ಸಾಗರದ ವಿನೋಬ ನಗರದ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬದ ಯಜಮಾನನ ಹೆಸರು ಸೂರಪ್ಪ. ಮನೆ, ಮನೆ ಮುಂದೆ ೧೦ ಅಡಿ ಅಗಲ ೧೦ ಉದ್ದದ ಚಿಕ್ಕದಾದ ಒಂದು ದಿನಸಿ ಅಂಗಡಿ. ಜೀವನೋಪಾಯಕ್ಕೆ. ಹಳೆಯದಾದ ಮನೆಯಾದರೂ ಹಿಂಭಾಗದಲ್ಲಿ ಸಾಕಷ್ಟು ಜಾಗವಿತ್ತು. ಅಪ್ಪನ ಕಾಲದಲ್ಲಿ ಕಟ್ಟಿದ ಮನೆಯಾದ್ದರಿಂದ, ಮುಚ್ಚಿಗೆ, ತೊಲೆ, ದೊಡ್ಡ-ದೊಡ್ಡ ಚಿತ್ತಾರದ ಕಂಬಗಳು, ನಾಗಂದಿಗೆ, ಕಪಾಟು ಎಲ್ಲವಕ್ಕೂ ಮರಗಳ ಬಳಕೆಯಾಗಿದೆ. ಹೀಗೆ ಸಾಗಿ ಹಿಂದುಗಡೆ ಹತ್ತು ಕಾಲ್ನಡೆಗಳನ್ನು ಕಟ್ಟಿಕೊಳ್ಳಲು ಕೊಟ್ಟಿಗೆಯು ಇದೆ. ಸೂರಪ್ಪನವರ ತಂದೆಯ ಕಾಲದಲ್ಲಿ ಕೊಟ್ಟಿಗೆ ತುಂಬಾ ಜಾನುವಾರುಗಳಿದ್ದವು. ಮಗನ ಕಾಲಕ್ಕೆ ಸಾಕುವುದು ಕಷ್ಟ ಮತ್ತು ನಷ್ಟದ ಬಾಬತ್ತು ಎಂದು ಪೂಜೆಗೆಂದು ಒಂದೇ ಒಂದು ದನವನ್ನು ಕಟ್ಟಿದ್ದರು. ಬಿಳಿಯದಾದ ಈ ಮಲೆನಾಡು ಗಿಡ್ಡಕ್ಕೆ ಲಕ್ಷ್ಮೀ ಎಂದು ಹೆಸರಿಟ್ಟಿದ್ದರು. ಕರು ಹಾಕಿದಾಗ ಒಂದರ್ಧ ಲೀಟರ್ ಹಾಲು ಸಿಗುತ್ತಿತ್ತು. ಗಂಡ-ಹೆಂಡತಿಗೆ ಕಾಫಿಗೆ ಮತ್ತು ದೇವರ ತಲೆ ಮೇಲೆ ಅಭಿಷೇಕ ಇವಿಷ್ಟಕ್ಕೆ ಸಾಲುತ್ತಿತ್ತು.
ಪ್ರತಿದಿನ ಬೆಳಗ್ಗೆ ೮ ಗಂಟೆಗೆ ದನವನ್ನು ತಿರುಗಾಡಲು ಬಿಡುತ್ತಿದ್ದರು. ಪೇಟೆಯಲ್ಲಿ ದನಗಳಿಗೆ ಮೇವೆಲ್ಲಿದೆ?. ಬಿಳಿಯ ಬಣ್ಣದ ಲಕ್ಷ್ಮೀ ಇದೀಗ ಪೇಟೆಗೆ ಹೊರಟಳು. ಮೈ ತುಂಬಿಕೊಂಡು ಮಾಟವಾಗಿದ್ದ ಲಕ್ಷ್ಮೀ ನಡೆಯುವುದನ್ನು ನೋಡಲು ಚೆಂದ. ಅದೇನು ಗತ್ತು. ಇಡೀ ರಸ್ತೆ ತನಗೆ ಮಾತ್ರ ಸಂಬಂಧಿಸಿದ್ದು ಎಂಬ ಭಾವ. ದಾರಿಯಲ್ಲಿ ಹೋಗುವ ಆಸ್ತಿಕರು ಲಕ್ಷ್ಮಿಯ ಹಣೆ ಮುಟ್ಟಿ ಕೈಯನ್ನು ಭಾವಪರವಶರಾಗಿ ಕಣ್ಣಿಗೊತ್ತಿಕೊಳ್ಳುವುದೇನು. ಭಕ್ತರನ್ನು ನಿರ್ಲಕ್ಷಿಸಿ ಮುಂದೆ ಸಾಗುವ ಠೀವಿ ಲಕ್ಷ್ಮಿಯದು. ಸೀದಾ ಖಾಸಗಿ ಬಸ್‌ಸ್ಟ್ಯಾಂಡ್‌ನಲ್ಲಿರುವ ಶಬರಿ ಸಸ್ಯಹಾರಿ ಹೋಟೆಲಿಗೆ ಮೊದಲ ಭೇಟಿ. ಲಕ್ಷ್ಮಿ ಬಂತೆಂದರೆ, ಖುದ್ಧು ಯಜಮಾನ ಗಲ್ಲದ ಪೆಟ್ಟಿಗೆಯಿಳಿದು ಕೆಳಗೆ ಬರಬೇಕು. ಅಡುಗೆ ಮನೆಗೆ ಹೋಗಿ ಇಡ್ಡಲಿಯೋ ಅಥವಾ ಕ್ಯಾರೆಟೋ ಎನಾದರೊಂದು ತಂದು ಅದರ ಬಾಯಿಗಿಡಬೇಕು.
ನಂತರದಲ್ಲಷ್ಟೆ ಲಕ್ಷ್ಮಿಯ ದಾರಿ ಮುಂದೆ ಸಾಗುತ್ತಿತ್ತು. ತಪ್ಪಿದ್ದಲ್ಲಿ, ಸೀದಾ ಅಡುಗೆಮನೆಗೇ ದಾಳಿ, ಟೈಲ್ಸ್ ಹಾಕಿದ ನುಣುಪು ನೆಲದ ಮೇಲೂ ಜಾರದಂತೆ ಟುಕ-ಟುಕ ಎಂದು ಸಶಬ್ಧವಾಗಿ ನುಗ್ಗುತ್ತಿತ್ತು. ಯಾರೂ ತಡೆಯುವಂತಿಲ್ಲ. ಆ ದಿನದ ತನ್ನ ಹಪ್ತಾ ವಸೂಲಿಯಾಗಲೇ ಬೇಕು. ಇದು ನಿಯಮ. ತಪ್ಪುವಂತಿಲ್ಲ. ಹೀಗೆ ಬೆಳಗಿನಿಂದ ಸಂಜೆಯವರೆಗೂ ಬೀಡಾ ಅಂಗಡಿ, ದಿನಸಿ ಅಂಗಡಿ, ತರಕಾರಿ ಅಂಗಡಿಗಳಲ್ಲಿ ಹಪ್ತಾ ವಸೂಲಿ ಮತ್ತೆ ಸಂಜೆ ೫ ಗಂಟೆಗೆ ಮನೆ. ಒಂದೊಂದು ದಿನ ಒಂದೊಂದು ರಸ್ತೆ. ವಿನೋಬ ನಗರದಿಂದ ಅಗ್ರಹಾರದವರೆಗಿನ ಸುಮಾರು ೨ ಕಿ.ಮಿ. ದೂರದವರೆಗೂ ಇದರ ವ್ಯಾಪ್ತಿ. ಹಕ್ಕಿನ ತುತ್ತನ್ನು ತೆಗೆದುಕೊಂಡ ನಂತರದಲ್ಲಿ ಒಂದು ಕ್ಷಣವೂ ಅಲ್ಲಿ ನಿಲ್ಲುತ್ತಿರಲಿಲ್ಲ. ಒಂದೊಮ್ಮೆ ಎಲ್ಲಾದರೂ ಲಕ್ಷ್ಮೀ ವಾರದ ಹಪ್ತಾ ವಸೂಲಿಗೆ ಬರಲಿಲ್ಲವೆಂದರೆ ಹೋಟೆಲ್‌ನವರಿಗೆ, ಅಂಗಡಿಯವರಿಗೆ ಅದೇನೋ ಕಳೆದುಕೊಂಡ ಭಾವ.
ಸೂರಪ್ಪನವರ ತಂದೆಯ ಕಾಲದಿಂದಲೂ ದನಗಳಿಗೆ ಕಣ್ಣಿ (ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟುವಾಗ ಬಳಸುವ ಪುಂಡಿ ಗಿಡದ ನಾರಿನಿಂದ ತಯಾರಿಸಿದ ಹಗ್ಗ) ತಂದು ಕೊಡುವ ಕೆಲಸ ಕಂಬಳಿಕೊಪ್ಪದ ಮಣ್ಣನದು. ದೀಪಾವಳಿಯ ಹಿಂದಿನ ಬೂರೆ ದಿನ ಹತ್ತಾರು ಕಣ್ಣಿಗಳನ್ನು ತಂದು ಕೊಡುವುದು ಬದಲಿಗೆ ಒಂದಿಷ್ಟು ಹಣ ಪಡೆದು ಹೋಗುವುದು. ಇದೇ ಕಣ್ಣಿಯನ್ನು ಹಳ್ಳಿಗಳಲ್ಲಿ ಕೊಟ್ಟರೆ ಬದಲಿಗೆ ಅಡಿಕೆ ಸಿಂಗಾರ, ಪಚ್ಚೆತೆನೆ, ಅಡಿಕೆ ಇತ್ಯಾದಿಗಳು ಸಿಗುತ್ತಿದ್ದವು. ಕ್ರಮೇಣ ಸೂರಪ್ಪನವರ ಮನೆಯಲ್ಲಿ ದನ-ಕರುಗಳ ಸಂಖ್ಯೆ ಕಡಿಮೆಯಾಯಿತು. ಕಂಬಳಿಕೊಪ್ಪದ ಮಣ್ಣನಿಗೂ ವಯಸ್ಸಾಯಿತು. ಪುಂಡಿ ನಾರು ತಂದು ನೀರಿನಲ್ಲಿ ಕೊಳೆಸಿ, ಒಣಗಿಸಿ ಕಣ್ಣಿ ಹೊಸೆಯುವ ಕೆಲಸ ಮಾಡುವವರು ಕಡಿಮೆಯಾದರು. ಮೊದಲಿನ ಹಾಗೆ ಮಣ್ಣನಿಗೆ ಈಗ ಮೈಯಲ್ಲಿ ಕಸುವಿಲ್ಲ. ಮಕ್ಕಳೆಲ್ಲಾ ಕಂತ್ರಾಟು, ಗಾರೆ ಕೆಲಸ ಅದೂ-ಇದೂ ಎಂದು ಪೇಟೆಗೆ ಹೋಗುತ್ತಾರೆ. ಹೀಗಾಗಿ ಪುಂಡಿ ನಾರಿನ ಕಣ್ಣಿಯ ಬದಲಿಗೆ ಪ್ಲಾಸ್ಟಿಕ್ ಕಣ್ಣಿಗಳು ಮಾರುಕಟ್ಟೆಗೆ ಬಂದವು. ಪುಂಡಿ ಕಣ್ಣಿಗಿಂತ ಬಾಳಿಕೆ ಬರುವ ಬಣ್ಣ-ಬಣ್ಣದ ಪ್ಲಾಸ್ಟಿಕ್ ಕಣ್ಣಿಗಳ ಶಕೆ ಶುರುವಾಯಿತು.
