ಲಲಿತ ಪ್ರಬಂಧ

ರಾಮಂದ್ರ: ಹರಿ ಪ್ರಸಾದ್ರಾಮಮಂದಿರ ಅಂದರೆ ಏನೇನೋ ಚಿತ್ರಗಳು ಮೂಡುವ ಈ ಕಾಲದಲ್ಲಿ, ನನಗಂತೂ ನಮ್ಮ ಸೋದರತ್ತ್ತೆ  ಊರಿನ ಮಧ್ಯದಲ್ಲಿದ್ದ ರಾಮಮಂದಿರವೇ ಕಣ್ಮುಂದೆ ಬರುತ್ತದೆ. ಸುಮಾರು ನೂರೈವತ್ತು ಮನೆಗಳ ಪುಟ್ಟ ಊರದು. ನನ್ನ ಬಾಲ್ಯ ಬಹುಪಾಲು ಕಳೆದಿದ್ದು ಆ ಊರಿನಲ್ಲೆ. ನನ್ನ ಬಾಲ್ಯದ ಅನೇಕ ಚಟುವಟಿಕೆಗಳು ಅದರ ಸುತ್ತಮುತ್ತ ಹರಡಿಹೋಗಿವೆ. ಆದ್ದರಿಂದ ಆ ಚಿತ್ರ ಮನಸಿನಿಂದ ಹೋಗಲೊಲ್ಲದು. ಕೆಮ್ಮಣ್ಣು ಗೋಡೆಯ ಅದರ ಒಳಭಾಗದಲ್ಲಿ ಇಪ್ಪತ್ತು ಜನ ಕೂರುವಷ್ಟು ಜಾಗ. ಈಚೆ ಪಡಸಾಲೆಯಲ್ಲಿ ಒಳಕ್ಕಿಂತ ತುಸು ಚಿಕ್ಕದಾದ ಜಾಗ. ಬೀದಿಭಾಗಕ್ಕೆ ಮರ ಮತ್ತು ಕಬ್ಬಿಣ ಬಳಸಿ ಒಂದು ಜಾಲರಿ ಮಾಡಿದ್ದರು. ಮಧ್ಯೆ ಗೋಡೆಗೂ ದೊಡ್ಡ ಎರಡು ಕಿಟಕಿಗಳು. ಹಲಗೆಸೇವೆ ಅಟ್ಟವಿದ್ದ ಈ ರಾಮಮಂದಿರದ ಮೇಲಿನ ಹೊದಿಕೆ ಮಂಗಳೂರು ಹೆಂಚಿನದು.

ರಾಮಮಂದಿರ ಎಂದರೆ ಗ್ರಂಥಸ್ಥ ಎನಿಸುತ್ತದೆ.  ರಾಮಂದ್ರ ಎನ್ನುವುದು ಜನಪದೀಯ. ಹೀಗಾಗಿ ಬರಹದಲ್ಲೂ ಹಾಗೆ ಬಳಸುವೆ. ಓದುಗರು ಇದನ್ನು ಗಮನಿಸಿ, ಮನ್ನಿಸಿ, ಓದಿಕೊಳ್ಳಬೇಕು. ಈ ರಾಮಂದ್ರದ ಇನ್ನೂ ಒಂದು ವಿಶೇಷ ಏನೆಂದರೆ ನಮಗೆ ಅದು ಪಾಠಶಾಲೆ ಆಗಿತ್ತು. ಆಗ ಊರಲ್ಲಿ ಎರಡು ಕೋಣೆಗಳ ಶಾಲೇಲಿ ಏಳು ತರಗತಿಗಳು ನಡೆಯುತ್ತಿದ್ದವು. ಒಂದು ರೂಮಲ್ಲಿ ತಲಾ ಎರಡೆರಡು ಮಣೆಗಳು ಸೇರಿ ನಾಲ್ಕನೆ ಕ್ಲಾಸ್ ತನಕ ಪಾಠ ನಡೆಯುತ್ತಿದ್ದವು. ಇನ್ನೊಂದು ಕೋಣೆಯಲ್ಲಿ ಐದು-ಆರು ಕ್ಲಾಸಿನ ವಿದ್ಯಾರ್ಥಿಗಳು ಉತ್ತರಕ್ಕೆ ಮುಖ ಮಾಡಿದರೆ, ದಕ್ಷಿಣಕ್ಕೆ ಏಳನೇ ಕ್ಲಾಸಿನ ವಿದ್ಯಾರ್ಥಿಗಳು. ಅವರೆದುರು ಎಡ್ಮಾಷ್ಟ್ರು.. ಅಷ್ಟರಲ್ಲೇ ಎಡ್ಮಾಷ್ಟ್ರು ಮತ್ತು ಇನ್ನೊಬ್ಬರಾದ ಡೀಕೆ ಮಾಸ್ಟ್ರು ನಮ್ಮೆಲ್ಲರನ್ನು ನಿಭಾಯಿಸುತ್ತಿದ್ರು. ನಾನು ಮೂರನೇ ಕ್ಲಾಸ್‍ಗೆ ಬರೋತನಕ ಹೀಗೆ ನಡೆಯುತ್ತಿತ್ತು. ಅಕ್ಕಪಕ್ಕದ ಊರುಗಳಿಂದ ಓದಲು ಬರುವವರು ಹೆಚ್ಚ್ಚಿದಂತೆ ಶಾಲೆ ಚಿಕ್ಕದಾಗÀತೊಡಗಿತು.  ಎಡ್ಮಾಷ್ಟ್ರು  ಬಸವೇಗೋಡ್ರು ಅದೇ ಊರಿನೋರು. ಹೀಗಾಗಿ  ರಾಮಂದ್ರವನ್ನು ಮೂರು, ನಾಕನೇ ಕ್ಲಾಸಿಗೆ ಬಿಟ್ಟುಕೊಡುವಂತೆ ಊರವರ ಮನ ಒಲಿಸಿದ್ದರು.

ಇದೆಲ್ಲದರಿಂದಾಗಿ ನಾವು ರಾಮಂದ್ರಕ್ಕೆ ಹೊಸ ಮಾಸ್ಟ್ರು ಜತೆಗೆ ಬಂದಿದ್ದೆವು. ಆ ಮೊದಲ ದಿನಗಳ ಸಂಭ್ರಮ ನೆನೆಸಿಕೊಂಡರೆ ಇನ್ನೂ ಅದೇ ಸಂಭ್ರಮ ಮೈಯಲ್ಲಿ ಉಕ್ಕುತ್ತದೆ. ಊರ ಮುಂದಿನ ಶಾಲೆ ಬಳಿ ಪ್ರಾರ್ಥನೆ ಮುಗಿಸಿ, ಊರ ಮಧ್ಯದ ರಾಮಂದ್ರಕ್ಕೆ ಬರುವಾಗ ವಿದೇಶಪ್ರಯಾಣ ಮಾಡಿದವರಂತೆ ಬರುತ್ತಿದ್ದೆವು. ಪ್ರತಿದಿನ ಊರಜನ ಇದೊಂದು ವಿಶೇಷ ಎಂಬಂತೆ ನೋಡುತ್ತಿದ್ದರು. ಹೊಲ-ಗದ್ದೆಗೆ ಹೋಗುತ್ತಿದ್ದವರೂ ಕೂಡ ನಮ್ಮನ್ನೆಲ್ಲ ಕಣ್ಣರಳಿಸಿ ನೋಡಿ ಆನಂದಿಸುತ್ತಾ ಹೋಗುತ್ತಿದ್ದರು. ದಿನವೂ ನೋಡುತ್ತಿದ್ದ  ಕೆಲವು ಖಾಯಂ ಪ್ರೇಕ್ಷಕರು ‘ಆ ದಿನ ಯಾರು ಬಂದಿಲ್ಲ’ ಎಂಬುದನ್ನು ಪತ್ತೆ ಮಾಡಿ ಹೇಳುತ್ತಿದ್ದರು. ಮತ್ತೆ ಕೆಲವರು ‘ಏ ಗೊಣ್ಣೆಯ ಶೀಟ್ಕಳಿರ್ಲಾ. ತಲೆಯ ಸರ್ಯಾಗಿ ಬಾಚ್ಕಂಡು ಬರಕೇನ್ರಿಲ’ ಅಂತ ಕಾಳಜಿ ತೋರಿಸ್ತಿದ್ರು. ಇದೆಲ್ಲ ಪುಟ್ಟ ಊರುಗಳಲ್ಲಿ ನಡೆವ ಪುಟ್ಟ ಕ್ರಿಯೆಗಳಿಗೂ ಬರುವ ಮಹತ್ವ.

ಹೊಸದಾಗಿ ಬಂದ ಅಣ್ಣೇಗೌಡ ಮಾಷ್ಟ್ರು ಮೂರು, ನಾಕನೇ ಕ್ಲಾಸನ್ನು ರಾಮಂದ್ರದ ಎರಡು ಭಾಗಕ್ಕೆ ಕೂರಿಸಿ ಪಾಠ ಮಾಡುತ್ತಿದ್ದರು. ‘ಏ ಬಲ್ಲಿರ್ಲಾ ಪಾಪ. ಏ ಓದ್ಕ್ಯಳಿರ್ಲಾ ಪಾಪ’. ಇದು ಅವರು ಯಾವಾಗಲೂ ಆಡುತ್ತಿದ್ದ ಮಾತುಗಳು.  ನಾವಂತೂ ಬಿದ್ದೂ ಬಿದ್ದು ನಗುತ್ತಿದ್ದೆವು. ‘ಏ ಇದ್ಯಾಕಿರ್ಲ ಪಾಪ. ಇಂಗೆ ಶಿರಿಯಾಡ್ತಿರಿ’ ಅನ್ನೋರು. ನಮಗೋ ಇನ್ನೂ ನಗು. ನಾವು ಸಂಜೆ ಆಟಕ್ಕೆ ಹೋದಾಗ ನಮಗಿಂತ ಚಿಕ್ಕ ಹಾಗು ದೊಡ್ಡ ವಿದ್ಯಾರ್ಥಿಗಳ ಜತೆ ನಮ್ಮ ಸೌಭಾಗ್ಯದ ಬಗ್ಗೆ ಹೇಳಿಕೊಂಡು ಅವರಿಗೆ ಹೊಟ್ಟೆ ಉರಿಸುತ್ತಿದ್ದೆವು. ನಮಗಿಂತ ಚಿಕ್ಕವರು ಮುಂದಿನ ವರ್ಷ ಹೇಗೂ ಅಲ್ಲಿಗೆ ಬರ್ತೀವಿ ಅಂತ ಸಮಾಧಾನಪಟ್ಟುಕೊಂಡರೆ ದೊಡ್ಡವರು ಏನೋ ಕಳಕೊಂಡವರಂತೆ ಸುಮ್ಮನಾಗುತ್ತಿದ್ದರು. ಆದರೂ ಸೀನಿಯಾರಿಟಿ ಅಹಂಕಾರ ಇರುತ್ತಲ್ಲ. ಜ್ಯೂನಿಯರ್‍ಗಳು ಏನೇ ಮಾಡಿದರೂ ಒಪ್ಪದಿರೋದು, ಕೊಂಕು ತೆಗೆಯೋದು ಸೀನಿಯಾರಿಟಿಯ ಲಕ್ಷಣ ತಾನೇ? ಅದರ ದೆಸೆಯಿಂದ ‘ಅದೊಳ್ಳ್ಳೆ ಕುರಿದೊಡ್ಡಿ ಇದ್ದಂಗೆ ಐತೆ’ ಅಂತಾನು ಒಂದು ಬಾಂಬು ಹಾಕುತ್ತಿದ್ದರು. ನಮಗದೆಲ್ಲ ತಾಕುತ್ತಿರಲಿಲ್ಲ. ಯಾಕೆಂದರೆ ರಾಮಂದ್ರ ನಮ್ಮ ಕಪಿಚೇಷ್ಟೆಗೆ ನೆಚ್ಚಿನ ಜಾಗವಾಗಿತ್ತು. ಪ್ರತಿ ವರ್ಷ ನಾಟಕಗಳ ತಾಲೀಮು ನಡೆಯುತ್ತಿದ್ದುದೇ ರಾಮಂದ್ರದಲ್ಲಿ. ಹೀಗಾಗಿ ಡೊಂಕಾದ ಬಿಲ್ಲು, ಬಾಣಗಳು. ಬಣ್ಣ ಮಾಸಿದ ಗದೆ, ಒಂದಿಷ್ಟು ರಟ್ಟಿನ ಕಿರೀಟಗಳು, ಈಟಿಗಳು ಇವೆಲ್ಲ ನಮಗೆ ಅಲ್ಲಿ ಕಾಂಪ್ಲಿಮೆಂಟರಿ. ನಮ್ಮ ಅಣ್ಣೇಗೌಡ ಮಾಸ್ಟ್ರು  ಬೀಡಿ ಹುಟ್ಟಿದ ದಿನವೇ ಹುಟ್ಟಿದ್ದರು. ಅರ್ಧಗಂಟೆ ಪಾಠ ಮಾಡಿ ಏನೋ ಒಂದು ಲೆಕ್ಕಾನೋ, ಡಿಕ್ಟೇಷನನ್ನೊ ಹೇಳಿ ‘ಶೈಲೆಂಟ್  ಆಗಿರ್ಬೇಕು ಕಣ್ರೀಲಾ ಪಾಪ’ ಅಂದು ಬೀಡಿ ಕÀಚ್ಚಿಕೊಂಡು ಹೋಗಿಬಿಡುತ್ತಿದ್ದರು. ಬಹುಶ ನಾವು ಕೇಳಿದ ಮೊದಲ  ಇಂಗ್ಲೀಸು ಪದವೇ ಶೈಲೆಂಟ್. ಅಣ್ಣೇಗೌಡರ ಬೀಡಿ ವಾಸನೆಯ ದೆಸೆಯಿಂದ ಅವರು ಇರುವ ದೂರವನ್ನು ನಾವು ನಿರ್ಧರಿಸಿ ಆಟವಾಡಿಕೊಳ್ಳುತ್ತಿದ್ದೆವು. ಅವರೂ ಪಕ್ಕದೂರಿನ ರೈತಾಪಿ ಜನ. ಹೀಗಾಗಿ ಕೆಲವು ಸಲ ಕ್ಲಾಸ್‍ಮಾನೀಟರ್ ಆದ ನಂಗೆ ‘ನೋಡ್ಕಳ್ಳ ಪಾಪ’ ಅಂತೇಳಿ ಜಮೀನಿನ ಕಡೆ ಹೋಗಿ ಬಿಡುತ್ತಿದ್ದರು. ಇಂಥ ಸಂದರ್ಭದಲ್ಲಿ ನಮ್ಮ ಹನುಮೋಲ್ಲಾಸ ಇಮ್ಮಡಿಸುತ್ತಿತ್ತು. ರಾಮಂದ್ರದ ಅಟ್ಟದ ಮೇಲಿದ್ದ ಗದೆ, ಬಿಲ್ಲು ಬಾಣ ಇತ್ಯಾದಿಗಳು ನಮ್ಮ ಕೈ ಸೇರುತ್ತಿದ್ದವು. ಆ ಹಿಂದಿನ ವರ್ಷ ಆಡಿದ ನಾಟಕದ ಪಾತ್ರಗಳು ನಮ್ಮ ನರ ನಾಡಿಗಳಲ್ಲಿ ಪಡಿ ಮೂಡಿರುತ್ತಿದ್ದರಿಂದ ನಾವೇ ಪಾತ್ರಧಾರಿಗಳಾಗಿ ನಾಟಕ ಶುರು ಮಾಡುತ್ತಿದ್ದೆವು. ಕೆಲವು ಸಲ ಪಾತ್ರ ಹಂಚಿಕೆಯೇ ತಲೆನೋವಾಗಿ ಬಿಡುತ್ತಿತ್ತು. ರಾವಣ, ಹನುಮಂತ, ವಿಶ್ವಾಮಿತ್ರ, ಧುರ್ಯೋಧನ, ಭೀಮ, ಶಕುನಿ, ಶನಿಮಾತ್ಮ ಪಾತ್ರಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಕ್ಲಾಸ್‍ಮಾನೀಟರ್ ಆದ ನನಗೆ ಇದೊಂದು ಹೆಚ್ಚುವರಿ ಜಬಾದಾರಿ ಬೇರೆ.  ಇಂಥ ಜಬಾದಾರೀನ-ಯಾರು ಎಷ್ಟು ಬಣ್ಣ್ಣದ ಗೋಲಿ ಕೊಡ್ತಾರೆ ಎಂಬುದನ್ನು ಆಧರಿಸಿ- ಕಷ್ಟದಿಂದ ನಿಭಾಯಿಸುತ್ತಿದ್ದೆ! ಆಮೇಲೆ ನಾಟಕ ಮಾಡುತ್ತಿದ್ದೆವು. ಆಗೀಗ ಯಾರಾದರೂ ಊರವರು ನಮ್ಮ ಗಲಾಟೆ ಕೇಳಿ ಕಿಟಕಿಯಲ್ಲಿ ಬಗ್ಗಿ ಗದರಿ ಹೋಗುತ್ತಿದ್ದುದು ಬಿಟ್ಟರೆ ಯಾವ ತೊಂದರೆಯೂ ನಮಗಿರುತ್ತಿರಲಿಲ್ಲ. ಮಾಸ್ಟ್ರ್ಟು ಬೀಡಿ ವಾಸನೆ ಹತ್ತಿರವಾದೊಡನೆ  ನಾಟಕಕ್ಕೆ ಮಂಗಳ ಹಾಡುತ್ತಿದ್ದೆವು.

