಿದ್ದರಿಂದ, ಅಥ್‍ಗರ್ ಪ್ರದೇಶದಲ್ಲಿರುವ ಅರಣ್ಯ ಲಕ್ಷ್ಮಿ ಕುಟುಂಬಕ್ಕೆ ಯಾತಕ್ಕೂ ಸಾಲದಾಗಿದೆ. ಹೀಗಾಗಿ ಅನಿವಾರ್ಯವಾಗಿ ಮಾನವ ಪ್ರದೇಶಕ್ಕೆ ಬರಬೇಕಾಗಿದೆ. ಮನುಷ್ಯರ ಜೊತೆಗಿನ ಸಂಭಾವ್ಯ ಸಂಘರ್ಷವನ್ನು ತಪ್ಪಿಸಿಕೊಳ್ಳುವ ಯಾವುದೇ ದಾರಿ ಲಕ್ಷ್ಮೀ ಒಡೆತನದ ಕುಟುಂಬಕ್ಕೆ ನಿಲುಕದಿದ್ದಾಗ ಪೇಟೆಗೆ ನುಗ್ಗುತ್ತವೆ. ಜನರ ಆಕ್ರೋಷಕ್ಕೆ ಗುರಿಯಾಗುತ್ತವೆ. ತನ್ನೆಲ್ಲಾ ಅನುಭವವನ್ನೂ ಧಾರೆಯರೆದು ಪಂಚುವಿನ ತಂಡ ಆನೆ-ಮನುಜರ ಸಂಘರ್ಷವನ್ನು ತಪ್ಪಿಸಲು ತಮ್ಮೆಲ್ಲಾ ಶ್ರಮ ವಿನಿಯೋಗಿಸುತ್ತಾರೆ. ಜನರ ಮಧ್ಯೆಯೇ ಅತ್ತ ಜನರನ್ನೂ ನಿಭಾಯಿಸುತ್ತಾ, ಇತ್ತ ಕಾಡಾನೆಯ ಹಿಂಡನ್ನೂ ಸಮಾಧಾನ ಮಾಡುತ್ತಾ ಒಟ್ಟಾರೆಯಾಗಿ ಜನಸಂದಣಿಯಿಂದ ಹಿಂಡನ್ನು ದೂರ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ನಾಲ್ಕು ಜನರ ಈ ಪುಟ್ಟ ತಂಡದವರ ಯಾರ ಕೈಯಲ್ಲೂ ಯಾವುದೇ ಶಸ್ತ್ರಾಸ್ತ್ರವಿಲ್ಲ, ಮೊಬೈಲ್ ಒಂದನ್ನು ಹೊರತುಪಡಿಸಿ.
ಆನೆಗಳ ಹಿಂಡು ರೈಲು ಹಳಿಯನ್ನು ದಾಟುತ್ತಿದ್ದಲ್ಲಿ ತಕ್ಷಣ ಸ್ಟೇಷನ್ ಮಾಸ್ತರ್‍ಗೆ ಕರೆ ಮಾಡಿ ಎಚ್ಚರಿಸುತ್ತಾರೆ, ಬೇಸಿಗೆಯ ಬಿಸಿಯಲ್ಲಿ ವಿದ್ಯುತ್ ತಂತಿಗಳು ಜೋಲು ಬಿದ್ದು ತಲೆಮಟ್ಟದಲ್ಲಿದ್ದರೆ ವಿದ್ಯುತ್ ನಿಗಮದವರಿಗೆ ಕರೆ ಮಾಡಿ ಎಚ್ಚರಿಸಿ, ತಂತಿಯನ್ನು ಬಿಗಿ ಬಂದೋಬಸ್ತು ಮಾಡಲು ವಿನಂತಿಸುತ್ತಾರೆ. ಒಡಿಶಾದಲ್ಲಿ ಕಳೆದ 5 ವರ್ಷ ಅವಧಿಯಲ್ಲಿ 60 ಆನೆಗಳು ಜೋತು ಬಿದ್ದ ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿವೆ. ಕಾಡು ನಾಶ ಮಾಡಿದ ಮಾನವ ಜನಾಂಗವಾದರೂ ಸುಖವಾಗಿದೆಯೇ ಎಂದು ಕೇಳಿದರೆ, ಅದೂ ಇಲ್ಲ. ಒಡಿಶಾದಲ್ಲಿ ಮಾನವ ಕೇಂದ್ರಿತ ಯಾವುದೇ ಸೂಚ್ಯಂಕವೂ ನಿಗದಿತ ಪ್ರಮಾಣದಲ್ಲಿಲ್ಲ. ನೀರಿಗಾಗಿ, ಸಾರಿಗಾಗಿ ಪರದಾಟವಿದೆ. ನದಿ-ತೊರೆ, ಅಂತರ್ಜಲ ಎಲ್ಲಾ ಮಾಪನಗಳು ಪಾತಾಳ ಸೇರಿವೆ. ಇತ್ತ ವನ್ಯಜೀವಿಗಳ ಪಾಡೂ ಸಂಕಷ್ಟಕ್ಕೆ ಸಿಲುಕಿದ್ದು, ಜನರ ಬಾಳೂ ಸಮರ್ಪಕವಾಗಿ ಸಾಗುತ್ತಿಲ್ಲ. ಈ ತನ್ಮಧ್ಯೆ ಲಕ್ಷ್ಮಿಯ 5 ವರ್ಷದ ಮರಿಯೊಂದು ಈ ಜಂಜಾಟದಲ್ಲಿ ಹೊಂಡದೊಳಕ್ಕೆ ಸಿಕ್ಕಿಕೊಂಡಿತು. ಇಡೀ ಲಕ್ಷ್ಮಿಯ ಕುಟುಂಬ ಮರಿಯನ್ನು ಮೇಲೆಕ್ಕೆತ್ತಲು ಪ್ರಯತ್ನದಲ್ಲಿತ್ತು. ಜನವಸತಿ ಪ್ರದೇಶವಾದ್ದರಿಂದ, ಕುತೂಹಲಕ್ಕಾಗಿಯೋ ಎಂಬಂತೆ ಸೇರಿದ ಜನಜಂಗುಳಿಯಿಂದ ಇಡೀ ಲಕ್ಷ್ಮಿಯ ಕುಟುಂಬ ತಲ್ಲಣಿಸಿತು. ಅತ್ತ ಮರಿಯನ್ನು ಉಳಿಸುವ ಪ್ರಯತ್ನಕ್ಕೆ ಮನುಷ್ಯರೆ ಅಡ್ಡಿಯಾಗುತ್ತಿದ್ದಾರೆ! ಸಿಟ್ಟಿನಲ್ಲಿದ್ದ ಲಕ್ಷ್ಮಿಯ ಸೊಂಡಿಲಿನ ಹೊಡೆತಕ್ಕೆ ಸಿಕ್ಕ ಕುತೂಹಲಿಯೊಬ್ಬ ತನ್ನ ಪ್ರಾಣ ಕಳೆದುಕೊಂಡ. ಇಷ್ಟೊತ್ತಿಗೆ ಪಂಚುವಿನ ತಂಡ ಕಾರ್ಯಾಚರಣೆಗಿಳಿದಿತ್ತು. ಲಕ್ಷ್ಮಿಯ ಕುಟುಂಬಕ್ಕೆ ಸಾಂತ್ವಾನ ಹೇಳುತ್ತಾ ಜೆ.ಸಿ.ಬಿ ಯಂತ್ರವನ್ನು ತರಿಸಿ, ಹುಷಾರಿಯಾಗಿ ಅತ್ತ ಜನರನ್ನೂ ಇತ್ತ ಹಿಂಡನ್ನು ನಿರ್ವಹಿಸುತ್ತಾ ಪಂಚುವಿನ ತಂಡ ಅಂತಿಮವಾಗಿ ಮರಿಯನ್ನು ಸುರಕ್ಷಿತವಾಗಿ ಹೊಂಡದಿಂದ ಮೇಲೆತ್ತಿ ತಂಡಕ್ಕೆ ಸೇರಿಸಿತು.
ಮೂಲತ: ಆನೆಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲೊಂದು ಪ್ರಬೇಧ. ತೀರಾ ನೊಣಗಳ ಕಾಟ ಹೆಚ್ಚಾದಾಗ, ನೊಣವನ್ನು ಓಡಿಸಲು ಚಿಕ್ಕ-ಚಿಕ್ಕ ಕೊಂಬೆಗಳನ್ನು ಮುರಿದುಕೊಂಡು ಸೊಂಡಿಲಿನಿಂದ ಓಡಿಸಿಕೊಳ್ಳುತ್ತವೆ. ರೈತರ ವಿದ್ಯುತ್ ಬೇಲಿಯ ಮೇಲೆ ಮರದ ತುಂಡನ್ನು ಕೆಡವಿ, ಅಡ್ಡಿಯನ್ನು ನಿವಾರಿಸಿಕೊಂಡು ಮುಂದೆ ಸಾಗುತ್ತವೆ. ಮಂದೆಯಲ್ಲಿ ಅತ್ಯಂತ ಬಲವಾದ ಸಾಮಾಜಿಕ, ಕೌಟುಂಬಿಕ ಬಂಧವನ್ನು ಹೊಂದಿರುವ ಆನೆಗಳು ಅತ್ಯಂತ ಸೂಕ್ಷ್ಮ ಮನಸ್ಸಿನವೂ ಹಾಗೂ ಪರಾನುಭೂತಿಯುಳ್ಳವು ಆಗಿದ್ದಾವೆ. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲೊಂದು ಸತ್ತು ಹುಟ್ಟಿದ ತನ್ನ ಮರಿಯನ್ನು ಸೊಂಡಿಲಿನಲ್ಲೇ ಹೊತ್ತು ತಿರುಗುವುದನ್ನು ನೋಡಿದ ಗುಂಪಿನ ಇತರೆ ಆನೆಗಳು ತಾಯಾನೆಯನ್ನು ಸಂತೈಸುತ್ತಿರುವ ದೃಶ್ಯವನ್ನು ಪ್ರಾಣಿಶಾಸ್ತ್ರಜ್ಞರು ದಾಖಲು ಮಾಡಿದ್ದಾರೆ.
