ಆ ಒಂಟಿ ಕೋಣೆಯಲ್ಲಿ ಅವಳನ್ನು ಹೊರತುಪಡಿಸಿದರೆ, ಒಂದೆರಡು ತಟ್ಟೆ ಲೋಟಗಳು, ಒಂದೆರಡು ಪಾತ್ರೆಗಳು, ಪ್ಲಾಸ್ಟಿಕ್ ಕೊಡ, ಬಕೆಟ್, ಚೊಂಬು ಹಾಗೂ ಒಂದಷ್ಟು ಪುಸ್ತಕಗಳು ಮಾತ್ರ. ಕೋಣೆಯಲ್ಲಿ ನಿಃಶಬ್ದ ಕವಿದಿತ್ತು. ಅಪರೂಪಕ್ಕೆ ಕೈಜಾರಿಸಿದರೆ ಪಾತ್ರೆಗಳ ಸದ್ದಷ್ಟೆ. ಆ ಮೌನ ಅವಳನ್ನು ಅದೆಷ್ಟು ಹಿಂಸಿಸುತ್ತಿತ್ತೆಂದರೆ ಇನ್ನೂ ತಾಸು ಮುಂಚಿತವಾಗಿಯೇ ಕಾಲೇಜಿಗೆ ಹೊರಟು ಬಿಡುತ್ತಿದ್ದಳು. ಅಲ್ಲಿಯಾದರೆ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಒಡನಾಟ ಸಿಗುತ್ತದೆ. ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿಯ ಪುಸ್ತಕಗಳಿರುತ್ತವೆ ಎಂಬುದು ರೋಹಿಣಿಯ ಯೋಚನೆಯಾಗಿರುತ್ತಿತ್ತು.
ಆದರೆ ಅವಳಿಗೆ ಮೊದಲಿನಂತೆ ತನ್ಮಯಳಾಗಿ ಪಾಠ ಮಾಡಲಾಗುವುದಿಲ್ಲ. ಮೈಮರೆತು ಪುಸ್ತಕಗಳನ್ನು ಓದಲಾಗುವುದಿಲ್ಲ. ಮನೆ ಬಿಟ್ಟು ಬಂದಿರುವುದು ಬರೀ ಹದಿನೈದು ಮೈಲುಗಳ ದೂರ ಅಷ್ಟೆ. ಆದರೆ ತನ್ನವರ ಮನಸ್ಸುಗಳು ಯಾಕೋ ಬಹಳ ದೂರವಾಗಿಬಿಟ್ಟವು ಎಂದುಕೊಂಡವಳಿಗೆ ಕಣ್ಣುಗಳಲ್ಲಿ ಚುಳ್ಳನೇ ನೀರು ಬಂದಿತ್ತು. ಆ ದಿನ ಪಿ.ಯು.ಸಿ ಮೊದಲನೆ ವರ್ಷದ ವಿದ್ಯಾರ್ಥಿಗಳಿಗೆ ‘ಸಾಮಾಜಿಕ ಜೀವನದಲ್ಲಿ ಕುಟುಂಬದ ಪಾತ್ರ’ ಎಂಬ ವಿಷಯವನ್ನು ಬೋಧಿಸುವುದಿತ್ತು. ಸಮಾಜಶಾಸ್ತ್ರದ ಉಪನ್ಯಾಸಕಿಯಾದ ತನ್ನ ಜೀವನದಲ್ಲಿ ಕೌಟುಂಬಿಕ ನೆಮ್ಮದಿ ಯಾಕೆ ಮರೀಚಿಕೆಯಾಯಿತು ಎಂದುಕೊಂಡವಳಿಗೆ ಗಂಟಲುಸೆರೆ ಬಿಗಿಯಿತು. ತೆರೆದ ಪುಸ್ತಕದ ಪುಟಗಳ ಮೇಲೆ ಕಂಬನಿ ತೊಟ್ಟಿಕ್ಕಿ ಇಳಿದಿತ್ತು.
ಸಾಲಿಟ್ಟು ನಾಲ್ಕೂ ಹೆಣ್ಣು ಮಕ್ಕಳೆ ಹುಟ್ಟಿದಾಗ ಸೀನಪ್ಪ ರ್ಯಾವಮ್ಮ ದಂಪತಿಗಳಿಗೆ ಚಿಂತೆಯಾಗಿತ್ತು. ಆದರೆ ಮಕ್ಕಳೆಲ್ಲ ಚೆಂದಗೆ ಬೆಳೆಯತೊಡಗಿದಾಗ ಮಕ್ಕಳ ಲಾಲನೆ ಪಾಲನೆಯಲ್ಲಿ ಅನಂದವನ್ನು ಕಂಡುಕೊಳ್ಳತೊಡಗಿದ್ದರು. ನೋಡು ನೋಡುತ್ತಿದ್ದಂತೆಯೇ ಆತನ ಮನೆಯಲ್ಲಿ ಪುಸ್ತಕ, ಪಾಠಿಗಳು, ಬಳಪ-ಪೆನ್ಸಿಲ್‍ಗಳು ಬಂದವು. ಮಕ್ಕಳು ಅವರವರ ವಯಸ್ಸಿಗನುಗುಣವಗಿ ವಿವಿಧ ತರಗತಿಗಳಲ್ಲಿ ಓದತೊಡಗಿದಾಗ ದಂಪತಿಗಳು ಮತ್ತಷ್ಟು ಖುಷಿಯಲ್ಲಿ ಜೀವಿಸತೊಡಗಿದ್ದರು. ದೊಡ್ಡ ಹುಡುಗಿಯರಾದ ಸವಿತಾ, ಶೀಲಾ ಇಬ್ಬರೂ ಓದಿನಲ್ಲಿ ಜಾಣೆಯರೆಂದು ಗುರುತಿಸಲ್ಪಟ್ಟಿದ್ದರು. ರೋಹಿಣಿ, ಮಾಲಾ ಕೂಡ ಕ್ರಮವಾಗಿ ಮೂರು, ಐದನೇ ತರಗತಿಗಳಲ್ಲಿ ಓದುತ್ತಿದ್ದರು. ಅವರಿಬ್ಬರೂ ಓದಿನಲ್ಲಿ ಅಷ್ಟೊಂದು ಶ್ರದ್ಧೆ ತೋರದೇ ಆಟೋಟಗಳಲ್ಲಿಯೇ ಕಾಲ ಕಳೆಯುತ್ತಿದ್ದರು. ಸೀನಪ್ಪ ತನ್ನ ಮಕ್ಕಳಿಗೆ ಚೆಂದಗೆ ಓದಿಸಿಬಿಡುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ದೊಡ್ಡ ಮಗಳು ಅದಾಗಲೇ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆಂಬ ಹೆಮ್ಮೆ ಸೀನಪ್ಪನದಾದರೆ, ಅವಳು ಸದ್ಯದಲ್ಲೇ ಮೈನೆರೆಯಲಿದ್ದಾಳೆಂಬ ಚಿಂತೆ ರ್ಯಾವಮ್ಮನದಾಗಿತ್ತು.
ಪ್ರಾರಂಭದಲ್ಲಿ ಜಾಣೆಯರೆಂದು ಕರೆಸಿಕೊಂಡಿದ್ದ ಸವಿತಾ, ಶೀಲಾ ಕ್ರಮೇಣ ಓದಿನಲ್ಲಿ ನಿಧಾನವಾಗಿದ್ದರು. ಕೊನೆಗೆ ಸವಿತಾ ಪಿ ಯು ಸಿಗೇ ತನಗೆ ಓದುವುದು ಸಾಕೆಂದಿದ್ದಳು. ಶೀಲಾ ಬಿ.ಎ ಮುಗಿಸುವಷ್ಟರಲ್ಲಿ ಉಸ್ಸೆಪ್ಪಾ ಎಂದಿದ್ದಳು. ಓದಿನಲ್ಲಿ ಹಿಂದಿದ್ದಾಳೆ ಎಂದು ಮೂದಲಿಕೆಗೆ ಒಳಗಾಗಿದ್ದ ರೋಹಿಣಿ ವಿಶೇಷ ದರ್ಜೆಯಲ್ಲಿ ಮ್ಯಾಟ್ರಿಕ್ ಉತ್ತೀರ್ಣಳಾಗಿ ಪಿಯುಸಿಯಲ್ಲಿ ತನ್ನ ತರಗತಿಗಷ್ಟೆ ಅಲ್ಲದೆ ಇಡೀ ಕಾಲೇಜಿಗೇ ನಾಯಕಿಯಂತೆ ಬೆಳೆಯತೊಡಗಿದ್ದಳು. ಮಾಲಾ ಕೂಡ ರೋಹಿಣಿಯಷ್ಟಲ್ಲದಿದ್ದರೂ ಚೆನ್ನಾಗಿಯೇ ಓದತೊಡಗಿದ್ದಳು.
