ಜಗತ್ತಿನ ಶ್ರೇಷ್ಠ ಗ್ರಂಥಗಳಲ್ಲಿ ರಾಮಾಯಣವು ಒಂದು. ರಾಮಾಯಣ-ಮಹಾಭಾರತವು ಸಮಕಾಲೀನ ರಾಜಕಾರಣಕ್ಕೆ ಹೊಂದಿಕೊಳ್ಳುವಂತೆ ರಚಿತವಾಗಿದೆ. ಆಗೆಲ್ಲಾ ಮಂತ್ರ-ತಂತ್ರಗಳಿಂದ ತಯಾರಿಸಲಾದ ಬಾಣ-ಬಿಲ್ಲುಗಳನ್ನು ಕವಿ ತನ್ನ ಕಲ್ಪನೆಗೆ ರೆಕ್ಕೆ ಕಟ್ಟಿ ಹಾರಿ ಬಿಟ್ಟು ಏನೇನೋ ಅಸಾಧ್ಯವಾದುದನ್ನು ಸೃಷ್ಟಿಸಿ ರಂಜಿಸಿದ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಬ್ಬ ವ್ಯಕ್ತಿ ಹೇಗಿರಬಾರದು ಎಂಬ ಸಂದೇಶವನ್ನು ಬೀರುವ ಹಲವು ಘಟನೆಗಳಿವೆ. ರಾವಣನಂತಹ ಪರಮ ದೈವಭಕ್ತ ಯ:ಕಶ್ಚಿತ್ ಸೀತೆಗಾಗಿ ತನ್ನ ರಾಜ್ಯ, ಮಕ್ಕಳು, ಬಂಧುಗಳು ಕಡೆಗೆ ತನ್ನ ಪ್ರಾಣವನ್ನು ಕಳೆದುಕೊಂಡ. ರಾಮ ವಾಲಿಯನ್ನು ಕೊಂದ ಬಗೆಯನ್ನು ವಿದ್ವಾಂಸರು ಹೇಗೆ ಬೇಕಾದರೂ ಸಮರ್ಥಿಸಿಕೊಳ್ಳಲಿ, ಆದರೆ ರಾಮನ ಈ ನಡೆ ಪೌರುಷಕ್ಕೆ ತಕ್ಕುದಾಗಿರಲಿಲ್ಲವೆಂಬುದು ಹಲವು ಪ್ರಾಜ್ಞರ ಅಭಿಪ್ರಾಯವಾಗಿದೆ. ಅದೇನೇ ಇರಲಿ, ರಾಮಾಯಣದಲ್ಲಿ ಲಕ್ಷ್ಮಣ ರೇಖೆಗೊಂದು ವಿಶಿಷ್ಟ ಮಹತ್ವವಿದೆ. ಮಾತೃಸಮಾನ ಅತ್ತಿಗೆಯ ಬರೀ ಪಾದಗಳನ್ನು ಮಾತ್ರ ನೋಡಿದ್ದ, ಲಕ್ಷಣ ತನ್ನ ಅತ್ತಿಗೆ ಬಲು ಸುಂದರಿಯಾಗಿರಬಹುದು ಎಂದು ಭಾವಿಸಿದ್ದ, ಚಿನ್ನದ ಜಿಂಕೆ ಬೇಕೇ ಬೇಕು ಎಂದು ಹಠ ಹಿಡಿದ ಅತ್ತಿಗೆಯ ಬೇಡಿಕೆಯನ್ನು ರಾಮನ ಸಮೇತ ಲಕ್ಷ್ಮಣನಿಗೂ ತಳ್ಳಿ ಹಾಕಲು ಸಾಧ್ಯವಾಗಲಿಲ್ಲ. ಚೆಂದದ ಗೃಹಿಣಿಯರು ಯಜಮಾನರಿಗೊಂದು ತಲೆನೋವು, ಆಗಿನ ಕಾಲದಲ್ಲೂ ಈ ತರಹದ ಮನೋಸ್ಥಿತಿಯಿತ್ತು ಎಂಬುದನ್ನು ಈ ಘಟನೆ ಬಿಂಬಿಸುತ್ತದೆ. ಆದ್ದರಿಂದ ಮುಂಜಾಗರೂಕತೆ ವಹಿಸಿದ ಲಕ್ಷ್ಮಣ ಒಂದು ಸರಳ ರೇಖೆಯನ್ನು ಆಶ್ರಮದ ಬಾಗಿಲಿಗೆ ಎಳೆದು, ಇದನ್ನು ಯಾವುದೇ ಕಾರಣಕ್ಕೂ ದಾಟಿ ಹೋಗಬಾರದು ಎಂದು ಸೀತೆಗೆ ವಿನಂತಿಸಿ, ಬಂಗಾರದ ಜಿಂಕೆಯನ್ನು ಬೇಟೆಯಾಡಲು ಅಣ್ಣ ರಾಮನ ಜೊತೆ ಬಿಲ್ಲು-ಬಾಣಗಳನ್ನು ಹೊತ್ತು ಅರಣ್ಯಕ್ಕೆ ತೆರಳುತ್ತಾನೆ. ಇತ್ತ ಋಷಿ ವೇಷ ಧರಿಸಿದ ರಾವಣ ಕುಟಿಲತೆಯಿಂದ ಸೀತೆಯನ್ನು ಅಪಹರಿಸುತ್ತಾನೆ ಎಂಬ ಕತೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಅನಕ್ಷರಸ್ಥರಿಗೂ ಈ ಘಟನೆಗಳು ಗೊತ್ತು. ಯಕ್ಷಗಾನ-ತಾಳಮದ್ಧಲೆ, ಜನಪದ ಗೀತೆ ಹೀಗೆ ಎಲ್ಲಾ ಮಾಧ್ಯಮಗಳಿಂದ ತಿಳಿದಿದೆ.
