ನಾವು ಹುಟ್ಟಿದಾಗಿನಿಂದಾನು ರಾಮಾಯಣ ಮಹಾಭಾರತಗಳೆರಡನ್ನು ನೋಡಿಕೊಂಡು ಕೇಳಿಕೊಂಡು ಓದಿಕೊಂಡು ಬೆಳೆದವರು.. ನಮ್ಮ ಅಜ್ಜಿ ದೊಡ್ಡಮ್ಮನ ಬಾಯಲ್ಲಿ ಎಲ್ಲಾ ಪಾತ್ರಗಳು ಕರತಲಾಮಲಕ ಆಗಿದ್ದವು, ಯಾವುದೇ ಸನ್ನಿವೇಶವನ್ನಾದರೂ ಲೀಲಾಜಾಲವಾಗಿ ಹೇಳುತ್ತಿದ್ದ ಪರಿ ಎಂಥವರನ್ನು ಭಾವಪರವಶ ಮಾಡುತ್ತಿತ್ತು. ಹಾಗೆಯೆ ನಾವೇನು ಇದರಿಂದ ಹೊರತಲ್ಲ, ಹೀಗೆ ಕೇಳುತ್ತ ಬೆಳೆದ ನಾವು ಅವರ ಬಾಯಲ್ಲಿ ರಾಮ ಲಕ್ಷ್ಮಣ ಸೀತೆ ಎಲ್ಲರೂ ದೇವರೇ, ಆದರೆ ಅ ಚಿಕ್ಕ ವಯಸ್ಸಲ್ಲೇ ನಂಗೆ ಕಾಡುತ್ತಿದ್ದ ಪಾತ್ರ ಊರ್ಮಿಳೆ, ದೊಡ್ಡವರು ಹೇಳುವ ಪ್ರಕಾರ ಊರ್ಮಿಳೆ ಆರಾಮಾಗಿ ರಾಜ್ಯದಲ್ಲಿ ಇದ್ದು ರಜಾ ವೈಭೋಗವನ್ನು ಸವಿದಾಕೆ. ಆದರೆ ಸೀತೆ ಗಂಡನೊಟ್ಟಿಗೆ ಕಾಡಿಗೆ ತೆರಳಿ ಕಷ್ಟ ಪಟ್ಟ ಸಾದ್ವಿ ಎಂದು…..
ಆದರೆ ಹಾಗೆ ದೊಡ್ಡವರಾಗುತ್ತಿದ್ದಂತೆ ರಾಮಾಯಣ ಮಹಾಭಾರತದ ನಾಟಕಗಳು ಚಲನ ಚಿತ್ರಗಳನ್ನ ನೋಡುವಾಗಲೂ ಊರ್ಮಿಳೆಯ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಮಾತ್ರ, ನಂತರ ಹೈಸ್ಕೂಲ್ ಗೆ ಬಂದಾಗ ರಾಮಾಯಣ ಮಹಾಭಾರತ ಪರೀಕ್ಷೆ ಕಟ್ಟಿದಾಗ, ಇಡೀ ರಾಮಾಯಣ ಸಂಪೂರ್ಣ ಅರ್ಥ ಆಗಿ ಊರ್ಮಿಳೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯ ಆಯಿತು, ನಮ್ಮ ಸಂಸ್ಕೃತ ಗುರುಗಳು ಮಾಡುತ್ತಿದ್ದ ಪಾಠ ಅದರ ವರ್ಣನೆ ಯಂತೂ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ, ನಂತರ ಪಿಯುಸಿಯಲ್ಲಿ ಕುವೆಂಪು ರವರ ಶ್ರೀ ರಾಮಾಯಣ ದರ್ಶನಂ ಕೂಡ ಹೆಚ್ಚಿನ ತಿಳುವಳಿಕೆಗೆ ಸಾಧ್ಯ ಆಯಿತು…..
ಇನ್ನೂ ಈಗ ಪ್ರಸಾರ ಆಗುತ್ತಿರುವ ರಾಮಾಯಣ ಮೊದಲು ಪ್ರಸಾರ ಆಗುತ್ತಿದ್ದಾಗ ನಮ್ಮ ವಯಸ್ಸು 3 ವರುಷ ಅವಾಗ ಏನು ನೋಡಿದ್ದೇವೋ ನೆನಪಿಲ್ಲ. ಊರಿನ ಕೇರಿಯವರೆಲ್ಲ ನಮ್ಮ ಮನೆಗೆ ಟಿ ವಿ ನೋಡಲು ಬರುತ್ತಿದ್ದಿದ್ದು ಮಾತ್ರ ನೆನಪು…. ಈಗ ಮತ್ತೇ ಈ ಲಾಕ್ ಡೌನ್ ಕಡೆಯಿಂದ ಹಾಕಿದಾಗ ಮತ್ತೆ ನನ್ನ ಮನಸು ಊರ್ಮಿಳೆ ಬಗ್ಗೆ ಚಿಂತಿಸುವಂತೆ ಮಾಡಿತು..
ನಿಮಗೆಲ್ಲ ಗೊತ್ತಿರುವ ಹಾಗೆ ಊರ್ಮಿಳೆ ಜನಕ ಮಹಾರಾಜ ಹಾಗೂ ಸುನೈನಾ ದಂಪತಿಗಳ ಪುತ್ರಿ, ಇವಳೇ ಜಾನಕಿ ಆದರೆ ಮಕ್ಕಳಿಲ್ಲದಿರುವಾಗ ಜನಕ ಮಹಾರಾಜಾ ಭೂಮಿಯನ್ನು ಉಳುವಾಗ ಸಿಕ್ಕ ಮಗುವೇ ಸೀತೆ, ಜನಕ ಮಹಾರಾಜನ ಮೊದಲ ಮಗಳೆಂದು ಸೀತೆಯ ಹೆಸರು ಜಾನಕಿ ಎಂದೇ ಪ್ರಸಿದ್ದಿ, ಅದಾದ ಎಷ್ಟೋ ವರುಷಕ್ಕೆ ಹುಟ್ಟಿದವಳು ಊರ್ಮಿಳೆ, ಸೀತೆಗಿಂತ ತುಂಬಾ ಚಿಕ್ಕವಳು ಊರ್ಮಿಳಾ, ಅಕ್ಕ ತಂಗಿಯರು ಇಬ್ಬರು ಅನ್ಯೋನ್ಯವಾಗಿಯೇ ಬೆಳೆದವರು ಆದರೂ ಹೆಚ್ಚಿನ ಪ್ರಾಶಸ್ತ್ಯ ಎಲ್ಲದರಲ್ಲೂ ಸೀತೆಗೆ, ತವರು ಮನೆಯಲ್ಲೂ ಕೂಡ ಊರ್ಮಿಳೆ ಹೆಸರಿಗಷ್ಟೇ ಮಗಳು ಅವಳ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಾಗಲಿ ತುಳಸಿ ರಾಮಚರಿತದಲ್ಲಾಗಲಿ ಹೆಚ್ಚಿನ ವಿಷಯಗಳು ಇಲ್ಲದೆ ಇರುವುದು ವಿಪರ್ಯಾಸವೇ ಸರಿ….
ಇನ್ನೂ ಮದುವೆಯ ಬಗ್ಗೆ ಎಲ್ಲರಿಗೂ ಗೊತ್ತಿರುವಂಥದ್ದೇ ರಾಮ ಶಿವಧನಸ್ಸನ್ನು ಮುರಿದು ಸೀತೆಯನ್ನು ವರಿಸಿದರೆ ಲಕ್ಷ್ಮಣ ಉರ್ಮಿಳೆಯನ್ನು ಹಾಗೆಯೇ ಕ್ರಮವಾಗಿ ಚಿಕ್ಕಪ್ಪನ ಮಕ್ಕಳಾದ ಮಾಂಡವಿ ಶ್ರುತಕೀರ್ತಿಯನ್ನು ಭರತ ಮತ್ತು ಶತ್ರುಜ್ಞ ವರಿಸುತ್ತಾರೆ, ನಾಲ್ಕು ಜನರು ಅಯೋದ್ಯೆಯಲ್ಲಿ ಅನ್ಯೋನ್ಯವಾಗೇ ಇರುತ್ತಾರೆ, ಎಲ್ಲರೂ ಅವರವರ ಹೆಂಡತಿಯರೊಂದಿಗೆ ಇದ್ದರು ಕೂಡ ಇಲ್ಲಿಯೂ ಲಕ್ಷ್ಮಣ ಊರ್ಮಿಳೆ ಯೊಂದಿಗೆ ಕಳೆದ ಕ್ಷಣಗಳು ಕಡಿಮೆಯೇ ಯಾವಾಗಲು ಅಣ್ಣ ಅಣ್ಣ ಎಂದು ಅಣ್ಣನ ಸೇವೆಗೆ ಮೊದಲ ಪ್ರಾಶಸ್ತ್ಯ.
