ನಾಳೆ ಹೇಗಾದರೂ ಮಾಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಯೇ ತೀರುವೆ ಎನ್ನುವ ಭರವಸೆಯಿಂದ ಜಗದೀಶ ಭಾನುವಾರ ರಾತ್ರಿ 7.00 ಗಂಟೆಗೆ ತನ್ನೆಲ್ಲಾ ಬಟ್ಟೆಯನ್ನು ಪ್ಯಾಕ್ ಮಾಡಿ ರಾತ್ರಿ 10.30 ಕ್ಕೆ ಬಸ್ ಇರುವುದು ಅದಕ್ಕೆ ಹೊರಟರಾಯಿತು ಎಂದು ಅಂದುಕೊಂಡು ತನ್ನ ಹೆಂಡತಿ ಮುಬೀನಾಗೆ ಹೇಳಿದ “ಏನೆ ನಾನು ಬೆಳಿಗ್ಗೆ ಬೆಂಗಳೂರು ಹೋಗ್ತಿದ್ದೀನಿ ಮಗಳಿಗೆ ಏನಾದ್ರೂ ಇದ್ರೆ ಕೊಡು ಅಂದ” ಅದಕ್ಕೆ ಮುಬೀನಾ “ಅಲ್ರೀ ಇಲ್ಲಿ ಉಣ್ಣಾಕ ಏನೂ ಗತಿಯಿಲ್ಲ, ಮಳೆ ನೋಡಿದ್ರ ಕಣ್ಮರೆಯಾಗ್ಯಾತಿ ಏನು ಅದ ಮನ್ಯಾಗ ಬರೀ 2 ಸೇರು ಜೋಳ ಅದಾವು ಅವನ್ನ ರೊಟ್ಟಿ ಮಾಡಿಕೊಡ್ತಾನಿ ತಗೊಂಡ್ ಹೋಗ್ರಿ” ಎಂದು ತಾನು ರೊಟ್ಟಿ ಬಡಿಯುವ ಕಾಯಕದಲ್ಲಿ ತೊಡಗಿದಳು. ಇತ್ತ ಜಗದೀಶ್ ಬೆಂಗಳೂರು ಹೋಗುವುದು ಅಂದ್ರೆ ಸುಮ್ನೆನಾ ಹಣವಂತೂ ಬೇಕೇ ಬೇಕಲ್ಲ ಎಂದು ತಿಳಿದು ಊರ ಮನೆಯ ಗೌಡ್ರ ಹತ್ತಿರ ಬೆಳಿಗ್ಗೆ 9.00 ಗಂಟೆಗೆ ಹೋಗಿ “ಸಾಹುಕಾರ್ರೆ, ಸಾಹುಕಾರ್ರೆ” ಅಂತ ಕೂಗಿದ ಅತ್ತ ಕಡೆಯಿಂದ “ಯಾರಪ ಅವ್ರು” ಅಂತ ಸಾಹುಕಾರನ ಹೆಂಡತಿ ಗಿರಿಜಮ್ಮ ಕೇಳಿದಳು. “ನಾ ರೀ ಜಗ್ಯಾ ಅದೀನಿ ಸಾಹುಕಾರ್ರು ಬೇಕಾಗಿತ್ತಲ್ರಿ ಮಾತಾಡಕಿತ್ತು” ಅಂದ. ಅದಕ್ಕೆ ಗಿರಿಜಮ್ಮ “ಸಾಯಂಕಾಲ 7.00 ಗಂಟ್ಯಾಕ ಬರ್ತಾರ ಅವಾಗ ಬಾ” ಅಂದಳು.
ಇತ್ತ ಹತಾಶನಾಗಿ ಇನ್ನೇನು ಮಾಡೋದು ಅಂತ ಹೇಳಿ, ಮನದಲ್ಲೇ ಬಡವರಾಗಿ ಹುಟ್ಟಲೇಬಾರದು ಅದರಲ್ಲೂ ಇಂತಹ ಕಗ್ಗ ಹಳ್ಳಿಯಲ್ಲಿ ಹುಟ್ಟಲೇ ಬಾರದು. ಪಾಪ ಮಹಾತ್ಮ ಗಾಂಧೀಜಿ ಹೇಳಿರೋದು “ಹಳ್ಳಿಗಳು ಉದ್ಧಾರ ಆದ್ರ ದೇಶ ಉದ್ದಾರ ಆಗೋದು ಅಂತ” ಆದರೆ ಈ ರಾಜಕಾರಣಿಗಳಿಗೆ ಏನು ಗೊತ್ತು ಹಳ್ಳಿಗರ ಪಾಡು. ಕೃಷಿಕರ ಪಾಡು. ನಮ್ಮಂತವರನ್ನು ದೇವರೇ ಕಾಪಾಡಬೇಕು ಅಂತ ಮನಸ್ಸಿನಲ್ಲೇ ಗೊಣಗಿಕೊಂಡ ಅಂತ ಗೆಳೆಯ ಖಾದರ್‍ನ ಹತ್ತಿರ ಹೋಗಿ ಹಣ ಕೇಳಿದರೆ ಕೊಡಬಹುದು ಎಂಬ ಆಶಾಭಾವನೆಯಿಂದ ಮನೆಗೆ ಹೋಗಿ “ಖಾದರ್ ಭಾಯ್ ಭಾಯ್ ಅಂದ” ಅಲ್ಲಿಂದ “ಯಾರು ಅದು ನಮ್ದೂಕೆ ಕರಿಯೋದು” ಅಂತ ಹೇಳಿ ಖಾದರ್ ಹೊರಗಡೆ ಬಂದು ನೋಡಿದರೆ ಜಗದೀಶ ಮುಖ ಇಳಿಸಿಕೊಂಡು ನಿಂತಿದ್ದ. ಖಾದರ್ “ಏನೋ ದೋಸ್ತ್ ಏನ್ ಸಮಾಚಾರ್ ಯಾವುದಕ್ಕೆ ಇಲ್ಲಿಗಂಟ ಬಂದೀ” ಅಂತ ಮಾತಾಡಿಸಿದ. “ಏನಿಲ್ಲೊ, ಅದಾ ನಮ್ಮಪ್ಪನ ಹೊಲ ನಮ್ಮ ಹೆಸರಿನ್ಯಾಗ ಇದ್ದದ್ದನ್ನ ಅಂವ ಸೂಳಿಮಗ ರೊಕ್ಕ ಕೊಟ್ ರಿಜಿಸ್ಟ್ರಿ ಮಾಡಶ್ಯಾನಲ್ಲ ಅಂವ, ಅಂವ ಕೂಡ ಜಗಳ ಆಡಕ ಅಕತೇನು ಅದ್ಕಾ ಮುಖ್ಯಮಂತ್ರೀನ ಕಂಡು ಅದಕ್ಕ ಒಂದ್ ಪರಿಹಾರ ಕಂಡ್ಕಬೇಕ ಅನ್ಕಂಡಿನಿ ನೋಡು” ಅಂದದ್ದಕ್ಕ, “ಅದೇನು ಸರಿಯೋ ನನ್ಹತ್ರ ಯಾಕ್ ಬಂದೀ” ಅಂದ. “ಇನ್ನೇನ್ ಐತಿಪಾ ಹೋಗಾಕ ರೊಕ್ಕಾ ಇಲ್ಲ ಅದಕ್ಕ ಒಂದ್ ದೀಡ್ ಸಾವಿರ ಕೊಡು ಬಂದ್ಮ್ಯಾಕ ಕೊಡ್ತಾನಿ”, “ಅಯ್ಯೋ ಅಲ್ಲಾ ಎಂತಾ ಕೆಲ್ಸ ಆತು ನೋಡು ಈಗ ನಮ್ಮ ಅಬ್ಬುಗ ಅರಾಮಿಲ್ಲ ಅಂತೇಳಿ ದವಾಖಾನಿಗಿ ಹೋಗಾಕ ರೊಕ್ಕ ಇಲ್ಲ ಅಂದ್ಳು ಹಾರ್ಟಿನ ಸಮಶ್ಯಾ ನೋಡು ಅದಕ್ಕ ಇರ್ಲಿ ಅಂತ ನನ್ನ ಬಾಬಿಗೆ ಆಸ್ಪತ್ರಿಗಿ ಕರ್ಕೊಂಡಾಗತ ಅಂತ ನಲ್ವೊತ್ತು ಸಾವ್ರ ಸಾಲ ತಂದ್ ಈಗ ದವಾಖಾನಿಗಿ ಕಳ್ಸೀನಿ” ಎಂದ.
ಇದನ್ನು ಕೇಳಿದ ಜಗದೀಶನಿಗೆ ಮತ್ತಷ್ಟು ದುಃಖ ಉಮ್ಮಳಿಸಿತು. ಏನೇ ಇದ್ದರೂ ಸಾಹುಕಾರ್ರು ಅದರಲ್ಲ ಬಿಡು ಅವರೇನು ನಮ್ಮ ಕೈ ಬಿಡಂಗಿಲ್ಲ ಅಂತೇಳಿ ಮನೆಗೆ ಬಂದು ಮುಬೀನಾಗೆ ಹೇಳಿ ಚಾ ಮಾಡಿಸಿಕೊಂಡು ಕುಡಿದು ಸ್ವಲ್ಪ ನಿದ್ದೆಗೆ ಜಾರಿದ. ಇತ್ತ ಮುಬೀನಾ ಪಕ್ಕದ ಮನೆಯಿಂದ ಸ್ವಲ್ಪ ಕೆಂಪು ಮೆಣಸಿನಕಾಯಿ ಕಡಾ ತಂದು ಮಗಳಿಗೆ ಅಂತ ಚಟ್ನಿ ಮಾಡಕೋತ, ನನ್ನ ಕಷ್ಟವನ್ನೆಲ್ಲಾ ನೆನೆಸಿಕೊಂಡಳು. ಈಗ್ಗೆ 25 ವರ್ಷದ ಹಿಂದೆ ತಾನು ಓದುತ್ತಿದ್ದ ಕಾಲೇಜು, ತನ್ನ ಮನೆಯವರು ಎಲ್ಲಾನೂ ಜ್ಞಾಪಕ ಬಂತು ಪಿ.ಯು.ಸಿ. ಓದುವ ಕಾಲಕ್ಕೆ ತಾನು ಬೇರೆಯ ಜಾತಿಯ ಜಗದೀಶನನ್ನು ಪ್ರೀತಿಸಿದ್ದು, ತನ್ನ ಮನೆಯವರ ಎದುರು ಹಾಕಿಕೊಂಡು ಧರ್ಮಸ್ಥಳಕ್ಕ ಓಡಿಹೋಗಿ ಮದುವೆ ಆದದ್ದು, ಗಂಡನ ಮನೆಯವರು ತನ್ನ ವಿರುದ್ಧ ತಿರುಗಿಬಿದ್ದದ್ದು, ತವರು ಮನೆಯವರು ಪೋಲೀಸ್ ಸ್ಟೇಷನ್‍ಗೆ ಹೋಗಿ ಜಗದೀಶನ ವಿರುದ್ಧ ದೂರು ಕೊಟ್ಟಿದ್ದು, ಎಲ್ಲಾವೂ ಇದ್ದವು. ಆದರೆ ಜಗದೀಶ ಬಡವ ಅವರಪ್ಪ ಮಾಡಿದ 3 ಎಕರೆ ಹೊಲದಾಗ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನೂ ಇಟ್ಟುಕೊಂಡಿದ್ದ. ಈಗೀರುವಾಗ ಪಕ್ಕದ ಹೊಲದ ಮಹೇಶಪ್ಪ ನೋಂದಣಿ ಕಚೇರ್ಯಾಗ ಹೋಗಿ ಯಾರಿಗೂ ತಿಳಿದ ಹಾಗೆ ರೊಕ್ಕಾ ಕೊಟ್ಟು ತನ್ನ ಹೆಸರಿಗೆ 1.50 ಎಕರೆ ನೊಂದಣಿ ಮಾಡಿಸಿಕೊಂಡಿದ್ದ.
