ಪಿ.ಲಂಕೇಶ್. ಕನ್ನಡ ಸಾಹಿತ್ಯದಲ್ಲಿ ತುಂಬಾ ಪರಿಚಿತ ಮತ್ತುಆತ್ಮಿಯ ಹೆಸರು. ಈಗಾಗಲೇ ಲಂಕೇಶ್‍ರ ಬದುಕು ಮತ್ತು ಬರಹದ ಬಗ್ಗೆ ಅನೇಕ ಬರಹಗಾರರು ಕೃತಿಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಏಕೆ ಸ್ವತಃ ಲಂಕೇಶರೇ ತಮ್ಮ ಆತ್ಮಚರಿತ್ರೆ "ಹುಳಿಮಾವಿನ ಮರ"ವನ್ನು ನಮ್ಮಕೈಗಿಟ್ಟು ಹೋಗಿದ್ದಾರೆ. ಆದರೆ ಒಂದು ಮಾತ್ರ ನಿಜ. ಆ ಬರಹಗಳನ್ನೆಲ್ಲ ಮತ್ತೆ ಮತ್ತೆಓದಿದ ಹಾಗೆ ಮತ್ತೆ ಮತ್ತೆ ಲಂಕೇಶರ ವಿಭಿನ್ನ ಮನಸ್ಥಿತಿಗಳ ಅರಿವು ಗಾಢವಾಗುತ್ತಾ ಹೋಗುತ್ತದೆ. ಮೊದಲಿಗೆ ಓದಿದಾಗ ಲಂಕೇಶ ಒಬ್ಬ ಉತ್ತಮ ವಿಚಾರವಾದಿ ಹಾಗೂ ಸಮಾಜವಾದಿ ಎನಿಸಬಹುದು. ಎರಡನೇ ಬಾರಿಗೆ ಓದಿದಾಗ ಲಂಕೇಶ ಒಬ್ಬ ಶುದ್ಧ ಪೋಲಿ ಎನಿಸಬಹುದು. ಮೂರನೇ ಬಾರಿಗೆ ಕಣ್ಣು ಹಾಯಿಸಿದಾಗ ಇಡೀ ಮನುಷ್ಯನ ಮನಸ್ಸಿನ ವಿವಿಧ ಭಾವಗಳ ಸಹಜ ಬದುಕಿನ ಗುಚ್ಛ ಎಂದು ಅನಿಸಬಹುದು. ಆದರೆ ಬಹಳಷ್ಟು ಸಲ ಈ ಮೂರನೇ ಬಾರಿಯ ಪ್ರಯತ್ನ ಸಂಭವಿಸುವುದಿಲ್ಲವೆನೊ.
ಮೊನ್ನೆ ನನ್ನ ಗುರು ಮತ್ತು ಸ್ನೇಹಿತರಾದ ಮಹೇಂದ್ರ ನವೋದಯರವರು ಇದೊಂದು ಸಲ ಓದಿ ನೋಡಿ ಎನ್ನುತ್ತ ಹಾಲತಿ ಸೋಮಶೇಖರ್‍ರವರು ಲಂಕೇಶರ ಬದುಕಿನ ಕುರಿತು ಸಂಪಾದಿಸಿದ ಕೆಲವು ಬರಹಗಳ ಪುಸ್ತಕವನ್ನು ನನ್ನ ಕೈಗಿತ್ತರು. ನಾನು ಅದಾಗಲೇ ಲಂಕೇಶರ ಬಗ್ಗೆ ತಿಳಿದುಕೊಂಡಿದ್ದರೂ ಇರಲಿ ನೋಡೋಣವೆನ್ನುತ್ತ ಪುಸ್ತಕವನ್ನು ತೆಗೆದುಕೊಂಡು ಹೋಗಿ ಓದಲಾರಂಭಿಸಿದೆ. ಓದುತ್ತಿದ್ದಂತೆ ಲಂಕೇಶರ ಹಣದ ವ್ಯಾಮೋಹ ಮತ್ತು ಖರ್ಚು ಮಾಡುವ ಧಾರಾಳಿತನ, ಹೆಣ್ಣು, ಹೆಂಡ, ಜೂಜು ಮತ್ತು ರೇಸ್‍ಗಳ ಕಡೆಗಿದ್ದ ಲಂಕೇಶರ ಒಲವು ಮತ್ತುಆಕರ್ಷಣೆ, ತಮ್ಮ ಸಮಕಾಲೀನ ಗೆಳೆಯರಾದ ಚಂಪಾ, ತೇಜಸ್ವಿ ಮತ್ತು ಸುಮತೀಂದ್ರ ನಾಡಿಗರಜೊತೆಗಿನ ಲಂಕೇಶರ ಒಡನಾಟ…ಹೀಗೆ ಅನೇಕ ವಿಷಯಗಳು ಮತ್ತೊಮ್ಮೆ ಕಣ್ಣಿಗೆ ಮತ್ತು ಮನಸ್ಸಿಗೆ ಅಪ್ಪಳಿಸಿದವು. ಇಡೀ ಬರಹ ಒಂದೇ ಅವಧಿಗೆ ಓದಿ ಮುಗಿಸಿ ಮತ್ತೊಮ್ಮೆ ಲಂಕೇಶರ ಬದುಕಿನ ಮತ್ತು ಆ ಬದುಕಿನ ಸಂದರ್ಭದಲ್ಲಿ ಅವರಲ್ಲಿದ್ದ ಮನಸ್ಥಿತಿಯ ಬಗ್ಗೆ ಯೋಚಿಸಲು ಆರಂಭಿಸಿದೆ.
ನಾವು ಸದ್ಯ ಬದುಕುತ್ತಿರುವ ಬದುಕನ್ನು ಒಮ್ಮೆ ಗಮನಿಸಿದರೆ ಬದುಕಬೇಕೆನ್ನುವ ನಮ್ಮ ಮನಸ್ಸಿನ ಭಾವನೆಗಳೇ ಬೇರೆ ಹಾಗೂ ನಾವು ಬದುಕುತ್ತಿರುವ ಬದುಕೇ ಬೇರೆ ಎನಿಸುತ್ತದೆ. ನಮ್ಮ ಮನಸ್ಸಿನಲ್ಲಿ ಹುಟ್ಟುವ ಪ್ರತೀ ಕ್ಷಣವನ್ನೂ ನಾವೊಮ್ಮೆ ತೀವ್ರ ಏಕಾಗ್ರತೆಯಿಂದ ಗಮನಿಸಿದ್ದೇ ಆದರೆ ಈ ವಿಷಯ ಅರಿವಿಗೆ ಬರುತ್ತದೆ. ಯಾವುದಾದರೊಂದು ಕ್ರಿಯೆಯನ್ನು ಮಾಡಬಯಸುವ ನಮ್ಮ ಮನಸ್ಸಿಗೆ ನಾವು ಸೃಷ್ಟಿಸಿರುವ ಈ ಹೊರಗಿನ ಯಾವ ಸಂಸ್ಕøತಿಯ ಅರಿವೂಇಲ್ಲ, ಯಾವ ನಿರ್ಬಂಧಗಳ ಮಾಹಿತಿಯೂ ಇಲ್ಲ. ಹಾಗೊಂದು ವೇಳೆ ಮನಸ್ಸು ಬಯಸಿದ್ದೆಲ್ಲವನ್ನೂ ನಾವು ಮಾಡಲು ಹೋದರೆ, ನಾವು ಮಾಡುವ ಆ ಕ್ರಿಯೆ ನಮ್ಮ ಹೊರಗಿನ ಸಮಾಜದದೃಷ್ಟಿಯಲ್ಲಿ ಸಂಪ್ರದಾಯದ ವಿರುದ್ಧಕ್ರಿಯೆ, ಸಮಾಜವಿರೋದಿ üಅಥವ ಅನೈತಿಕವಾಗಬಹುದು. ಇವೇ ಮಾತುಗಳ ಅರ್ಥವನ್ನು ನಮ್ಮ ಕಾದಬಂರಿಕಾರರು ಬರೆದ ಕೆಲವು ಕಾದಂಬರಿಗಳಲ್ಲಿನ ಪ್ರಧಾನ ಪಾತ್ರಗಳ ಬದುಕಿನ ಉದಾಹರಣೆಗಳಿಂದ ಅರ್ಥ ಮಾಡಿಕೊಳ್ಳಬಹುದು. ಯು.ಆರ್ ಅನಂತಮೂರ್ತಿಯವರ "ಸಂಸ್ಕಾರ" ಕಾದಂಬರಿಯಲ್ಲಿ ನಾರಣಪ್ಪನದ್ದು ಒಂದು ಪ್ರಧಾನ ಪಾತ್ರ. ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಿ. ಒಮ್ಮೆ ಒಂದು ಜಾತಿಯಲ್ಲಿ ಹುಟ್ಟಿದ ಮೇಲೆ ಹುಟ್ಟಿದ ವ್ಯಕ್ತಿಯ ಇಡೀ ಬದುಕು ಆ ಜಾತಿಯ ನಿಯಮ ಮತ್ತು ನಿಬಂಧನೆಗಳಡಿಯಲ್ಲೇ ನಡೆಯಬೇಕಾದ್ದು ಈ ದೇಶದ ಬದುಕಿನ ವ್ಯವಸ್ಥೆಗಳಲ್ಲೊಂದು. ಆದರೆ ಈ ನಾರಣಪ್ಪ ಮಾತ್ರ ಇದಕ್ಕೆ ನೇರ ವ್ಯತಿರಿಕ್ತ. ತಾನು ಹುಟ್ಟಿದ ಆ ಬ್ರಾಹ್ಮಣ ಜಾತಿಯವರು ಬದುಕಿನಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದೋ ಅದನ್ನೇ ಮಾಡುತ್ತ ಬದುಕಲು ಪ್ರಯತ್ನಿಸುತ್ತಾನೆ. ಬ್ರಾಹ್ಮಣ ಜಾತಿಯ ಪ್ರಕಾರ ಆ ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ಜೀವನ ಪರ್ಯಂತ ಮದ್ಯ ಸೇವಿಸಬಾರದು, ಮಾಂಸ ತಿನ್ನಬಾರದು ಮತ್ತು ಬೇರೆ ಹೆಣ್ಣಿನ ಸಹವಾಸ ಮಾಡಬಾರದು. ಆ ಜಾತಿಯ ಪ್ರಕಾರ ಇವುಗಳು ನಿರ್ಬಂಧನೆಗಳಲ್ಲ, ಬದಲಾಗಿ ಉತ್ತಮ ನಿಯಮಗಳು. ಆದರೆ ನಾರಣಪ್ಪನ ಮನಸ್ಸು ಕೇಳಬೇಕಲ್ಲ. ಅವನು ಇತರ ಬ್ರಾಹ್ಮಣರ ಹಾಗೆ ಬದುಕದೆ ಅವರು ಮಾಡಬಾರದ್ದೆಲ್ಲವನ್ನೂ ತನ್ನ ಮನಸ್ಸಿಗನುಗುಣವಾಗಿ ಮಾಡುತ್ತಾನೆ. ಪರಿಣಾಮ, ಆ ಕ್ಷಣದಿಂದ ಅವನು ಆ ಜಾತಿಯಿಂದ ಹೊರಗುಳಿದವನಾದವನಾಗುತ್ತಾನೆ. ಈ ಪಾತ್ರದ ಬದುಕಿನ ರೀತಿಯೇ ಇದನ್ನು ಸೃಷ್ಟಿಸಿದ ಯು.ಆರ್ ಅನಂತಮೂರ್ತಿಯವರ ಬದುಕಿಗೂ ಬಹುತೇಕ ಅನ್ವಯಿಸುತ್ತದೆ. ಅಷ್ಟೇ ಅಲ್ಲದೆ ಸ್ವತಃ ಅನಂತಮೂರ್ತಿಯವರು ತಮ್ಮ ಆತ್ಮಚರಿತ್ರೆ "ಸುರಭಿ" ಯಲ್ಲಿ ತಮ್ಮ ಹದಿನೇಳನೆ ವಯಸ್ಸಿನಲ್ಲಿಯೇ ತನಗಿಂತಲೂ ಪ್ರಬುದ್ದೆಯೊಬ್ಬಳಲ್ಲಿ ತಮ್ಮ ಲೈಂಗಿಕ ಬಯಕೆಯನ್ನು ತೀರಿಸಿಕೊಂಡೆನೆಂದು ಹೇಳುತ್ತಾರೆ.
