ಅವತ್ತಿನ ಒಂದೊಂದು ಕ್ಷಣಗಳು ನನಗೆ ಒಂದು ಚಲನಚಿತ್ರದ ಫ್ರೆಮುಗಳಂತೆ ನೆನಪಿವೆ, ಅದೂ ಕಲರ್ ಸಿನಿಮಾ! ಹುಬ್ಬಳ್ಳಿಯ ಸುಧಾ ಚಿತ್ರಮಂದಿರದಲ್ಲಿ ರಾಮಾಚಾರಿ ಚಿತ್ರವನ್ನು ಅಮ್ಮನ ಜೊತೆ ಕುಳಿತುಕೊಂಡು ನೋಡಿದ ಮಧುರ ಕ್ಷಣಗಳವು. ಅದು ನನ್ನಮ್ಮನ ಜೊತೆ ನೋಡಿದ ಕೊನೆಯ ಸಿನೆಮಾ. ಹತ್ತು ಹಲವಾರು ಅರೋಗ್ಯ ಸಮಸ್ಯೆಗಳು ಅವಳನ್ನು ತುಂಬಾ ಬಸವಳಿಯುವಂತೆ ಮಾಡಿದ್ದವು. ದಿನ ದಿನಕ್ಕೂ ಅವಳಲ್ಲಿ ಜೀವಿಸುವ ಹಂಬಲ ಕಡಿಮೆಯಾಗುತ್ತಿದ್ದ ಸಮಯವದು. ಆದರೆ ತುಂಬಾ ಜೀವನೋತ್ಸಾಹಿಯಾಗಿದ್ದ ಅವಳು ಇಂತಹ ಸಂಧರ್ಬದಲ್ಲೂ ‘ರಾಮಾಚಾರಿ’ ಯನ್ನು ನೋಡಲು ಬಯಸಿದ್ದಳು. ಸಿನೆಮಾದ ಕೆಲವೊಂದು ದೃಶ್ಯಗಳ ಮೇಲೆ ತನ್ನದೇ ಆದ ವ್ಯಾಖ್ಯಾನ ನೀಡುತ್ತಿದ್ದಳು. ಅಂಥವು ಚಿಗುರು ಮೀಸೆ ಮೂಡುತ್ತಿದ್ದ ವಯಸ್ಸಿನವನಾಗಿದ್ದ ನನ್ನ ಮೇಲೆ ಎಷ್ಟೊಂದು ಪರಿಣಾಮ ಬೀರಿದ್ದವು ಅಂದರೆ, ಅವಳು ಕಾಲಕಾಲಕ್ಕೆ ಹಾಗೆ ನೀಡುತ್ತಿದ್ದ ಅಸಂಖ್ಯಾತ ಟಿಪ್ಪಣಿಗಳನ್ನು ನಾನು ಆಯಾ ಪರಿಸ್ಥಿತಿಗೆ ತಕ್ಕಂತೆ ಈಗಲೂ ನನಗರಿವಿಲ್ಲದಂತೆಯೇ ನೆನಪಿಸಿಕೊಳ್ಳುತ್ತೇನೆ. ಜೀವನವನ್ನು ಮುನ್ನೆಡಸಲು ಅವು ತುಂಬಾ ಸಲ ಸಹಾಯ ಮಾಡಿವೆ. ನಾವೂ ಹಾಗೆ ನಮ್ಮ ಮಕ್ಕಳನ್ನು ಅರಿವಿದ್ದೋ ಅಥವಾ ಎಷ್ಟೋ ಸಲ ನಮಗೆ ಗೊತ್ತೇ ಆಗದಂತೆ influence ಮಾಡುತ್ತಿರುತ್ತೇವೆ. ಹೀಗಾಗಿ ನಾವಾಡುವ ಮಾತುಗಳು ನಮ್ಮ ನಡೆನುಡಿಗಳ ಬಗ್ಗೆ ತುಂಬಾ ಎಚ್ಚರ ವಹಿಸಬೇಕು ಅಲ್ಲವೇ?
