ಸುಮಾರು ಹನ್ನೆರಡು ವರ್ಷಗಳೇ ಕಳೆದಿರಬೇಕು. ಅದರೂ ಈ ಘಟನೆ ಮಾತ್ರ ನನ್ನ ಮನಸಿನಲ್ಲಿ ಇಂದಿಗೂ ಹಸಿ ಹಸಿಯಾಗಿದೆ. ಹತ್ತನೇ ಕ್ಲಾಸಿನವರೆಗೂ ಚಾಮರಾಜನಗರದ ಅಜ್ಜಿಮನೆಯಲ್ಲಿ ಬೆಳೆದ ನಾನು ಆಗಷ್ಟೇ ಅಪ್ಪ,ಅಮ್ಮನನ್ನೂ, ಸ್ವಂತ ಹಳ್ಳಿಯನ್ನೂ, ಪಿಯುಸಿಯನ್ನೂ ಸೇರಿದ್ದೆ. ಸುತ್ತಮುತ್ತಲ ಹಳ್ಳಿಗಳಿಗೆ ಇದ್ದದ್ದು ಅದೊಂದೇ ದೇವಲಾಪುರದ ಪಿಯು ಕಾಲೇಜು. ಬುದ್ದಿವಂತರೂ, ಒಂದಷ್ಟು ಸಾಹಿತ್ಯಾಸಕ್ತಿಯೂ ಇದ್ದ ಸುತ್ತಲ ಹಳ್ಳಿ ಹುಡುಗ-ಹುಡುಗಿಯರಲ್ಲಿ ತುಂಬ ಜನ ಇದೇ ಬ್ಯಾಚಲ್ಲಿದ್ದರು. ಹೆಚ್ಚೆಂದರೆ 100 ಜನ ವಿಧ್ಯಾರ್ಥಿಗಳಿದ್ದ, ಎರಡೇ ಕ್ಲಾಸಿನ ಆ ಕಾಲೇಜಿನಲ್ಲಿ ನಾವು ಚರ್ಚಾಸ್ಪರ್ಧೆ ಮುಂತಾದವಕ್ಕೆ ದೀಪ ಬೆಳಗಿಸಿದ್ದೆವು.
ಈಗ ಬಿಡಿ, ಅರ್ಧಗಂಟೆಗೊಂದು ಬಸ್ಸಿದೆ. ಮನೆಮನೆಗೂ ಬೈಕು, ಕಾರುಗಳಿವೆ. ಆಗ ಹಾಗಿರಲಿಲ್ಲ. ಒಂದು ಬಸ್ ತಪ್ಪಿದರೆ ಇನ್ನು ಎರಡು ಮೂರು ಗಂಟೆ ಕಾಯಬೇಕಿತ್ತು. ದೇವಲಾಪುದಿಂದ ಮುಂದಿನ ನಾಕು ಕಿಲೋಮೀಟರ್ನಲ್ಲಿ ನಮ್ಮೂರು. ಅಲ್ಲೀವರೆಗೆ ನಡೆದುಬಿಟ್ಟರೆ ಕಿರಾಳು ಮಾರ್ಗವಾಗಿ ಬರೋ ಪ್ರೈವೇಟ್ ಬಸ್ಸಿನಲ್ಲಿ ಮುಂದಿನ ಊರುಗಳನ್ನ ತಲುಪಿಕೊಳ್ಳಬಹುದಿತ್ತು. ಸರಿ ನಾವೆಲ್ಲ ನಡಿಯೋಕೆ ಶುರು ಮಾಡಿದೆವು. ಜಮೀನುಗಳ ನಡುವೆ, ಹರಟೆ ಹೊಡಕೊಂಡು ನಾವು ಕಿಲೋ ಮೀಟರ್ ನಡೆದು ಆಯರಹಳ್ಳಿ ತಲುಪಾಯ್ತು.