೨೦ನೇ ಶತಮಾನದಲ್ಲಿ ಲಕ್ಷ್ಮಣ ರೇಖೆ ಎಂಬ ಹೆಸರು ಹೊತ್ತು, ಜಿರಳೆ-ಇರುವೆಗಳನ್ನು ಸಾಯಿಸಲು, ಮನೆಯೊಳಗೆ ಬಾರದಂತೆ ಮಾಡುವ ಚಾಕ್ ಪೀಸ್ ಆಕಾರದ ಒಂದು ರಾಸಾಯನಿಕ ಸಮ್ಮಿಶ್ರಣ ಮಾರುಕಟ್ಟೆಗೆ ಬಂತು. ಇರುವೆ-ಜಿರಲೆಗಳನ್ನು ಪೀಡೆಯೆಂದು ತಿಳಿದ ಸಾಮಾನ್ಯರು ವಿಷಯುಕ್ತ ಲಕ್ಷಣ ರೇಖೆಯನ್ನು ಮನೆಯ ಸುತ್ತ ಎಳೆದು ಇರುವೆ ಜಿರಲೆಗಳಿಂದ ಬಚಾವಾಗಿಬಿಟ್ಟೆವು ಎಂದು ಕೊಂಡರು. ವಾಸ್ತವವಾಗಿ ಜಿರಲೆಗಳಾಗಲಿ, ಇರುವೆಗಳಾಗಲಿ ಇವತ್ತಿಗೂ ಎಲ್ಲರ ಮನೆಯಲ್ಲಿವೆ. ಹೊಸಯುಗದ ಲಕ್ಷ್ಮಣ ರೇಖೆಯಿಂದ ವಾತಾವರಣದಲ್ಲಿ ವಿಷ ಸೇರಿತೇ ಹೊರತು ಮೂಲ ಸಮಸ್ಯೆ, ಪುರಾಣದ ಲಕ್ಷ್ಮಣ ರೇಖೆಯಂತೆ ವಿಫಲವಾಯಿತು. ಲಕ್ಷ್ಮಣ ರೇಖೆಯೆಂದು ಕೋಟಿಗಟ್ಟಲೆ ಹಣಗಳಿಸಿದ ಲಕ್ಷ್ಮಣ ರೇಖೆ ತಯಾರಿಕ ಕಂಪನಿ ಪುರಾಣದ ಒಂದು ಭಾವನಾತ್ಮಕ ಸನ್ನಿವೇಶವನ್ನು ಮಾರುಕಟ್ಟೆಯಾಗಿ ರೂಪಿಸಿಕೊಂಡು ನಿರಾಳವಾಗಿದೆ. ರಾಯಲ್ಟಿ ಕೇಳಲು ವಾಲ್ಮೀಕಿ ಬದುಕಿಲ್ಲ. ಹಿಂದೂ ಧರ್ಮವನ್ನು ಕಾಪಾಡುವ ಗುತ್ತಿಗೆ ಪಡೆದವರು ಇದರ ಬಗ್ಗೆ ಗಮನ ಹರಿಸಿಲ್ಲ. ರಾಮಾಯಣಕ್ಕೆ ಪೇಟೆಂಟ್ ಪಡೆದಿದ್ದರೆ, ರಾಯಲ್ಟಿಯ ರೂಪದಲ್ಲಿ ಹಣ ಬರುತ್ತಿತ್ತೇನೋ? ಅದಲ್ಲ ಆಗದ ಕತೆಯೀಗ ಬಿಡಿ.
ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ರಜ್ಞಾವಂತರಾದ, ಲಾಭಕೋರ ಮನ:ಸ್ಥಿತಿಯನ್ನು ಹೊಂದಿರದ, ಪ್ರಾಮಾಣಿಕವಾದ ಜಗತ್ತಿನ ಸಾಮಾನ್ಯ ಜನ ಒಟ್ಟಾಗಿ ಇವತ್ತು ಹಲವು ವಿಷಯಗಳಿಗೆ, ಸ್ಥಳಗಳಿಗೆ ಲಕ್ಷಣರೇಖೆಯನ್ನು ಎಳೆಯುವ ದುಸ್ಥಿತಿ ಬಂದಿದೆ. ಆ ಕಡೆಯ ಕಳ್ಳ ಒಳಗೆ ಹೊಕ್ಕು ರಾವಣನಂತೆ ವರ್ತಿಸಬಾರದೆಂದರೆ, ಸಾಮಾನ್ಯ ಜನ ಲಕ್ಷಣ ರೇಖೆಯಂತಾಗಬೇಕು. ಲಕ್ಷಣ ರೇಖೆಯ ಒಳಗಡೆಯಿರುವ ಪರಿಸರ ತಾನಾಗಿಯೇ ಸೀತೆಯಂತೆ ಗಡಿ ದಾಟಿಹೋಗಲಾರದು. ಲಕ್ಷ್ಮಣ ರೇಖೆಯನ್ನು ಹಾದು ಹೋಗದಂತೆ ದುರುಳ ತೈಲ ಕಂಪನಿಗಳನ್ನು ತಡೆಯುವ ಉದ್ದೇಶವೇ ಈ ಹೊಸ ಶತಮಾನದ ಲಕ್ಷ್ಮಣ ರೇಖೆಯ ಉದ್ದೇಶ. ಆಫ್ರಿಕಾ ಖಂಡಕ್ಕೆ ಕಗ್ಗತ್ತಲ ಖಂಡ ಎಂಬ ಹೆಸರಿದೆ. ಈ ಹೆಸರು ಬರಲು ಕಾರಣ ಅಲ್ಲಿನ ದಟ್ಟಾರಣ್ಯ ಮತ್ತು ದಟ್ಟಾರಣ್ಯದಲ್ಲಿರುವ ಅಸಂಖ್ಯ ಪ್ರಬೇಧಗಳ ವನ್ಯಜೀವಿಗಳು. ವಿರುಂಗಾ ರಾಷ್ಟ್ರೀಯ ಉದ್ಯಾನವನ ಆಫ್ರಿಕಾದ ಪುರಾತನ ಮತ್ತು ಅತಿಹೆಚ್ಚು ವೈವಿಧ್ಯಗಳಿಂದ ಕೂಡಿದ ಪ್ರದೇಶ. ಇಲ್ಲಿ ಗೋರಿಲ್ಲಾದ ಅಪರೂಪದ ಮೂರು ಪ್ರಬೇಧಗಳಿವೆ ಅಲ್ಲದೆ ಪ್ರಪಂಚದ ಬೇರೆಲ್ಲೂ ಇಲ್ಲದಂತಹ ೨೧೪ ಜೀವಿವೈವಿಧ್ಯ ಪ್ರಬೇಧಗಳಿವೆ. ಸೋಕೊ ಇಂಟರ್‌ನ್ಯಾಷನಲ್ ಪಿಎಲ್‌ಸಿ ಎಂಬ ತೈಲ ಕಂಪನಿಯ ಕಣ್ಣು ಇದೀಗ ಈ ಪ್ರದೇಶದ ಮೇಲೆ ಬಿದ್ದಿದೆ. ವಿರುಂಗಾ ರಾಷ್ಟ್ರೀಯ ಉದ್ಯಾನವನದ ಅಡಿಯಲ್ಲಿ ಬಾರಿ ಪ್ರಮಾಣದ ತೈಲ ನಿಕ್ಷೇಪವಿದೆ ಎಂಬುದನ್ನು ಆಧುನಿಕ ತಂತ್ರಜ್ಞಾನದಿಂದ ಕಂಪನಿ ಕಂಡುಕೊಂಡಿದೆ. ಅಲ್ಲಿ ಈಗ ಸೋಕೊ ಕಂಪನಿ ಅಲ್ಲಿನ ಆಡಳಿತದ ದಿಕ್ಕು ತಪ್ಪಿಸಿ ತನ್ನ ದೈತ್ಯ ಯಂತ್ರಗಳನ್ನು ಬಳಸಿ ನೆಲ ಬಗೆಯಲು ತಯಾರಾಗಿದೆ. ಅಲ್ಲಿ ಕಾಡಿನ ಮಧ್ಯೆ ಸೌಹಾರ್ಧಯುತವಾಗಿ ಬಾಳುತ್ತಿರುವ ಬುಡಕಟ್ಟು ಜನಾಂಗವಿದೆ. ಈ ಪ್ರದೇಶವನ್ನು ವಿಶ್ವ ಪಾರಂಪಾರಿಕ ತಾಣವೆಂದು ಯುನೆಸ್ಕೊ ಕೂಡ ಘೋಷಿಸಿದೆ.
ವಿರುಂಗಾದ ದಟ್ಟಾರಣ್ಯದಲ್ಲಿ ಬಲು ಅಪರೂಪದ ಪಕ್ಷಿಗಳು, ಸಿಂಹ, ಆನೆ, ನೀರಾನೆ, ಅಪರೂಪದ ಓಕಾಪಿಗಳಲ್ಲದೆ, ಅಪೂರ್ವವಾದ ಬೆಟ್ಟದ ಗೋರಿಲ್ಲಗಳಿವೆ. ಸೋಕೊ ತೈಲ ಕಂಪನಿ ರಸ್ತೆ ನಿರ್ಮಾಣ, ಪೈಪುಗಳನ್ನು ಅಳವಡಿಸುವ, ಹಿಟಾಚಿ ಬುಲ್ಡೊಜೋರ್ ಬಳಸಿ ತೈಲವನ್ನೆತ್ತುವ ಹುನ್ನಾರ ನಡೆಸಿದೆ. ಜೊತೆಗೆ ಅಲ್ಲಿ ತೈಲವನ್ನು ತೆಗೆಯುವುದರಿಂದಾಗಿ ಅಲ್ಲಿನ ಬುಡಕಟ್ಟು ಜನರಿಗೆ ಅನುಕೂಲವಾಗಲಿದೆ ಎಂಬ ವಾದವನ್ನು ಮುಂದಿಟ್ಟುಕೊಂಡು ತೈಲ ನಿಕ್ಷೇಪ ಬಗೆಯಲು ಹೊರಟಿದೆ. ದೊಡ್ಡ ಯಂತ್ರಗಳು ಅಲ್ಲಿನ ಜೀವವೈವಿಧ್ಯವನ್ನು ಹಾಳುಮಾಡಿ ಅಲ್ಲಿನ ಪರಿಸರವನ್ನು ಸರಿಪಡಿಸಲಾಗದಂತಹ ರೂಪಕ್ಕೆ ತಳ್ಳುಲ್ಪಡುತ್ತವೆ ಎಂಬುದು ವಿರುಂಗಾ ಉಳಿಸಿ ಎಂದು ಹೋರಾಟ ಮಾಡುತ್ತಿರುವವರ ವಾದ. ನೆಲದಡಿಯಲ್ಲಿರುವ ತೈಲವನ್ನು ಮೇಲೆತ್ತಿದಾಗ ಸ್ವಾಭಾವಿಕವಾಗಿ ಅಲ್ಲಿನ ಪರಿಸರ ಹಾಳಾಗುತ್ತದೆ. ಅಲ್ಲಿನ ಸ್ವಚ್ಛವಾದ ಐತಿಹಾಸಿಕ ಎಡ್ವರ್ಡ್ ಸರೋವರದ ನೀರು ಕುಡಿಯಲು ಅನುಪಯುಕ್ತವಾಗುತ್ತದೆ. ಆಧುನಿಕ ಮನುಜನ ಪ್ರವೇಶದಿಂದಾಗಿ ಅಲ್ಲಿನ ಪ್ರಾಣಿ-ಪಕ್ಷಿಗಳು ನೆಲೆ ಕಳೆದುಕೊಳ್ಳುತ್ತವೆ. ಕ್ರಮೇಣ ನಾಶವಾಗುತ್ತವೆ. ಆದ್ದರಿಂದ ಇಲ್ಲೊಂದು ಲಕ್ಷ್ಮಣ ರೇಖೆ ಎಳೆಯುವ ಅಗತ್ಯವಿದೆ. ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಎಂಬ ಅಂತಾರಾಷ್ಟ್ರೀಯ ವನ್ಯಜೀವಿ ಸಂಸ್ಥೆ ಸೋಕೊ ಕಂಪನಿಯ ವಿರುದ್ಧ ಜನಜಾಗೃತಿ ಮೂಡಿಸುತ್ತಿದೆ. ಇದುವರೆಗೆ ೫೬೦೦೦೦ ಸಾವಿರ ಪರಿಸರಾಸಕ್ತರು ಅಲ್ಲಿ ಲಕ್ಷ್ಮಣ ರೇಖೆಯನ್ನು ಎಳೆಯಲು ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಜೊತೆ ಕೈಜೋಡಿಸಿದ್ದಾರೆ. ಜನಶಕ್ತಿಯ ಮುಂದೆ ಯಾವುದೇ ಕಾರ್ಪೊರೇಟ್ ಕಂಪನಿಗಳ ಆಟ ಸಾಗುವುದಿಲ್ಲ. ರಾವಣನಂತೆ ಕುಯುಕ್ತಿಯಿಂದ ಅಲ್ಲಿನ ಪರಿಸರವನ್ನು ಹಾಳುಗೆಡವಿ ತೈಲವನ್ನು ಬಗೆದು ಲಾಭ ಮಾಡಿಕೊಳ್ಳುವುದು ಸಾಧ್ಯವಿಲ್ಲ. ವಿರುಂಗಾ ಅಭಯಾರಣ್ಯ ಆಫ್ರಿಕಾ ದೇಶದಲ್ಲಿದ್ದರೂ ಅದೊಂದು ವಿಶ್ವದ ಸ್ವತ್ತು. ಅಲ್ಲಿಯ ಪರಿಸರ ಹಾಳಾದರೆ, ನಮ್ಮ ಪರಿಸರವೂ ಹಾಳಾದ ಹಾಗೆ. ಆದ್ದರಿಂದ, ವಿರುಂಗಾ ಅಭಯಾರಣ್ಯವನ್ನು ರಕ್ಷಿಸುವುದು ಜಗತ್ತಿನ ಪ್ರತಿಯೊಬ್ಬನ ಕರ್ತವ್ಯವಾಗಿದೆ. ನಾವೇನು ಅಂಗಡಿಯಲ್ಲಿ ಸಿಗುವ ಲಕ್ಷ್ಮಣ ರೇಖೆಯನ್ನು ಖರೀದಿಸಿ, ವಿಮಾನ ಹತ್ತಿ, ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಆಫ್ರಿಕಾಕ್ಕೆ ಹೋಗಬೇಕಿಲ್ಲ. ಸೋಕೊ ಕಂಪನಿಗೆ ಪ್ರವೇಶ ನಿರಾಕರಿಸಿ ಕುಳಿತಲ್ಲೆ ಲಕ್ಷ್ಮಣ ರೇಖೆಯೆಳೆಯಲು ನಾವು ಕೈಜೋಡಿಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೆ. ಪಾಂಡಾ ನೀವು ಈ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿನ ಸೂಚನೆಗಳನ್ನು ಪಾಲಿಸಿದರೆ ಸಾಕು. ಅಲ್ಲೊಂದು ಬೃಹತ್ತಾದ ಲಕ್ಷ್ಮಣ ರೇಖೆ ಸಿದ್ಧವಾಗುತ್ತದೆ. ಲಂಡನ್ ಮೂಲದ ಸೋಕೊ ತೈಲಕಂಪನಿ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಾಸಾಗುತ್ತದೆ.