ಸವಿತಾ, ಶೀಲಾ ಓದುವುದನ್ನು ನಿಲ್ಲಿಸಿದಾಗ ಅವರಿಗೆ ಮದುವೆ ಮಾಡಿ ಬಿಡುವುದೆಂದು ರ್ಯಾವಮ್ಮ ಅವಸರಿಸತೊಡಗಿದ್ದಳು. ಆಕೆಯು ಮಕ್ಕಳ ಮದುವೆ ಮಾತು ಎತ್ತಿದಾಗೆಲ್ಲ ಸೀನಪ್ಪ, “ಹೇಯ್ ಸುಮ್ಕಿರಾ, ಇನ್ನೂ ಸಣ್ಣ ವಯಸ್ಸು, ಇಷ್ಟು ಜಲ್ದೀ ಮದ್ವೀ ಮಾಡಿ ಮುದುಕರ್ನ ಮಾಡ್ಬ್ಯಾಡ ಮಕ್ಕಳ್ನ” ಎಂದು ಹೆಂಡತಿಗೆ ದಬಾಯಿಸುತ್ತಿದ್ದನು. ಹೀಗೆ ಇವರಿಬ್ಬರೂ ಜಗಳಾಡುತ್ತಾ ದಿನಗಳನ್ನು ಕಳೆಯತೊಡಗಿದ್ದರು. ಅಷ್ಟರಲ್ಲಿ ರೋಹಿಣಿ, ಮಾಲಾ ಕೂಡ ಮದುವೆ ವಯಸ್ಸಿಗೆ ಬಂದು ನಿಂತಿದ್ದರು. ರೋಹಿಣಿ ಅಂತಿಮ ಬಿ.ಎ ತರಗತಿಯಲ್ಲಿ ಉತ್ತಮವಾಗಿ ಓದುತ್ತಿದ್ದಳು. ಮಾಲಾ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿ ಕಂಪ್ಯೂಟರ್ ಡಿಪ್ಲೊಮಾಕ್ಕೆ ಪ್ರವೇಶ ಪಡೆದಿದ್ದಳು. ಸವಿತಾ, ಶೀಲಾ ಇಬ್ಬರೂ ಹೊಲಿಗೆ ಕಲಿತಿದ್ದರು. ಆದರೆ ಅವರು ಹೊಲಿಗೆಯನ್ನು ಉದ್ಯೋಗವನ್ನಾಗಿ ಉಪಯೋಗಿಸಿಕೊಂಡಿರಲಿಲ್ಲ. ಶೀಲಾ ಸ್ವಲ್ಪ ಮೈಗಳ್ಳಿಯೇ ಇದ್ದಳು. ಸವಿತಾ ಯಾವುದರಲ್ಲೂ ಮೈಗಳ್ಳತನ ಮಾಡದೆ ಮನೆ-ಕೆಲಸಗಳನ್ನೆಲ್ಲಾ ಮುಗಿಸಿ, ಆಗೀಗ ನೆರೆ ಹೊರೆಯವರು ಕೊಡುತ್ತಿದ್ದ ರವಿಕೆ, ಲಂಗಗಳಂಥ ದಿರಿಸುಗಳನ್ನು ಹೊಲಿಯುತ್ತಿದ್ದಳು. ಹಿರಿಯ ಹುಡುಗಿಯರನ್ನು ನೋಡುವುದಕ್ಕೆಂದು ಬರುತ್ತಿದ್ದ ವರಗಳು ಚಿಕ್ಕ ಹುಡುಗಿಯರಾದ ರೋಹಿಣಿ ಇಲ್ಲವೇ ಮಾಲಾ ಬೇಕೆಂದು ಕೇಳಿ ಬಿಡುತ್ತಿದ್ದರು. ಮೊದಲೆಲ್ಲ ರೋಹಿಣಿ, ಮಾಲಾರು ಬೀಗರ ಕಡೆಯವರು ಬಂದಾಗೆಲ್ಲ ಚಹ, ಪಾನಕ, ಉಪಾಹಾರ ಸರಬರಾಜು ಮಾಡಲು ಉತ್ಸುಕರಾಗಿರುತ್ತಿದ್ದರು. ಕ್ರಮೇಣ ಅವರಿಗೆ ತಾವಿಬ್ಬರೂ ತಮ್ಮ ಅಕ್ಕಂದಿರ ಮದುವೆಗೆ ಅಡ್ಡಿಯಾಗುತ್ತಿರುವ ಭಾವನೆಯಲ್ಲಿ ನೊಂದುಕೊಳ್ಳತೊಡಗಿದ್ದರು.
ಆ ಸಲ ಸವಿತಾನ್ನ ನೋಡುವುದಕ್ಕೆಂದು ಬಂದಿದ್ದ, ಬಾಗಲಕೋಟ್‍ನ ವರನ ಕಡೆಯವರನ್ನು ಕಿಟಕಿಯಲ್ಲಿ ಸಹ ಇಣುಕಿ ನೋಡದೆ ಸಣ್ಣ ಹುಡುಗಿಯರಿಬ್ಬರೂ ಕತ್ತಲಕೋಣೆಯಲ್ಲಿ ಅಡಗಿ ಕುಳಿತಿದ್ದರು. ಸೀನಪ್ಪ ಸಣ್ಣ ಮಕ್ಕಳನ್ನು ಕಾಣದೆ, “ಅವ್ವೀ ರೋಹ್ಣೀ, ಮಾಲಾ” ಅಂತ ಕೂಗುತ್ತ ಮನೆಯನ್ನೆಲ್ಲ ಹುಡುಕಾಡಿ ಕೊನೆಗೆ ಅವರು ಸಿಗದೆ, “ಹಾಳಾದ ಹೆಣ್ಮಕ್ಳು, ಎಲ್ಲೇ ಗೆಳತ್ಯಾರ ಮನೀಗೆ ಹೋಗಿದ್ದಾವು” ಎಂದು ತುಸು ಜೋರಾಗಿಯೇ ಅಂದಾಗ, ಕೋಣೆಯಲ್ಲಿದ್ದ ಮಾಲಾ ಕಿಸಕ್ಕನೆ ನಕ್ಕಿದ್ದಳು. ನಂತರ ಸೀನಪ್ಪ ಎರಡನೇ ಮಗಳು ಶೀಲಾಳನ್ನು ತಿಂಡಿ ಸರಬರಾಜು ಮಾಡಲು ನಿಲ್ಲಿಸಿದ್ದ. ಕನ್ಯೆ ನೋಡಲು ಬಂದ ಹುಡುಗ ಸವಿತಾ ಬೇಡ ಶೀಲಾನೇ ಬೇಕು ಎಂದಾಗ, ದೊಡ್ಡ ಹುಡುಗಿ ಬಿಟ್ಟು ಚಿಕ್ಕವಳನ್ನು ತೋರಿಸುವುದಿಲ್ಲ ಎಂದು ಸೀನಪ್ಪ ನಿಷ್ಠುರವಾಗಿ ಹೇಳಿದ್ದ.
ಹುಡುಗನ ಕಡೆಯವರು ಹೊರಟು ಹೋದ ನಂತರ ಕತ್ತಲ ಕೋಣೆಯಿಂದ ಹೊರಬಂದ ರೋಹಿಣಿ, ಮಾಲಾ ಕಾಳಿ, ಮಹಂಕಾಳಿಯರಂತೆ ತಂದೆಯೊಂದಿಗೆ ಜಗಳ ಮಾಡಿದ್ದರು. “ಏನಪ್ಪಾ ನಿಂಗಂತೂ ಒಂಚೂರೂ ಬುದ್ಧಿ ಇಲ್ಲ ನೋಡು. ನಾವೆಲ್ಲ ನಿಮಗಿನ್ನೂ ಸಣ್ಣ ಮಕ್ಕಳಾ ಅಂತ ಒಪ್ಕೊತೀನಿ. ಆದ್ರ ಕನ್ಯೆ ನೋಡಾಕ ಬರಾವ್ರಿಗೆ ದೊಡ್ಡ ಹುಡುಗ್ಯಾರಿಗಿಂತ ಸಣ್ಣ ಹುಡುಗ್ಯಾರಾ ಚೆಂದ ಕಾಣ್ತಾರ. ನೀನು ಈ ಜಗತ್ತಿನ ಮನುಷ್ಯಾನ ಅಲ್ಲ ಬಿಡು, ನಿನಗೆ ಎಷ್ಟೂ ಕಾಮನ್ ಸೆನ್ಸ್ ಇಲ್ಲ” ಎಂದು ರೋಹಿಣಿ ತಂದೆಗೆ ಹಿಗ್ಗಾ ಮುಗ್ಗ ಬೈಯ್ದು “ಸವಿತಾನ್ನ ಯಾರಾದರೂ ನೋಡಾಕ ಬಂದಾಗ ನಾವು ಮೂರೂ ಜನ ಅವರ ಕಣ್ಣಿಗೆ ಬೀಳಬಾರ್ದು ಅಷ್ಟಾ” ಎಂದು ಅವತ್ತಿನ ಜಗಳವನ್ನು ಮುಗಿಸಿದ್ದಳು. ಸೀನಪ್ಪ ಇಡೀ ದಿನ ಯೋಚಿಸಿ, ಸಾಯಂಕಾಲದ ಹೊತ್ತಿಗೆ ಮಗಳು ಹೇಳಿದ್ದೇ ಸರಿ ಎಂಬ ನಿರ್ಧಾರಕ್ಕೆ ಬಂದಿದ್ದ.