ಈ ವರ್ಷ ಮಣ್ಣ ಕಣ್ಣಿ ತರಲಿಲ್ಲ. ಸೂರಪ್ಪನವರು ಬೂರೆ ದಿನ ಮಾರ್ಕೆಟ್ ರಸ್ತೆಯಲ್ಲಿರುವ ಇಮಾಮ್ ಸಾಬರ ಅಂಗಡಿಯಿಂದ ೨ ಪ್ಲಾಸ್ಟಿಕ್ ಕಣ್ಣಿಯನ್ನು ತಂದರು, ಒಂದು ಲಕ್ಷ್ಮಿಗೆ ಮತ್ತೊಂದು ಅದರ ಪುಟ್ಟ ಕರುವಿಗೆ. ಹಬ್ಬದ ದಿನ ಪೂಜೆ ಮಾಡಿ ಅದೇ ಕಣ್ಣಿಯಿಂದ ಕಟ್ಟಿದರು. ಒಂದೇ ವಾರದಲ್ಲಿ ಜಿಂಕೆಯ ಮರಿಯಂತಿದ್ದ ಕರುವಿಗೆ ಕತ್ತಿನಲ್ಲಿ ಒಂತರಾ ಗಾಯವಾದ ಹಾಗೆ ಆಯಿತು. ತುರಿಕೆಯಿಂದ ಒದ್ದಾಡುತ್ತಿತ್ತು. ಔಷಧದ ಅಂಗಡಿಯಿಂದ ಒಂದು ಮುಲಾಮು ತಂದು ಹಚ್ಚಿದರು. ಗಾಯ ಕಡಿಮೆಯಾಗಲಿಲ್ಲ. ವೆಟರ್ನರಿ ಡಾಕ್ಟರ್ ಗಣೇಶ್ ಬಂದು ನೋಡಿ, ಒಂದರೆಡು ಚುಚ್ಚುಮದ್ದು ಹಾಕಿದರು. ಗಾಯ ಒಣಗಿದ ಹಾಗೆ ಆಯಿತಾದರೂ, ಪೂರ ಗುಣ ಕಾಣಲಿಲ್ಲ. ಸೋಂಕು ಜಾಸ್ತಿಯಾಗಿ ಚಿಕಿತ್ಸೆ ಒಗ್ಗದೇ ಸತ್ತೇ ಹೋಯಿತು. ಪ್ಲಾಸ್ಟಿಕ್ ಕಣ್ಣಿ ಹೀಗೆ ತನ್ನ ಮೊದಲ ಬಲಿಯನ್ನು ಪಡೆದಿತ್ತು.
ದಿನೇ ದಿನೇ ಹೆಚ್ಚುತ್ತಿರುವ ಜಾನುವಾರಿನ ತಿಂಡಿ ಸಾಮಾನಿನ ರೇಟು, ಬಿಳಿಹುಲ್ಲು ಹೋದ ವರ್ಷ ಒಂದು ಹೊರೆಗೆ ೬ ರೂಪಾಯಿ ಇದ್ದದ್ದು, ಏಕಾಏಕಿ ೨೫ ರೂಪಾಯಿಯಾಗಿದೆ. ಸೂರಪ್ಪನ ಪುಟ್ಟ ದಿನಸಿ ಅಂಗಡಿಯಲ್ಲೂ ವ್ಯಾಪಾರ ಕಡಿಮೆ, ಸಾಲದ್ದಕ್ಕೆ ವಯಸ್ಸಿನ ಕಾಯಿಲೆಗಳಿಗೆ ದುಡ್ಡು ಸುರಿಯುವ ಅನಿವಾರ್ಯತೆ. ಇವೆಲ್ಲಾ ಕಾರಣಗಳಿಂದಾಗಿ ಸೂರಪ್ಪನ ಮನೆಯ ಜೊತೆ ಲಕ್ಷ್ಮಿಯು ಸೊರಗಿತು. ವಯಸ್ಸಾದ ಲಕ್ಷ್ಮಿಯಲ್ಲಿ ಮೊದಲಿನ ಕಸುವಿಲ್ಲ. ಸೊರಗಿದ ಚೆನ್ನಾಗಿಲ್ಲದ ದನವನ್ನು ಜನ ತಾತ್ಸಾರ ಮಾಡಲು ತೊಡಗಿದರು. ಮೊದಲಿನ ಹಾಗೆ ಸಿಮೇಂಟ್ ನೆಲದ ಮೇಲೆ ಟುಕ-ಟುಕ ನಡೆದು ಹೋಗಲು ದನಕ್ಕೂ ಧೈರ್ಯ ಸಾಲದು. ಅಗ್ರಹಾರದವರೆಗೆ ರೌಂಡ್ ಹೋಗಿ ಬರುವಷ್ಟರಲ್ಲಿ ಸುಸ್ತಾಗುತ್ತಿತ್ತು. ಮನೆಯಲ್ಲೂ ಸರಿಯಾದ ಮೇವಿಲ್ಲ. ದೇಶದಲ್ಲಾದ ಹಣದುಬ್ಬರದ ಪರಿಣಾಮ ಚೆಂದದ ಲಕ್ಷ್ಮಿಯ ಮೇಲೂ ಆಯಿತು. ಚೀಲದಲ್ಲಿ ದುಡ್ಡು ತೆಗೆದುಕೊಂಡು ಹೋದರೆ ಬಕಣ ತುಂಬುವಷ್ಟೇ ಸಾಮಾನು ಸಿಗುತ್ತದೆ.
ವಯಸ್ಸಾದರೂ ಲಕ್ಷ್ಮಿಯ ಹಸಿವೆಯೇನು ಕಡಿಮೆಯಾಗಲಿಲ್ಲ. ಅನಿವಾರ್ಯವಾಗಿ ಮುನಿಸಿಪಾಲಿಟಿಯ ಕಸದ ತೊಟ್ಟಿಗೆ ಬಾಯಿ ಹಾಕುವ ದುರ್ಗತಿ ಬಂತು. ಈ ಮಧ್ಯೆ ತರಕಾರಿ ಅಂಗಡಿಯ ಮೂಲ ಯಜಮಾನನಿಗೂ ವಯಸ್ಸಾಯಿತು. ಮಗನಿಗೆ ಅಂಗಡಿಯನ್ನು ವಹಿಸಿಕೊಟ್ಟು ಮುದುಕ ಮನೆಯಲ್ಲಿ ಕುಳಿತ. ಎಂದಿನಂತೆ ಹಪ್ತಾ ವಸೂಲಿಗೆ ಹೋದ ಲಕ್ಷ್ಮಿಗೆ ಮಗ ತರಕಾರಿ ಕೊಡುವುದಿರಲಿ, ಕಬ್ಬಿಣದ ಕೆ.ಜಿ. ಕಲ್ಲಿನಿಂದ ದಬಾಯಿಸಿ ಹೊಡೆದ. ಲಕ್ಷ್ಮಿಯ ಒಂದು ಪಕ್ಕೆಲುಬು ಮುರಿದು ವಿಪರೀತ ನೋವಾಯಿತು. ಸ್ವಾಭಿಮಾನಿ ದನ ಮರುದಿನದಿಂದ ಅತ್ತ ತಲೆ ಹಾಕಲಿಲ್ಲ. ತನ್ಮಧ್ಯೆ ಮನೆಯಲ್ಲೂ ಒಂದು ಯಡವಟ್ಟಾಯಿತು. ಸೂರಪ್ಪನಿಗೆ ತುಳಸಿ ಗಿಡವೆಂದರೆ ಅದೇನೋ ಒಂತರಾ ವಿಪರೀತ ಮೋಹ. ನೆಲದಿಂದ ಮೂರಡಿ ಎತ್ತರಕ್ಕೆ ಹರಡಿಕೊಂಡ ತುಳಸಿ ಗಿಡ ನೋಡಲು ಮಿನಿ ಆಲದ ಮರದಂತಿತ್ತು.