ಇಲಾಖೆಗಳು, ಸರ್ಕಾರಗಳು, ಪ್ರಾಣಿಶಾಸ್ತ್ರಜ್ಞರು, ಸಂಘ-ಸಂಸ್ಥೆಗಳು ಮಾಡದ ಕೆಲಸವನ್ನು ಜೀವನ ಭದ್ರತೆಯಿಲ್ಲದ, ವರ್ಷದಲ್ಲಿ ರಜವೂ ಇಲ್ಲದ, ಹಬ್ಬ-ಹರಿದಿನಗಳಲ್ಲೂ ಅಹೋರಾತ್ರಿ ಕಾರ್ಯನಿರ್ವಹಿಸುವ ಪಂಚು ತಂಡಕ್ಕೆ ಸರ್ಕಾರ ನೀಡುವ ದಿನಗೂಲಿ ಯಾತಕ್ಕೂ ಸಾಲುವುದಿಲ್ಲ. ಆದರೂ ಆನೆಯಂತಹ ಬೃಹತ್‍ದೇಹಿಗಳನ್ನು ತಮ್ಮ ಪ್ರೀತಿಯ ಪಿಸುಮಾತುಗಳಿಂದಲೇ ಮಣಿಸುವ ಪಂಚು ಮತ್ತವರ ತಂಡ ವನ್ಯಜೀವಿಶಾಸ್ತ್ರಕ್ಕೊಂದು ಹೊಸ ಪರಿಭಾಷೆಯನ್ನೇ ಬರೆದಿದೆ. ಇತ್ತ ನಮ್ಮನ್ನು ಆಳುವವರು ಏನು ಮಾಡುತ್ತಿದ್ದಾರೆ ಎಂಬುದನ್ನು ಕೊಂಚ ನೋಡಿ ಲೇಖನವನ್ನು ಮುಗಿಸೋಣ.
ದಿನಕ್ಕೆ 18 ತಾಸು ಬಿಡುವಿಲ್ಲದೇ ದುಡಿಯುತ್ತಿರುವ ಜನಸೇವಕರಾದ ಬಲಿಷ್ಠ ಭಾರತದ ಪ್ರಧಾನಿಯವರ ಮೇಕ್ ಇನ್À ಇಂಡಿಯಾ, ಸ್ಮಾರ್ಟ್ ಇಂಡಿಯಾ, ಗ್ರಾಮ ಭಾರತ ಇತ್ಯಾದಿ ಹಲವು ಹತ್ತು ಆಕರ್ಷಕ ಯೋಜನೆಗಳು ಸಮಗ್ರವಾಗಿ ಅನುಷ್ಠಾನಕ್ಕೆ ಬಂದಲ್ಲಿ ಮಾನವಕೇಂದ್ರಿತ ಅಭಿವೃದ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ. ಆದರೆ, ಈ ಎಲ್ಲಾ ಯೋಜನೆಗಳ ಅಡಿಪಾಯವಿರುವುದೇ ದೇಶದ ಅಳಿದುಳಿದ ಅರಣ್ಯ ಸಂಪತ್ತಿನ ಮೇಲೆ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಕೇಂದ್ರ ಅರಣ್ಯ ಮಂತ್ರಿಗಳ ಚಿತ್ತ ಹೇಗಿದೆ ಎಂಬುದನ್ನು ಪರಾಮರ್ಶಿಸಬೇಕಾಗುತ್ತದೆ. ವನ್ಯಸಂಪತ್ತಿನೆಡೆಗೆ ಮಾನ್ಯ ಅರಣ್ಯ ಸಚಿವರಿಗಿರುವ ಒಲವೇನು? ಅರಣ್ಯ, ಜೀವಿವೈವಿಧ್ಯ ಇತ್ಯಾದಿಗಳ ಬಗ್ಗೆ ಕನಿಷ್ಠ ಜ್ಞಾನವನ್ನೂ ಹೊಂದಿಲ್ಲದಿರುವುದು ಅವರ ಇತ್ತೀಚಿನ ಹೇಳಿಕೆಗಳಿಂದ ವ್ಯಕ್ತವಾಗುತ್ತಿದೆ. ಹಿಂದೆಲ್ಲೂ ಇಲ್ಲದಷ್ಟು ಹುಲಿಗಳು ಸಧ್ಯಕ್ಕೆ ಭಾರತದಲ್ಲಿವೆ (2200) ಆದ್ದರಿಂದ ಭಾರತವು ಹುಲಿಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಬಹುದಾದ ಸಂಧರ್ಭವಿದೆ (ಕಾಂಬೋಡಿಯಾ ದೇಶಕ್ಕೆ 6 ಕಾಡಿನ ಹುಲಿಗಳನ್ನು ಹಿಡಿದು ಕಳುಹಿಸಲು ತುದಿಗಾಲಲ್ಲಿ ನಿಂತಿದ್ದಾರೆ) ಎಂದು ಹೇಳುತ್ತಲೇ, ಹುಲಿಗಳಿದ್ದರೆ ಕಾಡು ಸಮೃದ್ಧವಾಗಿರುತ್ತದೆ ಎಂಬ ದ್ವಿಮುಖ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಧ್ಯಪ್ರದೇಶದ ಹುಲಿಸಂರಕ್ಷಣಾ ಪ್ರದೇಶದಲ್ಲೇ ವಜ್ರ ನಿಕ್ಷೇಪ ಅಗೆಯಲು ಅನುಮತಿ ನೀಡುವ ಪ್ರಕ್ರಿಯೆ ನಡೆದಿದೆ. ಇಡೀ ಭಾರತದ ಆರೋಗ್ಯ ಸರಿಯಾಗಿರಬೇಕು ಎಂದರೆ ಶೇ.33% ಪ್ರದೇಶದಲ್ಲಿ ಅರಣ್ಯ ಇರಲೇಬೇಕು ಎಂಬುದು ವಿಜ್ಞಾನಿಗಳ-ತಜ್ಞರ ಪ್ರಬಲ ನಿಲುವು ಆಗಿದೆ. ಈಗ ಹಾಲಿ ನಮ್ಮಲ್ಲಿರುವುದು ಬರೀ 19% ಅರಣ್ಯ ಮಾತ್ರ. ಮಾನ್ಯ ಪ್ರಕಾಶ್ ಜಾವೇಡೆಕರ್ ಅಧಿಕಾರಕ್ಕೆ ಬಂದ ಮೇಲೆ ಅಂದರೆ ಕಳೆದ ಹದಿನಾರು ತಿಂಗಳಿನಲ್ಲಿ 4000 ಚ.ಕಿ.ಮೀ ಅರಣ್ಯ ಪ್ರದೇಶವನ್ನು ದೇಶದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಗಾಗಿ ಕಳೆದುಕೊಂಡಾಗಿದೆ. ಸದಾ ಬಿಜಿಯಾಗಿರುವ ಮೋದಿಯವರು ಭಾರತದ ಅರಣ್ಯ-ಜೀವಿವೈವಿಧ್ಯದತ್ತ ತುರ್ತು ಗಮನಹರಿಸಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬರ-ನೆರೆ, ಬಿಸಿಗಾಳಿ ಇತ್ಯಾದಿಗಳು ತಮ್ಮ ವೇಗವನ್ನು ಪಡೆದುಕೊಂಡು ಭಾರತದ ಪ್ರಜೆಗಳು ಸಂಕಷ್ಟಕ್ಕೀಡಾಗುತ್ತಾರೆ. ಅರಣ್ಯ ಉಳಿಸುವ, ರಕ್ಷಿಸುವ ಹೊಣೆ ಎಲ್ಲರ ಮನದ ಮಾತಾಗಬೇಕು.
(ಪ್ರೇರಣಾ ಸಿಂಗ್ ಬಿಂದ್ರ ಎನ್ನುವ ಲೇಖಕಿ ಇಂಡಿಯಾ ಎನ್ವಿರಾನ್‍ಮೆಂಟ್ ಜರ್ನಲ್‍ನಲ್ಲಿ ಇಂಗ್ಲೀಷ್‍ನಲ್ಲಿ ಬರೆದ ಲೇಖನವನ್ನು ಭಾವಾನುವಾದ ಮಾಡಲಾಗಿದೆ)