ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಜನ್ಮದಿನ: ಡಾ. ಅವರೆಕಾಡು ವಿಜಯ ಕುಮಾರ್

ಸ್ವಾಮಿ ವಿವೇಕಾನಂದರು 1863 ಜನವರಿ 12 ರಂದು ಕಲ್ಕತ್ತಾ ನಗರದಲ್ಲಿ ಜನಿಸಿದರು. ನರೇಂದ್ರನಾಥ ದತ್ತ ಎಂಬುದು ಇವರ ಹುಟ್ಟಿದ ಹೆಸರು. ಕಾಲಕ್ರಮೇಣ ಅದು ಬದಲಾಗಿ ವಿವೇಕನಂದವಾಯಿತು. ತಂದೆ ವಿಶ್ವನಾಥ ದತ್ತ ಇವರು ಕಲ್ಕತ್ತದ ಉಚ್ಚನ್ಯಾಯಾಲಯದಲ್ಲಿ ಅಟಾರ್ನಿಯಾಗಿ ಸೇವೆಸಲ್ಲಿಸುತ್ತಿದ್ದರು. ತಾಯಿ ಭುವನೇಶ್ವರಿ ದೇವಿ. ಅಜ್ಜ ದುರ್ಗಾ ಚರಣ್ ದತ್ತ, ಇವರು ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯ ಸಾಹಿತಿಯಾಗಿದ್ದರು. ತನ್ನ 25ನೇ ವಯಸ್ಸಿನಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಕೊಲ್ಕತ್ತ ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಶಿಕ್ಷಣವನ್ನು ಪಡೆದರು. 1884 ರಲ್ಲಿ ಬಿ. ಎ. , ಪದವಿಯನ್ನು ಪಡೆದರು. ವಿದ್ಯಾರ್ಥಿದೆಸೆಯಲ್ಲಿಯೇ ಸಾಹಿತ್ಯ, ಆಧ್ಯಾತ್ಮ, ಸಾಮಾಜಿಕ ಚಿಂತನೆಗಳ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದರು. 1861ರಲ್ಲಿ ಹರ್ಬರ್ಟ್ ಸ್ಪೆನ್ಸರ್ ಅವರ ‘ಎಜುಕೇಶನ್’ ಕೃತಿಯನ್ನು ಬೆಂಗಾಳಿ ಭಾಷೆಗೆ ಭಾಷಾಂತರ ಮಾಡಿದ್ದಾರೆ. ಮೂಲತಃವಾಗಿ ಬ್ರಹ್ಮಸಮಾಜ ಜೊತೆಗೆ ಗುರು ರಾಮಕೃಷ್ಣ ಪರಮಹಂಸರ ಸಂಸ್ಕೃತಿ ಚಿಂತನೆಗಳಿಂದ ಪ್ರೇರೇಪಿತರಾಗಿದ್ದರು.

1984 ರಲ್ಲಿ ಭಾರತ ಸರ್ಕಾರ ಜನವರಿ 12 ದಿನವನ್ನು ‘ರಾಷ್ಟ್ರೀಯ ಯುವದಿನ’ ವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಅದರಂತೆಯೇ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಇವರ ಹೆಸರು ಕೇಳಿದರೆ ಸಾಕು ಮೈ ರೋಮಾಂಚನಗೊಳ್ಳುತ್ತದೆ. ಕಾರಣ ದೇಹದ ಕಣಕಣದಲ್ಲೂ ದೇಶಭಕ್ತಿ ತುಂಬಿಕೊಂಡಿದ್ದ ಮಹಾನ್ ಚೇತನ. ಭಾರತ ದೇಶದ ವಿಶೇಷತೆಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಇವರದು. ‘ ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂದು ಯುವಕರಿಗೆ ಕರೆಕೊಟ್ಟ ವಿವೇಕಾನಂದರು ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಯುವ ಶಕ್ತಿಗಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬ ಆಶಾಭಾವನೆಯನ್ನು ಹೊಂದಿದ್ದರು. ಯುವಕರು ಹೇಡಿಗಳಾಗಬಾರದು, ನೀವು ಎಂದು ಪರಾವಲಂಬಿಗಳಲ್ಲ, ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂದು ಯುವಜನತೆಗೆ ಸಂದೇಶವನ್ನು ನೀಡಿ ಯುವಮನಸ್ಸುಗಳನ್ನು ಎಚ್ಚರಿಸುತ್ತಿದ್ದರು. ಯುವಕರು ಮಾನಸಿಕ, ದೈಹಿಕ, ಆಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದು. ವಿವೇಕಾನಂದರು ತಮ್ಮ ಶಕ್ತಿಯುತವಾದ ವ್ಯಕ್ತಿತ್ವದ ಮೂಲಕ ಅ ಪೂರ್ವ ವಾಗ್ಮಿಯಾಗಿ, ಪ್ರಚೋದನಾತ್ಮಕ ಬರವಣಿಗೆಯ ಮೂಲಕ ರಾಷ್ಟ್ರ ಚೇತನವನ್ನು ಜಾಗೃತಿಗೊಳಿಸಿ, ಯುವಜನತೆಯಲ್ಲಿ ಉತ್ಸಾಹ ವನ್ನು ಕೆರಳಿಸಿ, ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿ, ಸ್ವತಂತ್ರ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿದರು.