ಒಳ್ಳೆ ಬೀಜವಾರು ಗಿಡ, ನಿತ್ಯ ಗಿಡದ ದೇಕಿರೇಖಿ ಮಾಡುತ್ತಿದ್ದ, ಬುಡಕ್ಕೆ ಸುತ್ತ ನುಣಿ ಮಣ್ಣಿನಿಂದ ಕಟ್ಟೆ ಕಟ್ಟಿದ್ದ, ಗೊಬ್ಬರದ ಜೊತೆಗೆ ವರ್ಷಕ್ಕೊಂದು ಬಾರಿ ೨ ಚಮಚೆ ಸುಣ್ಣವನ್ನು ಹಾಕುತ್ತಿದ್ದ (ಮಲೆನಾಡಿನಲ್ಲಿ ಮಳೆ ಹೆಚ್ಚು, ಮಣ್ಣಿನಲ್ಲಿರುವ ಸುಣ್ಣದ ಅಂಶ ತೊಳೆದು ಹೋಗಿ, ಗಿಡ ಸೊರಗುತ್ತದೆ, ಹಾಗಾಗಿ ಮೇಲಿನಿಂದ ಸುಣ್ಣ ಹಾಕುವುದು ಒಳ್ಳೆಯದು). ಬೇಸಿಗೆಯಲ್ಲಿ ಪ್ರತಿನಿತ್ಯ ನೀರು ಕೊಡುತ್ತಿದ್ದ. ನೋಡಲು ಅಚ್ಚ ಹಸಿರು. ಪ್ರತಿದಿನ ಹೊಸದಾಗಿ ಬರುವ ಗಿಡದ ಕದಿರನ್ನು ಕಿತ್ತು ಹಾಕುವುದಕ್ಕೆ ಹತ್ತು ನಿಮಿಷ ಬೇಕಾಗುತ್ತಿತ್ತು. ಕೆಲವರಂತೂ ತುಳಸಿ ಗಿಡದ ಹತ್ತಿರ ನಿಂತು ಫೋಟೋ ಕೂಡ ಹೊಡೆಸಿಕೊಂಡಿದ್ದರು. ಅಂತಹ ಗಿಡಕ್ಕೆ ಸಂಜೆ ಮನೆಗೆ ಬಂದ ಲಕ್ಷ್ಮಿ ಬಾಯಿ ಹಾಕಿತು. ಪಾಪಿ ಹೊಟ್ಟೆ ಕೇಳಲಿಲ್ಲ. ಹಸಿರು ಕಂಡ ಕೂಡಲೇ ಬಾಯಿ ಹಾಕಿತು. ಗಿಡವನ್ನು ತಿಂದು ಹಾಳು ಮಾಡುತ್ತದೆ ಎಂಬ ಕಾರಣಕ್ಕೆ ಅಲ್ಲೆ ಇದ್ದ ಮೊಳ ಉದ್ದದ ರೀಪನ್ನು ಸೂರಪ್ಪ ಬೀಸಿಯೇ ಬಿಟ್ಟರು. ಇವರೇನೋ ಓಡಿಸಲಷ್ಟೆ ಬೀಸಿದ್ದರು, ಗ್ರಹಚಾರ ರೀಪು ಹೋಗಿ ಲಕ್ಷ್ಮಿಯ ಕಿವಿಯ ಹಿಂಬದಿಯ ಆಯಕ್ಕೆ ಬೀಳಬೇಕೆ? ಮೊದಲೇ ಹಸಿದ ದನ, ತರಕಾರಿ ಮಾರ್ಕೆಟ್‌ನಲ್ಲಿ ಕಬ್ಬಿಣದ ಕೆ.ಜಿ. ಕಲ್ಲಿನ ಏಟು ಸರಿಯಾಗಿಯೇ ಬಿದ್ದಿತ್ತು. ಈಗ ರೀಪಿನ ಹೊಡೆತ, ತಾಳಲಾರದ ಅಡ್ಡ ಬಿತ್ತು.