ಇದೆಲ್ಲದರ ಮಧ್ಯೆ ಜಗದೀಶ ಒಳ್ಳೆಯ ಮನುಷ್ಯನಾಗಿದ್ದು, ಅವನ ಬುದ್ಧಿವಂತಿಕೆಯ ಸ್ವಭಾವವನ್ನು ನೋಡೇ ಕಾಲೇಜಿನಲ್ಲಿ ಇವನನ್ನು ಪ್ರೀತಿಸಬೇಕು ಅನ್ಸಿತ್ತು. ಬೇರೆ ಜಾತಿ ಆದರೆ ಏನು ? ಪ್ರೀತಿಗೆ ಜಾತಿ ಧರ್ಮ ಇದೇನಾ ? ಎಂದು ಅವನನ್ನೇ ಪ್ರೀತಿಸಿದ್ದಳು. ಮೊದಲಿಗೆ ಜಗದೀಶನಿಂದ ನಿರಾಕರಣೆ ಬಂದಿದ್ದರೂ ಪ್ರೀತಿಗೆ ಜಾತಿ, ಧರ್ಮ ಯಾವುದೂ ಇಲ್ಲ ಎಂದು ತಿಳಿದ ನಂತರ ಅವನಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು. ಸೂರ್ಯನು ತಾನು ಭೂಮಿಗೆ ಹೇಗೆ ಪ್ರತಿದಿನ ಕಿರಣಗಳನ್ನು ಪ್ರೀತಿಯಿಂದ ಸುರಿಸುತ್ತಾನೋ ಅಷ್ಟೇ ಪ್ರೀತಿ ಇವರಿಬ್ಬರಲ್ಲೂ ಇತ್ತು. ಆದರೂ ಜಗದೀಶನ ಮನೆಯವರು ತುಂಬಾ ಜಾತಿ ಧರ್ಮದ ಇಕ್ಕಟ್ಟಿನಲ್ಲಿ ಇದ್ದವರು. ಲಿಂಗಾಯತರು ಬೇರೆ. ಇವರೆಲ್ಲರ ವಿರೋಧದ ನಡುವೆ ಜಗದೀಶನ ತಾಯಿಯಲ್ಲಿ ಒಳ್ಳೆಯ ಮನಸ್ಸಿತ್ತು ತನಗೊಬ್ಬ ಒಳ್ಳೆಯ ಮನಸ್ಸಿನ ಸೊಸೆ ಬೇಕು ಬೇರೆ ಯಾವ ಜಾತಿ ಧರ್ಮದವರಾದರೂ ನನಗೇನು ಅಭ್ಯಂತರವಿಲ್ಲ ಅಂದಿದ್ದಳು, ಆದರೆ ತಂದೆ ಮಾತ್ರ ಸಾಯುವವರೆಗೂ ಮುಬೀನಾಳನ್ನು ಒಪ್ಪಿಕೊಳ್ಳಲೇ ಇಲ್ಲ ಅದಕ್ಕೆ ಕಾರಣ ಆ ಸಮಾಜ, ಆ ಸಮಾಜದಲ್ಲಿದ್ದ ಜಾತಿ ಧರ್ಮಗಳ ಕೊಳ್ಳಿದೆವ್ವಗಳು. ಇಷ್ಟೆಲ್ಲದರ ಮಧ್ಯೆಯೂ ಜಗದೀಶ ಎಂದಿಗೂ ಒಂದು ದಿವಸವೂ ತನ್ನನ್ನು ನೋಯಿಸಿದೇ 25 ವರ್ಷ ನನ್ನೊಂದಿಗೆ ನಡೆದುಕೊಂಡು ಬಂದಿದ್ದಾನೆ. ಮದುವೆಯಾಗಿ 2 ವರ್ಷಕ್ಕೆ ಹೆಣ್ಣುಮಗು ಜನಿಸಿತು. ಇವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಹೆಣ್ಣುಮಗುವಿಗೆ ನಯನ ಎಂದು ನಾಮಕರಣ ಮಾಡಿದ್ದರು. ಆದರೂ ಬಡವರು ನೋಡಿ ಓದಿಸುವ ಹಂಬಲ ಇದ್ದರೂ ಹಣ ಬೇಕಲ್ಲ ಎಂದು ಖಾಸಗಿ ಶಾಲೆಗೆ ಹಾಕದೇ ಸರಕಾರಿ ಶಾಲೆಗೆ ಹಾಕಿದ್ದರು. ಸರಕಾರಿ ಶಾಲೆಯಲ್ಲೇ ಓದಿ ಒಳ್ಳೆಯ ಅಂಕ ಪಡೆದು, ಪಿ.ಯು.ಸಿ.