೧
ಅದು ಜನರಲ್ ಬೋಗಿ. ಭರ್ತಿಯಾಗಿದೆ. ಕುಂತವರು ಕುಂತೇ ಇದ್ದಾರೆ. ನಿಂತವರು ನಿಲ್ಲಲಾಗದೇ ಅತ್ತಿಂದಿತ್ತ ಇತ್ತಿಂದತ್ತ ತಿರುಗುತ್ತಿದ್ದಾರೆ. ಕೆಲ ಸೀಟುಗಳು ಖಾಲಿ ಇವೆ. ಆದರೆ ಯಾರೋ ಬರುವರೆಂಬ ನೆಪ ನಿಂತವರ ಸಹನೆಯ ಮಿತಿ ಪರೀಕ್ಷಿಸುತ್ತಿದೆ.
೨
ಬೋಗಿಯೊಳಗೆ ಹೈಟೆಕ್ ಯುವಕನ ಆಗಮನವಾಗಿದೆ. ರೈಲಿನೊಳಗೂ ಕೂಲಿಂಗ್ ಗ್ಲಾಸು ಹಾಕಿಕೊಂಡು ಹವಾ ಸೃಷ್ಟಿಸುವ ಮಟ್ಟಿಗೆ ಅವನು ಆಧುನಿಕ ತಿರುಕ. ಅವನ ಕೈಯಲ್ಲಿ ತಳ್ಳಿಕೊಂಡು ಹೋಗಬಹುದಾದ ಹೆಣ ಭಾರದ ಲಗೇಜ್ ಬ್ಯಾಗು. ಅಲ್ಲೊಂದು ಸೀಟು ಖಾಲಿ ಇರುವುದು ಅವನ ಕಣ್ಣಿಗೆ ಬಿದ್ದಿದೆ. ಅದರ ಪಕ್ಕದಲ್ಲಿ ಹುಡುಗಿ ಕುಂತಿದ್ದಾಳೆ.
ಅವನು: ಕೂರ್‍ಬಹುದಾ?
ಅವಳು: ಇಲ್ಲ. ಯಾರೋ ಬರ್‍ತಾರೆ.
ಅವನು: ಯಾರು?
ಅವಳು: ನನ್ ಗಂಡ.
ಅವನು: ಮತ್ತೆ ಹೀಗೆಲ್ಲಿ?
ಅವಳು: ಟಾಯ್ಲೆಟ್‌ಗೆ ಹೋಗಿದ್ದಾರೆ.
ಅವನು: ನೀವೇಳೋದ್ನ ಹೇಗ್ ನಂಬೋದು? ಸಾಕ್ಷಿ ಏನು?
ಅವಳು ಎದುರು ಕುಳಿತಿದ್ದ ನನ್ನೆಡೆಗೆ ಕೈ ತೋರಿಸಿ ಇವರೆ ಸಾಕ್ಷಿ ಅಂದಳು. ನಾನು ಅವಳ ಮಾತಿಗೆ ಸತ್ಯದ ಮುದ್ರೆ ಒತ್ತಿದೆ.
ಅವನು: ನಾನೂ ನೋಡ್ತಾನೆ ಇದ್ದೀನಿ, ಎಲ್ಲೆಲ್ಲಿ ಸೀಟ್ ಖಾಲಿ ಇದ್ಯೋ ಅಲ್ಲೆಲ್ಲ ಯಾರೊ ಬರ್‍ತಾರೆ ಅಂತ ನೆಪ ಹೇಳ್ತಿದ್ದಾರೆ. ನೋಡಿ ನಾನು ಜಂಟಲ್‌ಮನ್. ಕೈಯಲ್ಲಿ ಲಗೇಜ್ ಇದೆ ಅನ್ನೋ ಕಾರಣಕ್ಕೆ ಸೀಟಿಗಾಗಿ ಪರದಾಡುತ್ತಿದ್ದೇನೆ ಅಷ್ಟೆ. ಬೇರೆ ಟೈಮ್ ಆಗಿದ್ರೆ ನಾನೇ ಬೇಕಾದ್ರೆ ಬೇರೆಯವ್ರಿಗೆ ಸೀಟು ಬಿಟ್ಕೊಡ್ತಿದ್ದೆ. ಸರಿ, ನಿಮ್ ಗಂಡ ಬರೋವರ್‍ಗೂ ನಾನು ಇಲ್ಲೇ ಕುಂತಿರ್‍ತೀನಿ.
ಟಾಯ್ಲೆಟ್ ಕಡೆಗೆ ಹೋಗಿದ್ದ ಅವಳ ಗಂಡ ಬಂದ. ಇವನು ಮೇಲೆದ್ದ. ಬೇರೆಡೆ ಸೀಟು ದಕ್ಕಿಸಿಕೊಳ್ಳುವಲ್ಲಿ ಕೊನೆಗೂ ಗೆದ್ದ.