ಇನ್ನು ಲಂಕೇಶರ ವಿಷಯಕ್ಕೆ ಬಂದರೆ ತಮ್ಮ "ಹುಳಿಮಾವಿನ ಮರ" ದಲ್ಲಿ ಅವರೇ ತಮ್ಮ ಬದುಕಿನ ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಪ್ರೇಮ, ಕಾಮ, ಜೂಜು, ಮದ್ಯ, ಸಿಗರೇಟು…ಯಾವುದೇ ಇರಲಿ, ಎಲ್ಲವನ್ನೂ ಸಹ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಒಂದು ಕಡೆ ಅವರು ಹೇಳುತ್ತಾರೆ ತಾನು ಮಾಡಿದ ಬೇರೆ ಹೆಣ್ಣಿನ ಸಹವಾಸದಿಂದಾಗಿ ಸ್ವತಃ ತನ್ನ ಹೆಂಡತಿಯ ಎದುರಿಗೇ ತಾನು ತಲೆ ಎತ್ತಿ ನಿಲ್ಲಲಾರದಂಥ ಪರಿಸ್ಥಿತಿ ನಿರ್ಮಾಣವಾಗಿತ್ತೆಂದು. ಅಷ್ಟೆ ಅಲ್ಲದೆ ನಲವತ್ತೈದನೇ ವಯಸ್ಸಿನಲ್ಲಿ, ಮೂರು ಮಕ್ಕಳ ತಂದೆಯಾಗಿ ಮೂವತ್ತೈದು ವರ್ಷದ ಒಬ್ಬ ಗೃಹಿಣಿಯಿಂದ ಅನೇಕ ಲೈಂಗಿಕ ಪಾಠಗಳನ್ನು ಕಲಿತೆ ಎಂದು. ಹೀಗೆ ಬರೆಯುತ್ತ ಲಂಕೇಶ್ ತಮ್ಮ ಬದುಕಿನಲ್ಲಿ ಅದೆಷ್ಟೊ ಹೆಣ್ಣುಗಳ ಪ್ರೇಮ ಪಾಶಕ್ಕೆ ಸಿಲುಕಿದರೆಂದೂ ತಿಳಿಸುತ್ತಾರೆ. ಒಮ್ಮೆ ಅವರು ಶಿಕ್ಷಕರಾಗಿದ್ದಾಗ ತಾವೇ ಕಲಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅವರಿಗೆ ಪ್ರೀತಿ ಹುಟ್ಟುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಅವಳೂ ಸಹ ತಮ್ಮನ್ನು ಪ್ರೀತಿಸುತ್ತಿದ್ದಾಳೋ ಇಲ್ಲವೊ ಎಂದು ತಿಳಿಯಲು ಲಂಕೇಶ್ ಎರಡು ದಿನ ಕಾಲೇಜಿಗೆ ರಜೆ ಹಾಕಿ ಅವಳು ತನ್ನನ್ನು ಮಿಸ್ ಮಾಡಿಕೊಳ್ಳುವಳೋ ಎಂದು ಪರಿಕ್ಷಿಸುತ್ತಾರೆ. ಇಷ್ಟೇ ಅಲ್ಲದೇ ಅವಳು ಆರೋಗ್ಯ ಸರಿಯಿರದ ಕಾರಣ ಕೆಲವು ದಿನ ಕಾಲೇಜು ಬಿಟ್ಟಾಗ ಲಂಕೇಶ್ ಅಕ್ಷರಸಹ ಚಡಪಡಿಸುತ್ತಾರೆ. ಅಲ್ಲದೆ ಅವಳ ಮೇಲಿನ ಪ್ರೀತಿಯಿಂದಾಗಿ (ಶಿಕ್ಷಕ-ವಿದ್ಯಾರ್ಥಿನಿ ನಡುವಿನ ಪ್ರೀತಿಯಲ್ಲ) ಸ್ವತಃ ಅವಳ ಗಂಡುಸ್ನೇಹಿತನ (ಬಾಯ್‍ಫ್ರೇಂಡ್) ಹತ್ತಿರ ಹೋಗಿ ಅವನನ್ನು ಅವಳಿಂದ ದೂರ ಇರಿಸಲು ಪ್ರಯತ್ನಿಸುತ್ತಾರೆ!! ಕನ್ನಡ ಸಾಹಿತ್ಯದ ಅತ್ಯುತ್ತಮ ಸಾಹಿತಿಗಳ ಮನಸ್ಸಿನಲ್ಲಿ ಇಂತಿಂಥ ಭಾವನೆಗಳಿದ್ದವು ಎಂದರೆ ಒಂದು ಕ್ಷಣ ಮೈ ಜುಮ್ ಎನ್ನುತದಲ್ಲವೆ??
ಆದರೆ ಒಂದೇ ಒಂದು ಕ್ಷಣ ವಿಶಾಲವಾಗಿ ಯೋಚಿಸಿದ್ದೇ ಆದರೆ ಈ ಎಲ್ಲಾ ಯೋಚನೆಗಳು ಕೇವಲ ಲಂಕೇಶ್‍ರನ್ನೊಳಗೊಂಡಂತೆ ಕೆಲವೇ ಸಾಹಿತಿಗಳಲ್ಲಷ್ಟೇ ಅಲ್ಲ. ಸಾಮಾನ್ಯವಾಗಿ ಬಹುತೇಕ ಎಲ್ಲರಲ್ಲೂ ಇದ್ದದ್ದೆ. ಈಗಾಗಲೇ ಹೇಳಿದ ಹಾಗೆ ನಮ್ಮ ಒಳ ಮನಸ್ಸಿಗೆ ನಾವೇ ಹುಟ್ಟುಹಾಕಿದ ನೀತಿ ನಿಯಮಗಳ ಅರಿವಿಲ್ಲ. ನಿರ್ಬಂಧನೆ-ಕಟ್ಟುಪಾಡುಗಳ ಮೀತಿಯಿಲ್ಲ. ಅದು ಸ್ವತಂತ್ರ, ಸರ್ವತ್ರ ಸ್ವತಂತ್ರ. ಹಾಗಂತ ಅದು ಯೋಚಿಸುವುದೆಲ್ಲವನ್ನೂ ನಾವು ಮಾಡುವುದೇ ಆದಲ್ಲಿ, ಮಾಡುವುದೆಲ್ಲವೂ ಸಮಾಜದ ಪಾಲಿಗೆ ಅನೈತಿಕ, ಸಮಾಜ ಬಾಹಿರ. ಸಿಗ್ಮಂಡ್ ಫ್ರಾಯ್ಡ್‍ನ ಈಡಿಪಸ್ ಕಾಂಪ್ಲೆಕ್ಸ್ ಸಿದ್ದಾಂತ ಮತ್ತು ಕೆಲವು ವರ್ಷಗಳಿಂದ ಪಾಶ್ಚಾತ್ಯರಲ್ಲಿ ಚರ್ಚೆಗಿಡಾದ ಗೇ ಮತ್ತು ಲೆಸ್ಬಿಯನ್ ಸೆಕ್ಸ್ ಇದಕ್ಕೆ ಉತ್ತಮ ನಿದರ್ಶನಗಳು. ಸದ್ಯ ಬದುಕುತ್ತಿರುವ ಬಹುತೇಕ ನಮ್ಮೆಲ್ಲರ ಮನಸ್ಸಿನಲ್ಲಿ ಬಹಳಷ್ಟು ಬಾರಿ ಸಮಾಜಕ್ಕೆ ಚಿತ್ರ-ವಿಚಿತ್ರ ಎನಿಸಬಹುದಾದ ಭಾವನೆಗಳು ಹುಟ್ಟಿಕೊಳ್ಳುತ್ತವೆ. ಹಾಗೆ ನೋಡಿದರೆ ಅವೆಲ್ಲವೂ ಸಹಜ ಭಾವನೆಗಳೆ. ಆದರೆ ಆ ಭಾವನೆಗಳನ್ನು ಸಮಾಜ ಜಾರಿಗೆ ತರಲು ಸ್ವಾತಂತ್ರ್ಯ ಕೊಡದ ಕಾರಣದಿಂದಾಗಿ ಅವು ವಿಚಿತ್ರವಾಗಿ ಉಳಿದಿವೆಯಷ್ಟೆ. ಬಹಳಷ್ಟು ಮಕ್ಕಳು ತಂದೆ ತಾಯಿಗಳ ಲೈಂಗಿಕ ಬದುಕನ್ನೇ ಗಮನಿಸಿ ಲೈಂಗಿಕ ಪ್ರಭಾವಕ್ಕೊಳಗಾಗುತ್ತಾರೆ. ಅಲ್ಲದೆ ಬೆಳೆಯುತ್ತ ಅದೇ ಕುಟುಂಬದಲ್ಲಿನ ವಿರುದ್ಧ ಲಿಂಗಿಗಳಲ್ಲಿ ಲೈಂಗಿಕ ಆಕರ್ಷಣೆ ಹುಟ್ಟುತ್ತದೆ. ಗಂಡು ಮಗುವಿಗೆ ತಾಯಿಯ ಮೇಲೆ ಲೈಂಗಿಕ ಭಾವನೆಗಳು ಹುಟ್ಟಿದರೆ (ಈಡಿಪಸ್ ಕಾಂಪ್ಲೆಕ್ಸ್) ಹೆಣ್ಣು ಮಗುವಿಗೆ ತಂದೆಯ ಮೇಲೆ ಆ ಭಾವನೆಗಳು ಹುಟ್ಟುತ್ತವೆ (ಎಲೆಕ್ಟ್ರಾ ಕಾಂಪ್ಲೆಕ್ಸ್). ಅಷ್ಟೇ ಅಲ್ಲದೆ ಗಂಡಿನ ಮೇಲೆ ಗಂಡಿಗೆ, ಹೆಣ್ಣಿನ ಮೇಲೆ ಹೆಣ್ಣಿಗೆ ಹಾಗೂ ಗಂಡು ಮತ್ತು ಹೆಣ್ಣಿನಲ್ಲಿ ಪ್ರಾಣಿಗಳ ಮೇಲೂ ಲೈಂಗಿಕ ಭಾವನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಈ ಸುಸಂಸ್ಕøತ ಸಮಾಜದಲ್ಲಿ (!) ನಾವು ಬದುಕುತ್ತಿರುವುದರಿಂದಾಗಿ ನಮ್ಮ ಮನಸ್ಸಿನಲ್ಲಿ ಹುಟ್ಟುವ ಈ ಭಾವನೆಗಳನ್ನೆಲ್ಲಾ ಜಾರಿಗೆ ತರಲು ಹಿಂಜರಿಯುತ್ತಿದ್ದಿವಷ್ಟೆ. ಈ ಮನಸ್ಥಿತಿಯ ಬಹಳಷ್ಟು ಸಂದರ್ಭಗಳನ್ನು ಪ್ರಸ್ತಾಪಿಸಬಹುದು. ದೇವಸ್ಥಾನದೊಳಗೆ ಹೋಗಿ ನಿಂತಾಗ ಅಲ್ಲಿನ ಹೆಣ್ಣು ದೇವರ ಕಂಡು ಕೈ ಮುಗಿಯುವ ಭಾವನೆ ಹುಟ್ಟದೇ ಆ ದೇವರ ದೇಹದ ಮೇಲೆ ಬಯಕೆ ಹುಟ್ಟುವುದು, ನಾವೆಲ್ಲ ಪೂಜಿಸುವ ಶಿವಾನುರೂಪಿ ಲಿಂಗದ ಮೂರ್ತಿಯಲ್ಲಿ ಶಿಶ್ನ ಮತ್ತು ಯೋನಿರೂಪವನ್ನು ಕಾಣುವುದು, ಅಧ್ಯಾತ್ಮಿಕತೆಯನ್ನು ಬೋಧಿಸುವ ಪರಮ ಸನ್ಯಾಸಿಗೆ ಅಪ್ರಾಪ್ತ ಬಾಲಕಿಯೊಬ್ಬಳ ಮೂಲಕ ಲೈಂಗಿಕ ತೃಷೆ ತೀರಿಸಿಕೊಳ್ಳುವುದು…ಹೀಗೆ ಅನೇಕ ವಿಷಯಗಳುಂಟು. ಆದರೆ ಈ ಎಲ್ಲಾ ಮನಸ್ಥಿತಿಗಳನ್ನು ಜಾರಿಗೆ ತರುವುದು? ಮನಸ್ಸುಗಳಿಗೆ ಘೋರ ಕಲ್ಪನೆಯಾಗಿಬಿಡುತ್ತದೆ. ಹಾಗಾಗಿಯೇ ಎಲ್ಲವನ್ನೂ ಮನಸ್ಸಿನೊಳಗೇ ಹುದುಗಿಸಿಟ್ಟುಕೊಂಡು ನಮ್ಮ ನಡುವೆ ಬದುಕುತಿರುವವರಿಗೆ ಸರಿಯೆನಿಸಿದ್ದನ್ನು ಮಾಡುವುದರ ಮೂಲಕ ಮಾತ್ರ ಬದುಕಲು ಪ್ರಯತ್ನಿಸುತ್ತಾರೆ. ಆದರೆ ನೈಜವಾಗಿ ಬದುಕಬೇಕೆನ್ನುವ ಕೆಲವು ಸಾಹಿತಿಗಳ ಪಾಲಿಗೆ ಮಾತ್ರ ಇದೊಂದು ರೀತಿಯ ಸೊಗಲಾಡಿತನದ ಬದುಕು. ಇಂಥ ಸೊಗಲಾಡಿತನದ ಬದುಕನ್ನು ನಿರಾಕರಿಸಿಯೇ ಫ್ರಾನ್ಸಿನ ಬೋದಿಲೇರ್ ಮತ್ತು ಜರ್ಮನಿಯ ಅಲ್ಬರ್ಟ್ ಕಾಮೂ ಸೇರಿದಂತೆ ಕೆಲವು ಬರಹಗಾರರು ಮನಸ್ಸಿಗೆ ಬಂದ ಹಾಗೆ ಬದುಕಿದರು. ಅಂಥ ಬೋದಿಲೇರ್‍ನ ಬದುಕಿನ ಪ್ರಭಾವಕ್ಕೊಳಗಾದ ಲಂಕೇಶ್ ಸಹ ತಮ್ಮ ಮನಸ್ಸಿನ ಭಾವನೆಗಳಿಗೆ ತಕ್ಕ ಹಾಗೆ ಬದುಕುತ್ತ ನಮ್ಮ ಬದುಕಿನ ಸೊಗಲಾಡಿತನದಿಂದ ಮುಕ್ತವಾಗಿ ಉಳಿಯಲು ಪ್ರಯತ್ನಿಸಿದರು.
ಬರಹದ ಅಂತ್ಯದಲ್ಲಿ ಒಂದು ಮಾತು. ಮನುಷ್ಯ ಜಾರಿಗೆ ತರುವ ಯಾವ ಕ್ರಿಯೆಯೂ ವಿಚಿತ್ರವಲ್ಲ. ಅದು ಮನಸ್ಸಿನ ಸಹಜ ಭಾವನೆಗಳ ಫಲವಷ್ಟೆ. ಇನ್ನು ನೈತಿಕ-ಅನೈತಿಕ, ಸಾಂಪ್ರದಾಯಿಕ-ಅಸಂಪ್ರದಾಯಿಕ, ನೈಸರ್ಗಿಕ-ಅನೈಸರ್ಗಿಕ, ಸಾಮಾಜಿಕ-ಸಮಾಜ ಬಾಹಿರ…ಇವೆಲ್ಲವೂ ನಾವು ನಮ್ಮ ಬದುಕಿನ ಅನುಕೂಲಕರ ಸ್ಥಿತಿಗೆ ನಾವು ಹುಟ್ಟುಹಾಕಿಕೊಂಡ ಕಟ್ಟುಪಾಡುಗಳು. ಹಾಗಂತ ಇದೆಲ್ಲವೂ ಮೀರಿ ಬದುಕಬೇಕಂತಲ್ಲ. ಹಾಗೇ ಮೀರಿ ಬದುಕಿದವರನ್ನ ಸಹಜವಾಗಿಯೇ ಸ್ವಿಕರಿಸುವುದು ಒಳ್ಳೆಯದೆನೊ.
ಕಟ್ಟುಪಾಡುಗಳಾಚೆಗಿನ ತುಡಿತಗಳು ಮನುಷ್ಯ ಸಹಜ. ಲಂಕೇಶ್ ಅದನ್ನು ಸಹಜವಾಗಿ ಹೇಳಿಕೊಂಡಿರಬಹುದು. ಹೆಸರಾಂತರು ಅದನ್ನು ನಿರ್ಭಿಡೆಯಿಂದ ಹೇಳಿಕೊಳ್ಳುವುದೂ, ಅಂಥವನ್ನು ಕೆಲವರು ವೈಭವೀಕರಿಸುವುದೂ ನಡೆಯುತ್ತಲೇ ಇದೆ. ಈ ಸೆಕ್ಸ್/ದುರಭ್ಯಾಸ/ಇತ್ಯಾದಿಗಳ ಆಚೆಗಿನ ಬದುಕಿನ ಅಧ್ಯಯನಕ್ಕೆ ಒತ್ತುಕೊಡುವುದು ಈಗಿನ ಅಗತ್ಯತೆ.