ರೈತ ಫಾರ್ ಸರಕಾರ: ಸೂರಿ ಹಾರ್ದಳ್ಳಿ


ಒಂದು ಅಶುಭ ದಿನದಂದು, ಕಾಶೀಪತಿ ಕೊರೆಯಲು ಶುರುಮಾಡಿದನು. ‘ನಮ್ಮದು ರೈತರ ಫಾರ್ ಸರಕಾರ,’ ರಾಜಕಾರಣಿಗಳಿಗೆ ಮತ್ತು ಕವಿಗಳಿಗೆ ಇಹಲೋಕದಲ್ಲಿ ಬೇಕಿರುವುದು ‘ಕೇಳುವ ಕಿವಿಗಳು’ ಮತ್ತು ಆಡಿಸಲು ಒಳಗೆ ಟೊಳ್ಳಿರುವ ತಲೆಗಳು. ನಡುನಡುವೆ ಚಪ್ಪಾಳೆಯ ದನಿಗಳು. ಇವು ಮೂರಿರದ್ದರೆ, ದೇವರ ದಯೆ, ಒಡೆಯದ, ಮುರಿಯದ, ಚರ್ಮದ ಬಾಯಿ ದಣಿಯುವುದಿಲ್ಲ. ಕಾಶೀಪತಿ ಹೇಳಿದ್ದನ್ನು ನಾನು ತಿದ್ದಿದೆ, ‘ಅದರು ಫಾರ್ ಅಲ್ಲ, ಪರ.’
‘ಇಂಗ್ಲಿಷಿನವರಿಗೂ ತಿಳಿಯಲಿ ಎಂದು ಹಾಗೆಂದೆ. ಆ್ಯಂಡು, ನಾನು ಹಳ್ಳಿಯವರ ಮಕ್ಕಳೂ ಗರ್ಭದಲ್ಲಿರುವಾಗಲೇ ಇಂಗ್ಲಿಷ್ ಕಲಿಯಬೇಕು ಎಂದು ವಾದಿಸುವವನು. ನಂತರ ಇಂಗ್ಲಿಷ್ ಮೂಲಕ ಕನ್ನಡ ಕಲಿತರಾಯಿತು, ಆ್ಯಂಡು…’ ಎಂದ ಮರಿ ಪುಡಾರಿಯೊಬ್ಬ ಟಿವಿ ರಿಯಾಲಿಟಿ ಷೋದ ತೀರ್ಪುಗಾರರಂತೆ ಪುನಃ ಪುನಃ ಆ್ಯಂಡು ಬಳಸುವುದನ್ನು ಕೇಳುವುದು ಮಜಾ ಆಗುತ್ತದೆ. ನಿಜ ಹೇಳಬೇಕೆಂದರೆ ಮೊದಲು ಕನ್ನಡ ಕಲಿಸಬೇಕಾದುದು ನಮ್ಮ ಕನ್ನಡಿಗರಿಗೇ. ನಮ್ಮ ಕನ್ನಡವನ್ನು ಹಾಳು ಮಾಡುತ್ತಿರುವವರೂ ಕನ್ನಡಿಗರೇ.

ಅವುಗಳಲ್ಲಿ ಕನ್ನಡ ಟಿವಿ ವಾಹಿನಿಗಳು ಮುಂಚೂಣಿಯಲ್ಲಿರಲು ಪರಸ್ಪರ ಸ್ಪರ್ಧಿಸುತ್ತವೆ. ಜನರು ನಂಬುವಂತೆ ಭರವಸೆಗಳನ್ನು ನೀಡುವ ಶಕ್ತಿಯೇ ರಾಜಕಾರಣಿಗಳ ಮೊದಲ ಸಾಮರ್ಥ್ಯ.