…ಹೀಗಾಗಿ ರಾಮಾಚಾರಿ ಸಿನಿಮಾ ನನ್ನ ಜೀವನದಲ್ಲಿ ತುಂಬಾ ಪ್ರಾಮುಖ್ಯತೆ ಪಡೆದಿದೆ. ಈಗಲೂ ಕೂಡ ಅದರ ಯಾವುದಾದರೂ ಹಾಡು ಕೇಳಿದರೆ ನನಗೆ ರೋಮಾಂಚನ! ನನ್ನ ಮಗಳು ಹುಟ್ಟಿದಾಗ ಪ್ರತಿದಿನವೂ ಅವಳನ್ನು ಮಲಗಿಸುವಾಗ ನಾನು ಹಾಡುತ್ತಿದ್ದ ಹಾಡು “ರಾಮಾಚಾರಿ ಹಾಡುವs ಲಾಲಿ ಹಾಡ ಕೇಳವ್ವs…”. ಹೀಗೆ ಎಷ್ಟೋ ಸಿನೆಮಾಗಳು ಅದರ ಹಾಡುಗಳು ನಮ್ಮನ್ನು ಆವರಿಸಿಬಿಟ್ಟಿರುತ್ತವೆ. ಅಣ್ಣಾವರ ಬಹು ದೊಡ್ಡ ಭಕ್ತ ನಾನು. ಅವರ ಎಷ್ಟೋ ಸಿನೆಮಾಗಳ ಹಾಡುಗಳನ್ನು ಕೇಳುತ್ತಲೇ ಪೂರ್ವ ಜನ್ಮದ ನೆನಪಾದಂತೆ ನಮ್ಮ ಬಾಲ್ಯದ ಎಷ್ಟೋ ದೃಶ್ಯಗಳು ಆ ಕಾಲದ ಅನುಭವಗಳು ವಿಚಿತ್ರ ರೀತಿಯಲ್ಲಿ ಆವರಿಸಿಕೊಂಡು ಮುದ ನೀಡುತ್ತವೆ. ನಮ್ಮ ಮನೆಯ ಹತ್ತಿರವೇ ಇದ್ದ ಒಂದು ಥೀಯೇಟರ್ ನಲ್ಲಿ “ಕೃಷ್ಣಾ ಎಂದರೆ ಭಯವಿಲ್ಲ…” ಅಂತ ಪ್ರತಿ ಶೋ ಗಿಂತ ಮೊದಲು ಯಾವಾಗಲೂ ಕಿವಿಗೆ ಅಪ್ಪಳಿಸುತ್ತಿದ್ದ ಹಾಡು ಇವತ್ತಿಗೂ ನನ್ನನ್ನು ಭೂತಕಾಲಕ್ಕೆ ನಿರಾಯಾಸವಾಗಿ ಕರೆದೊಯ್ಯುತ್ತದೆ. ಅಲ್ಲಿದ್ದ ನನ್ನ ಮನೆ, ಹತ್ತಿರದಲ್ಲೇ ಇದ್ದ ಒಂದು ಹೋಟೆಲ್ಲು, ಗೆಳೆಯನ ಮನೆ, ಆ ಮನೆಯಲ್ಲಿದ್ದ ಮೂರು ಗಾಲಿಯ ಸಣ್ಣ ಸೈಕಲ್ಲು ಎಲ್ಲವೂ ಕಣ್ಣೆದುರಿಗೆ ಬಂದು ಕಾಡುತ್ತವೆ.
