ಲೇಖನ

ರೋಗ ಯಾವುದೆಂದು ಕೇಳುವ ವ್ಯವಧಾನವಿಲ್ಲದಿದ್ದರೂ…:ಶರತ್ ಎಚ್ ಕೆ


ಮೊನ್ನೆ ಬೆಳಿಗ್ಗೆ ಆಗಷ್ಟೇ ತಿಂಡಿ ತಿಂದು ಮನೆಯವರೆಲ್ಲ ಟೀವಿ ನೋಡುತ್ತ, ಪೇಪರ್ ಓದುತ್ತಾ ಕುಳಿತಿದ್ದೆವು. ಗೇಟ್ ತೆರೆದ ಸದ್ದಾಯಿತು. ಯಾರೆಂದು ನೋಡಿದರೆ ಚರಂಡಿ ಶುಚಿಗೊಳಿಸುವ ಮತ್ತು ಹೂದೋಟದ ಕಳೆ ಕೀಳುವ ಕೆಲಸ ಮಾಡುವ ಹುಡುಗ. ಅವನು ಈ ಹಿಂದೆ ಒಂದೆರಡು ಬಾರಿ ನಮ್ಮ ಮನೆ ಹೂದೋಟದ ಕಳೆ ಕಿತ್ತಿದ್ದ.

’ಕೆಲಸ ಇದ್ಯ’ ಅಂತ ಕೇಳ್ದ. ಬಾಗಿಲು ತೆರೆದ ಅಮ್ಮ ’ಇಲ್ಲ ಹೋಗಪ್ಪ’ ಅಂತೇಳಿ ಒಂದೇ ಮಾತಲ್ಲಿ ಅವನನ್ನು ಸಾಗಾಕಲು ಮುಂದಾದರು. ತಕ್ಷಣವೇ ಬಾಗಿಲು ಹಾಕಿದರು.

’ಅಮ್ಮ ತಿಂಡಿ ಇದ್ರೆ ಕೋಡ್ತೀರ?’ ಅಂತ ಅವನು ಬೇಡಿದ. ಅಮ್ಮ ’ಇಲ್ಲ ಅಂತೇಳು’ ಎಂದು ತಮ್ಮನಿಗೆ ಸೂಚಿಸಿದರು. ನಾನು ಮಧ್ಯೆ ಪ್ರವೇಶಿಸಿ, ’ಇರೋದ್ನ ಕೊಡಿ ಪರ್‍ವಾಗಿಲ್ಲ. ಗಂಟೇನು ಹೋಗಲ್ಲ’ ಅಂದೆ. ಕೊಸರಾಡುತ್ತಲೇ ಉಳಿದಿದ್ದ ತಿಂಡಿಯನ್ನು ಒಂದು ಹಳೆ ಪ್ಲಾಸ್ಟಿಕ್ ಕವರ್‌ಗೆ ಹಾಕಿ, ಅವನಿಗೆ ಕೊಟ್ಟರು.

ಅವನು ಪ್ಲೇಟಿಗೆ ಹಾಕೊಡಿ ಅಮ್ಮ ಎಂದು ಕೇಳಿಕೊಂಡ. ’ಅದ್ರಲ್ಲೇ ತಿನ್ನು’ ಎನ್ನುವ ಪ್ರತಿಕ್ರಿಯೆ ದೊರೆಯಿತು. ಅದುವರೆಗೂ ಸುಮ್ಮನೆ ನನ್ನ ಪಾಡಿಗೆ ಕುಳಿತಿದ್ದ ನಾನು, ಎದ್ದು ಅಡುಗೆ ಮನೆಗೆ ಹೋಗಿ ಪ್ಲೇಟು ಮತ್ತು ಲೋಟವನ್ನು ನೀಡಲು ಮುಂದಾದೆ. ಅಷ್ಟೊತ್ತಿಗೆ ಅವನು ಪ್ಲಾಸ್ಟಿಕ್ ಕವರ್‌ಗೆ ಹಾಕಿ ಕೊಟ್ಟಿದ್ದ ತಿಂಡಿಯನ್ನು ಎಸೆದಿದ್ದ. ಕೇಳಿದ್ದಕ್ಕೆ, ’ತಿಂಡಿ ಹಳಸಿತ್ತು’ ಎಂದ. ಆಗಷ್ಟೇ ಮಾಡಿದ್ದ ತಿಂಡಿಯನ್ನೇ ಅಮ್ಮ ಅವನಿಗೆ ನೀಡಿದ್ದರು. ಆದರೂ ಇವನೇಕೆ ಹಳಸಿದೆ ಎಂದು ಎಸೆದ? ಎಂಬ ಪ್ರಶ್ನೆ ನನ್ನನ್ನು ಕಾಡಲಾರಂಭಿಸಿತು.