ಯಲ್ಲೇ ರಾಜ್ಯಕ್ಕೇ ರ್ಯಾಂಕ್ ಬಂದಿದ್ದಳು ನಯನ. ಆಗ ಕಾಲೇಜಿನಲ್ಲಿ ಸನ್ಮಾನ ಮಾಡಿದ ಮುಖ್ಯೋಪಾಧ್ಯಾಯರು “ನೋಡಮ್ಮ ನಯನ ನೀನು ಎಷ್ಟು ಬೇಕಾದರೂ ಓದು ಮುಂದಕ್ಕೆ ನಾನೇ ನಿನಗೆಲ್ಲ ಓದೋ ಖರ್ಚು ಕೊಡ್ತೇನೆ” ಅಂದಿದ್ದರು. ಈ ಮಾತಿಗೆ ಸ್ವಲ್ಪ ನಿರಾಳವಾಗಿದ್ದರು ದಂಪತಿಗಳು. ಮುಂದೆ ಓದುತ್ತಾ ಮೆಡಿಕಲ್ ಸೀಟ್ ಸಿಕ್ಕೇಬಿಟ್ಟಿತು ನಯನನಿಗೆ ಅದು ಬೆಂಗಳೂರಿನ ಸರಕಾರಿ ಮೆಡಿಕಲ್ ಕಾಲೇಜು, ಕಾಲೇಜಿನ ಫೀಸ್‍ಗಳನ್ನೆಲ್ಲವನ್ನೂ ತಮ್ಮ ಮುಖ್ಯೋಪಾಧ್ಯಾಯರು ಕಟ್ಟಿ ಕಾಲೇಜಿಗೆ ಸೇರಿಸಿ, ಹಾಸ್ಟೆಲ್ ವ್ಯವಸ್ಥೆಯನ್ನೂ ಮಾಡಿಸಿ ಬಂದಿದ್ದರು. ಆದರೂ ತಂದೆ ತಾಯಿ ಪ್ರೀತಿ ನೋಡಿ, ಎಷ್ಟಾದರೂ ಮಗಳಿಗೆ ಸ್ವಲ್ಪ ಸಹಾಯವಾಗಲಿ ಎಂದು ಕೂಡಿಟ್ಟಿದ್ದ ಕಿಲುಬು ಕಾಸು, ಮತ್ತು ರೊಟ್ಟಿ, ಕೆಂಪಿಂಡಿ ಅಂದರೆ ಪ್ರಾಣ ನಯನನಿಗೆ ಆದ್ದರಿಂದ ಕೆಂಪಿಂಡಿ ರೊಟ್ಟಿ ಮಾಡಿ ಕಟ್ಟಿಕೊಟ್ರಾಯಿತು ಅಂತ ಇಂಡಿ ರುಬ್ಕೋತಾ ಕೂತಿದ್ದಳು.
ಇತ್ತ ಮಲಗಿದ್ದ ಜಗದೀಶ ಎಚ್ಚರಗೊಂಡಿದ್ದ ಎದ್ದ ಕೂಡಲೇ ಸ್ವಲ್ಪ ಹೊಲಕ್ಕಾದರೂ ಹೋಗಿ ಬಂದ್ರ ಅಷ್ಟೊತ್ತಿಗೆ ಸಾಹುಕಾರ್ರು ಬಂದಿರ್ತಾರ ಹೋಗಿ ಸಾಲ ಕೇಳಿದ್ರಾಯ್ತು ಅಂತೇಳಿ ಹೊಲದ ಕಡೆಗೆ ನಡೆದ. ಅಲ್ಲಿ ನೋಡಿದ್ರ ಒಣಗಿದ ಜೋಳ, ಕಾ ಕಾ ಅಂತ ಕೂಗುವ ಕಾಗೆಯ ಕೂಗುಗಳು, ಬಿರುಕು ಬಿಟ್ಟ ಭೂಮಿ, ಇಷ್ಟು ಬಿಟ್ಟು ಬೇರೇನು ಕಾಣಲಿಲ್ಲ ಸ್ವಲ್ಪ ಹೊತ್ತು ಕೂತ. ಎದುರಿಗೆ ಬಂದ ರಾಮಣ್ಣನನ್ನು ಮಾತನಾಡಿಸಿ ತನ್ನೆಲ್ಲಾ ಯೋಚನೆಗಳನ್ನು ಅವನ ಮುಂದೆ ಹೇಳಕೊಂಡ. “ನೋಡಪಾ ಹೊಲ ಸಮಸ್ಯಾದಾಗ ನನಗೆ ಅನ್ಯಾಯ ಆಗ್ಯಾದಲ್ಲ ಅದಕಾ ಸಿಎಂರನ್ನ ಕಾಣಾಕ ಬೆಂಗಳೂರಿಗೆ ಹೊಂಟೀನಿ, ಸಾಲ ಕೇಳಾಕ ಸಾವ್ಕಾರ್ರ ಹತ್ರ ಹೋಗಿದ್ದೆ ಸಾವ್ಕಾರ ಸಂಜೆ 7.00ಗೆ ಗಂಟ್ಯಾಕ ಬರ್ತಾರಂತ ಸಾವ್ಕಾರ್ತಿ ಗಿರಿಜಮ್ಮನಿಂದ ಗೊತ್ತಾತು. ಅಂವ ಸಾಬ ಖಾದರ್ ಹತ್ರಾನೂ ಹೋಗಿದ್ನೊ ಅಂವ ನೋಡಿದ್ರ ಅವರಪ್ಪಗ ಏನೊ ಎದಿ ಸಮಸ್ಯೆ ಅಂತ ಅದ್ಕ ಅವನು ಐವತ್ತು ಸಾವ್ರ ಸಾಲ ಮಾಡ್ಯಾನಂತಪಾ ಸಾಕ್ಯಾಗಿತೆಪಾ ನನಗಂತೂ ರೊಕ್ಕ ನೋಡಿದ್ರಾ ಎಲ್ಲೂ ಸಿಗಾವಲ್ದೂ. ಅಲ್ಲೋ ನಮ್ಮಂತವ್ರಿಗ್ಯಾ ಯಾರ್ಯಾದರಪಾ ಹಿಂಗಾದ್ರ ಯಾವ್ದಾದರೂ ಮರಕ್ಕ ಉರ್ಲ ಗತಿ ನೋಡ ನಮಗ ಅಂತ ತನ್ನೆಲ್ಲಾ ನೋವುಗಳನ್ನು ಹೆಳಿಕೊಂಡ” ಅದಕ್ಕ ರಾಮಣ್ಣ “ಅಲ್ಲೋ ಜಗದೀಶಪ್ಪ ನೀನರ ಸ್ವಲ್ಪ ಓದ್ಕೆಂಡಿ ನನಗ ಓದ್ಕಂಡುರೂ ಇಲ್ಲ ಬುದ್ದಿ ಹೇಳರೂ ಇಲ್ಲರದು ಒಂದ್ ಸಮಸ್ಯಾನ ಬುಡು” ಅಂದ.
ಅಷ್ಟೊತ್ತಿಗೆ ಗಂಟೆಯ ಮುಳ್ಳು 7 ರ ಸನಿಹ ಹೋಗಿತ್ತು. ಇತ್ತ ಮನೆ ಕಡೆ ಜಗದೀಶ ಹೆಜ್ಜೆ ಹಾಕುತ್ತಾ ಮನೆ ತಲುಪಿದ ಮುಖ ತೊಳೆದು ಸಾಹುಕಾರ್ರ ಮನೆ ಹತ್ರ ಹೋಗಿ ಸಾಹುಕಾರನ್ನು ಕೇಳಿದಾಗ, “ಸಾಹುಕಾರ ಅಲ್ಲಲೇ ಜಗದೀಶ್ಯ ನಾನು ಹೇಳಿದೆ ನಿನಗ ಅಂವ ದುಷ್ಟ ಅದನ ಸುಮ್ನ ಬುಟ್ಬುಡು ಅಂತ ಕೇಳಿದ್ಯಾ ನನ್ನ ಮಾತ ಕೇಳ್ಲಲ್ಲ ಅದಕ್ಕ ನೋಡು ನಿನಗ ಈ ಗತಿ, ಅಲ್ಲಲೇ ಅಸ್ಟು ಸಂದಾಕ ಓದ್ತೈತಿ ಮಗಳು ಅವಳ್ನ ಚೆನ್ನಾಗಿ ಓದ್ಸೋ ಕೆಲ್ಸನರ ಮಾಡಲೇ ! ಆತು ಎಷ್ಟು ಬೇಕ ಹೇಳ ರೊಕ್ಕ ಕೊಡ್ತೇನೆ ಆದರೆ ಬೆಳೆ ಬಂದ ಮ್ಯಾಲ ತೀರ್ಸಬೇಕ ನೋಡ.” ಹಣ ತೆಗೆದುಕೊಂಡು ಮನೆಗೆ ಬಂದ ಜಗದೀಶ ಹೆಂಡತಿ ಮಾಡಿಟ್ಟಿದ್ದ ರೊಟ್ಟಿ ಕೆಂಪಿಂಡಿ ಬುತ್ತಿ ಕಟ್ಕಂಡು ಬೆಂಗಳೂರು ಬಸ್ಸಿಗೆ ಹತ್ತಿದಾಗ ರಾತ್ರಿ 10.00 ಗಂಟೆ ಆಗಿತ್ತು. ಬಸ್ಸಲ್ಲಿ ಹೋಗೋವಾಗ ಎಲ್ಲಾ ಮಗಳದಾ ಚಿಂತೆ ಮಾಡಿಕೊಳ್ಳುತ್ತಲೇ ಹೋದ ಜಗದೀಶ ಬೆಳಗ್ಗೆ 7.00 ಗಂಟೆ ಆಗಿತ್ತು ಬೆಂಗಳೂರು ತಲುಪಿದಾಗ ಅಲ್ಲೇ ಬಸ್‍ಸ್ಟ್ಯಾಂಡ್‍ನಲ್ಲೇ ತನ್ನ ನಿತ್ಯ ಕರ್ಮ ಸ್ನಾನ ಮುಗಿಸಿದ ರೋಡಿನಲ್ಲಿ ನಡೆಯುತ್ತಾ, ಆ ವಾಹನಗಳು, ಆ ಗಲಿಬಿಲಿ ಕಂಡು, ಆ ಗದ್ದಲ, ಗೌಜು ಎಲ್ಲವನ್ನೂ ನೋಡಿ ರೋಸಿ ಹೋದ. ಅವನನ್ನು ನೋಡಿದ ಟಾರು ರೋಡು ಕೂಡಾ ಬೈಯ್ಯಲಾರಂಭಿಸಿತು ಇವನ ಮುಖವನ್ನು ನೋಡಿ, ಆದರೂ ವಿಧಾನಸೌಧದ ಗೇಟಿಗೆ ಬಂದು ನಿಂತ. ಅಲ್ಲಿ ನೋಡಿದರೆ ಯಾರನ್ನೂ ಒಳಗಡೆ ಬಿಡುತ್ತಿಲ್ಲ. ಇಂವ ನೋಡಿದರೆ ಆ ವಿಧಾನಸೌಧದ ಗೇಟಿಗೆ ಮುಖ ಕೊಟ್ಟು ಆ ನಿರಾಳ ಭಾವನೆಯಿಂದ ನೋಡುತ್ತಾ, ಅಲ್ಲೇ ಕೂತ. ಅಷ್ಟರಲ್ಲೇ ಅವನ ಪಿ.ಯು.ಸಿ. ಸ್ನೇಹಿತನಾಗಿದ್ದ ಲೋಕೇಶ್ ನೆನೆದ ಹಾಗೆ ದೇವರು ಬಂದ ಹಾಗೆ ಬಂದೇ ಬಿಟ್ಟ. ಇವನನ್ನು ಕಂಡು “ಹೇ ಜಗದೀಶ್ ಏನ್ ಮಾಡ್ತಾ ಇದ್ದೀಯೊ ಇಲ್ಲಿ” ಅಂದ “ನೋಡಪಾ ಹಿಂಗ ನನ್ನ ಹೊಲಾನ ಬೇರ್ಯಾವ ರೊಕ್ಕ ಕೊಟ್ಟು ಅವನ ನೊಂದಣಿ ಮಾಡ್ಸಿಕೊಂಡಾನ ಅದಕ ಸಿಎಂರನ್ನ ಕಾಣೋಕಂತ ಬಂದೀನಿ ನೋಡು”ಅಂದ.
ಲೋಕೇಶ್ ಇವನ ಸ್ನೇಹ ಬಹಳ ಹಳೆಯದು ಕಾಲೇಜಿನಲ್ಲಿ ಓದ್ತಾ ಇದ್ದಾಗ ಇಬ್ಬರೂ ಅಭ್ಯಾಯಮಾನವಾದ ಸ್ನೇಹಿತರಾಗಿದ್ದರು. ಬದುಕಿನ ಅನಿವಾರ್ಯತೆಗಳಿಗಾಗಿ ಲೋಕೇಶ್ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದು ಡಿಗ್ರಿ ಮುಗಿಸಿ ವಿಧಾನಸೌಧದಲ್ಲಿ ಗುಮಾಸ್ತನಾಗಿದ್ದ. ಆದ್ದರಿಂದ ಜಗದೀಶನನ್ನ ವಿಧಾನಸೌಧದ ಒಳಗೆ ಬಿಡಿಸಲು ಅಷ್ಟೇನೂ ಕಷ್ಟ ಆಗಲಿಲ್ಲ. ಒಳಗೆ ಕರೆದುಕೊಂಡು ಹೋಗಿ ತನ್ನ ಕಚೇರಿಯಲ್ಲಿ ಕುಳ್ಳಿರಿಸಿ ಸಿಎಂ ಬಂದರೆ ನಾನು ತಿಳಿಸುತ್ತೇನೆ ಇಲ್ಲೇ ಇರು ಎಂದು ತಾನು ತನ್ನ ಕಚೇರಿ ಕೆಲಸಗಳಲ್ಲಿ ತಲ್ಲೀಲನಾದ. ಅಷ್ಟರಲ್ಲೇ ಸಿಎಂ ಬಂದರು ಎಂಬ ಮಾಹಿತಿ ಲೋಕೇಶನಿಗೆ ತಿಳಿಯುತ್ತಿದ್ದಂತೆ ತನ್ನ ಸ್ನೇಹಿತ ಜಗದೀಶನನ್ನು ಕರೆದುಕೊಂಡು ಹೋಗಿ ಸಿಎಂರನ್ನ ಭೇಟಿ ಮಾಡಿಸಿದ. ತಾನು ಅನುಭವಿಸಿದ ನೋವನ್ನೆಲ್ಲಾ ಸಿಎಂ ಹತ್ತಿರ ಹೇಳಿಕೊಂಡ ಇದನ್ನು ಕೇಳಿದ ಸಿಎಂ ಕೂಡಲೇ ಜಿಲ್ಲಾಧಿಕಾರಿಗೆ ಕರೆಮಾಡಿ “ಇವರ ಸಮಸ್ಯೆನಾ ಬಗೆಹರಿಸಿ ನನಗೆ ವರದಿ ಮಾಡಿರಿ” ಎಂಬ ಮಾತು ಜಗದೀಶನಿಗೆ ಸ್ವಲ್ಪ ಸಮಾಧಾನವಾಯಿತು. ಅಷ್ಟರಲ್ಲೇ ಸಂಜೆ 5.00 ಗಂಟೆ ಆಗಿತ್ತು. ಆಗ ಲೋಕೇಶ್ ತನ್ನ ಮನೆಗೆಂದು ಕರೆದುಕೊಂಡು ಹೋದ.