ಸುಂದರಿಯಾಗಿದ್ದ ಸವಿತಾ ಕಾಲನ ಹೊಡೆತದಿಂದ ಜರ್ಜರಿತಳಾಗಿದ್ದಳು. ಬರುತ್ತಿದ್ದ ವರಗಳನ್ನು ಒಂದು ಕಾರಣಕ್ಕೆ ಇವಳು ತಿರಸ್ಕರಿಸಿದರೆ, ಮತ್ತೊಂದು ಕಾರಣಕ್ಕೆ ವರನ ಕಡೆಯವರು ತಿರಸ್ಕರಿಸುತ್ತಿದ್ದರು. ಸವಿತಾ ಅದಾಗಲೆ ಮೂವತ್ತು ದಾಟಿದಾಗ ರ್ಯಾವಮ್ಮನಿಗೆ ದೊಡ್ಡ ಕೊರೆತ ಶುರುವಾಗಿತ್ತು. ಸವಿತಾ ಮಾಡದ ವೃತ, ಪೂಜೆಗಳು ಉಳಿದಿರಲಿಲ್ಲ. ಯಾರು ಯಾವ ದೇವರ ಪೂಜೆ ಮಾಡಲು ಹೇಳಿದರೂ ‘ವರ’ ಸಿಕ್ಕರೆ ಸಾಕೆಂದು ಅವಳು ಮಾಡಿಯೇ ಮಾಡಿದಳು. ಕೊನೆಗೂ ಅವಳ ವೃತಾಚರಣೆಗಳ ಫಲವೊ, ತಂದೆ-ತಾಯಿಯ ಪ್ರಯತ್ನದ ಫಲವೊ ಅಂತೂ ಸವಿತಾಗೆ ವರ ಸಿಕ್ಕನು. ಗುಳೇದಗುಡ್ಡದ ಆ ಹುಡುಗ ಪ್ರಕಾಶ ಸವಿತಾಗೆ ತಕ್ಕ ಸದ್ಗುಣವಂತನೆ ಇದ್ದನು.
ಸವಿತಾಳ ಮದುವೆ ಮುಗಿಯುತ್ತಲೇ ಶೀಲಾಳ ಮದುವೆಯ ಪ್ರಯತ್ನ ಸಾಗಿತ್ತು. ಆಗಲೇ ಇಪ್ಪತ್ತೆಂಟು ದಾಟಿದ, ಸ್ವಲ್ಪ ಜಾಸ್ತಿನೇ ಎತ್ತರವಿದ್ದ ಶೀಲಾ ಬರುತ್ತಿದ್ದ ವರಗಳಿಗೆ ಇಷ್ಟವಾಗುತ್ತಿರಲಿಲ್ಲ. ಆ ಹೊತ್ತಿಗೆ ರೋಹಿಣಿ ಎಂ.ಎ ಮುಗಿಸಿ ಕೆಪಿಎಸ್‍ಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯತೊಡಗಿದ್ದಳು. ಮಾಲಾ ಡಿಪ್ಲೊಮಾ ವ್ಯಾಸಂಗದ ಮೂರೂ ವರ್ಷಗಳಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣಳಾಗಿ ಮನೆಯಲ್ಲಿ ಕುಳಿತಿದ್ದಳು. ಪಿಯುಸಿ ಸಮಯದಲ್ಲಿ ಅವಳಿಗೆ ಓದಿನಲ್ಲಿದ್ದ ಶ್ರದ್ಧೆ ಡಿಪ್ಲೊಮಾಗೆ ಬಂದಾಗ ಉಳಿದಿರಲಿಲ್ಲ. ಅವಳ ತಲೆಯಲ್ಲಿ ಪ್ರೇಮದ ಕೊರೆತ ಶುರುವಾಗಿತ್ತು. “ಸಣ್ಣವಳು ನೀನು ಪ್ರೇಮ ಸುಡುಗಾಡು ಅಂತ ತಲೆ ಕೆಡಿಸ್ಕೊಂಡು, ಹೆಸರ್ನ ಕೆಡಿಸ್ಕೊಂಡ್ರ , ಶೀಲಾಂದು ನಂದೂ ಮದ್ವೆ ಆಗೂದು ಹೆಂಗೆ, ನೀನಾ ಹೇಳವ್ವ…” ಅಂತ ರೋಹಿಣಿ ತಂಗಿಯ ರಟ್ಟೆ ಹಿಡಿದು ಕೇಳಿದ್ದಳು ಆ ದಿನ. “ನೀವಿಬ್ರೂ ಮದ್ವೆಯಾಗೋತಂಕ ನಾನು ಕಾಯ್ತೀನಿ” ಎಂದು ಹೇಳಿ ಮಾತು ಬೆಳೆಯುವುದಕ್ಕೆ ಅವಕಾಶ ಕೊಡದೆ ಮಾಲಾ ಕೋಣೆಯಿಂದ ಹೊರಗೆ ಹೋಗಿದ್ದಳು.
ಈ ಎಲ್ಲಾ ರಗಳೆಗಳ ಮದ್ಯೆಯೇ ರೋಹಿಣಿಯ ಬದುಕಿಗೆ ಹೊಸ ತಿರುವು ಸಿಕ್ಕಿತು. ಅವಳು ಸರಕಾರಿ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಉಪನ್ಯಾಸಕಿಯಾಗಿ ಆಯ್ಕೆಯಾಗಿದ್ದಳು. ಅವಳು ತನ್ನ ನೌಕರಿಯ ಸಿಹಿ ಸುದ್ದಿಯನ್ನು ಹೇಳಲು ಸಂಭ್ರಮದಿಂದ ಮನೆಗೆ ಬಂದಾಗ ಸಂಭ್ರಮಿಸಿದವರು ತಂದೆ-ತಾಯಿ ಮಾತ್ರ. ಶೀಲಾ ಮಾಲಾರ ಮುಖ ಕಪ್ಪಾಗಿದ್ದವು. ರೋಹಿಣಿಗೆ ಸಹೋದರಿಯರ ಮುಖ ಸಪ್ಪೆಯಾಗಿದ್ದನ್ನು ಕಂಡು ಕರುಳಲ್ಲಿ ಕತ್ತರಿ ಆಡಿಸಿದಂತಹ ಯಾತನೆಯಾಗಿತ್ತು. ಗಂಡನ ಮನೆಯಲ್ಲಿದ್ದ ಅಕ್ಕ ಸವಿತಾ ಮಾತ್ರ ತವರಿಗೆ ಬಂದು ಸಿಹಿ ಮಾಡಿ ಉಣ್ಣಿಸಿ ತಂಗಿಗೆ ನೌಕರಿ ಸಿಕ್ಕಿದ ಸಂತೋಷವನ್ನು ಹಂಚಿಕೊಂಡಿದ್ದಳು. ಇದರಿಂದ ರೋಹಿಣಿಯ ಮನಸ್ಸು ಸಾಧ್ಯವಾದಷ್ಟು ಹಗುರವಾಯಿತು. ಆ ಸಮಯದಲ್ಲಿ ರೋಹಿಣಿ ತನಗೊಬ್ಬ ಅಣ್ಣನೊ, ತಮ್ಮನೋ ಇದ್ದಿದ್ದರೆ ಬದುಕು ಹೇಗಿರಬಹುದಿತ್ತು ಎಂದು ಯೋಚಿಸಿದ್ದಳು.