ರಾಮಂದ್ರ ಊರ ನಾಟಕದ ತಾಲೀಮುಮಂದಿರ ಎಂದೆನಷ್ಟೆ. ರಾಮಂದ್ರದ ಅಟ್ಟದ ಮೇಲೆ ಒಂದೆರಡು ಚಾಪೆ, ದಿಂಬು, ಹಾಸಿಗೆ ಇಟ್ಟಿದ್ದರು. ಅದು ನಾಟಕ ಕಲಿಸಲು ಬರುವ ಮೇಷ್ಟ್ರಿಗೆ ಊರ ಕಡೆಯಿಂದ ಮಾಡಿಸಿಟ್ಟಿದ್ದ ಖಾಯಂ ಆಸ್ತಿ. ಮೇಷ್ಟು ಬದಲಾಗುತ್ತಿದ್ದರೂ ಅದೇ ಹಾಸಿಗೆ ಮಾತ್ರ ವರ್ಷದ ಹತ್ತು ತಿಂಗಳು ಅಟ್ಟದ ಮೇಲೆ ಬಿದ್ದಿರುತ್ತಿತ್ತು. ನಾಟಕದ ಮೇಷ್ಟ್ರು ಬಂದ ಎರಡು ತಿಂಗಳು ಮಾತ್ರ ಅದು ದೇವಲೋಕದ ರಂಭೆ ಧರೆಗಿಳಿದಂತೆ ಬರುತಿತ್ತು. ಈ ಹಾಸಿಗೆ ಕೂಡ ನಮ್ಮ ಹನುಮೋಲ್ಲಾಸದ ಭಾಗವಾಗಿಬಿಟ್ಟಿತು. ದಿನಾ ಸಂಜೆ ಶಾಲೆ ಮುಗಿದ ವೇಳೆ ಒಂದಿಬ್ಬರು ಹುಡುಗ-ಹುಡುಗೀರು ರಾಮಂದ್ರ ಗುಡಿಸಿ ಬೀಗ ಹಾಕಿಕೊಂಡು ಹೋಗಬೇಕಿತ್ತು. ನಾನೂ, ಎಡ್ಮಾಷ್ಟ್ರು  ಮಗಳು ನಾಗವೇಣಿ, ಶಿವಣ್ಣ, ಗಂಗಾಧರ, ಪದ್ದಿ ಎಲ್ಲ ಸೇರಿ ಐದೇ ನಿಮಿಷದಲ್ಲಿ ಕಸ ಗುಡಿಸಿಬಿಡುತ್ತಿದ್ದೆವು. ಆಮೇಲೆ ಶುರು ನಮ್ಮ ಆಟ. ಅಟ್ಟದ ಮೇಲಿಂದ  ದಿಂಬು, ಹಾಸಿಗೆ ಕೆಳಗೆ ಎಸೆಯೋದು. ಆ ಹಾಸಿಗೆ ಮೇಲೆ ಒಬ್ಬೊಬ್ಬರಾಗಿ ಡೈ ಹೊಡೆಯೋದು. ಹುಡುಗ-ಹುಡುಗಿ ಎಂಬ ಯಾವ ಭಿನ್ನತೆಗಳು ಆಗ ನಮಗೆ ಗೊತ್ತಾಗುತ್ತಿರಲಿಲ್ಲ. ಒಬ್ಬರ ಮೇಲೊಬ್ಬರು ಬಿದ್ದು ಹೊರಳಾಡುತ್ತಿದ್ದೆವು. ಇದು ಪುನರಾವರ್ತನೆ ಆಗುತ್ತಲೇ ಇತ್ತು. ಯಾರಾದರು ಬಂದು ಬೈಯುವವರೆಗೂ ನಾವು ಬಿದ್ದು ಹೊರಳಾಡುತ್ತಲೇ ಇರುತ್ತಿದ್ದೆವು. ಈಗ ನೆನಪಿಸಿಕೊಂಡರೆ ಏಕೆ ಹೀಗೆ ಮಾಡುತ್ತಿದ್ದೆವು ಎಂಬುದಕ್ಕೆ ಏನೂ ಹೊಳೆಯುವುದಿಲ್ಲ. ಆದರೆ ಪುಟ್ಟ ಹುಡುಗ ಹುಡುಗಿಯರು ಒಬ್ಬರ ಮೇಲೊಬ್ಬರು ಬೀಳುವುದು ಆಟವೋ, ಆನಂದವೋ, ಉಮೇದೋ? ಈ ಬಗ್ಗೆ ಫ್ರಾಯ್ಡ್ ಏನನ್ನುತ್ತಾನೋ?

ಇದು ಹೀಗೆ ನಡೆಯುತ್ತಿರುವಾಗ ರಾಮಂದ್ರದ ಚಟುವಟಿಕೆ ಇನ್ನಷ್ಟು ವಿಸ್ತಾರವಾಯಿತು. ಊರಿಗೆ ಹೊಸದಾಗಿ ಹಾಲ್ ಡೈಲಿ ಬಂತು. ಅದಕ್ಕೊಂದು ಜಾಗ ಅಂತ  ಹುಡುಕುತ್ತಿದ್ದಾಗ ರಾಮಂದ್ರವೇ ಏಕಾಗಬಾರದು.ಮುಂದಿನ ಜಾಲರಿಯಲ್ಲಿ ಹಾಲು ಅಳೆಯೋ ಕೆಲಸಕ್ಕೆ ಬಳಸುವುದು. ಲೆಕ್ಕ ಪಕ್ಕದ ಪುಸ್ತಕವನ್ನು ಒಳಭಾಗದ ಗೋಡೆಬೀರುವಿನಲ್ಲಿ ಇಡಬಹುದೆಂತಲೂ ಊರಿಗೆ ಬುದ್ದಿವಂತರಾಗಿದ್ದ ಕಂಟ್ರಾಕ್ಟ್ರು ನಿಂಗಪ್ಪಣ್ಣನವರು ಸೂಚಿಸಿದರು. ಹೇಗಿದ್ದರೂ ಶಾಲೆ ಸಮಯ ಹತ್ತರಿಂದ ಐದು. ನಾಟಕ ನಡೆಯುತ್ತಿದುದು ಷಷ್ಟಿಜಾತ್ರೆಯ ಎರಡು ತಿಂಗಳು. ಅದೂ ರಾತ್ರಿ ಎಂಟರ ನಂತರ. ಹೀಗಿರುವಾಗ ಬೆಳಿಗ್ಗೆ ಎರಡು ಘಂಟೆ, ಸಂಜೆ ಎರಡು ಘಂಟೆಯ ಡೈರಿ ಚಟುವಟಿಕೆಯಿಂದ ಶಾಲೆಗಾಗಲಿ, ನಾಟಕಕ್ಕಾಗಲೀ ಯಾವ ತೊಂದರೆಯೂ ಇರಲಿಲ್ಲ. ಅಂದಿನಿಂದ ರಾಮಂದ್ರ  ಅಧಿಕೃತ ಹಾಲಿನ ಡೈಲಿಯೂ ಆಯಿತು. ಊರಿಗೆ ಡೈಲಿ ಬಂದ ಮೇಲೆ ರಾಸುಗಳು ನಿಧಾನವಾಗಿ ಹೆಚ್ಚಾಗತೊಡಗಿದವು. ಕಾಸುಳ್ಳವರು ಸಂತೆಲೋ, ಜಾತ್ರೆಲೋ ರಾಸು ತರತೊಡಗಿದರು. ಕಾಸಿಲ್ಲದವರು ನೆಂಟರ ಮನೆಯಿಂದಲೋ,ಬೇರೆ ಊರಿಂದಲೋ ವಾರಕ್ಕೆ ತರುತ್ತಿದ್ದರು. (ವಾರ ಅಂದರೆ; ತರುವ ರಾಸು ಒಂದು ಕರು ಹಾಕಿ, ಅದರ ಕರಾವು ಉಂಡು, ಇನ್ನೊಮ್ಮೆ ಆ ರಾಸು ಗಬ್ಬವಾಗಿ ದಿನ ತುಂಬುವ ತನಕ ನೋಡಿಕೊಂಡು ಮೂಲ ಯಜಮಾನನಿಗೆ ವಾಪಸು ಕೊಡುವ ವ್ಯವಸ್ಥೆ.) ಬೆಳಿಗ್ಗೆ ಆರೂವರೆಗೆಲ್ಲ ಹಾಲು ಕರೆದು ಡೈಲಿಗೆ ಹಾಕಿ ಬಿಡಬೇಕು. ಏಳು ಗಂಟೆಗೆ ಕರೆಕ್ಟಾಗಿ ಹಾಸನದಿಂದ ಹಾಲಿನ ವ್ಯಾನು ಬರುತ್ತಿತ್ತು. `ರವಷ್ಟು ಲೇಟಾದರೆ ಹಾಲು ತಗಳಾಕೆ ಇಲ್ಲ. ಅಳೆಸಿಕೊಂಡ ಹಾಲೆಲ್ಲ ಲೇಸ್ಟಾಯ್ತದೆ’ ಅಂತ ಗೌಡಪ್ಪಾರ ಶಿವಲಿಂಗಣ್ಣ ಹಾಲು ಹಾಕೋರಿಗೆಲ್ಲ ಹೆದರಿಸೋನು. ಈ ಗೌಡಪ್ಪಾರ ಶಿವಲಿಂಗಣ್ಣ ಊರಡೈರಿಯ ಉಸ್ತುವಾರಿ ಸಚಿವನು. `ದಿನಾ ವ್ಯಾನು ಬಂದು ಹಾಲ ತುಂಬ್ಕ್ಯಂಡು ಹಾಸನುಕ್ಕೆ ಓತಿತಂತೆ. ಅಲ್ಲಿ ದೊಡ್ಡ ಮಿಷಿನ್‍ಗಾಕಿ ಹಾಲ್ನೆಲ್ಲ ರುಬ್ಬಿ, ಹಾಲ್ ಮಸ್ರು ಬ್ಯಾರೆ ಮಾಡ್ತಾರಂತೆ. ಅದರೊಳಗೇಯ ತುಪ್ಪನ ಕಾಸ್ಕತಾರಂತೆ’ ಅಂತ ಸೇದಬಾವಿ ಬಳಿ ಎಂಗಸ್ರುಗಳು ಮಾತಾಡ್ತಿದ್ರೆ ನಮಗೆಲ್ಲ ಬೆರಗೋ ಬೆರಗು. ಈ ಬೆರಗಿಗೆ ಇನ್ನಷ್ಟು ಕಿಚ್ಚು ತುಂಬುತ್ತಿದ್ದವರು ಹಾಸನಕ್ಕೆ ಹೋಗುತ್ತಿದ್ದ ಓದೋ ಹುಡುಗ್ರು. `ನಾವು ಡೈಲಿಗೆ ಓದ್ರೆ, ಸಾಕು ಅನ್ನಗಂಟ ಹಾಲು-ಮೊಸರು ಕೊಡ್ತಾರೆ ಕಣಿರ್ಲಾ.  ದ್ಯಾವೇಗೌಡ್ರು ವಾರಕ್ಕೊಂದು ದಿನಾ ಅಲ್ಲಿಗೆ ಬಂದು ಎಲ್ಲ ಚಕ್ ಮಾಡ್ತರೆ ಕಣಿರ್ಲಾ’ ಅನ್ನುತ್ತಿದ್ದರು.