‘ನಮ್ಮದು ಬಡವರ ಪರ ಸರಕಾರ, ನಮ್ಮದು ಹಿಂದುಳಿದವರ. ಅಲ್ಪಸಂಖ್ಯಾತರ ಸರಕಾರ, ಆ್ಯಂಡು…’ ರಾಜಕಾರಣಕ್ಕೆ ಹೊಸ ಎಟ್ರಿ ಕೊಟ್ಟ ಕಾಶೀಪತಿಯು ಹೊಸತರಲ್ಲಿ ಎತ್ತಿ ಎತ್ತಿ ಗೋಣಿಯನ್ನು ಒಗೆಯುತ್ತಿದ್ದ ಅಗಸನಾಗಿದ್ದ. ಎಲ್ಲಾ ಪಕ್ಷಗಳೂ ಒಂದೇ ರೀತಿ ಭರವಸೆಗಳನ್ನು ಕೊಡುತ್ತವೆ, ಮ್ಯಾನಿಫೆಸ್ಟೋ ಹೊರಡಿಸುತ್ತವೆ, ತಮ್ಮದು ರೈತರ ಪರ ಸರಕಾರ, ತಮ್ಮದು ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಏಳಿಗೆಗೆ ಶ್ರಮಿಸುವ ಸರಕಾರ, ತಮ್ಮದು ಬಡವರ ಪರ ಸರಕಾರ, ಎಂದು. ಅವರ ಏಳಿಗೆಗಾಗಿ ಪರಸ್ಪರ ಪೈಪೋಟಿ ನಡೆಸುತ್ತವೆ. ಉಳಿದವರು ಮಾನವ ಜಾತಿಗೆ ಸೇರಿದವರಲ್ಲ. ಅವರು ಯಾವುದೇ ಸೌಲಭ್ಯಕ್ಕೂ ಅರ್ಹರಲ್ಲ.

ನಾನು ಕಾಶೀಪತಿಯನ್ನು ಕೇಳಿದೆ, ‘ಇತ್ತೀಚೆಗೆ ರೈತರ ಆತ್ಮಹತ್ಯೆಯ ದುರಂತದ ವಿಷಯವನ್ನು ಕೇಳುತ್ತಿದ್ದೀರಿ. ನೀವು ರೈತರಿಗೆ ಏನೇನು ಮಾಡಲಿದ್ದೀರಿ?’
‘ಸಾಲ ಮನ್ನಾ…’
‘ಸಾಲ ಮನ್ನಾದಂತಹ ಭಾಷಣಗಳನ್ನು ಎಲ್ಲಾ ಪಕ್ಷದವರೂ ಮಾಡುತ್ತಿದ್ದಾರೆ.’
‘ನಾವು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿಗಳ ನೆರವನ್ನು ನೀಡುತ್ತೇವೆ. ನಮ್ಮ ಮುಂದಿನ ಬಜೆಟಿನಲ್ಲಿ ಇದಕ್ಕೆ ಬೇಕಾದಷ್ಟು ಹಣವನ್ನು ಅಲಾಟ್ ಮಾಡುತ್ತೇವೆ,’ ಎಂದ.
‘ಅಂದರೆ ನಿಮ್ಮಲ್ಲಿ ಸತ್ತ ರೈತರ ಕುಟುಂಬಕ್ಕೆ….’ ನಾನು ಮಾತು ಮುಗಿಸುವ ಮೊದಲೇ ಅವನು ಹೇಳಿದ. ‘ನೀವು ಏನು ಕೇಳುತ್ತಿದ್ದೀರಿ ಎಂಬುದು ನನಗೆ ಗೊತ್ತು. ಒಬ್ಬನಲ್ಲ, ಹತ್ತಲ್ಲ, ಸಾವಿರವಲ್ಲ, ಲಕ್ಷ ಜನ ರೈತರು ಸತ್ತರೂ ನಾವು ಹಣ ಸಹಾಯ ನಿಲ್ಲಿಸುವುದಿಲ್ಲ. ಆಗಲೇ ಹೇಳಿದೆನಲ್ಲ, ನಮ್ಮದು ರೈತರ ಪರ ಸರಕಾರ ಎಂದು,’
ನಾನು ತಲೆ ಆಡಿಸಿದೆ. ಆತ ಮುಂದುವರಿಸಿದ, ‘ನಮ್ಮ ಕ್ಷೇತ್ರದ ರೈತರು ಆತ್ಮಹತ್ಯೆ ಮಾಡಿಕೊಂಡರೆ ತಲಾ ಒಂದು ಲಕ್ಷ ಎಕ್ಸ್‍ಟ್ರಾ ಕೊಡುತ್ತೇನೆ. ಆ್ಯಂಡು ಬೇರೆ ಕ್ಷೇತ್ರದ ಜನರು ನಮ್ಮ ನಮ್ಮ ಕ್ಷೇತ್ರದಲ್ಲಿ ಸತ್ತರೆ ಕೂಡಾ ಒಂದು ಲಕ್ಷ ಎಕ್ಸ್‍ಟ್ರಾ.’
‘ಸರಿ, ಅದು ಹೇಗೆ ಗೊತ್ತಾಗುತ್ತೆ ಸತ್ತವರು ನಿಮ್ಮ ಕ್ಷೇತ್ರದವರೋ, ಇತರರೋ ಎಂದು?’ ಕೇಳಿದೆ.

‘ಅದು ಬಲು ಸುಲಭ. ಅವರು ತಮ್ಮ ಜೊತೆ ತಮ್ಮ ಆಧಾರ್ ಕಾರ್ಡನ್ನು ಇಟ್ಟುಕೊಂಡರಾಯಿತು. ನಮ್ಮ ಅಧಿಕಾರಿಗಳು ಅದು ಒರಿಜಿನಲ್ಲೋ, ಡುಪ್ಲಿಕೇಟೋ ಎಂದು ನಿರ್ಧರಿಸುತ್ತಾರೆ.’
‘ಸರಿ ಹೋಯ್ತು. ಸಾಯುವಾಗಲೂ ತಮ್ಮೊಡನೆ ಆಧಾರ್ ಕಾರ್ಡನ್ನು ಇಟ್ಟುಕೊಂಡಿರಬೇಕು ಎನ್ನು. ಸರಿ, ಇಲ್ಲಿ ಮೀಸಲಾತಿ ಇಲ್ಲವೋ?’ ನಾನು ಕೇಳಿದೆ.
‘ಇಲ್ಲದೇ ಉಂಟೇ? ಸುಯಿಸೈಡ್ ಮಾಡಿಕೊಳ್ಳುವ ಅಲ್ಪ ಸಂಖ್ಯಾತರಿಗೆ, ಹಿಂದುಳಿದವರಿಗೆ, ಬಡವರಿಗೆ, ಎಂದಿನಂತೆ ಮೀಸಲಾತಿ ಕೊಡುತ್ತೇವೆ. ಆ್ಯಂಡು ನಮ್ಮ ಫಂಡಿನಲ್ಲಿ ಅವರ ಸೇವೆಗೆ ಎಂದೂ ಕೊರತೆ ಉಂಟಾಗುವುದಿಲ್ಲ. ಆ್ಯಂಡು…’
ನಾನು ಪ್ರಶ್ನಿಸಿದೆ. ‘ಅಲ್ಲವೋ ಕಾಶಿ, ಹೀಗೆ ನೀವೆಲ್ಲಾ, ಅಂದರೆ ರಾಜಕಾರಣಿಗಳು ದೇಶದ ಎಲ್ಲಾ ಭೂಮಿಯನ್ನೂ ತಮ್ಮದೇ ಮಾಡಿಕೊಳ್ಳುತ್ತಾ ಹೋದರೆ ಮುಂದೆ ಇತರರು ತಮ್ಮದೇ ಒಂದು ಜಾಗ ಹೊಂದಲು ಆಗುವುದೇ ಇಲ್ಲ ಅಲ್ಲವಾ? ಹಾಗಿರುವಾಗ ಆತ್ಮಹತ್ಯೆ ಮಾಡಿಕೊಂಡವರನ್ನು ಸುಡಲು ಅಥವಾ ಹೂಳಲು….’