ತಾಯಿ ರ್ಯಾವಮ್ಮನಿಗೆ ಮೊದಲಿನಂತೆ ಚಟುವಟಿಕೆಯಿಂದಿರಲು ಸಾಧ್ಯವಾಗುವುದಿಲ್ಲ. ಜೊತೆಗೆ ಅಕ್ಕ ತಂಗಿ ನಿರಂತರ ಶೀತಲಯುದ್ಧ ಮುಂದುವರೆಸಿದಾಗ ರೋಹಿಣಿಗೆ ಜೀವನ ಬಹಳ ಬೇಸರವಾಗುತ್ತದೆ. ಸಾಮಾನ್ಯವಾಗಿ ಹುಡುಗಿಯರು ಓದು ಮುಗಿಯುತ್ತಲೆ ಒಳ್ಳೇ ಕೆಲಸ ಸಿಕ್ಕು ಬಿಟ್ಟರೆ ನಿಃಶ್ಚಿಂತರಾಗಿಬಿಡುತ್ತಾರೆ. ಆದರೆ ತನ್ನ ವಿಷಯದಲ್ಲಿ ಹಾಗಾಗಲಿಲ್ಲವಲ್ಲ ಅಂತ ರೋಹಿಣಿ ಚಿಂತಿಸುತ್ತಾಳೆ. ತನ್ನನ್ನೂ ಸೇರಿಸಿ ಮನೆಯಲ್ಲಿರುವವರು ಐದು ಜನರು ಮಾತ್ರ. ತಂದೆ ತಾಯಿಯ ಊಟ ಹಿಡಿ ಅನ್ನ ನಾಲ್ಕು ರೊಟ್ಟಿಯಲ್ಲಿ ಮುಗಿಯುತ್ತದೆ. ನಾಲ್ಕು ಜನರ ಅಡಿಗೆ ಮಾಡಲು, ಪಾತ್ರೆ-ಬಟ್ಟೆ ತೊಳೆಯಲು ಶೀಲಾ, ಮಾಲಾ ಮನೆ ಮಾಳಿಗೆ ಕಿತ್ತು ಹೋಗುವಂತೆ ಕಿರುಚಾಡುತ್ತಾರೆ. ಮನೆಯಲ್ಲಿ ನೆಮ್ಮದಿ ಹಾಳಾಗಬಾರದು ಎಂದುಕೊಂಡು ರೋಹಿಣಿ ಸಾಧ್ಯವಾದಷ್ಟೂ ಮನೆಕೆಲಸದಲ್ಲಿ ಭಾಗಿಯಾಗುವಳು. ಆದರೆ ಅವಳಿಗೆ ಯಾವಾಗಲೂ ಮನೆಕೆಲಸದಲ್ಲಿ ಸಮನಾಗಿ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೆಳಿಗ್ಗೆ ಹತ್ತು ಗಂಟೆಯಿಂದ ಸಾಯಂಕಾಲದವರೆಗೆ ಕಾಲೇಜು, ತರಗತಿಗಳಲ್ಲಿ ಪಾಠ ಮಾಡುವುದು ಅವಳಿಗೆ ಖುಷಿಯ ಸಂಗತಿಯೇ ಹೌದು. ಆದರೆ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವ ಅಗತ್ಯವೂ ಇರುವುದು. ಅದಲ್ಲದೇ ಬಾಲ್ಯದಿಂದಲೂ ಮನೆ ಕೆಲಸದಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸ್ವಭಾವ ಅವಳಿಗೆ ಮೈಗೂಡಿಯೇ ಇಲ್ಲ. ತನ್ನ ಎಲ್ಲಾ ಚಟುವಟಿಕೆಗಳಿಗೆ ಸಮನಾಗಿ ಸಮಯ ಹಂಚಿದರೆ ಅವಳಿಗೆ ಮನೆಗೆಲಸದಲ್ಲಿ ಯಾವುದಾದರೂ ಒಂದು ಅಥವಾ ಎರಡು ಕೆಲಸಗಳು ಸಾಧ್ಯವಾಗುವುದು ಅಷ್ಟೆ.
ಆದರೆ ಶೀಲಾ ಮಾಲಾರಿಗೆ ಅರ್ಥ ಮಾಡಿಕೊಳ್ಳುವ ಶಕ್ತಿ ಇದ್ದರೂ ಮನಸ್ಸು ಇಲ್ಲ. ಸದಾ ಹಸನ್ಮುಖಿಯಾಗಿರುವ ರೋಹಿಣಿಯನ್ನು ಕಂಡರೆ ಅವರಿಗೆ ಅಸಮಾಧಾನ. ತನ್ನ ಅಕ್ಕ ತಂಗಿಯ ಬದುಕು ಹಸನಾಗಲಿ, ಅವರಿಗೂ ಜೀವನೋಪಾಯಕ್ಕೆ ಒಳ್ಳೆಯ ದಾರಿ ಸಿಗಲಿ ಅಂತ ಸದಾ ಚಿಂತಿಸುವ ರೋಹಿಣಿಗೆ ಅಕ್ಕ ತಂಗಿಯ ಅಲ್ಪಬುದ್ಧಿ ಕಂಡು ಬಹಳ ಬೇಸರವಾಗುವುದು. ತಂದೆಗೆ ಇತ್ತೀಚೆಗೆ ಹೊಲದಲ್ಲಿ ಸರಿಯಾದ ಲಾಭ ಸಿಗುತ್ತಿಲ್ಲವಾದ್ದರಿಂದ ರೋಹಿಣಿಯ ಸಂಬಳದ ಬಹುಪಾಲು ಮನೆಗೆ ಖರ್ಚಾಗುತ್ತದೆ. ಹಾಗಿದ್ದರೂ ತಂದೆಯೂ ಕೂಡ ಎಷ್ಟೊ ಬಾರಿ ರೋಹಿಣಿಯ ಮೇಲೆ ರೇಗಾಡುವುದುಂಟು. ಮೊಬೈಲ್‍ನಲ್ಲಿ ಜಾಸ್ತಿ ಹೊತ್ತು ಮಾತನಾಡಿದರೆ ತಪ್ಪು, ಮನೆಗೆ ಸ್ವಲ್ಪ ತಡವಾಗಿ ಬಂದರೆ ತಪ್ಪು, ಸದಾ ತನ್ನೊಂದಿಗೆ ಜಗಳ ಕಾಯುವ ಸಹೋದರಿಯರಿಗೆ ಏನಾದರೂ ಬುದ್ಧಿ ಮಾತು ಹೇಳಿದರಂತೂ ರೋಹಿಣಿಯೇ ತಂದೆಯ ದೃಷ್ಟಿಯಲ್ಲಿ ಅಪರಾಧಿಯಾಗಿಬಿಡುವಳು. “ನೀನೇನು ಜಗತ್ತಿನ್ಯಾಗಿಲ್ಲದ ನೌಕ್ರೀ ಮಾಡ್ತೀಯೇನವ್ವಾ? ಪಗಾರ ತಂದು ಕೊಡ್ತೀದಿ ಅಂತ ನಿನಗ ಎಲ್ಲಾರು ಹೆದರ್ಬೇಕಾಗೇತಿ ನೋಡು” ಎಂದು ತಂದೆಯೂ, “ ನೌಕ್ರೀ ಮಾಡ್ತಾಳಲ್ಲ, ಅದಾ ಬಾಳ ದೊಡ್ಡದು, ಸೊಕ್ಕು ಬಂದೈತಿ ಮಾಡಿಟ್ಟದ್ದು ತಿಂದು ತಿಂದು” ಎಂದು ಅಕ್ಕ ತಂಗಿಯರೂ ಆಗಾಗ್ಗೆ ಹಂಗಿಸುವರು. ಅಂತಹ ಮಾತುಗಳನ್ನು ಕೇಳಿದಾಗೆಲ್ಲ ರೋಹಿಣಿಗೆ ಸಂಪೂರ್ಣ ಅತಂತ್ರ ಭಾವನೆ ಬಂದು ಬಿಡುವುದು. ತನ್ನ ಜಾಣತನ, ಉಪನ್ಯಾಸಕಿಯಾಗಿ ತಾನು ಗಳಿಸಿದ ಹೆಸರು, ತರುವ ಆದಾಯ ಯಾವುದರ ಬಗ್ಗೆಯೂ ಮನೆಯ ಸದಸ್ಯರು ಹೆಮ್ಮೆಪಟ್ಟುಕೊಳ್ಳದಿದ್ದರೂ ಪರವಾಗಿಲ್ಲ, ಆದರೆ ಚುಚ್ಚು ಮಾತುಗಳಿಂದ ನೋಯಿಸದಿರಲಿ ಅಂತ ರೋಹಿಣಿ ಎಷ್ಟೋ ಸಂದರ್ಭಗಳಲ್ಲಿ ಅವರಿಗೆಲ್ಲ ವಾಸ್ತವವನ್ನು ತಿಳಿಸಿ ಹೇಳಲು ಪ್ರಯತ್ನಿಸಿದ್ದುಂಟು. ಆದರೆ ಅವರು ಒರಟು ವಾಗ್ವಾದಕ್ಕೆ ಇಳಿಯುತ್ತಾರೆ ಹೊರತು ಬದಲಾಗುವುದಿಲ್ಲ.