ರಾಮಂದ್ರಕ್ಕೆ ಹಾಲಿನ ಡೈಲಿ ಬಂದ ಮೇಲೆ ನಮ್ಮ ಹನುಮೋಲ್ಲಾಸಕ್ಕೆ ಮತ್ತಷ್ಟು ಪುಷ್ಠಿ ದೊರೆಯಿತು. ಬೆಳಿಗ್ಗೆ ಹಾಲಿನ ವಿಲೇವಾರಿ ಮುಗಿದ ಮೇಲೆ ಡಬ್ಬ ತೊಳೆದು ಗೌಡಪ್ಪಾರ ಶಿವಲಿಂಗಣ್ಣ ಹೋಗಿರುತ್ತಿದ್ದ. ನಮಗೆ ಅಲ್ಲಿದ್ದ ವಸ್ತುಗಳಲ್ಲಿ ಹಾಲು ಅಳೆಯುವ ಲ್ಯಾಕ್ಟೊಮೀಟ್ರು ಮಹಾ ಕುತೂಹಲಕಾರಿಯಾಗಿ ಕಾಣುತ್ತಿತ್ತು. ಪೂರ ಹಾಲಿನೊಳಗೆ ಮುಳುಗದೇ, ಛಂಗನೇ ಮೇಲೆ ಹಾರುವ ಓತಿಕ್ಯಾತನಂತೆ ಕತ್ತು ಹಾಕುತ್ತಿತ್ತು ಆ ಲ್ಯಾಕ್ಟೊಮೀಟ್ರು. ಹಾಲಿನ ಡಿಗ್ರಿ ಇಂತಿಷ್ಟು ಎಂದು ತೋರಿಸುವ ಅದರ ಕರಾಮತ್ತು ನಮಗೆ ವಿಸ್ಮಯ. ಜತೆಗೆ ಇಡೀ ರಾಮಂದ್ರಕ್ಕೆ ಹರಡಿದ ಹಸಿ ಹಾಲಿನ ವಾಸನೆ ವಿಚಿತ್ರವಾಗಿ ಆಕರ್ಷಿಸುತ್ತಿತ್ತು. ಈ ಡೈಲಿ ಶುರುವಾದಾಗಿಂದ ಕೆಲವು ಕಂತ್ರಿ ನಾಯಿಗಳು ರಾಮಂದ್ರದ ಬಳಿಯೇ ವಾಚ್‍ಮನ್‍ಗಳ ಥರಾ ಬಿದ್ದುಕೊಂಡಿರುತ್ತಿದ್ದವು. ಈ ಸ್ವಯಂನೇಮಕಾತಿಗೆ ಹಾಲು ಅಳೆಯುವಾಗ ಕೆಳಕ್ಕೆ ಚೆಲ್ಲುತ್ತಿದ್ದ ಹಾಲಿನ ಆಕರ್ಷಣೆಯೇ ಮುಖ್ಯ ಕಾರಣ. ಅವುಗಳಿಗೆ ಹಾಲಿನ ಆಕರ್ಷಣೆಯಾದರೆ, ನಮಗೆ ಹಾಲಿನ ಕ್ಯಾನು, ಸ್ಯಾಂಪಲ್ ಬಾಟಲ್‍ಗಳ ವಾಸನೆಯೇ ಆಕರ್ಷಣೆ. ತುಡಿತದ  ದೃಷ್ಟಿಯಿಂದ ನಮಗೂ, ಆ ನಾಯಿಗಳಿಗೂ ವ್ಯತ್ಯಾಸವೇನೂ ಇರಲಿಲ್ಲ.  ಸ್ಯಾಂಪಲ್‍ಗಾಗಿ ಇಟ್ಟಿದ್ದ ಪ್ಲಾಸ್ಟಿಕ್‍ನ  ಚಿಕ್ಕ ಬಾಟಲನ್ನು ನಾವು ಮೂಸುವುದು. ಈ ಮೂಸಾಟ ವಾಕರಿಕೆ ಬರುವ ತನಕ ನಡೆಯುತ್ತಿತ್ತು. ಸ್ಕೂಲಲ್ಲಿ ನಮಗಾಗದವರ ಮೂಗಿಗೆ ಈ ಬಾಟಲು ಹಿಡಿದು ಶತ್ರು ಸಂಹಾರ ಮಾಡುತ್ತಿದ್ದೆವು.

ಊರ ಗಣಪತಿಗೂ ಈ ರಾಮಂದ್ರವೇ ಆಶ್ರಯತಾಣ. ಆಗ ಊರಿಗೊಂದೇ ಗಣಪತಿ  ಇಡುತ್ತಿದುದು. ಹೀಗಾಗಿ ಅದು ಊರೊಟ್ಟು ಸೇರಿಯೇ ಮಾಡುತ್ತಿತ್ತು. ಹಾಸನದಿಂದ ಗಣಪತಿ ತರುವ ಜಬಾದಾರಿ ಯಾರದು?  ಮೈಕ್ ಸೆಟ್, ಚಪ್ಪರ ಹಾಕಿಸೋದು ಯಾರು? ಗಣಪತಿ ಲಾಟರಿಗೆ ಏನೇನು ಬಹುಮಾನ ಇಡಬೇಕು  ಇಂಥವೆಲ್ಲ ಹಂಚಿಕೆಯಾಗುತ್ತಿದ್ದವು. ಊರೊಟ್ಟು ಸೇರಿದ್ದರೂ ಕಂಟ್ರಾಕ್ಟ್ರು ನಿಂಗಪ್ಪಣ್ಣನವರ ಮಾತುಗಳೇ ಹೆಚ್ಚಾಗಿರುತ್ತಿದ್ದವು. ಗಣಪತಿ ಇಟ್ಟ ದಿನದಿಂದ ಬಿಡುವ ತನಕವೂ ನಮ್ಮ ಡೀಕೆ ಮಾಸ್ಟ್ರು `ಕೈಲಾಸೇóಷನ ಪ್ರೀತಿಯ ತನುಜ ಗಣೇಶ ದೇವನ ಪೂಜಿಸಿರಿ’ ಅಂತ ಹಾಡು ಹೇಳಿಕೊಡೋರು. ಗಣಪತಿ ಎಷ್ಟು ದಿನ ಇಡಬೇಕು ಅಂತ ಅಯ್ನಾರು ರಾಮಣ್ಣಾರು ಹೇಳೋರು. ಅವರೇ ದಿನಾಲೂ ಪೂಜೆ ಮಾಡೋರು. ಪ್ರತಿದಿನ ಸೇವಾರ್ಥ ಒಬ್ಬೊಬ್ಬರದು. ಸೇವಾರ್ಥದಾರರು ಉಸುಲಿ, ಚರ್ಪಿಗೆ ಬೇಕಾದ ಸಾಮಾನುಗಳನ್ನು ರಾಮಣ್ಣಾರ ಎಂಗಸ್ರು ಲೀಲಮ್ಮಾರಿಗೆ ಬೆಳಿಗ್ಗೇನೆ ಕೊಟ್ಟುಬಿಡೋರು. ಸಂಜೆ ನಮಗೇನು ಸಿಗುತ್ತೋ ಅನ್ನೋ ಕಳವಳ-ಕಾತರದಲ್ಲಿ ಮೈಕಿನಿಂದ ಬರುತ್ತಿದ್ದ `ಮೂಷಕ ವಾಹನ ಮೋದಕ ಹಸ್ತ’ ಕೇಳಿಕೊಂಡು ರಾಮಂದ್ರದ ಬಳಿ ನಾವು ಕಾಲಯಾಪನೆ ಮಾಡುತ್ತಿದ್ದೆವು. ಕೊನೇದಿನ ಗಣಪತಿ ಊರನ್ನೆಲ್ಲ ಒಂದು ಸುತ್ತಾಕಿ ಹೋಗಿ ಕೆರೇಲಿ ಮುಳುಗಿಬಿಡುತ್ತಿದ್ದ. ಇದಾದ ಮೇಲೆ ಗಣಪತಿ ಲಾಟರಿ ನಡೆಯುತ್ತಿತ್ತು. ರಿಸ್ಟ್‍ವಾಚು ಮೊದಲ ಬಹುಮಾನ. ಆವರೆಗೆ ಹೆಚ್‍ಎಂಟಿ ವಾಚಿನ ಹೆಸರು ಮಾತ್ರ ಕೇಳಿದ್ದ ನಮಗೆ ರಿಸ್ಟ್‍ವಾಚು ಅಂದರೆ ವಿದೇಶಿ ಮಾಲಿರಬಹುದು ಅಂತ ಊಹೆ ಮಾಡ್ತಿದ್ದೆವು. ಆ ವರ್ಷ ಮೊದಲ ಬಹುಮಾನ ರಿಸ್ಟ್‍ವಾಚು ಗೆದ್ದ ಆಲದಳ್ಳಿಕಾಳಪ್ಪಣ್ಣ  ಮೂರು ತಿಂಗಳ ಕಾಲ ಅತಿ ಮಾನ್ಯನಾಗಿ ಓಡಾಡುತ್ತಿದ್ದ. ಅವನ ಕೈಲಿದ್ದ ರಿಸ್ಟ್‍ವಾಚು ನಮ್ಮ ವಿದೇಶಿಮಾಲಿನ ಕಲ್ಪನೆಯನ್ನು ಕೊಂಚ ಅಲುಗಾಡಿಸಿದರೂ ಉತ್ಸಾಹಕ್ಕೇನೂ ಕುಂದು ತರಲಿಲ್ಲ.ಒಂದು ಸಲ ಸಂಪೂರ್ಣ ರಾಮಾಯಣ ಕಲಿಯಬೇಕು ಅಂತ ತೀರ್ಮಾನವಾಯಿತು. ಆ ಸಲ ಕಲಿಸೋಕೆ ಬಂದ ನಾಟಕದ ಮೇಷ್ಟ್ರು ಮಲ್ಲೇನಳ್ಳಿ ರಾಜಣ್ಣಾರು ನಮಗೆ ಪರಿಚಿತರು. ಅವರು ನಮ್ಮನೆಯಲ್ಲೇ ಮೊಕ್ಕಾಂ ಮಾಡಿದ್ದರು. ನಮ್ಮಮ್ಮ, ಸೋದರತ್ತೆ, ಮಾವ ಎಲ್ಲರೂ ಅವರಿಗೆ ಹೇಳಿ ನನಗೂ ಒಂದು ಪಾತ್ರ ಕೊಡಿಸಿದ್ದರು. ಶಾಲೆಯಲ್ಲಿ ಯಾರಿಗೂ ಇಲ್ಲದ ಅದೃಷ್ಟ ನನ್ನದಾಗಿತ್ತು. ನಾಟಕದ ಸೂತ್ರಧಾರನ ಪಾತ್ರ ನನ್ನದೇ. ಆಡುತ್ತಿದುದು ರಾಮಾಯಣವಾಗಿದ್ದರಿಂದ ಮೊದಲಿಗೇ `ರಘುವಂಶ ಸುಧಾಂಬುದಿ ಚಂದ್ರಶ್ರೀ…’ ಅಂತ ನಾಂದಿಗೀತೆ. ಆಮೇಲೆ `ಮಹಾಜನಗಳೇ, ಈದಿನ ನಮ್ಮೂರಲ್ಲಿ ಈತರಕಿತರಾ… ಅಂತೆಲ್ಲ ಹೇಳುವ ಕೆಲಸ. ಅದಾದ ಮೇಲೆ `ಕಂಜದಳಾಯತಾಕ್ಷಿ ಕಾಮಾಕ್ಷಿ’ ಸ್ತುತಿಗೀತೆ. ವಾರೊಪ್ಪತ್ತಿನಲ್ಲಿ ಇದನ್ನು ಕಲಿತ ನನಗೆ ಆಮೇಲೆ ಕೆಲಸವೇ ಇರಲಿಲ್ಲ. ರಿಹರ್ಸಲ್ ಬೇರೆ ನಿಧಾನವಾಗುತ್ತಿತ್ತು. ನಾನು ಇನ್ನೊಂದು ಪಾತ್ರ ಬೇಕೆಂದು ಹಠ ಹಿಡಿದೆ. ಪುಟ್ಟ ಊರುಗಳಲಿ ಪುಟ್ಟ ಹುಡುಗರ ಮಾತಿಗೂ ಬೆಲೆ ಬರುವುದುಂಟು. ಸಮುದ್ರರಾಜನ ಪಾತ್ರ ಸಿಕ್ಕಿತು. ರಾಮ ಸೇತುವೆ ಕಟ್ಟಲು ಮುಂದಾದಾಗ ಸಮುದ್ರರಾಜ ಮೊದಲಿಗೆ ಒಪ್ಪುವುದಿಲ್ಲ. ಆಮೇಲೆ ರಾಮ ಬಾಣ ಬಿಡ್ತೀನಿ ಅಂದಾಗ `ಕ್ಷಮಿಸು ರಾಮ. ಜಾಗ ಬಿಡ್ತೀನಿ’ ಅಂತಾ ಒಪ್ಕೋತಾನೆ. ಎರಡು ತಿಂಗಳಲ್ಲಿ ಎರಡು ಲಕ್ಷ ಸಲ ಪ್ರಾಕ್ಟಿಸ್ ಮಾಡಿದ್ದೆ.