ಇದಲ್ಲದೆ, ನಾವುಗಳು ವೈಯಕ್ತಿಕವಾಗಿ ಹಲವು ತರಹದ ಲಕ್ಷ್ಮಣ ರೇಖೆಗಳನ್ನು ನಮ್ಮ ಸುತ್ತ ಎಳೆದುಕೊಳ್ಳಬೇಕು. ರಾವಣನ ಅಂಶ ಹೊಂದಿರುವ ಹಲವು ಗುಣಗಳು ನಮ್ಮಲ್ಲೂ ಇವೆ. ಅತಿಯಾದ ದುಂದುಗಾರಿಕೆಗೆ ಇಂಬುಕೊಡದಂತೆ ನಮ್ಮೊಳಗೆ ದುಂದುಗಾರ ಪ್ರವೇಶ ಮಾಡದಂತೆ ರೇಖೆಯೆಳೆದುಕೊಳ್ಳಬಹುದು. ಹುಲಿಯ ವೇಷ ಧರಿಸಿ ಬರುವ ನರಿಯಂತಹ ರಾಜಕೀಯ ಪಕ್ಷಗಳಿಗೆ ಪ್ರವೇಶ ನಿರಾಕರಿಸಲು ಸಾಮೂಹಿಕವಾಗಿ ನಮ್ಮ ಪ್ರದೇಶದಲ್ಲೊಂದು ಲಕ್ಷ್ಮಣ ರೇಖೆಯನ್ನು ಎಳೆಯಬಹುದು. ನಮ್ಮೂರ ಬೆಟ್ಟ-ಗುಡ್ಡಗಳನ್ನು ಅಗೆದು-ಬಗೆದು ಸಾಗಿಸುವ ಸ್ಥಳೀಯ ದೂರ್ತರಿಗೆ ಪ್ರವೇಶ ಅಸಾಧ್ಯವಾಗುವಂತೆ ಸಾಮೂಹಿಕವಾಗಿ ಸಾಮಾನ್ಯರು ಬೆಟ್ಟ-ಗುಡ್ಡಗಳ ಸುತ್ತ ಹಸಿರು ಬೆಳೆಸಿ, ಈ ರೇಖೆಯನ್ನು ದಾಟಿದರೆ ಹುಷಾರ್ ಎಂಬ ಎಚ್ಚರಿಕೆಯನ್ನು ನೀಡಬಹುದು. ಉತ್ತಮ ಭವಿಷ್ಯವನ್ನು ರೂಪಿಸಲು, ನಾವು ಪ್ರಕೃತಿಯ ಜೊತೆ ಸೌಹಾರ್ಧಯುತವಾಗಿ ಬಾಳಬೇಕು ಎಂಬುದು ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಸಂಸ್ಥೆಯ ಧ್ಯೇಯ ವಾಕ್ಯ. ಈ ವಾಕ್ಯವೂ ಕೂಡ ಲಕ್ಷ್ಮಣ ರೇಖೆಯಂತೆ ಕಾರ್ಯನಿರ್ವಹಿಸಬಲ್ಲದು.
ಮುಂಬಯಿಯಂತಹ ಜನಪ್ರದೇಶದಲ್ಲಿ ಒಡಾಡುವುದೇ ಒಂದು ಸವಾಲು. ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿದ್ದರೂ ಅಲ್ಲಿನ ರಸ್ತೆಯಲ್ಲಿ ವಾಹನಗಳು ಗಿಜಿಗುಡುತ್ತವೆ. ಏಸಿ ಕಾರಿನಲ್ಲಿ ಕುಳಿತ ಮಹಾಶಯ ಶುದ್ಧ ಗಾಳಿಯನ್ನು ಉಸಿರಾಡುತ್ತಾನೆ. ಆದರೆ ಅವನ ವಾಹನದಿಂದ ಬರುವ ಹೊಗೆಯನ್ನು ಬಡ ಪಾದಾಚಾರಿಗಳು ಉಸಿರಾಡಿ, ಶ್ವಾಸಕೋಶದ ಕಾಯಿಲೆಗೆ ತುತ್ತಾಗುತ್ತಾರೆ. ವಾಹನ ಹೊಂದುವುದು ಅಪರಾಧವಲ್ಲ. ಇಲ್ಲಿ ಪ್ರತ್ಯಕ್ಷವಾಗಿ ಬಡ ಪಾದಾಚಾರಿಗಳ ಮೇಲೆ ದೌರ್ಜನ್ಯವಾಗುತ್ತದೆ. ಇದನ್ನು ಗಮನಿಸಲು ನಮ್ಮಲ್ಲಿ ಯಾವುದೇ ಕಾನೂನುಗಳಿಲ್ಲ. ಎಲ್ಲಾ ಮಹಾನಗರಗಳ ಪ್ರದೇಶಗಳ ಕತೆಯು ಇಷ್ಟೆ ಆಗಿದೆ. ಮೊನ್ನೆ ಫೆಬ್ರುವರಿ ೨ರಂದು ಮುಂಬಯಿ ಮಹಾನಗರದಲ್ಲಿ ಮೊನೊರೈಲ್ ಸಾರ್ವಜನಿಕರ ಉಪಯೋಗಕ್ಕಾಗಿ ತೆರವು ಮಾಡಿದ್ದಾರೆ. ಚೆಂಬೂರ್‌ನಿಂದ ವಡಾಲ ಜಾಕೋಬ್ ವೃತ್ತದವರೆಗೆ ೧೯.