ಬಾಗಲಕೋಟೆಯಲ್ಲಿ ಎಂಜಿನೀರಿಂಗ್ ನಲ್ಲಿ ಮೊದಲನೇ ಸೆಮಿಸ್ಟರ್ ಕಲಿಯುತ್ತಿದ್ದೆ. ಹೊಸದಾಗಿ ಪರಿಚಯವಾಗಿದ್ದ ಗೆಳೆಯ ಶ್ರೀಶೈಲ ಕಡಿ ನನಗೆ “ಕಾಕಾ ಮೆಸ್ಸು” ಅನ್ನುವ ಒಂದು ಖಾನಾವಳಿಯನ್ನು ಪರಿಚಯಿಸಿದ್ದ. ಅದರ ಮಾಲಿಕನಿಗೆ ಎಲ್ಲರೂ ಕಾಕಾ ಎನ್ನುತ್ತಿದ್ದರು. ಅವನು ವಯಸ್ಸಿನಲ್ಲಿ ಚಿಕ್ಕವನೇ ಇದ್ದನಾದರೂ ಅವನಿಗೆ ಯಾಕೆ ಕಾಕಾ ಅನ್ನುತ್ತಿದ್ದರೋ ದೇವರೇ ಬಲ್ಲ. ನಮ್ಮ ಉತ್ತರ ಕರ್ನಾಟಕದಲ್ಲಿ ಹಾಗೇನೆ. ಕೆಲವು ಸಣ್ಣವರಿಗೂ ಅಜ್ಜ, ಮುದುಕ ಹೀಗೆ ಏನೇನೋ ಕರೆಯುತ್ತಿರುತ್ತಾರೆ. ಹೇಗೆ ಕರೆದರೂ ಅದರಲ್ಲಿ ಪ್ರೀತಿ ತುಂಬಿ ಹರಿಯುತ್ತದೆ. ಅದರಲ್ಲಿ ಎರಡು ಮಾತಿಲ್ಲ! ಆ ಖಾನಾವಳಿ ಅಥವಾ ಮೆಸ್ಸು ಹೇಗಿತ್ತು ಅಂದರೆ, ಕಾಡಿನಲ್ಲಿ ಇರುವ ಏಕೈಕ ನೀರಿನ ಹೊಂಡಕ್ಕೆ ಕಾಡಿನ ಎಲ್ಲ ಸೌಮ್ಯ ಹಾಗೂ ಕೆಟ್ಟ ಪ್ರಾಣಿಗಳೂ ಬಂದು ನೀರು ಕುಡಿವಂತೆ ನಮ್ಮಂತಹ ಶಿಷ್ಟ ಜೂನಿಯರ್ ಗಳು (!?) ಹಾಗೂ ಎಂಜಿನೀರಿಂಗ್ ಕಾಲೇಜ್ ನ ದುಷ್ಟ ಪ್ರಾಣಿಗಳಾದ ಸೀನಿಯರ್ ಗಳೂ ಬಂದು ಊಟ ಮಾಡಿ ಹೋಗುತ್ತಿದ್ದರು. ಅವರೆದುರು ನಾವು ಚಪ್ಪರಿಸಿ ತಿನ್ನುವುದಕ್ಕೂ ಭಯ! ರಾಗಿಂಗ್ ಮಾಡಿದರೆ ಏನು ಗತಿ ಎಂಬ ಚಿಂತೆ. ಅದೇ ಕಾರಣಕ್ಕೆ ಮುಖ ಕೆಳಗೆ ಹಾಕಿಕೊಂಡು ತಿನ್ನುತ್ತ ಮನಸ್ಸಿನೊಳಗೇ ಊಟವನ್ನು ಚಪ್ಪರಿಸಿಕೊಳ್ಳುತ್ತಾ ಕುಳಿತುಕೊಳ್ಳುತ್ತಿದ್ದೆವು. ಕೆಲವು ಸಲ ಹೆದರಿ ಪೂರ್ತಿ ಊಟ ಮಾಡದೆ ಸಂಜೆಗೆ ಮತ್ತೆ ಬೇಗನೆ ಹಸಿವಾಗುತ್ತಿದ್ದ ಕಾಲವದು. ಹಾಗೆ ಊಟ ಮಾಡುವಾಗ ಕಿವಿಗೆ ಒಂದಿಷ್ಟು ಸಂಗೀತ ಕೇಳುತ್ತಿತ್ತು. ಅದು ಆ ಕಾಲಕ್ಕೆ ಪ್ರಸಿದ್ಧವಾದ ಯಾವುದೋ ಸಿನೆಮಾದ ಹಾಡುಗಳ ಕ್ಯಾಸೆಟ್ಟು ತಿರುಗಾ ಮುರುಗಾ ಪ್ಲೇ ಆಗುತ್ತಿತ್ತಾದರೂ FM ಗಳಂತಹ ಯಾವುದೇ ಸೌಲಭ್ಯ ಇರದಿದ್ದ ಆ ಕಾಲದಲ್ಲಿ ಹಾಗೆ ಊಟಕ್ಕೆ ಕೂತಾಗ ಕೇಳುವ ಹಾಡುಗಳು ಮಧುರ ಆಗಿರುತ್ತಿದ್ದವು. ಆಗಿನ ಸಮಯದಲ್ಲಿ ಹಿಂದಿಯ ಬಾಜಿಗರ್ ಸಿನೇಮಾದ ಹಾಡುಗಳನ್ನು ಯಾವಾಗಲೂ ಹಾಕಿರುತ್ತಿದ್ದ ನಮ್ಮ ಕಾಕಾ. ನಮ್ಮ ಕಡೆ ಹಿಂದಿಯ ಒಲವು ಜಾಸ್ತಿ. ಅದಕ್ಕೆ ಹೇರಿಕೆ ಎನ್ನುತ್ತೀರೋ ಹೇರಿಸಿಕೊಳ್ಳುವುದು ಅನ್ನುತ್ತೀರೋ ನಾಕಾಣೆ. ಆದರೂ ಹಿಂದಿ ಭಾಷೆ ಬೇರೆ ಯಾವುದೋ ಪರಕೀಯ ಭಾಷೆಗಿಂತ ನಮ್ಮದು ಅಂತ ನಮಗೆ ಅನಿಸುತ್ತಿದ್ದುದು ಇದೆ ಸಿನೆಮಾಗಳ ಕಾರಣದಿಂದ ಹಾಗೂ ಆಗ ತಾನೇ ಆಳಲು ಶುರು ಮಾಡಿದ್ದ ಟೀವಿ ಗಳ ಪ್ರಭಾವದಿಂದಲೂ ಇರಬಹುದು. ಅದೆಷ್ಟೇ ಹಿಂದಿಯ ಬಗ್ಗೆ ಒಲವು ಇದ್ದರೂ ನಮ್ಮ ಕಡೆಯ ಜನ ಬೆಂಗಳೂರಿನವರಿಗಿಂತ ಸಾವಿರಪಟ್ಟು ಹೆಚ್ಚು ಕನ್ನಡ ಮಾತಾಡುತ್ತಾರೆ ಎಂಬುದು ಅಪ್ಪಟ ಸತ್ಯ. ಅದೇನೇ ಇರಲಿ ಈಗಲೂ ಬಾಜಿಗರ್ ಚಿತ್ರದ ಯಾವುದೇ ಹಾಡು ನನ್ನನ್ನು ಕಾಕಾ ಮೆಸ್ಸಿಗೆ ಕರೆದೊಯ್ದು ಅವತ್ತಿನ “ಕಾಡಿ”ನ ವಾತಾವರಣ ಕಾಡುತ್ತದೆ! ಅದೇ ಸಮಯದಲ್ಲಿ ಒಂದು ಹುಡುಗಿ ನನಗೆ ತುಂಬಾ ಇಷ್ಟವಾಗಿಬಿಟ್ಟಿದ್ದಳು. ಅವಳಿಗೆ ನನ್ನ ಭಾವನೆಗಳನ್ನು ವ್ಯಕ್ತಪಡಿಸುವಷ್ಟು ನಾನು ಧೈರ್ಯವಂತ ಇರಲಿಲ್ಲ (ಪುಣ್ಯ!). ಹೀಗಾಗಿ ಬಾಜಿಗರ್ ಚಿತ್ರದ “ಬತಾನಾ ಭಿ ನಹಿ ಆತಾ….” ಹಾಡು ನನ್ನ ಸಲುವಾಗಿಯೇ ಬರೆದದ್ದು ಅಂತ ಹುಡುಗಿಯನ್ನು ನೆನೆದು ಮನಸ್ಸಿನಲ್ಲೇ ಗುನುಗುನಿಸುತ್ತಿದ್ದುದು ಈಗಲೂ ನೆನಪಿಗೆ ಬರುತ್ತದೆ. ಹೀಗಾಗಿ ಆ ಹಾಡನ್ನೂ ಈಗಲೂ ಕೂಡ ತುಂಬಾ ಭಾವಪೂರ್ಣವಾಗಿ ಹಾಡಬಲ್ಲೆ!