ರಾತ್ರಿ ನಾಟಕಕ್ಕೂ ರಾಮಂದ್ರವೇ. ಬೆಳಿಗ್ಗೆ ಸ್ಕೂಲಿಗೂ ರಾಮಂದ್ರವೇ.  ಅಣ್ಣೇಗೌಡ ಮೇಷ್ಟ್ರು ಬೀಡಿ ಕಚ್ಚಿಕೊಂಡು ಹೋದ ತಕ್ಷಣ ಅಭಿಮಾನಿ ದೇವರುಗಳು-ದೇವತೆಯರು ನನ್ನ ಮುತ್ತಿಕೊಂಡು ಹಾಡು, ಡೈಲಾಗು ಹೇಳಿಸೋರು. ದಿನಾ ರಿಹರ್ಸಲ್ ನೋಡಿ ನೋಡಿ ಹೆಚ್ಚುಕಮ್ಮಿ ನಾಟಕವೇ ಬಾಯಿಗೆ ಬಂದುಬಿಟ್ಟಿತ್ತು. ಹೀಗಾಗಿ ಅಭಿಮಾನಿ ದೇವರುಗಳು-ದೇವತೆಯರಿಗೆ ನನ್ನ ಬಗ್ಗೆ ಖುಷಿ. ನಾಟಕದ ದಿನ ಬಂತು. ಮೂರನೇ ಕ್ಲಾಸಿನ ಹುಡುಗನೊಬ್ಬ ಪಾತ್ರ ಮಾಡುತ್ತಿರುವುದು ಮೂಲೋಕಕ್ಕೆಲ್ಲ ಪ್ರಚಾರವಾಗಿತ್ತು. ಮೂಲೋಕದವರೆಲ್ಲ ಆ ನಾಟಕ ನೋಡಲು ಬಂದಿದ್ದರು. ನಾನು ಹೋಗಿ ನಿಂತುಕೊಂಡು `ರಘುವಂಶ ಸುಧಾಂಬುದಿ’ ಹಾಡಿ, `ಮಹಾಜನಗಳೇ….ಹಂಸಕ್ಷೀರ ನ್ಯಾಯದಂತೆ  ವರ್ತಿಸಬೇಕು’ ಅಂತ ಕೋರಿದೆ. ಅಭಿಮಾನಿ ದೇವರು-ದೇವತೆಗಳು ಶಿಳ್ಳೆ ಹಾಕಿದರು. ಜೋರಾಗಿ ಕೈಬೀಸಿ ಏನೋ ಸೂಚಿಸಿದರು. ಆಕಡೆ ನೋಡಿದರೆ ಎಡ್ಮಾಷ್ಟ್ರು  ಬಸವೇಗೋಡ್ರು  ಸೈಡ್‍ವಿಂಗ್‍ನಿಂದ  ಕೈಬೀಸಿ ಕರಿತಾ ಇದಾರೆ. ನನಗೆ ಗಲಿಬಿಲಿ ಆಯಿತು. ಇನ್ನೂ ಎರಡನೇ ಹಾಡು ಬಾಕಿ ಇದೆ. ಇವರ್ಯಾಕೆ ಕರಿತಿದಾರೋ ಎಂಬ ಗೊಂದಲದಲ್ಲೇ ಹೇಗೋ ಹಾಡು ಮುಗಿಸಿದೆ. ಮೂಲೋಕದ ಜನರೆಲ್ಲ ಈ ಅಮೋಘ ಅಭಿನಯಕ್ಕೆ ನಿಬ್ಬೆರಗಾಗಿದ್ದರು. ಒಳಗೆ ಹೋದರೆ ಬಸವೇಗೋಡ್ರು `ಎರಡನೇ ಹಾಡಿಗೆ ಇನ್ನೊಂದು ಮೈಕ್‍ತಾವ ಹಾಡು ಅಂತ ಯೇಳಿರ್ನುಲ್ವೇನ್ಲ’ ಅಂತ ಕೋಪಿಸಿಕೊಂಡರು. ನಾನು ಪೆಚ್ಚಾಗಿ ಕೂತೆ. ತಕ್ಷಣ ತರೂರು ಸೀನಿನ ಮೇಕಪ್‍ಮ್ಯಾನ್ ನನ್ನ ಮುಂದಿನ ಪಾತ್ರವಾದ ಸಮುದ್ರರಾಜನ ವೇಷ ಹಾಕಿದ. ನಾನು ಕಾಯುತ್ತ ಕೂತೆ, ಕೂತೆ. ನಾಟಕ ಸುರುವಾಗಿದ್ದೇ ಹತ್ತುಗಂಟೆಗೆ. ಅದರಲ್ಲಿ ಮಧ್ಯೆ ಮಧ್ಯೆ ಪಾತ್ರಧಾರಿಗಳಿಗೆ ಹಾರ ಹಾಕೋರು. ಒನ್ಸ್‍ಮೋರ್ ಹಾಕಿ ಮತ್ತೆ ಹಾಡು ಹೇಳಿಸೋದು ನಡೆದೇ ಇತ್ತು. ನಾನು ಸೈಡ್‍ವಿಂಗ್‍ನಿಂದ ನೋಡ್ತನೇ ಇದ್ದೆ: `ಭೂಮಿಜಾತೆ ಭಾಮೆಸೀತೆ ಎಲ್ಲಿ ಪೋದೆ..’ ಎಂದು ಕರುಣಾಜನಕವಾಗಿ ಹಾಡಿದ ರಾಮ ಒಳಗೆ ಬಂದು ನೆವಿಬ್ಲು ಸಿಗ್ರೇಟ್ ಸೇದಿದ. `ಪಿಡಿಯಿರಿ ಆ ಕಪಿಯ..’ ಎಂದು ವೀರರಸದಿಂದ ಹಾಡಿದ ರಾವಣ ಒಳಗೆ ಬಂದು ಪೋಟುಕೊಂಡ. ಇವೆಲ್ಲ ನೋಡುತ್ತಾ ಹೇಗೋ ನಿದ್ದೆ ತಡೆದಿದ್ದವನು, ಕೊನೆಗೂ ನಿದ್ದೆ ತಡೆಯಲಾಗದೇ `ರಾಮಸೇತುವೆ ಮನೆ ಹಾಳಾಗ’ ಎಂದು ಮನೆಗೆ ಹೋದೆ. ಸೀದಾ ಅಟ್ಟ ಹತ್ತಿ ಮಲಗಿಬಿಟ್ಟೆ.