ಬಸ್ಸ್ಟಾಂಡಿನಲಿ ನಿಂತವರನ್ನ “ಮನೆಗೆ ಬನ್ರೇ” ಅಂತ ಅತ್ಯುತ್ಸಾಹದಿಂದ ಕರೆದಿದ್ದೆ. ಬಸ್ ಬಂದ್ಬಿಟ್ರೆ ಬೇಡಪ್ಪ. ಅಂದರೂ, ಬಸ್ ಬರೋಕಿನ್ನು ಅರ್ಧಗಂಟೆ ಬೇಕು ಅಂತ ಒತ್ತಾಯಿಸಿ, ನಾಕೈದು ಗೆಳತಿಯರನ್ ಬಿಡದೇ ಕರಕೊಂಡು ಹೋದೆ. ಮನೆಗೆ ಬಂದದ್ದಾಯ್ತು. ಜ್ಯೂಸು ಕುಡಿದದ್ದಾಯ್ತು. “ಬಸ್ ಮಿಸ್ಸಾದ್ರೆ?” ಅನ್ನುವ ಆತುರದಿಂದ್ಲೇ ಹೊರಗೆ ಬಂದ್ರು. ಈ ಕಹಿ ಘಟನೆಗಾಗಿಯೋ ಎಂಬಂತೆ ಬೀದಿ ಹೆಂಗಸರೆಲ್ಲ ಪಾತ್ರೆ ಮಾರುವವನ ಸೈಕಲ್ ಸುತ್ತುವರೆದಿದ್ದರು. ಒಂದಿಬ್ಬರು ಗಂಡಸರೂ ಇದ್ದರು. ಇದ್ಯಾರು ಹುಡುಗೀರು? ಯಾಕ್ ಬಂದಿದ್ರು? ಯಾವೂರು? ಅಲ್ಯಾರ್ ಮಗಳು? ಅಂತ ಕೇಳುತ್ತಿದ್ದರು. ನನ್ನ ಗೆಳತಿಯರು ನಗುತ್ತಲೇ ಹದಿನಾರು, ಹುಳಿಮಾವು, ಮೂಡಳ್ಳಿ, ಬೊಕ್ಕಹಳ್ಳಿ ಅಂತ ಹೇಳುತ್ತಿದ್ದರು. ಬೊಕ್ಕಹಳ್ಳಿ ಅ್ನನುವ ಹೆಸರು ಕಿವಿಗೆ ಬೀಳುತ್ತಲೇ ಎಲ್ಲರ ಮುಖವೂ ಬದಲಾಗಿಹೋಯ್ತು. ಆ ಭಾಗಕ್ಕೆ ಹೊಸಬಳೂ, ಇನ್ನೂ ಚಿಕ್ಕವಳೂ ಆಗಿದ್ದ ನನಗೆ ಏನೂ ತಿಳಿಯಲಿಲ್ಲ. ಅಲ್ಲಿದ್ದ ಒಬ್ಬ ಗಂಡಸು( ವಿಧ್ಯಾವಂತನೇ!) ಯಾವ ಬೊಕ್ಕಳ್ಳಿ? ಹಳೆ ಬೊಕ್ಕಳ್ಳೀನಾ ಹೊಸ ಬೊಕ್ಕಳ್ಳೀನಾ? ಕೇಳಿದ. ಸುಷ್ಮಾ ಸಹಜವಾಗಿಯೇ ಹೊಸಬೊಕ್ಕಳ್ಲಿ ಅಂದಳು. ಅಷ್ಟರಲ್ಲಿ ಪ್ರೈವೇಟ್ ಬಸ್ ಹಾರ್ನ್ ಮಾಡಿತು, ಅವರೆಲ್ಲ ಬರ್ತೀವಿ ಅಂತ ಆತುರದಲ್ಲೇ ಹೇಳಿ ಹೋದರು.
ಓದ್ತೀವಿ ಅಂತ ಜಾತಿ ಗೀತಿ ಏನೂ ನೋಡಂಗಿಲ್ವ? ಹಟ್ಟಿ ಒಳಕೇ ಕರ್ಕಂಡೋಗ್ ಕೂರುಸ್ಕಳದ? ಆ ವಿಧ್ಯಾವಂತ ಶುರು ಮಾಡಿದ. ಪಾತ್ರೆ ಯಾಪಾರವನ್ನೂ ಮರ್ತು ಎಲ್ಲರೂ ನನಗೆ ಮುತ್ತಿಕೊಂಡರು. ನಮ್ಮಮ್ಮನಿಗೂ ನನ್ನ ಈ “ಅಪರಾಧ”ವನ್ನ ಮುಚ್ಚಿಹಾಕಲು ತೋಚದೇ. “ಅವಳಿಗ್ ಗೊತ್ತಾಗಿಲ್ಲ.” ಅಂತೇನೇನೋ ಹೇಳುತ್ತಿದ್ದರು. “ಗೊತ್ತಾಗದೇ ಹೋದ್ರೆ ಹೇಳಿಕೊಡಬೇಕು. ನೀವು ದೀಕ್ಷೆ ತಗಂಡು ದಿನಾ ಎರಡೊತ್ತು ಲಿಂಗ ಪೂಜೆ ಮಾಡೋರು, ಹೊಲಾರ್ನ ಅಟ್ಟಿಗ್ ನುಗ್ಗುಸ್ಕೊಂಡ್ರೆ ಸುದ್ದ ಎಲ್ಲಾಯ್ತು? ಅಂತೆಲ್ಲ ಘೋರ ಪಾಪದ ಹೊರೆ ಹೊರಿಸಿದರು. ನಾನಂತು ನಿಂತು ಅಳುತ್ತಿದ್ದೆ. ಅಮ್ಮನ ಅಸಹಾಯಕತೆ ಕೋಪಕ್ಕೆ ತಿರುಗಿತ್ತು. ಸುಷ್ಮಾ ಬಂದು ಹೋದದ್ದರ ಪರಿಹಾರಕ್ಕೆ ಒಬ್ಬೊಬ್ರೂ ಒಂದೊಂದು ಸೂತ್ರ ಹೇಳುತ್ತಿದ್ದರು. ಕಡೆಗೆ ಸಗಣಿಯಲ್ಲಿ ಇಡೀ ಮನೆ ಸಾರಿಸಿ, ಮಠದ ಸ್ವಾಮ್ಗಳ ಪಾದತೀರ್ಥ ಪ್ರೋಕ್ಷಣೆ ಮಾಡಿ ಅಂತ ಆ ವಿದ್ಯಾವಂತ ಆಗ್ರಹಿಸಿದ. ಆ ಕೆಲಸ ನಾನು ಮಾಡಬೇಕಿತ್ತು. ಅದೆಲ್ಲ ಮುಗಿಯುವವರೆಗೆ ಜಗ್ಗುವುದಿಲ್ಲವೆಂಬಂತೆ ಇಡೀ ಗುಂಪು ಜಗಲಿಗೆ ಅಂಟಿಕೊಂಡಿತ್ತು. ಮನೆ ಸಾರಿಸುತ್ತಾ “ಈಗ ಗನ್ ಸಿಕ್ಕರೆ ಈ ಒಬ್ಬೊಬ್ಬರನ್ನೂ ಶೂಟ್ ಮಾಡಿ ಬಿಸಾಕಿಬಿಡಬೇಕು” ಅನ್ನುವಷ್ಟು ರೋಷ ಉಕ್ಕುತ್ತಿದ್ದರೂ, ಆಡುವ ಧೈರ್ಯಸಾಲದೇ ಕೋಪ ಕಣ್ಣೀರಾಗಿತ್ತು. ಅಸಹಾಯಕತೆಯಿಂದ ಕುಗ್ಗಿಹೋಗಿದ್ದೆ.