’ತಿಂಡಿ ಹಳಸಿಲ್ಲ. ಇದನ್ನೇ ನಾವೆಲ್ಲ ತಿಂದಿರೋದು’ ಅಂತ ಅವನಿಗೆ ಹೇಳಿದೆ. ’ನೀರ್ ನೀರಾಗಿತ್ತು. ತಿನ್ನೋನಿಗೆ ಹಳಸಿದ್ಯ ಇಲ್ವಾ ಅಂತ ಗೊತ್ತಾಗಲ್ವ? ದೋಸೆ ಏನಾದ್ರೂ ಮಾಡಿದ್ರೆ ಕೊಡಿ’ ಅಂತ ಕೇಳ್ದ. ’ಇಲ್ಲ, ಕೊಡೋಕೆ ಬೇರೆ ತಿಂಡಿ ಇಲ್ಲ’ ಅಂದೆ. ಅವನು ಹೊರಟ.

ಅಮ್ಮ ಮತ್ತು ತಮ್ಮ ನನ್ನ ಮೇಲೆ ಗರಂ ಆದರು. ’ಪಾಪ ಅಂತ ತಿಂಡಿ ಕೊಟ್ರೆ, ನೋಡು ಏನ್ ಮಾಡ್ದ ಅಂತ’ ಎಂದು ದಬಾಯಿಸಿದರು. ಅವರ ಮಾತು ನನಗೆ ತಾಕಲಿಲ್ಲ. ಆದರೆ ಆಗಷ್ಟೇ ಮಾಡಿದ್ದ ತಿಂಡಿ ಹಳಸಿದೆ ಎಂದು ಎಸೆದ, ಹಸಿದಿದ್ದರೂ ಅದನ್ನು ತಿನ್ನದೇ ಹೋದ ಅವನ ವರ್ತನೆ ಯಾಕೋ ನನ್ನನ್ನು ಘಾಸಿಗೊಳಿಸಿತು. 

ಕೆಲ ದಿನಗಳ ಹಿಂದಷ್ಟೇ ಓದಿದ್ದ ’ರಸ್ತೆ ನಕ್ಷತ್ರ’ ಪುಸ್ತಕದಲ್ಲಿನ ಕಥನಗಳು ಕಣ್ಣ ಮುಂದೆ ಸುಳಿಯಲಾರಂಭಿಸಿದವು. ಅವನ ವರ್ತನೆಯ ಹಿನ್ನೆಲೆಯಲ್ಲಿ ಪುನರಾವರ್ತನೆಗೊಂಡ ’ಹಳಸಲು ತಿಂಡಿಯ ಕೊಡುಗೆ’ಯ ಪ್ರಸಂಗಗಳಿರಬಹುದೇನೊ ಎನಿಸಿತು.

ಹೀಗೆ ಕೆಲಸ ಕೇಳಿಕೊಂಡೋ ಅಥವಾ ಅಕ್ಕಿ, ಕಾಸು ಬೇಡಲೋ ಬರುವ ಮಂದಿಯ ಬದುಕಿನ ಹಿನ್ನೆಲೆ ಅರಿಯದೆ ನಾವು ಅವರಿಗೆ ಸುಲಭವಾಗಿ ’ಮೈಗಳ್ಳ’ನ ಬಿರುದು ದಯಪಾಲಿಸಿ ಬಿಡುತ್ತೇವೆ.

