ಆಗ ನಾನಿನ್ನು ಪುಟ್ಟ ಹುಡುಗ. ಎರಡೇ ತರಗತಿಯಲ್ಲಿ ಓದುತ್ತಿರುವಾಗಲೇ ಅಪ್ಪ ನನ್ನನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅಪ್ಪನಿಗೆ “ಅಪ್ಪಾ , ನಾನೂ ರೈತ ಆಗ್ಲಾ? ” ಅಂತ ಕೇಳಿದ್ದೆ. ಅಪ್ಪನ ಕೆಲಸಗಳೋ ಒಂದಲ್ಲ ಎರಡಲ್ಲ. ನಸುಕಿನ ಜಾವ ಏಳುತ್ತಲೇ ಅಪ್ಪನ ಕಾಯಕ ಶುರುವಾಗುತ್ತಿತ್ತು. ಅಮ್ಮ ಮಾಡಿಕೊಟ್ಟ ನಾಲ್ಕೈದು ರೊಟ್ಟಿ , ಪಲ್ಲೆ ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಬಾಯಾರಿಕೆಗಾಗಿ ಮಣ್ಣಿನ ಬಾಟಲ್ ನಲ್ಲಿ ನೀರು ತುಂಬಿಕೊಂಡು ಎರಡು ಎತ್ತುಗಳನ್ನು ಹಿಡಿದು ಹೊರಟರೆ ಮುಗೀತು ಮತ್ತೆ ಸಂಜೆ ಆರಕ್ಕೆ ಅಪ್ಪ ಹಿಂದಿರುಗೋದು. ಅಪ್ಪ ಆ ಪರಿ ದುಡಿದಿದ್ದರಿಂದಲೋ ಏನೋ ಈ ದಿನಗಳಲ್ಲಿ ನಾವು ಚೆನ್ನಾಗಿರುವುದು ಅನಿಸುತ್ತದೆ. ಅವ್ವ ಕೂಡಾ ಅಷ್ಟೇ ಶ್ರಮಜೀವಿ. ಅಪ್ಪನಿಗೆ ತಕ್ಕ ಜೋಡೆತ್ತು. ಅಮ್ಮನ ಕೈಗೆ ದುಡ್ಡು ಸಿಗುವುದೇ ಅಪರೂಪ. ಆದರೂ ದುಡ್ಡಿಲ್ಲದೆಯೇ ಮನೆಯನ್ನು ನಿಭಾಯಿಸುವ ಚಾಕಚಕ್ಯತೆ ಅಮ್ಮನಲ್ಲಿತ್ತು. ನೀರು, ಕಟ್ಟಿಗೆ ತರುವುದು, ಬೇರೆಯವರ ಹೊಲದಲ್ಲಿ ಕೂಲಿ ಮಾಡಿ ಕಾಳು ಕಡಿ ಕಾಯಿಪಲ್ಯ ಸೊಪ್ಪುಗಳನ್ನು ಸಂಗ್ರಹಿಸಿ , ನಮ್ಮದೇ ಹೊಲದಲ್ಲಿ ಬೆಳೆದ ಜೋಳದ ಕಾಳನ್ನು ಮನೆಯಲ್ಲೇ ಬೀಸುಕಲ್ಲಿನಲ್ಲಿ ಹಿಟ್ಟು ಮಾಡಿ ರೊಟ್ಟಿ ಮಾಡುತ್ತಿದ್ದಳು. ಅನ್ನ ಎಂಬುದು ಅಪರೂಪ. ಹಬ್ಬ ಹರಿದಿನಗಳಲ್ಲಿ ಮಾತ್ರ ಅನ್ನದ ದರ್ಶನ ನಮಗಾಗುತ್ತಿತ್ತು. ಅದು ಕೂಡಾ ನುಚ್ಚಕ್ಕಿ ಅನ್ನ. ಅದನ್ನು ನಾನು ಬಡತನ ಅನ್ನಲಾರೆ. ಅಷ್ಟೇ ತಿಂದರೂ ದೇಹ ಮಾತ್ರ ಆರೋಗ್ಯದಲ್ಲಿ ಶ್ರೀಮಂತವಾಗಿತ್ತು. ಗಾಣದ ಕುಸಬಿ ಎಣ್ಣೆಯೇ ಆರೋಗ್ಯದ ಗುಟ್ಟು. ಹಾಲು ಹೈನ ಎಲ್ಲಾ ಇರುವಾಗ ದುಡ್ಡು ಯಾಕೆ ಬೇಕು? ಅಂತಿದ್ಲು ಅಮ್ಮ. ಆದರೂ ಹಬ್ಬಹರಿದಿನಕ್ಕಾಗಿ, ಬಟ್ಟೆ ಬರೆಗಾಗಿ ಜೋಳದ ಗಂಟಿನ ಒಳಗಡೆ ಒಂದು ಚಿಕ್ಕ ದುಡ್ಡಿನ ಗಂಡೂ ಇರುತ್ತಿತ್ತು.