೧೭ ಕಿ.ಮಿ. ಚಲಿಸುವ ಈ ರೈಲು ಪ್ರಪಂಚದಲ್ಲಿ ಎರಡನೇ ಅತಿ ಉದ್ದದ ಮೊನೊರೈಲು ಎಂಬ ಕೀರ್ತಿಗಳಿಸಿದೆ. ಇದನ್ನು ಬಿಟ್ಟರೆ ಜಪಾನಿನ ಒಸಕಾ ಮೊನೊರೈಲು ಅತಿ ಉದ್ದ ಚಲಿಸುವ ರೈಲಾಗಿದೆ. ಇದು ೨೩.೮ ಕಿ.ಮಿ. ಚಲಿಸುತ್ತದೆ. ಮುಂಬಯಿಯ ಮೊನೋರೈಲು ಈಗ ಹಾಲಿ ಇರುವ ರೈಲುಗಳ ಮೇಲಿರುವ ಜನಸಂದಣಿಯನ್ನು ಕಡಿಮೆ ಮಾಡುವುದರೊಟ್ಟಿಗೆ, ರಸ್ತೆಗಳ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ದರವೂ ಕಡಿಮೆಯಿರುವುದರಿಂದ ಅಂದರೆ ಕಡಿಮೆಯೆಂದರೆ ೫ ರೂಪಾಯಿಯಾದರೆ, ಹೆಚ್ಚೆಂದರೆ ೧೯ ರೂಪಾಯಿಗಳು ಮಾತ್ರ. ಈ ಮೊನೋರೈಲು ಕೂಡ ಒಂದು ತರಹ ವೈಯಕ್ತಿಕ ಸಾರಿಗೆಯ ಸುತ್ತ ಎಳೆದ ಲಕ್ಷ್ಮಣ ರೇಖೆ ಎನ್ನಬಹುದು.
ಹಾಗಾದರೆ ಮೊನೋರೈಲು ಎಂದರೇನು ಎಂಬುದನ್ನು ಕೊಂಚ ನೋಡೋಣ. ಸಾಮಾನ್ಯವಾಗಿ ರೈಲೆಂದರೆ ೨ ಹಳಿ ಇರುತ್ತದೆ. ಹತ್ತಾರು ಭೋಗಿಗಳನ್ನು ಜೋಡಿಸಿದ ರೈಲಿನಲ್ಲಿ ಸಾವಿರಾರು ಪ್ರಯಾಣಿಕರು ಪಯಣಿಸುತ್ತಾರೆ ಇತ್ಯಾದಿಗಳು. ಮೊನೋರೈಲಿಗೆ ಒಂದೇ ಹಳಿಯಿರುತ್ತದೆ. ಮತ್ತು ಇದರ ಮೂಲ ಉದ್ಧೇಶವೇ ಸಂಚಾರಿ ಅಡಚಣೆಯಿಂದ ಪಾರಾಗಿ, ಜನರನ್ನು ವೇಗವಾಗಿ ಗಮ್ಯ ತಲುಪಿಸುವ ಕೆಲಸ. ಸಾಮಾನ್ಯವಾಗಿ ೧೦ ಅಡಿ ಅಥವಾ ಅದಕ್ಕಿಂತ ಎತ್ತರದಲ್ಲಿ ಚಲಿಸುವ ಮೊನೊರೈಲಿಗೆ ಯಾವುದೇ ಸಿಗ್ನಲ್‌ಗಳಿಲ್ಲ. ಮೊನೋರೈಲಿನ ಎದುರಿಗೆ ಇನ್ಯಾವುದೇ ವಾಹನಗಳು ಅಡ್ಡಬರುವುದಿಲ್ಲ. ಅತ್ಯಂತ ಕ್ಷಿಪ್ರವಾಗಿ, ಅಪಾಯರಹಿತವಾಗಿ, ಚಲಿಸಿ ಗುರಿಮುಟ್ಟಿಸುವ ಕೆಲಸ ಮಾಡುವ ಈ ಹೊಸ ವಿನ್ಯಾಸದಿಂದ ರಸ್ತೆ ಮತ್ತು ರೈಲುಗಳ ಮೇಲೆ ಜನರ ಒತ್ತಡ ಕಡಿಮೆಯಾಗುತ್ತದೆ. ಉದಾಹರಣೆಯಾಗಿ ನೋಡುವುದಾದರೆ ಜಪಾನಿನ ಒಸಕಾ ಮೊನೋರೈಲಿನಲ್ಲಿ ೧,೨೭೦೦೦ ಜನರು ಒಂದು ದಿನದಲ್ಲಿ ತಿರುಗಾಡುತ್ತಾರೆ. ಅಂದರೆ ಇಷ್ಟು ಜನ ತಮ್ಮ ಸ್ವಂತ ವಾಹನದಲ್ಲಿ ದಿನನಿತ್ಯ ಚಲಿಸಿದಾಗ ಆಗುವ ವಾಯುಮಾಲಿನ್ಯದ ಪ್ರಮಾಣವೆಷ್ಟು? ಈ ಮಾಲಿನ್ಯವನ್ನು ತಡೆಯುವ ಸಾಧನವಾಗಿಯೂ ಮೊನೋರೈಲು ಬಳಕೆಯಾಗುತ್ತಿದೆ.