ಇನ್ನೂ ಮಂಥರೆಯ ದುಷ್ಟ ಬುದ್ದಿಗೆ ಕೈಕೇಯಿ ಯಿಂದ ರಾಮ ವನವಾಸಕ್ಕೆ ಹೋಗಿದ್ದು ಗೊತ್ತೇ ಇದೆ. ರಾಮನೊಬ್ಬನನ್ನೇ ವನವಾಸಕ್ಕೆ ಕಳುಹಿಸುವ ಹುನ್ನಾರಕ್ಕೆ ಅಡೆ ಆದವರು ಸೀತೆ ಮತ್ತು ಲಕ್ಷ್ಮಣ, ಸೀತೆ ಮತ್ತು ಲಕ್ಷ್ಮಣನ ಹಠಕ್ಕೆ ಶ್ರೀ ರಾಮನು ಒಪ್ಪಿ ತನ್ನೊಂದಿಗೆ ಇಬ್ಬರನ್ನು ಕರೆದುಕೊಂಡು ಹೋಗುತ್ತಾನೆ.
ನನಗೆ ಕಾಡುವುದು ಇಲ್ಲಿಯೇ, ಊರ್ಮಿಳೆ ಕೂಡ ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ ಲಕ್ಷ್ಮಣನನ್ನ ಆದರೆ ಲಕ್ಷ್ಮಣ ಖಡಾಖಂಡಿತವಾಗಿ ಹೇಳಿ ಇಲ್ಲಿ ಅತ್ತೆಯಂದಿರು (ಸುಮಿತ್ರಾ ಕೌಸಲ್ಯ ) ಹಾಗೂ ಮಾವನನ್ನ ನೋಡಿಕೊಳ್ಳಲು ಹೇಳಿ ಹೊರಟು ಹೋಗುತ್ತಾನೆ, ಊರ್ಮಿಳೆಯ ಸ್ಥಿತಿ ಹೇಗಾಗಿರಬೇಡ ಮದುವೆ ಆಗಿ ಅಪ್ಪ ಅಮ್ಮನ ಬಿಟ್ಟು ಬಂದಿರುವುದು,ಜೊತೆಯಲ್ಲಿ ಬೆಳೆದ ಅಕ್ಕ ಸೀತೆ ಬೇರೆ ಇಲ್ಲಾ, ಗಂಡನು ಜೊತೆಗಿಲ್ಲ, ಇನ್ನೂ ಯೌವನದ ದಿನಗಳು ಅವಳ ಪರಿಸ್ಥಿತಿಯನ್ನ ನೆನೆಸಿಕೊಂಡರೆ ಬೇಜಾರಾಗುತ್ತದೆ, ಆದರೆ ಜನ ಸಾಮಾನ್ಯರಿಗೆ ಊರ್ಮಿಳೆಯ ಬಗ್ಗೆ ಇದೆಲ್ಲ ಅರ್ಥ ಆಗಿದ್ದು ಕಡಿಮೆ.
ಊರ್ಮಿಳೆ ಇನ್ನೂ ಹೆಚ್ಚಿನದಾಗಿ ಕಾಡುವುದು ಊರ್ಮಿಳೆಯ ನಿದ್ದೆ ಯಿಂದ ಅವಳು ಲಕ್ಷ್ಮಣ ಕಾಡಿಗೆ ಹೋದಮೇಲೆ ಹಗಲು ರಾತ್ರಿ ನಿದ್ದೆ ಮಾಡುತ್ತಿದ್ದಳು ಎಂದು, ಇದು ಕೂಡ ಲಕ್ಷ್ಮಣ ನಿಗೆ ನಿದ್ರಾ ದೇವಿ ಕೊಟ್ಟ ವರದಿಂದ, ಒಂದು ಉಲ್ಲೇಖದ ಪ್ರಕಾರ ಕಾಡಿನಲ್ಲಿ ಹಗಲು ರಾತ್ರಿಯೆನ್ನದೆ ರಾಮ ಸೀತೆಯನ್ನು ಕಾವಲು ಕಾದು ರಕ್ಷಿಸಲು ನಿದ್ರಾದೇವಿಯನ್ನು ಕುರಿತು ತಪಸ್ಸು ಮಾಡುತ್ತಾನೆ ಆಗ ನಿದ್ರಾ ದೇವಿ ನಿನ್ನ ನಿದ್ದೆಯನ್ನು ಯಾರಾದರೂ ತೆಗೆದುಕೊಂಡರೆ ನೀನು ದಿನದ 24 ಗಂಟೆಯು ಎಚ್ಚರ ವಾಗಿರಬಹುದೆಂದು ಹೇಳಿದಾಗ ನನ್ನ ಹೆಂಡತಿ ಉರ್ಮಿಳೆಗೆ ಕೊಡಿ ಅವಳೇನು ಎಲ್ಲಾ ನಿಭಾಯಿಸುತ್ತಾಳೆ ಎಂದಾಗ ತಥಾಸ್ತು ಎನ್ನುತ್ತಾಳೆ, ಆಗಿನಿಂದ ಊರ್ಮಿಳೆ ಹಗಲು ರಾತ್ರಿ ನಿದ್ದೆ ಮಾಡುತ್ತಾಳೆ.