ನನಗೆ ಮೊದಲಿನಿಂದಲೂ ಬಣ್ಣದ ಗೀಳು ಜಾಸ್ತಿ. ಸಿನೆಮಾದಲ್ಲಿ ಆಕ್ಟಿಂಗ್ ಮಾಡಬೇಕು ಎಂಬುದು ನನ್ನ ಇನ್ನೊಂದು ಬಯಕೆ ಆಗಿತ್ತು. ನಾನು ಒಳ್ಳೆಯ ಕಲಾವಿದ ಎಂಬ ಭ್ರಮೆ ನನ್ನಲ್ಲಿ ಇನ್ನೂ ಇದೆ! ಈ ಮೊದಲೇ ಹೇಳಿದಂತೆ ಎಲ್ಲವೂ ಆಗಬೇಕು ಎಂದು ಬಯಸುವ ವಿಚಿತ್ರ ಪ್ರಾಣಿ ನಾನು. “jack of all trades” ಆದರೆ ತಪ್ಪೇನು ಎಂಬುದು ನನ್ನ ನಿಲುವು. ಬರಿ ಒಂದೇ ಕೆಲಸವನ್ನು ಜೀವನ ಪೂರ್ತಿ ಮಾಡುವುದು ನನಗಂತೂ ಸಾಧ್ಯವೇ ಇಲ್ಲ. ನನ್ನ ಆಕ್ಟಿಂಗ್ ಭ್ರಮೆ ಹೋಗಲಾಡಿಸಲು ಹಲವು ನಾಟಕಗಳಲ್ಲಿ ಚಿಕ್ಕ ಪುಟ್ಟ ಪಾತ್ರ ಗಿಟ್ಟಿಸಿ ಧನ್ಯನಾಗಿದ್ದೆನಾದರೂ ಸಿನೆಮಾದಲ್ಲಿ ಇನ್ನೂ ಮಾಡಿಲ್ಲ ಎಂಬ ವ್ಯಥೆ ನನಗೆ ಯಾವಾಗಲೂ ಇತ್ತು. ಅಂಥದರಲ್ಲಿ ಅಮೇರಿಕೆಗೆ ಬರುವ ಕೆಲವು ತಿಂಗಳು ಮುಂಚೆ ನಿರಂಜನ್ ಎಚ್ ಎಚ್ ಅನ್ನುವ, ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಉತ್ಸಾಹಿ ತರುಣ ತನ್ನದೇ ಒಂದು ತಂಡ ಕಟ್ಟಿಕೊಂಡು, ಪ್ರತಿ ವೀಕೆಂಡು ಮುಡಿಪಾಗಿಟ್ಟು ಶೂಟಿಂಗ್ ಮಾಡಿಕೊಂಡು ಒಂದು ಸಿನೆಮಾ ಮಾಡುತ್ತಿದ್ದರು. ಅದರ ಹೆಸರು ೪೦೪ ಅಂತ. ಅದರಲ್ಲಿ ಒಂದು ಪಾತ್ರ ಇದೆ ಮಾಡುತ್ತೀರಾ ಅಂತ ಆ ಚಿತ್ರದಲ್ಲಿ ಈಗಾಗಲೇ ಒಂದು ಪಾತ್ರ ಮಾಡುತ್ತಿದ್ದ ಗೆಳೆಯ ವಿನಯ್ ಕೇಳಿದರು. ಅವರು ಅ ನಾ ರಾವ್ ಜಾದವ್ ಗುರುಗಳ ರಂಗವಿಸ್ಮಯ ಎಂಬ ರಂಗಶಾಲೆಯಲ್ಲಿ ನನಗೆ ಪರಿಚಯ ಆದವರು. ಇನ್ನೊಂದು ಭ್ರಮೆಯಿಂದ ಕಳಚಿಕೊಳ್ಳುವ ಇಂತಹ ಸುವರ್ಣ ಅವಕಾಶವನ್ನು ಇಲ್ಲ ಅನ್ನುವಷ್ಟು ದಡ್ಡ ಪ್ರವೀಣನೆ ನಾನು? ಅದರಲ್ಲಿ ನನ್ನದು ಮನೆ ಓನರ್ ಪಾತ್ರ. ಮೂರು ಸೀನ್ ಗಳಲ್ಲಿ ನಾನು ಬಂದು ಹೋಗುತ್ತೇನೆ. ಮೂರು ಶರ್ಟ್ ಗಳನ್ನೂ ಜೊತೆಗೆ ಒಯ್ದಿದ್ದೆ. ಪ್ರತಿ ಸೀನಿನಲ್ಲಿ ಒಂದೊಂದು