ಕೊನೆಯದಾಗಿ, ಭಾರತದಲ್ಲಿ ೧೨ ಸಾವಿರಕ್ಕೂ ಹೆಚ್ಚು ರೈಲುಗಳು ಪ್ರತಿನಿತ್ಯ ಸಂಚರಿಸುತ್ತವೆ. ಪಟ್ಟಣ-ನಗರ-ಮಹಾನಗರಗಳಲ್ಲಿ ರೈಲು ಸಂಚರಿಸುವಾಗ, ರಸ್ತೆಯ ವಾಹನಗಳನ್ನು ಗೇಟ್ ಹಾಕಿ ನಿಲ್ಲಿಸುತ್ತಾರೆ. ಹಳಿಯ ಇಕ್ಕೆಲಗಳಲ್ಲೂ ಸಾವಿರಾರು ವಾಹನಗಳು ತುರ್ತಾಗಿ ಹಳಿ ದಾಟುವ ಧಾವಂತದಲ್ಲಿರುತ್ತವೆ. ಹೆಚ್ಚಿನ ವಾಹನಗಳನ್ನು ಚಾಲಕರು ಚಾಲನೆಯಲ್ಲಿಟ್ಟಿರುತ್ತಾರೆ. ಇದರಿಂದ ಹೊರಬರುವ ಇಂಗಾಲಾಮ್ಲದ ಪ್ರಮಾಣವೆಷ್ಟು ಎಂದು ಯಾರು ಲೆಕ್ಕ ಹಾಕುವುದಿಲ್ಲ. ರಸ್ತೆ ಸಾರಿಗೆಗೆ ಅಡಚಣೆಯಾಗದಂತೆ ಫ್ಲೈಓವರ್‌ಗಳನ್ನು ನಿರ್ಮಿಸಲು ಸರ್ಕಾರಗಳು ಮುಂದಾಗುವುದಿಲ್ಲ. ಮುಂದೆಂದೋ ಈ ಕೆಲಸವೂ ಆಗಬಹುದು. ವಾಯುಮಾಲಿನ್ಯವೆಂಬ ಕರಿಭೂತ ಭೂತಾಯಿಯನ್ನು ಇಂಚಿಂಚಾಗಿ ನುಂಗುತ್ತಿದ್ದಾನೆ. ಭೂತಾಯಿ ಮಕ್ಕಳಾದ ನಾವುಗಳು ಸಂಕಷ್ಟದಲ್ಲಿದ್ದೇವೆ. ಕಷ್ಟ ಮೈಮೇಲೆರಗುವ ಮುಂಚೆಯೇ ಮಾಲಿನ್ಯಕ್ಕೊಂದು ರೇಖೆ ಎಳೆಯಬೇಕು.
*******
thumbaa gambheera baraha…channaagide sir….
ಸರ್, ನಿಮ್ಮ ಪರಿಸರ ಕಾಳಜಿ ಬಗ್ಗೆ ಹೆಚ್ಚು ಹೆಚ್ಛು ಅಭಿನಂದನೆಗಳು…. ಅದೇ ರೀತಿ ನಾವೂ ಸಹ ಪರಿಸರ ಕಾಳಜಿ ವಹಿಸಬೇಕು… ಅಟ್ ಲೀಸ್ಟ್ ನಮ್ಮ ನಮ್ಮ ಮಟ್ಟದಲ್ಲಿ ನಿರ್ವಹಿಸಿದರೂ ಅದೇ ದೊಡ್ಡ ಉಪಕಾರವಾದೀತು…
Well written Akhilesh Sir, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸೂಕ್ಷ್ಮ ಸಮತೋಲನ ಕಾಯ್ದುಕೊಳ್ಳಲು ಪ್ರಾಮಾಣಿಕತೆ ಮತ್ತು common sense ನ ಅಗತ್ಯ ಇದೆ. ಇವತ್ತಿನ ದಿನ ಇವೆರಡೂ scarce commodities. 🙂
ಲೇಖನ ಮೆಚ್ಚಿದ ಪದ್ಮಾ ಅಮರ್ ದೀಪ್ ಮತ್ತು ನಯನ
ಮತ್ತು ಎಲ್ಲರಿಗೂ ಹೃದಯಪೂವ೯ಕ ಧನ್ಯವಾದಗಳು