ಅಪ್ಪ ಅಮ್ಮನಿಗೆ ಒಂದೇ ಆಸೆ ನನ್ನ ಮಗ ಓದಿ ದೊಡ್ಡ ಸಾಹೇಬ ಆಗ್ಬೇಕು ಅಂತ. ಅದಕ್ಕಾಗಿ ನನಗೆ ಕೆಲಸ ಕಲಿಸಿದ್ದೇ ಕಡಿಮೆ. ನಾನೇನೋ ಓದಿ ದೊಡ್ಡವನಾದೆ. ಅವರಾಸೆಯಂತೆ ಚೆನ್ನಾಗಿ ಕಲಿತೂ ದೊಡ್ಡ ಸಾಹೇಬನೂ ಆದೆ. ಆದರೆ ಇಳಿ ವಯಸ್ಸಿನಲ್ಲೂ ಅಪ್ಪ ಅಮ್ಮ ಇಬ್ಬರ ಕೆಲಸದ ಹಸಿವು ಇನ್ನೂ ತೀರಿರಲಿಲ್ಲ. ಅದು ಎಂದಿಗೂ ಮುಗಿಯುವುದಿಲ್ಲ ಎನಿಸುತ್ತಿತ್ತು. ಎಲ್ಲಾ ಮಾರಿ ಸಿಟಿಗೆ ಬಂದು ಬಿಡಿ ಅಂತ ಅಂದರೆ ” ಮಗನೆ, ನಿನ್ನ ನನ್ನ ಸಾಕಿಸಲುಹಿದ್ದು ಈ ಬೇಸಾಯ. ಇದನ್ನು ಬಿಟ್ಟು ನಾವು ಬರೋದಾ? ಸಾದ್ಯನೇ ಇಲ್ಲ. ಆ ಪ್ಯಾಟ್ಯಾಗ ಏನಿದೆ. ಎಲ್ಲಾ ಕಲಬೆರಕೆ. ಎಲ್ಲರ ಮನಸ್ಸೂ ಕಲಬೆರಕೆ. ಒಂದು ನೈತಿಕತೆ ಗೊತ್ತಿಲ್ಲ. ಹಬ್ಬ ಹುಣ್ಣಿಮೆ ಸಂಬಂಧ ಏನು ಗೊತ್ತಿಲ್ಲ. ಕೈಯಲ್ಲಿ ಐದು ಪೈಸಾ ಇಲ್ಲಾ ಅಂದ್ರೂ ಹಳ್ಳಿಲಿ ಬದುಕುತ್ತೇವಿ. ಅದೇ ಸಿಟಿಯಲ್ಲಿ ಬದುಕೊಕಾಗುತ್ತಾ.?” ಅಂತ ನನಗೇ ಉಪದೇಶ ಮಾಡುತ್ತಿದ್ದರು. ಅಪ್ಪನ ಆ ಮಾತು ಸರಿಯಾಗಿಯೇ ಇತ್ತು.