ಡ್ರೆಸ್ಸು. ಮನೆ ಓನರ್ ಅಂದರೇನು ಕಡಿಮೆಯೇ! ನನ್ನ ಜೊತೆಗೆ ನನ್ನ ಮಗಳಿಗೂ ಒಂದು ಪಾತ್ರ ಸಿಕ್ಕಿತ್ತು. ಚಿಕ್ಕ ಪಾತ್ರವಾದರೂ ಅವಳು ನನಗಿಂತ ಅದ್ಭುತ ಅಭಿನಯ ಮಾಡಿದ್ದಳು. ನಾವು ಅಮೆರಿಕೆಗೆ ಹೋಗುವ ಮೊದಲು ಅದರ ಡಬ್ಬಿಂಗ್ ಕೆಲಸ ಮುಗಿದಿತ್ತು. ಆದರೆ ಅದು ರಿಲೀಸ್ ಆದಾಗ ನಾವು ಅಲ್ಲಿದ್ದೆವು. ಹೀಗಾಗಿ ನನ್ನ ಮೊದಲ ಚಿತ್ರವನ್ನು ನೋಡುವ ಅವಕಾಶವೇ ಮಿಸ್ ಆಗಿದ್ದು ನನಗೆ ಅಮೇರಿಕೆಗೆ ಬಂದ ಖುಷಿಯನ್ನೂ ಮರೆಸಿತ್ತು! ಅದ್ಹೇಗೆ ಅಲ್ಲಿಗೆ ಬಿಟ್ಟೆನು? ಅಲ್ಲಿಯವರಿಗೆ ನಾನು ಸಿನೆಮಾದಲ್ಲೂ ಮಾಡಿದ್ದೇನೆ ಅಂತ ಕೊಚ್ಚಿಕೊಂಡಿದ್ದೆ. ಹಾಗಿದ್ದರೆ ನಮಗೂ ತೋರಿಸಿ ಮಾರಾಯ್ರೆ ಅಂತ ಛೋಟಾ ಮಿರ್ಚಿ ಕಾಲೆಳೆದಿದ್ದ. ಅವನಿಗೆ ನಾನು ಸುಮ್ಮನೆ ಬೊಗಳೆ ಬಿಡುತ್ತಿದ್ದೇನೆ ಅನಿಸಿರಬೇಕು. ನಾನು ಕೂಡಲೇ ನಿರಂಜನ್ ಅವರಿಗೆ ಈ ವಿಷಯ ಕುರಿತು ಚರ್ಚಿಸಿದೆ. ಅವರೂ ಕೂಡ ಖುಷಿಯಿಂದಲೇ ತಮ್ಮ ಆ ಸಿನೆಮಾವನ್ನು ಅಮೇರಿಕೆಯಲ್ಲಿ ಪ್ರದರ್ಶಿಸಲು ಅನುಮತಿ ಕೊಟ್ಟು ತಮ್ಮ ಪ್ರಿಂಟ್ ಅನ್ನು ಡ್ರೈವ್ ಅಲ್ಲಿ ಹಾಕಿದರು. ಅಲ್ಲೊಂದು ಅಪಾರ್ಟ್ ಮೆಂಟ್ ನ ಹಾಲ್ ಬಾಡಿಗೆ ಪಡೆದು ಪ್ರದರ್ಶನ ಮಾಡಿಯೇ ಬಿಟ್ಟೆ. ತುಂಬಾ ಗೆಳೆಯರು ಒಬ್ಬೊಬ್ಬರು ೫ ಡಾಲರ್ ಕೊಟ್ಟು ನೋಡಿದರು. ಛೋಟಾ ಮಿರ್ಚಿ ಮಾತ್ರ ಚೇಂಜ್ ಇಲ್ಲ ಅಂತ ಕೊಡಲೇ ಇಲ್ಲ! ಎಲ್ಲರೂ ನನ್ನ ನಟನೆಯನ್ನು ಹೊಗಳಿ ಹೋದರು ಕೂಡ. ಪಾಪ ಅವರಿಗೆ ಬೇರೆ ಆಯ್ಕೆ ಇರಲಿಲ್ಲ! ಬಂದ ಹಣವನ್ನು ನಿರಂಜನ್ ಅವರಿಗೆ ತಲುಪಿಸಿದೆ. ಅದೇನು ದೊಡ್ಡ ಮೊತ್ತವಾಗಿರಲಿಲ್ಲವಾದರೂ ಕೆಲವು ಜನ ನೋಡಿ ಹೊಗಳಿದರು ಎಂಬ ಖುಷಿ ನಿರಂಜನ್ ಹಾಗೂ ನನ್ನದಾಗಿತ್ತು. ನನ್ನ ಮೊತ್ತ ಮೊದಲ ಸಿನೆಮಾ ವಿದೇಶದಲ್ಲಿ ಬಿಡುಗಡೆಯಾಗಿದ್ದೇನು ಕಡಿಮೆ ಸಂಗತಿಯೇ!