ವನವಾಸ ಮುಗಿಸಿ ವಾಪಸು ಬಂದಾಗಲೂ ಕೂಡ ಊರ್ಮಿಳೆ ಎದ್ದಿರುವುದಿಲ್ಲ ಇದರಿಂದ ಲಕ್ಷ್ಮಣ ಸಿಡಿಮಿಡಿಗೊಳ್ಳುತ್ತಾನೆ, ಆಗ ನಿದ್ರಾ ದೇವಿ ಪ್ರತ್ಯಕ್ಷ ಆಗಿ ತಾನು ಕೊಟ್ಟ ವರದ ಬಗ್ಗೆ ಲಕ್ಷ್ಮಣನಿಗೆ ನೆನಪು ಮಾಡುತ್ತಾಳೆ ಆಗ ಹಿಂತೆಗುದುಕೊಂಡ ನಂತರ ಊರ್ಮಿಳೆ ಎಚ್ಚರ ಗೊಳ್ಳುತ್ತಾಳೆ, ಎಚ್ಚರ ಗೊಂಡಾಗ ರಾಮನಿಗೆ ಪಟ್ಟಾಭಿಷೇಕವಾಗುತ್ತಿರುತ್ತದೆ ಎನ್ನುವ ಪ್ರತೀತಿ. ರಾಮ ರಾವಣರ ಯುದ್ಧ ನಡೆಯುವಾಗ ಮೊದಲು ರಾವಣನ ಮಗ ಇಂದ್ರಜಿತ್ತುನನ್ನು ಕಳುಹಿಸುತ್ತಾರೆ, ಅವನನ್ನು ಕೊಲ್ಲುವವರು 12 ವರುಷ ಬ್ರಹ್ಮಚರ್ಯ 12 ವರ್ಷ ನಿದ್ದೆ ಮಾಡದೇ ಇರುವವರಿಂದ ಮಾತ್ರ ಸಾಧ್ಯ, ಆಗ ಲಕ್ಷ್ಮಣ ಇಂದ್ರಜಿತ್ ನನ್ನು ಸಾಯಿಸುತ್ತಾನೆ, ಅದು ಸಾಧ್ಯವಾಗಿದ್ದು ಕೂಡ ಊರ್ಮಿಳೆಯ ತ್ಯಾಗದ ಪ್ರತೀಕ.
ಆದರೆ ನನಗೆ ಕಾಡುವ ಪ್ರಶ್ನೆ ಎಂದರೆ ಉರ್ಮಿಳೆಯ, ತ್ಯಾಗ ಉರ್ಮಿಳೆ ಯ ಗುಣದ ಬಗ್ಗೆ ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ,ಅವಳು ಕೂಡ ಗಂಡನಿಗೋಸ್ಕರ ವಾಗಿ ತ್ಯಾಗ ಮಾಡಿದವಳು ಅವಳ್ಯಾಕೆ ಪತಿವ್ರತೆಯರ ಸಾಲಿಗೆ ಸೇರಲಿಲ್ಲ, ನಾವು ಚಿಕ್ಕವರಿದ್ದಾಗಲೂ ಕೂಡ ಊರ್ಮಿಳೆ ಅಂದರೆ ಕೆಟ್ಟೋಳು ರಾಜ್ಯಕ್ಕಾಗಿ ಮನೆಯಲ್ಲೇ ಉಳಿದಳು ಎಂಬ ಭಾವನೆಯೇ ಇದ್ದಿದ್ದು, ಈಗಲೂ ಕೆಲವೊಬ್ಬರ ಬಾಯಲ್ಲಿಈ ತರಹ ಮಾತುಗಳನ್ನ ಕೇಳಿದ್ದೇನೆ, ಅವಳ ತ್ಯಾಗ ಯಾಕೆ ಜನಜನಿತವಾಗಲಿಲ್ಲ, ಊರ್ಮಿಳೆ ಅಂತ ಹೆಣ್ಣು ಮಕ್ಕಳು ಇಂದಿಗೂ ನಮ್ಮ ಸಮಾಜದಲ್ಲಿ ಇದ್ದಾರೆ ಅವರ ತ್ಯಾಗ ಮನೋಭಾವ ಯಾರಿಗೂ ಗೊತ್ತಾಗದೆ ಎಲೆ ಮರೆ ಕಾಯಿಯಂತೆ ಇದ್ದಾರೆ, ನಿಮಗೂ ಹೀಗೆ ಅನ್ನಿಸಿತಾ ನೀವೇ ಹೇಳಿ….
–ಶ್ರೇಯ ಕೆ ಎಂ ಶಿವಮೊಗ್ಗ