ಮರುದಿನ ಕಾಲೇಜಿಗೆ ಹೋಗಿ ಎಲ್ಲರೊಂದಿಗೂ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಜಮೀನುಗಳ ಮಧ್ಯೆ ಇದ್ದ ಆ ಹಳ್ಳಿ ಕಾಲೇಜಿನ ಅಂಗಳದಲ್ಲಿ ಕೂತು, ನಾವೆಲ್ಲ ಈ ದೇಶದ ಇಂತ ಅನಿಷ್ಟಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆವು. ಇನ್ನೂ 16 ರ ಹರೆಯದ ನಮ್ಮ ಆಕ್ರೋಷ ಯಾರನ್ನೂ ಮುಟ್ಟಲಾರದ ಹತಾಶೆ ಬೇರೆ. “ ಶೂಟ್ ಮಾಡಿಬಿಡಬೇಕು” ಅಂತ ಪುನರುಚ್ಚರಿಸಿದ್ದೆ. ಎಲ್ಲರೂ ಅದೆಷ್ಟೇ ಸಮಾಧಾನ ಮಾಡಲೆತ್ನಿಸಿದರೂ..ಈ ಘಟನೆ, ಅದರ ಘಾಸಿಯಿಂದ ಹೊರಬರಲು ಸುಮಾರು ದಿನಗಳೇ ಹಿಡಿಯಿತು.
ಎರಡನೇ ಪಿಯುಸಿಯ ಆರಂಭದಲ್ಲಿದ್ದಾಗ ನಮ್ಮ ಮನೆಯಲ್ಲೊಂದು ಸಾವು ಸಂಭವಿಸಿತ್ತು.ಎಸ್ಸೆಸ್ಸೆಲ್ಸಿ ಓದುತ್ತಿದ್ದ ನನ್ನ ತಮ್ಮ ಆಕಸ್ಮಿಕ ಸಾವನ್ನಪ್ಪಿದ್ದ. ಪ್ರಾಯಕ್ಕೆ ಬಂದ ಒಬ್ಬನೇ ಮಗನ ಸಾವು ಇಡೀ ಊರನ್ನೇ ನಡುಗಿಸಿತ್ತು. ಮನೆಯೊಳಗೆ ನಿಲ್ಲದ ಆಕ್ರಂದನ. ಪ್ರತಿಭಾನ್ವಿತನೂ, ಜಿಲ್ಲೆಗೆಲ್ಲಾ ಪ್ರಸಿಧ್ದನೂ ಆಗಿದ್ದ ಅವನ ಕಡೆಯ ದರ್ಶನಕ್ಕೆ ಸುತ್ತಮುತ್ತಲ ಊರ ಜನ, ಸ್ಕೂಲು ಕಾಲೇಜುಗಳವರೆಲ್ಲ ಜಮಾಯಿಸಿದ್ದರು.
ಇದಾದ ಮರುದಿನದಿಂದಲೂ ಸುಮಾರು ಒಂದು ತಿಂಗಳು ಸುಷ್ಮಾ ದಿನವೂ ನಮ್ಮ ಮನೆಗೆ ಬರುತ್ತಿದ್ದಳು. ರೆಗುಲರ್ ಟೈಮಿಗಿಂತ ಮುಂಚಿತವಾಗಿ ಹೊರಟು, ನಮ್ಮೂರಲ್ಲಿ ಇಳಿದು ಆಮೇಲೆ ಇನ್ನೊಂದು ಬಸ್ಸತ್ತಿ ಕಾಲೇಜಿಗೆ ಹೋಗುತ್ತಿದ್ದಳು. ಯಾರೆಷ್ಟೇ ಕರೆದರೂ ಮನೆಯೊಳಗೆ ಬರುತ್ತಿರಲಿಲ್ಲ. ಜಗಲಿಯಲ್ಲಿ ಕೂತೇ ಮಾತಾಡಿಕೊಂಡು ಹೋಗುತ್ತಿದ್ದಳು. ನಾನು ಕಾಲೆಜಿಗೆ ಹೋಗುವವರೆಗೂ. ವಿದ್ಯಾವಂತ ಈ ದೃಶ್ಯವನ್ನೂ ದಿನವೂ ನೋಡುತ್ತಿದ್ದ. ನನ್ನ ಆಕ್ರೋಶದ ಗನ್ಗೆ ಬುಲೆಟ್ಟುಗಳಿರಲಿಲ್ಲ.