ಅದೇ ಸಮಯದಲ್ಲಿ ಸೂರಿ ಅವರ ಕೆಂಡ ಸಂಪಿಗೆ ಸಿನೆಮಾ ಕೂಡ ಬಿಡುಗಡೆ ಆಗಿತ್ತು. ಅಲ್ಲಿಯವರಿಗೂ ಆ ಸಿನೆಮಾ ನೋಡಬೇಕೆಂಬ ಆಸೆ ಜಾಸ್ತಿ ಇತ್ತು. ನಾವಿದ್ದ ಊರಾದ ಒಮಾಹಾದಲ್ಲಿ ಕನ್ನಡ ಸಿನೆಮಾಗಳು ಸ್ವಲ್ಪ ಅಪರೂಪ. ತೆಲಗು, ತಮಿಳು ಬರುತ್ತಿದ್ದವು ಯಾಕಂದರೆ ಅವುಗಳನ್ನು ನೋಡುವವರೂ ಅಲ್ಲಿ ಜಾಸ್ತಿ ಇದ್ದರು. ಕನ್ನಡ ಸಿನೆಮಾಗಳ ಪರಿಸ್ಥಿತಿ ಎಲ್ಲಿ ಹೋದರು ಅದೇ. ನೋಡುವವರ ಕೊರತೆ. ನಮ್ಮಲ್ಲಿ ಸಿನೆಮಾ ನೋಡದೆ ವಿಮರ್ಶೆ ಮಾಡುವವರೇ ಜಾಸ್ತಿ. ಅದೂ ಅಲ್ಲದೆ ರೇಟಿಂಗ್ಸ್ ನೋಡಿಕೊಂಡು, ಎಲ್ಲರೂ ತುಂಬಾ ಚೆನ್ನಾಗಿದೆ ಕಣ್ರೀ ಎಂದು ಹೇಳಿ, ಬೇರೆ ಭಾಷೆಯವರೂ ನೋಡುತ್ತಿದ್ದಾರೆ ಎಂದಾಗ ನಾವೂ ನೋಡೇ ಬಿಡೋಣ ಅಂತ ಹೋಗುವವರೇ ನಮ್ಮಲ್ಲಿ ಹೆಚ್ಚು. ಎಷ್ಟೋ ಕನ್ನಡಿಗರು ಕನ್ನಡದಲ್ಲಿ ಚೆನ್ನಾಗಿರೋ ಸಿನಿಮಾಗಳು ಎಲ್ಲಿ ಬರ್ತಾನೆ ಇಲ್ಲ ಅಂದಾಗ ನನಗೆ ಉರಿದು ಹೋಗುತ್ತೆ. ಅಲ್ಲಿಯೂ ಅಂಥವರು ಇದ್ದರು. ಇನ್ನೂ ಹಳೆಯ ಕಾಲದ ಆಕ್ಟರ್ ಗಳನ್ನೂ ನೆನಪಿಸಿಕೊಂಡು ಬೇರೆ ಯಾರಿದ್ದಾರೆ ಕನ್ನಡದಲ್ಲಿ ಅಂತ ಕೇಳುತ್ತಿದ್ದ ಅವರ ಅಜ್ಞಾನ ಕಂಡು, “ರಾಮಾಚಾರಿ” ಸಿನೆಮಾದಲ್ಲಿ ರವಿಚಂದ್ರನ್ ಆವೇಶದಿಂದ ಹೊಡೆದಂತೆ ಅವರ ಮುಖ ಮೂತಿಗೆ ಹೊಡೆಯಬೇಕು ಎಂಬ ಯೋಚನೆ ಬರುತ್ತಿತ್ತು. ಸಧ್ಯ ಗಾಂಧಿ ಸಿನೆಮಾದಿಂದಲೂ ಪ್ರಭಾವಿತನಾಗಿದ್ದ ನಾನು ಅಹಿಂಸಾವಾದಿ ಆಗಿದ್ದರಿಂದ ಅವರಿಗೆ ಹಾಗೆ ಹೊಡೆಯಲಿಲ್ಲ, ಉಳಿದುಕೊಂಡರು ಪಾಪ!
-ಗುರುಪ್ರಸಾದ ಕುರ್ತಕೋಟಿ
(ಮುಂದುವರಿಯುವುದು…)