ಮನೆಯಲ್ಲಿ ಲೋಕೇಶನ ಹೆಂಡತಿ, ಮಗು ಎಲ್ಲರೂ ಇದ್ದರು. ಅವರಿಗೆ ಇವನು ನನ್ನ ಗೆಳೆಯ, ಇವನು ನಾನೂ ಪಿ.ಯು.ಸಿ. ಓದುತ್ತಿದ್ದಾಗ ಆಪ್ತ ಸ್ನೇಹಿತರಾಗಿದ್ದೆವು ಎಂದು ಹೇಳಿ 25 ವರ್ಷಗಳ ನಂತರ ಇವನನ್ನು ನೋಡುತ್ತಿರುವೆ ಎಂದು ಆತನ ಪರಿಚಯವನ್ನು ಮಾಡಿಸಿದ. ಇವನ ಆ ಪ್ರೀತಿ ಇವನಿಗೆ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್‍ನ ಹಾಗೆ ಸಿಕ್ಕಿತ್ತು. ಇಂತಹ ಮಹಾನಗರದಲ್ಲಿ ಯಾರಾದರೂ ಪರಿಚಯಸ್ತರು ಇದ್ದರೆ ಒಳ್ಳೆಯದು ಎನ್ನುವುದಕ್ಕೆ ಇದೇ ಸಾಕ್ಷಿ ಸಾಕಾಗಿತ್ತು ಜಗದೀಶನಿಗೆ. ನಂತರ ಲೋಕೇಶ ಹೆಂಡಿತಿಗೆ ಶ್ಯಾವಿಗೆ ಪಾಯಸದ ಅಡುಗೆ ಮಾಡಲು ಹೇಳಿ, ಗೆಳೆಯರಿಬ್ಬರೂ ಮೇಲಿನ ಕೊಠಡಿಗೆ ಹೋದರು. ಇಬ್ಬರೂ ತಾವು ಅನುಭವಿಸಿದ ನೆನಪುಗಳನ್ನು ಮೆಲುಕುಹಾಕುತ್ತಾ, ಶ್ಯಾಮಣ್ಣ ಮೇಷ್ಟ್ರುಗಳ ಒದೆಗಳು, ಗಿರಿಯನಾಯ್ಕನ ತೋಟದಲ್ಲಿ ಮಾವಿನಹಣ್ಣು ಕದ್ದು ಸಿಕ್ಕಿಬಿದ್ದು ಮನೆಯಲ್ಲಿ ಹೊಡೆತ ತಿಂದದ್ದು, ಬುಗುರಿ ಆಡಿದ್ದು, ಗೋಲಿ ಆಟದಲ್ಲಿ ಜಗಳ ಆಡಿದ್ದು, ಶಾನುಭೋಗರ ಹೊಲದಾಗ ಈಜು ಕಲಿಯಾಕ ಹೋಗಿ ಆಸ್ಪತ್ರೆ ಸೇರಿದ್ದು ಹೀಗೆ ಇನ್ನೂ ಹತ್ತು ಹಲವಾರು ನೆನಪುಗಳನ್ನು ಮೆಲುಕು ಹಾಕುತ್ತಾ ಈ ರೀತಿಯ ಹಳ್ಳಿಯ ಜೀವನವನ್ನು ಪಡೆದ ನಾವೇ ಧನ್ಯರು ಮತ್ತೇ ಇದನ್ನು ಮರಳಿಸಲು ಸಾಧ್ಯವಿಲ್ಲ ಎನ್ನುವುದೇ ಇವರಿಬ್ಬರ ವೇದನೆಯಾಗಿತ್ತು. ಇನ್ನೂ ಇವರು ದೀರ್ಘ ಮಾತುಕತೆಗೆ ಇಳಿದಿದ್ದರಿಂದ ಸಮಯ ಬೇಗನೆ 10.30 ಆಯಿತು. ಕೂಡಲೇ ಲೋಕೇಶನ ಹೆಂಡತಿ ಇಬ್ಬರಿಗೂ ಕರೆದು ಊಟಕ್ಕೆ ಬಡಿಸಿದಳು. ಊಟ ಆದ ನಂತರ ಜಗದೀಶ ದೋಸ್ತ “ನಾನು ಬರ್ತೀನಪಾ ಮತ್ತ ಸಿಗ್ತೀನಿ ಈಗ ಕಳ್ಸಿಕೊಡು” ಅಂದ “ಇಷ್ಟೊತ್ನಾಗ ಹೆಂಗ್ ಹೋಗ್ತೀಯೋ ಹೆಂಗು ನೀನು ಈಗ ಊರಿಗೆ ಹೋಗಕ ಆಗಲ್ಲ ಮಗಳನ್ನ ಮಾತಾಡಿಸ್ಕೊಂಡಾ ಹೋಗ್ಬೇಕ ಅಂದಕ ಒಂದ್ ಕೆಲ್ಸ ಮಾಡು ಇಲ್ಲೇ ಮಲಗು ಬೆಳಗ್ಗೆ ಎದ್ದು ನಾಷ್ಟ ಮಾಡಿ ಹೋಗುಅಂತೆ ಅಂದ” ಇವರ ಪ್ರೀತಿಯ ನಿರಾಕರಿಸುವುದಾದರೂ ಹೇಗೆ ? ಅದು ಅಸಾಧ್ಯವಾಗಿದ್ದರಿಂದ ಅಲ್ಲಿಯೇ ಉಳಿದು ಬೆಳಗ್ಗೆ ಎಲ್ಲಾ ಕಾರ್ಯಗಳನ್ನು ಮುಗಿಸಿ ತನ್ನ ಮಗಳು ಓದುತ್ತಿರುವ ಕಾಲೇಜಿಗೆ ಬಂದ.