ಆಧುನಿಕ ಭಾರತ ಕಂಡ ಅಪ್ರತಿಮ ದೇಶಭಕ್ತ ಇವರು. ಯುವಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆಗಳು, ಸಂದೇಶಗಳು, ಜಾಗೃತಿ ಭಾಷಣಗಳು ಎಂದೆಂದೂ ಪ್ರಸ್ತುತ. ಏಕೆಂದರೆ ಇವರ ಜೀವನ ಸಂದೇಶಗಳಲ್ಲಿ ವಿಶೇಷವಾಗಿ ಯುವಜನತೆಯಲ್ಲಿ ಪ್ರಭಾವಬೀರಿ, ಬಾಳು ಬೆಳಗಿಸುವ ಅಂಶಗಳಿರುತ್ತಿದ್ದವು. ಈ ಕಾರಣಕ್ಕಾಗಿಯೇ ಸ್ವಾಮಿ ವಿವೇಕಾನಂದರು ಯುವಜನರ ಆದರ್ಶ ಎಂದು ಇತಿಹಾಸದಲ್ಲಿ ಗುರುತಿಸಲಾಗಿದೆ. ‘ ನೀವು ನಿಮ್ಮಲ್ಲಿ ನಂಬಿಕೆ ಬೆಳೆಸಿಕೊಳ್ಳದ ಹೊರತು ದೇವರಲ್ಲಿ ನಂಬಿಕೆ ಬೆಳೆಸಿಕೊಳ್ಳಲು ಸಾಧ್ಯವಿಲ್ಲ’. ಈ ಬಗೆಯ ದಿವ್ಯ ವಾಣಿಯನ್ನು ಸಮಾಜಕ್ಕೆ ನೀಡಿದ ಹಿರಿಮೆ ಇವರದು. ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರ ಜ್ಞಾನದ ಬೆಳಕಿನಲ್ಲಿ ಬೆಳೆದ ವಿವೇಕಾನಂದರು ನಂತರ ಯುವ ಜನರ ಪಾಲಿನ ಕಣ್ಮಣಿಯಾಗಿ ರೂಪುಗೊಂಡರು. ಇವರು ಬೆಳಗಿದ ಜ್ಞಾನದ ದೀವಿಗೆ ಜಗತ್ತಿನ ಅದೆಷ್ಟು ಯುವಕ-ಯುವತಿಯರ ಬದುಕಿನಲ್ಲಿ ಹೊಸ ಚೈತನ್ಯದ ಚಿಲುಮೆಯನ್ನು ಹುಟ್ಟಿಸಿದೆ.