ಸೂರಪ್ಪನಿಗೆ ಜೀವವೇ ಹೋದ ಹಾಗೆ ಆಯಿತು. ಹೆಂಡತಿಯನ್ನು ಕರೆದು, ನೀರು ತರಲು ಹೇಳಿ, ಒಂದಿಷ್ಟು ನೀರನ್ನು ಲಕ್ಷ್ಮಿಯ ತಲೆಗೆ ಸುರಿದರು. ದೇವರು ದೊಡ್ಡವ, ತಲೆ ತಿರುಗಿದ ಹಾಗೆ ಆಗಿತ್ತು ಅಷ್ಟೆ. ಕಣ್ಣು ಬಿಟ್ಟು ಒಮ್ಮೆ ಆರ್ತವಾಗಿ ಒಡೆಯನನ್ನು ನೋಡಿತು. ಹಾಗೆ ಎದ್ದು ನಿಂತ ಲಕ್ಷ್ಮಿಯ ಮೈ ಸವರಿದ, ಸೂರಪ್ಪ ತನಗೆ ತಾನೆ ಶಾಪ ಹಾಕಿಕೊಳ್ಳುತ್ತಿದ್ದ. ಹಾಳದ ನನ್ನ ಕೈ ಮುರಿದೇ ಹೋಗ. ಬಂಗಾರದಂತ ಲಕ್ಷ್ಮಿಗೆ ರೀಪಿನಿಂದ ಹೊಡೆದನಲ್ಲ ಎಂದು ಅಲವತ್ತುಕೊಳ್ಳುತ್ತಿದ್ದ. ಹೋಗಲಿ ಬಿಡು ಎಂಬಂತೆ ಲಕ್ಷ್ಮಿ ಸೂರಪ್ಪನ ಕೈ ನೆಕ್ಕಿತು. ಕ್ಷಮಿಸಿದ ಭಾವಿವಿತ್ತೋ?
ಹೀಗೆ ಮಳೆಯ ಅಭಾವದಲ್ಲೂ ವರದಾ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಯಿತು ನಗರದ ಎಲ್ಲಾ ಕಡೆಯ ಪ್ಲಾಸ್ಟಿಕ್ ಕೊಟ್ಟೆಗಳ ಮತ್ತು ಕೊಳೆಗಳ ಸಮೇತ. ಕಾಲಚಕ್ರ ತಿರುಗುತ್ತಿತ್ತು. ಲಕ್ಷ್ಮಿಗೆ ಕ್ರಮೇಣ ಮುನಿಸಿಪಾಲಿಟಿಯ ಕಸದ ತೊಟ್ಟಿಯೇ ಗತಿ ಎಂಬಂತಾಯಿತು. ಹೋಟೆಲಿನವರು ಎಸೆದ ಸಾಂಬಾರು, ಅನ್ನ, ತರಕಾರಿ, ಮನೆಯವರು ಬಿಸಾಕಿದ ತರಕಾರಿ ಸಿಪ್ಪೆ ಇವೆಲ್ಲಾ ಸಿಗುತ್ತಿತ್ತು. ಕೆಲವರು ಪ್ಲಾಸ್ಟಿಕ್ ಕೊಟ್ಟೆಗಳಲ್ಲಿ ಕಸವನ್ನು ತುಂಬಿ ಗಂಟು ಹಾಕಿ ದೂರದಿಂದ ಕಸದ ತೊಟ್ಟಿಯೊಳಗೆ ಎಸೆಯುತ್ತಿದ್ದರು. ಇದನ್ನು ತಿನ್ನಲೂ ಪೈಪೋಟಿ, ಹಡಬೆ ನಾಯಿಗಳು, ಕಾಗೆಗಳು ಕೆಲವೊಮ್ಮೆ ಇತರೆ ದನಗಳು. ಗಡಿಬಿಡಿಯಲ್ಲಿ ಕಸದ ಜೊತೆ ಪ್ಲಾಸ್ಟಿಕ್ ಕೂಡ ಹೊಟ್ಟೆಯೊಳಗೆ ಹೋಗುತ್ತಿತ್ತು.
