ಯುದ್ಧ ವಿರೋಧಿ ಮತ್ತು ಕ್ರೌರ್ಯತೆಯ ಪರಮಾವಧಿಯನ್ನು ಮನಕಲಕುವಂತೆ ಬಿಂಬಿಸುವ ಕಂದಗಲ್ಲ ಹಣಮಂತರಾಯರ ಸರಿ ಸುಮಾರು ಇಪ್ಪತ್ತು ನಾಟಕಗಳಲ್ಲಿಯೇ ಹೆಚ್ಚು ಜನಪ್ರಿಯ ಕೃತಿ ’ರಕ್ತರಾತ್ರಿ’ ನಾಟಕ ಪ್ರದರ್ಶನವನ್ನು ಇತ್ತೀಚೆಗೆ ಗದಗಯ್ಯ ಹಿರೇಮಠ ನಿರ್ದೇಶನದಲ್ಲಿ ಕಲಾವಿದ ಸಿ.ಎಸ್.ಪಾಟೀಲಕುಲಕರ್ಣಿಯವರ ೬೦ನೇ ವರ್ಷದ ಷಷ್ಟ್ಯಬ್ದಿ ಆಚರಣೆಯ ಸಂದರ್ಭದಲ್ಲಿ ಹವ್ಯಾಸಿ, ವೃತ್ತಿ ರಂಗಭೂಮಿಯ ಕಲಾವಿದರು ಧಾರವಾಡದಲ್ಲಿ ಅಭಿನಯಿಸಿದರು. ಹೊರಗೆ ಅಕಾಲಿಕ ಮಳೆಯ ತುಂತುರು ಹನಿಯ ವಿಪರೀತ ತಣ್ಣನೆಯ ವಾತಾವರಣವಿದ್ದರೂ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಭವನದಲ್ಲಿ ’ಎಲೆ ಉತ್ತರೆ, ದಿನ ಮೂರು ಕಳೆಯುವುದರೊಳಗಾಗಿ ನಿನ್ನ ಗರ್ಭಸ್ಥ ಪಿಂಡಕ್ಕೆ ಪ್ರಳಯ’ ಎಂಬ ಅರ್ಭಟದ ಸಂಭಾಷಣೆಗೆ ಇಡೀ ಪ್ರೇಕ್ಷಕರು ಕಂಪಿಸುತ್ತಾ ಬೆಚ್ಚಗಿನ ಭಾವಲೋಕ ಸೃಷ್ಟಿಯಾಗಿತ್ತು. ಕುರುಕ್ಷೇತ್ರದ ಕೊನೆಯ ಮೂರು ದಿನಗಳ ಯುದ್ಧದ ಸನ್ನೀವೇಶದ ರುದ್ರಭಾವ ರಂಗಪ್ರಿಯರಲ್ಲಿ ಕಿಚ್ಚು ಹಚ್ಚಿದ ರಸಾನುಭವಕ್ಕೆ ಕಾರಣವಾಗಿದ್ದು ಇತ್ತೀಚಿನ ರಂಗಭೂಮಿ ಚಟುವಟಿಕೆಗಳಲ್ಲಿಯ ಅಚ್ಚರಿಗಳಲ್ಲೊಂದು.
ಹಿರಿಯ ಕಲಾವಿದ ಸಿಎಸ್‌ಪಿ ಅಭಿನಯದ ’ನೇಗಿಲಯೋಗಿ’ ಚಲನಚಿತ್ರದ ಪ್ರದರ್ಶನದ ನಂತರ ಅಭಿನಂಧನಾ ಸಭಾಕಾರ್ಯಕ್ರಮ ಮುಗಿಯುವ ಕ್ಷಣದವರೆಗೂ ಸಭಾಭವನ ಪ್ರೇಕ್ಷಕರಿಲ್ಲದ ಭಾವದಲ್ಲಿತ್ತು. ’ರಕ್ತರಾತ್ರಿ’ ನಾಟಕ ಆರಂಭಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಆಸನಗಳೆಲ್ಲಾ ಭರ್ತಿಯಾಗಿದ್ದು, ಪೌರಾಣಿಕ ನಾಟಕಪ್ರೇಮಿಗಳು ಮಧ್ಯರಾತ್ರಿಯವರೆಗೂ ಸಭಾಂಗಣದ ಇಕ್ಕೆಲಗಳಲ್ಲಿ ನಿಂತು ಕೌರವ-ಪಾಂಡವರ ಪಾಳೆಯದಲ್ಲಿ ಘಟಿಸುವ ವೀರ-ಶೋಕದೊಂದಿಗಿನ ಭಾವೋದ್ವೇಗದ ಕ್ಷಣಗಳಿಗೆ ಸಾಕ್ಷಿಯಾದರು. ವೀರರಸ ಪ್ರಧಾನವಾದ ಈ ರುದ್ರನಾಟಕದಲ್ಲಿ ಅಭಿಮನ್ಯುವಿನ ಮರಣದ ಹಿನ್ನಲೆಯಲ್ಲಿ ಪರಿತಪಿಸುವ ಉತ್ತರೆ, ಶಕುನಿಯ ತಂತ್ರ, ಭೀಮ-ದುರ್ಯೋಧನರ ರೌದ್ರ ಭಾವ, ಧರ್ಮರಾಯನ (ಬಸವರಾಜ ಹೆಸರೂರು) ಧರ್ಮನಿಷ್ಟೆ, ಕೃಷ್ಣನ (ಸುರೇಶ ಕಾಟಕರ್) ಚತುರತೆ, ದ್ರೌಪತಿಯ ಪುತ್ರಶೋಕ, ತಂದೆಯ ಮರಣದ ಸೇಡಿಗಾಗಿ ಸಿಡಿದೇಳುವ ಅಶ್ವತ್ಥಾಮ (ಸಿಎಸ್‌ಪಿ), ಕೃಷ್ಣನ ಮಾರ್ಗದರ್ಶನ ಬಯಸುವ ಅರ್ಜುನ (ವೀರಣ್ಣ ಕರೀಕಟ್ಟಿ), ನಡುವೆ ಸುಳಿದು ಆತಂಕ ಸೃಷ್ಟಿಸುವ ಕಲಿದೇವ (ಶ್ರೀಧರ ಗಡಾದವರ), ಸವಾಲೆಸೆಯುವ ಚಿತ್ರಸೇನನೆಂಬ (ಪ್ರಕಾಶ ಹುಂಬಿ) ಗಂಧರ್ವ ಮುಂತಾದ ಪಾತ್ರಗಳ ಹಿನ್ನಲೆಯಲ್ಲಿ ನಾಟಕ ತೆರೆದುಕೊಳ್ಳುತ್ತದೆ. ’ನಗೆಯಲ್ಲ ಇದು ಸುಯೋಧನ, ಇದು ನಂಜು ನಗೆ’ ಎಂದು ಗಹಗಹಿಸಿ ನಗುತ್ತಲೇ ಅಶ್ವತ್ಥಾಮನಿಗೆ ಕೌರವರ ಪಾಳೆಯಕ್ಕೆ ಪಟ್ಟಗಟ್ಟದಂತೆ ದುರ್ಯೋಧನನ್ನು ಷಡ್ಯಂತ್ರಕ್ಕೆ ಸಿಲುಕಿಸುವ ಶಕುನಿಯ (ಸುರೇಶ ಹಾರೋಬಿಡಿ) ಬುದ್ಧಿವಂತಿಕೆಗೆ ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆ. ಶಕುನಿಯ ತಂತ್ರಗಾರಿಕೆಯಿಂದ ದುರ್ಯೋಧನನ (ಚನ್ನಬಸಪ್ಪ ಕಾಳೆ) ಅನುಮಾನಕ್ಕೆ ಕಾರಣವಾಗುವ ಭಾನುಮತಿ (ಸಾವಿತ್ರಿ ಬಳ್ಳಾರಿ) ಗಮನ ಸೆಳೆದರು. ದ್ರೌಪದಿಯ ಪಾತ್ರದಲ್ಲಿ ಚರಿತ್ರಾರ್ಹ ನಟಿ ಪುಷ್ಪಮಾಲಾ ಅಣ್ಣಿಗೇರಿ ಪ್ರಬುದ್ಧ ಅಭಿನಯದ ಮೂಲಕ ಗತಕಾಲದ ರಂಗವೈಭವ ನೆನಪಿಸುವಂತೆ ನಟಿಸಿದರು. ಕೆಲವೊಂದು ಹೊಸ ಪಾತ್ರಧಾರಿಗಳಿಂದ ಬಿಲ್ಲು-ಬಾಣಗಳನ್ನು ಉಪಯೋಗಿಸುವ ಕ್ರಮ, ಕೃಷ್ಣನ ಚಕ್ರದ ವಿನ್ಯಾಸ, ಪಾದುಕೆಗಳು, ಆಂಗಿಕ ಅಭಿನಯ ಇತ್ಯಾದಿ ಅಭಾಸಗಳು ಘಟಿಸಿದ್ದನ್ನು ಬಿಟ್ಟರೇ ಪ್ರದರ್ಶನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಕೆಲವು ಪಾತ್ರಗಳಿಗೆ ಕಣ್ಣಿಗೆ ರಾಚುವಂತೆ ಹಳೆಕಾಲದ ಮಾದರಿಯ ಢಾಳವಾದ ಅನಾವಶ್ಯಕ ಮೇಕಪ್ಪು, ನಟರಿಗೆ ಮುಖದಲ್ಲಿ ಭಾವನೆಗಳನ್ನು ಹೊಮ್ಮಿಸಲು ಅಡ್ಡಿಯಾದದ್ದನ್ನು ಬಾಲ್ಕನಿಯ ಪ್ರೇಕ್ಷಕರು ಚರ್ಚಿಸುತ್ತಿದ್ದುದು ಕಂಡು ಬಂತು. ಭುಜ ಕಿರೀಟಗಳು, ಥಳ-ಥಳ ಹೊಳೆಯುವ ರೊಲ್ಡ್ ಗೋಲ್ಡ ಮಾದರಿಯ ಆಭರಣಗಳು ಗಮನ ಸೆಳೆದವು. ಅಶ್ವತ್ಥಾಮ ಕೈಯಲ್ಲಿ ಉಪ ಪಾಂಡವರ ರುಂಡಗಳನ್ನು ಹಿಡಿದು ವೇದಿಕೆಯಲ್ಲಿ ಗುಡುಗುವಾಗ ಪ್ರೇಕ್ಷಕರ ವಲಯದಲ್ಲಿದ್ದ ಹೆಣ್ಣುಮಕ್ಕಳು ಭಯದಿಂದ ಕಂಪಿಸಿದ್ದು, ರಂಗದಲ್ಲಿ ಇಂತಹ ಪಾತ್ರವೊಂದನ್ನು ಸೃಷ್ಟಿಸಿದ ಕಂಗಗಲ್ಲ ಹನುಮಂತರಾಯರು ಸ್ಮೃತಿಪಟಲದಲ್ಲಿ ಗೋಚರಿಸಿದರು. ಕಳೆದ ಶತಮಾನದ ಮಧ್ಯಭಾಗದಲ್ಲಿ ಬಾದಾಮಿಯ ಅಗಸ್ತ್ಯ ಹೊಂಡದ ಬಯಲಿನಲ್ಲಿ ಭಾರತ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಆಕಾಶದಲ್ಲಿಯ ಚುಕ್ಕಿಗಳನ್ನು ದಿಟ್ಟಿಸುತ್ತಾ, ತೋಚಿದ್ದನ್ನು ಗೀಚುತ್ತಲೇ, ಮಾತಾಡಿಸಿದವರಿಗೆ ರೌದ್ರ ರಸದ ಕೋಪದಲ್ಲಿ ಉತ್ತರಿಸುತ್ತಾ ಕನ್ನಡ ರಂಗಭೂಮಿಗೆ ’ರಕ್ತರಾತ್ರಿ’ಯೆಂಬ ಅಪರೂಪದ ರಂಗಕೃತಿಯನ್ನು ರಚಿಸಿ ಅಜರಾಮರರಾದ ಕಂದಗಲ್ಲ ಹನುಮಂತರಾಯರ ಕುರಿತು ಸಭಾಭವನದ ಮೂಲೆಯಲ್ಲಿ ಹಿರಿಯರಿಬ್ಬರು ಚರ್ಚಿಸುತ್ತಾ ನಾಟಕ ನೋಡಿದ್ದು ರಂಗಭೂಮಿಯ ಜೀವಂತಿಕೆಗೆ ಸಾಕ್ಷಿಭೂತವಾಗಿತ್ತು. ಇಂತಹ ಯುದ್ಧಪೀಪಾಸು ಕಥಾನಕದ ನಾಟಕಕ್ಕೆ ಕೀಬೋರ್ಡ, ಹಾರ್ಮೋನಿಯಂ ಮತ್ತು ಹಿನ್ನಲೆ ಗಾಯನ ಮಾಡಿದವರು ಹಿರಿಯ ರಂಗಕರ್ಮಿ ಅಪ್ಪುರಾಜ್ ಮೇವುಂಡಿ ತಮ್ಮ ಅಪಾರ ಅನುಭವದ ಸಂಗೀತಜ್ಞಾನವನ್ನು ಹೊರಹೊಮ್ಮಿಸಿದರು. ರಿದಂ-ಪ್ಯಾಡಿನಲ್ಲಿ ಪ್ರಕಾಶ ದಾವಣಗೆರೆಯವರು ಯುದ್ಧ ಸನ್ನಿವೇಶಗಳಲ್ಲಿ ಅರ್ಥಪೂರ್ಣ ಧ್ವನಿ ಸಂಕೇತಗಳನ್ನು ಸೃಷ್ಟಿಸಿದ್ದು ನಾಟಕಕ್ಕೆ ಕಳೆ ಕಟ್ಟಿತು. ವೇದಿಕೆಯಲ್ಲಿ ಯಾವುದೇ ರಂಗಪರಿಕರಗಳ ಅವಶ್ಯಕತೆಯಿಲ್ಲದ ಈ ನಾಟಕಕ್ಕೆ ಬೆಳಕಿನ ವಿನ್ಯಾಸದ ಹಂಗಿರಲಿಲ್ಲ. ಕರ್ನಾಟಕದ ಎಲ್ಲಾ ಭಾಗದಲ್ಲಿಯೂ ಇಂದಿಗೂ ವಿವಿಧ ಕಲಾವಿದರಿಂದ ಕರುನಾಡಿನ ವಿವಿದೆಡೆಗಳಲ್ಲಿ ನಿರಂತರ ಪ್ರದರ್ಶನಗೊಳ್ಳುತ್ತಲೇ ಇರುವ ಈ ನಾಟಕವನ್ನು ಚರಿತ್ರಾರ್ಹ ನಟ ಎಲಿವಾಳ ಸಿದ್ದಯ್ಯಸ್ವಾಮಿಯವರನ್ನು ಗಮನದಲ್ಲಿಟ್ಟುಕೊಂಡು ಕಂದಗಲ್ಲರು ರಚಿಸಿದ್ದರೆಂದು ನಾಟಕ ನೋಡಲು ಬಂದ ಹಿರಿಯರೊಬ್ಬರು ನೆನಪಿಸಿಕೊಳ್ಳುವಂತೆ ಈ ಪ್ರದರ್ಶನ ಪ್ರೇಕ್ಷಕರಿಗೆ ಮೋಡಿ ಮಾಡಿದ್ದು ಸುಳ್ಳಲ್ಲ.
*****