ಪಿಯು ಮುಗಿಸಿ, ಒಬ್ಬೊಬ್ಬರೂ ಒಂದೊಂದು ದಿಕ್ಕಾದೆವು. ಫೇಸ್ಬುಕ್ಕು, ಮೊಬೈಲಿರಲಿ ಲ್ಯಾಂಡ್ ಲೈನೂ ಅಪರೂಪಕ್ಕೊಬ್ಬರ ಮನೇಲಿದ್ದ ಕಾಲವದು. ಆಗಾಗ ಲೆಟರ್..ನಾನು ಮೈಸೂರಿನ ಕಾಲೇಜು ಸೇರಿದೆ (ಅದರದ್ದೂ ಒಂದು ಸಾಹಸ ಗಾಥೆ). ಅವರೆಲ್ಲ ನಂಜನಗುಡು ಅಲ್ಲಿ ಇಲ್ಲಿ, ಚೆಲ್ಲಾಪಿಲ್ಲಿಯಾದೆವು. ಕಾಲೇಜು, ಮೀಡಿಯಾ ಬೆಂಗಳೂರು, ಮದುವೆ.. ಊರಿನ ಸಂಪರ್ಕ ಕಡಿಮೆಯಾಯಿತು, “ಜಾತಸ್ಥ” ಗೆಳೆಯ- ಗೆಳತಿಯರು ಮಾತ್ರ ಯಾವ್ದಾದ್ರೂ ಮದುವೆಯಲ್ಲಿ ಸಿಗೋರು.
ಸುಷ್ಮಾ ಈಗ್ಗೆ ಮೂರು ವರ್ಷಗಳ ಹಿಂದೆ ಧಿಢೀರನೆ ಸಿಕ್ಕಿದಳು. ಎಲ್ಲಿ ಗೊತ್ತಾ? ಆಪರೇಷನ್ ಥಿಯೇಟರಿನಲ್ಲಿ ನನ್ನ ಕೂಸಿನ ಹೆರಿಗೆ ಸಮಯದಲ್ಲಿ. ಅವಳು ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಆಡಲು ಸಾವಿರ ಮಾತುಗಳಿತ್ತು. ಅನಸ್ತೇಶಿಯಾದಿಂದ ಎಚ್ಚರಗೊಂಡಾಗ “ ಇಲ್ಲಿ ನೋಡೇ ಗಂಡು ಮಗು” ಅಂತ ತೋರಿಸಿದ್ದು ಅವಳೇ. ಮಗ ಮತ್ತೆ ಹುಟ್ಟಿದ ಸಂತಸದಲ್ಲಿ ಕುಟುಂಬವೆಲ್ಲ ಸಂಭ್ರಮಿಸುತ್ತಿದ್ದರೆ, ಸುಷ್ಮಾ ಕೂಸಿಗೆ ಮೊದಲ ಸ್ನಾನ ಮಾಡಿಸಿ, ನನಗೆ ಹಾಲೂಡಿಸಲು ಸಹಾಯ ಮಾಡುತ್ತಿದ್ದಳು.
*****
ತುಂಬಾ ಚೆನ್ನಾಗಿ ಬರೆದಿದ್ದೀರಾ….. ಹೃದಯ ತುಂಬಿ ಬಂತು
thank u ani.
janara huchhu tanakke kone elli…
ಅಂತಿಮ ದೃಶ್ಯವನ್ನು ಬಹಳ ಸೂಚ್ಯವಾಗಿ ಹೇಳಿದ್ದೀರಾ! ಬರಹ ಇಷ್ಟವಾಯ್ತು.
ಅದರೊಳಗಿನ ವಿಷಯ ಬೇಸರ ಮೂಡಿಸಿತು.
ತುಂಬಾ ಇಷ್ಟವಾಯಿತು….ಕುಸುಮ…ಜೀ…..ಅಭಿನಂದನೆಗಳು….
ಸಮಾಜದೊಳಗಿದ್ದು ಸಮಾಜದ ಅನಿಷ್ಟಗಳಿಗೆ ಮಿಡಿಯುವ ಮನಸು ಇಲ್ಲಿ ಅನಾವರಣಗೊಂಡಿದೆ…. ಅಭಿನಂದನೆಗಳು