ಮನೆಗೆ ಬರುವ ಅತಿಥಿಗಳು ಬೇಡವೆಂದರೂ ಬಲವಂತ ಮಾಡಿ ಅದು ಇದು ತಿನ್ನಿಸುವ, ಕಾಫಿ-ಟೀ ಕುಡಿಯಲು ಕೊಡುವ ನಾವು, ಯಾರಾದರೂ ಹಸಿದುಕೊಂಡು ಅನ್ನ ಕೇಳಲು ಬಂದರೆ ನಡೆದುಕೊಳ್ಳುವ ರೀತಿ ಅಮಾನವೀಯವಾದುದು. ನಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳಲು ಸಾಮಾನ್ಯವಾಗಿ ಬಳಸುವ ಪದಪುಂಜ, ’ದುಡಿದು ತಿನ್ನೋಕೇನು ರೋಗ?’

ವಿಪರ್ಯಾಸವೆಂದರೆ, ಬೇಡುವವರನ್ನು ಬಾಧಿಸುತ್ತಿರುವ ಸಾಮಾಜಿಕ ಹಾಗು ವೈಯಕ್ತಿಕ ರೋಗಗಳು ಯಾವುವು ಎಂದು ಕೇಳಿ ತಿಳಿದುಕೊಳ್ಳುವ ವ್ಯವಧಾನ ನಮಗಿರುವುದಿಲ್ಲ.

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ರೋಗ ಯಾವುದೆಂದು ಕೇಳುವ ವ್ಯವಧಾನವಿಲ್ಲದಿದ್ದರೂ…:ಶರತ್ ಎಚ್ ಕೆ

  1. ನಿಜ ಕಣ್ರೀ…ಬೇರೆಯವರನ್ನು ಅರಿತುಕೊಳ್ಳುವ ವ್ಯವಧಾನವಿಲ್ಲದ ಸಂದಿಗ್ದ ಸಂದರ್ಭದಲ್ಲಿದ್ದೇವೆ…..ಅನುಭವ ಚೆನ್ನಾಗಿದೆ…..

  2. ತುಂಬಾ ದಿನಗಳ ನಂತರ ನಿನ್ ಬರಹ ಓಡುತಿದ್ದೇನೆ ಶರತ್, ಮುಖತಃ ಮಾತುಕತೆ ಇಲ್ಲದ ಸ್ನೇಹ ನಮ್ಮದು, ಒಮ್ಮೆ ನಿಮ್ಮ ಆಫಿಸಿಗೆ ಬಂದು ಪತ್ರಿಕೆ ತಗೊಂಡು ಹೋಗ್ವಾಗ ನಿನ್ನ ನೋಡಿದ್ದೇ, ಆದ್ರೆ ಅದು ನೀನೆ ಅಂತ ಗೊತ್ತಿರ್ಲಿಲ್ಲ. ಎನಿ ಹೌ ನೈಸ್ ಆರ್ಟಿಕಲ್.

  3.  ಅವನು ಪ್ಲಾಸ್ಟಿಕ್ ಕವರ್‌ಗೆ ಹಾಕಿ ಕೊಟ್ಟಿದ್ದ ತಿಂಡಿಯನ್ನು ಎಸೆದಿದ್ದ.
    ಅಪಾತ್ರ ದಾನ ಸಲ್ಲದು.
    , ಬೇಡುವವರನ್ನು ಬಾಧಿಸುತ್ತಿರುವ ಸಾಮಾಜಿಕ ಹಾಗು ವೈಯಕ್ತಿಕ ರೋಗಗಳು ಯಾವುವು ಎಂದು ಕೇಳಿ ತಿಳಿದುಕೊಳ್ಳುವ ವ್ಯವಧಾನ ನಮಗಿರುವುದಿಲ್ಲ.
    ಮೊದಲು ನಮ್ಮನ್ನು ಸರಿಮಾಡಿ ಸಮಯ ಇದ್ದಲ್ಲಿ ಉಳಿದವರನ್ನು ಗಮನಿಸುವುದೊಳ್ಳೆಯದು

Leave a Reply

Your email address will not be published. Required fields are marked *