ವರ್ಷಗಳೇ ಕಳೆಯುತ್ತಿದ್ದರೂ ಮನೆಯಲ್ಲಿ ತಂದೆ, ಸಹೋದರಿಯರು ಅವಳನ್ನು ಅರ್ಥಮಾಡಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಅವಳಿಗೂ ಹೊಂದಾಣಿಕೆ ಮಾಡಿಕೊಂಡು ಬದುಕಿ ಬದುಕಿ ಆ ಜೀವನವೇ ಬೇಸರವೆನ್ನಿಸತೊಡಗುವುದು. ಹೊರಗೆ ಯಾರೊಬ್ಬರೆದುರಿಗೂ ತನ್ನ ಸಂಕಟವನ್ನು ತೋಡಿಕೊಳ್ಳುವಂತಿಲ್ಲ. ಏನೇ ಹೇಳಿಕೊಂಡರೂ ಅದು ತನ್ನ ಮನೆತನದ ಮಾರ್ಯದೆ, ಒಡಕನ್ನು ಬಯಲಿಗಿರಿಸಿದಂತೆ ಎಂದುಕೊಂಡು ಅವುಡುಗಚ್ಚಿ ಸಹಿಸಿಕೊಳ್ಳುವಳು ರೋಹಿಣಿ. ಮನೆಗೆ ಬೇಗನೆ ಹೋದರೂ ತಡವಾಗಿ ಹೋದರೂ ಏನಾದರೊಂದು ರಗಳೆಯನ್ನು ತೆಗೆದೇ ತೆಗೆಯುತ್ತಾರೆ. ಒಂದು ದಿನವಾದರೂ ಎಲ್ಲರೂ ಕುಳಿತು ನಗುತ್ತಾ ಮಾತಾಡಿದ ನೆನಪಿಲ್ಲ. ಮನೆಯಲ್ಲಿ ತಾಯಿ ಮಾತ್ರ ತನ್ನ ಸಲುವಾಗಿ ಮೌನವಾಗಿ ರೋಧಿಸುವ ಜೀವಿ. ಮನೆಗೆ ಹೋಗಿ ಅವರೊಂದಿಗೆ ಪೇಚಾಡಿಕೊಳ್ಳುವ ಬದಲಿಗೆ ಕಾಲೇಜು ಲೈಬ್ರರಿಯಲ್ಲಿ ಓದಿಕೊಳ್ಳುವುದೇ ಲೇಸೆಂದು ರೋಹಿಣಿ ನಿರ್ಧರಿಸಿಬಿಡುತ್ತಾಳೆ.
ಇದೇ ದಿನಗಳಲ್ಲಿ ಅವಳಿಗೆ ಒಂದು ಹಪಾಹಪಿ ಶುರುವಾಗುತ್ತದೆ. ಪಿಯುಸಿ ವಿದ್ಯಾರ್ಥಿಗಳಿಗಾಗಿ ಸಮಾಜಶಾಸ್ತ್ರದ ಪಠ್ಯ ಪುಸ್ತಕವನ್ನು ಬರೆಯಬೇಕೆಂದು ಅವಳ ಮನಸು ಹಗಲಿರುಳು ಚಿಂತನೆಗೆ ತೊಡಗುತ್ತದೆ. ಸಮಾಜಶಾಸ್ತ್ರದ ಕುರಿತು ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಲಭ್ಯವಿರುವ ಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಓದುವುದರಲ್ಲಿ ತಲ್ಲೀನತೆ ಸಾಧಿಸುತ್ತಾಳೆ. ವಾರಕ್ಕೆ ಒಂದು ಸಲ ತನ್ನ ಅಧ್ಯಯನ ಸಾಮಗ್ರಿಗಾಗಿ ಅಗತ್ಯವಿರುವ ಸಮುದಾಯ, ಸಮಾಜಗಳಿಗೆ ಭೇಟಿ ಕೊಡುತ್ತಾಳೆ. ಬರವಣಿಗೆಗಾಗಿ ಶ್ರಮಪಡುತ್ತಾ ಅವಳು ಕ್ರಮೇಣ ಮನೆಯಲ್ಲಿ ಮೌನದೇವತೆಯಂತೆ ಮಾತಿಲ್ಲದೆ ಇರುವುದಕ್ಕೆ ರೂಢಿಸಿಕೊಂಡು ಬಿಡುವಳು.
ಅವಳು ಪ್ರತಿದಿನ ಮನೆಯಲ್ಲಿ ತಾನು ಮಾಡಬೇಕಾಗಿರುವ ಕೆಲಸಗಳೇನಾದರೂ ಇವೆಯೇ ಎಂದು ಪರಿಶೀಲಿಸಿ ತನ್ನ ಸಮಯ ಮಿತಿಯಲ್ಲಿ ಸಾಧ್ಯವಾಗುವುದನ್ನು ಮಾಡಿ ಕಾಲೇಜಿಗೆ ಹೋಗುವಳು. ಸಾಯಂಕಾಲ ಬಂದ ನಂತರವೂ ಅಷ್ಟೆ, ಪಾತ್ರೆ ತೊಳೆಯುವುದಿದ್ದರೆ ತೊಳೆದು ಊಟ ಮುಗಿಸಿದರೆ ತೀರಿತು; ಕಣ್ಣಿಗೆ ನಿದ್ರೆ ಬರುವವರೆಗೆ ಅವಳ ಓದು ಅನೂಚಾನವಾಗಿ ಸಾಗುತ್ತಿರುತ್ತದೆ. ಅವಳಲ್ಲಿ ಉಂಟಾದ ಈ ಬದಲಾವಣೆಯಿಂದ ತಂದೆ ಮತ್ತು ಸಹೋದರಿಯರ ಕೂಗಾಟಕ್ಕೆ ಸ್ವಲ್ಪ ತಡೆ ಬೀಳುತ್ತದೆ.
ಹೀಗಿರುವಾಗಲೇ ಅವಳ ಕಾಲೇಜಿಗೆ ಸುಶೀಲ್ ಎಂಬ ಪ್ರತಿಭಾವಂತ ಕನ್ನಡ ಉಪನ್ಯಾಸಕ ನೇಮಕಗೊಂಡು ಬರುತ್ತಾನೆ. ರೋಹಿಣಿಯಂತೆ ಅವನೂ ಸ್ನೇಹ ಜೀವಿ, ಮಿತಭಾಷಿ. ಸುಶೀಲ್ ಮತ್ತು ಮುಖ್ಯೋಪಾದ್ಯಾಪಕಿ ತ್ರಿವೇಣಮ್ಮನವರು ರೋಹಿಣಿಯ ಸಮಾಜಶಾಸ್ತ್ರದ ಅಧ್ಯಯನಕ್ಕೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದರು. ಅವಳ ಆ ನಿಟ್ಟಿನ ಪರಿಶ್ರಮ ಆಳವಾಗುತ್ತಾ ಸಾಗಿತ್ತು. ಅದೇ ವರ್ಷ ಅವಳು “ಅವಿಭಕ್ತ ಕುಟುಂಬ ಪದ್ಧತಿಯ ಉಗಮ ಮತ್ತು ನಡೆದು ಬಂದ ಹಾದಿ” ಎಂಬ ವಿಷಯದ ಮೇಲೆ ಸಂಶೋಧನೆಗೂ ತೊಡಗಿದ್ದಳು. ಗದಗನಿಂದ ತನ್ನ ಊರು ಹರ್ಲಾಪುರಕ್ಕೆ ನಿತ್ಯವೂ ಓಡಾಡುವುದರಿಂದ ಅವಳ ಸಮಯದಲ್ಲಿ ನಿತ್ಯವೂ ಒಂದೆರಡು ತಾಸುಗಳು ಪ್ರಯಾಣಕ್ಕೆ ಖರ್ಚಾಗುತ್ತಿದ್ದವು. ಅದೂ ಅಲ್ಲದೆ ತಾನು ದಿನವೆಲ್ಲ ದುಡಿದು ಮನೆಗೆ ಬಂದರೆ ದಣಿದ ಮನಸಿಗೆ ಮನೆಯಲ್ಲಿ ಸಿಗುವುದೆಂದರೆ ಯಾರಿಂದಲಾದರೂ ಕಠೋಕ್ತಿಗಳು ಎಂಬ ಕಠೋರ ಸತ್ಯ ಅವಳೆದುರಿಗೆ ಇತ್ತು. ಹಾಗಾಗಿ ಅವಳು ಗದಗನಲ್ಲಿಯೇ ಒಂದು ಪುಟ್ಟ ಮನೆ ಮಾಡಿಕೊಂಡು ಇದ್ದು ಬಿಟ್ಟಳು. ಪ್ರಾರಂಭದಲ್ಲಿ ಒಂಟಿ ಕೋಣೆಯಲ್ಲಿ ಒಬ್ಬಂಟಿ ಜೀವನ ಅವಳಿಗೆ ಬಲು ಬೇಸರವನ್ನುಂಟು ಮಾಡುತ್ತಿತ್ತು. ಕ್ರಮೇಣ ತಾನು ಮಾಡಬೇಕಾಗಿರುವ ಕೆಲಸಗಳು ಬಹಳಷ್ಟಿವೆ ಎಂದುಕೊಂಡವಳಿಗೆ ಬೇಸರ, ಒಬ್ಬಂಟಿತನ ಇತ್ಯಾದಿಗಳು ದೊಡ್ಡ ಸಮಸ್ಯೆಗಳೆನ್ನಿಸಲಿಲ್ಲ. ಇದೇ ದಿನಗಳಲ್ಲಿಯೇ ಅವಳ ಕಾಲೇಜಿಗೆ ಸುಶೀಲ್‍ನ ಆಗಮನವಾಗಿದ್ದು.
ರೋಹಿಣಿ ಗದಗನಲ್ಲಿ ಉಳಿದುಕೊಂಡ ನಂತರ ಅವಳ ಮನೆಯಲ್ಲಿ ನಿಧಾನವಾಗಿ ಕೆಲವು ಬದಲಾವಣೆಗಳು ಉಂಟಾಗತೊಡಗಿದ್ದವು. ರೋಹಿಣಿಯಿಂದ ಮನೆಗೆ ಸಲ್ಲುತ್ತಿದ್ದ ಹಣದ ಮೊತ್ತದಲ್ಲಿ ಕಡಿತ ಉಂಟಾಗಿತ್ತು. ಇದರಿಂದ ಮನೆಯಲ್ಲಿ ಹಿಂದೆ ಮಾಡುತ್ತಿದ್ದ ದುಂದು ವೆಚ್ಚಕ್ಕೆ ಕಡಿವಾಣ ಬಿದ್ದಿತ್ತು. ಅಕ್ಕ ಶೀಲಾ ಮನೆಗೆ ಮಾತ್ರ ಸೀಮಿತವಾಗಿದ್ದ ರಾಟಿಯನ್ನು ನೆರೆಹೊರೆಯವರ ಬಟ್ಟೆಗಳನ್ನೂ ಹೊಲಿಯಲು ಉಪಯೋಗಿಸತೊಡಗಿದ್ದಳು. ಹಾಗೆ ಸಂಪಾದಿಸಿದ ಹಣವನ್ನೆಲ್ಲ ಪೈಸೆ ಕೂಡ ಖರ್ಚು ಮಾಡದೆ ಬ್ಯಾಂಕ್‍ನಲ್ಲಿ ತನ್ನದೊಂದು ಖಾತೆ ತೆರೆದು ಉಳಿಸತೊಡಗಿದ್ದಳು. ಮಾಲಾಗೆ ತಂದೆಯಿಂದ ಸಿಗುತ್ತಿದ್ದ ಕೈ ಖರ್ಚಿನ ಹಣ ನಿಂತು ಹೋಗಿತ್ತು. ಭಾವೀ ಪತಿ ಸೋಮು ಜತೆಗಿನ ಅವಳ ಎಸ್‍ಎಮ್‍ಎಸ್ ಚಾಟಿಂಗ್, ಇ-ಮೇಲ್ ಪ್ರಮಾಣ ಕಡಿಮೆಯಾಗಿತ್ತು . ಆದರೆ ಇದರಿಂದಾಗಿ ಅವರಿಬ್ಬರ ಬಹಿರಂಗ ಭೇಟಿಗಳು ಜಾಸ್ತಿಯಾಗತೊಡಗಿದ್ದವು. ಹೆತ್ತವರು ಎಷ್ಟೇ ಆಕ್ಷೇಪಿಸಿದರೂ ಅವಳು ಸೋಮು ಜೊತೆ ಅಲೆದಾಡುವುದನ್ನು ಇನ್ನೂ ಹೆಚ್ಚು ಮಾಡಿದಳು. ಮುಖ್ಯವಾದ ಬದಲಾವಣೆ ಎಂದರೆ ರೋಹಿಣಿಯನ್ನು ಪ್ರತಿಯೊಬ್ಬರೂ ನೆನಪಿಸಿಕೊಂಡು ಒಳಗೊಳಗೆ ಕೊರಗುತ್ತಿದ್ದರು. ಅವಳು ತಮ್ಮಿಂದ ದೂರವಾದಳೇ ಎಂದು ಹೇಳಿಕೊಳ್ಳಲಾಗದ ಯಾತನೆ ಅವರೆಲ್ಲರನ್ನು ಕಿತ್ತುತಿನ್ನತೊಡಗಿತ್ತು.
ಪ್ರಾರಂಭದಲ್ಲಿ ರೋಹಿಣಿ, ಸುಶೀಲ್‍ರ ಸಂಭಾಷಣೆ ಕೇವಲ ಅಧ್ಯಯನ ಹಾಗೂ ಅಧ್ಯಾಪನದ ಕುರಿತು ನಡೆಯುತ್ತಿತ್ತು. ಅದೂ ಕಾಲೇಜು ಸಿಬ್ಬಂದಿ ಕೊಟಡಿಯಲ್ಲಿ ಮಾತ್ರ ಸೀಮಿತವಾಗಿತ್ತು. ಕ್ರಮೇಣ ಅವರ ಗೆಳೆತನ ವಿಸ್ತೃತವಾಗುತ್ತಾ ಹೋದಂತೆಲ್ಲ ಅವರ ಸಂಭಾಷಣೆಗಳು ಎಸ್‍ಎಮ್‍ಎಸ್, ಆನ್ ಲೈನ್ ಚಾಟಿಂಗ್ ರೂಪಕ್ಕೆ ವರ್ಗಾವಣೆಯಾಗಿದ್ದವು. ಅವರಿಬ್ಬರೂ ಬೆಳಿಗ್ಗೆ ಎದ್ದೊಡನೆ ಮೊದಲು ಮಾಡುತ್ತಿದ್ದ ಕೆಲಸವೆಂದರೆ ಮೆಸ್ಸೇಜ್ ಬಂದಿದೆಯೇ ಎಂದು ಇ-ಮೇಲ್ ಇನ್ ಬಾಕ್ಸ್‍ನ್ನು ನೋಡುವುದು ಮತ್ತು ಕರೆ ಮಾಡಿ ಒಂದೈದು ನಿಮಿಷವಾದರೂ ಮಾತಾಡುವುದು. ಈಗೀಗ ಅವರು ಕಾಲೇಜು ಆವರಣದಲ್ಲಿರುವ ಕ್ಯಾಂಟೀನಿಗೂ ಜೊತೆಯಲ್ಲಿ ಹೋಗುವುದುಂಟು. ಅವರಿಬ್ಬರ ಗೆಳೆತನವನ್ನು ಉಳಿದ ಸಹೋದ್ಯೋಗಿಗಳಾದ ಸರಸ್ವತಿ, ಮೇಘನಾ, ಪ್ರಕಾಶ, ಹುಚ್ಚೀರಪ್ಪ ಮೊದಲಾದವರು ಬೆರಗುಗಣ್ಣಿನಿಂದ ನೋಡುತ್ತಿದ್ದರಾದರೂ ಅವರಿಬ್ಬರ ಬಗ್ಗೆ ಮಾತನ್ನಾಡುವ ಧೈರ್ಯ ಅವರ್ಯಾರಿಗೂ ಇರಲಿಲ್ಲ. ಸ್ವತಃ ಮುಖ್ಯೋಪಾಧ್ಯಾಪಕಿಯವರೇ ಅವರಿಬ್ಬರನ್ನು ವಿಶ್ವಾಸದಿಂದ ಕಾಣುತ್ತಿದ್ದರು. ಎಲ್ಲಾ ವಿಷಯಗಳಲ್ಲೂ ಅತ್ಯಂತ ತಿಳುವಳಿಕೆ ಹೊಂದಿದ ಸುಶೀಲ್ ಹೆಸರಿಗೆ ತಕ್ಕಂತೆಯೇ ಸದ್ಗುಣಿಯಾಗಿದ್ದನು. ರೋಹಿಣಿ ಕೂಡ ಮಾದರಿ ಉಪನ್ಯಾಸಕಿ ಎನಿಸಿಕೊಂಡಿದ್ದಳು. ಅವರ ಗೆಳೆತನದ ವಿಷಯ ಗಾಳಿಯಲ್ಲಿ ತೇಲಿಕೊಂಡು ರೋಹಿಣಿಯ ಮನೆಗೂ ತಲುಪಿತ್ತು. ಅವಳು ಈ ಮದ್ಯೆ ಒಮ್ಮೆ ಊರಿಗೆ ಹೋದಾಗ ಅವಳ ತಂದೆ, “ಯಾಕವ್ವಾ, ಬರು ಬರ್ತಾ ನೀನು ಬುದ್ಧಿ ಕಳಕೊಳ್ಳಾಕ್ಹತ್ತೀ? ನೋಡು ಸರಿ ಯಾವ್ದು, ತಪ್ಪು ಯಾವ್ದು ಅಂತ ಯೋಚ್ನೆ ಮಾಡು…” ಎಂದು ಕಿಡಿ ಕಾರಿದ್ದರು. ರೋಹಿಣಿ ಏನೂ ಮಾತಾಡದೆ ಅದೇ ಸ್ನಿಗ್ಧ ನಗುವನ್ನು ಅರಳಿಸಿದ್ದಳು. ಶೀಲಾ ತನ್ನ ತಂಗಿಯ ಈ ಪರಿಯ ಶಾಂತತೆಯನ್ನು ಕಂಡು ಕಸಿವಿಸಿಗೊಂಡು, ಮಾತಾಡದೆ ತನ್ನ ಕೋಣೆ ಸೇರಿದ್ದಳು. ಮಾಲಾ ಸಹ ಸುಮ್ಮನಿದ್ದಳು. ತಾಯಿ ರ್ಯಾವಮ್ಮ ಮನಸ್ಸಿನಲ್ಲಿಯೇ “ಅವಳಿಗೆ ಒಳ್ಳೇದಾಗ್ಲಿ” ಎಂದು ಹಾರೈಸಿದ್ದಳು.