ಸ್ವಾಮಿ ವಿವೇಕಾನಂದರು ಧಾರ್ಮಿಕ ಮೂಲಭೂತವಾದಿ ಆಗಿರಲಿಲ್ಲ. ಬದಲಾಗಿ ವಿರೋಧಿಯಾಗಿದ್ದರು. ಸಮಾಜದಲ್ಲಿ ಜಾತಿವಾದ ಮತ್ತು ಕೋಮುವಾದಗಳಿಗೆ ಪ್ರತಿರೋಧ ಒಡ್ಡುತ್ತಿದ್ದರು. ದೈಹಿಕ ಹಸಿವನ್ನು ನಿವಾರಿಸುವುದು ಅವರ ಮೊದಲ ಸಾಮಾಜಿಕ ಆದ್ಯತೆಯಾಗಿತ್ತು. ಮುಂದೆ ಜಾತಿ ಧರ್ಮ ವಿಷಯಗಳಿಗೆ ಹೋಲಿಸಿದರೆ ಬಡವರ, ದೀನ – ದಲಿತರ, ಹಿಂದುಳಿದ ವರ್ಗಗಳ ಬಗೆಗೆ ಅತೀವ ಕಾಳಜಿಯನ್ನ ಹೊಂದಿದ್ದರು. ಈ ಕಾರಣದಿಂದಲೇ ಅವರು ಜಾತಿ ಮತ್ತು ವರ್ಗ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರು. ಇವುಗಳಿಗೆ ಪೂರಕವಾದಂತೆ ಭವ್ಯ ಭಾರತದ ಮುಂದಿನ ಸಮಾಜ ‘ ಕ್ರಾಂತಿಯ ಅರುಣೋದಯ’ ಎಂದು ಕರೆದಿದ್ದರು. ಈ ನೆಲೆಯಲ್ಲಿ ಅವರು ಏಕಧರ್ಮ ಶ್ರೇಷ್ಠತೆ ಮತ್ತು ಏಕ ಧರ್ಮ ವಿಸ್ತರಣೆಯು ಜೀವ ವಿರೋಧವೆಂದು ಭಾವಿಸಿದ್ದರು. 1892ರ ಸೆಪ್ಟೆಂಬರ್ 11 ಸೋಮವಾರದಂದು ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತಾ ಅಮೆರಿಕದ ಸಹೋದರ ಮತ್ತು ಸಹೋದರಿಯರೇ ಎಂದು ಭಾಷಣವನ್ನು ಆರಂಭ ಮಾಡುವ ಮೂಲಕ ಪಾಶ್ಚಿಮಾತ್ಯರ ಕಣ್ಣಲ್ಲಿ ಭಾರತದ ಕೀರ್ತಿಯನ್ನು ಎತ್ತಿ ಹಿಡಿದ ದೇಶಪ್ರೇಮಿ. ಅಂದು ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕೃತಿಯ ಸಿರಿವಂತಿಕೆ, ಭಾರತದ ಧರ್ಮ, ಭಾರತದ ಜನರಜ್ಞಾನ ಇವೆಲ್ಲದರ ವಿರಾಟ ಸ್ವರೂಪವನ್ನು ಅನಾವರಣಗೊಳಿಸಿದ್ದ ಕೀರ್ತಿ ಇವರದು. ಚಿಕಾಗೋ ವಿಶ್ವ ಧರ್ಮ ಸಮ್ಮೇಳನದ ಭಾಷಣದಲ್ಲಿ ಭಾರತದ ಸನಾತನ ಧರ್ಮದ ಹಿರಿಮೆಯನ್ನು ವಿಶ್ವಕ್ಕೆ ತಿಳಿಸಿ, ವಿಶ್ವ ದಾದ್ಯಂತ ಪ್ರಸಿದ್ಧರಾದರು. ಈ ಸಮ್ಮೇಳನದ ನಂತರ ಅಮೆರಿಕ, ಇಂಗ್ಲೆಂಡ್, ಯುರೋಪ, ಭಾರತದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ, ಭಾಷಣದ ಬಿತ್ತಿಪತ್ರಗಳು, ಸಮ್ಮೇಳನದ ಚರ್ಚೆಗಳು ಇಂದಿಗೂ ಪರಮಾರ್ಶನಕ್ಕೆ ಪ್ರಮುಖವಾಗಿವೆ.

ರವೀಂದ್ರನಾಥ ಟ್ಯಾಗೋರ್ ಅವರು ಭಾರತವನ್ನು ತಿಳಿಯಬೇಕೆಂದರೆ ‘ ಸ್ವಾಮಿ ವಿವೇಕಾನಂದರ’ ಬಗ್ಗೆ ಓದಿ ಎಂದು ಹೇಳಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಸ್ವಾಮಿ ವಿವೇಕಾನಂದರು ‘ ಮಾನವತಾಮಿತ್ರ’ ಆಗಿದ್ದರು ಎಂದು ವಿಶ್ಲೇಷಿಸಿದ್ದಾರೆ. ಶ್ರೀಸಾಮಾನ್ಯರಲ್ಲಿ ಸ್ವತಂತ್ರ ಪ್ರವೃತ್ತಿಯನ್ನು ಬೆಳೆಸಲು ಯಾವಾಗಲೂ ಕರೆ ನೀಡುತ್ತಿದ್ದರು. ಅದರಂತೆ ಮಕ್ಕಳಿಗೆ ಶಿಕ್ಷಣ ನೀಡುವಾಗಲೂ ಸ್ವತಂತ್ರವಾಗಿ ಯೋಚಿಸಲು ಪ್ರೋತ್ಸಾಹಿಸಬೇಕು ಎನ್ನುತ್ತಿದ್ದರು. ಸ್ವತಂತ್ರವಾದ ಆಲೋಚನೆಯೇ ಭಾರತ ದೇಶಕ್ಕೆ ನಾಂದಿಯಾಗುತ್ತದೆ ಎಂದು ನಂಬಿದ್ದರು.