ಯಾರೋ ಏಳೋ, ಏಳೋ ಅಂತ ಕೂಗುತ್ತಿದ್ದಾರೆ ಅನಿಸಿ, ನಿದ್ದೆಗಣ್ಣಲ್ಲೇ ಅಟ್ಟ ಇಳಿದು `ರಾಮಚಂದ್ರ’ ಅಂತ ಕೈಮುಗಿದುಕೊಂಡು ಬಂದೆ. ಬಿಸಿಲು ರವರವ ಹೊಡೆಯುತ್ತಿತು. ಕಣ್ಣು ಬಿಡೋಕೆ ಆಗುತ್ತಿರಲಿಲ್ಲ. ತರೂರು ಸೀನಿನ ಮೇಕಪ್‍ಮ್ಯಾನ್ ಅಲ್ಲೇ ಸಮುದ್ರರಾಜನ ಬಟ್ಟೆ ಬಿಚ್ಚಿಕೊಂಡು, ಬೈಯ್ಕೊಂಡು ಹೋದ. ಆ ಊರಿನಲ್ಲಿ, ಆ ಬೆಳಗಿನ ಬಿಸಿಲಿನಲ್ಲಿ, ಆ ಬೀದಿಯಜನರೆಲ್ಲ ಸಮುದ್ರರಾಜನನ್ನು ನೋಡಿ ಆನಂದಿಸಿದ ಆ ಪÀರಿಯ ನಾನೆಂತು ಪೇಳಲಿ, ರಾಮಚಂದ್ರ?

***

ಆ ರಾಮಂದ್ರದ ಚಿತ್ರ ಈಗಲೂ ನನ್ನೊಳಗೆ ಹಾಗೆ ಇದೆ. ಆ ರಾಮಂದ್ರದಲ್ಲಿ ಒಂದು ಹಳೆಯ ರಾಮನ ಫೋಟೋ ಇತ್ತು. ಆ ರಾಮ ಕುಟುಂಬೀರಾಮ. ಈಗಿನ ರಾಮನಂತೆ ಬಿಲ್ಲು ಹಿಡಿದು, ಕಾಲು ಕೆದರಿಕೊಂಡು ವೀರಾಗ್ರಣಿಯಂತಿರಲಿಲ್ಲ. ಆ ಫೋಟೊಗೆ ಪೂಜೆ ಕೂಡ ಮಾಡುತ್ತಿದ್ದುದು ನೆನಪಾಗುತ್ತಿಲ್ಲ. ರಾಮಂದ್ರದ ಮುಂದೆ ನ್ಯಾಯ ನಡೆದಾಗ ಯಾರಿಗಾದರೂ ಆಣೆ-ಭಾಷೆ ಹಾಕಿಸುವಾಗ ರಾಮನ ಮುಂದೆ ಕರ್ಪೂರ ಹಚ್ಚುತ್ತಿದ್ದರು. ಅದು ಬಿಟ್ಟರೆ, ಗಣಪತಿ ಇಟ್ಟಾಗ ಈ ರಾಮನಿಗೂ ಒಂದಷ್ಟು ಉಪಚಾರ ಬಿಟ್ರೆ ಬೇರೇನೂ ಇಲ್ಲ. ರಾಮನ ನೆಪದ ಆ ರಾಮಂದ್ರ ಊರಿನ ಎಷ್ಟೊಂದು ಚಟುವಟಿಕೆಗೆ ಮೂಲಧಾತುವಾಗಿತ್ತು, ಒಂದು ಊರಿನ ಸಾಂಸ್ಕ್ರತಿಕ, ಸಾಮುದಾಯಿಕ ಬದುಕಿನೊಳಗೆ ಹೇಗೆ ಬೆರೆತುಹೋಗಿತ್ತು ಎಂಬುದು ಕಾಡುತ್ತದೆ. ಜನ ರಾಮನನ್ನು ಆಗಲೂ ನಂಬಿದ್ದರು. ಪೂಜೆ, ಪುನಸಾರಗಳನ್ನು ಬೇಡದ ಆ ರಾಮ ಕುಟುಂಬದ, ನ್ಯಾಯದ ಪ್ರತೀಕವಾದ ದೈವವಾಗಿದ್ದ. ಈಗಿನ ರಾಮ ಯಾವುದರ ಪ್ರತೀಕ?….

ಈಚೆಗೊಮ್ಮೆ ನಾನು ಆ ಊರಿಗೆ ಹೋಗಿದ್ದೆ.