‘ನಿಜ. ನಮ್ಮ ಕ್ಷೇತ್ರದಲ್ಲಿ ದೊಡ್ಡ ಸ್ಮಶಾನ ಇದೆ. ಅದರ ಬಳಕೆಯನ್ನು ಪೂರ್ತಿಯಾಗಿ, ಸಮರ್ಥವಾಗಿ ಬಳಕೆ ಮಾಡಿಕೊಳ್ಳಲಿಕ್ಕೆ ಇದರಿಂದ ಉಪಯೋಗವಾಗುತ್ತದೆ.’ ನಿಜವಾಗಿಯೂ ಸ್ಮಶಾನಕ್ಕೆ ಅವನ ಅವಶ್ಯಕತೆಯಿದೆ. ಆದರೆ ಹಾಗೆಂದು ಹೇಳುವಂತಿಲ್ಲವಲ್ಲ!

ಗಲಭೆಯಲ್ಲಿ ಗೋಲಿಬಾರ್ ಆಗಿ ಸತ್ತವರ ಕುಟುಂಬಕ್ಕೆ ಸಹಾಯ ಮಾಡುವಲ್ಲಿ ವಿರೋಧ ಪಕ್ಷಗಳು ಪೈಪೋಟಿ ನಡೆಸುತ್ತವೆ. ಆದರೆ ಪ್ರವಾಹ ಬಂದು, ಭೂ ಕುಸಿದು ನಿರಾಶ್ರಿತರಾದವರಿಗೆ ಬರೀ ಸಂತಾಪದ ಮಾತುಗಳು, ಅಷ್ಟೇ. ಆಗ ಈ ಪುಡಾರಿಗಳು ಬಡವರಾಗಿಬಿಡುತ್ತಾರೆ, ಮೊದಲಿನ ಧಾರಾಳತನ ಮಾಯವಾಗುತ್ತದೆ.
‘ಅದು ಎಲ್ಲಿಯ ತನಕ?’ ಎಂಬ ನನ್ನ ಪ್ರಶ್ನೆಗೆ ಅವನು ಉತ್ತರಿಸಿದನು, ‘ನಮ್ಮ ರಾಜ್ಯದ ಕೊಟ್ಟ ಕೊನೆಯ ರೈತ ಆತ್ಮಹತ್ಯೆ ಮಾಡಿಕೊಂಡ ನಂತರವಷ್ಟೇ ನಮ್ಮ ಈ ಯೋಜನೆಗೆ ಮುಕ್ತಾಯ ಹಾಕುತ್ತೇವೆ. ಜೈ ಹಿಂದ್, ಜೈ ಕಿಸಾನ್, ಜೈ ಜವಾನ್,’ ಎಂದ. ನನಗೆ ಖುಷಿಯಾಯಿತು. ನಿಮಗೆ ಖುಷಿಯಾಯಿತೋ ಇಲ್ಲವೋ ತಿಳಿಯದು, ಯಾಕೆಂದರೆ ಈ ಲೇಖನವು ಕೊಲೆ, ಸುಲಿಗೆ, ದರೋಡೆ, ಭ್ರಷ್ಟಾಚಾರ, ಮಾನಭಂಗ, ಅಪಘಾತ, ಸುನಾಮಿಗಳ ಜೊತೆ ಸೇರಿ ಚೌ ಚೌ ಆಗಿದ್ದೀತು. ಆದುದರಿಂದ ಸಂಜೆ ಮತ್ತೊಮ್ಮೆ ಓದಿ.

ಸೂರಿ ಹಾರ್ದಳ್ಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x