ದಿನೇ ದಿನೇ ಲಕ್ಷ್ಮಿಯ ಹೊಟ್ಟೆ ಉಬ್ಬರಿಸುತ್ತಿತ್ತು. ಕಷ್ಟದಲ್ಲೂ ನೂರು ರೂಪಾಯಿ ತೆತ್ತು ಸೂರಪ್ಪನವರು ಒಮ್ಮೆ ಡಾಕ್ಟರನ್ನು ಕರೆಸಿದರು. ಈಗೀಗ ಲಕ್ಷ್ಮಿಗೆ ಹಸಿವಿಲ್ಲ. ಹೊಟ್ಟೆಯಲ್ಲಿ ವಿಪರೀತ ನೋವು. ಮತ್ತೊಮ್ಮೆ ಬಂದು ನೋಡಿದ ಡಾಕ್ಟರ್ ಶ್ರೀಪಾದ, ಬಹುಷ: ಪ್ಲಾಸ್ಟಿಕ್ ತಿಂದಿರಬೇಕು ಎಂದು ಸಂಶಯಿಸಿದರು. ಅದಾಗಿ ಒಂದೇ ವಾರದಲ್ಲಿ ಲಕ್ಷ್ಮಿ ಕೊನೆಯುಸಿರೆಳೆಯಿತು. ರೋಗ ರಹಸ್ಯ ಭೇದಿಸುವ ಸಲುವಾಗಿ ಲಕ್ಷ್ಮಿಯ ಪೋಸ್ಟ್‌ಮಾರ್ಟಂ ಮಾಡಲಾಯಿತು. ಹೊಟ್ಟೆಯಲ್ಲಿ ಸಿಕ್ಕಿದ ಪ್ಲಾಸ್ಟಿಕ್ ಕೊಟ್ಟೆ ಬರೋಬ್ಬರಿ ೪೦ ಕಿ.ಲೊ. ತೂಗಿತು. ಪ್ರಾಯದ ಲಕ್ಷ್ಮಿಯ ಹಣೆಯನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಧನ್ಯರಾದ ಜನರು ಬಳಸಿ ಬಿಸಾಕಿದ ಪ್ಲಾಸ್ಟಿಕ್ ಕೊಟ್ಟೆಯೇ ಲಕ್ಷ್ಮಿಯನ್ನು ಬಲಿತೆಗೆದುಕೊಂಡಿದ್ದು ವಿಧಿಯ ವಿಪರ್‍ಯಾಸವೇ ಸೈ. ಹೀಗೊಂದು ಪರೋಕ್ಷ ಗೋಹತ್ಯೆ ನಡೆಯಿತು. ನಿತ್ಯವೂ ನಡೆಯುತ್ತದೆ. ಎಲ್ಲೆಲ್ಲೂ ಪ್ಲಾಸ್ಟಿಕ್ ಕೊಟ್ಟೆ ರಾರಾಜಿಸುತ್ತವೆ. ಮತ್ತೊಂದು ಬಲಿಗಾಗಿ ಕಾಯುತಾ. . .
***
ಒಳ್ಳೆಯ ಸಂದೇಶವನ್ನೊಳಗೊಂಡ ದನದ ಕತೆ..
ಓದಿಸುವಲ್ಲಿ ಸಫಲವಾಯ್ತುಯ…
ಅಖಿಲೇಶ್ ಚಿಪ್ಪಳಿ avre..
Thanks Sharadaji
"ಹೀಗೊಂದು ಪರೋಕ್ಷ ಗೋಹತ್ಯೆ ನಡೆಯಿತು. ನಿತ್ಯವೂ ನಡೆಯುತ್ತದೆ. ಎಲ್ಲೆಲ್ಲೂ ಪ್ಲಾಸ್ಟಿಕ್ ಕೊಟ್ಟೆ ರಾರಾಜಿಸುತ್ತವೆ. ಮತ್ತೊಂದು ಬಲಿಗಾಗಿ ಕಾಯುತಾ. . ."
'':((((
ಶುಭವಾಗಲಿ
\।/
Chenagidhe lekana estavaythu
Thanks to all