ಅಂದು ರೋಹಿಣಿಯ ಫೋನ್ ಕರೆ ಬಂದಾಗ ಶೀಲಾ ಕುತೂಹಲದಿಂದ ಫೋನ್ ಎತ್ತಿದ್ದಳು. ರೋಹಿಣಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಂತೆಯೇ ಶೀಲಾಳ ಮನಸು ಮೊಟ್ಟ ಮೊದಲ ಸಲ ಅತೀವ ಆನಂದ ಮತ್ತು ಪುಳಕಕ್ಕೆ ಈಡಾಗಿತ್ತು. “ಅಕ್ಕ ಇದೇ ಗುರುವಾರ ನನ್ನ ಪುಸ್ತಕ ಬಿಡುಗಡೆ ಸಮಾರಂಭ ಐತೆ. ಅಪ್ಪ, ಅವ್ವ, ನೀವೆಲ್ರೂ ಬರ್ಬೇಕು….” ಎಂದು ತಂಗಿ ವಿವರಿಸಿದಾಗ ಶೀಲಾ ಮಾತು ಹೊರಡದೆ ಆನಂದಾಶ್ರು ಸುರಿಸಿದ್ದಳು. ತನ್ನೊಂದಿಗೇನೆ ಹುಟ್ಟಿ ಬೆಳೆದ ರೋಹಿಣಿ ತಮ್ಮೆಲ್ಲರ ಚುಚ್ಚು ನುಡಿಗಳನ್ನು ಕೇಳುತ್ತ, ಸಹಿಸಿಕೊಂಡು ಮುನ್ನುಗ್ಗಿದ ತನ್ನ ತಂಗಿಗೆ ಇಂತಹ ಸಾಧನೆ ಮಾಡುವ ಶಕ್ತಿ ಇದೆ ಅಲ್ಲವೆ ಎಂದು ಅವಳು ಆಶ್ಚರ್ಯಚಕಿತಳಾದಳು. ವರ್ಷಾಂತರಗಳ ತಮ್ಮ ಕಿರುಕುಳವನ್ನು ಅವಳಿಂದ ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗಿದ್ದು ಕೂಡ ಅವಳ ಜ್ಞಾನದಿಂದಲೇ ಎಂದುಕೊಂಡಳು. ತಾನು ಅವಳನ್ನು ಪ್ರೀತಿಯಿಂದ ನೋಡಿಕೊಳ್ಳಲಿಲ್ಲವಲ್ಲ ಎಂದು ಅವಳು ನೊಂದುಕೊಂಡಳು.
ಆ ದಿನ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರು, ಜಿಲ್ಲೆಯ ಗಣ್ಯವ್ಯಕ್ತಿಗಳೆಲ್ಲರೂ ಬಂದಿದ್ದರು. ಆ ಕಾಲೇಜಿನಲ್ಲಷ್ಟೆ ಅಲ್ಲ ಕರ್ನಾಟಕದಲ್ಲಿಯೇ ಮಾತೃಭಾಷೆಯಲ್ಲಿ ಸಮಾಜ ಶಾಸ್ತ್ರದ ಪುಸ್ತಕ ಬರೆದ ಅತ್ಯಂತ ಕಿರಿಯ ವಯಸ್ಸಿನ ಉಪನ್ಯಾಸಕಿ, ಲೇಖಕಿ ರೋಹಿಣಿ ಎಂದು ಮುಖ್ಯ ಅಥಿತಿಗಳಾದ ಶಿಕ್ಷಣ ಇಲಾಖೆಯ ನಿರ್ದೇಶಕರು ಶ್ಲಾಘಿಸಿದರು. ತಮ್ಮ ಮಗಳಿಗೆ ಸಿಗುತ್ತಿರುವ ಗೌರವ ಆದರವನ್ನು ಕಂಡು ಸೀನಪ್ಪ ರ್ಯಾವಮ್ಮ ಅತ್ಯಂತ ಖುಷಿಯಲ್ಲಿ ಆನಂದಾಶ್ರು ಸುರಿಸಿದರು. ರೋಹಿಣಿಯ ಮಾತಿನ ಸರದಿ ಬಂದಾಗ ಅವಳು ಜಾಸ್ತಿ ಮಾತಾಡಲಿಲ್ಲ. ಆದರೆ ತನ್ನ ಪುಸ್ತಕ ಬರಹಕ್ಕೆ ಪ್ರೇರಣೆಯಾದವರು ಮುಖ್ಯೋಪಾಧ್ಯಾಯಿನಿ, ಸ್ನೇಹಿತರು, ಹೆತ್ತವರು, ಸಹೋದರಿಯರು ಎಂದು ಹೇಳಿದಾಗ ಸವಿತಾ, ಶೀಲಾ, ಮಾಲಾ ಅತ್ತೇ ಬಿಟ್ಟರು. ಆ ಸಮಾರಂಭದ ಕೊನೆಗೆ ಲಘು ಉಪಾಹಾರ ಏರ್ಪಡಿಸಲಾಗಿತ್ತು. ಉಪಾಹಾರದ ಸಮಯದಲ್ಲಿ ಸುಶೀಲ್‍ನೊಂದಿಗೆ ಸುಮಾರು ನಲವತ್ತರ ಆಸುಪಾಸಿನ ಪುರುಷನೊಬ್ಬ ಬಂದಿದ್ದ. ಅವನು ಸುಶೀಲ್‍ನ ಆತ್ಮೀಯ ಸ್ನೇಹಿತ. ಮೂಲತಃ ತುಮಕೂರಿನವನಾದರೂ ಕೆಲಸಕ್ಕೆ ಸೇರಿದ್ದು ಉತ್ತರ ಕರ್ನಾಟಕದಲ್ಲಿ. ಅದೇಕೋ ಅವನಿಗೆ ಧಾರವಾಡವೆಂದರೆ ಬಹಳ ಪ್ರೀತಿ. ತನ್ನ ಅಕ್ಕ ಹಾಗೂ ತಂಗಿಯರ ಮದುವೆಯಾಗಲಿ ಎಂದು ಒಂದೇ ಸಮನೆ ದುಡಿದು ಸಣ್ಣಾದವನು. ಮೂರು ಜನ ಸೋದರಿಯರಿಗೆ ವರದಕ್ಷಿಣೆ ವರೋಪಚಾರ ಹೊಂದಿಸುವುದರಲ್ಲಿ ಮುಪ್ಪಾದವನು. ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದುಕೊಂಡೆ, ತನ್ನ ಪಿತ್ರಾರ್ಜಿತ ಹೊಲ-ಗದ್ದೆಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವ ರಘು ಎಂದರೆ ತಾಯಿಗೆ, ಸಹೋದರಿಯರಿಗೆ ಅಪಾರ ಪ್ರೀತಿ. ತಂದೆ ಇಲ್ಲದ ಮನೆಯಲ್ಲಿ ಚಿಕ್ಕ ವಯಸ್ಸಿಗೆ ಮನೆಯ ಜವಾಬ್ದಾರಿ ಹೊತ್ತವನು. ತನ್ನ ಸೋದರಿಯರಿಗೆ ಸೂಕ್ತ ವರಗಳು ದೊರಕದೆ ಸಮಯ ಜರುಗುತ್ತಾ ಹೋಗುತ್ತಿದ್ದಾಗ, ಅವರ ವಯಸ್ಸು ಮುಗಿಯುವಷ್ಟರಲ್ಲಿ ಅವರನ್ನು ದಡ ಕಾಣಿಸಬೇಕು, ಅವರಿಗೊಂದು ಕಂಕಣಭಾಗ್ಯವನ್ನೊದಗಿಸಬೇಕು ಎಂದು ರಘು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಮಾ, ಗೌರಿ, ಉಷಾರನ್ನು ಮದುವೆ ಮಾಡಿ ಕಳಿಸುವ ಹೊತ್ತಿಗೆ ಇವನು ತಲುಪಿದ್ದು ಮೂವತ್ತೊಂಬತ್ತನೆ ವರ್ಷ. ಹೆಣ್ಣು ಮಕ್ಕಳ ಮದುವೆ ಕಷ್ಟ ಏನೆಂದು ಚೆನ್ನಾಗಿ ಬಲ್ಲ ರಘು ಮದುವೆಯ ವಯಸ್ಸಿನ ಅಂಚಿನಲ್ಲಿರುವ ಒಳ್ಳೆಯ ಹುಡುಗಿ ತನಗೆ ಸಿಕ್ಕರೆ ವರದಕ್ಷಿಣೆ ತೆಗೆದುಕೊಳ್ಳದೇ ಮದುವೆಯಾಗುವುದಾಗಿ ಸುಶೀಲ್ ಎದುರಿಗೆ ಹೇಳಿದಾಗ ಸುಶೀಲ್ ಶೀಲಾಳ ಬಗ್ಗೆ ಪ್ರಸ್ತಾಪ ಮಾಡಿದ್ದ. ರೋಹಿಣಿ ರಘುನ ಪೂರ್ವಾಪರವನ್ನು ತಿಳಿದುಕೊಂಡೆ ಕರೆಸಿದ್ದಳು. ಸುಶೀಲ್ ತನ್ನ ಆ ಸ್ನೇಹಿತ ರಘುನನ್ನು ರೋಹಿಣಿಯ ಮನೆಯವರೆಲ್ಲರಿಗೂ ತನ್ನ ಸ್ನೇಹಿತ ಎಂದಷ್ಟೆ ಪರಿಚಯಿಸಿದನು. ರಘು ಎಲ್ಲರೊಂದಿಗೂ ಹಿತಮಿತವಾಗಿ ಹಸನ್ಮುಖದಿಂದ ಮಾತಾಡಿದನು. ಆದರೆ ಶೀಲಾಳನ್ನು ಮಾತಾಡಿಸುವ ಗೋಜಿಗೆ ಹೋಗಲಿಲ್ಲ. ಆದರೆ ಅಲ್ಲಿಂದ ಕದಲುವವರೆಗೂ ಗಮನಿಸುತ್ತಲೇ ಇದ್ದನು. ಇದರಿಂದ ಅವಳು ಮುಜುಗುರಕ್ಕೆ ಈಡಾಗಿದ್ದಳು.