ಈಗ ಆ ರಾಮಂದ್ರ ಬಿದ್ದುಹೋಗಿದೆಯೇ? ಅಲ್ಲಿ ಪುಂಡುಪೋಕರಿಗಳು ಇಸ್ಪೀಟಾಡುತ್ತಿದ್ದಾರೆಯೆ? ಶಾಲೆ ನಡೆಯುತ್ತಿಲ್ಲವೇ? ಹಾಲಿನ ಡೈಲಿ ನಿಂತುಹೋಯಿತೇ?  ಅಂತೆಲ್ಲ ಕೇಳಬಹುದು ನೀವು. ಇಲ್ಲ ಹಾಗೇನೂ ಆಗಿಲ್ಲ. ಆ ರಾಮಂದ್ರ ಇನ್ನೊಂದಿಷ್ಟು ಹಳತಾಗಿ ಮಾಸಿದೆ ಅಷ್ಟೆ. ಶಾಲೆಗೆ ಪ್ರತ್ಯೇಕ ಕೊಠಡಿಗಳಿವೆ. ಡೈರಿಯೂ ಸ್ವಂತ ಕಟ್ಟಡ ಹೊಂದುವಷ್ಟು ಬೆಳೆದಿದೆ.  ನಾನು ಹೋದ ದಿನ ಇಂಡಿಯಾ- ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇತ್ತು. ನಾನು ಊರೊಳಗೆ ಎಲ್ಲಾದರೂ ಟೀವಿ ನೋಡೋಣ ಅಂತ ಹೋದೆ. ಹಿಂದೆ ಡೈರಿ ಸಚಿವನಾಗಿದ್ದ ಗೌಡಪ್ಪಾರ ಶಿವಲಿಂಗಣ್ಣನ ಮನೆ ಬಳಿ ಸಾಕಷ್ಟು ಜನವಿದ್ದರು. ಆವತ್ತು ಇಂಡಿಯಾ ಗೆಲ್ಲಲು 270 ರನ್ನು ಮಾಡಬೇಕಿತ್ತು. ಆಗಲೇ 70 ರನ್ನಿಗೆ 5 ವಿಕೆಟ್ ಕಳಕೊಂಡು, ಜನರೆಲ್ಲ ಪೆಚ್ಚ್ಚಾಗಿ ಕೂತಿದ್ದರು. ನಿಧಾನವಾಗಿ ಲಕ್ಷ್ಮಣ್ ಮತ್ತು ಯುವರಾಜ್ ಪಂದ್ಯದ ಗತಿ ಬದಲಿಸಲು ನಿಂತರು. ಜನರಲ್ಲೂ ಉತ್ಸಾಹ ಗರಿಗೆದರಿತು. ಅವರ ಒಂದೊಂದು ಹೊಡೆತಕ್ಕೂ ಮುದುಕರು-ಹೆಂಗಸರು-ಮಕ್ಕಳಾದಿಯಾಗಿ `ಒಡಿರ್ಲಾ ಅವ್ರಿಗೆ, ಕೆಚ್ಚಿರ್ಲಾ ಅವ್ರಿಗೆ’ ಅಂತ ದೇಶಪ್ರೇಮ ಮೆರೆಯತೊಡಗಿದರು. ಪಂದ್ಯ ಒಂದು ಹಂತಕ್ಕೆ ಬರುತ್ತಿದೆ ಅನಿಸುವಾಗಲೇ ಯುವರಾಜ್ ಔಟಾದ, ಮತ್ತೆ ಮೌನ. ಇರ್ಫಾನ್ ಪಠಾಣ್ ಬಂದು ಅವನೂ ನಿಧಾನಕ್ಕೆ ಒಂದೆರೆಡು ಸಿಕ್ಸರ್ ಬಾರಿಸಿದೊಡನೆ ಮತ್ತೆ ಆವೇಶದಿಂದ ಕೂಗಾಡತೊಡಗಿದರು. `ನೀನೆ ಸರಿ ಕಣ್ಲಾ ಅವ್ರಿಗೆ. ಕೆಚ್ಲಾ, ಕೆಚ್ಲಾ. ಬಿಡ್‍ಬ್ಯಾಡ ಕಣ್ಲಾ ಅವರ್ನ’ ಅಂತ ಎಲ್ಲರೂ ಟೀವಿ ಮುಂದೆ ಕುಣಿಯಲಾರಂಭಿಸಿದರು.ಆ ಪುಟ್ಟ ಊರಲ್ಲಿ ಹಿಂದಿನಿಂದಲೂ `ಅವರು’ ಇರಲಿಲ್ಲ. ಈಗಲೂ ಇಲ್ಲ. ನಾವು ಚಿಕ್ಕವರಿದ್ದಾಗ ಆಗೀಗ ಕಲಾಯಿ ಮಾಡೋದಿಕ್ಕೋ, ಎತ್ತುಗಳ ಲಾಳ ಕಟ್ಟೊದಿಕ್ಕೋ `ಅವರು’ ಬರುತ್ತಿದರು. ಅದು ಬಿಟ್ಟರೆ ಯುಗಾದಿಯ ಮಾರನೇಗೆ ಮುಖಕ್ಕೆಲ್ಲ ಮಸಿ ಬಳಕೊಂಡು, ಕೋಡಂಗಿ ಟೋಪಿ ಧರಿಸಿ, ಗೋಣಿಚೀಲ ಸುತ್ಕೊಂಡು, ತಮಟೆ ಬಡ್ಕೊಂಡು ಬರುತ್ತಿದ್ದರು. ಚಿಕ್ಕ ಹುಡುಗರಾದ ನಾವೆಲ್ಲ ಆ ತಮಟೆ ಸದ್ದಿಗೆ ಓಡಿಹೋಗುತ್ತಿದ್ದೆವು. `ಅವರ’ ಕೈಯಲ್ಲಿ ಬಡಿಗೆಯೊಂದು ಇರುತ್ತಿತ್ತು. ಆ ಬಡಿಗೆಯಲ್ಲಿ ಹೊಡೆಸಿಕೊಂಡರೆ ಒಳ್ಳೆಯದಾಗುತ್ತದೆಂಬ ಪ್ರತೀತಿಯಿತ್ತು. ಅವರು ನಮ್ಮನ್ನು ಅಟ್ಟಿಸಿಕೊಂಡು ಹೊಡೆಯುವಂತೆ ಬರುತ್ತಿದ್ದರು. ನಾವು ತಪ್ಪಿಸಿಕೊಳ್ಳಲು ಓಣಿ, ಗಲ್ಲಿಗಳಲ್ಲಿ ಓಡಾಡುತ್ತಿದ್ದೆವು. ಕೊನೆಗೆ ಐದೋ, ಹತ್ತೋ ಪೈಸೆ ಅವರಿಗೆ ಕೊಟ್ಟು, ಮೆಲ್ಲಗೆ ಹೊಡೆಸಿಕೊಳ್ಳುತ್ತಿದ್ದೆವು. ಹೀಗೆ ಒಂದಷ್ಟು ಕಾಲ ಆಟದಂತೆ ಇದು ನಡೆಯುತ್ತಿತ್ತು. ನಂತರ ‘ಅವರು’ ಮುಂದಿನ ಊರಿಗೆ ಹೋಗುತ್ತಿದ್ದರು. ಈಗ ವಿಚಾರಿಸಿದರೆ, ಯುಗಾದಿಯ ಮಾರನೇಗೆ `ಅವರು’ ಬರುತ್ತಿಲ್ಲವಂತೆ. `ಅವರು’ ಯಾಕೆ ಬರುತ್ತಿಲ್ಲ?

ನಿಮಗೇನಾದರೂ ಗೊತ್ತಿದ್ದರೆ ಹೇಳಿ, ಪ್ಲೀಸ್.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ರಾಮಂದ್ರ: ಹರಿ ಪ್ರಸಾದ್

  1. this is hooking story.sir,i am glade to say that your article took me to my childhood lif.i can that why that people not visible because of,capitalist took them as rent to working in the many making factory.

  2. ತುಂಬಾ ಚೆನ್ನಾಗಿದೆ. ಭಾಷೆ ಖುಷಿ ನೀಡಿತು. ನನ್ನ ಬಾಲ್ಯವೂ, ಆವಾಗಿನ ಮುಗ್ದತೆಯೂ ಕಣ್ಣೆದುರು ಬಂತು.

Leave a Reply

Your email address will not be published. Required fields are marked *