ಕಾಲೇಜಿನಲ್ಲಿ ನೋಡಿದರೆ ಎಲ್ಲರೂ ಹುಡುಗರು ಹುಡುಗೀರು ಅನ್ನದೇ ಎಲ್ಲರೂ ಸಿಗರೇಟ್ ಸೇದ್ತಾ ಇದ್ದದ್ದನ್ನು ಕಂಡು ಇವನಿಗೆ ನಿಬ್ಬೆರಗಾಯಿತು. ಇದೇನು ನಾನು ಕಾಲೇಜಿಗೆ ಬಂದಿದ್ದೀನಾ ? ಇಲ್ಲಾ ಯಾವದಾದರೂ ಬೇರೆ ಕಡೆ ಬಂದಿದ್ದೀನಾ ಎನುವ ಅನುಮಾನ ಶುರುವಾಯಿತು. ಆದರೂ ಕಾಲೇಜಿನ ಬೋರ್ಡ್ ನೋಡಿ ನಾನು ಸರಿಯಾಗೇ ಇದ್ದೀನಿ ಅಂತ ಸಮಾಧಾನ ಆಯ್ತು. ಅಲ್ಲಿ ಹೋಗಿ ಕೇಳಿದ. ನಯನ ಅಂತ ನೋಡಿ ಎಷ್ಟನೇ ರೂಂನಲ್ಲಿದ್ದಾರೆ ? ಎಂದು ಆಗ ಇವನು ಬಂದದ್ದೋ ಆ ಮಗುವಿನ ಮನಸಿಗೆ ಕೇಳಿತೋ ಏನೋ ಎದುರಿಗೇ ಮಗಳು ನಯನ ನಿಂತಿದ್ದಾಳೆ. ಇವನ ಸಂತೋಷಕ್ಕೆ ಪಾರವೇ ಇರಲಿಲ್ಲ. “ಹೇಗಿದ್ದೀ ಮಗಾ ಚೊಲೊ ಅದೀಯಿಲ್ಲೊ” ಅಂದ. “ಅಲ್ಲಪ್ಪ ನಿನಗೆ ಸ್ವಲ್ಪನಾದರೂ ಕಾಮನ್‍ಸೆನ್ಸ್ ಇಲ್ವಾ ಹೀಗಾ ಬರೋದು ಕಾಲೇಜಿಗೆ ಹೀಗೆ ಬಂದ್ರೆ ನನಗೆ ಅವಮಾನ ಆಗುತ್ತೆ ಅಂತ ಗೊತ್ತಾಗಲ್ವ ನಿಂಗೆ” ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿದಳು. ಇವನಿಗೆ ಮನಸಿನ ದುಃಖ ತಡೆದು ತಡೆದು ಅದು ಕಾರ್ಮೋಡವಾಗಿತ್ತು ಮಳೆಯನ್ನೇ ಸುರಿಸಬೇಕು ಅಂದರೂ ಅದನ್ನೆಲ್ಲಾ ಅದುಮಿಟ್ಟುಕೊಂಡು ಸಾಗರವಾಗಿದ್ದ ಜಗದೀಶ. “ಏನೂ ಇಲ್ಲ ಮಗಳೇ ಬೆಂಗ್ಳೂರಿಗೆ ಬಂದಿದ್ನಲ್ಲ ಅದಕ ನಿನ್ನ ಮಾತಾಡಿಸ್ಕೊಂಡು ಹೋಗೋಣಾಂತ ಬಂದೆ, ಬಂದದ್ದಕ್ಕ ಒಳ್ಳೆ ಮರ್ಯಾದೆ ಕೊಟ್ಟೆ ಬಿಡು ಇನ್ನು ಬರೋದಿಲ್ಲ, ಇಗೋ ತಗೋ ನಿಮ್ಮವ್ವ ನಿನಗಾಂತ ರೊಟ್ಟಿ, ಕೆಂಪಿಂಡಿ ಮಾಡ್ಯಾಳ” ತಿಂದು ಸುಖವಾಗಿರು ಎಂದು ಭಾರವಾದ ಹೆಜ್ಜೆಗಳ ಹಾಕುತ್ತಾ ಊರ ಕಡೆಗೆ ಹೊರಟ ಜಗದೀಶ…
–ಕೊಟ್ರೇಶ್ ಕೊಟ್ಟೂರು