೩
ಅಮ್ಮ ಮತ್ತು ಮಗ ಪಯಣಿಸುತ್ತಿದ್ದಾರೆ. ಮಗನ ವಯಸ್ಸು ಸರಿಸುಮಾರು ೭ ವರ್ಷ. ರೈಲಲ್ಲಿ ಮಾರುವ ತಿಂಡಿ, ಮೊದಲೇ ತಂದಿದ್ದ ಚಾಕೊಲೇಟನ್ನು ಅಮ್ಮ ಮಗನ ಕೈಗಿಟ್ಟಳು. ಚಾಕೊಲೇಟ್ ಬಾಯಿಗಿಟ್ಟು ಕೈಯಲ್ಲಿರುವ ಕವರ್ ಅನ್ನು ಅಲ್ಲೇ ಕೆಳಗೆ ಬಿಸಾಡಲು ಮಗ ಮುಂದಾದ. ಅಮ್ಮ ಅದನ್ನು ತೆಗೆದುಕೊಂಡು ತನ್ನ ವ್ಯಾನಿಟಿ ಬ್ಯಾಗಿಗೆ ಹಾಕಿಕೊಂಡಳು. ಮಗನಿಗೆ ಸಾರ್ವಜನಿಕ ಬದುಕಿನ ಸ್ವಚ್ಛತೆಯ ಪಾಠ ಬೋಧಿಸಿದಳು.
೪
ತಮ್ಮ ಚಿತ್ರ ವಿಚಿತ್ರ ಹಾವಭಾವಗಳ ಮೂಲಕ (ಕು)ಖ್ಯಾತರಾಗಿರುವ ಹಿಜಡಾಗಳು ರೈಲಿನಲ್ಲಿ ಪ್ರಯಾಣಿಸುತ್ತಿರುವ ಗಂಡು ಜೀವಿಗಳಿಂದ ಕಾಸು ಪೀಕುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈ ವಿದ್ಯಮಾನದ ಪರಿಚಯವಿಲ್ಲದ ಎಳೆ ಗಂಡು ಜೀವದ ಬಳಿ ಹಿಜಡಾಗಳ ಆಗಮನವಾಗಿದೆ. ಹಿಜಡಾ ಕೈ ಅವನ ಕೆನ್ನೆ ಸ್ಪರ್ಶಿಸಿದೆ. ಅವನಿಗೆ ಅಚ್ಚರಿ. ಯಾವುದೋ ಹೆಂಗಸು ತನ್ನ ಮೈ ಮುಟ್ಟಿದಳೆಂಬ ಪುಳಕ. ಕತ್ತೆತ್ತಿ ನೋಡಿದರೆ ಭಿನ್ನ ಬದುಕಿನ ರಾಯಭಾರಿಗಳು. ಅವಳಲ್ಲದ ಅವಳು ಕಾಸಿಗಾಗಿ ಕೈಯೊಡ್ಡಿದಳು. ಇವನು ಕಣ್ಣಲ್ಲೇ ಕಾಸು ಬಿಚ್ಚುವುದಿಲ್ಲವೆಂದು ಸೂಚಿಸಿದ. ಅವಳಲ್ಲದ ಅವಳು ಅವನ ಮುಖಕ್ಕೆ ತಿವಿದು ಮುಂದೆ ಸಾಗಿದಳು. ಅವನು ಯಾಪು ಮೋರೆ ಹೊದ್ದುಕೊಂಡು ಕುಳಿತ.
೫
ರೈಲನ್ನೇ ಮನೆ ಎಂದು ಭಾವಿಸಿಕೊಂಡಂತಿರುವ ದೀರ್ಘಾವಧಿ ಪ್ರಯಾಣಿಕರಾದ ಯುವಕರು ತ್ರೀ ಬೈ ಫೋರ್ ಪ್ಯಾಂಟು, ಬನಿಯನ್ ತೊಟ್ಟು ಅತ್ತಿತ್ತ ತಿರುಗಿ ಮತ್ತೆ ಬಂದು ಸೀಟಿನ ಮೇಲೆ ಆಸೀನರಾಗುತ್ತಿದ್ದಾರೆ. ಮತ್ತೊಂದೆಡೆ ಅಲ್ಲೇ ಎಲ್ಲೋ ಇಳಿಯುವ ಅವಳು ತನ್ನ ಮೈ ಮೇಲಿರುವ ಸರ್ವಸ್ವವೂ ಸನ್ನದ್ಧ ಸ್ಥಿತಿಯಲ್ಲಿದೆಯೇ ಎಂದು ಪರೀಕ್ಷಿಸಿಕೊಳ್ಳುತ್ತಿದ್ದಾಳೆ.
೬
ನಿಲ್ದಾಣದಲ್ಲಿ ರೈಲಿನ ನಿಲುಗಡೆ. ಹೊರ ಲೋಕಕ್ಕೆ ಒಂದಷ್ಟು ಮಂದಿಯ ಬಿಡುಗಡೆ.
*****