ಅಂದಿನಿಂದ ರೋಹಿಣಿಯ ಮನೆಯಲ್ಲಿ ನಲಿವು ಸಂಚರಿಸತೊಡಗಿತ್ತು. ಸದಾ ಕಿತ್ತಾಡುತ್ತಿದ್ದ ಸೋದರಿಯರು ಅಲ್ಲಿಯವರೆಗೂ ತಮ್ಮೊಳಗೆ ಅಡಗಿದ್ದ ಪ್ರೀತಿಯನ್ನು ಹಂಚಿಕೊಂಡು ಆನಂದಿತರಾಗಹತ್ತಿದ್ದರು. ಶೀಲಾಳನ್ನು ನೋಡುವುದಕ್ಕೆ ಒಬ್ಬ ಒಳ್ಳೆಯ ಹುಡುಗ ಬರುತ್ತಿರುವ ವಿಷಯವನ್ನು ರೋಹಿಣಿ ಮನೆಯಲ್ಲಿ ಮೊದಲೇ ತಿಳಿಸಿದ್ದಳು. ಆ ಸಲದ ರವಿವಾರ ತನ್ನ ಜೀವನದಲ್ಲೇನಾದರೂ ಬದಲಾವಣೆ ತರಬಹುದಾ ಎಂದು ಶೀಲಾಳ ಮನಸ್ಸು ಒಳಗೊಳಗೆ ನಿರೀಕ್ಷಿಸತೊಡಗಿತ್ತು. ಅವಳು ತಾನೇ ಹೊಲಿದುಕೊಂಡಿದ್ದ ಅಂದದ ರವಿಕೆ, ಸೀರೆಯಲ್ಲಿ ಮುದ್ದಾಗಿ ಅಲಂಕರಿಸಿಕೊಂಡಿದ್ದಳು. ಬಂದವರಿಗೆ ತಿಂಡಿಯನ್ನು ಶೀಲಳೇ ಕೊಡುವುದೆಂದು ರೋಹಿಣಿ ಆದೇಶ ಹೊರಡಿಸಿದಾಗ ಶೀಲಾ ನಸು ನಾಚಿಕೆಯಿಂದ ತಿಂಡಿ ತಟ್ಟೆಯನ್ನು ಹಿಡಿದು ಒಳಮನೆಯಲ್ಲಿ ಕುಳಿತಿದ್ದ ಬೀಗರಿಗೆ ತಿಂಡಿ ಕೊಡಲು ಬಂದಳು. “ವರನ್ನ ನೋಡಾ…” ಎಂದು ರೋಹಿಣಿ ಪಿಸುನುಡಿದು ತಿವಿದಾಗ, ಶೀಲಾ ಸ್ವಲ್ಪ ಭಯ ನಾಚಿಕೆಯಿಂದಲೆ ಕತ್ತೆತ್ತಿ ನೋಡಿದಳು. ಸುಶೀಲ್ ಪಕ್ಕದಲ್ಲಿರುವ ಆ ಯುವಕ ಅವನೇ ರಘು! ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತನ್ನನ್ನು ಮಾತಾಡಿಸದೇ ಮುಜುಗುರಕ್ಕೆ ಈಡು ಮಾಡಿದವನು ಎಂದು ತಿಳಿದಾಗ ಅವಳಿಗೆ ಒಳಗೊಳಗೆ ಬಹಳ ಖುಷಿಯಾಯಿತು. ಅವಸರದಲ್ಲಿ ತಿಂಡಿ ತಟ್ಟೆ ಕೈಯಲ್ಲಿಟ್ಟವಳೇ ಅಡಿಗೆಮನೆಗೆ ಓಡಿದ್ದಳು. ಸುಯೋಗವೆಂಬಂತೆ ರಘು ಶೀಲಾ ಪರಸ್ಪರ ಒಪ್ಪಿಕೊಂಡರು. ತಂದೆ ಸೀನಪ್ಪ ತಾಯಿ ರೇವಮ್ಮ ರೋಹಿಣಿಯನ್ನು ಹೆಮ್ಮೆಯಿಂದ ನೋಡಿದರು. ರಘು ಶೀಲಳನ್ನು ಒಪ್ಪಿಕೊಂಡ ಸಿಹಿ ಸುದ್ದಿಯನ್ನು ಮಾಲಾ ಒಂದು ಸಣ್ಣ ಟೆಕ್ಸ್ಟ್‍ನಲ್ಲಿ ಸೋಮುಗೆ ರವಾನಿಸಿ ಮಂದಸ್ಮಿತಳಾದಳು. ಬಂದವರು ಹೋದ ನಂತರ ಶೀಲಾ ರೋಹಿಣಿಯ ತೆಕ್ಕೆಗೆ ಬಿದ್ದು ಅದೂವರೆಗೆ ಮಡುಗಟ್ಟಿದ್ದ ಕಂಬನಿಯನ್ನು ಸುರಿಸಿದಳು. ಮಾಲಾ ಕೂಡ ಹಿಂದೆ ತಾನು ರೋಹಿಣಿಯೊಂದಿಗೆ ಕೆಟ್ಟದಾಗಿ ವರ್ತಿಸಿದ ದಿನಗಳನ್ನು ನೆನಪಿಸಿಕೊಂಡು ಪಶ್ಚಾತಾಪ ಪಟ್ಟಳು. ರೋಹಿಣಿಯ ಶುಭ್ರ ಮನಸ್ಸು ಆಗಸವಾಗಿತ್ತು. ಅವಳು ಬಹುದಿನಗಳಿಂದ ಹುಡುಕುತ್ತಿದ್ದ ನೆಮ್ಮದಿ ಅವಳಿಗೆ ಕೊನೆಗೂ ಸಿಕ್ಕಿತು. ಅವಳಲ್ಲಿ ತನ್ನದೇ ಆದ ಮತ್ತೊಂದು ದೊಡ್ಡ ಕನಸು ಅರಳತೊಡಗಿತ್ತು.
(ಮುಗಿಯಿತು)
ಒಂದು ಸಾಧಾರಣ ಕುಟುಂಬದ ಏಳುಬೀಳುಗಳು 'ರೋಹಿಣಿ' ಕಥೆಯಲ್ಲಿ ಚೆಂದವಾಗಿ ಮೂಡಿ ಬಂದಿದೆ. ಎಂಥ ಸಂದರ್ಭಗಳಲ್ಲೂ ಆದರ್ಶಗಳ ಜಾಡು ಬಿಡದೆ ಸಾಧನೆಯತ್ತ ನಡೆಯುವ ಮನುಷ್ಯಗುಣ ಸಾರ್ಥಕತೆ ಮುಟ್ಟುವುದು ನಿಜ ಎಂದು ಕಥೆಗಾರರು ತಿಳಿಸುವಲ್ಲಿ ಸಫಲರಾಗಿದ್ದಾರೆ.