ಅಗ್ರಿಕಲ್ಚರಲ್ ಪದವಿ ಪಡೆದು ಒಂದು ದೊಡ್ಡ ಕಂಪನಿಯಲ್ಲಿ ನಾನು ಕೆಲಸಕ್ಕೆ ಸೇರಿದ್ದೆ. ಹಳ್ಳಿಯಲ್ಲಿ ಇರುವುದೇ ಅಪರೂಪ. ಹಾಗಾಗಿ ಅಪ್ಪ ಅಮ್ಮನನ್ನು ಹೇಗೆ ನೋಡಿಕೊಳ್ಳಲಿ ಎಂಬುದೇ ನನ್ನ ಚಿಂತೆ. ನಿಜ ಹೇಳಬೇಕೆಂದರೆ ಅವರೇ ಜವಾರಿ ಮಂದಿ. ಇಂದಿಗೂ ಗಟ್ಟಿಮುಟ್ಟು. ಅದೇ ರೊಟ್ಟಿ ಊಟ. ಅದೇ ಹೊಲ ಮನೆ ಕಟ್ಟೆಯ ಮೇಲೆ ಹರಟೆ. ನಾವಿಲ್ಲಿ ಇಪ್ಪತ್ತು ನಾಲ್ಕು ತಾಸುಗಳ ಕೂಡಾ ಬ್ಯೂಜಿ ಬ್ಯೂಜಿ. ನನ್ನ ಕನಸು ನಾನೊಬ್ಬ ರೈತ ಆಗಬೇಕು ಅನ್ನುವದಾಗಿತ್ತು. ಆದರೆ ಅಪ್ಪ ಅಮ್ಮನ ಒತ್ತಾಸೆ. ಆದರೆ ರೈತಾಪಿ ಕೆಲಸಗಳೊಂದಿಗಿನ ಸಂಬಂಧ ನನ್ನ ವ್ಯವಹಾರದಲ್ಲೂ ಇತ್ತು.
ಆ ದಿನ ಒಂದು ಸುದ್ದಿ ಮನೆಯಿಂದ ಬಂತು. ಅವ್ವ ಪೋನ್ ಮಾಡಿ ನಿಮ್ಮ ಅಪ್ಪ ಬಿದ್ದು ಕಾಲು ಮುರ್ಕೊಂಡವ್ನೆ ಬಾರಪಾ” ಅಂದ್ಲು . ಅವ್ವನ ಧ್ವನಿಯಲ್ಲಿ ಅಪ್ಪನ ಮೇಲೆ ಸಿಟ್ಟು, ಆತಂಕ, ಪ್ರೀತಿ, ಆರೈಕೆ ಎಲ್ಲವೂ ಕಂಡುಬಂತು. ಈಗಿನ ಕಾಲದಲ್ಲಿ ಮದುವೆಯಾದ ಎರಡು ದಿನಗಳಲ್ಲಿಯೇ ಡೈವೊರ್ಸ ಎನ್ನುವ ಗಂಡಹೆಂಡತಿಯ ಸಂಬಂಧಕ್ಕಿಂತ ಅಪ್ಪ ಅವ್ವನ ಸಂಸಾರದ ಬಂಧ ಮಿಗಿಲು. ಸುದ್ದಿ ತಿಳಿಯುತ್ತಿದ್ದಂತೆ ಹಳ್ಳಿ ಮನೆಗೆ ಹಾಜರ್. ನೆಗಡಿಯಾದರೆ ಎರಡು ದಿನ ರಜೆ ಹಾಕಿ ಮಲಗುವ ಸಿಟಿರಾದ ನಮಗಿಂತ ಅಪ್ಪ ಭಿನ್ನವಾಗಿದ್ದ. ಕಾಲು ಮುರಿದರೂ ಅದಾರೋ ಕಡೆ ಕಾಲಿಗೆ ಪಟ್ಟು ಹಾಕಿಸಿ ,ಕುಂಟುತ್ತಾ ದನಕರುಗಳಿಗೆ ಮೇವು ಹಾಕುತ್ತಿದ್ದ. “ರೆಸ್ಟ್ ತಗೋಬಾರ್ದೇ ” ಅಂತ ಅಂದಾಗ ,” ಸತ್ತ ಮ್ಯಾಲೆನೇ ಎಲ್ಲಾ ರೆಷ್ಟು ಗಿಷ್ಟು ಅಂದ. ದೊಡ್ಡ ದವಾಖಾನೆಗಾದ್ರೂ ತೋರಿಸೋಣ ಅಂದ್ರೆ ಅದೇ ಹಟ. ನಮ್ದು ಗಟ್ಟಿ ದೇಹ ಎಲ್ಲಾ ಆರಾಮ್ ಆಗುತ್ತ ನೀ ಏನೂ ಚಿಂತಿ ಮಾಡಬ್ಯಾಡ. ಹೋಗು ನಾಲ್ಕು ರೊಟ್ಟಿ ತಿನ್ನು ಹೋಗು ” ಅಂದಾಗ ನಾನು ಏನೂ ಮಾತನಾಡದಂಗಾದೆ. ಅಪ್ಪ ಎಲ್ಲಾ ನೋವುಗಳಿಗೆ ಸವಾಲನ್ನೊಡ್ಡಿದ್ದ. ಆದರೂ ಅಪ್ಪನ ಆರೋಗ್ಯ ಬಿಗುಡಾಯಿಸತೊಡಗಿತ್ತು. ಅಮ್ಮ ಏನಾದರೂ ಮಾಡು ಅಂತಿದ್ಲು. ಅಪ್ಪ ವಯಸ್ಸಿನ ಸಾಮರ್ಥ್ಯ ಅರಿತು ಕೆಲದಲ್ಲಿ ಬಿಡುವು ಮಾಡಿಕೊಂಡಿದ್ದರೆ ಆರೋಗ್ಯದಲ್ಲಿ ಏರೋಪೇರಾಗುತ್ತಿರಲಿಲ್ಲ ಎಂದೆನಿಸಿತ್ತು. ಕೊನೆಗೆ ಅಪ್ಪನಿಗೆ ನನ್ನ ಚಿಕ್ಕ ವಯಸ್ಸಿನ ಆಸೆಯನ್ನು ಕೇಳಲೇಬೇಕೆಂದು ನಿರ್ಧಾರ ಮಾಡಿದೆ. ಅಪ್ಪ , ನಾನೂ ರೈತನಾಗಿ ಇಲ್ಲೇ ಇದ್ದು ಕೆಲಸ ಮಾಡುವೆ ಎಂದಾಗ ಎಲ್ಲರ ಒತ್ತಾಯದ ಮೇರೆಗೆ ಒಪ್ಪಿಕೊಂಡ.
ತಲೆಗೆ ಒಂದು ಟವೆಲ್ ಸುತ್ತಿಕೊಂಡು ಅಪ್ಪನ ಕೆಲಸಗಳನ್ನು ಕೈಗೆ ತೆಗೆದೊಂಡೆ. ಆರಂಭದಲ್ಲಿ ಕಷ್ಟವಾದರೂ ಬರುಬರುತ್ತಾ ಇಷ್ಟವಾಗತೊಡಗಿತು. ನಾನು ಓದಿದ್ದ ಎಲ್ಲಾ ವಿಷಯವನ್ನು ಕೃಷಿಗೆ ಧಾರೆ ಎರೆದೆ. ಸಾಹೇಬನಾಗಿ ಪಡೆಯುತ್ತಿದ್ದ ಸಂಬಳದ ಹತ್ತು ಪಟ್ಟು ಆದಾಯ ಅಪ್ಪ ಉತ್ತಿದ್ದ ಹೊಲದಲ್ಲಿ ಕಂಡೆ.ಅಪ್ಪನಿಗೆ ಅದೆಷ್ಟೋ ಖುಷಿಯಾಗಿ ಆರೋಗ್ಯದಲ್ಲಿ ಚೇತರಿಕೆಯೂ ಆಯಿತು. ಹಲವು ದಿನಗಳ ನಂತರ ಅಪ್ಪನೂ ಬೇಸಾಯಕ್ಕೆ ನಿಂತ. ಅಪ್ಪ ಅದೇ ಹಳೇ ಸ್ಟೈಲ್ ಮತ್ತೆ ಶುರುವಾಯಿತು ಆದರೆ ಅಪ್ಪ ಈಗ ಒಂಟಿಯಾಗಿರಲಿಲ್ಲ. ಜೊತೆಯಲ್ಲಿ ನಾನೂ ಇದ್ದೆ.
-ವೆಂಕಟೇಶ ಚಾಗಿ
ಬಹಳ ಸತ್ವಯುತವಾದ ಬರಹ ಸರ್. ನೌಕರಿ ನೌಕರಿ ಅಂತ ಸಿಟಿಗೆ ಹೋಗಿ ಸ್ವಂತ ಹೊಲವನ್ನು ಹಾಳುಗೆಡುವ ಜನಕೆ ತಕ್ಕುದಾದ ಕಥೆ. ಚಿಕ್ಕ ಕಥೆ ಎಂದಿದ್ದರೂ ದೊಡ್ಡ ಸಂದೇಶವನ್ನು ಸಾರುವ ಕಥೆ.