‘ ಯಾರು ನಿಮಗೆ ಕಲಿಸಲಾರರು. ಯಾರು ನಿಮ್ಮನ್ನು ಆಧ್ಯಾತ್ಮಿಕ ವ್ಯಕ್ತಿಗಳನ್ನಾಗಿ ಮಾಡಲಾರರು. ನಿಮಗೆ ನೀವೇ ಗುರುಗಳು. ನಿಮ್ಮ ಆತ್ಮ ಹೊರತುಪಡಿಸಿ ಬೇರೆ ಯಾವ ಗುರುವೂ ಇಲ್ಲ’. ಎಂಬ ಸಂದೇಶವನ್ನು ಸಾರುತ್ತಿದ್ದರು. ಭಾರತದ ರಾಷ್ಟ್ರಪ್ರೇಮ, ಸಂಸ್ಕೃತಿಯ ಆಳವಾದ ಜ್ಞಾನವನ್ನು ಹೊಂದಿದ್ದ ವಿವೇಕಾನಂದರು ಕಾಲ್ನಡಿಗೆಯಲ್ಲಿ ದೇಶದ ಮೂಲೆ ಮೂಲೆ ತಿರುಗಿ ಎಲ್ಲರಿಗೂ ಸ್ಫೂರ್ತಿ ತುಂಬುತ್ತಿದ್ದರು. ಬದುಕಿದ್ದ 39 ವರ್ಷಗಳ ಅಲ್ಪ ಅವಧಿಯಲ್ಲಿ ಅಗಣಿತವಾದದ್ದನ್ನು ಸಾಧಿಸಿದ ಸ್ವಾಮಿವಿವೇಕಾನಂದರು 1902 ಜುಲೈ 14 ರಂದು ಈ ಲೋಕ ತ್ಯಜಿಸಿದರು. ಇವರ ಸಾಮಾಜಿಕ ಸಂದೇಶಗಳು, ತತ್ವಗಳು, ಆದರ್ಶಗಳು, ಚಿಂತನೆಗಳು, ಅಭಿಲಾಷೆಗಳು ಸದಾ ಅಮರವಾಗಿವೆ. ಸ್ವಾಮಿ ವಿವೇಕಾನಂದರ ಆಶಯಗಳು ಮತ್ತು ನಿಲುವುಗಳು ವೈಯಕ್ತಿಕ ರೂಪ ಪಡೆಯದೆ ಸಾರ್ವತಿಕಗೊಂಡಿದ್ದು ವಿಶೇಷ. ಅವರದು ಸಾಮಾಜಿಕ ವ್ಯಕ್ತಿತ್ವ. ಬಡವರ, ದೀನ-ದಲಿತರ, ಹಿಂದುಳಿದವರ ಉದ್ಧಾರವೇ ಮುಖ್ಯತತ್ವ. ಈ ಕಾರಣದಿಂದಲೇ ಭಾರತದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದ ರ ಸ್ಥಾನ ಅಗ್ರಸ್ಥಾನ. ಇವರ ಈ ಸಾಮಾಜಿಕ ಕಾಳಜಿಯನ್ನು ಅನುಸರಿಸಿ, ಪಾಲಿಸಿಕೊಂಡರೆ ಭವ್ಯ ಭಾರತದಲ್ಲಿ ಸಮಸಮಾಜ, ಸಮ ಸಂಸ್ಕೃತಿ ವಿಜೃಂಭಿಸುವುದರಲ್ಲಿ ಅನುಮಾನವಿಲ್ಲ.
ಡಾ. ಅವರೆಕಾಡು ವಿಜಯ ಕುಮಾರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x